ಜ್ಯೋತಿ ಜಿ. ಹೆಗಡೆ (೧೭.೦೩.೧೯೬೩): ಪ್ರಪಂಚದ ಪ್ರಪ್ರಥಮ ರುದ್ರವೀಣಾ ವಾದಕಿ ಜ್ಯೋತಿಯವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಸತ್ಯನಾರಾಯಣ ದೇವಗುಡಿ, ತಾಯಿ ಶಾಂತಾ ದೇವಗುಡಿ. ಸಂಗೀತದಲ್ಲಿ ಎಂ.ಎ. ಪದವಿ. ಸಂಗೀತಾಭ್ಯಾಸ ಪ್ರಾರಂಭಿಸಿದ್ದು ಪಂ. ಬಿಂದುಮಾಧವ ಪಾಠಕ್ ರವರಲ್ಲಿ. ೧೫ ವರ್ಷಗಳ ನಿರಂತರ ಸಿತಾರ್ ಹಾಗೂ ರುದ್ರವೀಣಾ ಕಲಿಕೆ. ನಂತರ ಇಂದೂಧರ ನಿರೋಡಿಯವರಲ್ಲಿ ಧ್ರುಪದ್ ಶೈಲಿಯ ಅಭ್ಯಾಸ. ಜಗತ್ ಪ್ರಸಿದ್ಧ ರುದ್ರವೀಣಾ ವಾದಕರಾದ ದೆಹಲಿಯ ಉಸ್ತಾದ್ ಅಸದ್‌ಖಾನ್ ಮತ್ತು ಧ್ರುಪದ್ ಶೈಲಿಯ ಗಾಯಕರಾದ ಉಸ್ತಾದ್ ಫರೀದುದ್ದೀನ್ ಡಾಗರ್ ರವರಲ್ಲಿ ಮುಂದುವರಿಕೆ. ಹಿಂದೂಸ್ತಾನಿ ಸಂಗೀತವನ್ನು ರುದ್ರವೀಣೆಯಲ್ಲಿ ನುಡಿಸುವುದು ಕಷ್ಟದಾಯಕವಾದರೂ ಛಲಬಿಡದೆ ಮಾಡಿದ ಸಾಧನೆ.
ಇಪ್ಪತ್ತೈದು ವರ್ಷಗಳಿಂದಲೂ ಆಕಾಶವಾಣಿ ಬಿ. ಹೈಯ್ ಗ್ರೇಡ್ ಕಲಾವಿದೆಯಾಗಿ ಸೇವೆ. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ನಿಂದ ದೊರೆತ ಅತ್ಯುನ್ನತ ಗೌರವ ಸದಸ್ಯತ್ವ. ಅನೇಕ ಪ್ರತಿಷ್ಠಿತ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿ. ಹಲವಾರು ಟಿ.ವಿ. ವಾಹಿನಿಗಳಲ್ಲಿ ಪ್ರಸಾರ.
ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಬೆಳಗಾವಿಯಲ್ಲಿ ನೀಡಿದ ಕಾರ್ಯಕ್ರಮಗಳು. ೧೯೮೩ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ, ೧೯೮೪ರಲ್ಲಿ ಮಂಗಳೂರಿನ ಆರ್ಟ್ ಸರ್ಕಲ್, ೧೯೯೭-೯೮ರ ಉಸ್ತಾದ್ ಕರೀಂ ಖಾನ್ ಪುಣ್ಯ ಸ್ಮರಣ ಸಂಗೀತೋತ್ಸವ, ಕರ್ನಾಟಕ ವಿಶ್ವವಿದ್ಯಾಲಯ ಸಂಗೀತೋತ್ಸವ, ಖಾಂಡ್ವ, ಭೂಪಾಲ್ ಕಾರ್ಯಕ್ರಮಗಳಲ್ಲೂ ಭಾಗಿ.
ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಶಿಷ್ಯವೇತನ, ಕೇಂದ್ರ ಸಂಗೀತ, ನೃತ್ಯ ಅಕಾಡಮಿ ಶಿಷ್ಯವೇತನ. ಆಕಾಶವಾಣಿ ಸ್ಪರ್ಧೆ, ಕರ್ನಾಟಕ ವಿ.ವಿ. ಯುವ ಜನೋತ್ಸವ, ಬೆಳಗಾಂ ಆರ್ಟ್ ಸರ್ಕಲ್‌ನ ಗುರ್ಟೂಟ್ರೋಫಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಸಂಗೀತ ಸ್ಪರ್ಧೆ, ಮಹಾರಾಷ್ಟ್ರ ಸಾಂಗ್ಲಿಯಲ್ಲಿ ನಡೆದ ಸಿತಾರ್ ಸಾಧನ ಸಂಗೀತ ಸ್ಪರ್ಧೆ ಮುಂತಾದುವುಗಳಲ್ಲಿ ಪಡೆದ ಪ್ರಥಮ ಬಹುಮಾನ. ಗದುಗಿನ ಕಲಾಚೇತನ ಅಕಾಡಮಿಯಿಂದ ನಾದನಿಧಿ ಪ್ರಶಸ್ತಿ, ಮಧ್ಯಪ್ರದೇಶ, ಗ್ವಾಲಿಯರ್‌ನಲ್ಲಿ ನಡೆಯುವ, ತಾನ್‌ಸೇನ್ ಸ್ಮಾರಕ ಧ್ರುಪದ್ ಮೇಳದಲ್ಲಿ ಗೌರವ, ಕರ್ನಾಟಕ ರುದ್ರವೀಣಾ ವಾದನದ ಮೂವರು ಮಹಿಳೆಯರಲ್ಲಿ ಪ್ರಥಮರೆಂಬ ಹೆಗ್ಗಳಿಕೆ.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.