ತಿರುಪತಿ ದೇವಾಲಯದಲ್ಲಿರುವ ಬಾಲಾಜಿ, ಕಲಿಯುಗದ ದೈವ ವೆಂಕಟೇಶ್ವರನನ್ನು ದರ್ಶನ ಮಾಡಿದಷ್ಟೂ ಮತ್ತೆ ಮತ್ತೆ ದರ್ಶನ ಮಾಡಬೇಕೆನಿಸುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕಾಗಿ ಬರುತ್ತಿರುವುದರಿಂದ ದೇವಾಲಯದ ಆದಾಯವೂ ಸಹ ವಿಶ್ವ ದಾಖಲೆ ನಿರ್ಮಿಸಿ ಶ್ರೀಮಂತ ದೇವಾಲಯ ಎನಿಸಿಕೊಂಡಿದೆ.
ವರ್ಷದಿಂದ ವರ್ಷಕ್ಕೆ ಏಳು ಬೆಟ್ಟಗಳ ಒಡೆಯನ ಭಕ್ತಾದಿಗಳು, ಸಂಪತ್ತು ಎರುತ್ತಲೇ ಇದೆ. ತಿರುಪತಿ ದೇವಾಲಯಕ್ಕೆ ಜನಾಕರ್ಷಣೆ, ಧನಾಕರ್ಷಣೆ ಹಿಂದಿರುವ ಆ ರಹಸ್ಯವಾದರೂ ಏನು ಎಂಬುದರ ಬಗ್ಗೆ ಕುತೂಹಲ ಮೂಡುತ್ತದೆ. ದೇವಾಲಯದ ಆಕರ್ಷಣೆಯ ಬಗ್ಗೆ ಹಲವು ಸ್ವಾರಸ್ಯಕರ ಘಟನಾವಳಿಗಳಿಗಳಿವೆ. ದೇವಾಲಯದ ಹಿಂದಿರುವ ಜನಾಕರ್ಷಣೆ ಹಾಗೂ ಧನಾಕರ್ಷಣೆ ವಿಷಯ ಪ್ರಸ್ತಾಪವಾದಾಗಲೆಲ್ಲಾ ಆದಿ ಶಂಕರಾಚಾರ್ಯರ ಹೆಸರು ಉಲ್ಲೇಖವಾಗುತ್ತದೆ.
ತಿರುಪತಿಗೆ ಆದಿ ಶಂಕರಾಚಾರ್ಯರು ಭೇಟಿ ನೀಡಿದಾಗ, ವೆಂಕಟೇಶ್ವರನ ದರ್ಶನ ಮಾಡಿ ವಿಷ್ಣು ಪದಾತಿ ಕೇಷಾಂತ ಸ್ತ್ರೋತ್ರವನ್ನು ರಚಿಸುತ್ತಾರೆ. ಅದರಲ್ಲಿ ನಯನ ಮನೋಹರವಾದ ವೆಂಕಟೇಶ್ವರನ ಸೌಂದರ್ಯವನ್ನು ವರ್ಣಿಸುತ್ತಾರೆ. ಅಷ್ಟೇ ಅಲ್ಲದೇ ಈಗ ನಾವು ನೋಡುತ್ತಿರುವ ಶ್ರೀವಾರಿ ಹುಂಡಿಯ ತಳಭಾಗದಲ್ಲಿ ಶ್ರೀ ಚಕ್ರ (ಧನಾಕರ್ಷಣೆಗಾಗಿ) ಹಾಗೂ ವೆಂಕಟೇಶ್ವರ ಸ್ವಾಮಿಯ ಪಾದಗಳ ಅಡಿಯಲ್ಲಿ ಜನಾಕರ್ಷಣ ಚಕ್ರಗಳನ್ನು ಸ್ಥಾಪಿಸುತ್ತಾರೆ. ಇದರ ಪ್ರಭಾವದಿಂದಲೇ ಇಂದಿಗೂ ತಿರುಪತಿಗೆ ಸಾಗರೋಪಾದಿಯಲ್ಲಿ ಜನರು ದೇವರನ್ನು ದರ್ಶಿಸಲು ಬರುತ್ತಿದ್ದು, ಶ್ರೀಚಕ್ರ ( ಧನಾಕರ್ಷಣ ಚಕ್ರ) ದಿಂದಾಗಿಯೇ ಅಪಾರ ಸಂಪತ್ತು ಸಂಗ್ರಹವಾಗುತ್ತಿದೆ ಎಂಬ ನಂಬಿಕೆ ಇದೆ.
ಇನ್ನು ಇದಕ್ಕೆ ಪೂರಕವೆಂಬಂತೆ ದೇವಾಲಯದ ವಿನ್ಯಾಸವನ್ನು ಕಾಲಕ್ರಮೇಣ ಸ್ವಲ್ಪ ಬದಲಾವಣೆ ಮಾಡಲಾಗಿದ್ದರೂ, ಶಂಕರಾಚಾರ್ಯರು ಶ್ರೀಚಕ್ರ ಸ್ಥಾಪಿಸಿದ್ದ ಸ್ಥಳವಾದ ಶ್ರೀವಾರಿ ಹುಂಡಿಯನ್ನು ಮಾತ್ರ ಶತಶತಮಾನಗಳಿಂದ ಆ ಜಾಗದಿಂದ ಕದಲಿಸಿಲ್ಲ. 1939 ರಲ್ಲಿ ಅಂದಿನ ಮದ್ರಾಸ್ ಸರ್ಕಾರ ಪ್ರಕಟಿಸಿದ್ದ ದಿ ಹೋಲಿ ಶ್ರೈನ್ ಆಫ್ ತಿರುಪತಿ ಪುಸ್ತಕದಲ್ಲೂ ಈ ಬಗ್ಗೆ ಉಲ್ಲೇಖಗಳಿದ್ದು, ಶಂಕರಾಚಾರ್ಯರು ತಿರುಪತಿಯಲ್ಲಿ ಧನಾಕರ್ಷಣ ಚಕ್ರವನ್ನು ಸ್ಥಾಪಿಸಿದ್ದರು ಎನ್ನುವ ಉಲ್ಲೇಖವಿದೆ. ತಿರುಪತಿಯಂತೆಯೇ ಶ್ರೀರಂಗಂ ನಲ್ಲಿಯೂ ಶಂಕರಾಚಾರ್ಯರು ಜನಾಕರ್ಷಣ ಚಕ್ರವನ್ನು ಸ್ಥಾಪನೆ ಮಾಡಿದ್ದಾರೆ ಎಂಬ ಉಲ್ಲೇಖವಿದೆ.
ಆದಿ ಶಂಕರಾಚಾರ್ಯರು ತಿರುಪತಿಗೆ ಭೇಟಿ ನೀಡಿರುವ ಸಂಗತಿಗೆ ತಿರುಪತಿ ಕ್ಷೇತ್ರ ಮಹಾತ್ಮೆ ಪುಸ್ತಕದಲ್ಲಿಯೂ ಉಲ್ಲೇಖವಿದ್ದು, ತಿರುಪತಿ ದೇವಾಲಯಕ್ಕೆ ಜನಾಕರ್ಷಣೆ, ಧನಾಕರ್ಷಣೆ ಹಿಂದಿರುವ ಆ ರಹಸ್ಯ ಆದಿ ಶಂಕರಾಚಾರ್ಯರು ಸ್ಥಾಪಿಸಿರುವ ಜನಾಕರ್ಷಣೆಯ ಚಕ್ರ ಎಂಬ ನಂಬಿಕೆ ಇದೆ.
Source: Online Desk
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.