Wednesday , 22 May 2024
Baadaami Chaalukyara Vijayastambagalu

ಬಾದಾಮಿ ಚಾಲುಕ್ಯರು : ಬಾದಾಮಿ ಚಾಲುಕ್ಯರ ವಿಜಯಸ್ತಂಭಗಳು

ಪುರಾತನದಿಂದಲೂ ನಮ್ಮ ಶಿಲ್ಪಶಾಸ್ತ್ರದಲ್ಲಿ ಕಂಬಗಳ ಪ್ರಸ್ತಾವನೆ ಬಂದಿದೆ. ಋಗ್ವೇದದಲ್ಲಿ ‘ಸ್ಥೂನ’ ಎಂಬ ಪದವನ್ನೂ, ‘ಉಪ ಮಿತ್’ ಎಂಬ ಪದವನ್ನು ಋಗ್ವೇದ ಹಾಗೂ ಅಥರ್ವಣ ವೇದಗಳಲ್ಲೂ, ಶಿವನನ್ನು ಚರಾಚರವಸ್ತುಗಳನ್ನು ಹಿಡಿದು ನಿಲ್ಲಿಸಿರುವ ಸ್ತಂಭವೆಂದೂ, ಕಟಕ ಸಂಹಿತದಲ್ಲಿ ‘ಸ್ತಂಭ’ವೆಂಬ ಪದವನ್ನೂ ಉಪಯೋಗಿಸಲಾಗಿದೆ.

‘ಸ್ತಭ್’ ಧಾತುವಿನಿಂದ ಉತ್ಪತ್ತಿಯಾಗಿರುವ ‘ಸ್ತಂಭ’ವು ಹಿಡಿ, ನಿಲ್ಲಿಸು, ಆಧರಿಸು ಎಂಬ ಅರ್ಥವನ್ನು ಕೊಡುತ್ತದೆ. ‘ವಿಜಯಸ್ಥಂಭ’ ‘ವಿಜಯದ ಕೀರ್ತಿಯನ್ನು ನಿಲ್ಲಿಸು ವಂತಹದು. ಕಂಬಕ್ಕೆ ಸ್ತಂಭ, ಸ್ಕಂಭ, ಸ್ಥಾನು, ಜಂಘಾ, ಅಂಗ್ರಿಕಾ, ಚರಣ, ಪಾದ, ಧನಾ, ಸ್ಥೂಲಿ, ಭಾರಕ, ಅರಣಿ, ಧಾರ ಎಂದು ಅನೇಕ ಹೆಸರುಗಳಿವೆ.

ಕಂಬವನ್ನು ಧ್ವಜಸ್ತಂಭ, ಗರುಡಗಂಬ, ನಂದಿಕಂಬ, ಮಾನಸ್ತಂಭ, ದೀಪಮಾಲೆಸ್ತಂಭ, ಗಂಡಭೇರುಂಡ ಕಂಬ, ಯೂಪಸ್ತಂಭ, ವಿಜಯಸ್ತಂಭಗಳೆಂದು ಬೇರೆ ಬೇರೆ ಕಾರಣಗಳಿಗಾಗಿ ನಿಲ್ಲಿಸಿರುವರು. ‘ವಿಜಯಸ್ತಂಭ’ವೊಂದನ್ನು ಬಿಟ್ಟು, ಇತರ ಸ್ತಂಭಗಳ ವಿಷಯದಲ್ಲಿ ‘ಮಲ್ಲಾರ’ ಎಂಬ ಮಾಸಪ್ರತಿಕೆಯಲ್ಲಿ, ಶ್ರೀ ತಿರುಮಲೆ ರಂಗಾಚಾರ್ಯರ ಲೇಖನ ಮಾಲೆಗಳು ಬಂದಿವೆ.

ಇತಿಹಾಸದುದ್ದಕ್ಕೂ ವೀಕ್ಷಿಸಿದಾಗ ರಾಜರುಗಳಲ್ಲಿ ಯುದ್ಧಗಳು ನಡೆಯುತ್ತಲೇ ಬಂದಿವೆ. ಜಯವನ್ನು ಪಡೆದ ರಾಜರು ತಮ್ಮ ವಿಜಯದ ಸ್ಮರಣಾರ್ಥವಾಗಿ, ಚೌಕಾಕಾರದ ವೇದಿಕೆಯ ಮೇಲೆ ಕಂಬಗಳನ್ನು ನಿಲ್ಲಿಸುತ್ತಿದ್ದರು. ಇದನ್ನು ಜಯಸ್ತಂಭ, ಕೀರ್ತಿಸ್ತಂಭ, ರಣಗಂಭ, ವೀರಸ್ತಂಭ, ವಿಜಯಸ್ತಂಭ ಅಥವಾ ತೊಲಗದ ಕಂಬ ಎಂದು ಕರೆಯುತ್ತಿದ್ದರು. ‘ತೊಲಗದ ಕಂಬ’ ಎಂದು ಕರೆಯಲು ಕಾರಣವೇನು? ತೊಲಗು = ಹೋಗು, ಬಿಡು, ನಾಶವಾಗು. ತೊಲಗದ=ತೊಲಗದೇ ಇರುವ ರಾಜರು ಆಚಂದ್ರಾರ್ಕವಾಗಿ ತಮ್ಮ ಕೀರ್ತಿ ತೊಲಗದೇ ಇರಲಿ, ಉಳಿಯಲಿ ಎಂಬ ಆಶಯದಿಂದ ನೆಟ್ಟ ಕಂಬವಾದ್ದರಿಂದ, ಈ ಹೆಸರನ್ನು ಕೊಟ್ಟಿರಬಹುದು. ಇದು ನನ್ನ ಊಹೆ.

ಶಾಸನಗಳಲ್ಲಿ ‘ವಿಜಯಸ್ತಂಭ’ದ ಉಲ್ಲೇಖವಿರುವುದು ಅತಿ ವಿರಳ. ಆದರೆ ಕೆಲವು ಲೇಖನಗಳಿಂದಲೂ, ಸಂಸ್ಕೃತ ಕೃತಿಗಳಿಂದಲೂ, ಕರ್ನಾಟಕದ ದೊರೆಗಳು, ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರನಾಡಿನಲ್ಲಿಯೂ ಜಯಗಳಿಸಿ ‘ವಿಜಯ ಸ್ತಂಭ’ಗಳನ್ನು ನೆಟ್ಟಿರುವುದು ತಿಳಿದುಬರುತ್ತದೆ.

ಒಬ್ಬ ರಾಜ ಹಾಕಿಸಿದ ವಿಜಯಸ್ತಂಭವನ್ನು, ಕಾಲಾಂತರಗಳಲ್ಲಿ, ಜಯ ಗಳಿಸಿದ ಮತ್ತೊಬ್ಬ ರಾಜನು, ಮೊದಲನೆಯದನ್ನು ಕೆಡವಿಯೋ, ನಾಶ ಮಾಡಿಯೋ ತನ್ನ ವಿಜಯದ ಕುರುಹನ್ನು ಬೇರೆ ರೀತಿಯಲ್ಲಿ ನೆಡುತ್ತಿದ್ದನು. ಕೆಲವು ವೇಳೆೆ, ಕಾಲಾಂತರಗಳಿಂದ ಕಲ್ಲಿನ ಕಂಬಗಳು ತುಂಡಾತುಂಡಾಗಿವೆ. ಹೀಗಾಗಿ, ವಿಜಯಸ್ತಂಭಗಳನ್ನು ನೆಟ್ಟ ಉದಾಹರಣೆಗಳು ಇದ್ದರೂ, ಈಗ ಕಾಣಲು ಸಿಗದು. ವಿಜಯಸ್ತಂಭಗಳು ಚೌಕ, ಪಂಚಕೋನ, ಷಟ್ಕೋನ, ಅಷ್ಟಕೋನಾಕೃತಿಗಳಲ್ಲೂ, ಹದಿನಾರು, ಮೂವತ್ತೆರಡು ಪಟ್ಟಿಕೆಗಳಲ್ಲೂ ಇರುತ್ತವೆ. ಇವುಗಳ ಮೇಲೆ ಯಾವ ಅಲಂಕಾರಗಳೂ ಇಲ್ಲದೆ, ಬಹಳ ಸರಳವಾಗಿರುತ್ತವೆ. ಕೆಲವು ಕಂಬಗಳ ಪೀಠಗಳಲ್ಲಿ ಶಾಸನಗಳನ್ನು ಕಾಣಬಹುದು.

ಕರ್ನಾಟಕದ ದೊರೆಗಳೂ, ಕೆಲವು ಪಾಳೆಯಗಾರರೂ ಉತ್ತರ-ದಕ್ಷಿಣಗಳಲ್ಲಿ ತಮ್ಮ ಪ್ರತಾಪಗಳನ್ನು ತೋರಿಸಿ ಮಹಾರಾಷ್ಟ್ರ, ಗುಜರಾತ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳಗಳಲ್ಲಿ ಜಯಸ್ತಂಭಗಳನ್ನು ನೆಟ್ಟಿರುವ ಉದಾಹರಣೆಗಳು ನಮಗೆ ದೊರೆತಿವೆ.

ವಿಜಯಸ್ತಂಭವನ್ನು ನೆಡುವ ಪ್ರತೀತಿಯನ್ನು ಹಾಕಿದವರಲ್ಲಿ ಬಾದಾಮಿ ಚಾಲುಕ್ಯರೇ ಮೊದಲಿಗರೆನ್ನಬಹುದು. ಕ್ರಿ.ಶ. ೫೯೯ರಲ್ಲಿ ಮಹಾಕೂಟದಲ್ಲಿ ನೆಟ್ಟ ಜಯಸ್ತಂಭವೇ ಮೊದಲನೆಯದು, ಮಂಗಳೀಶನೇ ಮೊದಲಿಗನೆನ್ನಬಹುದು. ಮಹಾಕೂಟದಲ್ಲಿ ಬಿದ್ದುಹೋಗಿದ್ದ ಈ ಸ್ತಂಭವನ್ನು ಕರ್ನಾಟಕದ ಪುರಾತತ್ವ ಇಲಾಖೆಯವರು ಬಿಜಾಪುರದ ವಸ್ತುಸಂಗ್ರಹಾಲಯದಲ್ಲಿ ತಂದು ಸುರಕ್ಷಿತವಾಗಿ ಇಟ್ಟಿದ್ದಾರೆ. ಈ ಕಂಬವು ಕೆಂಪು ಕಲ್ಲಿನ ಒಂದೇ ಶಿಲೆಯದ್ದಾಗಿದೆ. ಪೀಠದಿಂದ ಮೇಲಿನವರೆಗೂ ಹದಿನಾರು ಪಟ್ಟಿಕೆಗಳಿದ್ದು, ಸಣ್ಣದಾಗುತ್ತಾ ಹೋಗಿದೆ. ಮೇಲೆ ಕಮಲದ ಹೂವನ್ನು ಇಟ್ಟಂತಿದೆ. ಪೀಠದಲ್ಲಿ ಇಪ್ಪತ್ತು ಸಾಲಿನ ಶಾಸನವನ್ನು ಬಿಟ್ಟರೆ, ಯಾವ ಅಲಂಕಾರವೂ ಇಲ್ಲ. ಶಾಸನದ ಭಾಗವು ಗಾಜಿನಿಂದ ರಕ್ಷಿಸಲ್ಪಟ್ಟಿದೆ.

ಇದರ ಮೇಲೆ ಸಂಸ್ಕೃತ ಹಾಗೂ ಹಳಗನ್ನಡವಿರುವ ದ್ವಿಭಾಷಾ ಶಾಸನ ಇದೆ. ಮಂಗಳೀಶನು ಬುಧ ಎಂಬ ರಾಜನನ್ನು ಸೋಲಿಸಿ, ಅವನ ಸ್ವತ್ತುಗಳನ್ನು ತೆಗೆದುಕೊಂಡ ವಿಷಯದಿಂದ ಶುರುವಾಗಿ, ಅನಂತರ ಹತ್ತು ಹಳ್ಳಿಗಳನ್ನು ದಾನ ಮಾಡಿದ ವಿಷಯವನ್ನೂ, ಆತನ ಸಮುದ್ರೋಲ್ಲಂಘನ ಯುದ್ಧದ ವಿಷಯಗಳನ್ನೂ ಹೇಳುತ್ತಾ, ರೇವತಿ ದ್ವೀಪವನ್ನು ಜಯಸಿದನೆಂದು ತಿಳಿಸುತ್ತದೆ.

ಆಂಧ್ರಪ್ರದೇಶದ ಮೆಹಬೂಬ್ ನಗರದಲ್ಲಿಯ ಆಲಂಪುರದಲ್ಲಿಯ ಬ್ರಹ್ಮದೇವಾಲಯ ದಲ್ಲಿ ಒಂದು ಕಂಬವಿದೆ. ಇದು ಪ್ರಶಸ್ತಿ ವಿಜಯಸ್ತಂಭ ಎಂದು ಹೇಳುತ್ತಾರೆ. ವಿನಯಾದಿತ್ಯನು ಗುಜರಾತ ಲಾಟ್ ದೇಶದ ರಾಜನಾದ ವಜ್ರಟನನ್ನು ಸೋಲಿಸಿ, ಅವನ ಸೈನಿಕರು, ವಜ್ರಗಳು, ಆನೆ, ಧ್ವಜ, ರಾಜಚಿಹ್ನೆಗಳನ್ನು ವಶಪಡಿಸಿಕೊಂಡುದರ ಕುರುಹು ಇದೆಂದು ತಿಳಿದುಬರುತ್ತದೆ.

ಕಂಚಿಯ ರಾಜಸಿಂಘೇಶ್ವರ ದೇವಾಲಯದ ಮುಖಮಂಟಪದಲ್ಲಿರುವ ಕಂಬವು, ಕ್ರಿ.ಶ. ೬೫೫ರಲ್ಲಿ ಪಟ್ಟಕ್ಕೆ ಬಂದ ೨ನೆಯ ವಿಕ್ರಮಾದಿತ್ಯನು ಪಲ್ಲವರನ್ನು ತನ್ನ ರಾಜ್ಯದಿಂದ ಓಡಿಸಿದ್ದಲ್ಲದೆ, ಅವರ ರಾಜಧಾನಿಯಾದ ಕಂಚಿಯನ್ನು ಆಕ್ರಮಿಸಿ, ದೇವಾಲಯದ ಧನವನ್ನು ಕಂಡು ಮತ್ತೆ ದೇವರಿಗೇ ದತ್ತಿಯಾಗಿ ಕೊಟ್ಟ ದಾನಶಾಸನದಿಂದ ಕೊನೆಗೊಳ್ಳುವ ಕನ್ನಡ ಶಾಸನವಿರುವ ವಿಜಯಸ್ತಂಭ.

ಬಾದಾಮಿ ಚಾಲುಕ್ಯರ ಕೊನೆಯ ಅರಸನಾದ ಎರಡನೆಯ ಕೀರ್ತವರ್ಮನನ್ನು ಉಲ್ಲೇಖಿಸುವ ಕೀರ್ತಿಸ್ತಂಭವು ಪಟ್ಟದಕಲ್ಲಿನಲ್ಲಿದೆ. ಇದು ತೆಲಗು+ಕನ್ನಡ ಹಾಗೂ ಸಂಸ್ಕೃತದಲ್ಲಿರುವ ತ್ರಿಭಾಷಾ ಶಾಸನ.

ಪಟ್ಟದಕಲ್ಲಿನ ವಿರೂಪಾಕ್ಷ ದೇವಸ್ಥಾನದ ಉತ್ತರದಲ್ಲಿ ಈ ಕಂಬವಿದೆ. ಇದು ಚೌಕಾಕಾರದ ವೇದಿಕೆಯ ಮೇಲೆ ನೆಟ್ಟಿರುವ ಕೆಂಪುಕಲ್ಲಿನ ಒಂದೇ ಶಿಲೆಯದ್ದಾಗಿದ್ದು ಅಷ್ಟಕೋನಾಕಾರದಲ್ಲಿದೆ ಮತ್ತು ಯಾವ ಅಲಂಕಾರವೂ ಇಲ್ಲ. ಕಂಬದ ಪೀಠಭಾಗವು ಚೌಕಾಕಾರವಾಗಿದ್ದು, ಅದರ ದಕ್ಷಿಣ ಭಾಗದಲ್ಲಿ ಹಳಗನ್ನಡ+ತೆಲುಗು ಮಿಶ್ರಿತವಾದ ೫ ಸಾಲಿನ ಹಾಗೂ ಪೂರ್ವ ಭಾಗದಲ್ಲಿ ಸಂಸ್ಕೃತದ ೮ ಸಾಲಿನ ದಾನ ಶಾಸನವಿದೆ. ಎರಡೂ ಒಂದೇ ದಾನ ಶಾಸನ. ಈ ಶಾಸನದಲ್ಲಿ ‘ಪಟ್ಟದಕಲ್ಲು’ ಎಂಬುದರ ಬದಲಾಗಿ, ಮೂಲ ಹೆಸರಾದ ‘ಕಿಸುವೊಳಲ್’ ಎಂಬುದನ್ನು ಗಮನಿಸಬಹುದು. ಪಶ್ಚಿಮ ಭಾಗದಲ್ಲಿ ೧೨ ಸಾಲಿನ ದಾನ ಶಾಸನವಿದ್ದು, ‘ಬಾದಾಮಿ’ಯ ಬದಲಾಗಿ ‘ವಾತಾಪಿ’ ಎಂಬುದನ್ನು ಕಾಣಬಹುದು. ಉತ್ತರ ಭಾಗದಲ್ಲಿ ಯಾವ ಶಾಸನವೂ ಇಲ್ಲ. ಇದರ ಮೇಲೆ ಕಂಬವು ಅಷ್ಟಕೋನಾ ಕೃತಿಯಲ್ಲಿದೆ. ಇದರ ಉತ್ತರ, ನೈಋತ್ಯ, ಪಶ್ಚಿಮ ಹಾಗೂ ವಾಯವ್ಯ ಕಡೆಯ ಪಟ್ಟಿಕೆಗಳ ಮೇಲೆ ೨೫ ಸಾಲಿನ ಹಳಗನ್ನಡದ ಮತ್ತು ಉತ್ತರ, ಈಶಾನ್ಯ, ಪೂರ್ವ ಹಾಗೂ ಆಗ್ನೇಯ ಕಡೆಗಳ ಪಟ್ಟಿಕೆಗಳ ಮೇಲೆ ೨೮ ಸಾಲಿನ ಸಂಸ್ಕೃತದ ಶಾಸನವಿದೆ. ಇವು ಕೂಡ ಒಂದೇ ಶಾಸನ.

ಈ ಶಾಸನವು ಶಿವ ಮತ್ತು ಗೌರಿಯರ ಪ್ರಾರ್ಥನೆಯೊಂದಿಗೆ, ಪದ್ಯ ರೂಪದಲ್ಲಿ ಶುರುವಾಗಿ ಮುಂದೆ ಗದ್ಯರೂಪದಲ್ಲಿದೆ. ವಿಜಯಾದಿತ್ಯನು ವಿಜಯೇಶ್ವರ ದೇವಸ್ಥಾನವನ್ನು ಕಟ್ಟಿಸಿದನೆಂದು ತಿಳಿಸುತ್ತದೆ. ಕ್ರಿ.ಶ. ೧೧೬೨ರ ನಂತರ ಇದನ್ನು ಸಂಗಮೇಶ್ವರವೆಂದು ಕರೆಯಲು ಪಕ್ರಮಿಸಿದರು. ಅನಂತರ ಆತನ ಮಗನಾದ ೨ನೆಯ ವಿಕ್ರಮಾದಿತ್ಯನ ಕಂಚಿಯ ದಿಗ್ವಿಜಯವನ್ನೂ ಹೇಳಿರುವುದಲ್ಲದೆ, ಅವನ ಹೆಂಡತಿಯಾದ ಲೋಕಮಹಾದೇವಿಯು ಲೋಕೇಶ್ವರ ದೇವಸ್ಥಾನವನ್ನೂ, ಎರಡನೆಯ ಹೆಂಡತಿಯಾದ ತ್ರೈಲೋಕ್ಯ ಮಹಾದೇವಿಯು ತ್ರೈಲೋಕೇಶ್ವರ ದೇವಸ್ಥಾನವನ್ನೂ ಕಟ್ಟಿಸಿದರೆಂದು ತಿಳಿಸುತ್ತದೆ. ಅಲ್ಲದೆ ೨ನೆಯ ಕೀರ್ತಿವರ್ಮನು ಇವಳ ಮಗನೆಂಬುದನ್ನು ತಿಳಿಸುತ್ತದೆ. ಲೋಕೇಶ್ವರ ದೇವಸ್ಥಾನವು ಈಗ ವಿರೂಪಾಕ್ಷ ದೇವಸ್ಥಾನವೆಂದು ಹೆಸರು ಪಡೆದಿದೆ. ತ್ರೈಲೋಕೇಶ್ವರ ದೇವಸ್ಥಾನದ ಸುಳಿವೇ ಇಲ್ಲ. ಕೊನೆಯಲ್ಲಿ ದಾನಶಾಸನವಿದೆ. ವಿಜಯ ಸ್ತಂಭವನ್ನು ಈ ಮೂರೂ ದೇವಸ್ಥಾನಗಳ ಮಧ್ಯದಲ್ಲಿ ಕಾಣಬಹುದಾಗಿದೆ.

ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಸಿ.ಆರ್. ಶ್ಯಾಮಲಾ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ಎ. ಮುರಿಗೆಪ್ಪ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ

Review Overview

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *