ಡಾ. ಶ್ರೀಕೃಷ್ಣಭಟ್ ಅರ್ತಿಕಜೆ (೧೯-೪-೧೯೪೫): ಸಾಹಿತ್ಯ, ಸಂಗೀತ, ಯಕ್ಷಗಾನ, ಸಂಶೋಧನೆ ಇವೆಲ್ಲದರಲ್ಲೂ ಪ್ರಾವೀಣ್ಯತೆ ಪಡೆದಿರುವ ಶ್ರೀಕೃಷ್ಣಭಟ್‌ರವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪಡುವನ್ನೂರು ಅರ್ತಿಕಜೆ ಮನೆಯಲ್ಲಿ. ತಂದೆ ಶ್ಯಾಮಭಟ್, ತಾಯಿ ಸಾವಿತ್ರಿ ಅಮ್ಮ. ಪುತ್ತೂರು, ಎಡನೀರು, ಕಾಸರ ಗೋಡಿನಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಓದು. ಪಿ.ಯು.ಗೆ ಸೇರಿದ್ದು ಸೇಂಟ್ ಫಿಲೋಮಿನಾ ಕಾಲೇಜು ಪುತ್ತೂರು,
ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಬಿ.ಎ. (೧೯೬೯) ಪದವಿ. ಪ್ರಥಮರ‍್ಯಾಂಕ್, ೧೯೭೧ರಲ್ಲಿ ಎಂ.ಎ. ಪ್ರಥಮ ರ‍್ಯಾಂಕ್ ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ, ಮದರಾಸು ವಿಶ್ವವಿದ್ಯಾಲಯದಲ್ಲಿ “ಕನ್ನಡದಲ್ಲಿ ಶಾಸನ ಸಾಹಿತ್ಯ” ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ.
ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ (೧೯೭೧-೭೫) ; ೧೯೭೫-೮೩ರವರೆಗೆ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ, ರೀಡರ್, ಪ್ರಾಧ್ಯಾಪಕ, ಮುಖ್ಯಸ್ಥರಾಗಿ, ಓ.ಆರ್.ಐ. ನಿರ್ದೇಶಕರಾಗಿ, ತಮಿಳು ಹಾಗೂ ದ್ರಾವಿಡ ಭಾಷೆಗಳ ಶಾಖೆಯ ಅಧ್ಯಕ್ಷರಾಗಿ, ೨೦೦೨ರಿಂದ ೨೦೦೫ರವರೆಗೆ ಸೇವೆ ಸಲ್ಲಿಸಿ ಈಗ ನಿವೃತ್ತರು.
ಹಲವಾರು ಕೃತಿಗಳ ರಚನೆ-ಅನುವಾದ ಕಾರ‍್ಯ. ಸಂಪಾದನೆ-ಸೂತಭಾರತ, ಸಹಸ್ರಾರ್ಧ ತುಳು ಗಾದೆಗಳು, ಹವ್ಯಕ ಗಾದೆಗಳು, ಜನಪ್ರಿಯ ತುಳು ಗಾದೆಗಳು, ಹವ್ಯಕ ಭಾಷೆಯ ನುಡಿ ಸಂಸ್ಕೃತಿ, ಪಡೆನುಡಿ ಕೋಶ, ‘ಸಾರ್ಥಕ’, ಪ್ರೊ. ಮರಿಯಪ್ಪ ಭಟ್ಟರ ಸಂಸ್ಮರಣ ಗ್ರಂಥ ಮುಂತಾದುವು. ಅನುವಾದ-ಅಯ್ಯಪ್ಪ ರಾಮರಾಜ ಬಹದ್ದೂರ್, ವಿಷಕನ್ನಿಕೆ (ಮಲೆಯಾಳಂ ಕಾದಂಬರಿ), ಸಮಾಜವಿಜ್ಞಾನಿ ಪೆರಿಯಾರ್, ತಮಿಳು ನಾಡಿನ ಇತಿಹಾಸ. ಸಂಶೋಧನೆ-ಲೇಖನಗಳ ಸಂಗ್ರಹ. ಜೊತೆಗೆ ತಮಿಳು ನಾಡಿನ ಸರಕಾರದ ೧ನೇ ತರಗತಿಯಿಂದ ೧೨ನೇ ತರಗತಿವರೆಗೆ ಕನ್ನಡ ಪಠ್ಯಪುಸ್ತಕಗಳ ರಚನೆ, ಪ್ರಕಟಣೆ, ಅನುವಾದ.
ದೊರೆತ ಸನ್ಮಾನ ಗೌರವಗಳು: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಮೃತೋತ್ಸವ ಸನ್ಮಾನ, ಕಂಚಿ ಕಾಮಕೋಟಿ ಸ್ವಾಮೀಜಿಯವರ ವಜ್ರಮಹೋತ್ಸವ ಸನ್ಮಾನ, ರಾಷ್ಟ್ರೀಯ ಸುವರ್ಣ ಮಹಾನ್ ಶ್ರೀರತ್ನ ಪ್ರಶಸ್ತಿ, ವಿಶಿಷ್ಟ ಹಿಂದಿ ಸೇವಾ ಸಮ್ಮಾನ್ ಪ್ರಶಸ್ತಿ, ಮುನ್ಷಿಪ್ರೇಮ ಚಂದ್ ಸನ್ಮಾನ್, ತಮಿಳುನಾಡು ಉರ್ದು ಅಕಾಡಮಿಯಿಂದ ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ, ಮದರಾಸಿನ ಗಾರ್ಡನ್ ಆಫ್ ವರ್ಲ್ಡ್ ಪೊಯೆಟ್ಸ್ ಸಂಸ್ಥೆಯ ಸನ್ಮಾನ, ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡಮಿ ಪ್ರಶಸ್ತಿ ಮುಂತಾದವುಗಳು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.