ಡಿ.ವಿ. ಬಡಿಗೇರ (೩-೫-೧೯೫೧) ಚುಟುಕಗಳು ಜೇನಿನ ಹನಿಗಳು ಎಂದು ಭಾವಿಸಿ ಚುಟುಕ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಕವಿ ಡಿ.ವಿ. ಬಡಿಗೇರರವರು ಹುಟ್ಟಿದ್ದು ಗದಗ-ಬೆಟಗೇರಿ. ತಂದೆ ವಿರೂಪಾಕ್ಷಪ್ಪ, ತಾಯಿ ಜಾನಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಗದಗ-ಬೆಟಗೇರಿಯಲ್ಲಿ. ಕಾಲೇಜಿಗೆ ಸೇರಿದ್ದು ಜೆ.ಟಿ. ಕಾಲೇಜು ಬೆಟಗೇರಿ, ಬಿ.ಎ. ಪದವಿ. ‘ಕೆಲಸವಿಲ್ಲದಿದ್ದರಿಂದ ಕವಿಯಾದೆ’ ಎಂದು ಹೇಳಿಕೊಳ್ಳುವ ಬಡಿಗೇರರವರು ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇರಿದ್ದು ೧೯೭೭ರಲ್ಲಿ. ಉದ್ಯೋಗ ಸಿಕ್ಕಿತೆಂದು ಕವನ ಬರೆಯುವುದನ್ನು ನಿಲ್ಲಿಸದೆ ನಿಂತಲ್ಲಿ, ಕುಂತಲ್ಲಿ ರಚಿಸಿದ ಹನಿಗವನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಬೆಳಕು ಕಂಡಿವೆ.
[sociallocker]ವಿದ್ಯಾರ್ಥಿ ದೆಸೆಯಲ್ಲಿಯೇ ಕವನ ರಚಿಸಲು ತೊಡಗಿದ್ದನ್ನು ಕಂಡು, ಗುರುತಿಸಿ ಬೆನ್ನು ತಟ್ಟಿದವರು ಜೆ.ಟಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಬಿ.ಬಿ. ಮಹಿಷವಾಡಿಯವರು. ಕಚ್ಚಿದರೆ ಕಬ್ಬಿನಂತೆ, ಹಿಂಡಿದರೆ ಜೇನಿನಂತೆ, ಮೂಸಿದರೆ ಹೂವಿನಂತೆ, ಬೀಸಿದರೆ ಬಾರುಕೋಲಿನಂತೆ, ಕುಳ್ಳಗಿದ್ದರೂ ರೂಪವತಿ ಹೆಣ್ಣಿನಂತೆ ಎಂದು ಎಸ್.ವಿ. ರಂಗಣ್ಣನವರು ಹೇಳಿದ್ದನ್ನು ಅಕ್ಷರಶಃ ಪಾಲಿಸಿ, ಮಾತು ಮಥಿಸಿ ಬಂದ ನವನೀತ, ಹಾಸ್ಯವಿಡಂಬನೆ ಇದರ ತಾಳ-ಸಂಗೀತ, ಕಾವ್ಯಕ್ಷೇತ್ರದ ಕಾಮನಬಿಲ್ಲು ಎಂದು ನಿರೂಪಿಸಿ ರಚಿಸಿದ ಇವರ ಹನಿಗವನವಿಲ್ಲದ ವಿಶೇಷಾಂಕಗಳೇ ಇಲ್ಲ. ಸಾವಿರ ಹನಿಗವನದ ಸರದಾರರು.ಹನಿಗವನ ಸಾಹಿತಿಗಳ ಪ್ರತಿನಿಯಾಗಿ ನಡೆಸಿದ ಹೋರಾಟ. ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಹನಿಗವನ ಗೋಷ್ಠಿ ಸೇರ‍್ಪಡೆ. ಕಲಬುರ್ಗಿ, ಮುಧೋಳ, ಹಾಸನ, ತುಮಕೂರುಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ, ಬಾನುಲಿಯಲ್ಲಿ ಕವನ ವಾಚನ, ಭಾಷಣ ಕಾರ‍್ಯಕ್ರಮ. ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಝೇಂಕಾರ ಕಾರ‍್ಯಕ್ರಮದಲ್ಲಿ ಒಂದು ತಿಂಗಳ ಕಾಲ ಸಂಗೀತದೊಂದಿಗೆ ಕವನ ಪ್ರಸಾರ, ಧಾರವಾಡದ ಆಕಾಶವಾಣಿ ಕೇಂದ್ರದ ಭಾವಸಂಗಮ ಕಾರ‍್ಯಕ್ರಮದಲ್ಲೂ ಕವನ ಪ್ರಸಾರ.
ಹಲವಾರು ಕೃತಿ ರಚನೆ. ‘ಆಫೀಸಿನಲ್ಲಿ ಜಲಜಾಕ್ಷಿ’ ಇವರ ಮೊದಲ ಕವನ ಸಂಕಲನ, ನಂತರ ‘ಮದನೋತ್ಸವ’, ‘ನವದೀಪ್ತಿ’, ‘ಸ್ನೇಹಾ’ ಮುಂತಾದ ಹನಿಗವನ, ಕವನ ಸಂಕಲನ ಪ್ರಕಟಿತ. ಸಂಪಾದಿತ ಕೃತಿಗಳು-ಸಿ.ವಿ. ಕೆರಿಮನಿಯವರೊಡನೆ ಗದಗ ಜಿಲ್ಲೆಯ ಕಲಾವಿದರು ಮತ್ತು ಗದಗ ಜಿಲ್ಲೆಯ ಬರಹಗಾರರು.
ಸಂದ ಗೌರವ ಹುದ್ದೆ, ಪ್ರಶಸ್ತಿಗಳು. ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ, ಮುಕ್ತಕ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ, ಸನ್ಮಾನ. ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಹೊಣೆ. ಕಬ್ಬಿಗರ ಕೂಟದ ಸಂಸ್ಥಾಪಕ ಕಾರ‍್ಯದರ್ಶಿ, ಗದಗ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿ. ೨೦೦೪ರಲ್ಲಿ ನಡೆದ ಗದಗ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.