Baadami Kotegalu

ಬಾದಾಮಿ ಚಾಲುಕ್ಯರು : ಬಾದಾಮಿ ಚಾಲುಕ್ಯರ ಕೋಟೆಗಳು ವಿನ್ಯಾಸ ಹಾಗೂ ವಾಸ್ತು ವಿಶೇಷ

ವಾನವನಂತೂ ಶಿಲಾಯುಗದಿಂದ ನಮ್ಮ ಈ ಆಧುನಿಕ ೨೧ನೆಯ ಶತಮಾನದ ವರೆಗೂ ತನ್ನ ಸ್ವರಕ್ಷಣೆಗಾಗಿ ಮನೆಗಳನ್ನೂ ಗ್ರಾಮ ಗೋಡೆಗಳನ್ನೂ ನಗರ-ರಾಜಧಾನಿಗಳ ಕೋಟೆಗಳನ್ನೂ ವಿವಿಧ ಶೈಲಿಗಳಲ್ಲಿ ಸಾಮಗ್ರಿಗಳಲ್ಲಿ ವಿನ್ಯಾಸವಾಸ್ತುಗಳಲ್ಲಿ ಕಟ್ಟುತ್ತಲೇ ಬಂದಿದ್ದಾನೆ. ಇದು ಸಂಕ್ಷಿಪ್ತತೆಯಲ್ಲಿ ಬದುಕಿಗಾಗಿ, ಜೀವಿಸುವುದಕ್ಕಾಗಿ, ರಕ್ಷಣೆಗಾಗಿ ಗವಿ ಯಿಂದ ಕೋಟೆಯವರೆಗೂ ರಕ್ಷಣಾ ವ್ಯವಸ್ಥೆಯು ನಡೆದು ಬಂದ ದಾರಿ.

ಇನ್ನು ರಾಜಸ್ವ, ರಾಜ್ಯ, ಆಡಳಿತ ಮೇರೆಗಳು, ನಾಡು, ದೇಶಗಳ ಪರಿಕಲ್ಪನೆಯು ವಾಸ್ತವದಲ್ಲಿ ನೆಲೆಯೂರಲು ಸಾಗಿದಾಗ ಆಯಾ ರಾಜರುಗಳು, ತಮ್ಮ ತಮ್ಮ ನೆಲವನ್ನು ಹಾಗೂ ತಮ್ಮ ತಮ್ಮ ಜನವನ್ನು ರಕ್ಷಿಸುವ ವ್ಯವಧಾನದಲ್ಲಿ ಕೋಟೆ ಕೊತ್ತಲಗಳನ್ನು ನಿರ್ಮಿಸುವುದು ಅವಶ್ಯವಾಯಿತು. ವಿವಿಧ ಪ್ರಾದೇಶಿಕ ಹಾಗೂ ಭೌಗೋಳಿಕ ಪರಿಸರದಲ್ಲಿ ಕೋಟೆಗಳ ವೈವಿಧ್ಯತೆ ಮೂಡಿಬಂದಿತು. ಕೌಟಿಲ್ಯ, ಮಯಮತ, ಮಾನಸಾರರಂಥ ವಿದ್ವಾಂಸರುಗಳು ರಾಜ, ರಾಜಸ್ವ ಹಾಗೂ ಪ್ರಾಚೀನ ಗ್ರಂಥಗಳಲ್ಲಿ ನಮೂದಿಸಲಾದ ಕೋಟೆಗಳು, ಇಷ್ಟಿಕಾದುರ್ಗ, ಪಾಷಾಣದುರ್ಗ, ಮೃದದುರ್ಗ, ಮರುದುರ್ಗ, ದಾರುದುರ್ಗ, ನರದುರ್ಗ, ಸ್ಥಲದುರ್ಗ, ಗಿರಿದುರ್ಗ, ವನದುರ್ಗ ಹಾಗೂ ಜಲದುರ್ಗಗಳೆಂಬ ಕೋಟೆಗಳ ಪ್ರಕಾರಗಳ ರಚನೆಗಳ ನಿಬಂಧಗಳನ್ನು ನಿರ್ಧರಿಸಿದರು. ವಿಷ್ಣುಪುರಾಣ, ಶುಕ್ರನೀತಿಸಾರ, ಮನುಸ್ಮೃತಿ, ಅಭಿಲಷಿತಾರ್ಥ ಚಿಂತಾಮಣಿಗಳಂಥ ಗ್ರಂಥಗಳು ಕೋಟೆಗಳ ಬಗ್ಗೆ ವಿವರಿಸಿವೆ. ಈ ಪೂರ್ವದಲ್ಲಿ, ಇತಿಹಾಸದ ಅರುಣೋದಯದಲ್ಲಿ, ವೇದಗಳು, ರಾಮಾಯಣ ಮಹಾಭಾರತ ಗಳು ಕೋಟೆಗಳ ವಿಷಯವನ್ನು ಸ್ಪರ್ಶಿಸಿವೆ. ಇಲ್ಲಿ ಊಗ, ಕೋಟೆಗಳ ಪರಿಕಲ್ಪನೆ (Concept pg Forts) ಇಷ್ಟು ಸಾಕು. ಹೇಳಬೇಕಾದರೆ ಬಹಳಷ್ಟಿದೆ.

‘ಬಾದಾಮಿ ಚಾಲುಕ್ಯರ ಕೋಟೆಗಳು’ ಎಂಬ ವಿಷಯವು ಪ್ರಾಚೀನ ಕರ್ನಾಟಕದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ಬಾದಾಮಿ ಚಾಲುಕ್ಯರಂಥ ಬಲಿಷ್ಠ ರಾಜಮನೆತನದ ಕೊಡುಗೆಯು (ಜಯಸಿಂಹ ಕ್ರಿ.ಶ. ೫೦೦-೫೨೦ರಿಂದ ಕೊನೆಯ ಅರಸು ಕೀರ್ತಿವರ್ಮ ಕ್ರಿ.ಶ. ೭೪೫-೭೫೭) ಘನವಾದುದು ಅಪಾರವಾದುದು ಹಾಗೂ ತದನಂತರ ಆಳಿದ ಬೇರೆ ಬೇರೆ ಕನ್ನಡ ನಾಡಿನ ಅರಸುಮನೆತನಗಳಿಗೆ ದಿಕ್-ಸೂಚಿ ಆದುದು ಆಗಿದೆ.

ಬಾದಾಮಿ ಚಾಲುಕ್ಯರು: ಒಂದು ಸ್ಥೂಲ ಅವಲೋಕನ

‘ಧರಾಧರೇಂದ್ರರೆಂದೂ…, ಹಿರಣ್ಯ ಗರ್ಭ ಸಂಭೂತರೆಂದೂ…, ಪರಮ ಭಾಗವತ ರೆಂದೂ…, ತಮಗೆ ತಾವೇ ಅಭಿದಾನ ನೀಡಿ, ಸಾರ್ಥಕ್ಯವಾಗಿ, ವೈಭವೋಪೇತವಾಗಿ, ಮೆರೆದ ಇತಿಹಾಸ ಕಟ್ಟಿದ ಈ ಬಾದಾಮಿ ಚಾಲುಕ್ಯ ಅರಸರು ಸಾಂಸ್ಕೃತಿಕ ಧೀಮಂತರು. ಅವರು ಕೇವಲ ತಾವು ಬದುಕಬೇಕೆಂದು ಬದುಕಲಿಲ್ಲ. ಬೌದ್ದಿಕ ವಿಕಸನದಲ್ಲಿ ಬದುಕಿದರು, ಸಂಸ್ಕೃತಿಗಾಗಿ ಬದುಕಿದರು, ನಾಡಿಗಾಗಿ ಬದುಕಿದರು. ತಾವು ನಂಬಿದ ಧರ್ಮ ಸಂಪ್ರದಾಯದ ನೂರಾರು ಗುಡಿಗಳನ್ನೂ, ಕೋಟೆ ಕೊತ್ತಲುಗಳನ್ನೂ, ಕೆರೆ ಭಾವಿ ಸರೋವರಗಳನ್ನೂ ಕಟ್ಟಿಸಿ ತಮ್ಮ ಬದುಕನ್ನು ಕೃತಾರ್ಥಗೊಳಿಸಿದರು. ಈ ಭರತ ಖಂಡದ ಇತಿಹಾಸದಲ್ಲಿ ಎಂದೂ ಮರೆಯದ ವಿಸ್ತಾರವಾದ ಸಾಮ್ರಾಜ್ಯ ಕಟ್ಟಿ, ಅದರ ಪುಟಗಳಲ್ಲಿ ತಮ್ಮನ್ನು ತಾವೇ ಬರೆದರು.

ಅವರು ನಿರ್ಮಿಸಿದ ಐಹೊಳೆ, ಬಾದಾಮಿ, ಪಟ್ಟದಕಲ್ಲು ಆಲಂಪುರ (ಕೃಷ್ಣೆ ತುಂಗಭದ್ರೆಯರ ಸಂಗಮ ತಾಣ ಕರ್ನೂಲು ಜಿಲ್ಲೆ ಆಂಧ್ರ) ಇತ್ಯಾದಿಗಳಲ್ಲಿ ದೇವಾಲಯಗಳ ಸಂಕುಲವು ಇಡೀ ಭರತ ವರ್ಷದ ದೇವಾಲಯಗಳ ನಿರ್ಮಿತಿಗೆ ನಾಂದಿ ಹಾಡಿವೆ. ಅವರ ಸ್ಥಪತಿಗಳು, ಅವರ ಶಿಲ್ಪಿಗಳು, ವಾಸ್ತುಶಾಸ್ತ್ರಜ್ಞರು ದೇವಾಲಯಗಳ ‘ಕಟ್ಟುವಿಕೆ’ಯನ್ನೇ ಒಂದು ಆಹ್ವಾನವಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿ ಅದರ ಅಂತಃಶಕ್ತಿಯಿಂದ (Chalenge) ಎಷ್ಟೊಂದು ತರಹದ ಗುಡಿಗಳ ನಿರ್ಮಿತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಐಹೊಳೆ ನೋಡಿ: ಎಲ್ಲಿ ನೋಡಿದಲ್ಲಿ ನೂರಾರು ಪ್ರಾಯೋಗಿಕ ವ್ಯವಸ್ಥೆಗೆ ಅಳವಡಿಸಿದ ದೇವಾಲಯ ಗಳು. ‘ನಾಗರ’, ‘ದ್ರಾವಿಡ’ ಹಾಗೂ ‘ಕಂದಬ ನಾಗರ’ಗಳೆಂಬ ವಾಸ್ತುಮೂಸೆ ಯಲ್ಲಿ, ಕೆಂಪಾದ ಮರಳು ಕಲ್ಲಿನಲ್ಲಿ (Red sand stone) ಎರಕ ಹೊಯ್ದಿದ್ದಾರೆ. ದೇವಾಲಯಗಳ ಬಗ್ಗೆ ಇಷ್ಟು ಸಾಕು(Dr. S.Rajashekara: A Study of Ailhole Temples, Ph.D. Thesis).

ಇನ್ನು ಈ ದೇವಾಲಯಗಳನ್ನೊಳಗೊಂಡು, ಪ್ರಜಾವಸತಿ ತಾಣಗಳನ್ನು ಆವರಿಸಿ, ತಮ್ಮ ವಾಸ್ತವ್ಯದ ನೆಲೆಗಳನ್ನು (ಅರಮನೆ, ರಾಣಿವಾಸ ಇತ್ಯಾದಿಗಳನ್ನು ಇನ್ನೂ ಶೋಧಿಸಬೇಕಾಗಿದೆ) ಸುತ್ತುವರಿದು ರಕ್ಷಣಾ ಗೋಡೆಗಳನ್ನು(Forts) ನಿರ್ಮಿಸಿದ್ದಾರೆ. ಈ ಸಂಪ್ರಬಂಧದಲ್ಲಿ ಐಹೊಳೆ, ಬಾದಾಮಿ, ಪಟ್ಟದಕಲ್ಲು ಹಾಗೂ ಇನ್ನಿತರ ಅವರ ಆಡಳಿತ ಕ್ಷೇತ್ರಗಳಲ್ಲಿ ಕಟ್ಟಿಸಿದ ಕೋಟೆಗಳ ವಾಸ್ತುವಿಶೇಷವನ್ನು (Defence Architecture) ಪ್ರಾಮುಖ್ಯವಾಗಿ ಕೈಗೆತ್ತಿ ಕೊಳ್ಳಲಾಗಿದೆ.

ಬಾದಾಮಿ ಚಾಲುಕ್ಯರ ಕ್ಷಾತ್ರ ತೇಜ

ಜಿತೇನ ಲಭ್ಯತೇರ್ಲಕ್ಷ್ಮೀ ಮೃತೇನಾಪಿ ಸುರಾಂಗನಾ
ಕ್ಷಣ ವಿಧ್ವಂಸಿನೀ ಕಾಯೇ ಕಾ ಚಿಂತಾ ಮರಣೇ ರಣೆ’

ಈ ಗಂಡೆದೆಯ ಘೋಷಣೆಯು ಬಾದಾಮಿಯ ಕೋಟೆಯ ಕಲ್ಲುಬಂಡೆಗಳ ಮೇಲೆ ಹತ್ತಾರು ಕಡೆ ವೀರಗಾಥೆಯಾಗಿ ಕೊರೆಯಲ್ಪಟ್ಟಿದೆ(ಡಾ.ಶ್ರೀನಿವಾಸ ರಿತ್ತಿ). ‘ಜಯಿಸಿದರೆ ಸಂಪದ್ ಲಕ್ಷ್ಮೀ ದೊರೆಯುತ್ತಾಳೆ, ಮರಣ ಹೊಂದಿದರೆ ಸ್ವರ್ಗದ ಅಪ್ಸರೆ ದೊರಕುತ್ತಾಳೆ, ಅದಾಗಿ ಯುದ್ಧ ಭೂಮಿಯಲ್ಲಿ ಕಾದುವುದಲ್ಲದೆ ಮತ್ತೊಂದರ ಚಿಂತೆ ಏಕೆ?’ ಈ ಶಿಲಾಶಾಸನವು ಚಾಲುಕ್ಯ ಯೋಧರಿಗೆ ಹೆಜ್ಜೆಹೆಜ್ಜೆಗೂ ಸ್ಫೂರ್ತಿ ನೀಡಿರಲು ಸಾಕು. ಹಾಗಾಗಿ, ಚಾಲುಕ್ಯರು ಶೂರಭಟರಾಗಿರಲು ಸಾಕು.

ಸಪ್ತಸಾಗರಗಳನ್ನೇ ಕುಡಿದ ಅಗಸ್ತ್ಯ ಮುನಿಯ ಆರ್ಘ್ಯದ ಚಳಕದಿಂದ (ಬೊಗಸೆ) ಹೊರಬಂದ ಈ ವಾತಾಪಿ ಚಾಲುಕ್ಯರು (‘ಚಲುಕ್ಯ’ ಸರಿಯಾದ ಹೆಸರು, ಡಾ.ಕೆ.ವಿ.ರಮೇಶ್) ಹಾಗೆ ನೋಡಿದಲ್ಲಿ ಯುದ್ಧಪ್ರಿಯರು. ರಣಾಂಗಣ ಇವರ ಮೇಲ್ವಾಸಿಗೆ. ಸಂಸ್ಥಾಪಕ ಜಯಸಿಂಹ ನಿಂದ ಹಿಡಿದು (ಕ್ರಿ.ಶ. ೫೦೦-೫೨೦) ಕೊನೆಯ ಅರಸು ದ್ವಿತೀಯ ಕೀರ್ತಿವರ್ಮರಿಗೆ (ಕ್ರಿ.ಶ.೭೪೫-೭೫೭) ಎಲ್ಲರೂ ರಣಗಾಗರೇ! ದ್ವಿತೀಯ ಪುಲಿಕೇಶಿ ಕ್ರಿ.ಶ. (೬೧೦-೬೫೨) ನರ್ಮದೆಯ ದಡಕ್ಕೆ ಹೋಗಿ ಹರ್ಷವರ್ಧನನನ್ನೇ ಸೋಲಿಸಿದ. ಮುಂದೆ ಬಂದ ವಿಕ್ರಮಾದಿತ್ಯ (ಕ್ರಿ.ಶ.೬೫೫-೬೮೦) ವಿನಯಾದಿತ್ಯ(ಕ್ರಿ.ಶ. ೬೮೧-೬೯೫), ವಿಜಯಾದಿತ್ಯ ಎರಡನೆಯವ (ಕ್ರಿ.ಶ. ೬೯೬-೭೩೩) ಹಾಗೂ ವಿಕ್ರಮಾದಿತ್ಯ ಎರಡನೆಯವ (ಕ್ರಿ.ಶ. ೭೩೩-೭೪೫) ಮತ್ತು ಕೀರ್ತಿವರ್ಮ ದ್ವಿತೀಯ (ಕ್ರಿ.ಶ.೭೪೫-೭೫೭) ಮುಂತಾದವರೆಲ್ಲ ದಕ್ಷಿಣದ ಪಲ್ಲವರನ್ನು ಸದೆಬಡಿಯುತ್ತಿದ್ದರು. ಹೀಗಾಗಿ ಯುದ್ಧದಲ್ಲಿಯೇ ತೊಡಗಿದ ಇವರು ಸಾಮಾನ್ಯವಾಗಿ ತಾವು ಗೆದ್ದುಕೊಂಡ ಸ್ಥಳಗಳಲ್ಲಿ ಶಾಶ್ವತವಾದ ಕೋಟೆಗಳನ್ನು ಕಟ್ಟಲು ಅಷ್ಟಾಗಿ ಉತ್ಸುಕತೆ ತೋರಿಸಲಿಲ್ಲ. ಹಾಗಾಗಿ ಕೋಟೆಗಳ ಸಂಖ್ಯೆಯಲ್ಲಿ ಕೊರತೆ.

‘ವೆಂಗಿ’ ಚಾಲುಕ್ಯರು, ಗುಜರಾತಿನ ಸೋಲಾಂಕಿಗಳು

ಬಾದಾಮಿ ಚಾಲುಕ್ಯರಿಂದ ಕುಡಿಯೊಡೆದ ವಂಶಜರಾದ ಆಂಧ್ರದ ‘ವೆಂಗಿ’ ಚಾಲುಕ್ಯರು ಹಾಗೂ ಗುಜರಾತಿನ ‘ಸೋಲಾಂಕಿ’ ಚಾಲುಕ್ಯರು ಇತಿಹಾಸ ಸಂಶೋಧಕರಿಗೆ ಗ್ರಾಸ ಒದಗಿ ಸುತ್ತಾರೆ. ಈ ದಿಸೆಯಲ್ಲಿ ಸಂಶೋಧನೆ ಇನ್ನೂ ಅಗತ್ಯ. ಯುವ ಇತಿಹಾಸ ಸಂಶೋಧಕರು, ಈ ದಿಸೆಯಲ್ಲಿ ಮಹಾಪ್ರಬಂಧಗಳಿಗಾಗಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬಹುದು.

ಪ್ರಾಸಂಗಿಕವಾಗಿ ಯುದ್ಧ ಹಾಗೂ ಕೋಟೆಗಳ ಬಗ್ಗೆ ಈ ಸಂಪ್ರಬಂಧ ಓಡುತ್ತಿರುವುದರಿಂದ, ಇಲ್ಲಿ ‘ಕೋಟಾ ಚಕ್ರಶಾಸ್ತ್ರ’ ಎಂಬ ಇತ್ತೀಚಿನ ಅತ್ಯಂತ ವಿಸ್ಮಯಕಾರಕ ಜ್ಞಾನವನ್ನು ಇಲ್ಲಿ ವಿವರಿಸಬೇಕೆಂದರೆ, ಅದೇನೂ ವಿಷಯಬಾಹಿರವಾಗಲಿಕ್ಕಿಲ್ಲ ಎಂದು ನನ್ನ ಅನಿಸಿಕೆ. ಕೋಟೆಗಳನ್ನು ಗೆಲ್ಲುವುದಕ್ಕಾಗಿ ಅನುಸರಿಸುವ ಶಾಸ್ತ್ರವೇ ‘ಕೋಟಾ ಚಕ್ರಶಾಸ್ತ್ರ’ (ಡಾ.ಎಚ್.ಚಂದ್ರಶೇಖರ್: ‘ಕರ್ನಾಟಕದ ಕೋಟೆಗಳ ಅಂತರಂಗದಲ್ಲಿ…’ ಪ್ರಜಾವಾಣಿ ದೀಪಾವಳಿ-೨೦೦೦ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಶೋಧನೆ). ಈ ‘ಕೋಟಾಚಕ್ರ ಶಾಸ್ತ್ರವು’ ಬಹಳ ಕುತೂಹಲಕಾರಿಯಾಗಿದೆ. ಇದು ಸ್ವಲ್ಪಮಟ್ಟಿಗೆ ಜ್ಯೋತಿಶ್ಶಾಸ್ತ್ರದಿಂದ ಪ್ರೇರಿತವಾದ ಮೂಢನಂಬಿಕೆಗಳಿಂದ ಈ ಶಾಸ್ತ್ರದ ಪ್ರಕಾರ ವೈರಿಯ ಕೋಟೆಯ ಮಣ್ಣಿನ ಕೋಟೆಯಾಗಿದ್ದರೆ ಒಡೆಯಬೇಕು. ಜಲದುರ್ಗವಾಗಿದ್ದರೆ ನೀರನ್ನು ಹೊರಗೆ ಹರಿಯಲು ಬಿಡಬೇಕು. ಗ್ರಾಮ ಕೋಟೆಯಾಗಿದ್ದರೆ ಬೆಂಕಿ ಇಡಬೇಕು. ಗಹ್ವರ ಕೋಟೆಯಾಗಿದ್ದರೆ ಪ್ರವೇಶಿಸಿ ಸ್ವಾಧೀನಪಡಿಸಿಕೊಳ್ಳಬೇಕು. ಗಿರಿದುರ್ಗವಾಗಿದ್ದರೆ ಬಂಡೆಗಳನ್ನು ಒಡೆಯಬೇಕು. ಭಟಾವರ ದುರ್ಗವಾದರೆ ತನ್ನ ಸೈನಿಕರನ್ನು ನಿಯೋಜಿಸಿ ಯುದ್ಧ ಮಾಡಿ ಗೆಲ್ಲಬೇಕು. ಅರಸನು ಆಕ್ರಮಣ ಮಾಡುವ ಮೊದಲು ಯಾವ ದಿಕ್ಕಿನಲ್ಲಿ ಯಾವ ಕ್ರೂರ ಗ್ರಹಗಳು ಇವೆ ಎಂಬುದನ್ನೂ ತಿಳಿದುಕೊಂಡು ಮುನ್ನುಗ್ಗಬೇಕು ಹಾಗೂ ತನಗೆ ಯಾವುದು ಅನುಕೂಲಕರವಾದ ಲಗ್ನ(ಮುಹೂರ್ತ)ವಿದೆಯೋ ಆ ಕಾಲವನ್ನು ಹುಡುಕಿ ವಿಜಯಯಾತ್ರೆ ಕೈಗೊಳ್ಳಬೇಕು.

ಅದೇ ‘ಕೋಟಾ ಚಕ್ರಶಾಸ್ತ್ರವು’ ಮುಂದುವರಿದು ಈ ತರಹದ ಆಕ್ರಮಣದ ವಿವರಗಳನ್ನು ನೀಡುತ್ತದೆ. ಕಂದಕಗಳಿಂದ ನೀರನ್ನು ಅಗೆದು ಹೊರಹೋಗುವಂತೆ ಮಾಡಬೇಕು. ಅಲ್ಲಿ ಮಣ್ಣನ್ನು ತುಂಬಿ ಸೇತುವೆಯನ್ನು ಕಟ್ಟಬೇಕು. ನೀರು ಒಂದು ವೇಳೆ ಆಳವಾಗಿದ್ದರೆ ಸಣ್ಣ ಸಣ್ಣ ದೋಣಿಗಳಿಂದ ದಾಟಬೇಕು. ಕೋಟೆಯನ್ನು ಸುತ್ತುವರಿದು ಆಹಾರ ಪದಾರ್ಥಗಳು ಕೋಟೆಯೊಳಗೆ ಪ್ರವೇಶಿಸದಂತೆ ತಡೆದು ಕೋಟೆಯೊಳಗಿನ ಅನ್ನದ ಕೊರತೆಯಿಂದ ಬಳಲುವಂತೆ ಮಾಡಬೇಕು. ಕಲ್ಲು, ಮಣ್ಣು, ಇಟ್ಟಿಗೆಗಳಿಂದ ಕಟ್ಟಲಾದ ದುರ್ಗಗಳನ್ನು ಯಂತ್ರಗಳಿಂದ ಅಗೆದು ಉರುಳಿಸಬೇಕು. ನೂರು ಸಹಸ್ರ ಕೊಡಲಿಗಳಿಂದ ಗಿಡಮರಗಳನ್ನು ಕಡಿದೊಗೆಯಬೇಕು.

‘ವನದುರ್ಗಗಳಿದ್ದರೆ ಕಾಡ್ಗಿಚ್ಚಿನಿಂದ ಸುಡಬೇಕು. ಬೇಗನೆ ಹೊತ್ತಿಕೊಳ್ಳುವ ಎಣ್ಣೆಯಿಂದ ಹತ್ತಿ ಉಂಡೆಗಳನ್ನು ಬಾಣಗಳ ತುದಿಗೆ ಬಿಗಿಯಾಗಿ ಕಟ್ಟಿ, ಕೋಟೆಯೊಳಗೆ ಬೆಂಕಿ ಹಚ್ಚಿ ಎಸೆಯಬೇಕು. ಅಂದರೆ ಒಳಗಡೆ ದೂರದವರೆಗೆ ಬೆಂಕಿ ಹರಡಿ ಮನೆ ವಠಾರಗಳು ಸುಡಲು ಪ್ರಾರಂಭಿಸಿ ವೈರಿಗಳ ಮನೋಧೈರ್ಯ ಕುಸಿದು, ಎತ್ತಲೂ ಹಾಹಾಕಾರ ಉದ್ಭವಿಸುತ್ತದೆ. ನೀರಿನ ಅಭಾವದಿಂದ ಒಳಗಿನ ಜನರಿಗೆ ಸಾವನ್ನಪ್ಪುವ ಹಾಗೆ ಮಾಡಬೇಕು. ತನ್ನ ಸೈನಿಕರಿಗೆ ನೀರನ್ನು ದೂರದಿಂದ ತರಿಸಿಯಾದರೂ ತೃಪ್ತಿಪಡಿಸಬೇಕು. ಆನೆ ಮತ್ತು ಕುದುರೆಗಳಿಂದ ನರದುರ್ಗವನ್ನು ಭಗ್ನಗೊಳಿಸಬೇಕು. ಹೀಗೆ ನಾನಾ ವಿಧದ ಆಕ್ರಮಣಕಾರಿ ಕ್ರಮಗಳನ್ನು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿಯೂ, ತದನಂತರ ಮಯಮತ, ಮಾನಸಾರಗಳಲ್ಲೂ ಹೇಳಿದೆ. ಅಲ್ಲದೆ ಇತ್ತೀಚಿನ ಕೆಳದಿ ನೃಪ ಬಸವರಾಜರು ವಿರಚಿತ “ಶಿವತತ್ವ ರತ್ನಾಕರ”ದಲ್ಲಿಯೂ ಹೇಳಿದೆ.

ಐಹೊಳೆ ಕೋಟೆ: ವಾಸ್ತು, ವಿನ್ಯಾಸ ಇತ್ಯಾದಿ

ಐಹೊಳೆ (ಆರ್ಯಪುರವೆಂದು ಶಾಸನದಲ್ಲಿ ಕರೆಯಲಾಗಿದೆ. ಡಾ.ಎಸ್.ಆರ್.ರಾವ್) ಬಾದಾಮಿ ಚಾಲುಕ್ಯರ ಮೂಲ ರಾಜಧಾನಿಯಾಗಿತ್ತು. ಬಾದಾಮಿಯು ರಾಜಧಾನಿಯಾಗುವ ಪೂರ್ವದಲ್ಲಿ, ಜಯಸಿಂಹ (ಕ್ರಿ.ಶ. ೫೦೦-೫೨೦) ಹಾಗೂ ರಣರಾಗರ (ಕ್ರಿ.ಶ.೫೨೦-೫೪೦) ಕಾಲದಲ್ಲಿ ಐಹೊಳೆ ರಾಜಧಾನಿ ಆಗಿತ್ತು. ತದನಂತರ ಮೊದಲನೆಯ ಪುಲಿಕೇಶಿಯು (ಕ್ರಿ.ಶ. ೫೪೦-೫೬೬) ಬಾದಾಮಿಯಲ್ಲಿ ದುರ್ಗವನ್ನು ಕಟ್ಟಿಸಿ, ಅಲ್ಲಿಗೆ ರಾಜಧಾನಿಯನ್ನು ಸ್ಥಳಾಂತರಿ ಸಿದನು.

ಈ ಐಹೊಳೆ ಕೋಟೆಯ ೩/೪ ಭಾಗ ಅಂದರೆ ಉತ್ತರ ಪಶ್ಚಿಮ ಹಾಗೂ ದಕ್ಷಿಣ ಭಾಗ ಗಳಲ್ಲಿ ಸ್ಥಳದುರ್ಗವೇ ಆಗಿದೆ. ಸಪಾಟಾದ ಪ್ರದೇಶವನ್ನು ಆಕ್ರಮಿಸಿದೆ. ಪೂರ್ವ-ದಕ್ಷಿಣ ಭಾಗದಲ್ಲಿ ಬೆಟ್ಟದವರೆಗೆ ಗೋಡೆ ಕಟ್ಟಿದ್ದು, ಅಂದರೆ ಮೇಗುತಿ ದೇವಾಲಯದ ಗುಡ್ಡದವರೆಗೆ ಕಲ್ಲಿನ ಗೋಡೆಯಿಂದ ಸುಭದ್ರವಾಗಿರಲು ಸಾಕು. ಈಗ ಮಾತ್ರ ಅಲ್ಲಲ್ಲಿ ಗೋಡೆಯ ಭಾಗಗಳು ಉಳಿದಿವೆ(Chunks of Fort Wall). ವಿನ್ಯಾಸದಲ್ಲಿ ಯಾವುದೇ ನಿರ್ದಿಷ್ಟ ಭೂಮಿತಿ ಆಕೃತಿ ಯನ್ನು (Geometrical pattern) ಹೊಂದಿಲ್ಲ. ಸ್ಥಳ ದೊರೆತಂತೆ ಹಾಗೂ ಅಗತ್ಯಕ್ಕೆ ಬೇಕಾದಂತೆ ಗೋಡೆಯನ್ನು ಕಟ್ಟುತ್ತ ಹೋಗಿದ್ದಾರೆ. ಪೂರ್ವ-ಪಶ್ಚಿಮ ಹಾಗೂ ದಕ್ಷಿಣೋತ್ತರ ವಾಗಿ ನೇರ ಅಳತೆಯಲ್ಲಿ (Axialway) ಸುಮಾರು ಒಂದು ಕಿಲೋಮೀಟರ್‌ನಷ್ಟಾಗಬಹುದು. ಕೋಟೆಯ ಗೋಡೆಯ ಸುತ್ತ ಕಂದಕ ಅಳವಡಿಸಲಾಗಿದ್ದು, ಗುಡ್ಡದ ಕೊಳ್ಳದಿಂದ ಹರಿದು ಬರುವ ನೀರನ್ನು ಕಂದಕದಲ್ಲಿ ಸಂಗ್ರಹಿಸಲಾಗುತ್ತಿತ್ತು ಹಾಗೂ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಹರಿದ ಹಳ್ಳ ಹಾಗೂ ಅದರ ಅನತಿದೂರದಲ್ಲಿ ಹರಿವ ಮಲಪ್ರಭೆಯ ನೀರನ್ನು, ಕಾಲುವೆ ಕಡಿದು ಉಪಯೋಗಿಸಲಾಗಿದೆ. ಇದನ್ನು ಅಂಬಿಗೇರ ಗುಡಿ (ನಾವಾಡಿಗರಿರುವ ಪ್ರದೇಶ) ಆಚೆಗೆ ವಿಸ್ತಾರವಾಗಿ ಹಬ್ಬಿಕೊಂಡ ತೋಟದಲ್ಲಿ ಈ ನೀರಿನ ಕಾಲುವೆಯನ್ನು ಕಾಣಬಹುದು.

ಕೋಟೆಯ ಪೂರ್ವ ಭಾಗದ ಮಧ್ಯದಲ್ಲಿ ಪ್ರವೇಶದ್ವಾರ, ದುರ್ಗಾ ದೇವಸ್ಥಾನದ ಉತ್ತರ ಬದಿಯಲ್ಲಿ ಪ್ರವೇಶದ್ವಾರ (ಈಗ ಸ್ವಲ್ಪ ಭಾಗವೇ ಉಳಿದಿದೆ) ಹಾಗೂ ದಕ್ಷಿಣ-ಪಶ್ಚಿಮ ಮೂಲೆಯಲ್ಲಿ ಅಂದರೆ ನೈಋತ್ಯ ಮೂಲೆಯಲ್ಲಿ ಹನುಮಾನ ದೇವಸ್ಥಾನದ ಹತ್ತಿರ ಮತ್ತೊಂದು ಪ್ರವೇಶ ದ್ವಾರ ಹೀಗೆ ಕೇವಲ ಮೂರು ದ್ವಾರಗಳು ಮಾತ್ರ ಉಳಿದಿವೆ. ಇವುಗಳ ವಿನ್ಯಾಸವು ರಕ್ಷಣಾ ವ್ಯವಸ್ಥೆಯನ್ನು ಹೊಂದಿ, ವೈರಿಗಳನ್ನು ದಿಗ್‌ಭ್ರಮೆಗೊಳಿಸಲು ಇಂಗ್ಲಿಷ್ ‘Z’ ಆಕಾರದಲ್ಲಿ ಕಟ್ಟಲಾಗಿದೆ. ಇವುಗಳಿಗೆ ‘Barbican’ ಎಂದು ಹೆಸರು. ಬುರುಜುಗಳು ಕೋಟೆಯ ಹೊರಗೋಡೆಗೆ ಹೊಂದಿಕೊಂಡು, ಅರ್ಧ ಚೌಕಾಕಾರದವುಗಳಾಗಿವೆ. ವರ್ತುಲಾಕಾರ ಅಥವಾ ಅರ್ಧ ವರ್ತುಲಾಕಾರದವು ಇಲ್ಲವೇ ಇಲ್ಲ. ಏಕೆಂದರೆ ಆಗಿನ ಯುದ್ಧಕಲೆ (Art of War) ಕೇವಲ ಬಿಲ್ಲು, ಬಾಣ, ಭರ್ಚಿ, ಖಡ್ಗ ಇತ್ಯಾದಿಗಳನ್ನು ಅವಲಂಬಿಸಿದ್ದು, ಚೌಕಾಕಾರದ ಬುರುಜುಗಳು, ಮೂರೂ ನಿಟ್ಟಿನಲ್ಲಿ ಸೈನಿಕರನ್ನು ನಿಲ್ಲಿಸಿ, ಆಕ್ರಮಣಕಾರರನ್ನು ಹೊಡೆ ದೋಡಿಸಲು ಅನುವು ಮಾಡಿಕೊಡುತ್ತವೆ.

ಇಲ್ಲಿ, ರಾಜರ ಅರಮನೆ ರಾಣಿವಾಸ ಇತ್ಯಾದಿಗಳನ್ನು ಸಂಶೋಧಿಸಿದರೂ ಈವರೆಗೆ ದೊರೆತಿಲ್ಲ. ಜನವಸತಿಯ ಮಧ್ಯದಲ್ಲಿ ನೂರಾರು ಗುಡಿಗಳೂ ಕೆಲವು ಹೊಕ್ಕು ತುಂಬುವ ಬಾವಿಗಳೂ ಇವೆ. ೧೯೬೦-೭೦ರ ಸುತ್ತಮುತ್ತ ಡಾ.ಎಸ್.ಆರ್.ರಾವ್ ಹಾಗೂ ಅವರ ಟೀಮ್ ಇಲ್ಲಿಯ ದೇವಾಲಯಗಳ ಸುತ್ತ ಇದ್ದ ಮನೆಗಳನ್ನು ಅಕ್ವಾಯರ್ ಮಾಡಿ, ಸುಂದರ ವಾದ ಹೂದೋಟಗಳನ್ನು ನಿರ್ಮಿಸಿ, ಉತ್ತಮ ಜೀರ್ಣೋದ್ಧಾರದ ಕ್ರಮವನ್ನೂ ಕೈಗೊಂಡಿದ್ದಾರೆ.

ಬಾದಾಮಿ ಕೋಟೆಗಳು

(ಕಾಲವಿಸ್ತಾರ ಕ್ರಿ.ಶ.೬ ಶತಕದಿಂದ ೧೮ನೆಯ ಶತಮಾನದವರೆಗೆ)

‘ಆರ್ಯಪುರ’ದಿಂದ ಐಹೊಳೆಯಿಂದ ವಾತಾಪಿಗೆ-ಬಾದಾಮಿಗೆ ಚಾಲುಕ್ಯರ ಉತ್ತರಾರ್ಧ ಕಾಲದಲ್ಲಿ, ಅಂದರೆ ಪುಲಿಕೇಶಿ(ಪ್ರಥಮ)ಯ ಸಮಯದಲ್ಲಿ ಆಡಳಿತ ಕೇಂದ್ರ ಸ್ಥಳಾಂತರ ಗೊಂಡಿತು. ಆತನು ಬಾದಾಮಿಯಲ್ಲಿ ದುರ್ಗಮಯವಾದ ಅಭೇದ್ಯವಾದ ಕೋಟೆಯನ್ನು ಕಟ್ಟಿಸಿದ ಶಿಲಾಶಾಸನವೊಂದು ಹೇಳುತ್ತದೆ. ಇದು ಬಾದಾಮಿಯ ಉತ್ತರದ ಕೋಟೆಯಲ್ಲಿ ಸ್ವಾಭಾವಿಕ ಆಳವಾದ ಕಂದರ ನಿರ್ಮಾಣವಾಗಿದ್ದು, ಅಲ್ಲಿ ಬಂಡೆಗಲ್ಲಿನ ಮೇಲೆ ಚಾಲುಕ್ಯ ಮೊದಲ ಪುಲಕೇಶಿಯು(ಕ್ರಿ.ಶ. ೫೪೦-೫೬೬), ಈ ಕೋಟೆಯನ್ನು ಕಟ್ಟಿಸಿದ ಬಗ್ಗೆ ಶಾಸನ ಕೊರೆದಿದ್ದಾನೆ. ಅದರ ಕಾಲ ಕ್ರಿ.ಶ. ೫೪೩. ಇದು ದ.ಭಾ. ಇತಿಹಾಸದಲ್ಲಿ ಕಾಲ ನಿರ್ಧರಿತ ಕೋಟೆ ಎಂದು(Datable Fort) ಹೇಳಬಹುದು. ಇದರ ಶೋಧವನ್ನು ೧೯೪೦ರಲ್ಲಿ ವಿದ್ವಾನ್ ಡಾ.ಆರ್.ಎಸ್.ಪಂಚಮುಖಿ ಮಾಡಿದರು. ಅದರ ಪಠ್ಯ ಹೀಗಿದೆ.(Panchamukhi R.S.K.I, ೧೯೪೦, Vol.ii)

ಸ್ವಸ್ತಿ ಶತವರ್ಷೇಷು ಚತುಶ್ಯತೇಷು ಪಂಚಷಷ್ಟಿಯುತೇಷು,
ಅಶ್ವಮೇಧಾದಿಯಜ್ಞಾನಾಮ್ ಯಾಜ್ವಶ್ರೋತ ವಿಧಾನತಃ
ಹಿರಣ್ಯಗರ್ಭ ಸಂಭೂತಶ್ಚಲುಕ್ಯೊ ವಲ್ಲಭೇಶ್ವರಃ
ಧರಾಧರೇಂದ್ರ ವಾತಾಪಿಮಜೇಯಮ್ ಭೂತಯೇ ಭುವಃ
ಅಧಸ್ತಾತುಪರಿಷಚಾಶ್ಚ ದುರ್ಗಮೇತದ ಚೀಕರತ್

ಈ ಅಭೇದ್ಯವಾದ ದುರ್ಗವನ್ನು ಗುಡ್ಡದ ಮೇಲೆಯೂ ಅದರ ಕೆಳಗಡೆಯೂ ಶಕವರ್ಷದಲ್ಲಿ ನಾಲ್ಕು ಶತಕ ಹಾಗೂ ಪಂಚಷಷ್ಟಿ(೪೦೦ ಹಾಗೂ ೬೫ ವರುಷದಲ್ಲಿ)ಯಲ್ಲಿ, ಅಂದರೆ ೪೬೫+೭೮=೫೪೩ ಕ್ರಿಸ್ತ ಶಕದಲ್ಲಿ ಕಟ್ಟಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸುತ್ತದೆ. ಇಲ್ಲಿ ಅಲ್ಲಲ್ಲಿ ಬಿಟ್ಟ ಬಂಡೆಗಲ್ಲುಗಳ ಕಂದರಗಳನ್ನು ಗೋಡೆಗಳಿಂದ ಜೋಡಿಸಿ, ಗಿರಿದುರ್ಗ ವನ್ನು ಕಟ್ಟಲಾಗಿದೆ. ನಂತರ ಕೆಳಗಡೆ ಕಾಲಾಂತರದಲ್ಲಿ ಈ ಭಾಗವು ರಾಷ್ಟ್ರಕೂಟರ ಸ್ಥಳದುರ್ಗವು ಕಟ್ಟಲ್ಪಟ್ಟಿದೆ(೯ನೆಯ ಶತಮಾನ); ನಂತರ ಅದರ ಆಚೆಗೆ ವಿಜಯನಗರದ ಕಾಲದ (೧೬-೧೭ ಶತಕದ) ಹಾಗೂ ಟಿಪ್ಪುಸುಲ್ತಾನರ (೧೮ನೆಯ ಶತಮಾನ) ಕೋಟೆ ದಕ್ಷಿಣ ಗುಡ್ಡದ ಮೇಲೆ ಕಟ್ಟಲ್ಪಟ್ಟಿವೆ.

ಉತ್ತರದ ಗುಡ್ಡ ದಕ್ಷಿಣದ ಗುಡ್ಡ ಇವೆರಡರ ಮಧ್ಯೆ ಆಗಸ್ತ್ಯ ಸರೋವರವು ತನ್ನ ಸಂರಕ್ಷಣ ಪಾತಳಿಯನ್ನೇ ಸ್ವಾಭಾವಿಕವಾಗಿ ನಿರ್ಮಿಸಿದೆ. ಈ ಸರೋವರದ ಈಶಾನ್ಯ ದಿಕ್ಕಿನಲ್ಲಿ ‘ತಟ ಕೋಟೆ’ ಎಂದು ಈಗಲೂ ಕರೆಯಲ್ಪಡುತ್ತಿದ್ದು, ‘ತಟ’ ಅಂದರೆ ‘ದಡ’ ‘ನೀರಿನ ಅಂಚೆ’ ಎಂದರ್ಥ. ಹಾಗಾಗಿ ಈ ಸರೋವರದ ದಡದಲ್ಲಿ ಕಟ್ಟಲಾದ ಈ ಕೋಟೆಗೆ ತಟಕೋಟೆ ಎಂದು ಕರೆದಿರಲು ಸಾಕು. ಇದು ಚಾಲುಕ್ಯರ ಕಾಲದ್ದೆ. ಜನವಸತಿ ಬೆಳೆದಂತೆ ಇದನ್ನು ಕಟ್ಟಲಾಯಿತು. ಇದು ಈಗ ಸಂಪೂರ್ಣ ನಶಿಸಿದೆ. ರಾಷ್ಟ್ರಕೂಟರ ಕಾಲದ ಕೋಟೆಯ ಪ್ರವೇಶದ್ವಾರ ದಕ್ಷಿಣಾಭಿಮುಖವಾಗಿ ಹೇಗೋ ಅಳಿದುಳಿದು ನಿಂತಿದೆ. ವಿಜಯನಗರ ಕಾಲೀನ ಕೋಟೆಯು ಈಗಿನ ಮಾರ್ಕೆಟನ್ನುಸುತ್ತುವರಿದಿತ್ತು. ಅದರಾಚೆ ಅಗಳವೂ ಇತ್ತು.೪೦ ವರುಷಗಳ ಹಿಂದೆ ಈ ಲೇಖಕನು ನೋಡಿದಂತೆ. ಆದರೆ ಈಗ ಹೊಸ ಬಾದಾಮಿ(New Badami)ಊರು ಬೆಳೆದಿದೆ. ಒಟ್ಟಿನಲ್ಲಿ ಇದು ಗಿರಿದುರ್ಗ, ಸ್ಥಳದುರ್ಗ ಹಾಗೂ ಜಲದುರ್ಗಗಳ ಸಂಕೀರ್ಣವೆಂದು ಹೇಳಬಹುದು.

ಪಟ್ಟದಕಲ್ಲಿನ ಸಿವಿಲಿಯನ್ ಫೋರ್ಟ್

ದಕ್ಷಿಣ ಭಾರತದ ರತ್ನತ್ರಯ ದೇವಾಲಯಗಳಲ್ಲಿ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ, ಎಲ್ಲೋರದ ಕೈಲಾಸನಾಥ ದೇವಾಲಯ, ತಂಜಾವೂರಿನ ಬೃಹದೀಶ್ವರ ದೇವಾಲಯ ಹೀಗೆ ಈ ಮೂರು ದೇವಸ್ಥಾನಗಳು ಇಡೀ ಭಾರತದ ದೇವಮಂದಿರಗಳಲ್ಲಿ, ಅವುಗಳ ಸರಮಾಲೆಯಲ್ಲಿ ‘ಕರ್ಮಣಿ ಸರದೋಳ್ ಚಂಬವಳಮಂ ಕೋದಂತಿರೆ’ ಅಂತಾಗಿ ಹೊಳೆಯುತ್ತಿವೆ. ಪಟ್ಟದಕಲ್ಲಿನ (ಈಗ ಬಾಗಲಕೋಟ ಜಿಲ್ಲೆ) ದೇವಾಲಯಗಳ ಸಮೂಹವೂ ಬಾದಾಮಿ ಚಾಲುಕ್ಯರ ಅನನ್ಯ ಕೊಡುಗೆ. ಇಲ್ಲಿ ೬-೮ನೇ ಶತಮಾನಗಳ ಕಾಲಸಂಪುಟದಲ್ಲಿ ವಾಸ್ತುಶಾಸ್ತ್ರದ ಪರಿಪೂರ್ಣತೆಯೇನೋ ಅನ್ನಿಸುವಂತೆ; ಉತ್ತರವಾಹಿನಿಯಾಗಿ ಹರಿವ ಮಲಪ್ರಭೆಯ ದಂಡೆಯಲ್ಲಿ ಉತ್ತಮೋತ್ತಮ ದೇವಾಲಯಗಳನ್ನು ಬಾದಾಮಿ ಚಾಲುಕ್ಯರು ನಿರ್ಮಿಸಿದ್ದಾರೆ. ವಿರೂಪಾಕ್ಷ, ಸಂಗಮೇಶ್ವರ, ಕಾಶಿ ವಿಶ್ವನಾಥ, ಗಳಗನಾಥ, ಪಾಪನಾಥ ಇತ್ಯಾದಿಗಳನ್ನು ರೇಖಾನಾಗರ, ದ್ರಾವಿಡ ವಿಮಾನ ಹಾಗೂ ಕದಂಬನಾಗರ ಶೈಲಿಯ ಶಿಖರಗಳ ಸುಂದರ ಹಾಗೂ ಪರಿಪೂರ್ಣತೆಯ ಉದಾಹರಣೆಗಳಾಗಿವೆ. ಇವು ಕೆಂಪಡರಿದ ಕಪೋಲಗಳ ಅಪ್ಸರೆಯಂತೆ, ಸಂಧ್ಯಾ ಸಮಯದಲ್ಲಿ ಗೋಚರಿಸುತ್ತವೆ(Percy Brown).

ಇಲ್ಲಿ, ಚಾಲುಕ್ಯ ಅರಸುಗಳು ತಮ್ಮ ಸಿಂಹಾಸನಾರೂಢ ಸಮಯದಲ್ಲಿ ರಾಜ್ಯದ ಗದ್ದುಗೆ-ಪಟ್ಟವನ್ನು ಏರುತ್ತಿದ್ದರಿಂದ, ಆ ಸಮಯದ ನೆನಪಿಗಾಗಿ ಒಂದೊಂದು ದೇವಸ್ಥಾನ ಕಟ್ಟಿಸುತ್ತಿದ್ದರೆಂಬ ಪ್ರತೀತಿ; ಅದರಂತೆ ವಿಜಯೋತ್ಸವಗಳಲ್ಲಿಯೂ ಕೂಡ. ಹಾಗಾಗಿ ‘ಪಟ್ಟದ ಕಿಸುವೊಳಲ್’ ಎಂಬ ಅಭಿದಾನವೂ ಕೂಡ ಈ ಸ್ಥಾನಕ್ಕೆ ಬಿದ್ದಿದೆ.

ಈ ದೇವಸ್ಥಾನಗಳ ಸಾಮಾನ್ಯ ರಕ್ಷಣೆಗಾಗಿ, ಇಡಿಯಾದ ಅವುಗಳ ಸಮೂಹದ ರಕ್ಷಣೆಗಾಗಿ, ರಕ್ಷಣಾ ಗೋಡೆಗಳನ್ನು ಸುತ್ತಲೂ ಕಟ್ಟಿದ್ದಾರೆ. ಪೂರ್ವ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ರಕ್ಷಣಾ ಗೋಡೆಗಳ ಭಾಗಗಳು ಉಳಿದಿವೆ. ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ಅಸ್ತಿತ್ವದಲ್ಲಿ ಇಲ್ಲ. ದೇವಾಲಯಗಳ ರಕ್ಷಣೆಗೆ ಅಷ್ಟೊಂದು ರಕ್ಷಣಾ ಚಾಕಚಕ್ಯತೆಗಳೇನೂ ಬೇಡ. ಅದಾಗಿ ಸಿಂಪಲ್-ಸರಳ ಸೀದಾ ಸಾದಾ-ಗೋಡೆ ಕಟ್ಟಿ, ಅವುಗಳನ್ನು ಒಂದು ಚೌಕಟ್ಟಿನಲ್ಲಿ ಇಡಲಾಗುತ್ತದೆ. ಇಂಥ ರಕ್ಷಣಾ ಗೋಡೆಗಳಿಗೆ ಸಾರ್ವಜನಿಕ ಕೋಟೆ (Civilian Forts) ಎಂದು ಕರೆಯಲಾಗುತ್ತದೆ(ಡಾ.ಎ.ಸುಂದರ). ಇಂಥ ‘ಸಿವಿಲಿಯನ್ ಫೋರ್ಟ್‌ಗಳು’, ತದನಂತರ ಗತಿಸಿದ ಕಾಲದಲ್ಲಿ ‘Temple forts’ಗಳಾಗಿ ದೇವಸ್ಥಾನಗಳ ರಕ್ಷಣಾ ಗೋಡೆಗಳೆಂದು, ಗುಡಿಗಳ ಸುತ್ತ, ತಂಜಾವೂರು, ಶ್ರೀರಂಗಂ, ಮಧುರೈ, ತಿರುವಂತಪುರಂ, ತಿರುಪತಿ, ಗುರುವಾಯೂರು, ಇತ್ಯಾದಿಗಳಲ್ಲಿ ಕಾಣಬಹುದು. ಇವು ಮೂರು, ನಾಲ್ಕು, ಐದು ಸುತ್ತುಗಳಿಂದ ಕೂಡ ಅಳವಡಿಸಲಾಗಿದೆ. ಇವುಗಳಲ್ಲಿ ವಿವಿಧ ಜನ ವಸತಿಗಳೂ ಇರುತ್ತವೆ ‘City Temple’ ‘ನಗರ ದೇವಸ್ಥಾನ’ಗಳೆಂದು ಕರೆಯಲ್ಪಡುತ್ತವೆ(Coomar aswami: ‘Cities and City Gates’, Vol.ii, London, ೧೯೩೦). ಇಷ್ಟು ಇದು ಪಟ್ಟದಕಲ್ಲಿನ ಕಥೆ.

ಇನ್ನಿತರ ಬಾದಾಮಿ ಚಾಲುಕ್ಯರ ಕೋಟೆಗಳು

ಈ ಸಂಶೋಧಕನಿಂದ ಬಾದಾಮಿ ಚಾಲುಕ್ಯರ ಇನ್ನಿತರ ತಾಣಗಳಲ್ಲಿ ಅವರ ಕೋಟೆಯ ಅವಶೇಷಗಳನ್ನು ಶೋಧಿಸಲಾಗಿದೆ. ಇನ್ನೂ ಶೋಧದ ಅವಶ್ಯಕತೆ ಇದೆ.

ಹಲಸಿ: (ತಾ: ಖಾನಾಪುರ, ಜಿ: ಬೆಳಗಾವಿ),‘Ancient Palasika’-ಪ್ರಾಚೀನ ‘ಪಲಾಸಿಕಾ’ ಎಂದು ಕರೆಯಲ್ಪಡುವ ಈ ತಾಣದಲ್ಲಿ, ಕದಂಬ ಅರಸನಾದ ಮೃಗೇಶವರ್ಮನ (ಕ್ರಿ.ಶ.೫೦೦ರ) ದೊರೆತ ತಾಮ್ರ ಪಟ ಶಾಸನದ ಪ್ರಕಾರ ಇದು ಕದಂಬರ ಆಡಳಿತದಲ್ಲಿ ಇದ್ದಿತ್ತು. ಅಲ್ಲಿ ಮೃದ್‌ಕೋಟೆಯ ಅವಶೇಷಗಳು, ಮಣ್ಣಿನ ದಿಬ್ಬಗಳು ಅರ್ಧಚಂದ್ರಾ ಕೃತಿಯಲ್ಲಿ ವಿನ್ಯಾಸದಲ್ಲಿ ಉಳಿದಿವೆ ಹಾಗೂ ಪ್ರಾಯಶಃ (ಡಾ.ಅ.ಸುಂದರ) ಅರಮನೆಯ ಹಾಳುಬಿದ್ದ ಅಧಿಷ್ಠಾನಗಳು ಕಾಣಸಿಗುತ್ತವೆ. ಈ ಭಾಗವು ಈಗಿನ ವಸತಿಯ ನೈಋತ್ಯ ದಿಕ್ಕಿನಲ್ಲಿ ಹಬ್ಬಿಕೊಂಡಿದೆ. ಮೊದಲನೆಯ ಪುಲಿಕೇಶಿ (ಬಾದಾಮಿ ಚಾಲುಕ್ಯ) ಇದನ್ನು ಯುದ್ಧ ಮಾಡಿ ಜಯಿಸಿದನೆಂದು ಪ್ರತೀತಿ. ತದನಂತರ ಇದು ಬಾದಾಮಿ ಚಾಲುಕ್ಯರ ಒಂದು ಆಡಳಿತ ಕೇಂದ್ರವಾಗಿತ್ತು. ಈ ಊರಿನ ಪಶ್ಚಿಮಕ್ಕೆ ತುಸು ಅಂತರದಲ್ಲಿ ಗುಡ್ಡದ ಮೇಲಿರುವ ‘ರಾಮತೀರ್ಥ’ವೆಂದು ಕರೆಯಲ್ಪಡುವ ಪ್ರದೇಶದಲ್ಲಿ ದೇವಾಲಯಗಳಿವೆ ಹಾಗೂ ಅಲ್ಲಲ್ಲಿ ಕೋಟೆಯ ಅವಶೇಷಗಳೂ (ಕಲ್ಲಿನಲ್ಲಿ) ಇವೆ. ಬಾದಾಮಿ ಚಾಲುಕ್ಯರು ಈ ಪ್ರದೇಶದ ರಕ್ಷಣಾ ಗೋಡೆಗಳನ್ನು ಜೀರ್ಣೋದ್ಧಾರಗೊಳಿಸಿರಲು ಇಲ್ಲಿ ಅವರ ಕೈಯಾಡಿದೆ. ಹೆಚ್ಚಿನ ಸಂಶೋಧನೆ ಹಾಗೂ ಉತ್ಖನನಗಳ ಅವಶ್ಯಕತೆ ಇದೆ.

ಹೂಲಿ: (ತಾಲೂಕು: ಸೌಂದತ್ತಿ, ಜಿ.ಬೆಳಗಾವಿ) ಇಲ್ಲಿ ವಿಶಾಲ ಕೆರೆ; ಅದರ ಉತ್ತರಕ್ಕೆ ಎತ್ತರವಾದ ಗುಡ್ಡ ಅದರ ಮೇಲೆ ಪ್ರಾಚೀನ ಕೋಟೆ; ಬಹಳ ಶಿಥಿಲವಾಗಿದೆ. ಆದರೂ ಅದರ ಪೂರ್ಣ ವಿನ್ಯಾಸ ಕಾಣಸಿಗುತ್ತದೆ. ಇದು ಬಾದಾಮಿ ಚಾಲುಕ್ಯರ ಆಡಳಿತದಲ್ಲಿ ಇತ್ತು. ಮಂಗಳೇಶನು, ಶಾಂತಿನಾಥಗೆ ದತ್ತಿ ನೀಡಿದ ಬಗ್ಗೆ ‘ಕಾಪರ್‌ಪ್ಲೇಟ್’ ಸೂಚಿಸುತ್ತದೆ. ಸಮೀಪದ ಕಿರುವತ್ತಕೆರೆಯಲ್ಲಿ ಚಿಕ್ಕಕೋಟೆ ಹಾಗೂ ಗುಡಿಗಳು ಇವತ್ತಿವು ಬಾದಾಮಿ ಚಾಲುಕ್ಯರ ಸಮಯದವೆಂದು ಅವುಗಳ ವಾಸ್ತುವೈಶಿಷ್ಟ್ಯದಿಂದ ಹೇಳಬಹುದು. ಹೂಲಿಯ ಕೆರೆಯ ಸುತ್ತ ಸುಂದರವಾದ ದೇವಾಲಯಗಳಿವೆ. ಕೆಲವು ಮೂಲತಃ ಬಾದಾಮಿ ಚಾಲುಕ್ಯರ ಕೃತೇನ ಆಗಿ, ನಂತರ ಲೇಟರ್ ಚಾಲುಕ್ಯರ (ಕಲ್ಯಾಣ) ಕೈಯಿಂದ ವಿಸ್ತೃತಗೊಂಡಿರಲು ಸಾಕು. ಈ ಕೋಟೆಯು ಛತ್ರಪತಿ ಶಿವಾಜಿಯಿಂದ ಕ್ರಿ.ಶ.೧೬೭೪ರಲ್ಲಿ ಮತ್ತೊಮ್ಮೆ ಜೀರ್ಣೋದ್ಧಾರಗೊಂಡಿದೆ(Surya nath Kamat: belgaum District Gazetteer). ಇನ್ನೂ ಇಲ್ಲಿ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ.

ಇಂಚಲ: (ಜಿ.ಬೆಳಗಾವಿ); ಇಲ್ಲಿ ಆರಂಭದ ಚಾಲುಕ್ಯರ ದೇವಸ್ಥಾನಗಳು, ಹಾಗೂ ಅವುಗಳನ್ನುರಕ್ಷಿಸುವ ರಕ್ಷಣಾಗೋಡೆ(Civilian fort) ಇದೆ. ಇದು ವಿಜಯನಗರದ ಕಾಲದಲ್ಲಿ ಆಡಳಿತ ಮಹತ್ವದ ತಾಣವಾಗಿತ್ತು. ಇಲ್ಲಿಯ ಕೋಟೆ ಮತ್ತು ದೇವಸ್ಥಾನಗಳು ಆಗ ಜೀರ್ಣೋದ್ಧಾರಗೊಂಡಿವೆ(Suryanatha Kamat).

ಉಪಸಂಹಾರದಲ್ಲಿ ಹೇಳಬೇಕಾದರೆ, ಬಲಿಷ್ಠ ರಾಜಮನೆತನದ ಬಾದಾಮಿ ಚಾಲುಕ್ಯರು ಕನ್ನಡ ನೆಲದ ಕೀರ್ತಿ ಮೆರೆದಿದ್ದಾರೆ. ದೇವಸ್ಥಾನಗಳ ನಿರ್ಮಾಣದಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆದರೆ ರಣರಂಗರಾದ ಅವರು ಹೆಚ್ಚಾಗಿ ಯುದ್ಧಗಳಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡರು. ಹಾಗಾಗಿ ವಿಶಿಷ್ಟ ಕೋಟೆಗಳ ಬಗ್ಗೆ ಅಷ್ಟಾಗಿ ಗಮನ ಕೊಡಲಿಲ್ಲ. ನರ್ಮದೆಯಿಂದ ದಕ್ಷಿಣದ ಕಾವೇರಿವರೆಗೆ ಹಬ್ಬಿದ ಅವರ ಸಾಮ್ರಾಜ್ಯದಲ್ಲಿ, ಅವರಿಂದಲೇ ನಿರ್ಮಿತವಾದ ಕೋಟೆಗಳು ವಿರಳ, ಬಹಳ ಕಡಿಮೆ ಎಂದು ಇತಿಹಾಸ ದಾಖಲಿಸುತ್ತದೆ.

ಆಧಾರಸೂಚಿ ಮತ್ತು ಟಿಪ್ಪಣಿಗಳು

೧. Prof. K.A.Nilakanta Sastri & G.Srinivasachari., ೧೯೮೨: Advanced History of India (Sec. Edn.) New Delhi.

೨. Dr. S.K.Joshi, ೧೯೮೫: Defence Architecture of Early Karnataka, New Delhi.

೩. ಡಾ. ಚನ್ನಬಸಪ್ಪ ಪಾಟೀಲ, ೧೯೯೮: ಕರ್ನಾಟಕದ ಕೋಟೆ ಕೊತ್ತಲುಗಳು, ಮೈಸೂರು.

೪. ಡಾ.ಎಂ. ಚಿದಾನಂದಮೂರ್ತಿ., ೧೯೬೬:ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು.

೫. G.N. Kamalapur, ೧೯೬೪, Deccan Forts, Bombay.

೬. R.S.Panchamukhi., ೧೯೪೦: (Ed) Inscriptions of Karnataka, Vol-ii, Dharwad.

೭. Dr.A.K.Coomaraswami., ೧೯೩೦: Cities and City Gates, Vol-ii, London.

೮. Dr.Suryanatha Kamat.,: Belgum District Gazetteer.

೯. ಡಾ. ಎಂ. ಕೊಟ್ರೇಶ (Ph.d. Thesis ೨೦೦೨):ಕೋಟೆಗಳು ಮತ್ತು ಕೊತ್ತಲಗಳು-ಒಂದು ಅಧ್ಯಯನ.

ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಡಾ.ಎಸ್.ಕೆ.ಜೋಶಿ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ಎ. ಮುರಿಗೆಪ್ಪ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ

Review Overview

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *