ಡಾ. ಎಸ್. ರಾಮಸ್ವಾಮಿ (೨೭.೦೩.೧೯೩೨): ಅಲೆಮಾರಿ ರಾಮಸ್ವಾಮಿ ಎಂದು ಕರೆದುಕೊಂಡಂತೆ ಸುತ್ತದ ದೇಶವಿಲ್ಲ, ಪ್ರಬಂಧ ಮಂಡಿಸಿದ ಸಮ್ಮೇಳನಗಳಿಲ್ಲ, ಸಂದರ್ಶಕ ಪ್ರಾಧ್ಯಾಪಕರಾಗಿ ಪಾಠ ಹೇಳದ ವಿಶ್ವವಿದ್ಯಾಲಯಗಳಿಲ್ಲ. ಸದಾ ಒಂದಿಲ್ಲೊಂದು ದೇಶ ಸುತ್ತುತ್ತಾ ಇರುವ ರಾಮಸ್ವಾಮಿಯವರು ಹುಟ್ಟಿದ್ದು ಬೆಂಗಳೂರಿನಲ್ಲಿ ೧೯೩೨ರ ಮಾರ್ಚ್‌೨೭ ರಂದು. ತಂದೆ ಎಸ್.ಹನುಮಂತರಾವ್, ತಾಯಿ ನಾಗಮ್ಮ.
ಬಿ.ಎ. ಆನರ್ಸ್ ಸೆಂಟ್ರಲ್ ಕಾಲೇಜು, ಬೆಂಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ಮತ್ತು ಪೂರ್ಣಾ ಕೃಷ್ಣರಾವ್ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿ ಎನಿಸಿ, ಪಡೆದ ಎಂ.ಎ. ಪದವಿ (೧೯೫೪). ಫುಲ್‌ಬ್ರೈಟ್ ಸ್ಕಾಲರ್ ಶಿಪ್ ದೊರೆತು ಫೈ ಬೀಟಾ ಕಪ್ಪ (PHI BETA KAPPA) ಪ್ರಶಸ್ತಿಯೊಡನೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (೧೯೬೬), ಎರಡನೆಯ ಬಾರಿ ಫುಲ್‌ಬ್ರೈಟ್‌ಸ್ಕಾಲರ್‌ಶಿಪ್ ಪಡೆದು ಓದಿದ್ದು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ (೧೯೮೮) ಮತ್ತು ಮೂರನೆಯ ಬಾರಿ ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಪಡೆದು ಓದಿದ್ದು ಅಮೆರಿಕದ ಯೇಲ್ ವಿಶ್ವವಿದ್ಯಾಲಯ ಹಾಗೂ ಆಸ್ಟಿನ್ ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ (೧೯೯೧).
ಇಂಗ್ಲಿಷ್ ಜೊತೆಗೆ ಸ್ವತಂತ್ರವಾಗಿ ಸಂಸ್ಕೃತ ಕಲಿತದ್ದು ಗುರುಕುಲ ಪದ್ಧತಿಯಲ್ಲಿ.
ಮೂವತ್ತೆಂಟು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿ ಇವರು ಸ್ನಾತಕೋತ್ತರ ತರಗತಿಗಳಿಗೆ ಬೋಧಿಸಿದ್ದು ಅಮೆರಿಕನ್ ಸಾಹಿತ್ಯ, ೨೦ನೆಯ ಶತಮಾನದ ಬ್ರಿಟಿಷ್ ಸಾಹಿತ್ಯ, ಕಾಮನ್‌ವೆಲ್ತ್ ಸಾಹಿತ್ಯ ಮತ್ತು ತುಲನಾತ್ಮಕ ನಾಟಕ ಮತ್ತು ರಂಗಭೂಮಿ. ಸಂದರ್ಶಕ ಪ್ರಾಧ್ಯಾಪಕರಾಗಿ ವಿದೇಶಿ ವಿಶ್ವವಿದ್ಯಾಲಯಗಳಲ್ಲೂ ಬೋಧನೆ. ಟೆಕ್ಸಾಸ್‌ನ ಆಸ್ಟಿನ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ (ಲಾಸ್‌ಏಂಜಲ್ಸ್) ಲಂಡನ್ನಿನ ಕಾಮನ್‌ವೆಲ್ತ್ ಇನ್‌ಸ್ಟಿಟ್ಯೂಟ್ ಮತ್ತು ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್, ಕೆನಡದ ಮಾಂಟ್ರಿಯಾಲ್‌ನಲ್ಲಿರುವ ಮೆಕ್‌ಗಿಲ್ ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ.
ಅಮೆರಿಕನ್ ಸಾಹಿತ್ಯ, ಕಾಮನ್‌ವೆಲ್ತ್ ಸಾಹಿತ್ಯ ಮತ್ತು ಭಾರತೀಯ ಶಾಸ್ತ್ರದ ತುಲನಾತ್ಮಕ ವಿಮರ್ಶೆ ಮುಂತಾದವುಗಳ ಬಗ್ಗೆ ಬರೆದ ಲೇಖನಗಳು ಇಂಡಿಯನ್ ಜರ್ನಲ್ ಆಫ್ ಇಂಗ್ಲಿಷ್ ಸ್ಟಡೀಸ್, ಇಂಡಿಯನ್ ಜರ್ನಲ್ ಆಫ್ ಅಮೆರಿಕನ್ ಸ್ಟಡೀಸ್ ಇಂಡಿಯನ್ ಜರ್ನಲರ್ ಆಫ್ ಕೆನಡಿಯನ್ ಸ್ಟಡೀಸ್, ದಿ ಜರ್ನಲ್ ಆಫ್ ಕಾಮನ್‌ವೆಲ್ತ್ ಲಿಟರೇಚರ್ ಮುಂತಾದ ಪತ್ರಿಕೆಗಳಲ್ಲಿ ಸುಮಾರು ೨೩೦ ಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳು ಪ್ರಕಟಗೊಂಡಿವೆ.
ಬೋಧನೆಯಷ್ಟೇ ಮುಖ್ಯವಾಗಿ ತೊಡಗಿಸಿಕೊಂಡ ಮತ್ತೊಂದು ಜವಾಬ್ದಾರಿಯುತ ಕೆಲಸವೆಂದರೆ ಹಲವಾರು ಪತ್ರಿಕೆಗಳ ಸಂಪಾದಕತ್ವ. ಮದರಾಸು ಮತ್ತು ಬೆಂಗಳೂರಿನಿಂದ ಪ್ರಕಟವಾಗು ‘ಜರ್ನಲ್ ಆಫ್ ವೇದಾಂತ’ ಸಂಪಾದಕರಾಗಿ, ರಾಜ್ಯ ಸಾಹಿತ್ಯ ಅಕಾಡಮಿಯ ‘ಅನಿಕೇತನ’ ಇಂಗ್ಲಿಷ್ ಆವೃತ್ತಿಯ ಸಂಪಾದಕರಾಗಿ, ಅಮೆರಿಕ ನಾಟಕ ಮತ್ತು ರಂಗಭೂಮಿಗಳ ಬಗ್ಗೆ ಪ್ರಕಟಗೊಳ್ಳುವ ವಿಶೇಷ ಸಂಚಿಕೆಯಾದ ಇಂಡಿಯನ್ ಜರ್ನಲ್ ಆಫ್ ಅಮೆರಿಕನ್ ಸ್ಟಡೀಸ್‌ನ ಗೌರವ ಸಂಪಾದಕರಾಗಿ, ಕೋಲ್ಕತ್ತಾದ ಥಿಯೇಟರ್ ಇಂಟರ್ ನ್ಯಾಷನಲ್ ಪತ್ರಿಕೆಯ ಬರಹಗಾರ ಸಂಪಾದಕರಾಗಿ, ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಆಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್‌ನ ‘ಸಂಸ್ಕೃತಿ’ ಪತ್ರಿಕೆಯ ಸಂಪಾದಕರಾಗಿ ಹೀಗೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳ ಸಂಪಾದಕತ್ವ.
ಸುಮಾರು ಮೂರು ದಶಕಗಳಿಗೂ ಮಿಕ್ಕು ಆಕಾಶವಾಣಿ ಮತ್ತು ದೂರದರ್ಶನ ಸಂದರ್ಶನ ಕಾರ್ಯಕ್ರಮಗಳಲ್ಲಿ ಭಾಗಿ. ಪ್ರಖ್ಯಾತ ಪತ್ರಿಕೆಗಳಿಗಾಗಿ ಮಾಡಿರುವ ಗ್ರಂಥಗಳ ವಿಮರ್ಶೆಗಳು. ಬೆಂಗಳೂರು, ಊಟಿ, ಕೊಲ್ಹಾಪುರ, ನಾಗಪುರ, ಭುವನೇಶ್ವರ, ಹೈದರಾಬಾದ್, ದೆಹಲಿ, ಮದರಾಸು, ಧಾರವಾಡ, ದೆಹಲಿ, ತಿರುಜಿರಾಪಲ್ಲಿ, ರಾಜಸ್ಥಾನ್, ಮುಂತಾದೆಡೆಗಳಲ್ಲಿ ನಡೆದ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಶೈಕ್ಷಣಿಕ ವಿವಿಧ ವಿಷಯಗಳ ಮೇಲೆ ಮಂಡಿಸಿರುವ ಪ್ರಬಂಧಗಳು.
ಇಂಗ್ಲಿಷ್‌ನಲ್ಲಿ ರಚಿಸಿರುವ ಕೃತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ಎಸ್ಸೇಸ್ ಆನ್ ಕಾಮನ್‌ವೆಲ್ತ್ ಲಿಟರೇಚರ್, ಕಾಮೆಂಟರಿಸ್ ಆನ್ ಕಾಮನ್ ವೆಲ್ತ್ ಪೊಯಿಟ್ರಿ ಅಂಡ್ ಡ್ರಾಮ, ಕಾಮೆಂಟರೀಸ್ ಆನ್ ಕೆನಡಿಯನ್ ಲಿಟರೇಚರ್, ಇಂಡಿಯನ್ ಫಿಲಾಸಫಿಕಲ್ ಐಡಿಯಾಸ್ ಅಂಡ್ ವೆಸ್ಟರ್ನ್ ಲಿಟರೇಚರ್, ಎಸ್ಸೆಸ್ ಆನ್ ಅಮೆರಿಕನ್ ಲಿಟರೇಚರ್ ಮುಂತಾದವುಗಳ ಜೊತೆಗೆ ಕನ್ನಡದಲ್ಲಿ ‘ಕೆಲವು ವಿದೇಶಿ ನಾಟಕಕಾರರು’, ‘ಇಂಗ್ಲೆಂಡ್‌ನಲ್ಲಿ ಅಲೆಮಾರಿ’, ‘ಸಾಹಿತ್ಯಲೋಕದ ನೆನಪುಗಳು’, ‘ಫ್ರಾನ್ಸ್‌ನಲ್ಲಿ ಅಲೆಮಾರಿ’, ‘ಇಟಲಿಯಲ್ಲಿ ಅಲೆಮಾರಿ’, ‘ಭಗವಾನ್ ರಮಣಮಹರ್ಷಿ’, ‘ಫ್ರೆಂಚ್ ಸಾಹಿತ್ಯ’, ‘ಜರ್ಮನಿಯಲ್ಲಿ ಅಲೆಮಾರಿ’, ಉತ್ಖನನ ಮುಂತಾದವುಗಳಲ್ಲದೆ ಶಿವರಾಮಕಾರಂತರು, ಭೈರಪ್ಪ, ಎಂ.ಎಸ್.ಕೆ.ಪ್ರಭು, ವೈ.ಎನ್.ಕೆ. ಜಿ.ಪಿ. ರಾಜರತ್ನಂ, ಎಸ್.ಕೆ.ರಾಮಚಂದ್ರರಾವ್, ಎಚ್.ವಿ.ನಾಗರಾಜರಾವ್, ಇವರುಗಳ ಬಗ್ಗೆ ಹಲವಾರು ಪತ್ರಿಕೆಗಳಿಗೆ ಇಂಗ್ಲಿಷ್‌ನಲ್ಲಿ ಲೇಖನಗಳನ್ನು ಬರೆದಿದ್ದಾರೆ.
ಅಲೆಮಾರಿ ಪ್ರವೃತ್ತಿಯ ರಾಮಸ್ವಾಮಿಯವರು ನಿವೃತ್ತಿಯ ನಂತರವೂ ಸಂಯುಕ್ತ ಸಂಸ್ಥಾನಗಳು, ಕೆನಡ, ಮೆಕ್ಸಿಕೋ, ಫ್ರಾನ್ಸ್, ಜರ್ಮನಿ, ಹಾಲೆಂಡ್, ಸ್ವಿಜರ್‌ಲ್ಯಾಂಡ್, ಇಟಲಿ, ಬೆಲ್ಜಿಯಂ, ಡೆನ್ಮಾರ್ಕ್, ಸ್ವೀಡನ್, ಜಪಾನ್, ಹಾಂಗ್‌ಕಾಂಗ್, ಥಾಯಲ್ಯಾಂಡ್ ಮಲೇಷಿಯಾ, ಸಿಂಗಪೂರ್‌ಹೀಗೆ ಒಂದಿಲ್ಲೊಂದು ದೇಶದ ಸಮ್ಮೇಳನಗಳಲ್ಲಿ ಭಾಗಿಯಾಗಿ ಗಮನ ಸೆಳೆದ ಬೋಧಕರು, ಸಂಶೋಧಕರು, ಬರಹಗಾರರು, ಪ್ರಬಂಧಕಾರರು ಆಗಿ ಕರ್ನಾಟಕದ ಪತಾಕೆಯನ್ನು ಹಾರಿಸಿರುವ ಕನ್ನಡಿಗರು, ರಾಮಸ್ವಾಮಿಯವರು.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.