Geethanagabhushana

ಗೀತಾ ನಾಗಭೂಷಣ

ಗೀತಾ ನಾಗಭೂಷಣ (೨೫.೦೩.೧೯೪೨): ಕೆಳಸ್ತರದ ಸಮುದಾಯದ ಮೇಲಿನ ದೌರ್ಜನ್ಯ, ಮೇಲ್ವರ್ಗದ ಗೌಡ, ಕುಲಕರ್ಣಿ, ಸಾಹುಕಾರರಿಂದ ನಿರ್ಗತಿಕ ಹೆಂಗಸರ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆ, ಮೂಢ ನಂಬಿಕೆಗಳು- ಇವುಗಳ ವಿರುದ್ಧ ಆಡುನುಡಿಗಳ ಅಸಲೀ ಜವಾರಿ ಭಾಷೆಯಲ್ಲಿ ದಿಟ್ಟತನದಿಂದ ಬರೆದ ಗೀತಾ ನಾಗಭೂಷಣರವರು ಹುಟ್ಟಿದ್ದು ತೀರಾ ಕೆಳವರ್ಗದ ಅನಕ್ಷರಸ್ಥ ಬಡ ಕುಟುಂದಲ್ಲಿ. ತಂದೆ ಶಾಂತಪ್ಪ, ಕಲಬುರ್ಗಿಯ ಬಟ್ಟೆ ಗಿರಣಿಯಲ್ಲಿ ಕಾರ್ಮಿಕನಾಗಿದ್ದರೆ ತಾಯಿ ಶಾಂತವ್ವ ಎಮ್ಮೆ ಕಟ್ಟಿಕೊಂಡು ಹಾಲು ಮಾರಿ ಜೀವಿಸುತ್ತಿದ್ದ ಬಡ ಹೆಣ್ನು ಮಗಳು.

ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗಲೇ ಅಪ್ಪ ಹೇಳುತ್ತಿದ್ದ ಕಥೆಗಳನ್ನು ಕೇಳಿ ತಾನೂ ಕೂಡಾ ಝಾನ್ಸಿರಾಣಿಯಂತೆಯೊ, ಸರೋಜಿನಿ ನಾಯ್ಡುವಿನಂತೆಯೋ ಆಗಬೇಕೆಂದು ಕನಸು ಕಾಣುತ್ತಿದ್ದಳು. ಆದರೆ ಅಪ್ಪನಿಗೆ ವಿದ್ಯಾವಂತೆಯಾಗಿ ಸರಕಾರಿ ನೌಕರಿ ಮಾಡಿದರೆ ಸಾಕೆಂಬ ಆಸೆ.

ಮೆಟ್ರಿಕ್ಯುಲೇಷನ್ ಪಾಸಾದನಂತರ ಜಿಲ್ಲಾ ಕಲೆಕ್ಟರ್‌ಕಚೇರಿಯಲ್ಲಿ ದೊರೆತ ಗುಮಾಸ್ತೆ ಕೆಲಸ. ಜಿಲ್ಲೆಗೆ ಮೊಟ್ಟ ಮೊದಲ ಏಕೈಕ ಮಹಿಳಾ ಗುಮಾಸ್ತೆ. ಆದರೆ ಮಂದಿಯ ಕುಹಕಕ್ಕೇನೂ ಕಡಿಮೆ ಇರಲಿಲ್ಲ. ವಿದ್ಯಾಭ್ಯಾಸ ಮುಂದುವರೆಸಲು ನೌಕರಿ ಅನಿವಾರ್ಯವಾಗಿತ್ತು. ಉದ್ಯೋಗದ ಜೊತೆಗೆ ಕಾಲೇಜಿನ ಓದು. ಎಂ.ಎ., ಬಿ.ಎಡ್. ನಂತರ ಗುಲಬರ್ಗದ ಶ್ರೀನಗರೇಶ್ವರ ಸಂಯುಕ್ತ ಕಿರಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ ಸೇರಿ ಪ್ರಾಂಶುಪಾಲರಾಗಿ ನಿವೃತ್ತಿ.

