ಜಿ. ಚನ್ನಮ್ಮ (೧೯.೪.೧೯೧೩ – ೨೦.೧.೧೯೮೬): ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಸಬಲರಾಗಬೇಕೆಂದು ಅಪೇಕ್ಷಿಸಿ ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಚನ್ನಮ್ಮನವರು ಹುಟ್ಟಿದ್ದು ತುಮಕೂರಿನಲ್ಲಿ. ತಂದೆ ಸ್ವಾತಂತ್ಯ್ರ ಹೋರಾಟಗಾರರಾದ ಗೌಡಗೆರೆ ಮಡಿವಾಳಯ್ಯ ಗುರುಬಸವಯ್ಯ ನವರು. ತಾಯಿ ವೀಣಾವಾದಕಿ ರಾಜಮ್ಮ. ಸಾಮಾನ್ಯ ಶಿಕ್ಷಣ ಎಸ್.ಎಸ್.ಎಲ್.ಸಿ. ವರೆಗೆ. ಬಾಲ್ಯದಿಂದಲೇ ಮೂಡಿದ ಸಂಗೀತಾಸಕ್ತಿ. ಸರಕಾರದ ವಿದ್ಯಾರ್ಥಿ ವೇತನ ಪಡೆದು, ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ಚಿದಂಬರಂಗೆ ಹೋಗಿ ಪ್ರೊಫೆಸರ್ ಪೊನ್ನಯ್ಯ ಪಿಳ್ಳೆಯವರಲ್ಲಿ ಕಲಿತ ಉನ್ನತ ಸಂಗೀತ ಶಿಕ್ಷಣ. ಅಂದಿನ ಕಾಲದಲ್ಲೇ ಏಕಾಂಗಿಯಾಗಿ ಹೊರನಾಡಿಗೆ ಹೋಗಿ ಕಲಿತ ದಿಟ್ಟ ಹುಡುಗಿ.
ತಮಿಳುನಾಡಿನಿಂದ ಹಿಂದಿರುಗಿ ಬಂದ ನಂತರ ಪ್ರಾರಂಭಿಸಿದ್ದು ’ಗಾನಕಲಾ ಮಂದಿರ’ ಸಂಗೀತ ಶಾಲೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ವಾದನಗಳಿಗೆ ಮೀಸಲಾದ ಈ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು. ಕೆಲ ಕಾಲ ಮುಂಬಯಿಯ ಸೌತ್ ಇಂಡಿಯನ್ ಮ್ಯೂಸಿಕ್ ಅಕಾಡಮಿಯ ನಿರ್ದೇಶಕಿಯಾಗಿ, ಪ್ರೌಢಶಿಕ್ಷಣ ಮಂಡಲಿ ಪರೀಕ್ಷೆಯ ವಿದ್ವತ್ ಗ್ರೇಡಿನ ಮುಖ್ಯಸ್ಥರಾಗಿ, ವಿಶ್ವವಿದ್ಯಾಲಯ ಸಂಗೀತ ಮಂಡಲಿಯ ಮುಖ್ಯಸ್ಥರಾಗಿ, ದೆಹಲಿಯ ಅಖಿಲ ಭಾರತ ಸಂಗೀತ, ನೃತ್ಯ, ನಾಟಕಗಳ ಸಂಸ್ಥೆಗಳ ಪರ ಕೌನ್ಸಿಲರ್ ಆಗಿ ಗಾಯನ ಸಮಾಜ, ಗಾನ ಕಲಾ ಪರಿಷತ್ತಿನ ಸದಸ್ಯರಾಗಿ, ಆಕಾಶವಾಣಿ ಆಡಿಷನ್ ಬೋರ್ಡಿನ ಸದಸ್ಯರಾಗಿ ಸಲ್ಲಿಸಿದ ಸೇವೆ. ಶಿಕ್ಷಣದಲ್ಲಿ ಸಂಗೀತವನ್ನು ಒಂದು ಭಾಗವನ್ನಾಗಿ ಸೇರಿಸಲು ಪಟ್ಟ ಶ್ರಮ. ೧೯೫೧ ರಲ್ಲಿ ಐಚ್ಚಿಕ ವಿಷಯವಾಗಿ ಪರಿಗಣಿಸಿ ಕಾಲೇಜು ಶಿಕ್ಷಣದಲ್ಲಿ ಸೇರ‍್ಪಡೆ.
ಹಲವಾರು ಸಂಗೀತ ಸಭೆ, ಸಂಘ ಸಂಸ್ಥೆಗಳಲ್ಲಿ ನಡೆಸಿಕೊಟ್ಟ ಸಂಗೀತದ ಕಾರ್ಯಕ್ರಮಗಳು. ತ್ಯಾಗರಾಜರ ಆರಾಧನೆ, ರಾಮನವಮಿ, ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್, ಮೈಸೂರು ಮಹಾರಾಜರ ಸಮ್ಮುಖದಲ್ಲಿ ನಡೆಸಿಕೊಟ್ಟ ಸಂಗೀತ ಸುಧೆ. ವೀಣಾವಾದನದಲ್ಲೂ ಸಾಧಿಸಿದ ಅದ್ವಿತೀಯ ಸಾಧನೆ.
ಮಂಗಳೂರಿನ ಶಿಕ್ಷಣ ಸಪ್ತಾಹ ಸಮ್ಮೇಳನದಲ್ಲಿ ಗಾನಕೋಗಿಲೆ, ಡಾ. ಜ.ಚ.ನಿ. ಮಹಾಸ್ವಾಮಿಗಳಿಂದ ಸಂಗೀತ ಶಾರದ, ಸಂಗೀತಾಭಿಮಾನಿಗಳಿಂದ ವೀಣಾಗಾನ ವಿದ್ಯಾವಾರಿಧಿ, ಕರ್ನಾಟಕ ರಾಜ್ಯ ಸರಕಾರದ ರಾಜ್ಯಪ್ರಶಸ್ತಿ, ಬೆಂಗಳೂರಿನ ಗಾಯನ ಸಮಾಜದಿಂದ ಸಂಗೀತ ಕಲಾರತ್ನ ರಂಭಾಪುರಿ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಸಂಗೀತ ಕಲಾಚೂಡಾಮಣಿ ಬಿರುದು ಮುಂತಾದ ಗೌರವ ಸನ್ಮಾನಗಳು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.