G Venkataiah

ಜಿ. ವೆಂಕಟಯ್ಯ

ಜಿ. ವೆಂಕಟಯ್ಯ (೧೦.೦೪.೧೯೧೬ – ೨೨.೦೯.೧೯೭೯): ಅಕ್ಷರ ಜ್ಞಾನವೇ ಇಲ್ಲದ ದಲಿತಜನಾಂಗದಿಂದ ಸಾಹಿತ್ಯ ನಿರ್ಮಾಣವನ್ನು ನಿರೀಕ್ಷಿಸಲಾಗದ ಸಂದರ್ಭದಲ್ಲಿ ಅಕ್ಷರ ಕಲಿತು ಸಾಹಿತ್ಯರಚನೆಯಲ್ಲಿ ತೊಡಗಿದ ಜಿ. ವೆಂಕಟಯ್ಯನವರು ಹುಟ್ಟಿದ್ದು ೧೯೧೬ರ ಏಪ್ರಿಲ್ ೧೦ರಂದು ಮಂಡ್ಯ ಜಿಲ್ಲೆಯ ಮದ್ದೂರ್ ತಾಲ್ಲೂಕಿನ ಹೆಮ್ಮನ ಹಳ್ಳಿಯಲ್ಲಿ. ತಂದೆ ಗಿರಿಯಯ್ಯ, ತಾಯಿ ಸಿದ್ಧಮ್ಮ. ಮೊದಲಮಗನಾಗಿ ಹುಟ್ಟಿದ ವೆಂಕಟಯ್ಯನವರು ಅಕ್ಷರ ಜ್ಞಾನ ಸಂಪಾದಿಸಿದ್ದರಿಂದ ನಂತರ ಹುಟ್ಟಿದವರಿಗೂ ಅಕ್ಷರದ ಅದೃಷ್ಟದಿಂದ ಒಬ್ಬ ತಮ್ಮ ಜಿ. ಗೋಪಾಲ್ ವೈದ್ಯರಾಗಿದಷ್ಟೇ ಅಲ್ಲದೆ ವಿದೇಶ ಪ್ರವಾಸ ಕುರಿತು ‘ವಿದೇಶ ಪ್ರವಾಸ’ ಹಾಗೂ ‘ಮೈಸೂರಿನಿಂದ ಮೆಕ್ಸಿಕೊ’ ಎಂಬ ಎರಡು ಪ್ರವಾಸ ಕೃತಿಗಳನ್ನು ರಚಿಸಿದ್ದಾರೆ. ಜಿ. ವೆಂಕಟಯ್ಯನವರ ನಾಲ್ವರು ಮಕ್ಕಳೂ ವಿದ್ಯಾವಂತರೆ.

ಪ್ರಾರಂಭಿಕ ಶಿಕ್ಷಣ ಕೂಲಿ ಮಠದಲ್ಲಿ. ನಂತರ ಬೆಂಗಳೂರಿನ ಕೋಟಿ ಹೈಸ್ಕೂಲಿನಲ್ಲಿ ಪ್ರೌಢಶಾಲಾಭ್ಯಾಸ ಮತ್ತು ಸರಕಾರಿ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ. ಡಿ.ಎಲ್.ಎನ್., ಕುವೆಂಪು, ತೀ.ನಂ.ಶ್ರೀಯವರುಗಳು ಇವರ ಗುರುಗಳು.

ಉದ್ಯೋಗಕ್ಕಾಗಿ ಸೇರಿದ್ದು ಸರಕಾರಿ ಇಲಾಖೆಯಲ್ಲಿ ಗುಮಾಸ್ತರಾಗಿ. ಹಂತಹಂತವಾಗಿ ಮೇಲೇರಿ ಹೆಡ್‌ಮುನಿಶಿಯಾಗಿ (Head Clerk), ಲೆಕ್ಕತನಿಖಾಧಿಕಾರಿಯಾಗಿ ನಿವೃತ್ತಿ ಹೊಂದಿದರು. ಹರಿಜನ ಸಮುದಾಯಲ್ಲಿ ಹುಟ್ಟಿದರೂ, ಜಾತಿಯನ್ನು ಬಂಡವಾಳವನ್ನಾಗಿಸಿಕೊಳ್ಳದೆ ಒಬ್ಬ ನಿಷ್ಠಾವಂತ ಸಮಾಜ ಸೇವಕನಾಗಿ ದಲಿತ ಜನಾಂಗದ ಏಳಿಗೆಗಾಗಿ ಶ್ರಮಿಸಿದರು. ನಿರಂತರ ಬಡತನದಲ್ಲೇ ಬದುಕಿದ್ದರೂ ಸರಳ, ಸಭ್ಯ ವ್ಯಕ್ತಿ ಎನಿಸಿ ಉದಾತ್ತ ಗುಣಗಳನ್ನು ರೂಢಿಸಿಕೊಂಡಿದ್ದರು.

೧೯೫೦ರ ದಶಕದಲ್ಲಿ ನವೋದಯ ಹಾಗೂ ಪ್ರಗತಿಶೀಲ ಬರವಣಿಗೆಯ ಗಾಳಿ ಬೀಸತೊಡಗಿತು. ಗೋಕಾಕರು ನವ್ಯತೆಯ ಬಗ್ಗೆ ಉಪನ್ಯಾಸ ಪ್ರಾರಂಭಮಾಡಿದ್ದರೆ ಅಡಿಗರು ಸೃಷ್ಟಿ, ಸ್ಥಿತಿ, ಲಯಗಳ ನಿರಂತರ ಕ್ರಿಯೆಯನ್ನು ಅತ್ಯಂತ ಸಂಕೀರ್ಣವಾಗಿ ಪ್ರತಿಮೆಗಳ ಮೂಲಕ ಸೃಷ್ಟಿಸಿದರು. (ಭೂಮಿಗೀತ-ಕವನ ಸಂಕಲನ). ಚಿತ್ತಾಲರು ಕಥೆ ಕಾದಂಬರಿಗಳಲ್ಲಿ ಸಾವು-ನೋವುಗಳ ಅನಿವಾರ್ಯತೆಯನ್ನು ಬಿಂಬಿಸಿದರು. ನವೋದಯದ ಕಾದಂಬರಿಗಳು (ಕುವೆಂಪು, ಕಾರಂತರು, ಬೆಟಗೇರಿ ಮಾಸ್ತಿ….) ಕೌಟುಂಬಿಕ ಕಡೆಗೆ ಒತ್ತುಕೊಟ್ಟು ಬರೆದರೆ ಪ್ರಗತಿಶೀಲರ ಕಾದಂಬರಿಗಳು (ಅ.ನ.ಕೃ, ತ.ರಾ.ಸು, ನಿರಂಜನ, ಚದುರಂಗ) ಸಾಮಾಜಿಕ ಸಮಸ್ಯೆಗಳತ್ತ ಒಲವು ತೋರಿದವು. ಇಂತಹ ಸಂದರ್ಭದಲ್ಲಿ ದಲಿತ ಸಾಹಿತಿಯೊಬ್ಬ ಕನ್ನಡಸಾಹಿತ್ಯದಲ್ಲಿ ಮೂಡಿ ಬಂದಿದ್ದ. ಇತರ ಲೇಖಕರು ದಲಿತರ ನೋವನ್ನು ಸಹಾನುಭೂತಿಯ ನೆಲೆಯಲ್ಲಿ ಚಿತ್ರಿಸಿದ್ದರೆ ವೆಂಕಟಯ್ಯನವರು ನೋವಿನ ನೆಲೆಯಿಂದ ಚಿತ್ರಿಸಿದ್ದು, ಇದು ದಲಿತನೊಬ್ಬ ದಲಿತರ ನೋವನ್ನು ಅನಾವರಣಗೊಳಿಸಿದ ರೀತಿಯಾಗಿತ್ತು. ಈ ಹಿನ್ನಲೆಯಲ್ಲಿ ಇವರು ಬರೆದ ಕಾದಂಬರಿಗಳಲ್ಲಿ ಮೊದಲ ಕಾದಂಬರಿ ಮುರಿದ ಮದುವೆ (೧೯೫೧). ತಂದೆಯ ಸ್ವಾರ್ಥಕ್ಕೆ ಸಿಕ್ಕಿ ದುರಂತದ ಪರಾಕಾಷ್ಠೆಯನ್ನು ಚಿತ್ರಿಸಿರುವ ಚೆಲುವೆಯೊಬ್ಬಳ ಕತೆ. ಸಹಜವಾಗಿ ಆಗಬೇಕಿದ್ದ ಮದುವೆಯನ್ನು ತಪ್ಪಿಸಿ ಒಲ್ಲದವನೊಡನೆ ಸಂಬಂಧವನ್ನು ತಂದೆಯೇ ಏರ್ಪಡಿಸಿ ದುರಂತಕ್ಕೆ ಕಾರಣನಾಗುತ್ತಾನೆ.

ಎರಡನೆ-ಕಾದಂಬರಿ ನೊಂದ ಜೀವ (೧೯೫೫). ಈ ಕಾದಂಬರಿಯಲ್ಲಿ ಒಂದು ಪ್ರದೇಶದ, ಒಂದು ಜಾತಿಯ, ಒಂದು ಕುಟುಂಬದ ಜೀವನದ ಸರ್ವಸಂಗತಿಗಳನ್ನೂ ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮೂರನೆಯ ಕಾದಂಬರಿ ಚಂದನದ ಕೊರಡು ೧೯೬೫ರಲ್ಲಿ ಪ್ರಕಟವಾಗಿದೆ.
ಸಾಹಿತ್ಯದ ಯಾವುದೇ ಒಂದು ಪ್ರಕಾರಕ್ಕೆ ಕಟ್ಟು ಬೀಳದ ವೆಂಕಟಯ್ಯನವರು ಸೊಗಸಾದ ಪ್ರವಾಸ ಕಥನಗಳನ್ನೂ ರಚಿಸಿದ್ದಾರೆ.
ಕುಟುಂಬ ಸಮೇತರಾಗಿ ಚಿನ್ನದ ನಾಲಗೆಯನ್ನು ತಿರುಪತಿಯ ಶ್ರೀನಿವಾಸನಿಗೆ ಅರ್ಪಿಸಲು ತಿರುಪತೆ ಯಾತ್ರೆ ಹೊರಡುವ ಕೃತಿ ಚಿನ್ನದ ಗಿರಿಯಾತ್ರ (೧೯೫೨) – ಭಕ್ತಿಯ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು, ಜನರ ಮೂಢ ನಂಬಿಕೆಗಳನ್ನು ವಿವರುಸುವ ಕೃತಿ.

ಈರೋಪಿನಲ್ಲಿ ನಡೆಯುವ ಮದುವೆಗಾಗಿ ಹೊರಟ ತಂಡವು ಹಾದಿಯಲ್ಲಿ ಅನುಭವಿಸುವ ಕಷ್ಟಗಳು, ಆಸ್ವಾದಿಸುವ ಪ್ರಕೃತಿ ಸೌಂದರ್ಯ ಮುಂತಾದವುಗಳ ವರ್ಣನೆಯ ಕೃತಿ ‘ಬನದ ಸೆರಗು’ (೧೯೬೨).

ಬಿಳಿಗಿರಿ ರಂಗನ ಬೆಟ್ಟದ ಕಾಡುದಾರಿಯಲ್ಲಿ ಆನೆಗಳ ಕೈಗೆ ಸಿಕ್ಕಿ ಪಾರಾಗುವ, ಹುಲಿಬೇಟೆಗಾಗಿ ರಾತ್ರಿ ಇಡೀ ಕಾಯುವ, ಮೈನವಿರೇಳಿಸುವ ಪ್ರಸಂಗಗಳ ಸ್ವಾರಸ್ಯಕರ ವರ್ಣನೆಯ ಪ್ರವಾಸ ಕೃತಿ ನಿಸರ್ಗದ ಮಡಿಲು (೧೯೬೭).

ಇವರು ಮಕ್ಕಳಿಗಾಗಿಯೇ ಬರೆದ ಕೃತಿ ಬುದ್ಧದೇವ (ಜೀವನಚಿತ್ರಣ). ಸಿದ್ಧಾರ್ಥನು ಲೋಕದ ದುಃಖವನ್ನು ಕಣ್ಣಾರೆ ಕಂಡು ಹೃದಯಕರಗಿ ಅರಮನೆ ಅಷ್ಟೈಶ್ವರ್ಯ, ಹೆಂಡತಿ-ಮಗುವನ್ನು ತೊರೆದು ಜ್ಞಾನೋದಯ ಪಡೆಯುವ ಕೃತಿ ಬುದ್ಧದೇವ.

ಇವರ ಮತ್ತೊಂದು ಜೀವನದ ಚಿತ್ರಣ ಕೊಡುವ ಕೃತಿ ‘ಶಾರದಾಮಣು’ ಜೀವನ ಚರಿತ್ರೆ. ಶಿಕ್ಷಣ, ಸಂಸ್ಕೃತಿ, ನೀತಿ, ಮೌಲ್ಯಗಳು ಹೇಗೆ ಹೆಂಗಸಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ, ರಾಮಕೃಷ್ಣ ಪರಮಹಂಸರಿಂದ ಹೇಗೆ ಜೀವನ ಸಾರ್ಥಕ್ಯ ಪಡೆದರು ಎಂದು ತಿಳಿಸುವ ಕೃತಿ.

ಇದಲ್ಲದೆ ಇವರು ರಚಿಸಿದ ಕಥೆಗಳ ಸಂಗ್ರಹ ‘ಮಗಳ ಮಾಂಗಲ್ಯ’ (೧೯೫೭). ಈ ಸಂಗ್ರಹದಲ್ಲಿ ನಾಲ್ಕು ಕತೆಗಳಿವೆ. ಅನ್ಯಮತೀಯರೂ ಸಂತಾನಾಪೇಕ್ಷೆಯಿಂದ ಬಾಬಯ್ಯ (ಮುಸ್ಲಿಮ್)ನನ್ನು ಪೂಜಿಸಿ ಸಂತಾನ ಪಡೆಯುವ ‘ಬಾಬಯ್ಯನ ಜಲ್ದಿ’; ಬೇಟೆಗಾರರ ಅನುಭವ ‘ಕೆಂಚಿ ಚೀಲದ ಹಣ್ಣು’; ಮನುಷ್ಯನ ಮಾನಸಿಕ ವ್ಯಾಪಾರಕ್ಕೆ ಸಂಬಂಧಿಸಿದ್ದು, ನಿತ್ಯ ಜೀವನದಲ್ಲಿ ನಡೆಯುವ ಘಟನೆಗಳನ್ನು ಕುರಿತ ಕತೆ ‘ಕಾಸಿಲ್ಲದೆ ಕೈಲಾಸ’ ಮತ್ತು ಬಡತನದಲ್ಲಿ ನೊಂದ ತಂದೆಯೊಬ್ಬ ಅಪರಾಧಿಯೊಬ್ಬನ ನೆರವಿನಿಂದ ಮಗಳ ಮದುವೆಯನ್ನು ನೆರವೇರಿಸುವ ಕಥೆ ‘ಮಗಳ ಮಾಂಗಲ್ಯ’. ಈ ನಾಲ್ಕು ಕತೆಗಳು ಅಂದಿನ ಜೀವನ ಚಿತ್ರಣವನ್ನು ಸೊಗಸಾಗಿ ಕಟ್ಟಿ ಕೊಡುತ್ತವೆ.

ಹೀಗೆ ಒಟ್ಟು ಮೂರು ಕಾದಂಬರಿಗಳು, ಎರಡು ಜೀವನ ಚರಿತ್ರೆಗಳು, ಮೂರು ಪ್ರವಾಸ ಕಥನಗಳು, ಒಂದು ಕಥಾ ಸಂಕಲನವನ್ನು ಪ್ರಕಟಿಸಿರುವ ವೆಂಕಟಯ್ಯನವರ ಕೃತಿಗಳಲ್ಲಿ ದಲಿತರ ಜೀವನದಲ್ಲಿ ಬಂದು ಹೋಗುವ ನೋವಿನ ಚಿತ್ರಣವನ್ನು ಕಾಣಬಹುದು. ಲಕ್ಷ್ಮೀ ಸ್ಮಾರಕ ಗ್ರಂಥಮಾಲೆ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಕೃತಿಗಳನ್ನು ಹೊರತಂದರು. ೧೯೯೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯು ಜಿ.ಆರ್. ತಿಪ್ಪೇಸ್ವಾಮಿಯವರ ಸಂಪಾದಕತ್ವದಲ್ಲಿ ‘ಜಿ. ವೆಂಕಟಯ್ಯ ಸಾಹಿತ್ಯ ವಾಚಿಕೆ’ಯನ್ನು ಪ್ರಕಟಿಸಿದೆ.

ಇವರು ಬರೆದ ‘ಬನದ ಸೆರಗು’ ಪ್ರವಾಸ ಕೃತಿಯು ದ್ವಿತೀಯ ಪಿ.ಯು. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿದ್ದರೆ, ‘ಬುದ್ಧದೇವ’ ಕೃತಿಯು ಹೈಸ್ಕೂಲು ಹತ್ತನೆಯ ತರಗತಿಗೆ ಪಠ್ಯಪುಸ್ತಕವಾಗಿ ನಿಯಮಿತವಾಗಿದ್ದರ ಜೊತೆಗೆ ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೃತಿ, ಇದರ ಇಂಗ್ಲಿಷ್ ಆವೃತ್ತಿಯೂ ೧೯೬೫ರಲ್ಲಿ ಪ್ರಕಟವಾಗಿದೆ.

ದಲಿತ ಸಾಹಿತಿಯೊಬ್ಬನ ಗಮನಾರ್ಹ ಸಾಹಿತ್ಯ ಸೇವೆಯನ್ನು ಪರಿಗಣಿಸಿದ ರಾಜ್ಯ ಸಾಹಿತ್ಯ ಅಕಾಡಮಿಯು ೧೯೭೬ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು.
ಹೀಗೆ ಗ್ರಾಮೀಣ ಜೀವನದ ನೈಜ ಚಿತ್ರಣವನ್ನು, ದಲಿತರ ಒಡಲಾಳದ ನೋವನ್ನು ಸಜೀವವಾಗಿ ಚಿತ್ರಿಸುತ್ತಾ ಬಂದ ವೆಂಕಟಯ್ಯನವರು ಸಾಹಿತ್ಯಲೋಕದಿಂದ ನಿರ್ಗಮಿಸಿದ್ದು ೧೯೭೯ರ ಸೆಪ್ಟೆಂಬರ್ ೨೨ರಂದು.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 3.59 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *