ಗುರುಪೂರ್ಣಿಮೆ: ಹೊಸ ವರ್ಷ ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆ ಹೆಚ್ಚಿನವರಿಂದ ಬರುವ ಉತ್ತರ ಜನವರಿ ಒಂದು. ಆದರೆ ಧಾರ್ಮಿಕ ಮನೋಭಾವದವರಿಗೆ ಈ ದಿನಕ್ಕೆ ಹೆಚ್ಚಿನ ಮಹತ್ವವಿಲ್ಲ. ಏಕೆಂದರೆ ಇದು ನಕ್ಷತ್ರಗಳಿಗನುಸಾರವಾಗಿಲ್ಲ. ಗುರು ಪೂರ್ಣಿಮೆಯ ದಿನವನ್ನೇ ಧಾರ್ಮಿಕ ಮನೋಭಾವದವರು ಒಂದು ಹೊಸವರ್ಷದಂತೆ ಆಚರಿಸುತ್ತಾರೆ.
ವಾಸ್ತವವಾಗಿ ಇಲ್ಲಿ ಹೊಸ ವರ್ಷವೆಂದರೆ ಕ್ಯಾಲೆಂಡರಿನ ಪುಟವನ್ನು ಬದಲಿಸುವ ದಿನಚರಿಯಲ್ಲ, ನಮ್ಮ ಜೀವನದ ಹಿಂದಿನ ಸಿಹಿ ಕಹಿಗಳನ್ನು ಅವಲೋಕಿಸಿ ಮುಂದಿನ ದಿನಗಳನ್ನು ಸುಧಾರಿಸಿಕೊಳ್ಳುವ, ಉತ್ತಮಪಡಿಸಿಕೊಳ್ಳುವ ಒಂದು ಪರ್ಯಾಲೋಚನಾ ದಿನವಾಗಿದೆ.
ಸುಲಭ ಪದಗಳಲ್ಲಿ ಹೇಳುವುದಾದರೆ ಈ ದಿನದಲ್ಲಿ ಹಿಂದಿನ ವರ್ಷದ ಒಳಿತು ಕೆಡಕುಗಳನ್ನೆಲ್ಲಾ ಲೆಕ್ಕಾಚಾರ ಹಾಕಿ ನಮ್ಮ ಸಾಧನೆಯನ್ನು ಒರೆಹಚ್ಚುವುದು ಹಾಗೂ ಮುಂದಿನ ವರ್ಷದಲ್ಲಿ ಇದಕ್ಕೂ ಉತ್ತಮ ಸಾಧನೆಯನ್ನು ಸಾಧಿಸಲು ಏನು ಮಾಡಬೇಕು ಎಂಬ ಸ್ಥೂಲವಾದ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ನಿಗದಿಯಾದ ದಿನವಾಗಿದೆ. ಹಿಂದಿನ ತಪ್ಪುಗಳನ್ನು ಒಪ್ಪಿ ಮುಂದಿನ ದಿನಗಳಲ್ಲಿ ಅದನ್ನು ಪುನರಾವರ್ತಿಸದೇ ಉತ್ತಮ ಮನುಷ್ಯರಾಗಿ ಬಾಳಲು ನಮಗೆ ಅವಲೋಕನೆಯ ಮೂಲಕ ಅವಕಾಶ ನೀಡುವ ದಿನವೇ ಗುರುಪೂರ್ಣಿಮೆ.
ಹಿಂದಿನ ವರ್ಷಗಳಲ್ಲಿ ನಾವು ಸಾಧಿಸಿದ್ದೇನು ಎಂಬ ಪ್ರಶ್ನೆಗೆ ಜನಸಾಮಾನ್ಯರು ಗಳಿಸಿದ ಹಣಕ್ಕೆ ತಾಳೆಹಾಕುತ್ತಾರೆ. ಆದರೆ ಗುರುಪೂರ್ಣಿಮೆಯಲ್ಲಿ ಧನಕ್ಕೆ ಹೆಚ್ಚಿನ ಮಹತ್ವವಿಲ್ಲ! ನಾವು ಪಡೆದ ಜ್ಞಾನ, ಸಲ್ಲಿಸಿದ ಸೇವೆ, ನೀಡಿದ ನೆರವು, ದೇವರು ನಮಗೆ ನೀಡಿದ ಫಲಗಳಿಗಾಗಿ ಆತನಿಗೆ ನೀಡಿದ ಕೃತಜ್ಞತೆ, ಅಗತ್ಯವುಳ್ಳವರಿಗೆ ಸಲ್ಲಿಸಿದ ದಾನ ಮೊದಲಾದವೇ ಇಲ್ಲಿ ಪರಿಗಣಿತವಾಗುತ್ತವೆ. ಗುರು ಪೂರ್ಣಿಮೆಯ ಮಹತ್ವವೇನು ಗೊತ್ತೇ?
ಈ ದಿನದಲ್ಲಿ ನಮಗೆ ಜ್ಞಾನ ನೀಡಿದ ಎಲ್ಲಾ ಹಿರಿಯರಿಗೆ, ಅಂದರೆ ತಲತಲಾಂತರದಿಂದ ದಾಟುತ್ತಾ ಬಂದಿರುವ ಜ್ಞಾನ ಈಗ ನಮಗೆ ಲಭ್ಯವಾಗಿರುವುದಕ್ಕಾಗಿ ನಮ್ಮ ಹಿರಿಯರಿಗೆ ಧನ್ಯವಾದವನ್ನೂ ಗುರುಪೂರ್ಣಿಮೆಯಂದು ಸಲ್ಲಿಸಲಾಗುತ್ತದೆ.
ನಮ್ಮ ಶರೀರ ಒಂದು ಪುನರುತ್ಪತ್ತಿಯಾಗುತ್ತಿರುವ ಜೀವಕೋಶಗಳ ಆಗರ. ಕೆಲದಿನಗಳ ಹಿಂದೆ ಇದ್ದ ಜೀವಕೋಶಗಳೆಲ್ಲಾ ಸತ್ತು ಹೊಸಜೀವಕೋಶಗಳು ಹುಟ್ಟುತ್ತಲೇ ಇರುವುದರಿಂದ ಪ್ರತಿವರ್ಷವೂ ನಮ್ಮ ದೇಹ ಹೊಸದಾಗುತ್ತಾ ಹೋಗುತ್ತದೆ. ಈ ಮರುಹುಟ್ಟು ಪಡೆದಕ್ಕಾಗಿ ದೇವರಿಗೆ ಗುರುಪೂರ್ಣಿಮೆಯಂದು ಧನ್ಯವಾದ ಅರ್ಪಿಸಲಾಗುತ್ತದೆ.
ಜೇನುಗೂಡಿನಲ್ಲಿ ಒಂದು ರಾಣಿ ಜೇನು ಇದೆ. ಇದರ ಸುತ್ತಮುತ್ತ ಸಾವಿರಾರು ಇತರ ಜೇನುಗಳು ಸತತವಾಗಿ ಕಾರ್ಯನಿರ್ವಹಿಸುತ್ತಾ ಜೇನು ಸಂಗ್ರಹಿಸಿ ಗೂಡು ಕಟ್ಟುತ್ತವೆ. ಒಂದು ಸಲ ಈ ರಾಣಿಜೇನು ಗೂಡನ್ನು ತ್ಯಜಿಸಿತೋ, ಇಡಿಯ ಗೂಡು ಖಾಲಿಯಾಗುತ್ತದೆ. ಅಂತೆಯೇ ನಮ್ಮ ದೇಹದಲ್ಲಿಯೂ ಆತ್ಮವೆಂಬ ರಾಣಿ ಜೇನಿದೆ. ಈ ಆತ್ಮ ದೇಹದಿಂದ ಹೊರಟು ಹೋದ ಮೇಲೆ ದೇಹ ನಶ್ವರವಾಗುತ್ತದೆ. ಆತ್ಮ ಎಲ್ಲಿದೆ? ಇದು ನಮ್ಮಲ್ಲಿಯೇ ಇದೆ ಎಂಬ ಭಾವನೆಯನ್ನು ಗುರುಪೂರ್ಣಿಮೆಯಂದು ಗಟ್ಟಿಗೊಳಿಸಲಾಗುತ್ತದೆ.
ತಾಯ್ತನ ಮತ್ತು ತಂದೆತನದಂತೆಯೇ ಗುರುತನವೂ ನಮ್ಮೆಲ್ಲರಿಗೆ ಅಗತ್ಯವಾಗಿದೆ. ಹಿಂದಿನ ವರ್ಷದಲ್ಲಿ ನಿಮಗೆ ಗುರುವಾಗಿದ್ದವರಿಂದ ಪಡೆದ ವಿದ್ಯೆ ಮತ್ತು ಬುದ್ಧಿಯನ್ನು ಈ ವರ್ಷ ಇತರರಿಗೆ ಕಲಿಸಿಕೊಡುವ ಮೂಲಕ ನೀವೇ ಗುರುಗಳಾಗುತ್ತೀರಿ. ಇತರರಿಗೆ ನೀಡುವ ಪ್ರೀತಿ, ಮಾರ್ಗದರ್ಶನ ಕಾಳಜಿಯ ಮೂಲಕ ನೀವೂ ಗುರುತನವನ್ನು ಅನುಭವಿಸಲು ಗುರುಪೂರ್ಣಿಮೆಯಂದು ಸಂಕಲ್ಪವನ್ನು ತಳೆಯಲಾಗುತ್ತದೆ.