Chaluky States

ಬಾದಾಮಿ ಚಾಲುಕ್ಯರು : ಬಾದಾಮಿ ಚಾಲುಕ್ಯರ ಕಾಲದ ಪ್ರಾಂತ್ಯಾಡಳಿತ

ಬಾದಾವಿು ಚಾಲುಕ್ಯರ ಪ್ರಾಂತ್ಯಾಡಳಿತವನ್ನು ಕುರಿತು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಈ ರಾಜವಂಶವು ಕುಂತಳನಾಡು ಹಾಗೂ ಸುತ್ತಮುತ್ತಲಲ್ಲಿ ಕ್ರಿ.ಶ. ಆರನೇ ಶತಮಾನದಿಂದ ಎಂಟನೇ ಶತಮಾನದವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ವಂಶದ ರಾಜ ಮಹಾರಾಜರುಗಳು, ರಾಜಮನೆತನದವರು, ಸಾಮಂತರುಗಳು ಮತ್ತು ಶ್ರೀ ಸಾಮಾನ್ಯರು ನೀಡಿದ ದಾನದತ್ತಿಗಳನ್ನು ಉಲ್ಲೇಖಿಸುವ ಶಾಸನಗಳು ವಿಪುಲ ಸಂಖ್ಯೆಯಲ್ಲಿವೆ. ಪ್ರಸ್ತುತ ಅಧ್ಯಯನಕ್ಕಾಗಿ, ರಾಜ್ಯಾಡಳಿತ ವಿಭಾಗಗಳನ್ನು ಗುರುತಿಸುವ ಪದಗಳನ್ನು ಶಾಸನಾದಿ ದಾಖಲೆಗಳಿಂದ ಆಯ್ದುಕೊಳ್ಳಲಾಗಿದೆ. ಶಾಸನಗಳು ದೇಶ, ವಿಷಯ, ಆಹಾರ, ಭೋಗ, ರಾಷ್ಟ್ರ, ಮಂಡಲ, ನಾಡು ಮುಂತಾದ ಪದಗಳನ್ನು ಬಳಸಿದ್ದು, ‘ವಿಷಯ’ವೆಂಬ ಪದವನ್ನುಳಿದು ಇನ್ನಿತರ ರಾಜ್ಯಾಡಳಿತ ವಿಭಾಗಗಳ ಪದಗಳು ಹೆಚ್ಚು ಬಳಕೆಯಲ್ಲಿಲ್ಲವೆಂದು ಗಮನಿಸಬಹುದು. ಆದ್ದರಿಂದ ಬಾದಾಮಿ ಚಾಲುಕ್ಯರ ನಾಡಿನಲ್ಲಿ ‘ವಿಷಯ’ವೇ ಪ್ರಧಾನ ಆಡಳಿತ ವಿಭಾಗವಾಗಿತ್ತು ಎಂದು ಸೂಚಿಸಲ್ಪಟ್ಟಿದೆ.[1]

ಈ ಪದವು ಸಾಮಾನ್ಯವಾಗಿ ದಾನ ನೀಡಿದ ಭೂಮಿಕಾಣಿ, ಗ್ರಾಮಾದಿಗಳೊಂದಿಗೆ ರಾಜ್ಯಾಡಳಿತ ವಿಭಾಗವಾಗಿ ಕಾಣಿಸಿಕೊಂಡಿದೆ. ರಾಜಶಾಸನಗಳುಳ್ಳ ಸ್ಥಳಗಳಲ್ಲಿಯೂ ರಾಜ್ಯಾಡಳಿತ ವಿಭಾಗವಾಗಿ ಕಾಣಿಸಿಕೊಂಡಿದೆ. ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ‘ವಿಷಯ’ಗಳನ್ನು ಈ ವಂಶದ ದೊರೆಗಳ ಕಾಲಾನುಕ್ರಮಣಿಕೆಯಲ್ಲಿ ಕೆಳಕಂಡಂತೆ ಗುರುತಿಸಲಾಗಿದೆ:

ಮಂಗಳೇಶ : ಕೊಂಕಣ

ಪುಲಿಕೇಶಿ II: ಅವರೆತಿಕಾ, ಕುಂಡಿ, ಕೊನಿಕಲ್, ಗೋಪರಾಷ್ಟ್ರ, ಫಳಕಿ, ಬಾಣರಾಜ, ಚಲಿಕ್ಯ, ಕಾಶಾಕುಲ

(ಅನಾಯಕತ್ವದ ಕಾಲ) : ಉಚ್ಛಶೃಂಗ

ವಿಕ್ರಮಾದಿತ್ಯ I : ಇೞುವ, ನಳವಾಡಿ, ಕುಂಡಿ, ಬೆಳ್ವಳ, ಬಾಹಿರಿಕಾ, ಕುೞುಮಯಿ, ಚಲಿಕ್ಯ, ಕಣ್ಣ, ಅವರಂತ.

ವಿನಯಾದಿತ್ಯ: ನಾಸಿಕ್ಯ, ಪಲಯಠ್ಠಾನ, ಪೆಡೆಕಲ್, ಕುರಾಟ, ವೆಂತಿ. ಇಡೆವೊಱಲ್, ತೊರ ಮರ, ನಳವಾಡಿ, ಉತ್ತರಾದ, ಕುಂಡಿ, ಕರಹಾಚಕ

ವಿಜಯಾದಿತ್ಯ: ವೆಂಗನೂರ್, ಪೆಡೆಕಲ್, ಬಾವಿಹಾರ, ಇರಿಡಿಗೆ, ಕರಹಾಟಕ, ತಾಲಿತಟಾಹಾರ, ಅಲಕುಕ,[2] ಗೋಪರಾಷ್ಟ್ರ, ಪೂರ್ವ ತ್ರಿಕೂಟ, ಅಮ್ರರಾಜಿ, ಮೈರಿಕಾ, ಮಹಾಗಿರಿಹಾರ,[3] ಪ್ರೆತಹ್ರದ, ಸಮಗಿರಿ, ತೂರಮಾರ, ಪಥಿಕಾ

ವಿಕ್ರಮಾದಿತ್ಯ II : ವಂಗನೂರ್, ಚಿಪ್ರರುಲಣ, ತೂರಮಾರ

ಕೀರ್ತಿವರ್ಮನ್ II : ಬೆಳ್ವೊಲ, ಪಾನ್ಯಂಗಲ್, ತೂರಮಾರ

ವಿಷಯಗಳನ್ನು ಹೆಸರಿಸುವ ಶಾಸನಗಳ ಸಂಖ್ಯೆ ಅರವತ್ತು. ಇವುಗಳಲ್ಲಿ ಅರ್ಧದಷ್ಟು ಶಾಸನಗಳು ವಿನಯಾದಿತ್ಯ ಮತ್ತು ವಿಜಯಾದಿತ್ಯರ ಕಾಲಕ್ಕೆ ಸೇರಿದವು. ಈ ವಂಶದ ಆಳ್ವಿಕೆಯಲ್ಲಿ ಈ ಕಾಲವು ಅತ್ಯಂತ ಶಾಂತಿಯುತ ಕಾಲವೆನಿಸಿತ್ತು. ಹಲವು ರಾಜರ ಆಳ್ವಿಕೆಯಲ್ಲಿ, ಹಲವಾರು ಶಾಸನಗಳಲ್ಲಿ ಕೆಲವು ವಿಷಯಗಳ ಪ್ರಸ್ತಾಪವಿದೆ. ‘ಕುಂಡಿ’ ವಿಷಯದ ಪ್ರಸ್ತಾಪವು, ಎರಡನೇ ಪುಲಿಕೇಶಿ, ಒಂದನೇ ವಿಕ್ರಮಾದಿತ್ಯ ಹಾಗೂ ವಿನಯಾದಿತ್ಯರ ಕಾಲದಲ್ಲಿಯೂ ಕಂಡುಬಂದಿದೆ. ‘ತೋರಮಾರ’ ವಿಷಯವೂ ಕಡೆಯ ಮೂರು ದೊರೆಗಳ ಆಡಳಿತ ಕಾಲದಲ್ಲಿ, ವಿನಯಾದಿತ್ಯ, ಎರಡನೇ ವಿಕ್ರಮಾದಿತ್ಯ ಮತ್ತು ಎರಡನೇ ಕೀರ್ತಿವರ್ಮನ ಕಾಲದಲ್ಲಿಯೂ ಉಲ್ಲೇಖವಿದೆ.

ಆಧುನಿಕ ಜಿಲ್ಲೆಗಳ ಭೌಗೋಳಿಕ ಕಕ್ಷೆಯಲ್ಲಿ ಈ ವಿಷಯಗಳ ವ್ಯಾಪ್ತಿಯನ್ನು ಕೆಳಕಂಡಂತೆ ಗುರುತಿಸಬಹುದು. ಈಗಿನ ಜಿಲ್ಲೆಗಳ ಹೆಸರುಗಳನ್ನು ಕಂಸದಲ್ಲಿ ಸೂಚಿಸಿದ್ದು, ಪ್ರಾಂತ್ಯಾವಾರು ವಿವರಗಳನ್ನು ನೀಡಲಾಗಿದೆ:

ಗುಜರಾತ್: ಪಥಿಕಾ(ಬ್ರೋಚ್‑ಸೂರತ್), ಕಾಶಾಕುಲ(ಸೂರತ್), ಬಾಹಿರಿಕ(ಸೂರತ್)

ಮಹಾರಾಷ್ಟ್ರ: ನಾಸಿಕ್ಯ(ನಾಸಿಕ್), ಗೋಪರಾಷ್ಟ್ರ(ನಾಸಿಕ್), ಕುರಾಟ(ಥಾನಾ), ವೆಂತಿ (ಥಾನಾ) ಸಮಗಿರಿ(ಪೂನಾ), ಪಲಯಠ್ಠಾನ(ಸತಾರ ‑ಪೂನಾ), ಕರಹಾಟಕ(ಸತಾರ), ಇರಿಡಿಗೆ (ರತ್ನಗಿರಿ), ಕುಱುಮಯಿ(ಉಸ್ಮಾನಾಬಾದ್), ಬಾವಿಹಾರ(ನಾಂದೇಡ್), ಕುಂಡಿ(ಕೊಲ್ಲಾಪುರ ‑ಸಾಂಗ್ಲಿ), ಉತ್ತರಾದ[4] ಅವರಂತ. ಅವರೆತಿಕಾ <ಅಪರಾಂತ. ಕೊಂಕಣ.

ಕರ್ನಾಟಕ: ಇಡೆವೊೞಲ್(ಉತ್ತರ ಕನ್ನಡ ಶಿವಮೊಗ್ಗ), ತೋರಮಾರ(ಶಿವಮೊಗ್ಗ), ಉಚ್ಛಶೃಂಗ(ಬಳ್ಳಾರಿ ‑ಚಿತ್ರದುರ್ಗ), ಪಾನುಂಗಲ್(ಧಾರವಾಡ), ಬೆಳ್ವೊಲ(ಧಾರವಾಡ ‑ರಾಯಚೂರು), ಕೊನಿಕಲ್(ಬೆಂಗಳೂರು), ಅಲಕುಕಱ <ಲಕ್ತಕ?(ಧಾರವಾಡ),

ಆಂಧ್ರಪ್ರದೇಶ: ನಳವಾಡಿ(ಕರ್ನೂಲ್), ಪೆಡಿಕಲ್(ಕರ್ನೂಲ್), ತೂರಮಾರ (ಅನಂತಪುರ), ವಂಗನೂರ್ (ಅನಂತಪುರ‑ಕಡಪ), ಬಾಣರಾಜ ಪೞಕಿ

ಈ ಮಾಹಿತಿಗಳಿಂದ ‘ವಿಷಯ’ಳ ಭೌಗೋಳಿಕ ನೆಲೆ ಮತ್ತು ವ್ಯಾಪ್ತಿಗೆ ಸಂಬಂಧಿಸಿದಂತೆ ಹಲವು ಸ್ಪಷ್ಟ ಅಂಶಗಳನ್ನು ಗಮನಿಸಬಹುದು. ಪ್ರಾಂತ್ಯಾಡಳಿತಗಾರರು ಅಧಿಕಾರ ಹೊಂದಿದ್ದ ಪ್ರದೇಶಗಳ ವ್ಯಾಪ್ತಿಯಲ್ಲಿ ಹಲವಾರು ‘ವಿಷಯ’ಗಳು ಸೇರಿದ್ದವು. ಆಯಾ ಪ್ರದೇಶದ ಅಧಿಕಾರವನ್ನು ನಿರ್ವಹಿಸಲು ಅವರುಗಳಿಗೇ ಬಿಟ್ಟಿದ್ದು. ಚಾಲುಕ್ಯರಿಗೆ ಸಹಾಯಕರಾಗಿ ಮುಂದುವರೆದರು. ಆದರೆ ಈ ದಿಸೆಯಲ್ಲಿ ಇಂದಿನ ಬಿಜಾಪುರ ಜಿಲ್ಲೆಗೆ ಸಂಬಂಧಿಸಿದಂತೆ ‘ವಿಷಯ’ ವ್ಯವಸ್ಥೆಯನ್ನು ಗುರುತಿಸುವ ಶಾಸನಗಳಾವುದೂ ದೊರೆತಿಲ್ಲ.

ಧಾರವಾಡ ಜಿಲ್ಲೆಯೂ ಸೇರಿದಂತೆ ಬಿಜಾಪುರ ಜಿಲ್ಲೆಯು ಸಾಮ್ರಾಜ್ಯದ ಪ್ರಮುಖ ಭಾಗವೆನಿಸಿದ್ದು ಬಾದಾಮಿಯು ರಾಜಧಾನಿಯಾಯಿತ್ತು. ರಾಜಕೀಯ ಚಟುವಟಿಕೆಗಳ ಬಿಂದುವೆನಿಸಿದ ಈ ಅಧಿಷ್ಠಾನ(ರಾಜಧಾನಿ)ದೊಂದಿಗೆ ಧಾರ್ಮಿಕ ಕೇಂದ್ರಗಳೆನಿಸಿದ ಮಹಾಕೂಟ, ಪಟ್ಟದಕಲ್ಲು, ಲಕ್ಷ್ಮೇಶ್ವರ, ವಾಣಿಜ್ಯ ಹಾಗೂ ಶಿಕ್ಷಣಕ್ಷೇತ್ರಗಳೆನಿಸಿದ ಐಹೊಳೆಯೂ ಸೇರಿತ್ತು. ಈ ಪ್ರದೇಶದಲ್ಲಿ ರಾಜವಂಶಕ್ಕೆ ಸೇರಿದ ಶಾಸನಗಳು ಮೂರನೆ ಒಂದು ಭಾಗದಷ್ಟು ಲಭ್ಯವಿವೆ. ಆದರೂ ಈ ಶಾಸನಗಳಲ್ಲಿ ‘ವಿಷಯ’ಗಳ ಪ್ರಸ್ತಾಪವಿಲ್ಲ ವೆಂದು ಗಮನಿಸಬಹುದು. ಸಾಮ್ರಾಜ್ಯದ ಹೃದಯದಂತಿದ್ದ ಈ ಪ್ರದೇಶವು ರಾಜ ಮನೆತನದ ನೇರ ಆಡಳಿತಕ್ಕೆ ಒಳಪಟ್ಟು, ಪ್ರತ್ಯೇಕ ಆಡಳಿತ ಪ್ರದೇಶವಾಗಿ ಗುರುತಿಸದಿರಬಹುದು. ಇದನ್ನು ಪುಷ್ಟೀಕರಿಸಲು ಮತ್ತಷ್ಟು ಸಾಕ್ಷ್ಯಾಧಾರಗಳು ಬೇಕು.

ಬಾದಾಮಿಯನ್ನು ರಾಜಧಾನಿಯಾಗಿ ಉಳ್ಳ ಈ ಕೇಂದ್ರಪ್ರದೇಶವು ಈಗಿನ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ದಕ್ಷಿಣದ ಭಾಗಗಳಿಂದ ಸುತ್ತುವರೆದಿತ್ತು. ಈ ಸುತ್ತುಮುತ್ತಲ ಪ್ರದೇಶದಲ್ಲಿ ಹಲವಾರು ‘ವಿಷಯ’ಗಳು ಅಡಕಗೊಂಡಿದ್ದವು. ಪ್ರಾಂತ್ಯಾಡಳಿತಗಾರರೆನಿಸಿದ ಸಾಮಂತಾದಿಗಳು ಹಾಗೂ ಅವರ ಬಂಧು ವರ್ಗಕ್ಕೆ ಸೀಮಿತಗೊಳ್ಳುತ್ತಿದ್ದ ವಿಷಯ ವ್ಯಾಪ್ತಿ ಯನ್ನು ಒಂದೊಂದಾಗಿ ಪರಿಶೀಲಿಸಬಹುದು.

ಸೇಂದ್ರಕ ವಂಶದ ದೊರೆ ಸೇನಾನಂದನು ಆವರೆತಿಕಾ ವಿಷಯದ ಗ್ರಾಮ ಭೂಮಿಕಾಣಿ ಗಳನ್ನು ದಾನಕೊಟ್ಟಿದ್ದು, ಸ್ಥಳದ ವಿಷಯ ವಾಸಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸುವುದಕ್ಕಾಗಿ ಶಾಸನ ನೀಡಿದ.[5] ಅವರೆತಿಕಾದ ಪ್ರಾಚೀನರೂಪ ‘ಅಪರಾಂತ’ ವೆನ್ನಬಹುದಾಗಿದ್ದು ಇದು ಉತ್ತರ ಕೊಂಕಣ ಪ್ರದೇಶವೆನಿಸಿದ್ದು, ಇಂದಿನ ಮಹಾರಾಷ್ಟ್ರದ ಥಾನಾ, ಕೊಲಾಬಾ, ರತ್ನಗಿರಿ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ.

