ತುಳಸಿ ರಾಮಚಂದ್ರ

ಪ್ರಖ್ಯಾತ ನೃತ್ಯ ಕಲಾವಿದರಾದ ಡಾ. ತುಳಸಿ ರಾಮಚಂದ್ರ ಅವರು ಡಿಸೆಂಬರ್ 21, 1952ರ ವರ್ಷದಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಜನಿಸಿದರು.  ತಂದೆ ಮಾಧವರಾಯರು ರಂಗಭೂಮಿಯ ಪ್ರಸಿದ್ಧ ಕಲಾವಿದರು. ಅವರು ತಮಾಷಾ ಮಾಧವರಾವ್ ಎಂದೇ ರಂಗಲೋಕದಲ್ಲಿ ಪ್ರಸಿದ್ಧರಾದವರು. ತಾಯಿ ರುಕ್ಮಿಣಿಯಮ್ಮನವರು  ಸಂಗೀತ ವಿದುಷಿ. ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ನೃತ್ಯ ಕಲಾವಿದೆ ಮತ್ತು ಶಿಲ್ಪಶಾಸ್ತ್ರ ಪರಿಣಿತೆ.  ಪತಿ ಕೃಷ್ಣಗಿರಿ ರಾಮಚಂದ್ರ ಗಮಕಿಗಳು.  ಹೀಗಾಗಿ ಡಾ. ತುಳಸಿ ರಾಮಚಂದ್ರ  ಅವರು ಬೆಳೆದದ್ದು ಮತ್ತು ಬದುಕು ಕಟ್ಟಿಕೊಂಡದ್ದು ಎರಡೂ ಕಲಾವಿದರ ಕುಟುಂಬದಲ್ಲೇ.

ತುಳಸಿ ಅವರಿಗೆ ಪ್ರಾರಂಭಿಕ  ನೃತ್ಯ ಶಿಕ್ಷಣ ಅವರ ಅಕ್ಕ ಚೂಡಾಮಣಿ ಅವರಿಂದಲೇ ದೊರಕಿತು. ನಂತರದಲ್ಲಿ ಅವರು  ಗುರು ಶ್ರೀಮತಿ ಲಲಿತಾ ದೊರೈ ಅವರಲ್ಲಿ ತಮ್ಮ ಭರತನಾಟ್ಯ ಶಿಕ್ಷಣವನ್ನು ಪಡೆದರು. ಜೊತೆಗೆ ಶ್ರೀ ತೀರ್ಥರಾವ್ ಆಜಾದ್ ಅವರಿಂದ ಕಥಕ್ ಮತ್ತು ಶ್ರೀ ಸಿ. ಆರ್. ಆಚಾರ್ಯಲು ಅವರಿಂದ ಕೂಚಿಪುಡಿ ಅಭ್ಯಾಸ ಸಹಾ ನಡೆಸಿದರು. ಪ್ರಸಿದ್ಧ ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ತುಳಸಿ ರಾಮಚಂದ್ರ ಅವರು ಸಿದ್ಧಪಡಿಸಿದ ’ಕನ್ನಡ ಸಾಹಿತ್ಯದಲ್ಲಿ ನೃತ್ಯ ಕಲೆಯ ಉಗಮ ಮತ್ತು ವಿಚಾರದ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ಸಂದಿತು. ಈ ಮಹಾಪ್ರಬಂಧವನ್ನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವು  ’ಪದಗತಿ ಪಾದಗತಿ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದೆ.

ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಪ್ರಥಮ ಸ್ಥಾನ ಪಡೆದ  ಶ್ರೀಮತಿ ತುಳಸಿ ಅವರು 1979ರಲ್ಲಿ ಮೈಸೂರಿನಲ್ಲಿ ತಮ್ಮದೇ ’ನೃತ್ಯಾಲಯ’ ಸಂಸ್ಥೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ.  ಕರ್ನಾಟಕದ ವಿಶಿಷ್ಠ ನೃತ್ಯಪ್ರಕಾರಗಳಾದ ’ಗೌಂಡಲಿ’ ಹಾಗೂ ’ಪೇರಣಿ’ ಗಳನ್ನು ಮೊದಲ ಬಾರಿಗೆ ಪುನರ‍್ರರಚಿಸಿ ಪ್ರದರ್ಶಿಸಿದ ಕೀರ್ತಿಯನ್ನು ಹೊಂದಿರುವ ಡಾ. ತುಳಸಿ ಅವರು, ಕನ್ನಡ ಕವಿಗಳ ಕಾವ್ಯಗಳಲ್ಲಿನ ರಸಘಟ್ಟಗಳನ್ನು ಆಧರಿಸಿ ಹಲವಾರು ನೃತ್ಯರೂಪಕಗಳನ್ನು ಸಂಯೋಜಿಸಿದ್ದಾರೆ. ಜೊತೆಗೆ ನೃತ್ಯಕ್ಕೆ ಪೂರಕವಾದ ಕೆಲವು ತಿಲ್ಲಾನಾಗಳನ್ನೂ ರಚಿಸಿದ್ದಾರೆ. ದೇಶದ ಹಲವು ಪ್ರತಿಷ್ಠಿತ ನೃತ್ಯೋತ್ಸವಗಳಲ್ಲದೆ ಅಮೆರಿಕವನ್ನೊಳಗೊಂಡಂತೆ ವಿಶ್ವದ ನಾನಾ ಕಡೆಗಳಲ್ಲಿ ಇವರ ನೃತ್ಯಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳು ನಿರಂತರವಾಗಿ ನಡೆಯುತ್ತಿವೆ.

ಹಲವಾರು ಸಂಘ ಸಂಸ್ಥೆಗಳಿಂದ ಕಲಾಶಾರದೆ, ನೃತ್ಯ ವಿದ್ವಾನಿಧಿ, ಆದರ್ಶ ಸೇವಾರತ್ನ ಮುಂತಾದ ಬಿರುದುಗಳೊಂದಿಗೆ ಗೌರವಿಸಲ್ಪಟ್ಟಿರುವ ಡಾ. ತುಳಸಿ ರಾಮಚಂದ್ರ ಅವರನ್ನು ಕರ್ನಾಟಕ ಸರ್ಕಾರವು 2004ರಲ್ಲಿ ತನ್ನ ರಾಜ್ಯೋತ್ಸವ ಪ್ರಶಸ್ತಿಯನ್ನಿತ್ತು ಸತ್ಕರಿಸಿದೆ. ಡಾ. ತುಳಸಿ ರಾಮಚಂದ್ರ ಅವರಿಗೆ 2007-08ರ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಸಂಗೀತ ನೃತ್ಯ ಅಕಾಡೆಮಿಯು ಗೌರವಿಸಿದೆ.

ಡಾ. ಎಸ್. ಎಲ್. ಭೈರಪ್ಪನವರು ತಮ್ಮ ‘ಮಂದ್ರ’ ಕಾದಂಬರಿಗಾಗಿ ನರ್ತನದ ಸೂಕ್ಷ್ಮಗಳನ್ನು ಅರಿಯಲು ನೆರವಾದುದಕ್ಕೆ ಮತ್ತು ಪ್ರಕಟಣೆಗೆ ಮುಂಚಿನ ಕರಡು ಪ್ರತಿಯನ್ನು ವಿಮರ್ಶಿಸಿ ನೆರವಾದುದಕ್ಕೆ ಆ ಕೃತಿಯಲ್ಲಿನ ಕೃತಜ್ಞತೆಗಳಲ್ಲಿ  ತುಳಸಿ ರಾಮಚಂದ್ರರನ್ನು ಸ್ಮರಿಸಿದ್ದಾರೆ.

sallapa

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *