ಗೋವಿಂದಮೂರ್ತಿ ದೇಸಾಯಿ (೦೫.೦೪.೧೯೨೭ – ೧೫.೧೨.೨೦೧೧): ಐತಿಹಾಸಿಕ ವಸ್ತುವುಳ್ಳ ಕಥೆ, ಕಾದಂಬರಿಗಳ ರಚನೆಯಲ್ಲಿ ಪ್ರಖ್ಯಾತರಾಗಿದ್ದ ಗೋವಿಂದಮೂರ್ತಿ ದೇಸಾಯಿಯವರು ಹುಟ್ಟಿದ್ದು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ. ತಂದೆ ದಾಸಪ್ಪ ನಾಯಕ ದೇಸಾಯಿ. ತಾಯಿ ಯಮುನಾ ಬಾಯಿ.
ಸೋದರಮಾವನ ಮನೆಯಲ್ಲಿದ್ದುಕೊಂಡು ಓದಿದ್ದು ಮೆಟ್ರಿಕ್ಯುಲೇಷನ್‌ವರೆಗೆ. ತಂದೆಯ ಅಕಾಲಿಕ ಮರಣದಿಂದಾಗಿ ಪ್ರೀತಿಯಿಂದ ವಂಚಿತರಾದ ಗೋವಿಂದಮೂರ್ತಿ ದೇಸಾಯಿಯವರಿಗೆ ಓದಿಗಿಂತ ತಂಗಿ ತಮ್ಮಂದಿರ ಜವಾಬ್ದಾರಿಯು ಪ್ರಮುಖವಾಗಿದ್ದು ಮೆಟ್ರಿಕ್ಯುಲೇಷನ್‌ನಂತರ ಸೇರಿದ್ದು ಇಂಪೀರಿಯಲ್ ಬ್ಯಾಂಕಿನಲ್ಲಿ ಗುಮಾಸ್ತರಾಗಿ. ಧಾರವಾಡಕ್ಕೆ ವರ್ಗವಾದ ನಂತರ ಬಿ.ಎ. ಪದವಿ ಪಡೆದ ಸಂದರ್ಭದಲ್ಲಿ ಇಂಪೀರಿಯಲ್ ಬ್ಯಾಂಕ್ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವಾಗಿ ಪರಿವರ್ತನೆ ಹೊಂದಿದ್ದು ಅಧಿಕಾರಿಯಾಗಿ ಭಡ್ತಿ ಪಡೆದರು.
ಚಾರಿತ್ರಿಕ ವಸ್ತುಗಳನ್ನು ವಿಶೇಷವಾಗಿ ಅಧ್ಯಯನ ನಡೆಸಿ ತಮ್ಮ ಕಲ್ಪನೆಯನ್ನು ಧಾರಾಳವಾಗಿ ಬೆರೆಸಿ ಬರೆದ ಹಲವಾರು ಸಣ್ಣ ಕಥೆಗಳು ಸುಧಾ, ಮಯೂರ, ಕರ್ಮವೀರ, ಕಸ್ತೂರಿ, ಪ್ರಜಾವಾಣಿ, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಹೀಗೆ ಬರೆದ ಕಥೆಗಳು ‘ಶಿಲಾಮುಖ’, ‘ರುಧಿರಾರತಿ’, ‘ಠಾಕೂರ ಮಹಾರಾಜ’ ಮುಂತಾದ ಸಂಕಲನಗಳಲ್ಲಿ ಸೇರಿವೆ. ‘ಸಂಸ್ಥಾನಿಕರು’ ಇವರ ಪ್ರಮುಖ ಪ್ರಬಂಧ ಸಂಕಲನ.
ಬಾದಾಮಿ ಚಾಲುಕ್ಯದಲ್ಲಿ ಅತ್ಯಂತ ಶ್ರೇಷ್ಠನಾದ, ಪರಾಕ್ರಮಿ ಎನಿಸಿದ್ದ ಎರಡನೆಯ ಪುಲುಕೇಶಿಯು (ಕ್ರಿ.ಶ. ೬೦೯-೬೪೨) ತನ್ನ ರಾಜ್ಯವನ್ನು ನರ್ಮದೆಯಿಂದ ಕಾವೇರಿಯವರೆಗೆ ವಿಶಾಲವಾದ ಸಾಮ್ರಾಜ್ಯವನ್ನು ಕಟ್ಟಿದವನು. ಇವನನ್ನು ಕುರಿತು ಬರೆದ ಕಾದಂಬರಿ ‘ಚಾಲುಕ್ಯ ಚಕ್ರೇಶ್ವರ’. ಇದೊಂದು ಐತಿಹಾಸಿಕ ಕಾದಂಬರಿಯಾಗಿ ಓದುಗರನ್ನು ರಂಜಿಸಿ ಜನಪ್ರಿಯ ಕಾದಂಬರಿ ಎನಿಸದ್ದಲ್ಲದೆ ‘ಚಾಲುಕ್ಯ ಚಕ್ರೇಶ್ವರ’ ಎಂಬ ಹೆಸರಿನಿಂದಲೇ ಚಲನಚಿತ್ರವಾಗಿಯೂ ಪ್ರಸಿದ್ಧಿ ಪಡೆಯಿತು. ಇವರ ಮತ್ತೊಂದು ಐತಿಹಾಸಿಕ ಕಾದಂಬರಿ ‘ಶಕ ಸಾಮ್ರಾಟ’.
ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ, ಅವರ ತತ್ತ್ವಾದರ್ಶಗಳಿಗೆ ಮಾರುಹೋಗಿ ಬರೆದ ಪುಸ್ತಕ ‘ಗಾಂಧೀಜಿ ಮತ್ತು ಮಹಿಳೆ’ ಹಾಗೂ ‘ಬಾಪೂಜಿಯ ಬದುಕು’ ಕೃತಿಗಳು.
ಹಾವೇರಿಯ ಸುಪ್ರಸಿದ್ಧ ವಕೀಲರು, ಸಮಾಜ ಸುಧಾರಕರು, ನಿಸ್ಪೃಹ ಆಡಳಿತಗಾರರು, ಮಹಾನ್ ದೇಶಭಕ್ತರು, ಗಾಂಧೀ ಅನುಯಾಯಿಗಳೂ ಆಗಿದ್ದು ತಮ್ಮ ಪುತ್ರಿ ಸಿದ್ಧಲಿಂಗವ್ವನವರ ನಿಶ್ಷಿತಾರ್ಥದ ದಿನ ಹಾವೇರಿ ತಾಲ್ಲೂಕಿನ ಮಾಮಲೆದಾರರಾಗಿದ್ದ (ತಹಶೀಲ್ದಾರ್) ಘಟ್ಟಿಕಂಬಳಿಯವರೂ ಆಗಮಿಸಿದ್ದರು. ಊಟದ ವೇಳೆಯಲ್ಲಿ ಹರಿಜನರಾದ ಮಾಮಲೆದಾರರೊಡನೆ ಊಟಕ್ಕೆ ಕೂಡುವುದಿಲ್ಲವೆಂದು ಬೀಗರ ಕಡೆಯವರು ಹೇಳಿದಾಗ, “ಹಾಗಿದ್ದರೆ ಬೀಗರಿಗೆ ಒಳಕೋಣೆಯಲ್ಲಿ ವ್ಯವಸ್ಥೆಗೊಳಿಸಿ, ನಾನು ಮಾಮಲೆದಾರರೊಡನೆ ಕೂಡುವೆನು” ಎಂದು ಹೇಳಿದಾಗ ಎಲ್ಲರೂ ಒಪ್ಪಿ ಒಟ್ಟಿಗೆ ಊಟಮಾಡಿದರು. ಹೀಗೆ ಅಸ್ಪೃಶ್ಯಭಾವದ ಬಗ್ಗೆ ಹೋರಾಡಿದ ಸಿದ್ದಪ್ಪನವರ ಬಗ್ಗೆ (೧೮೮೦-೧೯೫೯) ಬರೆದ ವ್ಯಕ್ತಿಚಿತ್ರ ಕೃತಿ ‘ಸಿದ್ದಪ್ಪ ಹೊಸಮನಿ’
ಇವರ ಸಾಹಿತ್ಯ ಕೃಷಿ ಇಷ್ಟಕ್ಕೆ ನಿಲ್ಲದೆ ಸದಾಕಾಲ ಬ್ಯಾಂಕಿಂಗ್ ವ್ಯವಹಾರದಲ್ಲಿ ತೊಡಗಿದ್ದು ಬ್ಯಾಂಕಿನ ವ್ಯವಹಾರಗಳನ್ನು ಹೊರಜಗತ್ತಿಗೆ ಪರಿಚಿಯಸಲು ಬರೆದ ಪುಸ್ತಕ ‘ಬ್ಯಾಂಕಿಂಗ್’
ಅಧ್ಯಾತ್ಮಿಕವಾಗಿಯೂ ಒಲವು ಬೆಳಸಿಕೊಂಡಿದ್ದು ಇಸ್ಕಾನ್ ಸಂಸ್ಥೆಗಾಗಿ ಹಲವಾರು ಶ್ಲೋಕಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದು ಅನೇಕ ಸಂಪುಟಗಳಲ್ಲಿ ಪ್ರಕಟಗೊಂಡ ಕೃತಿ ‘ಚೈತನ್ಯ ಚರಿತಾಮೃತ’. ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ (೨೦೦೯) ಸನ್ಮಾನಿತರಾಗಿದ್ದಲ್ಲದೆ ಬೆಳಗಾವಿಯ ಸಾಹಿತ್ಯ ಪ್ರತಿಷ್ಠಾನದಿಂದ (ಸ್ಥಾಪಕರು ಪ್ರಹ್ಲಾದ ಕುಮಾರ ಭಾಗೋಜಿ) ‘ಸಿರಿಗನ್ನಡ’ ಪ್ರಶಸ್ತಿಯು (೨೦೧೦) ದೊರೆತಿದ್ದು ಸಾಹಿತ್ಯ ಲೋಕದಿಂದ ದೂರವಾದದ್ದು ೨೦೧೧ ರ ಡಿಸೆಂಬರ್ ೧೫ ರಂದು.
(ಮಾಹಿತಿ: ಮಗಳು- ಶ್ರೀಮತಿ ಅಂಜಲಿ)
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.