Chennanna Valikar

ಡಾ. ಚೆನ್ನಣ್ಣ ವಾಲೀಕಾರ

ಡಾ. ಚೆನ್ನಣ್ಣ ವಾಲೀಕಾರ (೬-೪-೧೯೪೩): ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಶಂಕರವಾಡ ಗ್ರಾಮದಲ್ಲಿ ಕುಸ್ತಿ, ಹಾಡುಗಾರಿಕೆ, ಬಯಲಾಟದ ಒಕ್ಕಲು ಮನೆತನದಲ್ಲಿ ಹುಟ್ಟಿದವರು ಚೆನ್ನಣ್ಣ ವಾಲೀಕಾರರು. ತಂದೆ ಧೂಳಪ್ಪ ವಾಲೀಕಾರ, ತಾಯಿ ಸಾಬಮ್ಮ. ಪ್ರೌಢಶಿಕ್ಷಣದವರೆಗೆ ಶಹಬಾದ, ಗುಲಬರ್ಗಾ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸ್ನಾತಕೋತ್ತರ ಶಿಕ್ಷಣ ಮತ್ತು ‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’ ಪ್ರಬಂಧ ಮಂಡಿಸಿ ಗಳಿಸಿದ್ದು ಪಿಎಚ್.ಡಿ ಪದವಿ.

ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಪ್ರೌಢಶಾಲಾ ಶಿಕ್ಷಕರಾಗಿ ೧೯೬೫-೬೯ರವರೆಗೆ ; ರಾಯಚೂರಿನ ಕಾಲೇಜು ಉಪನ್ಯಾಸಕರಾಗಿ ೧೯೭೧-೭೮ರವರೆಗೆ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ೧೯೮೭-೨೦೦೩ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ.

ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾಗ ನಿಭಾಯಿಸಿದ ಜವಾಬ್ದಾರಿಗಳು ಹಲವಾರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ, ಅಕೆಡಮಿಕ್ ಕೌನ್ಸಿಲ್ ಸದಸ್ಯರಾಗಿ, ಸೆನೆಟ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ, ವಿದ್ಯಾರ್ಥಿ ಕಲ್ಯಾಣಾಕಾರಿಯಾಗಿ, ರಾಷ್ಟ್ರೀಯ ಸೇವಾ ಸಮನ್ವಯಾಕಾರಿಯಾಗಿ, ವಸತಿ ನಿಲಯದ ಅಕ್ಷಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ. ಹೀಗೆ ನಿರ್ವಹಿಸಿದ್ದು ಹಲವಾರು ಜವಾಬ್ದಾರಿಗಳು.

ಸುಮಾರು ಐವತ್ತಕ್ಕೂ ಹೆಚ್ಚು ಕೃತಿ ಪ್ರಕಟ. ಕವನ ಸಂಕಲನ-ಮರದ ಮೇಲಿನ ಗಾಳಿ, ಕರಿತೆಲಿ ಮಾನವನ ಜೀಪದ, ಹಾಡಕ್ಕಿ ಹಾಗೂ ಇತರ ಪದಗಳು, ಪ್ಯಾಂಥರ್ ಪದ್ಯಗಳು, ಬಂಡೆದ್ದ ದಲಿತರ ಬೀದಿ ಹಾಡುಗಳು. ಮಹಾಕಾವ್ಯ-ಮಾನಸ ಮಹಾಸಾಗರದ ಪರಮಹಂಸಗಳ ಭೂವ್ಯೋಮದ ಬೃಹದ್‌ಗಾನ. ಕಥಾಸಂಕಲನ-ಕಪ್ಪು ಕಥೆಗಳು, ಕುತ್ತದಲ್ಲಿ ಕುದ್ದವರ ಕಥೆಗಳು, ಹೆಪ್ಪುಗಟ್ಟಿದ ಸಮುದ್ರ, ನಾಟಕಗಳು-ಟೊಂಕದ ಕೆಳಗಿನ ಜನ, ಅಗ್ನಿರಾಜ, ತಲೆ ಹಾಕುವವರು, ಕೂಸಿನ ಕಂಡಿರಾ, ಅವಿವೇಕಿ ರಾಜನ ಕಥೆ, ಜೋಗತಿ. ಕಾದಂಬರಿ-ಒಂದು ಹೆಣ್ಣಿನ ಒಳಜಗತ್ತು, ಕೋಟೆಬಾಗಿಲು, ಹುಲಿಗೆಮ್ಮ, ಗ್ರಾಮಭಾರತ, ಬೆಳ್ಯ. ಡೆಪ್ಪಿನಾಟಗಳು-ಚೆನ್ನಣ್ಣ ವಾಲೀಕಾರರ ಆರು ಡೆಪ್ಪಿನಾಟಗಳು.

ಸಂದ ಪ್ರಶಸ್ತಿಗಳು-ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಂಗಳೂರು ಸಾಹಿತ್ಯ ಬಳಗ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.85 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *