ಭಾಷಾ ವಿಜ್ಞಾನ ಕ್ಷೇತ್ರದ ವಿದ್ವನ್ಮಣಿಗಳಾದ ಸಂಗಮೇಶ ಸವದತ್ತಿ ಮಠರವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುರಗೋಡು ಗ್ರಾಮದಲ್ಲಿ. ತಂದೆ ದಂಡಯ್ಯ, ತಾಯಿ ಪಾರ್ವತಿ. ಪ್ರಾಥಮಿಕ ವಿದ್ಯಾಭ್ಯಾಸ ಸಂಕೇಶ್ವರ, ರಾಯಭಾಗ, ಮುಂಡರಗಿಯಲ್ಲಿ, ಕಾಲೇಜಿಗೆ ಸೇರಿದ್ದು ಗದಗದ ಜೆ.ಟಿ. ಕಾಲೇಜು, ಬಿ.ಎ. ಪದವಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಮತ್ತು ಭಾಷಾ ವಿಜ್ಞಾನ ಪದವಿ. HARIHARA’S RAGALES-A LINGUISTIC ANALYSISಗೆ ಪಡೆದ ಪಿಎಚ್.ಡಿ. ಪದವಿ.
ನಂತರ ಉದ್ಯೋಗಕ್ಕೆ ಸೇರಿದ್ದು ಕೊಪ್ಪಳದ ಗವಿ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ೧೯೬೫-೬೮ರವರೆಗೆ. ನರಗುಂದದ ಮುನಿಸಿಪಲ್ ಡಿಗ್ರಿ ಕಾಲೇಜಿನಲ್ಲಿ ೧೯೭೦-೭೨ರವರೆಗೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ೧೯೭೨-೮೦ ಮತ್ತು ಗುಲಬರ್ಗದ ವಿಶ್ವವಿದ್ಯಾಲಯದಲ್ಲಿ ೧೯೮೫-೨೦೦೩ರವರೆಗೆ ಅಧ್ಯಾಪಕ, ಪ್ರವಾಚಕ, ಪ್ರಾಧ್ಯಾಪಕ ಹೀಗೆ ವಿವಿಧ ಹುದ್ದೆಗಳಲ್ಲಿ ಸೇವೆ. ಪ್ರೊಫೆಸರ್ ಎಮರಿಟಸ್ ಎಂದು ಆಯ್ಕೆ.
ಪ್ರಮುಖ ಆಸಕ್ತಿಯ ಕ್ಷೇತ್ರ ಭಾಷಾ ವಿಜ್ಞಾನ ಮತ್ತು ಸಂಶೋಧನೆ. ಬಡವಾಗುತ್ತಿರುವ ಭಾಷಾ ವಿಜ್ಞಾನ ಕ್ಷೇತ್ರ ಬೆಳೆಸಲು ಪಟ್ಟ ಶ್ರಮ. ಇವರ ಮಾರ್ಗದರ್ಶನದಲ್ಲಿ ಹತ್ತು ಮಂದಿ ಪಡೆದ ಯಶಸ್ವಿ ಪಿಎಚ್.ಡಿ ಪದವಿ. ಸುಮಾರು ೧೫ ವಿದ್ಯಾರ್ಥಿಗಳು ಎಂ.ಫಿಲ್. ಪದವಿ. ಮಲೇಶಿಯಾದ ಕೌಲಾಲಂಪುರದಲ್ಲಿ ನಡೆದ ರಾಮಾಯಣ ಮಹಾಭಾರತ ಕುರಿತ ಜಾಗತಿಕ ಸಮ್ಮೇಳದಲ್ಲಿ ಕನ್ನಡದ ಏಕೈಕ ಪ್ರತಿನಿಯಾಗಿ ಭಾಗವಹಿಸಿದ ಹೆಗ್ಗಳಿಕೆ. ಕಳೆದ ೧೭ ವರ್ಷಗಳಿಂದಲೂ ಸಂಶೋಧನಾ ವ್ಯಾಸಂಗ ಪತ್ರಿಕೆಯ ಸಂಪಾದಕರು.
ರಚಿಸಿದ ಕೃತಿಗಳು ಹಲವಾರು. ಭಾಷಾ ವಿಜ್ಞಾನಕ್ಕೆ ಸಂಬಂಸಿದಂತೆ-೧೫ ; ಸಂಶೋಧನಾ ಕೃತಿಗಳು-೭ ; ಸಂಪಾದಿತ ಕೃತಿಗಳು-೧೩ ; ಜನಪದ ಕೃತಿಗಳು-೪ ; ಸೃಜನ, ವಿಮರ್ಶೆ, ವ್ಯಕ್ತಿಚಿತ್ರ-೧೫ ಕೃತಿ ; ಒಟ್ಟು ೬೫ಕ್ಕೂ ಮಿಕ್ಕು ಕೃತಿ ರಚನೆ.
ಸಂದ ಗೌರವ ಪ್ರಶಸ್ತಿಗಳು-ರಾಜ್ಯ ಜಾನಪದ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿ, ಮಹಾಂತ ಕ್ಷೇತ್ರ ಪ್ರಶಸ್ತಿ, ಕನ್ನಡ ಸಂಸ್ಕೃತಿ ಇಲಾಖೆಯ ಪುರಸ್ಕಾರ, ಜಾನಪದ ಅಕಾಡಮಿ ಪುರಸ್ಕಾರ, ಗುಲಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ, ಮೂರು ಸಾವಿರ ಮಠ ಪ್ರಶಸ್ತಿ, ಶಂಬಾ ಜೋಶಿ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು. ಇವರಿಗೆ ಅರ್ಪಿಸಿದ ಷಷ್ಟಬ್ದಿ ಅಭಿನಂದನ ಗ್ರಂಥ ‘ಭಾಷಾ ಸಂಗಮ.’
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.