ಭಾರತೀಯ ಶಿಲ್ಪಕಲೆಯು ಸಾಂಕೇತಿಕವೂ ಹೌದು, ಆಧ್ಯಾತ್ಮಿಕವೂ ಹೌದು. ಲಕ್ಷ್ಮಿ ದೇವತೆಯ ಶಿಲ್ಪ ರಚನೆಯಲ್ಲೂ ಇದು ಸತ್ಯವಾದುದು. ಲಕ್ಷ್ಮಿ ಎಂಬ ಪದವು ‘ಲಕ್ಷ್ಮ’ ದಿಂದ ವ್ಯತ್ಪತ್ತಿ ಹೊಂದಿದ್ದು ಅದಕ್ಕೆ ‘ಸಂಕೇತ’ ಎಂಬ ಅರ್ಥವಿದೆ.
ಲಕ್ಷ್ಮಿಪೂಜೆಯು ವೇದಕಾಲದಷ್ಟು ಪ್ರಾಚೀನವಾದುದು. ಋಗ್ವೇದದ ಶ್ರೀಸೂಕ್ತದಲ್ಲಿ ಲಕ್ಷ್ಮಿಯ ವರ್ಣನೆ ಸುದೀರ್ಘವಾಗಿದೆ. ಅತಿ ಪ್ರಾಚೀನ ಗಜಲಕ್ಷಿ ಶಿಲ್ಪಗಳನ್ನು ಭಾರಹುತ ಮತ್ತು ಸಾಂಚಿಯ ಸ್ತೂಪಗಳ ತೋರಣಗಳಲ್ಲಿ ಕಾಣುತ್ತೇವೆ. ಕ್ರಿ.ಪೂ. ಎರಡನೆಯ ಶತಮಾನದಷ್ಟು ಪ್ರಾಚೀನವಾದ ಈ ಶಿಲ್ಪಗಳಲ್ಲಿ ಲಕ್ಷ್ಮಿಯು ಕಮಲದ ಮೇಲೆ ಕುಳಿತಿರುವಂತೆ ಇಲ್ಲವೆ ನಿಂತಂತೆ ಮತ್ತು ಆನೆಗಳಿಂದ ಸೇವೆ ಸ್ವೀಕರಿಸುವಂತೆ ಶಿಲ್ಪಿತಳಾಗಿದ್ದಾಳೆ. ಈ ಶಿಲ್ಪ ವಿನ್ಯಾಸವು ಇಂದಿಗೂ ಹೆಚ್ಚು ಕಡಿಮೆ ಅದೇ ರೂಪದಲ್ಲಿ ಉಳಿದಿರುವುದು ಗಮನಾರ್ಹ ಸಂಗತಿ.
ಗುಲಬರ್ಗಾ ಜಿಲ್ಲೆಯ ಚಿತಾಪುರ ತಾಲೂಕಿನ ಸನ್ನತಿಯ ಬಳಿಯ ಹಸರಗುಂಡಿಯಲ್ಲಿ ಶೋಧಿಸಲಾದ ಬೌದ್ಧ ಧರ್ಮೀಯ ಯಕ್ಷ ಶಿಲ್ಪದಲ್ಲಿ ಕೊರಳಹಾರವಿದ್ದು, ಅದರ ಪದಕದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಇದರ ಕಾಲ ಸು.ಕ್ರಿ.ಶ. ಎರಡನೆಯ ಶತಮಾನ. ಇಲ್ಲಿ ಕೂಡ ದೇವಿಯು ಪದ್ಮ ಪೀಠದಲ್ಲಿ ಕುಳಿತಿದ್ದು, ಬಲಗೈಯಲ್ಲಿ ಕಮಲ ಹಿಡಿದಂತೆ ಎಡಗೈಯನ್ನು ತೊಡೆಯ ಮೇಲೆ ಇಟ್ಟಿರುವಂತೆ ಚಿತ್ರಿತಳಾಗಿದ್ದಾಳೆ. ಶಾತವಾಹನರ ಕಾಲದ ಈ ಶಿಲ್ಪ ವೈಶಿಷ್ಟ್ಯವು ಮುಂಬರುವ ಶತಮಾನಗಳಲ್ಲಿಯೂ ಮುಂದುವರೆದುದನ್ನು ಕಾಣುತ್ತೇವೆ.
ಸಾಮಾನ್ಯವಾಗಿ ಗಜಲಕ್ಷ್ಮಿ ಶಿಲ್ಪವು ಬಾಗಿಲುವಾಡದ ಲಲಾಟಬಿಂಬದಲ್ಲಿ ಬಿಂಬಿತವಾಗಿರುತ್ತದೆ. ಇದು ಒಂದು ಶಿಲ್ಪ ಸಂಪ್ರದಾಯವಾಗಿ ನಂತರ ರೂಢಿಯಲ್ಲಿ ಬಂದಿತೆಂದು ತೋರುತ್ತದೆ. ಚಲುಕ್ಯರ ಅತೀ ಪ್ರಾಚೀನ ಗಜಲಕ್ಷ್ಮಿ ಶಿಲ್ಪವು ಬಾದಾಮಿಯ ಶೈವ ಗುಹಾಲಯದಲ್ಲಿದೆ. ಇದು ಲಲಾಟಬಿಂಬದಲ್ಲಿರದೆ ಕಂಬದ ಮೇಲೆ ಕಂಡರಣೆಗೊಂಡಿದೆ.
ಲಕ್ಷ್ಮಿಗೆ ಮಜ್ಜನಗೈಯುವ ಎರಡು ಆನೆಗಳೆಂದರೆ ಐರಾವತ ಎಂಬ ಗಂಡಾನೆ ಮತ್ತು ‘ಅಭ್ರಮೂ’ ಎಂಬ ಹೆಣ್ಣಾೆ. ಗಜಲಕ್ಷ್ಮಿಯ ಪರಿಕಲ್ಪನೆಯನ್ನು ಋಗ್ವೇದದ ಶ್ರೀ ಸೂಕ್ತದಲ್ಲಿ ಕಾಣುತ್ತೇವೆ. ಎರಡು ಆನೆಗಳಿಂದ ಅಭಿಷೇಕಗೊಳ್ಳುತ್ತಿರುವ ಲಕ್ಷ್ಮಿಯು ಶ್ರೀಫಲ ಮತ್ತು ಪದ್ಮವನ್ನು ಹಿಡಿದಿರುವಳೆಂದು ಹಾಗೂ ಪದ್ಮಾಸನದಲ್ಲಿ ಆಸೀನಳಾಗಿರುವಳೆಂದು ಮತ್ಸ್ಯ ಪುರಾಣವು ತಿಳಿಸುತ್ತದೆ. ಈ ಬಗೆಯ ಪ್ರತಿಮಾ ಲಕ್ಷಣಗಳನ್ನು ‘ಅಭಿಲಷಿತಾರ್ಥ ಚಿಂತಾಮಣಿ’ಯಲ್ಲಿ ಕೂಡ ಹೇಳಲಾಗಿದೆ. ಎರಡು ಆನೆಗಳು ಶಂಖ ಮತ್ತು ಪದ್ಮ ಎಂಬ ಸಂಪತ್ತುಗಳ ದ್ಯೋತಕವೆಂದು ವಿಷ್ಣು ಧರ್ಮೋತ್ತರ ಪುರಾಣವು ತಿಳಿಸುತ್ತದೆ. ಗಣಿತ ಶಾಸ್ತ್ರದ ಮೇರೆಗೆ ಒಂದು ಪದ್ಮವೆಂದರೆ ೧೦೦ ಕೋಟಿ ಮತ್ತು ಒಂದು ಶಂಖವೆಂದರೆ ಕೋಟಿ ಕೋಟಿ. ಈ ಸಂಖ್ಯೆಗಳು ಅನಂತ ಸಂಪತ್ತು ಎಂದು ಸೂಚಿಸುತ್ತದೆ.
ಆನೆಯು ಫಲವತ್ತತೆಯ ಕುರುಹೂ ಹೌದು. ಮುಗಿಲುಗಳು ಮಳೆ ಸುರಿಸಿ ನೆಲವನ್ನು ಫಲವತ್ತಾಗಿ ಮಾಡುತ್ತವೆ. ಮುಗಿಲುಗಳು ಆನೆಯ ಸಹೋದರ ಬಂಧುಗಳೆಂಬ ಕಲ್ಪನಾಕತೆಯುಂಟು. ಆನೆಗಳು ಸೊಂಡಿಲುಗಳಿಂದ ಸುರಿಸುವ ನೀರು ಸಮೃದ್ದಿಯ ಸಂಕೇತ. ಲಕ್ಷ್ಮಿಯು ಧಾನ್ಯ ಲಕ್ಷ್ಮಿಯಾಗಿಯೂ ಪೂಜಿತಳು.
‘ಶಿಲ್ಪರತ್ನ’ವು ಎರಡು ಕೈಗಳಿರುವ ಲಕ್ಷ್ಮಿ ಮತ್ತು ನಾಲ್ಕು ಕೈಗಳಿರುವ ಲಕ್ಷ್ಮಿ ಎಂದು ಎರಡು ಬಗೆಯ ಗಜಲಕ್ಷ್ಮಿಗಳನ್ನು ಪಟ್ಟಿ ಮಾಡಿದೆ. ಚಲುಕ್ಯರ ಶಿಲ್ಪಕಲೆಯಲ್ಲಿ ನಾಲ್ಕು ಕೈಗಳಿರುವ ಲಕ್ಷ್ಮಿ ಶಿಲ್ಪಗಳಿಲ್ಲ. ಚಲುಕ್ಯ ರೂವಾರಿಗಳು ಅವಳನ್ನು ದ್ವಿಭುಜೆಯಾಗಿಯೇ ಚಿತ್ರಿಸಿದ್ದಾರೆ. ದೇವಿಯು ಕುಳಿತಿರುವಂತೆ ಶಿಲ್ಪಿತಳಾಗಿದ್ದಾಳೆ. ಚಲುಕ್ಯ ಶಿಲ್ಪರಾಶಿಯಲ್ಲಿ ಲಕ್ಷ್ಮಿ ನಿಂತಂತೆ ಚಿತ್ರಣಗೊಂಡಿದ್ದು ಕಥಾನಕ ಶಿಲ್ಪಗಳಲ್ಲಿ. ಚಲುಕ್ಯ ಶಿಲ್ಪಗಳು ಕಂಡರಿಸಿದ ಅತ್ಯಂತ ಕಲಾತ್ಮಕವಾದ ಹಾಗೂ ಬೃಹದಾಕಾರದ ಲಕ್ಷ್ಮಿ ಶಿಲ್ಪವೆಂದರೆ ಬಾದಾಮಿಯ ಶಿವ ಗುಹಾಲಯದಲ್ಲಿಯದು. ಇದು ಶಿವ-ನಾರಾಯಣರ ಸಂಯುಕ್ತ ಪ್ರತಿಮೆ. ನಾರಾಯಣನ ಪಕ್ಕದಲ್ಲಿ ಲಕ್ಷ್ಮಿ ನಿಂತಿದ್ದಾಳೆ. ಇವಳು ಗಜಲಕ್ಷ್ಮಿಯಲ್ಲ.
ಈ ಹಿಂದೆ ಹೇಳಿದಂತೆ ಗಜಲಕ್ಷ್ಮಿ ಶಿಲ್ಪಗಳು ಬಾಗಿಲುವಾಡದ ಲಲಾಟಬಿಂಬದಲ್ಲಿ ಬಿಂಬಿತವಾಗಿರುವುದು ವಾಡಿಕೆ. ಆದರೆ ಚಲುಕ್ಯ ಶಿಲ್ಪಾಚಾರ್ಯರು ಗಜಲಕ್ಷ್ಮಿಯನ್ನು ಲಲಾಟಬಿಂಬಕ್ಕೇ ಸೀಮಿತಗೊಳಿಸದೆ ಮೇಲ್ಫಾವಣಿ, ಗೋಡೆ ಹಾಗೂ ಕಂಬಗಳ ಮೇಲೆ ಕಂಡರಿಸಿದ್ದುದು ಗಣನೀಯ.
ಚಾಲುಕ್ಯರ ವಾಸ್ತು ನಿರ್ಮಿತಿಗಳಲ್ಲಿ ಗಜಲಕ್ಷ್ಮಿ ಶಿಲ್ಪಗಳು ಮೂಡಿ ಬಂದುದು ಹೀಗೆ
ಅ ಎರಡು ಆನೆಳೊಂದಿಗೆ ಲಕ್ಷ್ಮಿ
೧. ತೊಲೆಗಳ ಮೇಲೆ
೧. ತಾರಕ ಬ್ರಹ್ಮ ದೇವಾಲಯ, ಆಲಂಪುರ
ಗರ್ಭಗೃಹದ ಲಲಾಟಬಿಂಬದ ಮೇಲೆ ಗಜಲಕ್ಷ್ಮಿ ಶಿಲ್ಪವಿದೆ. ದೇವಿಯು ಪದ್ಮಪೀಠದ ಮೇಲೆ ಕುಳಿತ ಭಂಗಿ ಅಪರೂಪದ್ದಾಗಿದೆ. ಕಾಲುಗಳೆರಡನ್ನು ಇಳಿಬಿಟ್ಟು ಪ್ರಲಂಬಪಾದ ಲಕ್ಷ್ಮಿಯಾಗಿದ್ದಾಳೆ. ಮಹಾಬಲಿಪುರಂನಲ್ಲಿ ನರಸಿಂಹವರ್ಮ ಮಾಮಲ್ಲ ಕೊರೆಯಿಸಿದ ಗಜಲಕ್ಷ್ಮಿ ಶಿಲ್ಪವನ್ನು ನೆನಪಿಸುತ್ತದೆ.
೨. ಇಟಗಿಯ ತೋರಣ
ಕೊಪ್ಪಳ ಜಿಲ್ಲೆಯ ಇಟಗಿಯಲ್ಲಿ ಚಲುಕ್ಯರ ಕಾಲದ ಬಿಡಿ ತೋರಣವಿದ್ದು ಅದರ ತೊಲೆಯ ಎರಡು ಕಡೆಗಳಲ್ಲಿ ಮಧ್ಯಭಾಗವು ಗಜಲಕ್ಷ್ಮಿ ಶಿಲ್ಪಗಳಿಂದ ಅಲಂಕೃತವಾಗಿದೆ. ಗಜಲಕ್ಷ್ಮಿಯನ್ನು ಮಂಗಲದೇವತೆಯಾಗಿ ತೋರಣಗಳಲ್ಲಿ ಕಂಡರಿಸುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಸಾಂಚಿಯ ತೋರಣಗಳಲ್ಲಿಯ ಗಜಲಕ್ಷ್ಮಿ ಶಿಲ್ಪಗಳನ್ನು ಇಲ್ಲಿ ಸ್ಮರಿಸಬಹುದು.
೩. ಕೊಂತ ಗುಡಿ, ಐಹೊಳೆ
ಐಹೊಳೆಯ ಕೊಂತಗುಡಿ(ವ್ಯಾಯವ್ಯ)ಯ ಗರ್ಭಗುಡಿಯ ಮೇಲ್ಗಂಡಿಗೆ ಹೊಂದಿಕೊಂಡಂತೆ ತೊಲೆ ಇದೆ. ಇದರ ಮಧ್ಯದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ. ಸಂಪ್ರದಾಯದಂತೆ ಎರಡು ಆನೆಗಳು ದೇವಿಗೆ ನೀರಿನ ಅಭಿಷೇಕ ಮಾಡುತ್ತಿವೆ. ದೇವಿ ಕುಳಿತಿರುವ ಕಮಲವು ನೆಲಕ್ಕೆ ಮುಖಮಾಡಿರುವಂತೆ ಕೆತ್ತನೆ ಮಾಡಲಾಗಿದೆ.
ಈ ಕಮಲವು ಎಂಟು ದಳಗಳಿಂದಾಗಿದೆ. ಈ ಅಷ್ಟದಳಗಳನ್ನು ಇಂದ್ರದಳ, ಅಗ್ನಿದಳ, ನೈರುತ್ಯದಳ, ವರುಣದಳ, ವಾಯುವ್ಯದಳ, ಕುಬೇರದಳ ಮತ್ತು ಈಶಾನ್ಯದಳಗಳೆಂದು ಕರೆಯಲಾಗಿದೆ. ಈ ದಳಗಳಲ್ಲಿ ಕ್ರಮವಾಗಿ ಭಕ್ತಿ, ಹಸಿವು, ಕ್ರೋಧ, ದ್ವೇಷ, ನಿದ್ರೆ, ಗಮನ, ಧರ್ಮ, ಶೀಲ ವಿಷಯಾಭಿರುಚಿ ಜಾಗೃತಗೊಳ್ಳುವವೆಂದು ಹೇಳಲಾಗಿದೆ.
