TG Raghava

ಟಿ.ಜಿ. ರಾಘವ

ಟಿ.ಜಿ. ರಾಘವ (೨೮-೩-೧೯೩೫): ವಿಶಿಷ್ಟ ಕತೆಗಾರ, ಕಾದಂಬರಿಕಾರ, ನಾಟಕಕಾರರಾದ ಟಿ.ಜಿ. ರಾಘವರವರು ಹುಟ್ಟಿದ್ದು ಬೆಂಗಳೂರು. ತಂದೆ ಗೋವಿಂದಾಚಾರ್ ಆಂಧ್ರದ ಮೂಲದವರಾದರೆ ತಾಯಿ ತಂಗಮ್ಮ ತಮಿಳಿನವರು. ಎರಡು ಭಾಷೆಗಳ ಸಂಗಮ. ರಾಘವರ ಮಾತೃಭಾಷೆ ತಮಿಳು. ಕಲಿತದ್ದು ಕನ್ನಡ, ಬರೆದದ್ದು ಕನ್ನಡ. ಕನ್ನಡದ ಪ್ರಮುಖ ಕಥೆಗಾರರಲ್ಲೊಬ್ಬರು ಎನಿಸಿಕೊಂಡರು. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದುದು ಗುಬ್ಬಿ, ಶ್ರೀನಿವಾಸಪುರ, ಕೋಲಾರಗಳಲ್ಲಿ. ಅಜ್ಜಿ ಹೇಳುತ್ತಿದ್ದ ಕತೆಗಳಿಂದ, ತಾಯಿ ಗುನುಗುತ್ತಿದ್ದ ಹಾಡುಗಳಿಂದ ಆಕರ್ಷಿತರಾಗಿ ರಾಘವರ ಮನಸ್ಸಿನಲ್ಲಿ ಸಾಹಿತ್ಯದ ಬೇರು ಇಳಿಯತೊಡಗಿತು.

ಇವರ ಮೊದಲ ಕಥೆ ಟಿಕ್, ಟಿಕ್…ಪ್ರಕಟವಾದುದು ಅಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ‘ವಾರ್ಸಿಟಿ ಟೈಮ್ಸ್’ ಪತ್ರಿಕೆಯಲ್ಲಿ. ಹಲವಾರು ಓದುಗರ ಗಮನ ಸೆಳೆಯಿತು. ಮುಂದೆ ಕಾಲೇಜಿನ ಸಣ್ಣ ಕಥಾ ಸ್ಪರ್ಧೆಯಲ್ಲಿ ‘ಹಾವು ಹೆಡೆಯಾಡಿತು’ ಬಹುಮಾನ ಗಳಿಸಿದಾಗ ಅಲ್ಲೇ ಪ್ರಾಧ್ಯಾಪಕರಾಗಿದ್ದ ಕವಿ ಗೋಪಾಲಕೃಷ್ಣ ಅಡಿಗರ ಗಮನಕ್ಕೆ ಬಂದರು. ಅಚ್ಚುಮೆಚ್ಚಿನ ಶಿಷ್ಯರೆನಿಸಿದರು.

ಬಿ.ಎಸ್ಸಿ ಮುಗಿಸಿದ ನಂತರ ಕೆಲಕಾಲ ಬೆಂಗಳೂರಿನ ಸೇಯಿಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ದುಡಿದು ನಂತರ ಅಡಿಗರ ಕರೆಯ ಮೇಲೆ ಸಾಗರದ ಲಾಲ್‌ಬಹದ್ದೂರ್ ಕಾಲೇಜಿನಲ್ಲಿ ಟ್ಯೂಟರ್ ಆದರು. ಓದಿನ ಹಂಬಲದಿಂದ ಧಾರವಾಡಕ್ಕೆ ಹೋಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದರು. ಕೆಲಕಾಲ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ, ನಂತರ ಬೆಂಗಳರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿ ನಿವೃತ್ತರಾಗುವವರೆಗೂ ಸೇವೆ ಸಲ್ಲಿಸಿದರು.

ಅಧ್ಯಾಪಕರ ಹಿತಕ್ಕಾಗಿ ನಿರಂತರ ಹೋರಾಟ ನಡೆಸಿ ಕೋರ್ಟು, ಕಚೇರಿ ಅಲೆದು ಬರೆದದ್ದು ಕಡಿಮೆ. ಬಲು ಸತ್ವಯುತ ಕೊಡುಗೆ. ಜ್ವಾಲೆ ಆರಿತು, ಸಂಬಂಧಗಳು, ಟಿ.ಜಿ.ರಾಘವರ ಕಥೆಗಳು (ಕಥಾಸಂಕಲನ). ಮನೆ, ವಿಕೃತಿ (ಕಾದಂಬರಿ). ಪ್ರೇತಗಳು (ನಾಟಕ ಪ್ರಕಟಿತ).

ಮನೆ ಕಾದಂಬರಿ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಕನ್ನಡ-ಹಿಂದಿ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯೂ ಲಭಿಸಿತು. ಮನೆ ಕಾದಂಬರಿ ಹಾಗೂ ಶ್ರಾದ್ಧ ಕಥೆ ಮರಾಠಿಗೂ, ಪ್ರೇತಗಳು ಮಲೆಯಾಳಂಗೂ ಅನುವಾದಗೊಂಡಿದೆ. ಮತ್ತೊಂದು ಕಥೆ ಉರ್ದುವಿಗೆ ಭಾಷಾಂತರವಾಗಿ ಪಾಕಿಸ್ತಾನ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.25 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *