ಜನ್ನ

ಕವಿಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ.(ಕಾಲ :ಕ್ರಿ.ಶ.೧೧೮೦-೧೨೬೦)

ತಂದೆ ತಾಯಿಗಳು ,ಮತ್ತು ಪರಿವಾರ :

ಈತನ ತಂದೆ ಶಂಕರ(ಕವಿ ಸುಮನೋಬಾಣ)ನು ಹೊಯ್ಸಳ ನಾರಸಿಂಹನಲ್ಲಿ ದಂಡಾಧೀಶನಾಗಿದ್ದನು ; ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ(ಕ್ರಿ.ಶ.೧೨೪೫) ಜನ್ನನ ತಂಗಿಯನ್ನು ಕೊಟ್ಟು ಮದುವೆಯಾಗಿತ್ತು.ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ(ಮಲ್ಲಿಕಾರ್ಜುನನ ಮಗ).ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು.

ಜೈನಮತೀಯನಾದರೂ, ಅವನ ಸಾಹಿತ್ಯ ಕೃಷಿ, ಸರ್ವಪ್ರಾಕಾರಗಳನ್ನು ವ್ಯಾಪಿಸಿತ್ತು :

ಜನ್ನನು, ಸಿಂದಗಿ ತಾಲೂಕಿನ ಕೊಂಡಗೂಳಿಯಲ್ಲಿ ಹುಟ್ಟಿ, ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ ,ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧,೦೦೦, ತಾಳೆಗರಿಗಳ ಪ್ರತಿಗಳನ್ನು ಬರೆಸಿ,ಉದಾರ ಸಂಭಾವನೆಯೊಂದಿಗೆ ವಿದ್ವಾಂಸರಿಗೆ ಕೊಟ್ಟು, ಗೌರವಿಸಿದನೆಂದು ತಿಳಿದುಬರುತ್ತದೆ. ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು, ಜನ್ನನ ಆಧ್ಯಾತ್ಮಿಕ ಗುರು ಮಕಾಶಿಗಳಾಗಿದ್ದರು.

ಜನ್ನನ ರಚನೆಗಳು :

  • ಜನ್ನನು ಕ್ರಿ.ಶ.೧೨೦೯ರಲ್ಲಿ ಯಶೋಧರ ಚರಿತ್ರೆಯನ್ನು ರಚಿಸಿದನು.
  • ಜನ್ನನ ಎರಡನೆಯ ರಚನೆ ಅನಂತನಾಥಪುರಾಣ ಜೈನರ ೧೪ನೆಯ ತೀರ್ಥಂಕರನಾದ ಅನಂತನಾಥಸ್ವಾಮಿಯ ಜೀವನಚರಿತ್ರೆಯನ್ನು ಕುರಿತದ್ದು.

ಶಾಸನ ರಚನೆಯಲ್ಲಿ ಜನ್ನ ಎತ್ತಿದ ಕೈ :

ಜನ್ನನ ಪ್ರತಿಭೆಯನ್ನು, ಶಾಸನಗಳ ರಚನೆಗೂ ಬಳಸಿಕೊಳ್ಳಲಾಗಿತ್ತು. ಶ್ರೇಷ್ಠಕವಿಯಾದ ಜನ್ನನ ಶಾಸನಗಳು ಒಂದು ಸಂಕಲನ ಗ್ರಂಥವಾಗಿ ಪ್ರಕಟವಾಗಿವೆ.

ಕಾವ್ಯನಾಮ: ಜನ್ನ, ಜನ್ನಯ್ಯ, ಜನ್ನಮಯ್ಯ, ಜನ್ನಿಗ, ಜನ್ನಮರಸ, ಜನಾರ್ಧನದೇವ, ಜಾನಕಿ ಎಂದು ತನ್ನ ಹೆಸರನ್ನೇ ಕವಿ ಹಲವು ಬಗೆಯಾಗಿ ಹೇಳಿಕೊಂಡಿದ್ದಾನೆ.

ವಿದ್ಯಾಭ್ಯಾಸ : ಎರಡನೆಯ ನಾಗವರ್ಮ ಇವನಿಗೆ ಉಪಾಧ್ಯಾಯ. ಇವನ ಗುರು ಗಂಡವಿಮುಕ್ತ ರಾಮಚಂದ್ರದೇವಮುನಿ.

ಸಾಹಿತ್ಯಕೃತಿಗಳು: ಯಶೋಧರ ಚರಿತೆ : ಇದು ನಾಲ್ಕು ಅವತಾರಗಳನ್ನುಳ್ಳ ಚಿಕ್ಕದಾದರೂ ಚೊಕ್ಕವಾಗಿರುವ ಉತ್ಕೃಷ್ಟ ಕಾವ್ಯ. ಇದರಲ್ಲಿ ಮಾರಿದತ್ತನೆಂಬ `ಹಿಂಸಾರಭಸಮತಿ’ಯಾದ ದೊರೆಯನ್ನು ಧರ್ಮಕ್ಕೆ ತಿರುಗಿಸಿದ ಶುಭ ಕಥೆ ಬಂದಿದೆ.

ಸಂಕಲ್ಪಹಿಂಸೆಯೊಂದರಿಂದ ಹಲವು ಹೀನಯೋನಿಗಳಲ್ಲಿ ಹುಟ್ಟಿ ಹಲವು ಕಷ್ಟಸಂಕಟಗಳನ್ನು ಅನುಭವಿಸಿದ ಚಂದ್ರಮತಿ ಯಶೋಧರರೆಂಬ ತಾಯಿ ಮಕ್ಕಳು ಕೋಳಿಗಳಾಗಿದ್ದಾಗ ಜೀನದೀಕ್ಷೆ ವಹಿಸಿದ ನಿಮಿತ್ತದಿಂದ ತಮಗೆ ಮತ್ತೆ ಮಾನುಷಜನ್ಮ ಬಂದು ಅಭಯರುಚಿ ಅಭಯಮತಿಗಳೆಂಬ ಅಣ್ಣತಂಗಿಯರಾಗಿ ಹುಟ್ಟಿದರು.

ಚಂದಮಾರಿ ದೇವತೆಗೆ ಬಲಿ ಕೊಡುವ ಸಲುವಾಗಿ ಅವರನ್ನು ತಳವಾರನು ಹಿಡಿತರಲು ಅಕಸ್ಮಾತ್ ಮಾರಿದತ್ತನಿಗೆ ಅವರ ವಿಷಯದಲ್ಲಿ ಅನುಕಂಪ ಹುಟ್ಟಿ ಅವರ ಚರಿತ್ರೆಯನ್ನು ವಿಚಾರಿಸಲು ಅವರು ತಮ್ಮ ಜನ್ಮಾಂತರ ಕಥೆಯನ್ನೆಲ್ಲಾ ಹೇಳಿದರು. ಅದನ್ನು ಕೇಳಿ ಮಾರಿದತ್ತನಿಗೆ, ಆ ಚಂಡಮಾರಿದೇವತೆಗೂ ಹಿಂಸಾಕರ್ಮದಲ್ಲಿ ಅಸಹ್ಯ ಮೂಡಿತು. ಅವರಿಬ್ಬರೂ ಅಭಯರುಚಿ ಕುಮಾರನಲ್ಲಿ ಅಹಿಂಸೆಯ ದೀಕ್ಷೆ ಕೈಗೊಂಡರು. ಇದಿಷ್ಟು ಕಥೆಯನ್ನು ಅಚ್ಚುಕಟ್ಟಾಗಿ ಕಂದಪದ್ಯಗಳಲ್ಲಿ ಜನ್ನ ನಾಲ್ಕು ಚಿಕ್ಕ ಸಂಧಿಗಳಲ್ಲಿ ಹೇಳಿ ಮುಗಿಸಿದ್ದಾನೆ.

ಆ ಸಂಧಿಗಳಿಗೆ ಅವತಾರಗಳೆಂದೇ ಹೆಸರು. ಸನ್ನಿವೇಶಚಿತ್ರಣ, ಪಾತ್ರಪೋಷಣ, ಮನಸ್ಸಿನ ಧರ್ಮಸಂಕಟಗಳನ್ನು ಹೃದಯಂಗಮವಾಗಿ ಚಿತ್ರಿಸುವಿಕೆ, ಎಲ್ಲದರಲ್ಲಿಯೂ ಜನ್ನ ಈ ಕಾವ್ಯದಲ್ಲಿ ಬಹಳ ಯಶಸ್ವಿಯಾಗಿದ್ದಾನೆ. ಇದನ ಮಧ್ಯೆ ಧರ್ಮಜಿಜ್ಞಾಸೆ, ಭವಾವಳಿಯ ನಿರೂಪಣೆಗಳು ಬಂದಿವೆ. ಈತನ ಕಂದಪದ್ಯಗಳ ಓಟ ಬಹಳ ರಮಣೀಯವಾಗಿದೆ.

ಅನಂತನಾಥ ಪುರಾಣ: ಇದು ಹದಿನಾಲ್ಕನೆಯ ತೀರ್ಥಂಕರನ ಚರಿತ್ರೆ.

ಇದರಲ್ಲಿ ಹದಿನಾಲ್ಕು ಆಶ್ವಾಸನೆಗಳಿವೆ. ಇದರಲ್ಲಿ ತೀರ್ಥಕರ ಭವಾವಳಿಯನ್ನೂ ಪಂಚಕಲ್ಯಾಣಗಳನ್ನೂ ವಿಸ್ತಾರವಾಗಿ ವರ್ಣಿಸಿದ್ದಾನೆ , ಜನ್ನ.

ಕೊನೆಯ ಭಾಗದಲ್ಲಿ ವಸುಷೇಣ ಚಂಡಶಾಸನರ ಕಥೆಯನ್ನು ರಸಮಯವಾಗಿ ಹೇಳಿದ್ದಾನೆ. ಈ ಕಥೆಯಿಂದ ಈ ತೀರ್ಥಂಕರ ಪುರಾಣಕ್ಕೆ ಒಂದು ಹೆಚ್ಚಿನ ಮೆರುಗು ಬಂದಿದೆಯೆಂದು ಹೇಳಬಹುದು. ಜನ್ನನ ಲೋಕಾನುಭವ, ಮನುಷ್ಯ ಸ್ವಭಾವ ಪರಿಜ್ಞಾನ, ಇವು `ಅನಂತನಾಥ ಪುರಾಣ’ದ ಹಲವು ಪಾತ್ರಗಳ ಚಿತ್ರದಲ್ಲಿ ಚೆನ್ನಾಗಿ ಪ್ರಕಾಶಕ್ಕೆ ಬಂದಿದೆ. ಜನ್ನ ತುಂಬುಜೀವನವನ್ನು ಜೀವಿಸಿ ಧರ್ಮಾಚರಣೆಯನ್ನು ಮರೆಯದೆ ಧರ್ಮದ, ನೀತಿಯ ನೆಲಗಟ್ಟನ್ನು ಮೀರದೇ ಇಹಲೋಕದ ಸುಖವನ್ನು ಪರಲೋಕ ಗತಿಯ ಆಶಯವನ್ನೂ ಸಾಧಿಸಿಕೊಳ್ಳಲು ಶ್ರಮಿಸಿದ ಶ್ರೇಷ್ಠವರ್ಗದ ಜೀವನರಸಿಕ. `ಯಶೋಧರ ಚರಿತೆ’ಯಲ್ಲಿಯೂ `ಅನಂತನಾಥ ಪುರಾಣ’ದಲ್ಲಿಯೂ ಜನ್ನನು ಪ್ರಣಯವನ್ನೂ ತದಾಭಾಸವನ್ನೂ ನೈಪುಣ್ಯದಿಂದ ನಿರೂಪಿಸಿದ್ದಾನೆ.

ಜನ್ನನು ಚನ್ನರಾಯಪಟ್ಟಣದ ತಾಮ್ರಶಾಸನವನ್ನು ಕ್ರಿ.ಶ. ೧೧೯೧ರಲ್ಲಿಯೂ ತರೀಕೆರೆಯ ಶಾಸನವನ್ನು ಕ್ರಿ.ಶ. ೧೧೯೭ರಲ್ಲಿಯೂ ಬರೆದನು.

ಕ್ರಿ.ಶ. ೧೨೦೯ರಲ್ಲಿ `ಯಶೋಧರ ಚರಿತೆ’ಯನ್ನು, ಕ್ರಿ.ಶ. ೧೨೩೦ರಲ್ಲಿ `ಅನಂತನಾಥ ಪುರಾಣ’ವನ್ನೂ ರಚಿಸಿದನು.

ಈ ಕವಿಯ ಸಾಹಿತ್ಯ ಸೇವೆ ಕ್ರಿ.ಶ. ೧೧೯೧ ರಿಂದ ಕ್ರಿ.ಶ. ೧೨೩೦ರವರಗೆ ನಲವತ್ತು ವರ್ಷಗಳ ಕಾಲ ನಡೆಯಿತು.

ಜನ್ನ `ಇತ್ತಕೈಯಲ್ಲದೇ ಒಡ್ಡಿದ ಕೈಯಲ್ಲದ ಪೆಂಪು’ ಎಂದು ಹೇಳಿಕೊಂಡಿರುವುದರಿಂದ ಇವನು ಶ್ರೀಮಂತನೂ ಧಾರಾಳಿಯೂ ಆಗಿದ್ದನೆಂದು ತಿಳಿಯಬಹುದು. ಇವನು ದ್ವಾರಸಮುದ್ರದ ಪಾರ್ಶ್ವಜಿನನ ಮಂದಿರದ ದ್ವಾರವನ್ನು ಮಾಡಿಸಿಕೊಟ್ಟನು. ಅನಂತನಾಥ ಸ್ವಾಮಿಗೆ ಒಂದು ಬಸದಿಯನ್ನೇ ಕಟ್ಟಿಸಿದನು. ಇವನು ಹಿಂದಿನ ಕವಿಗಳಲ್ಲಿ ಪಂಪ, ಪೊನ್ನ, ರನ್ನ ನಾಗಚಂದ್ರ ಮೊದಲಾದವರನ್ನು ಹೊಗಳಿದ್ದಾನೆ. ಮಧುರಕವಿಯು ಇವನನ್ನು ನೇಮಿಚಂದ್ರನ ಜತೆಗೆ ಸೇರಿಸಿ `ನೇಮಿ ಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್’ ಎಂದು ಕೊಂಡಾಡಿದ್ದಾನೆ.

ಪ್ರಶಸ್ತಿ, ಪುರಸ್ಕಾರ, ಬಿರುದು:  ಇವನು `ನಾೞ್ಪ್ರಭು’ವೂ ಆಗಿದ್ದನಂತೆ! `ಜಿನೇಂದ್ರ ನಿಲಯ ನಿರ್ಮಾಣಧನಂ’ ಎಂದು ಹೇಳಿಕೊಂಡಿರುವ ಜನ್ನನು ಶ್ರೀಮಂತನಾಗಿದ್ದನೆಂದು ತಿಳಿಯಬೇಕು.

ಇವನಿಗೆ `ಕವಿಚಕ್ರವರ್ತಿ’, ‘ಕವಿ ಭಾಳನೇತ್ರಂ’, `ಉದ್ದಂಡಕವಿ’ `ಅಸಹಾಯ ಸುಕವಿ’, `ಸಾಹಿತ್ಯ ರತ್ನಾಕರಂ’ ಎಂಬ ಬಿರುದುಗಳಿವೆ.
http://www.kannadakavi.com/kavikoota/2nadukavi/janna.htm

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 3.34 ( 17 votes)

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕುಮಾರವ್ಯಾಸ

ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. …

Leave a Reply

Your email address will not be published. Required fields are marked *