೧೩ನೆಯ ಶತಮಾನದ ಹೇಮಾದ್ರಿಯು ತನ್ನ ‘ಚತುರ್ವರ್ಗ ಚಿಂತಾಮಣಿ’ಯ ವ್ರತಖಂಡದಲ್ಲಿ ಲಕ್ಷ್ಮಿಯು ಕಮಲದ ಎಂಟುದಳಗಳ ನಡುವೆ ಕುಳಿತಿರುವಂತೆ ಚಿತ್ರಿತಳಾಗಿರಬೇಕೆಂದು ಮತ್ತು ಪಾತ್ರೆಯನ್ನು ಸೊಂಡಿಲಲ್ಲಿ ಹಿಡಿದ ಎರಡು ಆನೆಗಳು ದೇವಿಗೆ ಜಲಾಭಿಷೇಕ ಮಾಡುವಂತಿರಬೇಕೆಂದು ನಿರ್ದೇಶಿಸಿದ್ದಾನೆ. ಈ ಲಕ್ಷಣಗಳುಳ್ಳ ಗಜಲಕ್ಷ್ಮಿಯ ಮೂತಿಯನ್ನು ಏಳನೆಯ ಶತಮಾನದಷ್ಟು ಹಿಂದೆಯೇ ಚಲುಕ್ಯ ರೂವಾರಿಗಳು ರೂಪಿಸಿರುವುದಕ್ಕೆ ಕೊಂತಗುಡಿಯ ಈ ಪ್ರತಿಮೆಯು ಸಾಕ್ಷಿಯಾಗಿದೆ.
೪. ಹುಚ್ಚಪ್ಪಯ್ಯ ಗುಡಿ, ಐಹೊಳೆ
ಇಲ್ಲಿಯ ಗಜಲಕ್ಷ್ಮಿ ಶಿಲ್ಪವು ಸಭಾ ಮಂಟಪದ ಬಾಗಿಲುವಾಡದ ಹಿಂಭಾಗದ ತೊಲೆಯ ಮೇಲಿದೆ. ೫’x೨’ ಗಾತ್ರದ ಈ ಮೂತಿರ್ಯು ಚಲುಕ್ಯರ ಕಾಲದ ಗಜಲಕ್ಷ್ಮಿ ಶಿಲ್ಪಗಳಲ್ಲಿಯೇ ಅತಿದೊಡ್ಡದು. ಹೀಗೆ ದೇವಿಯು ಗರ್ಭಗೃಹದತ್ತ ಮುಖಮಾಡಿರುವಂತೆ ಇರಿಸಲಾದ ಗಜಲಕ್ಷ್ಮಿ ವಿಗ್ರಹವು ಇದೊಂದೇ.
೫. ಬಿಡಿ ಬಾಗಿಲುವಾಡ, ಐಹೊಳೆ
ಹುಚ್ಚಪ್ಪನ ಗುಡಿಯ ದಕ್ಷಿಣಕ್ಕೆ ಅನತಿ ದೂರದಲ್ಲಿ ಏಕಾಂಗಿಯಾಗಿ ನಿಂತ ಬಾಗಿಲುವಾಡವಿದೆ. ಇದರ ಎಡ ಬಲದಲ್ಲಿ ಪೂರ್ಣ ಕಲಶ ಮತ್ತು ನಿಧಿ ಶಿಲ್ಪಗಳಿವೆ. ಸಿ. ಶಿವರಾಮಮೂರ್ತಿಯವರು ಕಮಲಗಳಿಂದ ಕೂಡಿದ ಮಂಗಲ ಕಲಶಗಳು ಲಕ್ಷ್ಮಿಯ ಪ್ರತೀಕವೆಂದು ವಿವರಿಸಿದ್ದಾರೆ. ಶ್ರೀಯು ‘ಕಲಶಾಬ್ಧಿಪುತ್ರಿ’ ಎಂದೂ ‘ಕಲಶಾಬ್ಧಿ ಸಮುದ್ಭವಾ’ ಎಂದೂ ವರ್ಣಿತಳಾಗಿದ್ದಾಳೆ. ಚಲುಕ್ಯರ ಅವಧಿಯಲ್ಲಿ ಪೂರ್ಣಕಲಶಗಳೊಂದಿಗೆ ನಿಧಿಶಿಲ್ಪಗಳು ಕೂಡ ಕೆತ್ತನೆಗೊಂಡಿರುವುದಕ್ಕೆ ಈ ಬಾಗಿಲುವಾಡವು ನಿದರ್ಶನವಾಗಿದೆ.
೨. ಮೇಲ್ಗಂಡಿನಲ್ಲಿ
ಪಟ್ಟದ ಕಲ್ಲಿನ ವಿರೂಪಾಕ್ಷ, ಮಲ್ಲಿಕಾರ್ಜುನ ಮತ್ತು ಪಾಪನಾಥ ಗುಡಿಗಳ ಸಭಾ ಮಂಟಪದ ಮೇಲ್ಗಂಡಿನಲ್ಲಿ ತಲಾ ಒಂದರಂತೆ ಗಜಲಕ್ಷ್ಮಿ ಶಿಲ್ಪಗಳಿವೆ. ಇವೆಲ್ಲಾ ಬಹುಮಟ್ಟಿಗೆ ನಾಶವಾಗಿವೆ. ಈ ಮೂರು ಪ್ರತಿಮೆಗಳಲ್ಲಿ ದೇವಿಯು ವರ್ತುಲಾಕಾರದ ನಕ್ಷೆಗಳಿಂದ ಶೋಭಿತಳಾಗಿದ್ದಾಳೆ.
೩. ಗೋಡೆಯ ಮೇಲೆ
೧. ವಿರೂಪಾಕ್ಷಗುಡಿ, ಪಟ್ಟದಕಲ್ಲು
ಈ ಗುಡಿಯ ದಕ್ಷಿಣಹೊರಗೋಡೆಯ ಮೇಲೆ ಕಲಾತ್ಮಕ ಪುಷ್ಪ ನಕ್ಷೆಗಳಿಂದ ಅಲಂಕೃತ ವಾದ ಗಜಲಕ್ಷ್ಮಿಯನ್ನು ಕಾಣಬಹುದು. ವಾಡಿಕೆಯಂತೆ ದೇವಿಯು ಪದ್ಮ ಪೀಠದ ಮೇಲೆ ಪದ್ಮಾಸನದಲ್ಲಿ ಶಿಲ್ಪಿತಳಾಗಿದ್ದಾಳೆ. ಎಡ ಬಲದಲ್ಲಿನ ಆನೆಗಳು ಅವಳಿಗೆ ಮಜ್ಜನ ಮಾಡಿಸು ತ್ತಿದ್ದಾರೆ.
೨. ಮಲ್ಲಿಕಾರ್ಜುನ ಗುಡಿ, ಪಟ್ಟದ ಕಲ್ಲು
ಈ ಮಂದಿರದ ದಕ್ಷಿಣ ಹೊರಗೋಡೆಯ ಮೇಲೆ ಒಂದು ಗಜಲಕ್ಷ್ಮಿ ಶಿಲ್ಪವಿದ್ದು ಬಹಳಷ್ಟು ತ್ರುಟಿತಗೊಂಡಿದೆ. ದೇವಿ ಕುಳಿತಿರುವ ಪದ್ಮಪೀಠವು ತೌಲನಿಕವಾಗಿ ದೊಡ್ಡದಾಗಿದೆ.
೪. ಕಂಬದ ಮೇಲೆ
೧. ಬಾದಾಮಿಯ ಶಿವ ಗುಹಾಲಯದ ಮೊಗಸಾಲೆಯ ಕಂಬದ ಮೇಲೆ ಗಜಲಕ್ಷ್ಮಿ ಶಿಲ್ಪದ ಕೆತ್ತನೆಯಿದೆ. ದೇವಿಯು ಕಮಲದ ಮೇಲೆ ಆಸೀನಳಾಗಿದ್ದಾಳೆ. ಎಡ ಬಲಗಳಲ್ಲಿ ಒಬ್ಬೊಬ್ಬ ಗಣ ನಿಂತಿದ್ದಾರೆ. ಅವರ ಕೈಯಲ್ಲಿ ಪಾತ್ರೆಯಿದೆ. ನಿಂತ ಭಂಗಿ ಆಕರ್ಷಣೀಯ ವಾಗಿದೆ. ಗಣಗಳ ಮೇಲ್ಭಾಗದಲ್ಲಿ ನೀರು ಸುರಿಯುವ ಆನೆಗಳಿವೆ. ಈ ಆನೆಗಳಿಗೆ ನೀರು ತುಂಬಿದ ಅಭಿಷೇಕ ಪಾತ್ರೆಗಳನ್ನು ಗಣರು ಕೊಟ್ಟಿರಬಹುದೆಂದು ಊಹಿಸಲು ಅವಕಾಶವಿದೆ. ಇದು ವಿಭಿನ್ನ ಲಕ್ಷಣಗಳಿಂದ ಕೂಡಿದ ಗಜಲಕ್ಷ್ಮಿ ಶಿಲ್ಪ. ಚಲುಕ್ಯ ರೂವಾರಿಗಳು ನಿರ್ಮಿಸಿದ ಅತಿ ಪ್ರಾಚೀನ ಗಜಲಕ್ಷ್ಮಿಶಿಲ್ಪವು ಇದೇ.
೨. ಲಾಡಖಾನ ಗುಡಿಯ ಮೊಗಸಾಲೆಯ ಕಂಬವೊಂದರ ಅರ್ಧವರ್ತುಲದಲ್ಲಿ ಇನ್ನೊಂದು ಗಜಲಕ್ಷ್ಮಿ ಮೂರ್ತಿ ಕೆತ್ತನೆಗೊಂಡಿದ್ದು ಯಾವುದೇ ವಿಶೇಷತೆ ಇಲ್ಲದ ಬಡ ಶಿಲ್ಪವದು.
ಆ. ನಾಲ್ಕು ಆನೆಗಳೊಂದಿಗೆ ಲಕ್ಷ್ಮಿ
ಚಲುಕ್ಯ ಕಲಾವಿದರ ಶಿಲ್ಪ ಸೃಷ್ಟಿ ಸಮೃದ್ಧವಾದುದು. ಆ ಶಿಲ್ಪರಾಶಿಗಳಲ್ಲಿ ಲಕ್ಷ್ಮಿಯು ನಾಲ್ಕು ಆನೆಗಳೊಂದಿಗೆ ಕಾಣ ಸಿಗುವುದು ವಿರಳವೆಂದೇ ಹೇಳಬೇಕು. ಕೇವಲ ಮೂರು ಜಾಗೆಯಲ್ಲಿ ಈ ಬಗೆಯ ಗಜಲಕ್ಷ್ಮಿ ಪ್ರತಿಮೆಗಳನ್ನು ಕಾಣಬಹುದು.
೧. ಎರಡನೆಯ ಗುಹಾಲಯ ಬಾದಾಮಿ
ನಾಲ್ಕು ಆನೆಗಳಿರುವ ಗಜಲಕ್ಷ್ಮಿ ಶಿಲ್ಪಗಳಲ್ಲಿ ಪ್ರಾಚೀನವಾದುದು. ಇಲ್ಲಿಯ ಮೊಗಸಾಲೆಯ ಕಂಬವೊಂದರಲ್ಲಿ ದೇವಿಯು ಚಿತ್ರಿತಳಾಗಿದ್ದಾಳೆ. ಎರಡು ಆನೆಗಳು ದೇವಿಗೆ ಜಲಾಭಿಷೇಕವನ್ನು ಮಾಡುತ್ತಿವೆ. ಮೇಲಿನ ಮೂಲೆಗಳಲ್ಲಿ ಮತ್ತೆ ಎರಡು ಆನೆಗಳಿವೆ. ದೇವಿಯ ಸೇವೆಗೆಂದು ಸರದಿಯಲ್ಲಿವೆ ಎಂದು ಕಲ್ಪಿಸಬಹುದು. ಲಕ್ಷ್ಮಿಯು ಕಮಲದ ಮೇಲೆ ಕುಳಿತಿರುವಳು. ಮೂಲತಃ ಕಮಲವು ವರ್ಣರಂಜಿತವಾಗಿತ್ತೆಂಬುದು ಬಣ್ಣದ ಅವಶೇಷಗಳಿಂದ ಗೊತ್ತಾಗುತ್ತದೆ. ಆರ್.ಡಿ. ಬ್ಯಾನರ್ಜಿಯವರು ಈ ದೇವಿಯು ಚತುರ್ಭುಜೆ ಎಂದು ಹೇಳಿರುವರಾದರೂ, ಅವಳು ದ್ವಿಭುಜೆ ಎಂಬುದು ಸ್ಪಷ್ಟ.
೨. ಗೌಡರ ಗುಡಿ, ಐಹೊಳೆ
ಈ ಗುಡಿಯ ಬಾಗಿಲುವಾಡವು ಕಲಾತ್ಮಕವಾದ ಕೆತ್ತನೆಯಿಂದ ಕೂಡಿದೆ. ಲಲಾಟಬಿಂಬದಲ್ಲಿ ಗರುಡನಿದ್ದಾನೆ. ಅದರ ಮೇಲ್ಭಾಗ(architrave)ದಲ್ಲಿ ಗಜಲಕ್ಷ್ಮಿ ಶಿಲ್ಪವನ್ನು ಕಂಡರಿಸಲಾಗಿದೆ. ಸರೋವರದಿಂದ ಹೊರಬಂದ ದೊಡ್ಡದಾದ ಕಮಲದ ಮೇಲೆ ದೇವಿಯು ಆಸೀನಳಾಗಿದ್ದಾಳೆ. ಎರಡು ಆನೆಗಳು ನೀರನ್ನು ಸುರಿಯುತ್ತಿವೆ. ಇನ್ನೆರಡು ಆನೆಗಳು ಕೆಳಗೆ ಸರೋವರದಲ್ಲಿ ಈಜುತ್ತಿವೆ. ಹೀಗೆ ನಾವು ತಿಳಿದಿರುವ ಪ್ರತಿಮಾ ಲಕ್ಷಣಗಳಿಂದ ಈ ಗಜಲಕ್ಷ್ಮಿ ಶಿಲ್ಪವು ಭಿನ್ನವಾಗಿದೆ.
೩. ವಿರೂಪಾಕ್ಷಗುಡಿ, ಪಟ್ಟದಕಲ್ಲು
ಈ ದೇವಾಲಯದ ಪೂರ್ವದ ಗೋಡೆಯ ಮೇಲಿರುವ ಶಿವನ ವಿಗ್ರಹದ ಮೇಲ್ಭಾಗದಲ್ಲಿ ಒಂದು ಗಜಲಕ್ಷ್ಮಿಯ ಮೂರ್ತಿಯು ಕೆತ್ತನೆಗೊಂಡಿದೆ. ಇಲ್ಲಿ ನಾಲ್ಕು ಆನೆಗಳು ದೇವಿಯ ಜಲಾಭಿಷೇಕ ಮಾಡುವಲ್ಲಿ ನಿರತವಾಗಿವೆ. ಎರಡು ಆನೆಗಳು ಕುಳಿತುಕೊಂಡು ಸೊಂಡಿಲಲ್ಲಿ ಹಿಡಿದ ಪಾತ್ರೆಯಿಂದ ನೀರನ್ನು ಸುರಿಯುತ್ತಿವೆ. ಅವುಗಳ ಹಿಂದೆ ಇನ್ನೆರಡು ಆನೆಗಳ ಮುಖಗಳನ್ನು ರೂವಾರಿ ಸಂಯೋಜಿಸಿದ್ದಾನೆ. ಅವು ಸೊಂಡಿಲಲ್ಲಿ ಪಾತ್ರೆ ಹಿಡಿದಿವೆ. ಇಲ್ಲಿಯೂ ಕೂಡ ಲಕ್ಷ್ಮಿಯು ಕಮಲದ ಮೇಲೆ ಆಸೀನಳಾಗಿರುವಳು.
ದೇವಿಯು ನಿಂತಿರುವಂತೆ ಯಾವ ಗಜಲಕ್ಷ್ಮಿ ಶಿಲ್ಪದಲ್ಲಿಯೂ ಚಲುಕ್ಯ ರೂವಾರಿಗಳು ಚಿತ್ರಿಸಿಲ್ಲವೆಂಬುದು ಈ ಮೇಲಿನ ಸಮೀಕ್ಷೆಯಿಂದ ಸ್ಪಷ್ಟವಾಗುತ್ತದೆ. ಚಲುಕ್ಯರ ಗಜಲಕ್ಷ್ಮಿ ಶಿಲ್ಪಗಳು ಲಲಾಟಬಿಂಬದಲ್ಲಿ ಚಿತ್ರಿತವಾಗಿರುವುದರ ಜೊತೆಗೆ ಛತ್ತು, ಗೋಡೆ ಮತ್ತು ಕಂಬಗಳ ಮೇಲೆ ಕೆತ್ತನೆಗೊಂಡಿವೆ. ರಾಷ್ಟಕೂಟರ ಕಾಲದಲ್ಲಿ ಗಜಲಕ್ಷ್ಮಿ ಪ್ರತಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡವು. ಕ್ರಮೇಣ ಈ ಶಿಲ್ಪಗಳು ಬಾಗಿಲುವಾಡದ ಲಲಾಟಬಿಂಬಗಳಿಗೆ ಸೀಮಿತಗೊಂಡು ಒಂದು ಶಿಲ್ಪ ಸಂಪ್ರದಾಯವನ್ನು ರೂಪಿಸಿದವೆನ್ನ ಬಹುದು.
ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಶೀಲಾಕಾಂತ ಪತ್ತಾರ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ಎ. ಮುರಿಗೆಪ್ಪ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