ಡಾ. ಬಿ.ಪಿ. ರಾಧಾಕೃಷ್ಣ (೩೦.೦೪.೧೯೧೮ – ೨೬.೦೧.೨೦೧೨): ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಸಾಹಿತಿಗಳಷ್ಟೇ ಅಲ್ಲದೆ ವೈದ್ಯಕೀಯ, ವಿಜ್ಞಾನ ಕ್ಷೇತ್ರಗಳಲ್ಲಿ ದುಡಿದವರ ಪಾಲೂ ಸಾಕಷ್ಟಿದೆ. ಹೀಗೆ ಅಂತಾರಾಷ್ಟ್ರೀಯ ಭೂವಿಜ್ಞಾನಿಯಾಗಿದ್ದ, ಕರ್ನಾಟಕದಲ್ಲಿನ ಖನಿಜ ನಿಕ್ಷೇಪಗಳನ್ನು ಗುರುತಿಸಿದ್ದಲ್ಲದೆ ಜಲಸಂಪತ್ತನ್ನು ಪರಿಣಾಮಕಾರಿಯಾಗಿ ಗ್ರಾಮೀಣ ಜನತೆಗೂ ಒದಗಿಸಲು ಯೋಜನೆಗಳನ್ನು ಕೈಗೊಂಡು ಕರ್ನಾಟಕದ ಏಳಿಗೆಗಾಗಿ ದುಡಿದ ರಾಧಾಕೃಷ್ಣರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬಿ.ಪುಟ್ಟಯ್ಯ, ತಾಯಿ ವೆಂಕಮ್ಮ.
[sociallocker]
ರಾಧಾಕೃಷ್ಣರ ವಿದ್ಯಾಭ್ಯಾಸವೆಲ್ಲ ನಡೆದುದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಿಂದ ಭೂವಿಜ್ಞಾನದ ಪದವಿಯನ್ನು (ಬಿ.ಎಸ್ಸಿ.ಆನರ್ಸ್) ೧೯೩೭ರಲ್ಲಿ ಪಡೆದು ಮೈಸೂರು ಸಂಸ್ಥಾನದ ಭೂವಿಜ್ಞಾನ ಇಲಾಖೆಗೆ ಕ್ಷೇತ್ರ ಸಹಾಯಕರಾಗಿ ಸೇರಿ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿರ್ದೇಶಕರಾಗಿ ನಿವೃತ್ತರಾದರು. ತಾವು ಸೇರಿದಾಗ ಬೆರಳೆಣಿಕಯಷ್ಟು ಸಿಬ್ಬಂದಿ ಇದ್ದ ಇಲಾಖೆಯು ಬೃಹತ್ತಾಗಿ ಬೆಳೆಯಲು ಕಾರಣರಾದರು.
ರಾಮನಗರದ ಕಲ್ಲುಬಂಡೆಗಳ ಬಗ್ಗೆ ವಿಶೇಷಾಧ್ಯಯನ ಕೈಗೊಂಡು ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ೧೯೫೪ರಲ್ಲಿ ಡಾಕ್ಟರೇಟ್ ಪಡೆದರು.
ಸತ್ಯವನ್ನು ಹೇಳುವಾಗ ಯಾವ ಮುಲಾಜಿಗೂ ಒಳಗಾಗದ, ನೇರನುಡಿಯ, ನಿಷ್ಠುರ ವರ್ತನೆಯ, ಸಮಯ ಪ್ರಜ್ಞೆಯ ಖಂಡಿತವಾದಿಯಾಗಿ ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವದ ಅಪರೂಪದ ವ್ಯಕ್ತಿಯಾಗಿದ್ದರು.
ಕರ್ನಾಟಕದ ಶಿಲೆಗಳ ಬಗ್ಗೆ ವಿಶೇಷಾಧ್ಯಯನ ಮಾಡಿದಂತೆ ಭೂಮಿಯ ಒಡಲಲ್ಲಿರುವ ಖನಿಜ ನಿಕ್ಷೇಪವನ್ನು ಗುರುತಿಸಿ, ಕರ್ನಾಟಕದ ಅಭ್ಯುದಯಕ್ಕೆ ಬಳಸಿಕೊಳ್ಳುವಂತಹ ಯೋಜನೆಗಳನ್ನು ಸಿದ್ಧಪಡಿಸಿಕೊಟ್ಟರು.
ಜಲಸಂಪನ್ಮೂಲಗಳನ್ನು ಬಳಸಿಕೊಳ್ಳುವಲ್ಲಿಯೂ ವಿಶೇಷ ಕಾರ‍್ಯವನ್ನು ಕೈಗೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಗ್ರಾಮೀಣ ಜನರಿಗೆ ಕುಡಿಯುವ ನೀರೊದಗಿಸಲು ಯೋಜನೆಯನ್ನು ರೂಪಿಸಿದಾಗ ಅಂದಿನ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿದ್ದ ನಜೀರ್ ಸಾಬ್‌ರವರು ಕಾರ‍್ಯಗತಗೊಳಿಸಿ ‘ನೀರ್ ಸಾಬ್’ ಎಂದೇ ಹೆಸರುಗಳಿಸಿದರು.
ಜಲ ಹಾಗೂ ಖನಿಜಕ್ಕೆ ಸಂಬಂಧಿಸಿದಂತೆ ನೂರಾರು ಲೇಖನಗಳನ್ನು ಕಾಲಕಾಲಕ್ಕೆ ಬರೆದಿದ್ದು ಅವೆಲ್ಲವೂ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡು ದೇಶ – ವಿದೇಶಗಳ ವಿಜ್ಞಾನಿಗಳ ಗಮನ ಸೆಳೆದಿದ್ದರು. ಭಾರತೀಯ ಭೂ ವಿಜ್ಞಾನಿಗಳ ಸಂಘದ ಸ್ಥಾಪಕ ಕಾರ‍್ಯದರ್ಶಿಯಾಗಿ, ಅಧ್ಯಕ್ಷರಾಗಿ ದುಡಿದರಲ್ಲದೆ ‘ಜರ್ನಲ್ ಆಫ್ ಬಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ’ ಪತ್ರಿಕೆಯ ಸಂಪಾದಕರಾಗಿಯೂ ದುಡಿದರು.
ಭೂ ವಿಜ್ಞಾನಿಯಾಗಿ ಮಾತ್ರವಲ್ಲದೆ ಲೇಖಕರಾಗಿಯೂ ರಾದಾಕೃಷ್ಣರವರ ಕೊಡುಗೆ ಅಪಾರ. ಸಾಹಿತ್ಯದಲ್ಲಿ ಆಸಕ್ತಿ ಬೆಳೆದುದು ಇವರ ತಂದೆ ಬಿ. ಪುಟ್ಟಯ್ಯನವರಿಂದ. ಪುಟ್ಟಯ್ಯನವರು ಬಿ.ಎಂ.ಶ್ರೀ ಯವರ ಒಡನಾಡಿ. ಪುಟ್ಟಯ್ಯನವರು ಇಂಗ್ಲೆಂಡಿಗೆ ತೆರಳಿ ಮುದ್ರಣ ಕಲೆಯಲ್ಲಿ ಪರಿಣತಿ ಪಡೆದು ಬಂದಿದ್ದು, ತಮ್ಮ ಅನುಭವವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಚ್ಚುಕೂಟ ಸ್ಥಾಪಿಸುವಲ್ಲಿ ನೆರವಾದುದಲ್ಲದೆ ಅದರ ಮೇಲ್ವಿಚಾರಕರಾಗಿಯೂ ಕಾರ‍್ಯನಿರ್ವಹಿಸಿದರು.
ಇಂಪಾಗಿ ಹಾಡುತ್ತಿದ್ದ ತಾಯಿಯ ಬಾಯಿಂದ ಕೇಳುತ್ತಿದ್ದ ದಾಸರ ಪದಗಳು, ಪ್ರತಿ ಶನಿವಾರ ಹಜಾರದಲ್ಲಿ ಎಲ್ಲರೂ ಸೇರಿದಾಗ ಬಂಕಿಂಚಂದ್ರರ ಕಾದಂಬರಿಗಳ ಅನುವಾದವನ್ನು ಬಿ.ವೆಂಕಟಾಚಾರ‍್ಯರು ಮಾಡಿದ್ದು, ಇವನ್ಜು ಸೋದರತ್ತೆಯು ಓದುತ್ತಿದ್ದಾಗ ಎಲ್ಲರೂ ನಿಶ್ಯಬ್ಧರಾಗಿ ಕುಳಿತು ಕೇಳುತ್ತಿದ್ದರು. ಹೀಗೆ ಚಿಕ್ಕವಯಸ್ಸಿನಲ್ಲಿಯೇ ವಿಷವೃಕ್ಷ, ಆನಂದಮಠ, ದುರ್ಗೇಶ ನಂದಿನಿ, ನವಾಬ ನಂದಿನಿ, ಮಾಧವಿಲತಾ, ಚಂದ್ರಶೇಖರ, ಅಮೃತ ಪುಲಿನ, ಸೀತಾರಾಮ ಮುಂತಾದ ಕಾದಂಬರಿಗಳ ಪರಿಚಯವಾಗಿತ್ತು. ಹೀಗೆ ತಂದೆ ತಾಯಿಯರಿಂದ ಕನ್ನಡ ಸಾಹಿತ್ಯದ ಬಗ್ಗೆ ಒಲವನ್ನು ಬೆಳಸಿಕೊಂಡಿದ್ದರು.
ಎಳವೆಯಿಂದಲೇ ರೂಢಿಸಿಕೊಂಡ ಸಾಹಿತ್ಯಾಭಿಮಾನದಿಂದ ‘ಡಾ. ಸಿ.ವಿ. ರಾಮನ್’, ‘ರಾಮಾನುಜಂ’ ‘ಬಿ.ಜಿ.ಎಲ್.ಸ್ವಾಮಿ’, ‘ಡಾರ್ವಿನ್’ ‘ಸಾರ್ಥಕ ಬದಕು’ (ವಿ.ಸೀ. ಯವರ ಜೀವನ, ಸಾಹಿತ್ಯ ಮತ್ತು ಸಾಧನೆ) ಮುಂತಾದವರುಗಳ ಬಗ್ಗೆ ಕೃತಿ ರಚಿಸಿದ್ದಲ್ಲದೆ ಅಂತರ್ಜಲ (ಇತರರೊಡನೆ) ಮತ್ತು ಲೋಹವಿದ್ಯೆ ಎಂಬ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಮಿನರಲ್ ರಿಸೋರ್ಸಸ್ ಆಫ್ ಕರ್ನಾಟಕ ಇಂಗ್ಲಿಷಿನಲ್ಲಿ ರಚಿಸಿರುವ ಅತ್ಯಂತ ಮಹತ್ವದ ಕೃತಿ. ಇವರ ಮತ್ತೊಂದು ಪ್ರಮುಖ ಕೃತಿಯೆಂದರೆ ತಮ್ಮ ತಂದೆಯವರಾದ ಬಿ. ಪುಟ್ಟಯ್ಯನವರನ್ನು ಕುರಿತು ಬರೆದ ಗ್ರಂಥ ‘ನನ್ನ ತಂದೆ’ ೧೯೪೯ರಲ್ಲಿ ಪ್ರಕಟವಾಗಿದ್ದು ಇದಕ್ಕೆ ಡಿ.ವಿ.ಜಿ. ಯವರು ದೀರ್ಘ ಮುನ್ನುಡಿ ಬರೆದಿದ್ದಾರೆ.
ರಾಧಾಕೃಷ್ಣರ ಭೂವಿಜ್ಞಾನ ಕುರಿತ ಸಾಧನೆಗಳಿಗೆ ಸಂದ ಪುರಸ್ಕಾರಗಳು ಹಲವಾರು. ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೭೪), ಭಾರತ ಸರಕಾರದ ‘ಪದ್ಮಶ್ರೀ’ (೧೯೯೧) ಮತ್ತು ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‌ನಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ (೧೯೯೨) ನೀಡಿ ಗೌರವಿಸಿದೆ.
ಸಾಹಿತ್ಯ ಸೇವೆಗಾಗಿ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ವಿಶ್ವ ಮಾನವ ಪ್ರಶಸ್ತಿ, ಡಾ.ಸಿ.ವಿ. ರಾಮನ್ ಮತ್ತು ಡಾರ್ವಿನ್ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಎರಡು ಬಾರಿ ಪುರಸ್ಕೃತರಾಗಿದ್ದಾರೆ. ೯೦ರ ಹರೆಯದಲ್ಲಿಯೂ ಸಾಹಿತ್ಯದ ಬಗ್ಗೆ ಒಲವು ಉಳಿಸಿಕೊಂಡಿದ್ದು ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಕನ್ನಡಕ್ಕೆ ತರಬೇಕೆಂಬ ಹಂಬಲದಿಂದಿದ್ದು ರಾಧಾಕೃಷ್ಣರವರು ಸಾಹಿತ್ಯ ಹಾಗೂ ಭೂವಿಜ್ಞಾನ ಕ್ಷೇತ್ರದಿಂದ ನಿರ್ಗಮಿಸಿದ್ದು ೨೦೧೨ರ ಜನವರಿಯ ಗಣರಾಜ್ಯೋತ್ಸವದಂದು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.