ಚಿಪ್ಲುನ್ ಶಾಸನದ ಪ್ರಕಾರ ಈ ಪ್ರದೇಶವು ದಕ್ಷಿಣ ಕೊಂಕಣಕ್ಕೆ ಸೇರಿದ್ದು, ಸೇಂದ್ರಕರು ಇಲ್ಲಿಯೂ ಆಡಳಿತ ನಡೆಸುತ್ತಿದ್ದರು. ಇದು ಕದಂಬರ ಚಕ್ರಾಧಿಪತ್ಯಕ್ಕೆ ಸೇರಿತ್ತು. ಒಂದನೇ ಕೀರ್ತಿವರ್ಮನ ರಾಣಿ ಸೇಂದ್ರಕ ವಂಶಕ್ಕೆ ಸೇರಿದವಳು. ಈಕೆ ಇಮ್ಮಡಿ ಪುಲಿಕೇಶಿಯ ತಾಯಿ. ಸೇನಾನಂದನು ಇಮ್ಮಡಿ ಪುಲಿಕೇಶಿಯ ಸೋದರಮಾವ. ತದನಂತರದ ಕಾಲದಲ್ಲಿ ಈ ಭಾಗದ ಆಡಳಿತವು ಚಿಕ್ಕಪ್ಪನಾದ ಒಂದನೇ ವಿಕ್ರಮಾದಿತ್ಯನಿಗೆ ವಹಿಸಲ್ಪಟ್ಟಿತು.

ಇಮ್ಮಡಿ ಪುಲಿಕೇಶಿಯ ಆಲ್ಟೆಮ್ ತಾಮ್ರಪಟಗಳ ಪ್ರಕಾರ,[6] ಸೇಂದ್ರಕರ ರಾಜ್ಯವು ಕುಂಡಿ ವಿಷಯಕ್ಕೂ ವ್ಯಾಪಿಸಿತ್ತು. ಇದು ಮೀರಿಂಚೆ ವಿಭಾಗಕ್ಕೆ ಹತ್ತಿರವೆನಿಸಿದ್ದು, ಮಹಾರಾಷ್ಟ್ರದ ಇಂದಿನ ಮೀರಜ್ ಎಂದು ಗುರುತಿಸಬಹುದು.

ಮೊದಲನೆಯ ವಿಕ್ರಮಾದಿತ್ಯನ ಅಣ್ಣ ಚಂದ್ರಾದಿತ್ಯನು ಈ ಪ್ರಾಂತ್ಯದ ಹತ್ತಿರ ರಾಜ್ಯಭಾರ ನಡೆಸುತ್ತಿದ್ದನು.[7]

ಇಮ್ಮಡಿ ಪುಲಿಕೇಶಿಯ ನಿರ್ಪನ್ ತಾಮ್ರ ಶಾಸನಗಳ ಪ್ರಕಾರ, ಗೋಪರಾಷ್ಟ್ರ ವಿಷಯವು ರಾಜಮನೆತನದ ತ್ರಿಭುವನಮಲ್ಲ ನಾಗವರ್ಧನ ಅರಸರ ಆಳ್ವಿಕೆಯಲ್ಲಿತ್ತು.[8] ವಿಜಯಾದಿತ್ಯನ ಕಾಲದಲ್ಲಿ ಈ ವಿಭಾಗವನ್ನು ಹರಿಶ್ಚಂದ್ರವಂಶದ ಭೋಗಶಕ್ತಿಯು ಆಳುತ್ತಿದ್ದನು. ಇದಲ್ಲದೆ ಪುರಿ ಕೊಂಕಣ ಭಾಗದೊಂದಿಗೆ, ಇನ್ನಿತರ ಆರು ವಿಷಯಗಳಾದ ಪೂರ್ವ‑ತ್ರಿಕೂಟ, ಆಮ್ರರಾಜಿ, ಮೈರಿಕಾ, ಮಹಾಗಿರಿಹಾರ, ಪುಲುಸುಢಾಂಬಕ ಮತ್ತು ಪ್ರೇತಹ್ರದಗಳಲ್ಲಿಯೂ ಆಳ್ವಿಕೆ ಇತ್ತು. ಭೋಗಶಕ್ತಿಯ ಅಜ್ಜಸ್ವಾಮಿಚಂದ್ರನು ಒಂದನೇ ವಿಕ್ರಮಾದಿತ್ಯನನ್ನು ಗೌರವದಿಂದ ಆದರಿಸಿ ಅನುಸರಿಸಿದನು. ಆದ್ದರಿಂದ ಚಾಲುಕ್ಯರ ಆಳ್ವಿಕೆ ಈ ವಿಭಾಗದಲ್ಲಿ ನಿರಂತರವಾಗಿ ಮುಂದುವರೆಯಿತು.[9] ಇಲ್ಲಿಂದ ಉತ್ತರಕ್ಕೆ ಬಾಹಿರಿಕ ವಿಷಯ,[10] ನಾಸಿಕ್ಯ ವಿಷಯ,[11] ಕುರಾಟ ವಿಷಯ ಮತ್ತು ವೆಂತಿವಿಷಯ,[12] ಕಾಶಾಕುಲ ವಿಷಯ[13]ಗಳಿದ್ದುವೆಂದು ಮಾಹಿತಿಗಳು ದೊರೆಯುತ್ತವೆ.

ಒಂದನೇ ವಿಕ್ರಮಾದಿತ್ಯ ಮತ್ತು ವಿನಯಾದಿತ್ಯರ ಶಾಸನೋಲ್ಲೇಖಗಳ ಪ್ರಕಾರ ವಿಕ್ರಮಾದಿತ್ಯನ ಸಹೋದರ, ಯುವರಾಜಧಾರಾಶ್ರಯ ಜಯಸಿಂಹವರ್ಮನು ಮೊದಲ ನಾಲ್ಕು ವಿಷಯಗಳಲ್ಲಿ ಆಡಳಿತ ನಡೆಸುತ್ತಿದ್ದ. ಈ ಸಾಲಿನ ವಂಶಜರೇ ಮುಂದೆ ಗುಜರಾತ್‌ನಲ್ಲಿ ಸ್ವತಂತ್ರ ಶಾಖೆಯಾಗಿ ಅಭಿವೃದ್ದಿ ಹೊಂದಿದರು. ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಈ ರಾಜವಂಶಕ್ಕೆ ಸೇರಿದ ವಿಜಯರಾಜನು ಕಾಶಾಕುಲ ವಿಷಯವನ್ನು ಆಳುತ್ತಿದ್ದನು.

ಸ್ಥಳೀಯ ಆಡಳಿತ ಹಾಗೂ ಆಡಳಿತಗಾರರ ಪರಸ್ಪರ ಸಂಬಂಧ ಇವುಗಳನ್ನು ಕುರಿತು ನಿಖರವಾಗಿ ಏನನ್ನೂ ಹೇಳಲು ಸಾಧ್ಯವಾಗದು. ಆದರೆ ಈ ಪ್ರಾಂತ್ಯಾಡಳಿತಗಾರರನ್ನು ನಿಯಂತ್ರಿಸಲು ಮತ್ತು ದೇಶಕೋಶಗಳನ್ನು ವಿಸ್ತರಿಸುವ ಮುಂದಾಲೋಚನೆಯಿಂದ ಕೇಂದ್ರವು ತನ್ನ ರಾಜಮನೆತನಕ್ಕೆ ಸಂಬಂಧಪಟ್ಟವರನ್ನು ಪ್ರತಿನಿಧಿಗಳಾಗಿ ಗಡಿನಾಡುಗಳಿಗೆ ಕಳುಹಿಸುವ ವಾಡಿಕೆಯನ್ನು ಬೆಳೆಸಿದ್ದರೆನ್ನಬಹುದು. ಇದರಿಂದಾಗಿ ಗುಜರಾತ್ ಮತ್ತು ವೆಂಗಿಗಳಲ್ಲಿ ಮನೆತನದ ಸ್ವತಂತ್ರ ಶಾಖೆಗಳು ಬೆಳೆಯಲು ಅವಕಾಶವಾಯಿತು.

ವೆಂಗಿಶಾಖೆಯು ಎರಡನೇ ಪುಲಿಕೇಶಿಯ ಸಹೋದರ ವಿಷ್ಣುವರ್ಧನನಿಂದ ಆರಂಭ ಗೊಂಡಿತು. ಈ ಪ್ರದೇಶದಲ್ಲಿ ಒಂದೇ ಒಂದು ವಿಷಯವು[14] ಗುರುತಿಸಲ್ಪಟ್ಟಿದ್ದು, ಸುಮಾರು ನಾನೂರು ವರ್ಷಗಳಿಗೂ ಹೆಚ್ಚುಕಾಲ ಅಸ್ತಿತ್ವದಲ್ಲಿತ್ತು. ಇದಕ್ಕಿಂತ ಹೆಚ್ಚು ವಿಸ್ತಾರವುಳ್ಳ ಪ್ರಾಂತೀಯ ವಿಭಾಗಗಳು ತದನಂತರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿದ್ದವು. ಒಂದನೇ ವಿಕ್ರಮಾದಿತ್ಯನ ಹಿರಿಯ ಅಣ್ಣ ಆದಿತ್ಯವರ್ಮ ಹಾಗೂ ಅವನ ಮಗ ಅಭಿನವಾದಿತ್ಯರು ಉಚ್ಛಶೃಂಗ ವಿಷಯವನ್ನಾಳಿದರು. ಇವರ ಕಾಲದಲ್ಲಿ ಬಾದಾಮಿಯಲ್ಲಿ ಅನಾಯಕತ್ವವಿತ್ತು.[15]

ಬಾಣರಾಜ ವಿಷಯ[16] ಮತ್ತು ನಳವಾಡಿ ವಿಷಯ[17]ಗಳಲ್ಲಿ ಕ್ರಮವಾಗಿ ಬಾಣ ಹಾಗೂ ನಳರೆಂಬ ವಂಶೀಯರು ಆಳ್ವಿಕೆ ನಡೆಸಿದರು. ಇವರು ಸ್ಥಳೀಯ ಆಡಳಿತಗಾರರೆನಿಸಿದ್ದು, ರಾಜ್ಯ ವಿಸ್ತರಣೆಗೆ ಅವಕಾಶವಿಲ್ಲದೆ ತಮ್ಮ ಪರಿಧಿಗೆ ಸೀಮಿತಗೊಂಡು ವಿಷಯಗಳ ಹೆಸರುಗಳೂ ತಕ್ಕಂತೆ ಗುರುತಿಸಿದ್ದೆನ್ನಬಹುದು.

ಬಾಣರ ಆಳ್ವಿಕೆಗೆ ಇಂದಿನ ಅನಂತಪುರ ಜಿಲ್ಲೆಯ ವ್ಯಾಪ್ತಿಯು ಒಳಪಟ್ಟಿದ್ದು, ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಚಾಲುಕ್ಯರ ಅಧೀನ ರಾಜರೆನಿಸಿದರು. ವೆಂಗನೂರು ವಿಷಯ[18] ಮತ್ತು ತೂರಮಾರ ವಿಷಯ[19]ಗಳಲ್ಲಿಯೂ ಬಾಣರ ಆಳ್ವಿಕೆ ಇತ್ತು. ಈ ಪ್ರದೇಶದಲ್ಲಿ ನಳವಂಶೀಯರೂ ಆಡಳಿತ ನಡೆಸಿದ್ದು, ಪ್ರಸ್ತುತ ಕರ್ನೂಲ್ ಜಿಲ್ಲೆಯನ್ನೊಳಗೊಳ್ಳುತ್ತದೆ. ಆಳುಪರು ಚಾಲುಕ್ಯ ರಾಜ್ಯದ ಪ್ರಾಂತ್ಯಾಡಳಿತ ವಿಷಯ ವಿಭಾಗಗಳಲ್ಲಿ ಸ್ಥಳೀಯ ಸ್ವತಂತ್ರ ಆಡಳಿತಗಾರರಾಗಿ ರಾಜ್ಯಭಾರ ಮಾಡಿದರು. ಇಡೆವೊಱಲ್ ಮತ್ತು ತೂರಮಾರ ವಿಷಯಗಳಲ್ಲಿ ಇವರ ಆಳ್ವಿಕೆ ಇತ್ತು.[20] ವಿನಯಾದಿತ್ಯನ ಮಗಳಾದ ಕುಂಕುಮ ದೇವಿಯನ್ನು ಅಳುಪರ ದೊರೆ ಚಿತ್ರವಾಹನನಿಗೆ ಕೊಡಲ್ಪಟ್ಟಿತ್ತು.[21]

‘ವಿಷಯ’ವು ಆಡಳಿತ ವಿಭಾಗವೆಂಬ ಅರ್ಥವಲ್ಲದೆ, ರಾಜ್ಯದ ಪೂರ್ಣ ವಿಸ್ತಾರಕ್ಕೂ ಅನ್ವಯವಾಗುವಂತೆ ಪ್ರಯೋಗಿಸಲ್ಪಟ್ಟಿದೆ ಎಂದು ಗಮನಿಸಬಹುದು. ಒಂದನೇ ವಿಕ್ರಮಾದಿತ್ಯನ ಗದ್ವಾಲ್ ತಾಮ್ರಪಟಗಳ ಪ್ರಕಾರ[22] ಚಾಲುಕ್ಯ ಸೈನ್ಯವು ಚೋಲಿಕಾ ವಿಷಯವನ್ನು ಆಕ್ರಮಿಸಿತ್ತು. ಪ್ರಾಚೀನ ಚೋಳ ಸಾಮ್ರಾಜ್ಯದ ರಾಜಧಾನಿಯಾದ ಉರಗಪುರವು ಚೋಲಿಕಾ ವಿಷಯದಲ್ಲಿದೆ. ಚಾಲುಕ್ಯರ ಆಕ್ರಮಣದ ನಂತರ ಚೋಲಿಕಾ ವಿಷಯವು ಚಾಲುಕ್ಯರ ಅಧಿಕಾರದೊಳಗಣ ಪ್ರದೇಶವೆಂಬ ವಿಷಯ ಸ್ಪಷ್ಟವಾಗುವುದಿಲ್ಲ. ಇಲ್ಲಿ ವಿಷಯವು ಆಡಳಿತ ವಿಭಾಗವಾಗಿರದೆ ಒಟ್ಟಾರೆ ಪ್ರದೇಶವನ್ನು ಸೂಚಿಸಿರಬಹುದು.

ಇದೇ ರೀತಿ “ವೈರಾಜ್ಯ‑ಕಾಂಚೀಪತಿ(ಪಲ್ಲವಪತಿ)‑ಬಲಂ‑ಅವಷ್ಟಾಭ್ಯ‑ಸಮಸ್ತ‑ ವಿಷಯ”[23] ವೆಂಬ ಒಕ್ಕಣೆಯಲ್ಲಿ ವಿನಯಾದಿತ್ಯನೊಡನೆ ಪಲ್ಲವರಾಜನು ಮೂರು ರಾಜ್ಯಗಳ ಮುಂದಾಳಾಗಿ ಸಂಧಿ ಮಾಡಿಕೊಂಡಿದ್ದನ್ನು ಗುರುತಿಸಿದೆ. ಇಲ್ಲಿ ‘ವಿಷಯ’ವೆನ್ನುವಲ್ಲಿ ಸಾಮ್ರಾಜ್ಯವನ್ನು ಸ್ಪಷ್ಟವಾಗಿ ಸೂಚಿಸಿದೆಯೇ ಹೊರತು ಆಡಳಿತ ಭಾಗವೆನಿಸಿಲ್ಲ. ಅಳುಪರ ಅಧಿಕಾರದೊಳಗಣ ಪ್ರದೇಶಕ್ಕೆ ಸಂಬಂಧಿಸಿದಂತೆ “ಸ್ವವಿಷಯ‑ಉಪಭೋಗ‑ರಕ್ಷಣೆ‑ ವಿಧಿ‑ವಿಧಾನಾನ್ಯಪಹಾಯ”[24] ಎಂದು ಉಲ್ಲೇಖಿಸಿದ್ದು, ಚಾಲುಕ್ಯರಿಗೆ ಅಳುಪರ ರಾಜನಿಷ್ಠೆ ಯನ್ನು ವಿಷಯವು ಸೂಚಿಸಿದೆಯೇ ಹೊರತು ಆಡಳಿತ ವಿಭಾಗವನ್ನು ಗುರುತಿಸಿಲ್ಲ. ಇದೇ ರೀತಿ ಶಾಸನದ “ದ್ರಾವಿಡ ವಿಷಯ ವಾಸ್ತವ್ಯ”[25] ವೆಂಬ ಉಲ್ಲೇಖದಲ್ಲಿ ದ್ರಾವಿಡ ಪ್ರದೇಶದಲ್ಲಿ ವಾಸಿಸುತ್ತದ್ದ ಬ್ರಾಹ್ಮಣನಿಗೆ ಸಂಬಂಧಿಸಿದ್ದು, ದ್ರಾವಿಡ ವಿಷಯ ಯಾವುದೆಂಬ ಬಗ್ಗೆ ಸ್ಪಷ್ಟತೆಯಿಲ್ಲ.

ಮೇಲ್ಕಂಡ ವಿವರಗಳಿಂದ ಚಾಲುಕ್ಯರ ಶಾಸನಗಳಲ್ಲಿ ವಿಷಯವು ಆಡಳಿತ ವಿಭಾಗವಾಗಿ ಸ್ವತಂತ್ರ ಪ್ರದೇಶವಾಗಿ ಬಳಸಿರುವುದನ್ನು ಗಮನಿಸಬಹುದು.

ಗುಪ್ತರ ರಾಜ್ಯದ ಪೂರ್ವಭಾಗಗಳಲ್ಲಿ ವಿಷಯಾಡಳಿತವು ಪರಿಷ್ಕರಿಸಲ್ಪಟ್ಟು ಜಾರಿಗೊಳಿಸಿದ ಉತ್ತಮ ವ್ಯವಸ್ಥೆಯೆನಿಸಿತ್ತು. ವಿಷಯಾಧಿಕರಣವು ಸ್ಥಳೀಯ ಸಂಸ್ಥೆಯೆನಿಸಿದ್ದು, ಈ ಸಂಸ್ಥೆಯಲ್ಲಿ ಕೇಂದ್ರದಿಂದ ನೇಮಿಸಲ್ಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಜನಪದದ ಸದಸ್ಯರು ಗಳನ್ನೊಳಗೊಂಡಿತ್ತು. ಇವರನ್ನು ಕ್ರಮವಾಗಿ ಮಹತ್ತರ ಮತ್ತು ಕುಟುಂಬಿನ್ ಎಂದೆನಿಸಿದ್ದಾರೆ. ಕೇಂದ್ರವು ಗ್ರಾಮಗಳಲ್ಲಿದ್ದ ಈ ಸ್ವಾಯತ್ತ ಸಂಸ್ಥೆಗಳ ಮೂಲಕ ಪ್ರಾಂತ್ಯಾಡಳಿತವನ್ನು ನಿರ್ವಹಿಸುತ್ತಿತ್ತು.[26] ಚಾಲುಕ್ಯರ ಕಾಲದ ವಿಷಯಾಡಳಿತದ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗದು. ಕೇಂದ್ರವು ಅಧೀನ ಸಾಮಂತರುಗಳಿಗೆ ಸ್ವತಃ ಅಧಿಕಾರ ಮುಂದುವರೆಸಲು ಹೆಚ್ಚು ರಿಯಾಯಿತಿ ತೋರಿದ್ದರಿಂದ, ಕೇಂದ್ರಾದೇಶಗಳನ್ನು ಪಾಲಿಸುವ ಸ್ಥಳೀಯ ಆಡಳಿತ ಸಂಸ್ಥೆಗಳು ಅವುಗಳ ಕಾರ್ಯ ನಿರ್ವಹಣೆಯಲ್ಲಿ ಮಹತ್ವವೆನಿಸಲಿಲ್ಲ. ಕೇಂದ್ರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ವ್ಯವಸ್ಥಿತ ಆಡಳಿತ ಪದ್ಧತಿ ವಿಷಯ ಪ್ರದೇಶಗಳಲ್ಲಿ ಬೆಳೆದಿರಲಿಲ್ಲವೆನ್ನಬಹುದು.

ಚಾಲುಕ್ಯರು ಹೊಸದಾಗಿ ರಾಜ್ಯಕೋಶಗಳ ಮೇಲೆ ದಿಗ್ವಿಜಯ ಸಾಧಿಸಿದಾಗ ತಮ್ಮ ಪ್ರತಿನಿಧಿಯಾಗಿ ಪ್ರಾಂತ್ಯಾಧಿಕಾರಿಯನ್ನು ನೇಮಿಸುತ್ತಿದ್ದರು, ಅಥವಾ ಸಾರ್ವಭೌಮತ್ವವನ್ನು ಒಪ್ಪಿಕೊಂಡಲ್ಲಿ ಸಾಮಂತಾದಿಗಳಿಗೇ ಆಡಳಿತ ನಡೆಸಲು ಅವಕಾಶವೀಯುತ್ತಿದ್ದರು. ಇಂತಹ ಆಡಳಿತ ಪ್ರದೇಶಗಳು, ವಿಷಯವೆಂಬ ಅಭಿದಾನದಿಂದ ಗುರುತಿಸಲ್ಪಟ್ಟವು. ದೇಶಕೋಶಗಳನ್ನು ವಿಸ್ತರಿಸುವ ಹಾಗೂ ತಮ್ಮ ಪ್ರಭಾವ ವರ್ಚಸ್ಸನ್ನು ಬೆಳೆಸುವ ದೃಷ್ಟಿಯಲ್ಲಿ ಇದು ರೂಢಿಗತವಾದ ಪದ್ಧತಿ ಎನಿಸಿತ್ತು. ಕೇಂದ್ರದ ರಕ್ಷಣೆಗಾಗಿ ಕೇಂದ್ರೀಕೃತಗೊಂಡ ಸಮಗ್ರ ಪಡೆ ಅಥವಾ ದಳದ ವ್ಯವಸ್ಥೆ ಇತ್ತೇ? ಇದು ಪ್ರಾಂತ್ಯಾಡಳಿತಗಾರರ ಮೇಲೆ ಹೇಗೆ ಪ್ರಾಬಲ್ಯ ಸಾಧಿಸುತ್ತಿತ್ತು ಎಂದು ತಿಳಿಯಬೇಕಾಗಿದೆ.

ಚಾಲುಕ್ಯರು ಸ್ಥಳೀಯ ಆಡಳಿತಗಾರರನ್ನು ಅಂಕೆಯಲ್ಲಿಡಲು ಬಹುಶಃ ಮಿತಿಮೀರಿದ ಸೈನ್ಯದ ಪಡೆಯನ್ನು ಹೊಂದಿದ್ದರು. ಆಗಾಗ್ಗೆ ಧಾರ್ಮಿಕ ಹಾಗೂ ಇನ್ನಿತರ ಕಾರಣಗಳಿಗಾಗಿ ಸೈನ್ಯ ಹಾಗೂ ಮಹಾಸಂಧಿ ವಿಗ್ರಹಕ ಮುಂತಾದ ಅಧಿಕಾರಿಗಳೊಂದಿಗೆ ಜೈತ್ರಯಾತ್ರೆ ಹೊರಡುತ್ತಿದ್ದರು. ಒ್ಮೊಮ್ಮೆ ರಾಣಿ ಪರಿವಾರವೂ ಇವರೊಂದಿಗೆ ಧಾವಿಸುತ್ತಿತ್ತು. ಇಂತಹ ಸಮಯಗಳಲ್ಲಿ ಚಾಲುಕ್ಯ ದೊರೆಗಳು ದೇವಸ್ಥಾನಾದಿಗಳಿಗೆ ದಾನದತ್ತಿಗಳನ್ನೂ ಪ್ರಾಂತ್ಯಾಡಳಿತಗಾರರಿಗೆ ಜಹಗೀರು ಮುಂತಾದವನ್ನೂ ದೃಢೀಕರಿಸುತ್ತಿದ್ದರು.[27]

[1] ಹೆಚ್.ಸಿ. ರಾಯ್‌ಚೌಧುರಿ, ಟಿ.ವಿ. ಮಹಾಲಿಂಗಂ, ಕೆ.ಎ. ನೀಲಕಂಠಶಾಸ್ತ್ರಿ ಮುಂತಾದ ವಿದ್ವಾಂಸರೂ ಇದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ. [2] ಆಲಕ್ತಕ? ‑ಎಲಾಪುರ್ ತಾಮ್ರಪಟಗಳು:ಇಂಡಿಯನ್ ಹಿಸ್ಟಾರಿಕಲ್ ಕ್ವಾರರ‌್ಲಿ, ಸಂಪುಟ ೪, ಪು. ೪೨೫‑೪೩೦ [3] ಪೂರ್ವಭಾಗ ಮತ್ತು ಪಶ್ಚಿಮ ಭಾಗಗಳೆಂದು ವಿಭಾಗಿಸಲಾಗಿದೆ. [4] ಇದು ಚೆಮುಲ್ಯದೇಶವೆಂಬ ಹೆಸರುಳ್ಳ ಉತ್ತರಭಾಗಕ್ಕೆ ಸೇರಿದ್ದು, ಚೆಮುಲ್ಯವು ಪ್ರಮುಖ ಸ್ಥಳವಾಗಿತ್ತು. ಇಂದಿನ ಕೊಲಾಬಾ ಜಿಲ್ಲೆಯ ಚಾಲ್, ಚೆಮುಲ್ಯದ ಆಧುನಿಕ ರೂಪವೆನಿಸಿದೆ. [5] ಚಿಪ್ಲುನ್ ತಾಮ್ರಪಟಗಳು:ಎಪಿಗ್ರಾಫಿಯಾ ಇಂಡಿಕಾ, ಸಂ.೩, ಪು. ೫೦‑೫೩ [6] ಇಂಡಿಯನ್ ಆಂಟಿಕ್ವೆರಿ, ಸಂ.೭, ಪು. ೨೦೯ ‑೨೧೭ [7] ನೆರೂರ್ ತಾಮ್ರಪಟಗಳು:ಇಂಡಿಯನ್ ಆಂಟಿಕ್ವೆರಿ, ಸಂ.೭, ಪು. ೧೬೩‑೧೬೪;ಕೊಛ್ರೆ ತಾಮ್ರಪಟಗಳು:ಇಂಡಿಯನ್ ಆಂಟಿಕ್ವೆರಿ, ಸಂ.೮, ಪು. ೪೪‑೪೭ [8] ಅದೇ, ಸಂ.೯, ಪು. ೧೨೩‑೧೨೫ [9] ಅಂಜನೇರಿ ತಾಮ್ರಪಟಗಳು:ಸೌ.ಇ.ಇ.ಸಂ.೪, ಪು. ೧೪೬‑೧೫೪ [10] ಅದೇ.ಪು. ೧೨೩‑೧೨೭ [11] ಅದೇ.ಪು. ೧೨೭‑೧೩೧ [12] ಎಪಿಗ್ರಾಫಿಯಾ ಇಂಡಿಕಾ, ಸಂ. ೨೮, ಪು. ೧೭‑೨೨ [13] ಸೌ.ಇ.ಇ., ಸಂ.೪, ಪು. ೧೬೫ [14] ಎಪಿಗ್ರಾಫಿಯಾ ಇಂಡಿಕಾ, ಸಂ.೯, ಪು. ೩೧೭‑೩೧೯ [15] ಅದೇ.ಸಂ. ೩೨, ಪು. ೨೧೩‑೨೧೬ [16] ಸೌ.ಇ.ಇ., ಸಂ.೯. ಭಾಗ ೧, ಸಂಖ್ಯೆ, ೪೬ [17] ಜೆ.ಬಿ.ಬಿ.ಆರ್.ಎ.ಎಸ್.ಸಂ. ೧೬, ಪು. ೨೨೫‑೨೨೭, ೨೩೩‑೨೩೭;ಎಪಿಗ್ರಾಫಿಯಾ ಇಂಡಿಕಾ, ಸಂ.೨೨, ಪು. ೨೪‑೨೯ [18] ಎಪಿಗ್ರಾಫಿಯಾ ಇಂಡಿಕಾ, ಸಂ.೩೮, ಪು.೩೩೪, ೩೩೫, ೩೩೭‑೩೩೮;ಸಂ.೩೦, ಪು. ೬೯‑೭೧ [19] ಅದೇ.ಸಂ. ೩೦, ಪು. ೧೨‑೧೭ [20] ಇಂಡಿಯನ್ ಆಂಟಿಕ್ವೆರಿ, ಸಂ. ೧೯, ಪು. ೧೪೬:ಅಡಿಟಿಪ್ಪಣಿ;ಸಂ.೭ ಪು. ೩೦೦ ಅಡಿಟಿಪ್ಪಣಿ [21] ಶಿಗ್ಗಾನ್ ತಾಮ್ರಪಟಗಳು:ಎಪಿಗ್ರಾಫಿಯಾ ಇಂಡಿಕಾ, ಸಂ. ೩೨, ಪು. ೩೧೭‑೩೨೪ [22] ಎಪಿಗ್ರಾಫಿಯಾ ಇಂಡಿಕಾ, ಸಂ. ೧೦, ಪು. ೧೦೦‑೧೦೬ [23] ಕೆ.ವಿ.ರಮೇಶ್:ಚಾಲುಕ್ಯಾಸ್ ಆಫ್ ವಾತಾಪಿ, ಡೆಲ್ಲಿ, ೧೯೮೪, ಪು. ೧೧೨:ಅಡಿಟಿಪ್ಪಣಿ [24] ಮರುತೂರು ತಾಮ್ರಪಟಗಳು, ಸಿ.ಪಿ.ಎ.ಪಿ.ಜಿ.ಎಮ್. ಸಂ.೧, ಪು. ೩೩೦-೩೩೧ [25] ಕಡಲ್ಗಾನ್ ತಾಮ್ರಪಟಗಳು:ಇಂಡಿಯನ್ ಆಂಟಿಕ್ವೆರಿ, ಸಂ. ೧೪, ಪು. ೩೩೦‑೩೩೧ [26] ಹೆಚ್.ಸಿ.ರಾಯ್‌ಚೌಧುರಿ: ಪೊಲಿಟಿಕಲ್ ಹಿಸ್ಟರಿ ಆಫ್ ಏನ್ಷೆಂಟ್ ಇಂಡಿಯಾ, ಕಲ್ಕತ್ತಾ, ೧೯೨೩, ೧೯೭೨. ಪು. ೪೬೬‑೫೩೯ [27] ರಾಜರುಗಳು ದಂಡಯಾತ್ರೆ ಅಥವಾ ತೀರ್ಥಯಾತ್ರೆಯ ಸಂದರ್ಭದಲ್ಲಿ, ಅವರು ತಂಗುತ್ತಿದ್ದ ಸ್ಥಳಗಳಲ್ಲೇ ರಾಜಶಾಸನಗಳನ್ನು ನೀಡುತ್ತಿದ್ದರು.

ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಡಾ. ಇಷಿಕವ ಕಾನ್
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ

Review Overview

User Rating: 4.7 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *