ಚಿ.ನ. ಮಂಗಳಾ (೧೦.೪.೧೯೩೮ – ೩೦.೫.೧೯೯೭): ಶಿಕ್ಷಣ ತಜ್ಞೆ ಚಿ.ನ. ಮಂಗಳಾರವರು ಹುಟ್ಟಿದ್ದು ಬೆಂಗಳೂರು. ತಂದೆ ಸಿ. ನರಸಿಂಹಮೂರ್ತಿ, ತಾಯಿ ರಾಜೇಶ್ವರಿ. ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರು. ಎಸ್.ಎಸ್.ಎಲ್.ಸಿ. ಓದಿದ್ದು ಮಂಡ್ಯ. ತಂದೆ ಮುಖ್ಯ ಕಾರ‍್ಯದರ್ಶಿಯಾಗಿದ್ದರಿಂದ ಮಡಿಕೇರಿಗೆ ವರ್ಗ. ಕಾಲೇಜಿಗೆ ಸೇರಿದ್ದು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್. ನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್ (ಇಂಗ್ಲಿಷ್) ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. ಪದವಿ. ಪದವಿ ಗಳಿಸಿದ ನಂತರ ಅಧ್ಯಾಪಕಿಯಾಗಿ ೧೯೫೯ರಲ್ಲಿ ಸೇರಿದ್ದು ಬೆಂಗಳೂರಿನ ಎ.ಪಿ.ಎಸ್. ಕಾಲೇಜು.
ದೆಹಲಿಯ ಅಮೆರಿಕ ಶಿಕ್ಷಣ ಪ್ರತಿಷ್ಠಾನ, ವಾಷಿಂಗ್‌ಟನ್ ವಿದ್ವಾಂಸರ ಅಂತಾರಾಷ್ಟ್ರೀಯ ವಿನಿಮಯ ಪರಿಷತ್ತು, ಬ್ರಿಟಿಷ್ ಕೌನ್ಸಿಲ್‌ಗಳ ಸಹಯೋಗದಿಂದ ವಿದೇಶದಲ್ಲಿನ ವಿದ್ಯಾಭ್ಯಾಸ ಪದ್ಧತಿ ಅಧ್ಯಯನ ಮಾಡಲು ೧೯೮೨ರಲ್ಲಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಪ್ರವಾಸ. ೧೯೮೪ರಲ್ಲಿ ಮತ್ತೆ ಅಮೆರಿಕ, ಇಂಗ್ಲೆಂಡ್ ಪ್ರವಾಸದ ಜೊತೆ ಯುರೋಪಿನ ಆಸ್ಟ್ರಿಯ, ಬೆಲ್ಜಿಯಂ, ಲಕ್ಸನ್‌ಬರ್ಗ, ಫ್ರಾನ್ಸ್, ಇಟಲಿ, ಸ್ವಿಟ್ಸರ್‌ಲೆಂಡ್ ಭೇಟಿ. ಅಲ್ಲಿನ ಶಿಕ್ಷಣ ಕ್ಷೇತ್ರದಿಂದ ಗಳಿಸಿದ ಅನುಭವ ಅಪಾರ.
ನಂತರ ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ಪ್ರಾರಂಭಿಸಿದ ನಾಗರತ್ನಮ್ಮ ಮೇಡಾ ಕಸ್ತೂರಿ ರಂಗಶೆಟ್ಟಿ ರಾಷ್ಟ್ರೀಯ ವಿದ್ಯಾಲಯ ಮಹಿಳಾ ಕಾಲೇಜಿನ (N.M.K.R.V) ಪ್ರಾಂಶುಪಾಲರ ಹುದ್ದೆ. ೧೯೭೧ರಿಂದ. ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ವಿಶ್ವವಿದ್ಯಾಲಯ ಎಲ್ಲರೊಡನೆ ಉತ್ತಮ ಸಂಬಂಧ. ಈ ಅನುಭವದಿಂದ ರಚಿಸಿದ ಅಧ್ಯಾಪಕಿಯಾಗಿ ೨೫ ವರ್ಷ ಮತ್ತು ಪ್ರಾಂಶುಪಾಲರಾಗಿ ೨೦ ವರ್ಷ ಕೃತಿ ರಚನೆ. ಸರ್ಕಾರಿ ಧೋರಣೆ, ವಿಶ್ವವಿದ್ಯಾಲಯದಲ್ಲಿ ಕುಗ್ಗುತ್ತಿರುವ ವಿದ್ಯಾಭ್ಯಾಸದ ಮಟ್ಟ, ವಿದ್ಯಾರ್ಥಿನಿಯರ ಅಪೇಕ್ಷೆ, ಆಶೋತ್ತರಗಳು, ಪೋಷಕರ ಅಸಹಾಯಕತೆ ಇವೆಲ್ಲದರ ಅವಲೋಕನ ನಡೆಸುವ ವಿಶಿಷ್ಟ ಕೃತಿಗಳು.
ಕನ್ನಡದ ಮೊದಲ ಪತ್ರಕರ್ತೆ, ಸಾಹಿತಿ, ಪ್ರಕಾಶಕಿ, ತಿರುಮಲಾಂಬ ನೆನಪಿಗಾಗಿ ಸ್ಥಾಪಿಸಿದ್ದು ಶಾಶ್ವತಿ ಸಂಸ್ಥೆ. ವಸ್ತು ಸಂಗ್ರಹಾಲಯ, ಮಹಿಳಾ ಅಧ್ಯಯನ ಕೇಂದ್ರ. ಪ್ರತಿವರ್ಷ ಭಾರತೀಯ ಭಾಷಾ ಲೇಖಕಿಯರಿಗೆ ತಿರುಮಲಾಂಬ ಪ್ರಶಸ್ತಿ. ಸಂದ ಪ್ರಶಸ್ತಿಗಳು-ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಆರ‍್ಯಭಟ ಪ್ರಶಸ್ತಿ, ರಾಜ್ಯ ಸರಕಾರದ ಬಹುಮಾನ, ಮಲ್ಲಿಕಾ ಪ್ರಶಸ್ತಿ (ಕ.ಸಾ.ಪ), ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದವು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.