ಡಾ. ಸರ್ವಮಂಗಳಾ ಶಂಕರ್ (೩೧.೦೩.೧೯೫೪): ಕದಳಿ ಶ್ರೀ ಪ್ರಶಸ್ತಿ ಪುರಸ್ಕೃರಾದ ಸರ್ವಮಂಗಳಾ ಶಂಕರ್ ರವರು ಹುಟ್ಟಿದ್ದು ಶ್ರೀರಂಗಪಟ್ಟಣ. ತಂದೆ ಎಸ್.ಸಿ. ರಾಜಶೇಖರ್, ತಾಯಿ ಪಾರ್ವತಮ್ಮ. ಬಾಲ್ಯದಿಂದಲೂ ಸಂಗೀತದತ್ತ ಒಲವು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. (ಮ್ಯೂಸಿಕ್). ‘ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ’- ಎಂ.ಫಿಲ್ ಮಹಾ ಪ್ರಬಂಧ ಮತ್ತು ‘ಸ್ವರ ವಚನಗಳು : ಒಂದು ಸಂಗೀತಾತ್ಮಕ ಅಧ್ಯಯನ’ ಮಹಾ ಪ್ರಬಂಧಕ್ಕೆ ದೊರೆತ ಪಿಎಚ್.ಡಿ. ಪದವಿ.
ಸಂಗೀತದ ಉನ್ನತ ಶಿಕ್ಷಣ ಪಡೆದದ್ದು ಎಂ. ಶೇಖಗಿರಿ ಆಚಾರ್, ಆನೂರು ಎಸ್. ರಾಮಕೃಷ್ಣ, ಬಿ. ಕೃಷ್ಣಪ್ಪ, ಆರ್.ಕೆ. ಶ್ರೀಕಂಠನ್ ರವರಿಂದ. ಪ್ರಸ್ತುತ ಬೆಂಗಳೂರು ಮಹಾರಾಣಿ ಕಲಾ ಕಾಲೇಜಿನಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸಲ್ಲಿಸುತ್ತಿರುವ ಸೇವೆ. ಅವಳಿಮಕ್ಕಳಾದ ರಮ್ಯಶಂಕರ್ ಮತ್ತು ರಶ್ಮಿ ಶಂಕರ್ ಸಂಗೀತ, ನೃತ್ಯ ಕ್ಷೇತ್ರದಲ್ಲಿ ಪರಿಣತರು.
ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಕಚೇರಿಗಳಲ್ಲಿ ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತ, ವಚನ ಸಂಗೀತ, ಭಕ್ತಿ ಸಂಗೀತ, ಸುಗಮ ಸಂಗೀತದ ನೂರಾರು ಕಚೇರಿಗಳು. ಆಕಾಶವಾಣಿ ‘ಬಿ ಹೈ’ ಕಲಾವಿದೆ. ಇವರು ರಚಿಸಿದ ನಿರ್ದೇಶಿದ ಹಲವು ಸಂಗೀತ ರೂಪಕಗಳು ಆಕಾಶವಾಣಿಯಿಂದ ಪ್ರಸಾರ. ದೂರದರ್ಶನದಲ್ಲೂ ಕಾರ್ಯಕ್ರಮ ಪ್ರಸಾರ. ನಾಡಿನ ಪ್ರಮುಖ ಸಭೆ ಸಮಾರಂಭಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಉಪನ್ಯಾಸ, ಪ್ರದರ್ಶನ ಭಾಷಣಗಳು.
ಪತಿ ಶಂಕರ್ ಪಟೇಲರು ಸ್ಥಾಪಿಸಿರುವ ‘ರಮ್ಯ ಸಂಸ್ಥೆ’ಯ ಸಾಂಸ್ಕೃತಿಕ ಕೇಂದ್ರದ ಮುಖ್ಯಸ್ಥರಾಗಿ ಹಿರಿಯ, ಕಿರಿಯ ಸಂಗೀತ ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹ, ಸನ್ಮಾನ ಕಾರ್ಯಕ್ರಮಗಳು, ರಾಯಚೂರು, ಗುಲಬರ್ಗಾ, ಬಿಜಾಪುರ, ಭದ್ರಾವತಿಗಳಲ್ಲದೆ ಇಂಗ್ಲೆಂಡಿನ ಬರ್ಮಿಂಗ್ ಹ್ಯಾಂ, ಲೀಡ್ಸ್, ನ್ಯೂ ಕಾಸೆಲ್ಸ್, ಆಕ್ಸ್‌ಫರ್ಡ್, ವೇಕ್ ಫೀಲ್ಡ್ ಮುಂತಾದೆಡೆ ಗಾಯನ ಕಚೇರಿ, ಭಾಷಣ ಕಾರ್ಯಕ್ರಮ.
ಸಂದ ಪ್ರಶಸ್ತಿ ಗೌರವಗಳು. ನಿಡುಮಾಮಿಡಿ ಕ್ಷೇತ್ರದಿಂದ ‘ಗಾನಗಂಗಾ’, ಹೊನ್ನಪ್ಪ ಶಾಂತಿ ಪ್ರತಿಷ್ಠಾನದಿಂದ ‘ಗಾನ ಸರಸ್ವತಿ’, ಸುತ್ತೂರು ಸಂಸ್ಥಾನ ಮಠದ ‘ಕದಳಿಶ್ರೀ’, ಆದಿಚುಂಚನಗಿರಿ ಮಠ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಶ್ರೀ ಸಿದ್ಧಗಂಗಾ ಕ್ಷೇತ್ರ, ಸ್ನೇಹ ಟ್ರಸ್ಟ್, ಶ್ರೀ ಉಮಾದೇವಿ ಸ್ತ್ರೀ ಸಮಾಜ, ಕನ್ನಡ ಸಾಹಿತ್ಯ ಪರಿಷತ್ತು-ಶಿವಮೊಗ್ಗ, ಕುವೆಂಪು ಶತಮಾನೋತ್ಸವ ಸಮಿತಿ ಮುಂತಾದ ಸಂಸ್ಥೆಗಳಿಂದ ದೊರೆತ ಗೌರವ ಸನ್ಮಾನಗಳು.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.