ಅಕ್ಟೋಬರ್ 18 ಕನ್ನಡ ರಂಗಭೂಮಿಯ ಮೇರುಸದೃಶರಾದ ಗುಬ್ಬಿ ವೀರಣ್ಣನವರ ಸಂಸ್ಮರಣಾ ದಿನವಾಗಿದೆ. ಕನ್ನಡ ರಂಗಭೂಮಿಗೆ ಕಾಯಕಲ್ಪ ನೀಡಿ ಅದಕ್ಕೆ ಶ್ರೇಷ್ಠತೆಯನ್ನು ದೊರಕಿಸಿಕೊಟ್ಟದ್ದೇ ಅಲ್ಲದೆ, ಕನ್ನಡ ಚಲನಚಿತ್ರರಂಗಕ್ಕೂ ಮಹತ್ತರ ರೀತಿಯಲ್ಲಿ ಅಡಿಪಾಯ ಹಾಕಿದವರು ಗುಬ್ಬೀ ವೀರಣ್ಣನವರು. ಕನ್ನಡ ರಂಗಭೂಮಿಯ ಸಿದ್ಧಿಪುರುಷರಿವರು.
ವೀರಣ್ಣನವರು ಈಗ ತಾಲ್ಲೂಕು ಕೇಂದ್ರವೆನಿಸಿರುವ, ಅಂದು ಗ್ರಾಮವಾಗಿದ್ದ ಗುಬ್ಬಿಯಲ್ಲಿ 1890ರ ವರ್ಷದಲ್ಲಿ ಜನಿಸಿದರು. ತಂದೆ ಹಂಪಣ್ಣನವರು ಮತ್ತು ತಾಯಿ ರುದ್ರಾಂಬೆಯವರು.
ಕನ್ನಡ ರಂಗಭೂಮಿಯಲ್ಲಂತೂ ‘ಗುಬ್ಬಿ ಕಂಪೆನಿ’ಯದ್ದು ಆಚಂದ್ರಾರ್ಕ ಹೆಸರು. ಈ ‘ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ’ ಪ್ರಾರಂಭವಾದದ್ದು ಗುಬ್ಬಿ ವೀರಣ್ಣನವರು ಹುಟ್ಟಿದ್ದಕ್ಕೆ 6 ವರ್ಷಗಳ ಹಿಂದೆ, ಅಂದರೆ 1884ರ ವರ್ಷದಲ್ಲಿ. ಚಂದ್ರಣ್ಣ ಮತ್ತು ಅಬ್ದುಲ್ ಅಜೀಜ್ ಸಾಹೇಬ್ ಅವರು ಜೊತೆಗೂಡಿ ಆರಂಭಿಸಿದ ಕಂಪೆನಿಯದು. ವೀರಣ್ಣನವರು ಇನ್ನೂ ಆರು ವರ್ಷದ ಬಾಲಕನಾಗಿದ್ದಾಗಲೇ 1896ರ ವರ್ಷದಲ್ಲಿ ಈ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಲ್ಲಿ ಬಾಲ ಕಲಾವಿದನಾಗಿ ಪಾದಾರ್ಪಣೆ ಮಾಡಿದರು. ಪುರುಷರೇ ಸ್ತ್ರೀಪಾತ್ರಗಳನ್ನು ನಿರ್ವಹಿಸುತ್ತಿದ್ದ ಅಂದಿನ ಕಾಲದಲ್ಲಿ ಕೆಲಕಾಲ ಸ್ತ್ರೀಪಾತ್ರಗಳನ್ನು ನಿರ್ವಹಿಸಿದ ವೀರಣ್ಣನವರು ಕ್ರಮೇಣದಲ್ಲಿ ನಾನಾ ರೀತಿಯ ಪಾತ್ರಧಾರಿಯಾದರು. ಅಂದಿನ ರಂಗಭೂಮಿ ಕಲಾವಿದರಿಗೆ ಅಗತ್ಯವೆನಿಸಿದ್ದ ಹಾಡುಗಾರಿಕೆ, ತಬಲಾ, ಪಿಟೀಲು ಮುಂತಾದ ವಾದ್ಯನುಡಿಸುವಿಕೆಗಳಲ್ಲೂ ವೀರಣ್ಣ ಪ್ರಾವೀಣ್ಯರಾಗಿದ್ದರು. ಇವೆಲ್ಲವನ್ನೂ ಮೀರಿದ್ದು ಅವರು ರಂಗಭೂಮಿ ಕಲೆಯನ್ನು, ಕಲಾವಿದರನ್ನು, ಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸಿದ ಬಗೆ. ಇಂತಹದ್ದೊಂದು ನಡೆದದ್ದೇ ವಿಸ್ಮಯ. ಹೀಗೊಬ್ಬರು ಇದ್ದರು ಎಂಬುದೇ ಅದ್ಭುತವೆಂಬಂಥ ಸಂಗತಿ.
1917ರ ವರ್ಷದಲ್ಲಿ ವೀರಣ್ಣನವರು ಗುಬ್ಬಿ ಕಂಪೆನಿಯ ಮಾಲೀಕರಾದರು. ಗುಬ್ಬಿ ಕಂಪೆನಿಯನ್ನು ವಿಶಿಷ್ಟವಾಗಿ, ಭವ್ಯವಾಗಿ ಬೆಳಗಿಸಿದ ಶ್ರೇಯಸ್ಸು ವೀರಣ್ಣನವರದು. ದಕ್ಷಿಣ ಭಾರತದಲ್ಲಷ್ಟೇ ಅಲ್ಲದೆ, ಉತರ ಭಾರತದಲ್ಲಿಯೂ ಕನ್ನಡ ರಂಗಭೂಮಿಯನ್ನು ಪರಿಚಯಿಸಿದ ಮಹಾಚೇತನರವರು. ಗುಬ್ಬಿ ಕಂಪೆನಿಯಲ್ಲಿ ದುಡಿದ ಪ್ರತಿಯೊಬ್ಬರೂ ಅವರನ್ನು ಹೃದಯವಂತ ವ್ಯಕ್ತಿಯಾಗಿ, ವ್ಯವಹಾರ ಚತುರರಾಗಿ, ನಟರತ್ನಾಕರರಾಗಿ ಕಂಡಿದ್ದರು. ಅವರ ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ವಿಕಾಸಗೊಂಡವರು ಅನೇಕ ಮಂದಿ – ಬಿ. ಜಯಮ್ಮ, ಜಿ. ವಿ. ಅಯ್ಯರ್, ಟಿ. ಎನ್. ಬಾಲಕೃಷ್ಣ, ರಾಜ್ ಕುಮಾರ್, ಬಿ. ವಿ. ಕಾರಂತ್, ಬೆಳ್ಳಾವೆ ನರಹರಿ ಶಾಸ್ತ್ರಿ, ಜಿ. ವಿ. ಚನ್ನಬಸಪ್ಪ, ಜಿ. ವಿ. ಶಿವಾನಂದ, ಗುರುಮೂರ್ತಪ್ಪ, ಯು. ಕೆ. ವ್ಯಾಸರಾವ್, ಜಿ. ಸುನಂದಮ್ಮ, ಸ್ವರ್ಣಮ್ಮ, ಮಾಲತಮ್ಮ ಹೀಗೆ ನೂರಾರು ಮಂದಿ ಪ್ರತಿಭಾವಂತ ಕಲಾವಿದರು ವೀರಣ್ಣನವರ ಗರಡಿಯಲ್ಲಿ ಪಳಗಿದವರು. ಬಿ. ವಿ. ಕಾರಂತರಂತಹ ಅನೇಕ ಶ್ರೇಷ್ಠ ಪ್ರತಿಭಾವಂತರಿಗೆ ವಿಶೇಷ ಅಧ್ಯಯನ ಮಾಡಿ ವಿವಿಧ ಕಲಾ ಕ್ಷೇತ್ರಗಳಲ್ಲಿ ಪರಿಣತಿ ಸಾಧಿಸಲು ಧನಸಹಾಯ ಪ್ರೋತ್ಸಾಹಗಳನ್ನಿತ್ತವರು. ಎಚ್. ಎಲ್. ಎನ್. ಸಿಂಹ ಅವರಿಗೆ ನಿರ್ದೇಶನವನ್ನು ಕಲಿಯಲು ಮುಂಬೈಗೆ ಕಳುಹಿಸಿದವರೂ ವೀರಣ್ಣನವರೇ. ಅನೇಕ ಅಭಿನಯ ಕಲಾವಿದರು, ಸಂಗೀತಗಾರರು ಈ ಗುಬ್ಬೀ ಕಂಪೆನಿಯ ಮೂಲಕ ಹಾದುಹೊಗಿದ್ದಾರೆ. ರಾಜ್ ಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯನವರೂ ಗುಬ್ಬೀ ಕಂಪನೆಯಲ್ಲಿ ಪಾತ್ರನಿರ್ವಹಿಸುತ್ತಿದ್ದರು. ರಾಜ್ ಅವರ ಸಹೋದರ ಸಹಾ ಅಲ್ಲಿ ಬಾಲ ಕಲಾವಿದರಾಗಿದ್ದರು. ಹಿರಣ್ಣಯ್ಯನವರಂತಹ ಕಲಾವಿದರೂ ಕೆಲಕಾಲ ಗುಬ್ಬಿ ಕಂಪೆನಿಯಲ್ಲಿದ್ದರು. ರಾಜ್ ಕುಮಾರ್ ಅವರು ತಮ್ಮ ಸಂಭಾಷಣಾ ಚತುರತೆ, ಗಾಯನದಲ್ಲಿನ ಪರಿಶ್ರಮಗಳಿಗೆ ಗುಬ್ಬೀ ಕಂಪೆನಿಯಲ್ಲಿ ದೊರೆತ ಉತ್ಕೃಷ್ಟ ಅನುಭವವೇ ಕಾರಣ ಎನ್ನುತ್ತಿದ್ದರು.
ಗುಬ್ಬಿ ಕಂಪೆನಿಯಲ್ಲಿ ಸುಮಾರು 150 ಕಲಾವಿದರು ಮತ್ತು ತೆರೆಯ ಹಿಂದಿನ ಕುಶಲಕರ್ಮಿಗಳು ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಕಂಪೆನಿಯಲ್ಲಿದ್ದ ಎಲ್ಲಾ ಕರ್ಮಿಗಳಲ್ಲೂ ಆತ ಎಷ್ಟೇ ಪುಟ್ಟ ಕಲಾವಿದನಿರಲಿ, ಪ್ರಧಾನ ಕಲಾವಿದನಿರಲಿ, ಇಲ್ಲವೇ ಯಾವುದೇ ರೀತಿಯ ಸಹಾಯಕರಿರಲಿ ವೈಯಕ್ತಿಕವಾಗಿ ಅವರ ಶಕ್ತಿ ಸಾಮರ್ಥ್ಯಗಳು, ಬೇಕು ಬೇಡಗಳನ್ನು ಗುರುತಿಸುವ ಅಪೂರ್ವ ಸಾಮರ್ಥ್ಯಕ್ಕೆ ವೀರಣ್ಣ ಹೆಸರಾಗಿದ್ದರು. ಯಾರು ಯಾವುದನ್ನು ಸರಿಯಾಗಿ ಮಾಡುತ್ತಾರೆ, ಯಾವ ಪಾರ್ಟು ಯಾರಿಗೆ ಸರಿಹೊಂದುತ್ತದೆ ಎಂಬುದನ್ನು ಅವರು ನಿರಂತರವಾಗಿ ಗಮನಿಸುತ್ತಿದ್ದರು. ನಾಟಕ ಪ್ರದರ್ಶನವನ್ನು ಸ್ವಯಂ ವೀಕ್ಷಿಸಿ ತಮ್ಮ ಕಲಾವಿದರ ಸಾಮರ್ಥ್ಯವನ್ನು ಕಂಡು ಆನಂದಿಸುತ್ತಿದ್ದರು. ಒಬ್ಬರು ಎತ್ತರದಲ್ಲಿ ಏರಿದ ದನಿಯಲ್ಲಿ ಅವಶ್ಯಕತೆಗಿಂತ ಧ್ವನಿ ಹೊರಡಿಸಿದಾಗ ಅಷ್ಟೊಂದು ಕಿರುಚಾಡೋದು ಬೇಡ ಎನ್ನುವರು. ಅಂತೆಯೇ ಒಬ್ಬರು ಸುಶ್ರಾವ್ಯವಾಗಿ ಹಾಡಿದಾಗ ಎಷ್ಟೊಂದು ಚೆನ್ನಾಗಿ ಹಾಡ್ತಾರಪ್ಪ ಎಂದು ಪ್ರಶಂಸಿಸಿ ಬೆನ್ನು ತಟ್ಟುವರು. ಅವರ ಕಂಪನಿಯಲ್ಲಿ ದೊಡ್ಡ ದೊಡ್ಡ ನಟರುಗಳನ್ನೂ ಚೆನ್ನಾಗಿ ಅಳೆದು, ಯಾವ ಮುಲಾಜೂ ಇಲ್ಲದೆ ಮುಖದ ಎದುರಿಗೇ ಹೇಳುವಂತ ಛಾತಿ ಅವರಲ್ಲಿತ್ತು ಎಂಬುದು ಅಂದಿನ ಬಹುತೇಕ ಕಲಾವಿದರ ಒಮ್ಮತದ ಅಭಿಪ್ರಾಯವಾಗಿತ್ತು. ಇಷ್ಟೇ ಅಲ್ಲದೆ, ತಮ್ಮ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಬಿಟ್ಟು ಓಡಿ ಹೋದವರು ಚೆನ್ನಾಗಿದ್ದಾರೆ ಎಂದಾಗ ಸಂತಸಪಟ್ಟು, ಅವರು ಕಷ್ಟದಲ್ಲಿದ್ದರೆ ಪುನಃ ಕರೆತಂದು ಪೊರೆದ ಮಹಾನುಭಾವರೂ ಆಗಿದ್ದರು.
ಮುಂದೆ ಗುಬ್ಬಿ ಕಂಪೆನಿಯ ಶಾಖೆಗಳು ಮೈಸೂರು, ಬೆಂಗಳೂರಿಗೂ ಬಂದವು. ಗುಬ್ಬಿ ವೀರಣ್ಣನವರು ದಕ್ಷಿಣ ಭಾರತದಾದ್ಯಂತ ಪ್ರವಾಸ ಮಾಡಿ ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಾ ಬಂದರು. ರಂಗಭೂಮಿಯ ಬಗ್ಗೆ ಅಪಾರ ಮುಂದಾಲೋಚನೆ ಹೊಂದಿದ್ದ ಅವರು 1925ರ ವರ್ಷದಲ್ಲಿ 14 ವರ್ಷದೊಳಗಿನ ವಯೋಮಿತಿಯ ಮಕ್ಕಳಿಗೆ ನಾಟಕ ತರಬೇತಿ ನೀಡಿ ‘ಬಾಲಕ ವಿವರ್ಧಿನಿ’ ಎಂಬ ಕಲಾಸಂಘವನ್ನು ಸ್ಥಾಪಿಸಿದರು. 1926ರಲ್ಲಿ, ಕನ್ನಡ ರಂಗಭೂಮಿಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಂಗಭೂಮಿಯ ಮೇಲೆ ವಿದ್ಯುತ್ ದೀಪ ಬಳಸಿದ ಕೀರ್ತಿ ವೀರಣ್ಣನವರಿಗೆ ಸಂದಿದ್ದು. 1934ರ ವರ್ಷದ ಡಿಸೆಂಬರ್ 31ರಂದು ಅವರು ಬೆಂಗಳೂರಿನಲ್ಲಿ “ಕುರುಕ್ಷೇತ್ರ” ನಾಟಕವನ್ನು ಅಭೂತಪೋರ್ವವೋ ಎಂಬಂತೆ ಪ್ರದರ್ಶಿಸಿದರು. ಅದೇನು ರಂಗವಿನ್ಯಾಸ, ಅದ್ಭುತವಾದ ಪರದೆಗಳು, ನಟ-ನಟಿಯರ ವೇಷಭೂಷಣಗಳಷ್ಟೇ ಅಲ್ಲದೆ ಅತ್ಯಂತ ವಿಸ್ತಾರವಾದ ರಂಗಮಂಚದ ಮೇಲೆ ಆನೆ,ಕುದುರೆಗಳನ್ನೂ ತಂದು ಅಕ್ಷರಶಃ ಕುರುಕ್ಷೇತ್ರವನ್ನೇ ಸೃಷ್ಟಿಸಿಬಿಟ್ಟಿದ್ದರು. ಅಂದಿನ ಕಾಲದಲ್ಲಿ ಈ ನಾಟಕ ಅತ್ಯಂತ ಜನಪ್ರಿಯವಾಗಿತ್ತು. ಮಹಿಳೆಯರ ಪಾತ್ರಗಳನ್ನು ಮಹಿಳೆಯರೇ ನಿರ್ವಹಿಸುವುದು ಮೊದಲು ಪ್ರಾರಂಭವಾಗಿದ್ದೂ ಗುಬ್ಬೀ ಕಂಪೆನಿಯಲ್ಲೇ. ಸದಾರಮೆ, ಕುರುಕ್ಷೇತ್ರ, ಜೀವನ ನಾಟಕ, ದಶಾವತಾರ, ಪ್ರಭಾಮಣಿ ವಿಜಯ, ಕಬೀರ್, ಗುಲೇಬಾಕಾವಲಿ, ಅಣ್ಣ ತಮ್ಮ, ಲವ ಕುಶ ಮುಂತಾದವು ಗುಬ್ಬಿ ಕಂಪೆನಿಯ ಪ್ರಸಿದ್ಧ ನಾಟಕಗಳಾಗಿದ್ದವು.
ಚಲನಚಿತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡ ಗುಬ್ಬಿ ವೀರಣ್ಣನವರು ತಮ್ಮ ಗುಬ್ಬೀ ಪ್ರೊಡಕ್ಷನ್ಸ್ ಮೂಲಕ 1926ರಲ್ಲಿ ಮೊದಲ್ಗೊಂಡಂತೆ ಹೆಸರಾಂತ ಸಾಹಿತಿಗಳಾದ ದೇವುಡು ನರಸಿಂಹಶಾಸ್ತ್ರಿಗಳ ಸಹಕಾರದೊಂದಿಗೆ’ಹರಿಮಯ’, ‘ಹಿಸ್ ಲವ್ ಅಫೈರ್’ ಮತ್ತು ‘ಕಳ್ಳರ ಕೂಟ’ ಎಂಬ ಚಿತ್ರಗಳನ್ನು ನಿರ್ಮಿಸಿದ್ದರು. 1935ರಲ್ಲಿ ಅವರು ತಯಾರಿಸಿದ ‘ಸದಾರಮೆ’ ಚಿತ್ರದಲ್ಲಿ ಅವರೇ ಪ್ರಧಾನ ಪಾತ್ರ ವಹಿಸಿದ್ದರು. ಅವರು ನಿರ್ಮಿಸಿದ ‘ಸುಭದ್ರಾ’ ಮತ್ತು ತಮಿಳಿನ ‘ಸತ್ಯ ಶೋಧನೈ’ ಚಿತ್ರಗಳಲ್ಲಿ ಮುಂದೆ ಪ್ರಸಿದ್ಧರಾದ ಹೊನ್ನಪ್ಪ ಭಾಗವತರ್ ನಟಿಸಿದ್ದರು. ಇದಲ್ಲದೆ ಅವರು ‘ಜೀವನ ನಾಟಕ’, ‘ಗುಣಸಾಗರಿ’ ಚಿತ್ರಗಳನ್ನೂ ನಿರ್ಮಿಸಿದರು. ಮುಂದೆ ತಮ್ಮ ಚಲನಚಿತ್ರ ಸಂಸ್ಥೆಯ ಹೆಸರನ್ನು ‘ದಿ ಕರ್ನಾಟಕ ಫಿಲಂಸ್ ಲಿಮಿಟೆಡ್’ ಎಂದು ಬದಲಿಸಿದ ಅವರು ಸಿ. ಆರ್. ಬಸವರಾಜು ಅವರೊಂದಿಗೆ ನಿರ್ಮಿಸಿದ ‘ಬೇಡರ ಕಣ್ಣಪ್ಪ’ ಚಿತ್ರ ರಾಜ್ ಕುಮಾರ್, ನರಸಿಂಹರಾಜು ಅಂತಹ ಕಲಾವಿದರನ್ನು ಚಲನಚಿತ್ರಲೋಕಕ್ಕೆ ತಂದಿತು. ಮುಂದೆ ಅವರು ಬಾಲಕೃಷ್ಣ ಅವರ ಪ್ರಧಾನ ಭೂಮಿಕೆಯಲ್ಲಿ ‘ಸದಾರಮೆ’ ಚಿತ್ರವನ್ನು ಪುನರ್ನಿರ್ಮಿಸಿದರು. ಅದರಲ್ಲಿ ಕಲ್ಯಾಣ್ ಕುಮಾರ್ ಅವರಿಗೂ ಪಾತ್ರವಿತ್ತು. ‘ಸಹೋದರಿ’ ಎಂಬ ತಮಿಳು ಚಿತ್ರವನ್ನೂ ನಿರ್ಮಿಸಿದರು.
ಹಾಸ್ಯ ಪಾತ್ರಗಳಲ್ಲಿ ಮಿಂಚುತಿದ್ದ ವೀರಣ್ಣನವರನ್ನು 1912 ರಲ್ಲಿ ಮೈಸೂರಿನ ಜನತೆ ಚಿನ್ನದ ಪದಕವನ್ನಿತ್ತು ಗೌರವಿಸಿತು. 1921ರಲ್ಲಿ ಬೆಂಗಳೂರಿನಲ್ಲಿ ಪ್ರಹಸನ ಪಿತಾಮಹರೆನಿಸಿದ್ದ ಟಿ.ಪಿ.ಕೈಲಾಸಂ ಅವರು ವೀರಣ್ಣನವರ ಪ್ರದರ್ಶನವನ್ನು ಮೆಚ್ಚಿ ಕೈಗಡಿಯಾರವನ್ನು ನೀಡಿ ಸನ್ಮಾನಿಸಿದರು. 1932ರಲ್ಲಿ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವೀರಣ್ಣನವರ ನಾಟಕಗಳನ್ನು ನೋಡಿ ಸಂತಸಗೊಂಡು ‘ವರ್ಸಟೈಲ್ ಕಮೇಡಿಯನ್’ಎಂಬ ಬಿರುದು ನೀಡಿ ಸನ್ಮಾನಿಸಿದರು. 1942ರ ಮೈಸೂರು ದಸರಾ ಉತ್ಸವದಲ್ಲಿ ಮಹಾರಾಜ ಜಯಚಾಮರಾಜ ಒಡೆಯರ್ ಅವರು ‘ನಾಟಕ ರತ್ನ’ ಬಿರುದು ನೀಡಿ ಸನ್ಮಾನಿಸಿದರು. 1955ರ ವರ್ಷದಲ್ಲಿ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಗೌರವ ಹಾಗೂ 1972ರ ವರ್ಷದಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವಗಳು ಸಂದವು. ಇವರ ‘ಕುರುಕ್ಷೇತ್ರ’ ನಾಟಕದ ಕುರಿತಾಗಿದ್ದ ಪ್ರಸಿದ್ಧಿಯನ್ನು ಕೇಳಿದ್ದ ಹೈದರಾಬಾದಿನ ನಿಜಾಮರು ತಮ್ಮ ಅರಮನೆಯಲ್ಲಿ ಈ ನಾಟಕವನ್ನು ನಡೆಸಿಕೊಡಬೇಕೆಂದು ಕೇಳಿದರಂತೆ. ಇಡೀ ರಂಗಭೂಮಿಯ ವ್ಯವಸ್ಥೆಯನ್ನು ಅಲ್ಲಿಗೆ ಸಾಗಿಸುವುದರಲ್ಲಿ ಇದ್ದ ತೊಡಕುಗಳನ್ನು ವಿವರಿಸಿದ ಗುಬ್ಬಿ ವೀರಣ್ಣನವರು ತಮ್ಮ ನಾಟಕ ನಡೆಯುತ್ತಿದ್ದ ಜಾಗಕ್ಕೇ ಬರಬೇಕೆಂದು ರಾಜಪರಿವಾರವನ್ನು ಕೋರಿ, ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ಇತ್ತುದು ಮಾತ್ರವಲ್ಲದೆ ನಿಜಾಮರ ಇಡೀ ಪರಿವಾರಕ್ಕೆ ಅತ್ಯಭೂತಪೂರ್ವ ಸ್ವಾಗತ ನೀಡಿದರಂತೆ. ಅದು ಅಂತಿಂತ ಸ್ವಾಗತವಲ್ಲ. ನಿಜಾಮರ ಕಾರು ನಿಲ್ಲುವ ಸ್ಥಳದಿಂದ ಆತ ಕೂಡ್ರುವ ಸ್ಥಳದವರೆಗೂ ಕೆಂಪುಹಾಸನ್ನು ಹಾಸಲಾಗಿತ್ತು. ಅದರ ಇಕ್ಕೆಲಗಳಲ್ಲಿ ಎಲ್ಲ ನಟ-ನಟಿಯರು ತಮ್ಮ ಪೌರಾಣಿಕ ವೇಷದಲ್ಲಿ ನಿಂತು ನಿಜಾಮರೂ ಹಾಗೂ ಅವರ ಪರಿವಾರದವರ ಮೇಲೆ ಹೂವಿನ ಪಕಳೆಗಳನ್ನು ತೂರುತ್ತ, ಸುಗಂಧ ದ್ರವ್ಯವನ್ನು ಸಿಂಪಡಿಸುತ್ತಿದ್ದರು. ಮುಂದೆ ಜೋಡಿ ಓಲಗ. ನಿಜಾಮರು ರಂಗಮಂದಿರದೊಳಗೆ ಬಂದೊಡನೆ ನಗಾರಿ, ಭೇರಿ, ಶಂಖ, ತುತ್ತೂರಿಗಳ ಧ್ವನಿ ಮೊಳಗಿತು. ನಿಜಾಮರು ಬೆರಗಾಗಿ ಹೋದರು. ಇಡೀ ನಾಟಕವನ್ನು ತದೇಕಚಿತ್ತದಿಂದ ನೋಡಿದ ನಂತರ, ತಾವೇ ಸಂತೋಷದಿಂದ ವೇದಿಕೆಯ ಮೇಲೆ ಬಂದು ನಾಟಕವನ್ನು ಬಹುವಾಗಿ ಹೊಗಳಿ, ವೀರಣ್ಣನವರ ದೊಡ್ಡತನದ ಬಗ್ಗೆ ಮೆಚ್ಚುಗೆ ಸೂಸಿದರು. ಅಷ್ಟೇ ಅಲ್ಲದೇ ‘ಕರ್ನಾಟಕಾಂಧ್ರ ನಾಟಕ ಸಾರ್ವಭೌಮ’ ಎಂದು ಬಿರುದುಕೊಟ್ಟು ವಿಶೇಷವಾಗಿ ಸನ್ಮಾನಿಸಿದರು. ಗುಬ್ಬಿ ವೀರಣ್ಣನವರಿಗೆ ಮೈಸೂರು ವಿಶ್ವವಿದ್ಯಾಲಯವು ಗೌರವ ಡಿ.ಲಿಟ್ ಗೌರವವನ್ನು ನೀಡಿ ಸಂಮಾನಿಸಿತು. ಕರ್ನಾಟಕ ಸರ್ಕಾರವು ಗುಬ್ಬೀ ವೀರಣ್ಣನವರ ಹೆಸರಿನಲ್ಲಿ ಶ್ರೇಷ್ಠ ರಂಗಭೂಮಿ ಸಾಧನೆಗಾಗಿನ ಪ್ರಶಸ್ತಿ ಗೌರವವನ್ನು ಸ್ಥಾಪಿಸಿದೆ.
ಗುಬ್ಬಿ ವೀರಣ್ಣನವರು ಬೆಂಗಳೂರು ಮತ್ತು ಕರ್ನಾಟಕದ ಇತೆರೆಡೆಗಳಲ್ಲಿ ಹಲವಾರು ಚಿತ್ರಮಂದಿರ ಮತ್ತು ರಂಗಮಂದಿರಗಳನ್ನೂ ನಿರ್ಮಿಸಿದ್ದರು. ಇವುಗಳಲ್ಲಿ ಈಗ ಮೂವಿಲ್ಯಾಂಡ್ ಎಂದು ಹೆಸರಾಗಿರುವ ಚಿತ್ರಮಂದಿರವನ್ನು ಅವರು ಶಿವಾನಂದ ಥಿಯೇಟರ್ ಎಂದು ನಿರ್ಮಿಸಿದ್ದರು. ಈಗ ಗೀತಾ ಕಾಂಪ್ಲೆಕ್ಸ್ ಎಂದು ಹೆಸರಾಗಿರುವ ಸಂಕೀರ್ಣವು ‘ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ರಂಗಮಂದಿರ’ ಎಂದು ಹೆಸರಾಗಿದ್ದು ಕೆಲ ಕಾಲದ ನಂತರ ಗೀತಾ ಟಾಕೀಸ್ ಎಂದಾಗಿತ್ತು. ಕೆಂಪೇಗೌಡ ರಸ್ತೆಯಲ್ಲಿ ‘ಸಾಗರ್ ಟಾಕೀಸ್’ ಚಿತ್ರಮಂದಿರವನ್ನೂ ಅವರು ನಿರ್ಮಿಸಿದರು. 1943ರಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿ ವೀರಣ್ಣನವರು ‘ಗುಬ್ಬಿ ಥಿಯೆಟರ್’ ಎಂಬ ರಂಗಮಂದಿರ ಪ್ರಾರಂಭಿಸಿದರು. ಈಗ ಈ ಸ್ಥಳದಲ್ಲಿ ಬೆಂಗಳೂರು ಮಹಾನಗರಪಾಲಿಕೆಯು ‘ಗುಬ್ಬಿ ವೀರಣ್ಣ ರಂಗಮಂದಿರ’ವನ್ನು ನಿರ್ಮಿಸಿದೆ. ತುಮಕೂರಿನಲ್ಲಿ ವೀರಣ್ಣನವರು ನಿರ್ಮಿಸಿದ ‘ಧನಲಕ್ಷ್ಮೀ’ ಥಿಯೇಟರ್ ಈಗ ವಿನೋದಾ ಟಾಕೀಸ್ ಆಗಿದೆ. ತುಮಕೂರಿನ ಪ್ರಶಾಂತ್ ಟಾಕೀಸ್, ತಿಪಟೂರಿನ ವಿನೋದಾ ಟಾಕೀಸ್, ದಾವಣಗೆರೆಯಲ್ಲಿ ಈಗ ಅಶೋಕಾ ಟಾಕೀಸ್ ಆಗಿರುವ ಅಂದಿನ ವಿನೋದಾ ಟಾಕೀಸ್ ಮುಂತಾದವುಗಳನ್ನೂ ಗುಬ್ಬಿ ವೀರಣ್ಣನವರು ನಿರ್ಮಿಸಿದರು. ಇದಲ್ಲದೆ ಗುಬಿ ವೀರಣ್ಣನವರು ಬೆಂಗಳೂರಿನ ಗಾಂಧೀನಗರದ ಅನಂತಸ್ವಾಮಿ ಆಶ್ರಮದಿಂದ ಪ್ರಾರಂಭವಾಗಿ ಹಿಂದೂಸ್ಥಾನ್ ಹೋಟೆಲಿನವರೆಗಿನ ಗೋದೂರಾಯನ ಮಠಕ್ಕೆ ಸೇರಿದ್ದ ಜಾಗವನ್ನು 50 ವರ್ಷದ ಗುತ್ತಿಗೆಗೆ ಪಡೆದುಕೊಂಡಿದ್ದರಂತೆ. ಅದನ್ನು ಮುಂದೆ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಸುಪರ್ದಿಗೆ ತೆಗೆದುಕೊಂಡಿತಂತೆ.
ಗುಬ್ಬೀ ವೀರಣ್ಣನವರ ವಂಶಾವಳಿಯೇ ಪ್ರತಿಭಾ ಸಂಪನ್ನವಾಗಿತ್ತು. ಅವರ ಮೊದಲ ಪತ್ನಿ ಜಿ. ಸುಂದರಮ್ಮನವರು ‘ರಾಜಭಕ್ತಿ’, ‘ಕರ್ನಾಟಕ ಸಾಮ್ರಾಜ್ಯ’ ಮುಂತಾದ ನಾಟಕಗಳ ಕಲಾವಿದೆಯಾಗಿದ್ದರು. ಎರಡನೇ ಪತ್ನಿ ಭದ್ರಮ್ಮನವರು ಗುಬ್ಬಿಯಲ್ಲೇ ಗೃಹಕೃತ್ಯಗಳಲ್ಲಿ ನಿರತರಾಗಿದ್ದರು. ವೀರಣ್ಣನವರ ಮೂರನೆಯ ಪತ್ನಿ ಬಿ. ಜಯಮ್ಮನವರು ಹೆಸರಾಂತ ತ್ರಿಭಾಷಾ ತಾರೆಯಾಗಿದ್ದವರು. ರಾಜ್ಯ ಸಂಗೀತ ನಾಟಕ ಆಕಾಡೆಮಿಯಿಂದ ಪುರಸ್ಕೃತರೂ ಆಗಿದ್ದ ಅವರು ಅನೇಕ ನಾಟಕಗಳಲ್ಲಷ್ಟೇ ಅಲ್ಲದೆ ‘ಹಿಸ್ ಲವ್ ಅಫೇರ್’ ಎಂಬ ಚಿತ್ರದಿಂದ ಮೊದಲ್ಗೊಂಡು ‘ಸಾಕ್ಷಾತ್ಕಾರ’ದಂತಹ ಪ್ರಸಿದ್ಧ ಸಿನಿಮಾಗಳಲ್ಲಿಯೂ ನಟಿಸಿದ್ದರು.
ಜಿ. ಸುಂದರಮ್ಮನವರ ಮಕ್ಕಳು ಜಿ. ವಿ. ಸ್ವರ್ಣಮ್ಮ, ಜಿ. ವಿ. ಮಾಲತಮ್ಮ ಮತ್ತು ಜಿ. ವಿ. ಶಿವಾನಂದ್. ಸ್ವರ್ಣಮ್ಮನವರು ಅನೇಕ ನಾಟಕಗಳಲ್ಲಿ ಹಾಗೂ ಶರಪಂಜರ, ಉಪಾಸನೆ, ಕಾಡುಕುದುರೆ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದು ರಾಜ್ಯಸಂಗೀತ ನಾಟಕ ಆಕಾಡೆಮಿ ಪುರಸ್ಕೃತರಾಗಿದ್ದರು. ಜಿ. ವಿ. ಮಾಲತಮ್ಮನವರು ಬಾಲ್ಯದಿಂದಲೂ ರಂಗಭೂಮಿ ಕಲಾವಿದೆಯಾಗಿದ್ದವರು. ‘ಸುಭದ್ರ’, ‘ಶರಪಂಜರ’ ಮುಂತಾದ ಚಿತ್ರಗಳಲ್ಲೂ ನಟಿಸಿದ್ದ ಅವರು ವಿದ್ಯುತ್ ಆಘಾತದಿಂದ ಕಾಲುಕಳೆದುಕೊಂಡದ್ದರಿಂದ ರಂಗಚಟುವಟಿಕೆಗಳಿಂದ ನಿವೃತ್ತರಾಗಬೇಕಾಯಿತು. ಮಾಲತಮ್ಮನವರ ಮಗಳಾದ ಬಿ. ಜಯಶ್ರೀ ಅವರು ರಂಗಭೂಮಿಯಲ್ಲಿ ತಮ್ಮದೇ ಆದ ಇತಿಹಾಸ ನಿರ್ಮಿಸಿ ಕೆಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಪದ್ಮಶ್ರೀ ಪುರಸ್ಕಾರ ಮುಂತಾದ ಅನೇಕ ಗೌರವಗಳಿಂದ ಇಂದೂ ರಂಗಭೂಮಿ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಸಕ್ರಿಯರಾಗಿದ್ದರೆ. ಮಾಲತಮ್ಮನವರ ಮತ್ತೊಬ್ಬ ಪುತ್ರಿ ಬಿ. ಪದ್ಮಶ್ರೀ ಅವರು ಗೋವಾ ಕಲಾ ಅಕಾಡೆಮಿಯ ಥಿಯೇಟರ್ ಆರ್ಟ್ ಫ್ಯಾಕಲ್ಟಿಯಲ್ಲಿ ಉಪನ್ಯಾಸಕಿ. ಅವರೂ ಸಹಾ ಕಾಲೇಜು ರಂಗ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಜಿ. ವಿ. ಶಿವಾನಂದ್ ಏಷ್ಯನ್ ಥಿಯೇಟರ್ ಇನ್ಸ್ಟಿಟ್ಯೂಟ್ ಮತ್ತು ಎನ್. ಎಸ್. ಡಿ ಪದವೀಧರರಾಗಿ ಅನೇಕ ನಾಟಕ, ಚಲನಚಿತ್ರಗಳಲ್ಲಿ, ಕಿರುತೆರೆಯ ಕಥಾನಕಗಳಲ್ಲಿ ಅಭಿನಯಿಸಿ ಪ್ರಖ್ಯಾತಿ ಗಳಿಸಿದವರು. ಅಶ್ವತ್ಥಾಮನ್, ಹರಕೆಯ ಕುರಿ ಮುಂತಾದ ಪ್ರಸಿದ್ಧ ನಾಟಕಗಳನ್ನು ನಿರ್ದೇಶಿಸಿದವರು. ಹಿಂದಿಯ ‘ಸದ್ಮಾ’, ತಮಿಳಿನ ‘ಮೂನ್ರಾಂಪಿರೈ’, ‘ಮೂಡುಪನಿ’ ಮುಂತಾದ ಚಿತ್ರಗಳಿಗೆ ಅವರು ಅವರು ಸಹಾಯಕ ನಿರ್ದೇಶಕರಾಗಿಯೂ ದುಡಿದಿದ್ದರು. ಜಿ. ವಿ. ಶಿವಾನಂದರ ಪುತ್ರ ಜಿ.ಎಸ್. ನಟರಾಜ್ ‘ಕಾಡು’ ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಶ್ರೇಷ್ಠ ಬಾಲನಟ ಪ್ರಶಸ್ತಿ ಪಡೆದವರು. ಶಿವಾನಂದರ ಮತ್ತೊಬ್ಬ ಪುತ್ರ ಜಿ.ಎಸ್. ಬಸವರಾಜ್ ಅವರೂ ‘ಮಿಥಿಲೆಯ ಸೀತೆಯರು’, ‘ವಾಲ್ ಪೋಸ್ಟರ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಗುಬ್ಬಿ ವೀರಣ್ಣ ಭದ್ರಮ್ಮ ದಂಪತಿಗಳ ಪುತ್ರಿಯಾದ ಜಿ. ವಿ. ಗಿರಿಜಮ್ಮ ಅವರು ಪ್ರಖ್ಯಾತ ಕೂಚಿಪುಡಿ ನೃತ್ಯ ಕಲಾವಿದೆ. ಅವರು ಮಹಾನ್ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಅವರ ತಾಯಿ. ಮತ್ತಿಬ್ಬರು ಪುತ್ರರಾದ ಜಿ. ವಿ. ರಾಜಶೇಖರ್ ಮತ್ತು ಜಿ. ವಿ. ಶಿವರಾಜ್ ಅವರುಗಳೂ ಅನೇಕ ನಾಟಕ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.
ಬಿ. ಜಯಮ್ಮನವರ ಪುತ್ರರಾದ ಜಿ. ವಿ. ಗುರುಪ್ರಸಾದ್ ಹಾಗೂ ಪುತ್ರಿಯರಾದ ಜಿ. ವಿ. ಹೇಮಲತಾ ಮತ್ತು ಜಿ. ವಿ. ಲಕ್ಷ್ಮೀಪ್ರಭಾ ಅವರುಗಳೂ ಅನೇಕ ಚಲನಚಿತ್ರ ಮತ್ತು ನಾಟಕಗಳ ಕಲಾವಿದರಾಗಿದ್ದಾರೆ.
ನಾಟಕಗಳು
- ಸದಾರಮೆ
- ಕುರುಕ್ಷೇತ್ರ
- ಜೀವನ ನಾಟಕ
- ದಶಾವತಾರ
- ಪ್ರಭಾಮಣಿ ವಿಜಯ
- ಕಬೀರ್
- ಗುಲೇಬಕಾವಲಿ
- ಅಣ್ಣ ತಮ್ಮ
- ಲವ ಕುಶ
ಚಿತ್ರಗಳು
- ಹರಿಮಯ
- ಹಿಸ್ ಲವ್ ಅಫೈರ್
- ಕಳ್ಳರ ಕೂಟ
- ಜೀವನ ನಾಟಕ
- ಹೇಮರೆಡ್ಡಿ ಮಲ್ಲಮ್ಮ
- ಗುಣಸಾಗರಿ
ಪ್ರಶಸ್ತಿಗಳು
- ನಾಟಕ ರತ್ನ
- ವರ್ಸಟೈಲ್ ಕಮೇಡಿಯನ್
- ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ
- ಪದ್ಮಶ್ರೀ
- ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್
- ಕರ್ಣಾಟಕಾಂಧ್ರ ನಾಟಕ ಸಾರ್ವಭೌಮ
ಹೀಗೆ ಕನ್ನಡ ರಂಗಭೂಮಿ, ಸಿನಿಮಾ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪೂರ್ವ ಕಾಣಿಕೆಯಿತ್ತ ಗುಬ್ಬಿ ವೀರಣ್ಣನವರು ಅಕ್ಟೋಬರ್ 18, 1972ರಂದು ಈ ಲೋಕವನ್ನಗಲಿದರು. ಅವರ ಕೊಡುಗೆಗಳಿಂದ ಅವರು ಅವಿಸ್ಮರಣೀಯರಾಗಿದ್ದಾರೆ. ಈ ಮಹಾನ್ ಚೇತನಕ್ಕೆ ನಮ್ಮ ನಮನ.