[SBMAP ID=”2″]
“ಚಿತ್ರದುರ್ಗ” ಕರ್ನಾಟಕದ ಒಂದು ಜಿಲ್ಲೆ. ಐತಿಹಾಸಿಕ ಸ್ಥಳವೂ ಹೌದು. ಹಿಂದೊಮ್ಮೆ ದಾವಣಗೆರೆ ಜಿಲ್ಲೆಯೂ ಈ ಜಿಲ್ಲೆಗೇ ಸೇರಿತ್ತು. ಚಿತ್ರದುರ್ಗದ ವೈವಿಧ್ಯಕ್ಕೆ ಮನಸೋತ ಜನರು ಇದನ್ನು ‘ಚಿತ್ರ-ವಿಚಿತ್ರ ಚಿತ್ರದುರ್ಗ’ ಎಂದು ಕರೆದದ್ದುಂಟು.
ಇತಿಹಾಸ
ಇತಿಹಾಸದಲ್ಲಿ ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ.
ವಿಜಯನಗರದ ಕಾಲದಲ್ಲಿ ತಿಮ್ಮಣ್ಣ ನಾಯಕನೆಂಬ ಸೇನಾಪತಿಗೆ ತನ್ನ ಪರಾಕ್ರಮಕ್ಕೆ ಮೆಚ್ಚಿದ ವಿಜಯನಗರದ ಚಕ್ರಾಧಿಪತ್ಯದಿಂದ ಚಿತ್ರದುರ್ಗಕ್ಕೆ ರಾಜ್ಯಪಾಲನಾಗಿ ಬಳುವಳಿ ದೊರೆಯಿತಂತೆ. ಇವನ ಮಗ ಓಬಣ್ಣ ಅಥವಾ ಮದಕರಿ ನಾಯಕ. ಮದಕರಿ ನಾಯಕನ ಮಗ ಕಸ್ತೂರಿ ರಂಗಪ್ಪ ಇವನ ಆಳ್ವಿಕೆಯನ್ನು ಶಾಂತಿಯಿಂದ ಮುಂದುವರೆಸಿದನು. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ತೆಗುದುಕೊಂದನಂತೆ. ಆದರೆ ದಳವಾಯಿಗಳು ಮಗುವನ್ನು ಕೊಲ್ಲಿಸಿದರಂತೆ. ಚಿಕ್ಕಣ್ಣ ನಾಯಕ – ಮದಕರಿ ನಾಯಕನ ತಮ್ಮ ೧೬೭೬ರಲ್ಲಿ ಗದ್ದುಗೆ ಏರಿದನಂತೆ. ಇದರ ಬಳಿಕ ಬಹಳಷ್ಟು ಮಂದಿ ಗದ್ದುಗೆ ಏರಿ ಇಳಿದರಾದರೂ ಹೇಳಿಕೊಳ್ಳುವಂತಹ ರಾಜ್ಯಭಾರ ಯಾವುದೂ ಇರಲಿಲ್ಲವೆಂದು ಸಾಧಾರಣ ಅಭಿಪ್ರಾಯ.
ಇಸಿಲಇದು ಚಿತ್ರದುರ್ಗದ ಈಶಾನ್ಯ ದಿಕ್ಕಿಗಿರುವ ಬ್ರಹ್ಮಗಿರಿಗೆ ಹೊಂದಿಕೊಂಡಿದೆ. ಅಶೋಕನ ಕಾಲದಲ್ಲಿ ಪ್ರಾಂತೀಯ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಇಟ್ಟಿಗೆಯಲ್ಲಿ ನಿರ್ಮಿಸಿದ ಚೈತ್ಯಾಲಯವೊಂದು ಇಲ್ಲಿದೆ. ಅಶೋಕನ ಶಾಸನದಲ್ಲಿ ಇಸಿಲ ಎಂಬ ಶಬ್ಧ ದೊರಕುತ್ತದೆ.
ಸಿದ್ಧಾಪುರ ಇಲ್ಲಿ ಅಶೋಕನ ಶಾಸನ ದೊರಕಿದೆ.
ಒನಕೆ ಓಬವ್ವ
ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ ಕಾವಲುಗಾರನ ಹಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಪಟ್ಟಣದಲ್ಲಿರುವ ಕಲ್ಲಿನ ಕೋಟೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಚಿತ್ರದುರ್ಗ ಕೋಟೆ ಎಂತಲೆ ಕರೆಯಲ್ಪಡುವ ಈ ಪ್ರಖ್ಯಾತ ಕೋಟೆಯು ಇಂದಿಗೂ ಸಹ ಇತಿಹಾಸ ಪ್ರಿಯ ಪ್ರವಾಸಿಗರ ಅತಿ ನೆಚ್ಚಿನ ಸ್ಥಳವಾಗಿ ಕಂಗೊಳಿಸುತ್ತದೆ. ಇದರ ಇತಿಹಾಸವನ್ನು ಸಂಕ್ಷೀಪ್ತವಾಗಿ ಕೆದಕಿದಾಗ ನಮಗೆ ತಿಳಿಯುವುದೇನೆಂದರೆ ಅಗಾಧವಾದ ಈ ಏಳು ಸುತ್ತಿನ ಕಲ್ಲಿನ ಕೋಟೆಯು ಒಂದೆ ಸಮಯದಲ್ಲಿ ನಿರ್ಮಾಣವಾಗದೆ ಕಾಲದ ಹಲವು ಸ್ತರಗಳಲ್ಲಿ ವಿವಿಧ ಆಡಳಿತಗಾರರ ಸುಪರ್ದಿಯಲ್ಲಿ ಹಂತ ಹಂತವಾಗಿ ನಿರ್ಮಾಣಗೊಂಡಿದೆ.
ಇದರ ನಿರ್ಮಾಣದಲ್ಲಿ ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮೈಸೂರು ರಾಜರ ಅಧೀನದಲ್ಲಿದ್ದ ನಾಯಕರು ಅಥವಾ ಪಾಳೇಗಾರರು ಹೆಚ್ಚಾಗಿ ತಮ್ಮ ಕೊಡುಗೆಯನ್ನು ಈ ಕೋಟೆಯ ನಿರ್ಮಾಣದಲ್ಲಿ ಧಾರೆ ಎರೆದಿದ್ದಾರೆ. ನಂತರ ನಾಯಕರ ಕೊನೆಯ ಅರಸನಾಗಿದ್ದ ಮದಕರಿ ನಾಯಕನ ನಂತರ ಹೈದರಾಲಿ ಹಾಗೂ ಆತನ ಮಗನಾದ ಟಿಪ್ಪು ಈ ಕೋಟೆಯನ್ನು ತಮ್ಮೆ ತೆಕ್ಕೆಗೆ ತೆಗೆದುಕೊಂಡರು.
15 ರಿಂದ 18 ನೇಯ ಶತಮಾನದ ಮಧ್ಯದಲ್ಲಿ ನಿರ್ಮಾಣಗೊಂಡ ಈ ಕೋಟೆಯು ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿದ್ದು ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತದೆ. ಶತ್ರುಗಳನ್ನು ತನ್ನ ಒನಕೆಯಿಂದ ಸೆದೆ ಬಡಿದೆ ಒಬವ್ವ ಎಂಬ ವೀರ ಮಹಿಳೆಯ ಕಥೆಯು ಈ ಕೋಟೆಯ ಜೊತೆ ನಂಟು ಹಾಕಿಕೊಂಡಿದೆ. ಇಂದಿಗೂ ಒಬವ್ವನ ಖಿಂಡಿ ಎಂಬ ರಂಧ್ರವನ್ನು ಕೋಟೆಯ ಗೋಡೆಯಲ್ಲಿ ಕಾಣಬಹುದು.
ಚಿತ್ರದುರ್ಗ ಬೆಂಗಳೂರಿನಿಂದ ಸುಮಾರು 205 ಕಿ.ಮೀ ಗಳಷ್ಟು ಅಂತರದಲ್ಲಿದ್ದು ಬಸ್ಸು ಹಾಗೂ ರೈಲಿನ ಮೂಲಕ ಸುಲಭವಾಗಿ ತೆರಳಬಹುದು. ಪುಣೆ ನಗರವನ್ನು ಬೆಂಗಳೂರಿನಿಂದಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರ ಮೂಲಕ ನೇರವಾಗಿ ಚಿತ್ರದುರ್ಗವನ್ನು ತಲುಪಬಹುದು.
ಚಿತ್ರದುರ್ಗದ ಪ್ರಮುಖ ಪ್ರವಾಸಿ ಸ್ಥಳಗಳು
- ಏಳು ಸುತ್ತಿನ ಕೋಟೆ
- ಚ೦ದ್ರವಳ್ಳಟ
- ಮುರುಘಾ ಮಠ
- ಉಪ್ಪಾರಹಟ್ಟಿ
- ಜೋಗಿಮಟ್ಟಿ
- ಬೋರನ ಕಣಿವೆ ಅಥವಾ ವಾಣಿವಿಲಾಸ ಸಾಗರ
- ಹಾಲುರಾಮೇಶ್ಪರ
- ನಾಯಕನಹಟ್ಟಿ
- ಆಡು ಮಲ್ಲೇಶ್ವರ
- ಗವಿ ರಂಗಾ
ಚಿತ್ರದುರ್ಗ ಜಿಲ್ಲೆಯೆ ತಾಲ್ಲೂಕುಗಳು
- ಚಿತ್ರದುರ್ಗ
- ಹಿರಿಯೂರು
- ಚಳ್ಳಕೆರೆ
- ಮೊಳಕಾಲ್ಮೂರು
- ಹೊಸದುರ್ಗ
- ಹೊಳಲ್ಕೆರೆ
ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.
ಆಧಾರ: ವಿಕಿಪೀಡಿಯ, nativeplanet
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.