ತಿರುಮಲಾಂಬ (೨೫-೩-೧೮೮೭ – ೧-೯-೧೯೮೨): ಕನ್ನಡದ ಮೊದಲ ಪತ್ರಕರ್ತೆ, ಪ್ರಕಾಶಕಿ, ಮುದ್ರಕಿ ಎಂಬ ಕೀರ್ತಿಗಳಿಸಿದ ತಿರುಮಲಾಂಬರವರು ಹುಟ್ಟಿದ್ದು ನಂಜನಗೂಡಿನಲ್ಲಿ. ತಂದೆ ವೆಂಕಟಕೃಷ್ಣ ಅಯ್ಯಂಗಾರ್, ತಾಯಿ ಅಲಮೇಲಮ್ಮ. ವೃತ್ತಿಯಲ್ಲಿ ತಂದೆ ವಕೀಲರು. ಪ್ರಾಥಮಿಕ ಶಾಲೆ ಮುಗಿಸಿದ್ದ ಮಗಳಿಗೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಬೇಕೆಂಬುದು ತಂದೆಯ ಆಸೆ. ಆದರೆ ಹತ್ತನೇ ವಯಸ್ಸಿಗೆ ಮದುವೆ. ಗಂಡನನ್ನು ನೋಡಿದ್ದು ಒಂದೇ ಬಾರಿ. ಪ್ಲೇಗಿಗೆ ಬಲಿಯಾಗಿ ಪತಿಯ ಮರಣ, ವೈಧವ್ಯ ಪ್ರಾಪ್ತಿ. ವಿಧವೆ ಮನೆದಾಟಿ ಹೊರಹೋಗಬಾರದೆಂಬ ಕಟ್ಟುಪಾಡಿನ ಕಾಲ. ಕಟ್ಟುಪಾಡು ಮುರಿದರೆ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆ. ಕಡೆಗೆ ಮನೆಯಲ್ಲಿಯೇ ತಂದೆ ಮಗಳಿಗೆ ಪಾಠ ಹೇಳಿಕೊಡಲು ಪ್ರಾರಂಭ. ಮನೆಯೇ ‘ಮಾತೃಮಂದಿರಂ’ ಆಗಿ ಪರಿವರ್ತನೆ. ಗೀತೆ, ರಾಮಾಯಣ, ಮಹಾಭಾರತಗಳ ಪಠಣ. ನೆರೆಹೊರೆಯ ಇಂಥ ಮಕ್ಕಳಿಗೂ ಸಿಕ್ಕ ಆಶ್ರಯತಾಣ.
ಸಾವಿತ್ರಿ ಚರಿತ್ರೆ, ಜಾನಕೀ ಕಲ್ಯಾಣ ಹಾಗೂ ಮತ್ತೆರಡು ಕಲ್ಪಿತ ನಾಟಕಗಳ ರಚನೆ (೧೯೦೮). ಕಾದಂಬರಿಗಳು-ಸುಶೀಲ (೧೯೧೩), ನಭಾ, ವಿದ್ಯುಲ್ಲತಾ (೧೯೧೪), ವಿರಾಗಿಣಿ (೧೯೧೫) ರಚನೆ. ಪತ್ತೆದಾರಿ ಕಾದಂಬರಿ-ದಕ್ಷಕನ್ಯೆ (೧೯೧೫). ೧೯೧೩ರಲ್ಲಿ ಹಿತೈಷಿಣಿ ಗ್ರಂಥಮಾಲೆ ಆರಂಭಿಸಿ ತಮ್ಮ ಮೊದಲ ಗ್ರಂಥ ಸುಶೀಲ ಕಾದಂಬರಿ ಪ್ರಕಟಣೆ. ಈ ಗ್ರಂಥ ಮಾಲೆಯಲ್ಲಿ ಸುಮಾರು ೪೧ ಕೃತಿ ಪ್ರಕಟಿಸಿದ ಹೆಮ್ಮೆ. ಇವರದು ಸುಮಾರು ೨೧ ಕೃತಿಗಳು.
ಇವರ ಸಾಹಿತ್ಯ ಸೇವೆಯ ಹರವು ಬಹು ವಿಶಾಲ. ಕಾವ್ಯ, ನಾಟಕ, ಪ್ರಬಂಧ, ಜೀವನ ಚರಿತ್ರೆ, ಸಣ್ಣಕಥೆ ಮುಂತಾದುವು. ಹೆಚ್ಚಿನ ಒಲವು ಕಾದಂಬರಿ ಕಡೆಗೆ. ಸಮಾಜದ ಕ್ರೂರ ಪದ್ಧತಿ, ಸಂಪ್ರದಾಯದ ಅನಿಷ್ಟಗಳ ವಿರುದ್ಧ ಅವರ ಪ್ರತಿಭಟನೆ. ರಚಿಸಿದ ಕೊನೆ ಕಾದಂಬರಿ ‘ಮಣಿಮಾಲ’ ೧೯೩೯ರಲ್ಲಿ. ಮುಂದೆ ಸಾಹಿತ್ಯಕ್ಕೆ ವಿದಾಯ, ವಿಶ್ರಾಂತ ಬದುಕು.
ಬೀಚಿ, ಎಚ್ಚೆಸ್ಕೆ, ಗೌರೀಶ ಕಾಯ್ಕಿಣಿಯವರೊಡನೆ ೧೯೮೦ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಗೌರವಾನ್ವಿತ ಮಹಿಳೆ. ಇವರ ಹೆಸರನ್ನು ಚಿರಸ್ಥಾಯಿಗೊಳಿಸಲು ಚಿ.ನ.ಮಂಗಳಾರವರು ರೂಪಿಸಿದ ‘ಶಾಶ್ವತಿ’ ಸಂಸ್ಥೆ. ಪ್ರತಿವರ್ಷ ಇಂಗ್ಲಿಷ್ ಬರಹಗಾರ್ತಿಯನ್ನೊಳ ಗೊಂಡಂತ ಶ್ರೇಷ್ಠ ಮಹಿಳಾ ಬರಹಗಾರ್ತಿಯೊಬ್ಬರಿಗೆ ‘ತಿರುಮಲಾಂಬ ಪ್ರಶಸ್ತಿ’ ನೀಡಿಕೆ. ಶಾಶ್ವತಿಯ ಶ್ಲಾಘನೀಯವಾದ ಕಾರ‍್ಯ, ಸಭಾಂಗಣಕ್ಕೆ ಅವರ ಹೆಸರನ್ನಿಟ್ಟಿರುವುದು ತಿರುಮಲಾಂಬರ ಮೇಲಿನ ಸಾಹಿತ್ಯ ಪ್ರೀತಿ ದ್ಯೋತಕ. ತಮ್ಮ ತೊಂಬತ್ತೈದರ ಉತ್ತರಾರ್ಧದಲ್ಲಿ ಸಾರ್ಥಕ ಬದುಕಿನ ಹಿರಿಯ ಜೀವಕ್ಕೆ ಬಿಡುಗಡೆ.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.