Thursday , 13 June 2024

ತುಮಕೂರು ಜಿಲ್ಲೆಯ ಸ್ವಾತಂತ್ರ್ಯ ವೀರರು – ಒಂದು ಕಿರು ಪರಿಚಯ

೯೩೪ ತುಮಕೂರು ಜಿಲ್ಲೆಯ ಇತಿಹಾಸದಲ್ಲಿ ಸ್ವರ್ಣಪುಟವನ್ನು ಜೋಡಿಸಿದ ವರ್ಷ. ಮಹಾತ್ಮಗಾಂಧೀಜಿಯವರು ಹರಿಜನೋದ್ದಾರ ನಿಧಿಸಂಗ್ರಹಕ್ಕಾಗಿ ತುಮಕೂರಿಗೆ ಬಂದರು. ಆ ಮಹಾತ್ಮರಿತ್ತ ದಿವ್ಯ ಸ್ಪೂರ್ತಿ ಅನೇಕ ತ್ಯಾಗ ವೀರರ ಸೃಷ್ಟಿಗೆ ಕಾರಣವಾಯಿತು. ಖಾದಿ ಪ್ರಚಾರ, ಹರಿಜನೋದ್ದಾರ, ಪಾನನಿರೋಧಗಳಿಗಾಗಿ ಜಿಲ್ಲೆಯ ಜನತೆ ಕಂಕಣ ತೊಟ್ಟರು.

೧೯೩೮ರಲ್ಲಿ ಮತ್ತೊಂದು ಮೈಲಿಗಲ್ಲಾಗಿ ಧ್ವಜಸತ್ಯಾಗ್ರಹ ನಡೆಯಿತು. ಕುಣಿಗಲ್, ಮಧುಗಿರಿ, ತುಮಕೂರು ಮುಂತಾದೆಡೆ ಮುಖಂಡರುಗಳ ನಾಯಕತ್ವದಲ್ಲಿ ಸತ್ಯಾಗ್ರಹ ನಡೆದು, ಅನೇಕರ ದಸ್ತಗಿರಿಗಳಾದವರು. ೧೯೩೯ರಲ್ಲಿ ಶಿರಾವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಅರಣ್ಯ ಸತ್ಯಾಗ್ರಹವೂ ನಡೆಯಿತು. ಈ ಪ್ರಬಲ ಸತ್ಯಾಗ್ರಹದಲ್ಲಿ ಜಿಲ್ಲೆಯ ಸಮಸ್ತ ನಾಯಕರುಗಳಲ್ಲದೆ ಸುಮಾರು ೪೫೦ಮಂದಿ ದಸ್ತಗಿರಿಯಾಯಿತು. ೧೯೪೨ರ ಕ್ವಿಟ್‌ಇಂಡಿಯಾ ಚಳುವಳಿಯಲ್ಲಿ ನಡೆದ ಹೋರಾಟ ಹೂಡಿದ ಚಳುವಳಿ ಅತ್ಯುಗ್ರವಾಗಿತ್ತು. ಎಲ್ಲೆಲ್ಲೂ ಸೆರೆಮನೆಗಳು ತುಂಬಿದ್ದವು. ಹಲವು ಮುಖಂಡರ ಬಂಧನ, ವೀರಮರಣ ಪ್ರಕರಣಗಳು ನಡೆದರೂ ಸಹ ಸತ್ಯಾಗ್ರಹಿಗಳು ಶಾಂತರೀತಿಯಿಂದಲೇ ಚಳುವಳಿ ನಡೆಸಿದರು.

ಹೀಗೆ ಸ್ವಾತಂತ್ರ್ಯ ಹೋರಾಟದಲ್ಲಿ ತುಮಕೂರು ಜಿಲ್ಲೆಯು ತನ್ನ ಅಮೂಲ್ಯ ಕಾಣಿಕೆಯನ್ನು ಸಲ್ಲಿಸಿ, ತನ್ನದೇ ಆದ ಹೆಸರನ್ನು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಲೇಖಿಸಿದೆ.

ಈ ಹಿನ್ನಲೆಯಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ತ್ಯಾಗಬಲಿದಾನಗೈದ ತುಮಕೂರು ಜಿಲ್ಲೆಯ ಕೆಚ್ಚೆದೆಯ ದೇಶಾಭಿಮಾನಿಗಳ ಬಗ್ಗೆ ಕಿರು ಮಾಹಿತಿ ನೀಡುವ ಪ್ರಯತ್ನ ಇದಾಗಿದೆ.

ಶ್ರೀ ಟಿ.ಆರ್.ರೇವಣ್ಣ : ತುಮಕೂರು ನಗರದ ಖ್ಯಾತ ವಾಣಿಜ್ಯೋದ್ಯಮಿ ಟಿ.ಎಂ. ರಾಚಪ್ಪ ಮತ್ತು ಶ್ರೀಮತಿ ಹನುಮಕ್ಕ ದಂಪತಿಗಳಿಗೆ ೧೯೨೮ರಲ್ಲಿ ಶ್ರೀ ಟಿ.ಆರ್.ರೇವಣ್ಣ ಜನಿಸಿದರು. ಇವರ ವಿದ್ಯಾಭ್ಯಾಸ ೧೦ನೇ ತರಗತಿಯವರೆಗೆ. ತಮ್ಮ ವಿದ್ಯಾರ್ಥಿ ದಸೆಯಲ್ಲಿಯೇ ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ೩ತಿಂಗಳ ಕಠಿಣ ಸಜೆ ಅನುಭವಿಸಿದ ರೇವಣ್ಣ ಅವರು, ೧೯೪೭ರಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿ ಸೈಕಲ್ ಮೇಲೆ ಚಳುವಳಿ ನಡೆಸಿದ್ದರು. ಸ್ವಾತಂತ್ರ್ಯ ಯೋಧರಾದ ಶ್ರೀಮತಿ ಅರುಣಾ ಆಸಿಫ್ ಅಲಿ ಅವರನ್ನು ೧೯೬೪ರಲ್ಲಿ ವಿಶೇಷವಾಗಿ ತುಮಕೂರಿಗೆ ಕರೆಸಿ, ರಾಜ್ಯದ ಶಾಂತಿ ಮತ್ತು ಸೌಹಾರ್ಧತಾ ಸಂಘಟನೆಯ ಮೊದಲ ಸಮ್ಮೇಳನವನ್ನು ಏರ್ಪಡಿಸಿದ್ದ ಶ್ರೀಯುತರು ಸಮರ ವಿರೋಧಿ, ನಿಷ್ಯಸ್ತ್ರೀಕರಣ, ಕೋಮುಸೌಹಾರ್ಧತೆ, ರಾಷ್ಟ್ರೀಯತೆಗಳಿಗೆ ಸಂಬಂಧಿಸಿದಂತೆ ಕ್ರಿಯಾತ್ಮಕವಾಗಿ ಸೇವೆ ಸಲ್ಲಿಸಿರುತ್ತಾರೆ.
ದೇಶ ಪ್ರೇಮದ ಕಿಚ್ಚನ್ನು ಸಹಜವಾಗಿ ಹೊತ್ತಿಸುವ ರೇವಣ್ಣನವರು ನಮ್ಮ ನಾಡಿನ ಹೆಮ್ಮೆಯ ಸ್ವಾತಂತ್ರ್ಯ ಯೋಧರಾಗಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಟಿ.ಎಂ. ಮಹಂತಯ್ಯ : ಶ್ರೀ ಟಿ.ಎಂ. ಮಹಂತಯ್ಯನವರದು ಸಾಮಾನ್ಯ ವರ್ಗದ ಕುಟುಂಬ. ತುಮಕೂರು ನಗರದ ಮಂಡಿಪೇಟೆಯಲ್ಲಿ ವರ್ತಕರಾಗಿದ್ದ ಶ್ರೀಯುತರ ತಂದೆಯವರ ೮ ಜನ ಮಕ್ಕಳಲ್ಲಿ ಟಿ.ಎಂ. ಮಹಂತಯ್ಯರವರೇ ಹಿರಿಯ ಪುತ್ರರಾಗಿರುತ್ತಾರೆ. ಎಸ್.ಎಸ್.ಎಲ್.ಸಿ.ಯವರೆಗೆ ಓದಿ, ವ್ಯಾಪಾರದ ಜೊತೆಗೆ ಕಾಂಗ್ರೇಸ್, ಗಾಂಧೀಜಿಯವರ ವಿಚಾರಗಳ ಗುಂಗನ್ನು ೧೯೩೮ರಿಂದ ಹತ್ತಿಸಿಕೊಂಡವರು. ೧೯೪೨ರಲ್ಲಿ ಚಳುವಳಿಯಲ್ಲಿ ದುಮುಕಿದವರು.
ತಾಯಿಯವರ ಅಸ್ವಸ್ಥತೆ, ಮನೆಯ ಸಂಕಷ್ಟ ಇದಾವುದನ್ನೂ ಲೆಕ್ಕಿಸದೆ ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯಚಟುವಟಿಕೆ ನಡೆಸಿ, ಬ್ರಿಟೀಷರ ದೌರ್ಜನ್ಯದ ಬಗ್ಗೆ ಪ್ರಚಾರ ಮಾಡಿ, ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ದಸ್ತಗಿರಿಯಾದವರು. ಮತ್ತೆ ೧೯೪೭ರಲ್ಲಿ ಮೈಸೂರು ಚಲೋ ಸತ್ಯಾಗ್ರಹಕ್ಕೆ ದುಮುಕಿ, ದಸ್ತಗಿರಿಯಾಗಿ ೨ ತಿಂಗಳು ಶಿಕ್ಷೆ ಅನುಭವಿಸಿದವರು. ಮಹಾತ್ಮಗಾಂಧಿಯವರ ಆದರ್ಶಗಳ ಪರಿಪಾಲಕರಾಗಿ ರಾಷ್ಟ್ರಪಿತನಿಗೂ ದೇಶದ ಜನತೆಗೂ ಯಾವುದೇ ದ್ರೋಹ ಬಗೆಯಬಾರದೆಂಬ ಸಂಕಲ್ಪದಿಂದ ಜೀವಿಸಿದ ಮಹಾನ್ ವ್ಯಕ್ತಿ ಟಿ.ಎಂ.ಮಹಂತಯ್ಯನವರು.

ಎಸ್.ವಿ.ಆಚಾರ್ : ೧೯೧೨ರಲ್ಲಿ ಜನಿಸಿದ ಎಸ್.ವಿ.ಆಚಾರ್ ಅವರು ತುಮಕೂರು ನಗರದ ಆಚಾರ್ಯರ ಬೀದಿಯಲ್ಲಿ ವಾಸವಾಗಿದ್ದರು. ೧೯೩೯ರ ಅರಣ್ಯ ಸತ್ಯಾಗ್ರಹದಲ್ಲಿಯೂ ಹಾಗೂ ೧೯೪೨ರ ಕ್ವಿಟ್‌ಇಂಡಿಯಾ ಚಳುವಳಿಯಲ್ಲಿಯೂ ಭಾಗವಹಿಸಿದವರು. ಇವರಿಗೆ ತುಮಕೂರು ಕಾರಾಗೃಹದಲ್ಲಿ ೩ ತಿಂಗಳು ಕಠಿಣ ಶಿಕ್ಷೆ ಹಾಗೂ ೧ವರ್ಷ ಎರಡೂವರೆ ತಿಂಗಳು ಸೆರೆಮನೆ ವಾಸ ಅನುಭವಿಸಿದವರಾಗಿದ್ದಾರೆ. ಇವರು ತುಮಕೂರು ಪುರಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಟಿ. ಅನಂತರಾಮಶೆಟ್ಟಿ : ಇವರು ತುಮಕೂರಿನ ಪ್ರಸಿದ್ದ ವರ್ತಕರು. ೧೯೦೫ರಲ್ಲಿ ಜನಿಸಿದರು. ಪ್ರಸಿದ್ದ ದಾನಿಗಳಾದ ಇವರು ದಿಟ್ಟ ಸ್ವಾತಂತ್ರ್ಯ ಹೋರಾಟಗಾರರು ಹೌದು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಹಾಸನ ಜೈಲಿನಲ್ಲಿ ೩ ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ಇವರು ಅನೇಕ ಧರ್ಮಕಾರ್ಯಗಳಲ್ಲಿ ಮುಂದಾಳಾಗಿ ನಿಂತು ಕಾರ್ಯನಿರ್ವಹಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ೧೯೭೬ರಲ್ಲಿ ಕರ್ನಾಟಕ ಸರ್ಕಾರವು ರಾಜ್ಯ ಪ್ರಶಸ್ತಿ ನೀಡಿ, ಗೌರವಿಸಿರುತ್ತದೆ.

ಚಂಗಳ್ವರಾಯ ಮೊದಲಿಯಾರ್ : ಇವರು ತುಮಕೂರು ನಗರ ವಾಸಿಗಳು. ಚಿಲ್ಲರೆ ಅಂಗಡಿ ವ್ಯಾಪಾರಿಗಳು, ಅಸಹಕಾರ ಚಳುವಳಿ, ಕಿಲಾಫ಼ತ್ ಚಳುವಳಿ, ಪ್ರಿನ್ಸ್ ಆಫ್ ವೇಲ್ಸ್ ಬಾಯ್ಕಾಟ್, ಸೈಮನ್ ಕಮಿಷನ್ ವಿರೋಧ, ಉಪ್ಪಿನ ಸತ್ಯಾಗ್ರಹ, ಮೈಸೂರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಲ್ಲದೆ, ೧೯೪೭ರವರೆಗೆ ನಡೆದ ಪ್ರತಿಯೊಂದು ಸತ್ಯಾಗ್ರಹದಲ್ಲೂ ಸಹ ಭಾಗವಹಿಸಿದ್ದಾರೆ. ಒಟ್ಟು ೬ ಬಾರಿ ೪ವರ್ಷ ೨ತಿಂಗಳು ಶಿಕ್ಷೆ ಅನುಭವಿಸಿದ್ದಾರೆ.

ಬಿ.ಸಿ.ನಂಜುಂಡಯ್ಯನವರು : ಶ್ರೀಯುತರ ತುಮಕೂರು ನಗರದ ದಿಬ್ಬೂರು ತೋಟದ ರಸ್ತೆಯ ನಿವಾಸಿಗಳು. ೧೯೧೩ರಲ್ಲಿ ಜನಿಸಿದವರು. ಇವರು ವ್ಯವಸಾಯಗಾರರಾಗಿದ್ದರು. ೧೯೩೧ರಲ್ಲಿ ನಡೆದ ಪಾನನಿರೋಧ ಚಳುವಳಿ, ೧೯೩೭ರ ಧ್ವಜಸತ್ಯಾಗ್ರಹ, ೧೯೩೮ರ ಅರಣ್ಯ ಸತ್ಯಾಗ್ರಹ, ೧೯೪೨ರ ಕ್ವಿಟ್ ಇಂಡಿಯಾ ಚಳುವಳಿ, ೧೯೪೭ರ ಮೈಸೂರು ಚಳುವಳಿಯಲ್ಲಿ ಮುಖಂಡತ್ವ ವಹಿಸಿದ್ದರು. ೧೯೩೧ರಲ್ಲಿ ಪ್ರಾಯೋಗಿಕ ಖೈದಿಯಾಗಿದ್ದರು. ಒಟ್ಟು ೩ಬಾರಿ ಒಂದೂವರೆ ವರ್ಷಕಾಲ ಕಠಿಣ ಶಿಕ್ಷೆ ಅನುಭವಿಸಿದರು.

ಎಂ.ನೀಲಕಂಠರಾಯರು : ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ದೇಶಭಕ್ತ ಎಂ.ನೀಲಕಂಠರಾಯರು ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು, ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ, ಖಾದಿ ಪ್ರಚಾರ, ಚರಕ ಪ್ರಚಾರ ಕಾರ್ಯದಲ್ಲಿ ನಿರತರಾದರು. ೧೯೨೯ರಲ್ಲಿ ಗಾಂಧಿ ಜಯಂತಿಯಂದು ಅಖಿಲ ಭಾರತ ಚರಕ ಸಂಘದವರು ತುಮಕೂರಿನಲ್ಲಿ ಸ್ಥಾಪಿಸಿದ ಖಾದಿ ಭಂಡಾರದ ವ್ಯವಸ್ಥಾಪಕರಾಗಿ ಖಾದಿ ಜನಪ್ರಿಯವಾಗುವಂತೆ ಮಾಡಿದರು. ಕ್ವಿಟ್ ಇಂಡಿಯಾ, ಪಾನನಿರೋಧ, ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ, ಅರಣ್ಯ ಸತ್ಯಾಗ್ರಹ, ಧ್ವಜಸತ್ಯಾಗ್ರಹ ಚಳುವಳಿಗಳಲ್ಲಿ ಭಾಗವಹಿಸಿ ಮೂರು ಬಾರಿ ಕಾರಾಗೃಹ ವಾಸವನ್ನು ಅನುಭವಿಸಿದರು.

ಎ.ಎಸ್.ನಂದೀಶ್ : ತುಮಕೂರಿನ ಶ್ರೀ ಸಂಗಮೇಶ್ವರ ಮಿಲ್ಸ್ ಮಾಲೀಕರಾದ ಶ್ರೀ ನಂದೀಶ್ ಅವರು ಜನವರಿ ೮, ೧೯೨೦ರಲ್ಲಿ ಜನಿಸಿದರು. ಶ್ರೀಯುತರ ಧ್ವಜಸತ್ಯಾಗ್ರಹ, ಕ್ವಿಟ್ ಇಂಡಿಯಾ, ಮೈಸೂರು ಚಳುವಳಿಗಳಲ್ಲಿ ಭಾಗವಹಿಸಿದ್ದರು. ಸುಮಾರು ೭ ತಿಂಗಳ ಕಾಲ ತುಮಕೂರು, ಚಿಕ್ಕಮಗಳೂರು ಮತ್ತು ಬೆಂಗಳೂರು ಜೈಲುಗಳಲ್ಲಿ ಒಟ್ಟು ೩ವರ್ಷ ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ೧೫೦ರೂ. ಜುಲ್ಮಾನೆ ವಿಧಿಸಲ್ಪಟ್ಟಿದ್ದರೂ ಸಹ ಇವರು ಅದನ್ನು ಕೊಡಲಿಲ್ಲ. ಇವರು ವಿಧಾನಪರಿಷತ್ತಿನ ಸದಸ್ಯರಾಗಿದ್ದರು.

ಕೆ.ಎಲ್. ನರಸಿಂಹಯ್ಯನವರು : ಶ್ರೀಯುತರ ಕ್ಯಾತ್ಸಂದ್ರದವರು. ೧೯೩೯ರಲ್ಲಿ ನಡೆದ ಅರಣ್ಯ ಸತ್ಯಾಗ್ರಹದಲ್ಲೂ, ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲೂ, ೧೯೪೭ರ ಮೈಸೂರು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದ್ದರು. ತುಮಕೂರು, ಚಿಕ್ಕಮಗಳೂರು ಮತ್ತು ಬೆಂಗಳೂರು ಜೈಲುಗಳಲ್ಲಿ ೩ವರ್ಷಕಾಲ ಕಠಿಣ ಶಿಕ್ಷೆ ಅನುಭವಿಸಿದಲ್ಲದೆ ೧೦೦ ರೂ. ಜುಲ್ಮಾನೆ ಕೊಡದ ತಪ್ಪಿಗಾಗಿ ಮತ್ತೆ ಒಂದು ತಿಂಗಳ ಕಾಲ ತುರಂಗವಾಸವನ್ನು ಮಾಡಿದರು. ಶ್ರೀಯುತರ ಕರ್ನಾಟಕ ರಾಜ್ಯೋದಯಕ್ಕಿಂತ ಮುಂಚೆ ಮೈಸೂರು ನ್ಯಾಯವಿದಾಯಕ ಸಭೆಯ ಸದಸ್ಯರಾಗಿದ್ದರು.

ಕೆ.ಆರ್. ನರಸಿಂಹಯ್ಯಂಗಾರ್ : ಶ್ರೀಯುತರು ಕರಡಿಗೆರೆಯವರು. ಬೆಂಗಳೂರಿನ ಬಿನ್ನಿ ಮಿಲ್ಲಿನಲ್ಲಿ ಕೆಲಸಕ್ಕಿದ್ದರು. ೧೯೩೯ರಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲೂ, ಕ್ವಿಟ್ ಇಂಡಿಯಾ ಚಳುವಳಿಯಲ್ಲೂ ಭಾಗವಹಿಸಿದ್ದರು. ತುಮಕೂರು ಮತ್ತು ಬೆಂಗಳೂರು ಜೈಲುಗಳಲ್ಲಿ ಇವರಿಗೆ ೧ವರ್ಷ ಕಠಿಣ ಸಜೆಯಾಯಿತು ಹಾಗೂ ೧೦೦ ರೂ. ದಂಡ ಕೊಡುವುದರ ಬದಲು ಮತ್ತೆ ೪ ತಿಂಗಳು ಕಠಿಣ ಶಿಕ್ಷೆ ಅನುಭವಿಸಿದರು.

ಅಪ್ಪಾಜಪ್ಪ : ಹೊಳೆಕಲ್ಲು ಅಪ್ಪಾಜಪ್ಪನವರು ವ್ಯವಸಾಯಗಾರರು. ಇವರು ೪೦ನೇ ವಯಸ್ಸಿನಲ್ಲಿ ೧೯೪೭ರ ಮೈಸೂರು ಚಲೋ ಚಳುವಳಿಯಲ್ಲಿ ದಸ್ತಗಿರಿ ಮಾಡಲ್ಪಟ್ಟು, ೧ತಿಂಗಳು ೮ ದಿನ ಸೆರೆಮನೆಯಲ್ಲಿದ್ದರು.

ಕೆ.ಸಿ.ಬಸವರಾಜು : ಕೆ.ಸಿ.ಬಸವರಾಜು ಅವರು ತುಮಕೂರಿನ ಕೆ.ಆರ್.ಬಡಾವಣೆಯವರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ತುಮಕೂರು, ಬೆಂಗಳೂರು ಜೈಲುಗಳಲ್ಲಿ ೫ ತಿಂಗಳು ಕಠಿಣ ಶಿಕ್ಷೆ ಅನುಭವಿಸಿದವರು.

ಜಿ.ಆರ್. ಚಂಗಲಾರಾಧ್ಯರು : ಜಿ.ಆರ್.ಚಂಗಲಾರಾಧ್ಯರು ೧೯೦೬ರಲ್ಲಿ ಜನಿಸಿದರು. ೧೯೩೦ರ ಉಪ್ಪಿನ ಸತ್ಯಾಗ್ರಹ, ೧೯೩೨ರ ಅಸಹಕಾರ ಚಳುವಳಿ, ೧೯೪೨ರ ಕ್ವಿಟ್‌ಇಂಡಿಯಾ ಚಳುವಳಿ, ೧೯೪೭ರಲ್ಲಿ ಮೈಸೂರು ಸರ್ಕಾರದ ವಿರುದ್ದ ನಡೆದ ಚಳುವಳಿಯಲ್ಲಿ ಭಾಗವಹಿಸಿದ್ದರು.

ಚನ್ನಪ್ಪ : ಇವರು ತುಮಕೂರು ನಗರದ ಅಪ್ಪಾಜಪ್ಪನವರ ಮಕ್ಕಳು. ಕಾನೂನುಭಂಗ ಚಳುವಳಿಯಲ್ಲಿ ಭಾಗವಹಿಸಿ, ೧೯೩೨ರಲ್ಲಿ ಕಾರವಾರ ಜೈಲಿನಲ್ಲಿ ೪ ತಿಂಗಳು ಕಠಿಣ ಶಿಕ್ಷೆ ಅನುಭವಿಸಿದರು.

ಟಿ.ಎನ್. ಚನ್ನಪ್ಪ : ಇವರು ತುಮಕೂರಿನ ಅರಳೇಪೇಟೆಯವರು. ಶಿರಸಿ, ಸಿದ್ದಾಪುರಗಳಲ್ಲಿ ಕರನಿರಾಕರಣ ಚಳುವಳಿಯಲ್ಲಿ ಭಾಗವಹಿಸಿದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ತುಮಕೂರು, ಬೆಂಗಳೂರು, ಕಾರವಾರ ಜೈಲುಗಳಲ್ಲಿ ಒಂದೂವರೆ ವರ್ಷಕಾಲ ಸೆರೆಮನೆ ವಾಸ ಅನುಭವಿಸಿದರು.

ಜಯದೇವಯ್ಯನವರು : ಶ್ರೀಯುತ ಟಿ.ವಿ.ಜಯದೇವಯ್ಯನವರು ತುಮಕೂರು ನಗರದವರು. ೧೯೨೩ರಲ್ಲಿ ಜನಿಸಿದರು. ೧೯೩೨ರಲ್ಲಿ ಹಾಗೂ ೧೯೪೨ರಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಒಟ್ಟು ೬ತಿಂಗಳ ಕಾಲ ತುರಂಗವಾಸ ಅನುಭವಿಸಿದರು.

ಟಿ.ಎ.ಮುದ್ದಪ್ಪನವರು : ಇವರು ತುಮಕೂರು ನಗರದ ಪಾಂಡುರಂಗನಗರ ನಿವಾಸಿಗಳು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ೬ತಿಂಗಳು ಜೈಲುವಾಸ ಅನುಭವಿಸಿದರು.

ಓಬಳಯ್ಯ ಅಲಿಯಾಸ್ ಟಿ.ಕೆ.ಗೋವಿಂದರಾಜು : ಶ್ರೀಯುತರು ತುಮಕೂರು ನಗರ ವಾಸಿಗಳು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ತುಮಕೂರು ಲಾಕಪ್‌ನಲ್ಲೂ ಮತ್ತು ಬೆಂಗಳೂರು ಜೈಲಿನಲ್ಲೂ ಒಂದು ವರ್ಷ ಒಂದು ತಿಂಗಳ ಕಾಲ ತುರಂಗವಾಸ ಅನುಭವಿಸಿದರು.

ಕೆ.ವಿ.ಪರಮಶಿವ : ತುಮಕೂರಿನವರಾದ ಕೆ.ವಿ.ಪರಮಶಿವ ರವರು ೧೯೨೫ರಲ್ಲಿ ಜನಿಸಿದರು. ಇವರು ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಒಟ್ಟು ೧ವರ್ಷ ೧ತಿಂಗಳ ಕಾಲ ತುರಂಗವಾಸ ಅನುಭವಿಸಿದರು. ಇವರು ತುಮಕೂರು, ಬೆಂಗಳೂರು ಮತ್ತು ಎರವಾಡ ಜೈಲುಗಳಲ್ಲಿ ಬಂಧಿಸಲ್ಪಟ್ಟಿದ್ದರು.

ಟಿ.ಆರ್.ಪುಟ್ಟಯ್ಯ : ೧೯೧೧ರಲ್ಲಿ ಜನಿಸಿದ ಇವರು ತುಮಕೂರು ನಗರ ವಾಸಿಗಳು. ಇವರು ೧೯೩೨ರಲ್ಲಿ ಕಾನೂನು ಭಂಗ ಚಳುವಳಿಯಲ್ಲೂ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಇವರಿಗೆ ಬಿಜಾಪುರ ಮತ್ತು ವಿಶಾಪುರ ಜೈಲುಗಳಲ್ಲಿ ೬ ತಿಂಗಳ ಕಠಿಣ ಶಿಕ್ಷೆ ವಿಧಿಸಲಾಯಿತು.

ಎ.ಸಿ.ಪುಟ್ಟಣ್ಣ : ಶ್ರೀಯುತರ ತುಮಕೂರು ಸೋಮೇಶ್ವರ ಬಡಾವಣೆ ನಿವಾಸಿಗಳು. ೧೯೨೦ರಲ್ಲಿ ಜನಿಸಿದರು. ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದವರು. ತುಮಕೂರು ಜೈಲಿನಲ್ಲಿ ಒಂದು ತಿಂಗಳು ಶಿಕ್ಷೆ ಅನುಭವಿಸಿದರು. ೧೪.೮.೧೯೪೭ರಲ್ಲಿ ಬಂದೂಕಿನ ಗುಂಡೇಟನ್ನೂ ಅನುಭವಿಸಿದ್ದರು.

ಪುಟ್ಟಸ್ವಾಮಯ್ಯ : ೧೯೧೨ರಲ್ಲಿ ಜನಿಸಿದ ಇವರು ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ತುಮಕೂರು ಜೈಲಿನಲ್ಲಿ ಒಂದೂವರೆವರ್ಷ ಕಠಿಣ ಶಿಕ್ಷೆ ಅನುಭವಿಸಿದರು.

ಬಿ.ರಾಜಪ್ಪ : ಶ್ರೀಯುತರು ತುಮಕೂರು ನಗರದ ಪಾಂಡುರಂಗನಗರ ವಾಸಿಗಳು. ೧೯೪೨ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ೩ ತಿಂಗಳು ಜೈಲು ಶಿಕ್ಷೆ ಅನುಭವಿಸಿದರು.

ಟಿ.ಕೆ.ರಾಮಚಂದ್ರಯ್ಯ : ಶ್ರೀಯುತರು ೧೯೨೩ರಲ್ಲಿ ಜನಿಸಿದರು. ಇವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ತುಮಕೂರು ಜೈಲಿನಲ್ಲಿ ೩ತಿಂಗಳು ಶಿಕ್ಷೆ ಅನುಭವಿಸಿದರು.

ಜಿ.ರಾಮರಾವ್ :- ೧೯೨೦ರಲ್ಲಿ ಜನಿಸಿದ ಇವರು ತುಮಕೂರು ನಗರದ ಚಿಕ್ಕಪೇಟೆಯವರು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ೪ತಿಂಗಳು ಶಿಕ್ಷೆ ಅನುಭವಿಸಿದ್ದಲ್ಲದೆ ೨೫೦ರೂ. ಜುಲ್ಮಾನೆ ಕೊಡಲು ತಪ್ಪಿ ಬೆಂಗಳೂರಿನಲ್ಲಿ ಹೆಚ್ಚಿಗೆ ೧ ತಿಂಗಳು ಕಠಿಣ ಶಿಕ್ಷೆ ಅನುಭವಿಸಿದವರು.

ಎಂ.ವಿ.ರಾಮರಾವ್ : ಎಂ.ವಿ.ರಾಮರಾವ್ ಅವರು ತುಮಕೂರಿನಲ್ಲಿ ಬಿ.ಎ.ಪದವಿಯನ್ನು ಪಡೆದು, ಕಾನೂನು ಪದವಿಗಾಗಿ ಮುಂಬೈಗೆ ತೆರಳಿದ್ದರು. ಕಾನೂನು ಪದವಿ ಪಡೆದಕು ತುಮಕೂರಿಗೆ ಬಂದು ಲಾ ಪ್ರಾಕ್ಟೀಸ್ ಪ್ರಾರಂಭಿಸಿದರು. ಶ್ರೀಯುತರು ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ೧೯೪೭ರ ಮೈಸೂರು ಚಲೋ ಸತ್ಯಾಗ್ರಹದಲ್ಲೂ ಸಹ ಅತ್ಯಂತ ಸಕ್ರಿಯರಾಗಿದ್ದರು. ೧೯೫೫-೫೬ರಲ್ಲಿ ಮೈಸೂರು ಕಾಂಗ್ರೇಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದೇ ಅವಧಿಯಲ್ಲಿ ರಾಜ್ಯ ಸರ್ಕಾರದ ಗೃಹಸಚಿವರೂ ಆಗಿದ್ದರು.

ಕೊರಟಗೆರೆ ತಾಲ್ಲೂಕಿನ ಹೋರಾಟಗಾರರು

ಬಸವರಾಧ್ಯ : ಕೊರಟಗೆರೆ ತಾಲ್ಲೂಕು ಹೊಸಹಳ್ಳಿ ಬಸವಾರಾಧ್ಯರು ೬೨ನೇ ವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಒಂದು ವರ್ಷ ಒಂದು ತಿಂಗಳು ಕಠಿಣ ಶಿಕ್ಷೆ ಅನುಭವಿಸಿದರು.

ಟಿ.ಆರ್.ಚನ್ನಪ್ಪ : ಇವರು ತೀತ ಗ್ರಾಮದವರು. ಧ್ವಜಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ದೆಹಲಿ ಚಲೋ, ಮೈಸೂರು ಚಲೋ ಚಳುವಳಿಗಳಲ್ಲಿ ಭಾಗವಹಿಸಿ, ಆಗಿನ ಸತ್ಯಾಗ್ರಹ ಯುಗದಲ್ಲಿ ಇವರು ಪ್ರಸಿದ್ದ ಕ್ರಾಂತಿಕಾರರೆನಿಸಿದರು. ಮಧುಗಿರಿ, ತುಮಕೂರು, ಕೊರಟಗೆರೆ ಜೈಲುಗಳಲ್ಲಿ ೩ತಿಂಗಳು ೧೯ ದಿನಗಳ ಶಿಕ್ಷೆ ಅನುಭವಿಸಿದರು.

ಮಂತ್ರಿ ಚನ್ನಿಗರಾಮಯ್ಯ : ಚನ್ನಿಗರಾಮಯ್ಯನವರು ಕೊರಟಗೆರೆಯಲ್ಲಿ ೧೯೧೧ರಲ್ಲಿ ಜನಿಸಿದರು. ವ್ಯವಸಾಯಗಾರ ಮನೆತನದವರು ಹಾಗೂ ಪ್ರಸಿದ್ದ ಸಮಾಜಸೇವಕರು. ೧೯೪೨ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ೧೯೪೭ರ ಮೈಸೂರು ಜವಾಬ್ದಾರಿ ಸರ್ಕಾರಕ್ಕಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದರು. ತುಮಕೂರು, ಬೆಂಗಳೂರು ಜೈಲುಗಳಲ್ಲಿ ಒಂದೂವರೆ ತಿಂಗಳ ಜೈಲು ಶಿಕ್ಷೆ ಅನುಭವಿಸಿದರು. ೧೯೩೮ರಲ್ಲಿ ಚುನಾವಣಾ ಸುಧಾರಣಾ ಆಯೋಗದ ಸದಸ್ಯರಾಗಿದ್ದರು. ಮೈಸೂರು ಲೆಜಿಸ್‌ಲೇಟಿವ್ ಸುಧಾರಣಾ ಕಮೀಷನ್‌ನಲ್ಲಿ ಸೇವೆ ಸಲ್ಲಿಸಿದ್ದರು. ಇವರು ಸೂಚಿಸಿದ ಸುಧಾರಣೆಗಳು ಪೂನಾ ನಿಯಮಗಳಿಗಿಂತ ಉತ್ತಮವೆಂದು ಮಹಾತ್ಮಗಾಂಧೀಜಿಯವರಿಂದ ಒಪ್ಪಿತವಾದವು. ಇವರು ರಾಜ್ಯ ಸರ್ಕಾರದಲ್ಲಿ ಸ್ಥಳೀಯ ಸಂಸ್ಥೆಗಳ ಸಚಿವರಾಗಿಯೂ ಮತ್ತು ೨ನೇ ಬಾರಿ ವಿದ್ಯಾ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಮಧುಗಿರಿ ತಾಲ್ಲೂಕು ಹೋರಾಟಗಾರರು

ಮಾಲಿ ಮರಿಯಪ್ಪ : ಶ್ರೀಯುತರು ಮಧುಗಿರಿಯ ಪ್ರಸಿದ್ದ ವಕೀಲರು, ಇವರು ತುಮಕೂರು ಜಿಲ್ಲೆಯ ಸ್ವಾತಂತ್ರ್ಯ ಚಳುವಳಿಗೆ ಜೀವದುಸಿರಾದರು. ಹೋರಾಟದ ಮುಂದಾಳುಗಳು. ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಮೈಸೂರು ಚಲೋ ಚಳುವಳಿಗಳಲ್ಲಿ ಭಾಗವಹಿಸಿದ್ದರು. ೩ಬಾರಿ ತುರಂಗವಾಸ ಅನುಭವಿಸಿದರು. ತುಮಕೂರು ಹಾಸನ ಮತ್ತು ಬೆಂಗಳೂರು ಸೆಂಟ್ರಲ್ ಜೈಲ್‌ಗಳಲ್ಲಿ ೨೦ ತಿಂಗಳ ಶಿಕ್ಷೆ ಅನುಭವಿಸಿದರು. ಇವರು ೧೯೪೭ರಲ್ಲಿ ಮೈಸೂರು ರಾಜ್ಯಾಂಗ ರಚನಾ ಸಭೆಗೆ ಚುನಾವಣೆಗಳು ನಡೆದಾಗ ಅದ್ಬುತ ವಿಜಯಗಳಿಸಿ ಅದರ ಸದಸ್ಯರಾದರು. ೧೯೫೮ರಲ್ಲಿ ಜತ್ತಿಯವರ ಮಂತ್ರಿಮಂಡಳ ರಚಿತವಾದಾಗ ಮಾಲಿ ಮರಿಯಪ್ಪನವರು ರಾಜ್ಯದ ಸಹಕಾರ ಸಣ್ಣಕೈಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದರು. ೧೯೬೫ರಲ್ಲಿ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದರು.

ಖಾದ್ರಿ : ಚಿಕ್ಕಧಾಳವಟ್ಟದ ದಾಳಪ್ಪನವರ ಮಕ್ಕಳಾದ ಖಾದ್ರಪ್ಪನವರು ೧೯೩೯ರ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿ, ೪ ತಿಂಗಳ ಕಾಲ ಬೆಂಗಳೂರು, ಹಾಸನಗಳಲ್ಲಿ ಸೆರೆಮನೆ ವಾಸ ಅನುಭವಿಸಿದರು. ಇವರು ತಮ್ಮ ಮೇಲೆ ಹೇರಲ್ಪಟ್ಟ ೭೫ರೂ.ಗಳ ದಂಡವನ್ನು ಕೊಡಲು ಒಪ್ಪದೆ ಮತ್ತೆ ೧ ತಿಂಗಳ ಕಠಿಣ ಸಜಾ ಅನುಭವಿಸಿದರು.

ಪಾವಗಡ ತಾಲ್ಲೂಕು ಹೋರಾಟಗಾರರು

ಗೂಲಪ್ಪ : ಇವರು ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಪಾಪಯ್ಯನವರ ಮಕ್ಕಳು. ತಮ್ಮ ೨೦ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕಿಳಿದರು. ೧೯೩೯ರ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಇವರಿಗೆ ೬ ತಿಂಗಳು ಕಠಿಣ ಶಿಕ್ಷೆಯಾಯಿತು. ೫೦ ರೂ. ಜುಲ್ಮಾನೆ ಕೊಡಲು ತಪ್ಪಿದ್ದರಿಂದ ಮತ್ತೆ ೧ ತಿಂಗಳು ಕಠಿಣ ಶಿಕ್ಷೆ ಅನುಭವಿಸಿದರು.

ಪಿ.ರಾಮರಾವ್ : ಇವರು ಪಾವಗಡದವರು. ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ನಡೆದ ಚಳುವಳಿಯಲ್ಲಿ ಭಾಗವಹಿಸಿ ದಸ್ತಗಿರಿಯಾದರು. ೮/೧೦/೪೭ರಿಂದ ೧೩/೧೦/೪೭ರವರೆಗೆ ಇವರನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿಡಲಾಗಿತ್ತು.

ಶಿರಾ ತಾಲ್ಲೂಕು ಹೋರಾಟಗಾರರು

ಗೋವಿಂದಪ್ಪ : ಹುಣಸೇಹಳ್ಳಿ ವ್ಯವಸಾಯಗಾರರಾದ ಸಣ್ಣ ವೆಂಕಟಪ್ಪನವರ ಮಕ್ಕಳಾದ ಇವರು ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ೬ ತಿಂಗಳ ಕಠಿಣ ಸಜಾ ಅನುಭವಿಸಿ, ೫೦ ರೂ. ಜುಲ್ಮಾನೆ ಕೊಡದೆ ಇದ್ದುದಕ್ಕಾಗಿ ಮತ್ತೆ ೧ತಿಂಗಳು ಕಠಿಣ ಶಿಕ್ಷೆ ಅನುಭವಿಸಿದರು.

ಕೆಂಚಪ್ಪ : ಶಿರಾ ಟೌನ್ ಮಂಡಿ ವ್ಯಾಪಾರಿಗಳಾದ ಬೋಪಣ್ಣನವರ ಮಕ್ಕಳು, ವ್ಯವಸಾಯಗಾರರು ಆದ ಇವರು ಅರಣ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹತ್ತೂವರೆ ತಿಂಗಳ ಕಠಿಣ ಸಜಾ ಅನುಭವಿಸಿ ನಂತರ ೨೨೫ರೂ. ದಂಡ ಕೊಡದೆ ಮತ್ತೆ ಒಂದು ತಿಂಗಳು ೨೯ದಿನ ಜೈಲು ಅನುಭವಿಸಿದರು.

ಗುಬ್ಬಿ ತಾಲ್ಲೂಕು ಹೋರಾಟಗಾರರು

ಜಿ.ಹೆಚ್.ಆರ್. ದೇವರು : ಇವರು ಗುಬ್ಬಿ ಸ್ಥಳದವರು. ಬಾಣದ ಚೆನ್ನಯ್ಯನವರ ಮಕ್ಕಳು. ಮೈಸೂರು ಚಲೋ ಚಳುವಳಿಯಲ್ಲಿ ಪಾಲ್ಗೊಂಡು ತುಮಕೂರು ಜೈಲಿನಲ್ಲಿ ಒಂದು ತಿಂಗಳು ತುರಂಗವಾಸ ಅನುಭವಿಸಿದರು.

ಗಂಗಾಧರಪ್ಪನವರು : ಇವರು ಕಲ್ಲೂರಿನ ರೈತರು. ಕ್ವಿಟ್‌ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಒಂದೂವರೆ ವರ್ಷ ಶಿಕ್ಷೆಯಾಗಿ ಮತ್ತೆ ೨ತಿಂಗಳ ಕಾಲ ಜೈಲು ಅನುಭವಿಸಿದರು.

ಜಿ.ಹೆಚ್.ಗೋಪಾಲಯ್ಯ : ಗುಬ್ಬಿ ವಾಸಿಗಳು. ಹೆಂಡದಂಗಡಿ, ಪಿಕೇಟಿಂಗ್ ಮತ್ತು ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿ, ತುಮಕೂರು ಲಾಕಪ್‌ನಲ್ಲಿ ಒಂದು ತಿಂಗಳ ಸಜಾ ಅನುಭವಿಸಿದರು. ೫೦ ರೂ. ದಂಡ ಕೊಡದೆ ಮತ್ತೆ ಒಂದು ತಿಂಗಳು ಶಿಕ್ಷೆ ಅನುಭವಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೋರಾಟಗಾರರು. ಸಮಾಜ ಸೇವಕ, ಹೋರಾಟಗಾರ ಶ್ರೀ ಸಿ.ಎಸ್.ನಾರಾಯಣರಾವ್:-

ಚಿಕ್ಕನಾಯಕನಹಳ್ಳಿಯವರಾದ ಸಿ.ಎಸ್. ನಾರಾಯಣರಾವ್ ಅವರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ೧೯೮೨ರಲ್ಲಿ ನಡೆದ ಕ್ವಿಟ್‌ಇಂಡಿಯಾ ಚಳುವಳಿ, ಸ್ವದೇಶಿ ಚಳುವಳಿ, ಕುಡಿತ ನಿರ್ಮೂಲನಾ ಚಳುವಳಿಯಲ್ಲಿ ಹೋರಾಡಿದವರು. ಸ್ವಾತಂತ್ರ್ಯ ಚಳುವಳಿಯಲ್ಲಿ ತಿಪಟೂರಿನ ಕಾರಾಗೃಹ ಹಾಗೂ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದವರು. ಭಾರತ ಸೇವಾದಳ, ಭಾರತ ಸೇವಕ ಸಮಾಜ ಅಲ್ಲದೆ ಆಚಾರ್ಯ ವಿನೋಭ ಅವರ ಜೊತೆ ಪಾದಯಾತ್ರೆ ಮಾಡಿ ಸರ್ವೋದಯ ಕಾರ್ಯ ಯೋಜನೆಯಲ್ಲಿ ಸೇವಾ ಕಾರ್ಯಕ್ಕೆ ಕೈಜೊಡಿಸಿದವರು.

ಸಿ.ಕೆ.ಸಣ್ಣಲಕ್ಷ್ಮಯ್ಯ ಮತ್ತು ತಿರುಮಲಮ್ಮ ಅವರ ಪುತ್ರನಾಗಿ ಜನಿಸಿ, ತಮ್ಮ ಚಿಕ್ಕವಯಸ್ಸಿನಿಂದಲೂ ದೇಶಸೇವೆ ಹಾಗೂ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಸಿ.ಎಸ್.ನಾರಾಯಣರಾವ್ ಅವರಂತಹ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ, ದೇಶಪ್ರೇಮಿ ನಮ್ಮ ದೇಶಕ್ಕೆ ಮಾದರಿಯಾಗಿದ್ದಾರೆ.

ಎಂ.ಎಸ್.ಹನುಮಂತರಾವ್ : ಇವರು ಚಿ.ನಾ.ಹಳ್ಳಿಯವರು. ೧೯೩೯ರ ಅರಣ್ಯ ಸತ್ಯಾಗ್ರಹದಲ್ಲೂ, ೧೯೪೨ರ ಕ್ವಿಟ್‌ಇಂಡಿಯಾ ಚಳುವಳಿಯಲ್ಲೂ, ೧೯೪೭ರಲ್ಲಿ ನಡೆದ ಮೈಸೂರು ಜವಾಬ್ದಾರಿ ಸರ್ಕಾರ ಹೋರಾಟದಲ್ಲಿಯೂ ಭಾಗವಹಿಸಿದ್ದಲ್ಲದೆ, ಈ ಚಳುವಳಿಯ ನಾಯಕತ್ವ ವಹಿಸಿದ್ದರು. ೩ ಬಾರಿಯಿಂದ ಸುಮಾರು ಒಂದು ವರ್ಷ ೫ ತಿಂಗಳ ಕಾಲ ತುರಂಗವಾಸ ಅನುಭವಿಸಿದರು. ಇವರು ತುಮಕೂರು, ಶಿವಮೊಗ್ಗ ಮತ್ತು ಬೆಂಗಳೂರು ಸೆಂಟ್ರಲ್ ಜೈಲಿನಲ್ಲೂ ಇದ್ದರು.

ಸಿ.ಆರ್.ಆದಿನಾರಾಯಣರಾವ್ : ಇವರು ಚಿಕ್ಕನಾಯಕನಹಳ್ಳಿ ರಂಗಪ್ಪನವರ ಮಕ್ಕಳು. ಜವಳಿ ವ್ಯಾಪಾರಿಗಳು, ೧೯೪೭ರಲ್ಲಿ ನಡೆದ ಮೈಸೂರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ೧೦೦ ರೂ. ಜುಲ್ಮಾನೆ ವಿಧಿಸಲ್ಪಟ್ಟಿದ್ದು, ಅದಕ್ಕೆ ಬದಲಾಗಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ೪ತಿಂಗಳು ಸೆರೆಮನೆ ಶಿಕ್ಷೆ ಅನುಭವಿಸಿದರು.

ತುರುವೇಕೆರೆ ತಾಲ್ಲೂಕು

ಎಸ್.ಅನಂತರಾಮಅಯ್ಯಂಗಾರ್ : ಇವರು ತುರುವೇಕೆರೆ ತಾಲ್ಲೂಕು ಸಂಪಿಗೆ ಸ್ಥಳದವರು. ೧೯೨೫ರಲ್ಲಿ ಜನಿಸಿದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಬೆಂಗಳೂರು ಜೈಲಿನಲ್ಲಿ ೩ತಿಂಗಳ ಕಾಲ ತುರಂಗವಾಸ ಅನುಭವಿಸಿದರು.

ಟಿ.ಸುಬ್ರಹ್ಮಣ್ಯಂ : ತಾಳೇಕೆರೆ ಸುಬ್ರಹ್ಮಣ್ಯಂ ರವರು ತುರುವೇಕೆರೆ ತಾಲ್ಲೂಕಿನವರು. ೧೮೯೬ರಲ್ಲಿ ಜನಿಸಿದರು. ಪ್ರಸಿದ್ದ ವಕೀಲರಾಗಿದ್ದರು. ೧೯೨೨ರಿಂದಲೂ ನಡೆದ ಸ್ವಾತಂತ್ರ್ಯದ ಎಲ್ಲಾ ಹೋರಾಟದ ಸತ್ಯಾಗ್ರಹಗಳಲ್ಲೂ ಭಾಗವಹಿಸಿದ್ದಲ್ಲದೆ ಮುಖಂಡತ್ವವನ್ನೂ ವಹಿಸಿದ್ದರು. ೧೯೪೭ರಲ್ಲಿ ನಡೆದ ಜವಾಬ್ದಾರಿ ಸರ್ಕಾರದ ಹೋರಾಟವು ಫಲಕಾರಿಯಾಗುವವರೆಗೆ ಇವರು ಚಳುವಳಿ ನಿಲ್ಲಲಿಲ್ಲ. ಇವರು ಒಟ್ಟು ೯ ಬಾರಿ ದಸ್ತಗಿರಿ ಮಾಡಲ್ಪಟ್ಟು ೬ ವರ್ಷಗಳಿಗೂ ಮೇಲ್ಪಟ್ಟು ತುರಂಗವಾಸ ಅನುಭವಿಸಿದರು. ಬಿ.ಡಿ.ಜತ್ತಿ ಅವರ ಮಂತ್ರಿಮಂಡಳದಲ್ಲಿ ನ್ಯಾಯಾಂಗ, ಕಾರ್ಮಿಕ, ಸ್ಥಳೀಯ ಸರ್ಕಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ತಿಪಟೂರು ತಾಲ್ಲೂಕು

ಅನಿವಾಲದ ನಂಜಪ್ಪ : ತಿಪಟೂರು ತಾಲ್ಲೂಕು ಅನಿವಾಲದ ನಂಜಪ್ಪನವರು ಕೃಷಿ ಮತ್ತು ವ್ಯಾಪಾರದ ಉದ್ಯಮಿಗಳು. ಇವರು ತಮ್ಮ ೫೪ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಅಂಗವಾಗಿ ಪಿಕೇಟಿಂಗ್ ಸತ್ಯಾಗ್ರಹ ನಡೆಸಿದ್ದರಿಂದ ಹಾಗೂ ಸತ್ಯಾಗ್ರಹ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ್ದರಿಂದ ದಸ್ತಗಿರಿ ಮಾಡಲ್ಪಟ್ಟು ಬೆಂಗಳೂರು ಜೈಲಿನಲ್ಲಿ ೭ತಿಂಗಳು ೨ ದಿನ ಕಠಿಣ ಶಿಕ್ಷೆ ಅನುಭವಿಸಿದರು.

ಎಸ್.ಆರ್.ಮಲ್ಲಪ್ಪ : ಇವರು ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಮತ್ತು ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿ, ಬೆಂಗಳೂರು, ಮೈಸೂರು, ಹಾಸನ, ತುಮಕೂರು ಮತ್ತು ತಿಪಟೂರು ಜೈಲುಗಳಲ್ಲಿ ಒಟ್ಟು ೬ತಿಂಗಳು ಶಿಕ್ಷೆ ಅನುಭವಿಸಿದ್ದಲ್ಲದೆ ೭೦ರೂ. ದಂಡಕೊಡಲೊಪ್ಪದೆ ಮತ್ತೆ ೪ ತಿಂಗಳು ೧೭ದಿನ ತುರಂಗವಾಸ ಅನುಭವಿಸಿದರು.

ಕುಣಿಗಲ್ ತಾಲ್ಲೂಕು

ಕರಿಯಪ್ಪ : ಬಿದನಗೆರೆ ಕರಿಯಪ್ಪನವರು ಯಾಲಕ್ಕಯ್ಯನವರ ಮಕ್ಕಳು. ವ್ಯವಸಾಯಗಾರರು. ಮೈಸೂರು ಚಲೋ ಚಳುವಳಿಯಲ್ಲಿ ಪಾಲ್ಗೊಂಡು ೧೦ ತಿಂಗಳ ಕಠಿಣ ಶಿಕ್ಷೆ ವಿಧಿಸಿದ್ದು, ಈ ಪೈಕಿ ೧ ತಿಂಗಳು ಮಾತ್ರ ತುಮಕೂರು ಜೈಲಿನಲ್ಲಿ ಸಾದಾ ಸಜೆ ಅನುಭವಿಸಿದರು.

ಜಿ.ತಮ್ಮಣ್ಣ : ಇವರು ಎಡೆಯೂರು ಹೋಬಳಿ ಜಿದ್ದಗೆರೆ ಗ್ರಾಮದವರು. ೧೯೨೫ರಲ್ಲಿ ಜನಿಸಿದರು. ೧೯೩೮ರಿಂದ ೪೦ರವರೆಗೆ ನಡೆದ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕತ್ವ ವಹಿಸಿ ಚಳುವಳಿ ಮಾಡಿದರು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ಅದೇ ವರ್ಷದಲ್ಲಿ ತುರಂಗವಾಸ ಅನುಭವಿಸಿದರು. ನಂತರ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಆಧಾರ : ತುಮಕೂರ್ ಇನ್ಫೋ

Review Overview

User Rating: 4.7 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *