ಚಿಂಟು ಒಂದು ದಿವಸ ಸಾಯಂಕಾಲ ಟೆರೇಸಿನಲ್ಲಿ ಒಬ್ಬನೇ ಆಕಾಶವನ್ನು ನೋಡುತ್ತ ಕುಳಿತಿದ್ದ. ಆಗ ಒಂದು ಮೋಡ ಅವನ ಸನಿಹ ಬಂದಿತು. ಚಿಂಟು ಆಶ್ಚರ್ಯದಿಂದ “ನೀನ್ಯಾರು?” ಎಂದು ಅದನ್ನು ಕೇಳಿದ. ಅದು “ನಾನು ಮೋಡ ಎಂದಿತು.” “ಏನು ನಿನ್ನ ಕೆಲಸ?” ಎಂದು ಚಿಂಟು ಮೋಡಕ್ಕೆ ಕೇಳಿದ. ಮೋಡ ನಗುತ್ತ “ಆಗಸದಲ್ಲಿ ತೇಲುತ್ತಾ ತಿರುಗುವುದು. ಎಲ್ಲಿ ನೀರಿನ ಅವಶ್ಯಕತೆ ಇದೆಯೋ ಅಲ್ಲಿ ಮಳೆ ಸುರಿಯುವುದು ನನ್ನ ಕೆಲಸ” ಎಂದಿತು. ಚಿಂಟು “ಎಷ್ಟು ಹಣಕ್ಕೆ ನೀನು ಮಳೆ ಸುರಿಸುತ್ತಿ, ಯಾಕೆಂದರೆ ನಮ್ಮಲ್ಲಿ ಹನಿ ಹನಿ ನೀರಿಗೂ ಬೆಲೆ ಇದೆ” ಎಂದ. ಆಗ ಮೋಡ “ನೀರಿಗೆ ಹಣ ತೆಗೆದುಕೊಳ್ಳಲು ನಾನು ಸ್ವಾರ್ಥಿ ಮನುಷ್ಯರಂತಲ್ಲ. ಮಳೆ ಸುರಿಸುವುದಷ್ಟೆ ನನ್ನ ಕೆಲಸ, ಅದರ ಉಪಯೋಗ ತೆಗೆದುಕೊಳ್ಳುವುದು ಮನುಷ್ಯರಿಗೆ ಬಿಟ್ಟಿದ್ದು” ಎಂದಿತು.
ಚಿಂಟು “ಈಗ ನೀ ಬೆಳ್ಳಗೆ ಇರುವೆ; ಆಗಾಗು ನೀನು ಕಪ್ಪು ಬಣ್ಣದಲ್ಲೂ ಕಾಣಿಸುವೆ. ಅದು ಹೇಗೆ?” ಎಂದು ಕೇಳಿದ. “ನನ್ನಲ್ಲಿ ನೀರಿಲ್ಲದಾಗ ನಾನು ಬಿಳಿಚಿಕೊಂಡು ಬೆಳ್ಳಗೆ ಕಾಣುತ್ತೇನೆ. ನನ್ನಲ್ಲಿ ನೀರು ತುಂಬಿಕೊಂಡಾಗ ನಾನು ಕಪ್ಪಾಗಿ ಕಾಣಿಸಿಕೊಳ್ಳುತ್ತೇನೆ” ಎಂದಿತು ಮೋಡ. “ಈಗ ನೀನು ಎಲ್ಲಿಗೆ ಹೊರಟಿರುವೆ?” ಎಂದು ಚಿಂಟು ಕೇಳಿದ. ಆಗ ಮೋಡ “ಎಲ್ಲಿಗೆ ಎಂದು ನಿರ್ದಿಷ್ಟವಾಗಿ ಹೇಳಲಾರೆ. ಗಾಳಿ ನನ್ನನ್ನು ಓದಿಸಿಕೊಂಡು ಹೋದ ಕಡೆ ನಾನು ಹೋಗುತ್ತೇನೆ; ಮಳೆ ಸುರಿಸುತ್ತೇನೆ” ಎಂದಿತು. ನೂರಾರು ವರ್ಷಗಳಿಂದ ಹೀಗೆ ಓಡಾಡುತ್ತಿರುವೆ ನೀನು. ನಿನಗೆ ಬೇಸರವಾಗುವದಿಲ್ಲವೇ?” ಎಂದು ಚಿಂಟು ಕೇಳಿದಾಗ ಮೋಡ “ಮೈ ತುಂಬಿಕೊಳ್ಳುವುದು, ಮಳೆ ಸುರಿಸುವುದು ನನ್ನ ಕರ್ತವ್ಯ. ನಾನು ನನ್ನ ಕರ್ತವ್ಯಕ್ಕೆ ಎಂದೂ ವಿಮುಖನಾಗುವುದಿಲ್ಲ. ಆದರೆ, ನಾನು ಸುರಿಸಿದ ಮಳೆಯನ್ನು ಸರಿಯಾಗಿ ಉಪಯೋಗಿಸುವುದು ನಿಮ್ಮ ಕರ್ತವ್ಯ” ಎಂದಿತು.
“ನಾನು ಸುರಿಸುವ ಮಳೆಯಿಂದ ಗಿಡ, ಮರ, ಬೆಳೆಸುವುದು, ಕಾಡು, ಗುಡ್ಡ, ಬೆಟ್ಟ ರಕ್ಷಿಸುವುದು, ಹರಿಯುವ ನದಿ ನೀರನ್ನು ದುರ್ಬಳಕೆ ಆಗದಂತೆ ನೋಡಿಕೊಳ್ಳುವುದು ಮನುಷ್ಯರ ಕರ್ತವ್ಯ. ನಾನು ಮಳೆ ಸುರಿಸುವುದು ಪರಿಸರ ರಕ್ಷಣೆಗಾಗಿ, ಪ್ರಾಣಿ, ಪಕ್ಷಿ ಮನುಷ್ಯರ ಅವಶ್ಯಕತೆಗಳಿಗಾಗಿ. ಕಾಡು ಕಡಿದು, ಗುಡ್ಡ ಬೆಟ್ಟ ಅಗೆದು ಪರಿಸರ ಹಾಲು ಮಾಡುವುದಕ್ಕಲ್ಲ. ಈಗಂತೂ ಹಾಗೆ ಆಗುತ್ತಿದೆ. ಹೀಗೆಯೇ ಇದು ಮುಂದುವರೆದರೆ ಭೂಮಿಗೆ ಮಳೆ ಸುರಿಸುವ ಶಕ್ತಿ ನನ್ನಲ್ಲಿ ಕ್ಷೀಣವಾಗುತ್ತದೆ. ಆಗ ಜೀವಸಂಕುಲಕ್ಕೆ ಕುಡಿಯಲು ಸಹ ನೀರು ಸಿಗದಂತಾಗಬಹುದು. ಪರಿಸರ ಸಂಪದ್ಭರಿತವಾಗಿದ್ದಾರೆ ಮಳೆ ಸುರಿಸಲು ನನಗೆ ಬಹಳ ಅನುಕೂಲ” ಎಂದಿತು ಮೋಡ.
ಆಗ ಚಿಂತುಗೆ ಅರ್ಥವಾಯಿತು, ಪರಿಸರ ಆಳು ಮಾಡಿದರೆ ಎಂತಹ ಅನರ್ಥ ಆಗುತ್ತದೆಯೆಂದು. ಆಗ ಆತ “ನೀನು ನನಗೆ ಎಲ್ಲ ವಿವರಿಸಿ ಹೇಳಿ ತುಂಬಾ ಉಪಕಾರ ಮಾಡಿದೆ. ಪರಿಸರ ಕಾಪಾಡಲು ನಾನು ಪಣತೊಡುತ್ತೇನೆ” ಎಂದಾಗ ಮೋಡಕ್ಕೆ ಖುಷಿಯಾಯ್ತು. ಅಷ್ಟರಲ್ಲಿ ಗಾಳಿ ಬಿಸರಾರಂಭಿಸಿತು. ಮೋಡ ಚಿಂತುಗೆ ಟಾ ಟಾ ಮಾಡಿ ಗಾಳಿಯೊಡನೆ ಪ್ರಯಾಣ ಮುಂದುವರೆಸಿತು.
ಆಧಾರ: ವಿಶ್ವನಾಥ ಕೋಟಿ
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.