ಬರೆವಣಿಗೆಯ ತುಡಿತದಿಂದ ಮೊದ ಮೊದಲು ಬರೆದ ಕಾದಂಬರಿಗಳು ಬಂಡಾಯ ಧೋರಣೆಯಿಂದೇನು ಕೂಡಿರಲಿಲ್ಲ. ಇತರ ಲೇಖಕಿಯರಂತೆ ಬಹುಮಹಡಿಯ ಭವ್ಯ ಬಂಗಲೆಯಲ್ಲಿ ವಾಸಿಸುವ ಚೆಂದದ ಚೆಲುವೆಯರ ಬಗ್ಗೆ, ಅಂಥವರ ಹೈಸೊಸೈಟಿಯ ಒಡನಾಟದ ಬಗ್ಗೆ, ಥಳುಕು ಬಳುಕಿನ ಫೈವ್‌ಸ್ಟಾರ್ ಹೊಟೇಲುಗಳಲ್ಲಿ ತಿಂದುಂಡು ಬದುಕುವ ಜನರ ಬಗ್ಗೆಯೇ ಬರೆದ ಕಾದಂಬರಿಗಳಾದ ಏರಿಳಿತಗಳು, ಬದಲಾಗುವ ಬಣ್ಣಗಳು, ನನ್ನ ನಿನ್ನ ನಡುವೇ, ಆಘಾತ, ಅಭಿಮಾನ, ಮೋಹ್ವಾ, ನಿನ್ನ ತೋಳುಗಳಲ್ಲಿ, ನನ್ನ ಒಲವು ನಿನ್ನ ಚೆಲವು ಮುಂತಾದ ಕಾದಂಬರಿಗಳು.

ತಮ್ಮ ಬದುಕಿನಲ್ಲಿಯೂ ಕಂಡುಂಡ ಕಹಿ, ಕೆಟ್ಟ ಅನುಭವಗಳು, ವೈಯುಕ್ತಿಕ ನೋವುಗಳೇ ಒಂದು ರೀತಿಯ ಬಂಡಾಯದ ದನಿಯನ್ನು ಬರಹಕ್ಕಿಳಿಸಲು ಪ್ರೇರಣೆ ನೀಡಿದವು. ಮೊದಲ ಮದುವೆಯು ಹೊಂದಾಣಿಕೆಯಿಲ್ಲದೆ ಮುರಿದು ನಂತರ ಆಯ್ದು ಕೊಂಡಿದ್ದು ಮದುವೆಯಾಗಿ ಹೆಂಡತಿ ಮಕ್ಕಳಿದ್ದ ನಾಗಭೂಷಣರನ್ನು. ವ್ಯವಹಾರ ಜಾಣ್ಮೆ, ತೀರ‍್ಮಾನಿಸುವಾಗಿನ ತಪ್ಪುಗಳಿಂದ ತಪ್ಪು ಹೆಜ್ಜೆ ಇಟ್ಟಿದ್ದೇನೆಂದು ತಿಳಿಯುವ ಹೊತ್ತಿಗೆ ಕಾಲಮಿಂಚಿ ಈತನೂ ಆಸರೆಯಾಗದೇ ಹೋದದ್ದೇ ಬಾಳಿನಲ್ಲಿ ಒಂದು ರೀತಿಯ ಛಲಹುಟ್ಟಿ, ತನ್ನ ನೋವು, ಸೆಡವು – ಸಿಟ್ಟನ್ನು, ಶೋಷಣೆಯ ವಿರುದ್ಧದ ಬದುಕನ್ನು ಹೊರಹಾಕಲು ಪ್ರಾರಂಭಿಸಿದಾಗ ಬರಹದ ಮೂಲಕ ಹೊರಬಂದದ್ದೇ ಬಂಡಾಯದ ದನಿ. ಮಹಿಳೆಯರ ಶೋಷಣೆಯ ವಿರುದ್ಧ ಕೆಂಡಕಾರುತ್ತ, ಬಂಡೆದ್ದು ಬರವಣಿಗೆಗೆ ಇಳಿದು ನಿರ್ಭಿಡೆಯಿಂದ ಬರೆಯ ತೊಡಗಿದರು.

ಒಮ್ಮೆ ಅವ್ವನೊಡನೆ ತವರೂರಿನ ಮನೆ ದೇವತೆ ಚುಂಚೂರಿನ ಮಾಪುರ ತಾಯಿ ದೇವಿಯ ಜಾತ್ರೆಗೆ ಹೋಗಿದ್ದಾಗ ಕಂಡ ದೃಶ್ಯ ಮನಸ್ಸಿನ ಮೇಲೆ ಆಘಾತ ಮೂಡಿಸಿತು. ಹರಕೆ ಹೊತ್ತ ಹೆಣ್ಣುಗಂಡುಗಳು, ಹರೆಯದವರು, ಮುದುಕರು ಎನ್ನುವ ಭೇದವಿಲ್ಲದೆ ಬೆತ್ತಲೆ ಸೇವೆಯಲ್ಲಿ ತೊಡಗಿದ್ದನ್ನು ಕಂಡು ರೋಸಿ ಹೋದರು. ಮೇಲ್ವರ್ಗದವರ ಚಾಲಾಕಿತನ, ಕುತಂತ್ರಗಳನ್ನು ಬರಹದ ಮೂಲಕ ಬಯಲಿಗಿಡಲು ಬರೆದ ಕಾದಂಬರಿಯೇ ‘ಮಾಪುರ ತಾಯಿಯ ಮಕ್ಕಳು’ ತವರ ಜಿಲ್ಲೆಯ ಝೋಪಡ ಪಟ್ಟಿಯ ಹೆಂಗಸರ ಕಷ್ಟದ ಜೀವನವನ್ನು ಕತೆಯಾಗಿಸುವಾಗ ಅಲ್ಲಿನ ದಿನನಿತ್ಯದ ಆಡು ಭಾಷೆಯಾದ ಜವಾರಿ ಭಾಷೆಯನ್ನೇ ಉಪಯೋಗಿಸಿ ಬರೆಯತೊಡಗಿದರು. ಹೀಗೆ ಬರೆದ ‘ನೀಲಗಂಗಾ’ ಕಾದಂಬರಿಯು ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಓದುಗರಿಂದಲ್ಲದೆ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ ಕಾದಂಬರಿ ಎನಿಸಿತು. ಕಾದಂಬರಿಯಲ್ಲಿ ಉಪಯೋಗಿಸಿದ್ದು ಸೌಮ್ಯ ಭಾಷೆಗಿಂತ ಗಟ್ಟಿತನದ, ಒರಟುತಿನದಿಂದ ಕೂಡಿದ ಜಿಲ್ಲಯ ಗಂಡು ಭಾಷೆಯನ್ನು ಓದುಗರು ಸ್ವಾಗತಿಸಿ ಮುಂದಿನ ಕಾದಂಬರಿಗಾಗಿ ಕಾಯತೊಡಗಿದರು.

ನಂತರ ಬರೆದ ಕಾದಂಬರಿ ‘ಹಸಿ ಮಾಂಸ ಮತ್ತು ಹದ್ದುಗಳು’ ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದಾಗಲಂತು ತರಂಗದ ಹೆಚ್ಚಿನ ಪ್ರಸರಣದಿಂದ ಇಡೀ ಕರ್ನಾಟಕ ತಲುಪಿ ಓದುಗರನ್ನು ದಂಗು ಬಡಿಸಿತು. ಎಂಥ ಧೈರ್ಯದ ಬರಹಗಾರ್ತಿ ಎಂದಷ್ಟೇ, ಏನು ಅಶ್ಲೀಲ ಬರೀತಾಳ್ರೀ…ಎಂಬ ಟೀಕೆ ಟಿಪ್ಪಣಿಗಳು ಹುಟ್ಟಿಕೊಂಡರೂ ಟೀಕೆ ಮಾಡಿದವರೂ ಒಳಗೊಳಗೇ ಕಾದಂಬರಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸತೊಡಗಿದರು. ಇದೇ ಕಾದಂಬರಿಯು ದೊರೈ-ಭಗವಾನರ ನಿರ್ದೇಶನ ದಲ್ಲಿ ‘ಹೆಣ್ಣಿನ ಕೂಗು’ ಎಂಬ ಹೆಸರಿನಿಂದ ಚಲನ ಚಿತ್ರವಾಗಿಯೂ ಜನಪ್ರಿಯತೆ ಗಳಿಸಿತು. ಮುಂದೆ ಬರೆದ ಹಲವಾರು ಕಾದಂಬರಿಗಳಲ್ಲಿ ವಸ್ತುವಿನ ನಾವೀನ್ಯತೆ, ಬಳಸುವ ಭಾಷೆಯಲ್ಲಿನ ಹೊಸತನದಿಂದ ಕನ್ನಡ ಸಾಹಿತ್ಯದ ಕಾದಂಬರಿ ಕ್ಷೇತ್ರದಲ್ಲಿ ತಮ್ಮದೇ ಆದ ಭದ್ರವಾದ ನೆಲೆಯನ್ನು ಕಂಡುಕೊಂಡರು. ನಂತರ ಬರೆದ ಧುಮ್ಮಸು, ದಂಗೆ, ಚಿಕ್ಕಿಯ ಹರೆಯದ ದಿನಗಳು, ಬದುಕಲು ಹೋದವರು, ಆಸರೆಗಳು, ಅವ್ವ ಮುಂತಾದ ಕಾದಂಬರಿಗಳು ಲಂಕೇಶ್ ಪತ್ರಿಕೆ, ಸುಧಾ, ತರಂಗ ಪತ್ರಿಕೆಗಳಲ್ಲದೆ ಐಬಿಎಚ್ ಪ್ರಕಾಶನ, ನವ ಕರ್ನಾಟಕ ಪ್ರಕಾಶನದಿಂದಲೂ ಪ್ರಕಟಗೊಂಡು – ಹೀಗೆ ಒಟ್ಟು ೨೫ಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟವಾಗಿವೆ.

ಇವರ ಸಂಶೋಧನ ಕೃತಿ ಎಂದರೆ ‘ದುರುಗ ಮುರುಗಿಯರ ಸಂಸ್ಕೃತಿ’ಯಾದರೆ ಕಥಾಸಂಕಲನಗಳು ಜ್ವಲಂತ ಹಾಗೂ ಅವ್ವ ಮತ್ತು ಇತರ ಕಥೆಗಳು. ಖೇಮಣ್ಣ ಸಂಪಾದಿತ ಕೃತಿಯಾದರೆ ಕಿರುತೆರೆಯಲ್ಲಿ ಜೋಗಿಣಿ, ಅವ್ವ, ಸತ್ತ ಹೆಣ್ಣಿನ ಸುತ್ತ, ಜೀವನ ಚಕ್ರ, ನೀಲಗಂಗಾ ಧಾರಾವಾಹಿಯಾಗಿ ಪ್ರಸಾರಗೊಂಡಿವೆ. ಆಕಾಶವಾಣಿಯಲ್ಲಿಯೂ ಸುಮಾರು ೫೦ ಕಥೆಗಳು, ೧೫ ನಾಟಕಗಳು ವಿವಿಧ ಕೇಂದ್ರಗಳಲ್ಲಿ ಪ್ರಸಾರಗೊಂಡಿವೆ.

‘ಕಲ್ಲರಳಿ ಹೂವಾಗಿ’ ಸಣ್ಣ ಕಥೆಯು ೮ನೆಯ ತರಗತಿಗೆ ೧೯೮೦-೯೨ರವರೆವಿಗೆ, ಅವ್ವ ಮತ್ತು ಇತರ ಕಥೆಗಳ ಕಥಾ ಸಂಕಲನವು ಗುಲಬರ್ಗ ವಿಶ್ವವಿದ್ಯಾಲಯದ ಪ್ರಥಮ ಬಿ.ಕಾಂ ತರಗತಿಗೆ ೧೯೯೫ರಲ್ಲಿ; ಧುಮ್ಮಸ್ಸು ಕಾದಂಬರಿಯು ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಬಿ.ಕಾಂ ತರಗತಿಗೆ ೧೯೯೬ರಲ್ಲಿ ಪಠ್ಯ ಪುಸ್ತಕವಾಗಿ ಆಯ್ಕೆಯಾಗಿತ್ತು.

ಹೀಗೆ ದಿಟ್ಟತನದಿಂದ ಬರೆದು ಪ್ರಖ್ಯಾತರಾದ ಗೀತಾ ನಾಗಭೂಷಣರಿಗೆ ಕ.ಸಾ.ಪ. ಮಲ್ಲಿಕಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗುಲಬರ್ಗ ವಿಶ್ವವಿದ್ಯಾಲಯದ ಉತ್ತಮ ಉಪನ್ಯಾಸಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಧುಮ್ಮಸ್ಸು ಕಾದಂಬರಿಗೆ ಸಿರಿವರ ಪ್ರತಿಷ್ಠಾನ ಪ್ರಶಸ್ತಿ, ದಂಗೆ ಕಾದಂಬರಿಗೆ ಕ.ಸಾ.ಪ. ದತ್ತಿ ನಿಧಿ ಪ್ರಶಸ್ತಿ, ಎಸ್.ಆರ್.ಪಾಟೀಲ ಪ್ರತಿಷ್ಠಾನ ಪ್ರಶಸ್ತಿ, ಮಹಾಂತ ಜ್ಯೋತಿ ಪ್ರತಿಷ್ಠಾನ ಕಾಯಕ ರತ್ನ ಪ್ರಶಸ್ತಿ, ಬದುಕು ಕಾದಂಬರಿಗೆ ಮಾಣಿಕ ಬಾಯಿ ಪಾಟೀಲ ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಗುಲಬರ್ಗ ವಿ.ವಿ.ದ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿಗಳಲ್ಲದೆ ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪದವಿ (೨೦೦೫-೦೮) ಮತ್ತು ಗದಗದಲ್ಲಿ ನಡೆದ ೭೬ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ತಕ್ಷತೆ ಮುಂತಾದ ಗೌರವ ಪ್ರಶಸ್ತಿಗಳು ದೊರೆತಿವೆ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *