Bhujedra Mahishavadi

ಡಾ. ಭುಜೇಂದ್ರ ಮಹಿಷವಾಡಿ

ಡಾ. ಭುಜೇಂದ್ರ ಮಹಿಷವಾಡಿ (೦೩.೦೫.೧೯೨೫ – ೧೫.೦೩.೧೯೮೨): ಕನ್ನಡ ಸಾಹಿತ್ಯದಲ್ಲಿ ಎಲೆಮರೆಯ ಕಾಯಿಯಂತೆಯೇ ಬದುಕಿ, ಕಾವ್ಯಕ್ಷೇತ್ರಕ್ಕೆ ಸತ್ವಯುತ ಕೃತಿಗಳನ್ನು ನೀಡಿದ ಕೃಷ್ಣಾತೀರದ ಅಪ್ಪಟ ಪ್ರತಿಭೆಯ ಭುಜೇಂದ್ರ ಮಹಿಷವಾಡಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮಹಿಷಿವಾಡಿಯಲ್ಲಿ ೧೯೨೫ ರ ಮೇ ೩ರಂದು.

[sociallocker]ಪ್ರಾರಂಭಿಕ ಶಿಕ್ಷಣ ಮಹಿಷವಾಡಿಯಲ್ಲಿ. ಪ್ರೌಢಶಾಲಾ ವಿದ್ಯಾಭ್ಯಾಸ ಅಥಣಿ ಮತ್ತು ಬನಹಟ್ಟಿಯಲ್ಲಿ. ಬೆಳಗಾವಿಯಲ್ಲಿ ಬಿ.ಎ. ಆನರ್ಸ್ ಮತ್ತು ಬಿ.ಎಡ್‌. ಪದವಿಯ ನಂತರ ಸಾಂಗ್ಲಿಯಲ್ಲಿ ಪಡೆದ ಎಂ.ಎ. ಪದವಿ. “ಕವಿಚಕ್ರವರ್ತಿ ಜನ್ನನ ಜೀವನ ಹಾಗೂ ಕೃತಿಗಳು: ವಿವೇಚನೆ” ಎಂಬ ಪ್ರೌಢ ಪ್ರಬಂದ ಮಾಡಿಸಿ ಪಡೆದ ಪಿಹೆಚ್‌.ಡಿ. ಪದವಿ.

ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯಿಂದ ಹಿಡಿದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರವರೆವಿಗೂ ವಿವಿಧ ಮಟ್ಟದ ಬೋಧನೆ.

ಕಾವ್ಯಕ್ಷೇತ್ರವನ್ನು ಪ್ರವೇಶಿಸಿಸಲು ವಿದ್ವಾಂಶರಾದ ರಂ.ಶ್ರೀ. ಮುರಳಿ ಹಾಗೂ ಖ್ಯಾತ ಕಾದಂಬರಿಕಾರರಾದ ಮಿರ್ಜಿ ಅಣ್ಣಾರಾಯರು ಕಾರಣರು.

ಗೊರೂರರಿಗೆ ಹೇಮಾವತಿ, ಕುವೆಂಪುರವರಿಗೆ ಕುಪ್ಪಳಿಯ ಕವಿಶೈಲ ಸಾಹಿತ್ಯ ಪ್ರೇರಣೆಯ ಹಿಂದಿನ ಸ್ಫೂರ್ತಿಯ ಸೆಲೆಯಾಗಿರುವಂತೆ ಭುಜಂಗಮಹಿಷಿವಾಡಿಯವರಿಗೆ ಕೃಷ್ಣೆಯ ತಟವು ಕಾವ್ಯ ಸ್ಫೂರ್ತಿಯ ತಾಣವಾಗಿ, ಕಾವ್ಯ ತ್ರಾಣ-ಪ್ರಾಣವಾಗಿ, ಎಲ್ಲ ಕವನಗಳಲ್ಲಿಯೂ ಒಂದಿಲ್ಲೊಂದು ರೀತಿ ಕೃಷ್ಣೆ ಹರಿದಾಡಿದ್ದಾಳೆ. ಅನುಭವಿಸಿ ಬರೆದಷ್ಟೂ ಜೀವನ ಸಾರ್ಥಕ್ಯ ಕಂಡಿದ್ದಾರೆ. ಇವರಿಗೆ ಕೃಷ್ಣೆ ಒಂದು ನದಿಯಾಗಿರದೆ ಕಾವ್ಯದ ಸೆಲೆಯಾಗಿ ಹರಡಿದ್ದಾಳೆ.

ಭುವಿಯ ತಲೆ ಹೆಳಲಿನೆಳೆ
ಇದುವೆ ಹೊಳೆ ನೋಡು ಕೃಷ್ಣೆ

ಎಂದು ಭೂತಾಯಿಯ ತಲೆಗೂದಲೇ ಎಳೆಎಳೆಯಾಗಿ ಕೃಷ್ಣೆಯಾಗಿ ಹರಿದು ಬಂದಿದ್ದಾಳೆಂದು ವರ್ಣಿಸುವ ಕವಿಗೆ ಕೃಷ್ಣೆಯ ಬಗ್ಗೆ ಇರುವ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ.

೧೯೫೦ ಕ್ಕಿಂತ ಹಿಂದೆಯೇ ಕಾವ್ಯ ಕೃಷಿಯನ್ನು ಪ್ರಾರಂಭಿಸಿದ ಮಹಿಷಿವಾಡಿಯವರು ಮಾಯಾಮಂದಿರ (೧೯೫೦), ಹಾಲು ಹಣ್ಣು (೧೯೫೪), ಕಟ್ಟುವ ಕೈ (೧೯೫೮), ಹಂಸಮಿಥುನ (೧೯೬೭), ಬೆರಕೀಮಂದಿ (೧೯೭೮) ಮುಂತಾದ ಕವನ ಸಂಕಲನಗಳನ್ನೂ ಮಿತ್ರರಾದ ಬಿ.ಎ. ಸನದಿ, ಬ.ಗಿ. ಯಲ್ಲಟ್ಟಿ, ಬಾಳು ಉಪಾಧ್ಯೆ, ಶ್ರೀಕಾಂತ ಖೋತ ಮುಂತಾದವರೊಡನೆ ಸೇರಿ ‘ಸ್ನೇಹ ಪ್ರಕಾಶನ’ದಡಿ ಹೊರತಂದರು.

೧೯೭೨ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ ಸೇರ್ಪಡೆಯಾದ ನಂತರ ಸಂಶೋಧನೆ, ವಿಮರ್ಶೆ, ಸಂಪಾದನೆಯತ್ತ ತೊಡಗಿ ಹನ್ನೊಂದು ಕೃತಿಗಳನ್ನೂ ಸಂಪಾದಿಸಿದ್ದಲ್ಲದೆ ವಿಮರ್ಶೆ, ಪ್ರಬಂಧ, ಸಂಶೋಧನೆಯ ಎಂಟು ಕೃತಿಗಳನ್ನು ಪ್ರಕಟಿಸಿದರು. ಇದಲ್ಲದೆ ಚರಿತ್ರೆ ಗ್ರಂಥಗಳು-೩, ಸಂಸ್ಮರಣ ಕೃತಿಗಳು-೨, ನಾಟಕಗಳು-೪ (ಅಪ್ರಕಟಿತ), ಜಾನಪದ ವೀರಲಾವಣಿ-೧ (ಅಪ್ರಕಟಿತ) ಮತ್ತು ಸುಮಾರು ೧೪೦ ಬಿಡಿಲೇಖನಗಳನ್ನು ಸಾಂದರ್ಭಿಕವಾಗಿ ಬರೆದಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂಬ ಚಲನಚಿತ್ರ (೧೯೬೭) ಮೊದಲಸಲ ಕೊಲ್ಲಾಪುರದ ಚಿತ್ರಪ್ರೇಮಿಗಳು ತಯಾರಿಸಿದಾಗ, ಅವರ ಆಹ್ವಾನವನ್ನು ಮನ್ನಿಸಿ ಆ ಚಿತ್ರಕ್ಕೆ ಸಂಭಾಷಣೆ ಹಾಗೂ ಗೀತೆಗಳನ್ನೂ ಬರೆದಿದ್ದು, ಆ ಗೀತೆಗಳಲ್ಲಿ ‘ಬೆಳ್ಳನ್ನ ಬೆಳಗಾಯಿತು…..” ಚಿತ್ರಗೀತೆಯನ್ನು ಲತಾಮಂಗೇಶ್ಕ್‌ರವರು ಹಾಡಿದ್ದು ಒಂದು ಕಾಲದಲ್ಲಿ ಕನ್ನಡಿಗರ ಮನಸೂರೆಗೊಂಡ ಹಾಡಾಗಿತ್ತು.

ಭುಜೇಂದ್ರ ಮಹಿಷವಾಡಿಯವರ ಕಾವ್ಯದ ಬಗ್ಗೆ ಮಹಾಪ್ರಬಂಧ ಮಂಡಿಸಿ (೧೯೯೮) ಡಾಕ್ಟರೇಟ್‌ ಪಡೆದಿರುವ ಪಿ.ಜಿ. ಕೆಂಪಣ್ಣವರ ಅವರು ಸಂಪಾದಕರಾಗಿ, ಮಹಿಷವಾಡಿಯವರು ತಮ್ಮ ಜೀವಿತಾವಧಿಯಲ್ಲಿಯೇ ಬರೆದಿಟ್ಟಿದ್ದ ‘ಸೀತೆನೆ ಸುಲಿಗಾಯಿ’, ‘ಬೋರಂಗಿ’ (ಶಿಶುಗೀತೆಗಳ ಸಂಕಲನ), ‘ಛಾಯ ಚಂದ್ರನಾಥನ ವಚನ ಚಂದ್ರಿಕೆ’ ಹಾಗೂ ‘ಸಡಿಲಪ್ಪನ ಹಾವಳಿ’ ಎಂಬ ನವ್ಯ ಧಾಟಿಯ ದೀರ್ಘ ಕವನಗಳ ಅಪ್ರಕಟಿತ ಮತ್ತು ಪ್ರಕಟಿತ ಕವನಗಳನ್ನೆಲ್ಲಾ ಸೇರಿಸಿ ‘ಕೃಷ್ಣಾ ತೊರೆ’ ಎಂಬ ಹೆಸರಿನಿಂದ ಸಮಗ್ರ ಕಾವ್ಯವನ್ನು ೨೦೦೬ರಲ್ಲಿ ಹೊರತಂದಿದ್ದಾರೆ. (ಪ್ರಕಾಶನ-ಕನ್ನಡ ಜಾಗೃತಿ ಪುಸ್ತಕಮಾಲೆ, ಅಲ್ಲಮ ಪ್ರಭು ಜನ ಕಲ್ಯಾಣ ಸಂಸ್ಥೆ, ಸಿದ್ಧ ಸಂಸ್ಥಾನ ಮಠ, ಚಿಂಚಣಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲಾ)

ತಮ್ಮ ಕಾವ್ಯದ ಸ್ಫೂರ್ತಿ ಕೃಷ್ಣೆಯನ್ನೇ ನೆನೆದು ರಚಿಸಿದ ಸುಲಲಿತ, ಗಂಭೀರ ಕಾವ್ಯ ಕುರಿತು ಸಂಶೋಧನೆ, ವಿಚಾರ ಸಂಕಿರಣಗಳಾಗಲೀ, ಪುರಸ್ಕರಗಳಾಗಲೀ ದೊರೆಯದೆ ಹೋದರೂ ‘ಕೃಷ್ಣಾ ತೊರೆ’ ಸಾಹಿತ್ಯ ಲೋಕದ ಮುಪ್ಪರಿಯದ ಕೃತಿ ನೀಡಿದ ಮಹಿಷವಾಡಿಯವರು ನಿಧನರಾದದ್ದು ೧೯೮೨ ಮಾರ್ಚ್ ೧೫ ರಂದು.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ[/sociallocker]

 

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *