Gayathri Murthy

ಗಾಯತ್ರಿ ಮೂರ್ತಿ

ಗಾಯತ್ರಿ ಮೂರ್ತಿ (೦೪.೦೫.೧೯೪೮): ಮಕ್ಕಳ ಸಾಹಿತ್ಯ ಕ್ಷೇತ್ರದ ಕಥೆ, ಕವನ, ವಿಜ್ಞಾನ ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಗಾಯತ್ರಿ ಮೂರ್ತಿಯವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಕೆ. ರಾಮಸ್ವಾಮಿ ಮತ್ತು ತಾಯಿ ಇಂದುಮತಿ.

ಪ್ರಾರಂಭಿಕ ಶಿಕ್ಷಣ ಕುಣಿಗಲ್, ಪ್ರೌಢಶಾಲಾ ವಿದ್ಯಾಭ್ಯಾಸ ಶಿವಮೊಗ್ಗ ಹಾಗೂ ಮೈಸೂರುಗಳಲ್ಲಿ. ಶಾರದಾ ವಿಲಾಸ್ ಕಾಲೇಜಿನಿಂದ ಬಿ.ಎಸ್ ಸಿ. ಹಾಗೂ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಿಂದ ಪಡೆದ ಎಂ.ಎಸ್ ಸಿ. ಪದವಿ.

ಅಧ್ಯಾಪಕರಾಗಿ ಸೇರಿದ್ದು ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ. ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಬೋಧಿಸಿದಷ್ಟೇ ಅಲ್ಲದೆ ಮಕ್ಕಳಿಗಾಗಿ ರಚಿಸಿದ್ದು ಹಲವಾರು ವೈಜ್ಞಾನಿಕ ಕೃತಿಗಳು. ತಿಳಿಯಾದ ಭಾಷೆಯಲ್ಲಿ ಮಕ್ಕಳ ಮನಸ್ಸಿಗೆ ನಾಟುವಂತೆ ವೈಜ್ಞಾನಿಕ ವಿಷಯಗಳನ್ನು ಸರಳವಾಗಿ ವಿವರಿಸಿ ಕೃತಿ ರಚಿಸುತ್ತಿರುವ ವೈಜ್ಞಾನಿಕ ಬರಹಗಾರರಲ್ಲಿ ಪ್ರಮುಖರು.

[sociallocker]ಇವರು ಬರೆದ ವೈಜ್ಞಾನಿಕ ಕೃತಿಗಳು ಗಾಳಿ, ಶಾಖ, ನೀರು, ಬೆಳಕು, ಶಬ್ದಲೋಕ ಮೊದಲಾದ ಪಂಚಭೂತಗಳ ಕೆಲ ವಸ್ತುಗಳನ್ನಾಯ್ದುಕೊಂಡು ಅತಿ ಸರಳವಾಗಿ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ರಚಿಸಿದ್ದು ಪ್ರತಿಯೊಂದು ಕೃತಿಯು ಹತ್ತು ಮುದ್ರಣಗಳನ್ನು ಕಂಡಿರುವುದು ಅವುಗಳ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಇವುಗಳಲ್ಲದೆ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಗಳ ಕೃತಿ, ಜ್ಞಾನ ವಿಜ್ಞಾನ ಕೋಶ ಭಾಗ – ೧, ನಿಶ್ಯಿಬ್ದದೊಳಗಿನ ಶಬ್ದ, ದೀಪಗಳು, ಎಕ್ಸ್‌ರೆ – ಕಿರಣಗಳ ಅದೃಶ್ಯಲೋಕ, ಕಥೆಗಳ ರೂಪದಲ್ಲಿ ವಿಜ್ಞಾನ ಪ್ರಯೋಗಗಳನ್ನು ನಿರೂಪಿಸಿರುವ ‘ಪ್ರಯೋಗ ಲೋಕ’ ಮುಂತದವುಗಳ ಜೊತೆಗೆ ಮೈಕೆಲ್ ಫ್ಯಾರಾಡೆ, ಆಲ್ಬರ್ಟ್ ಐನ್‌ಸ್ಟೀನ್ ಮುಂತಾದವರುಗಳ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.

ಮಕ್ಕಳಿಗಾಗಿ ಮಕ್ಕಳ ಕವನ ಸಂಕಲನಗಳು – ನಕ್ಷತ್ರಗಳು ಮತ್ತು ಕಾಮನ ಬಿಲ್ಲು, ಮಕ್ಕಳ ಕಾದಂಬರಿಗಳು – ಕಾಡಿನಲ್ಲೊಂದು ಕ್ಯಾಂಪು, ಬಿಂದು – ಸಿಂಧು ಮತ್ತು ಬ್ರೂಸ್ ಲೀ, ಅದೃಶ್ಯ ಮಾನವ ಟಿನಿ ಟಿನಿ ಟಿನ್, ಪ್ರೀತಿಯ ಗೆಲವು ಮುಂತಾದವುಗಳು. ಪ್ರೌಢರಿಗಾಗಿ ಬರೆದ ಸಾಮಾಜಿಕ ಕಾದಂಬರಿಗಳು – ಹಂಬಲ, ಆಸೆಯಬಲೆ, ದೋಣಿ ಸಾಗಲಿ ತೀರಕೆ ಮತ್ತು ಬಾಳೆಂಬ ಕಡಲಲ್ಲಿ ಎಂಬ ಮಿನಿ ಕಾದಂಬರಿಯನ್ನು ರಚಿಸಿದ್ದಾರೆ.

ಪ್ರಬಂಧಗಳ ರಚನೆಯಲ್ಲಿಯೂ ಆಸಕ್ತರಾಗಿದ್ದು ಪ್ರಕಟಿಸಿರುವ ಪ್ರಬಂಧ ಸಂಕಲನ ‘ಕೋಸುಂಬರಿ’ ಮತ್ತು ‘ಆಭರಣಗಳೊಡನೆ ಒಡನಾಟ’.
ಸಿಂಗಾರಿ ಎಂಬ ಅಂತರ್ಜಾಲ ಮಾಸ ಪತ್ರಿಕೆಯ ಸಹ ಸಂಪಾದಕಿಯಾಗಿಯೂ ಕಾರ‍್ಯ ನಿರ್ವಹಿಸುತ್ತಿದ್ದಾರೆ.

ರಾಜ್ಯ ಲೋಕ ಶಿಕ್ಷಣ ಇಲಾಖೆಯಿಂದ ನವ ಸಾಕ್ಷರರಿಗಾಗಿ ಬರೆದ ‘ನೀರು’ ಕೃತಿಗೆ ಅತ್ಯುತ್ತಮ ‘ಹಸ್ತ ಪ್ರತಿ ಪ್ರಶಸ್ತಿ’ , ‘ಬೆಳಕು’ ಮಕ್ಕಳ ಪುಸ್ತಕಕ್ಕೆ ಆರ್ಯಭಟ ಪ್ರಶಸ್ತಿ, ‘ಶಬ್ದ ಲೋಕ’ ಪುಸ್ತಕಕ್ಕೆ ಎನ್.ಸಿ.ಇ.ಆರ್.ಟಿ.(ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ ಅಂಡ್ ಟ್ರೈನಿಂಗ್) ರಾಷ್ಟ್ರೀಯ ಪ್ರಶಸ್ತಿ, ‘ಅದೃಶ್ಯ ಮಾನವ ಟಿನಿ ಟಿನಿ ಟಿನ್’ ಮಕ್ಕಳ ಕಾದಂಬರಿಗೆ ಅತ್ತಿಮಬ್ಬೆ ಪ್ರಶಸ್ತಿ, ‘ಕೋಸುಂಬರಿ’ ಪ್ರಬಂಧ ಸಂಕಲನಕ್ಕೆ ನುಗ್ಗೇ ಹಳ್ಳಿ ದತ್ತಿ ನಿಧಿಯ ಅತ್ಯುತ್ತಮ ಹಾಸ್ಯ ಸಾಹಿತ್ಯ – ಪ್ರಶಸ್ತಿ ಮುಂತಾಧ ಪ್ರಶಸ್ತಿ ಗೌರವಗಳು ದೊರೆತಿವೆ.

ಹಂಪಿಯಲ್ಲಿ ನಡೆದ ವಿಜ್ಞಾನ ಕಮ್ಮಟದಲ್ಲಿ ಭಾಗವಹಿಸಿ ‘ಆಶಾಳ ಅಂತರಿಕ್ಷಯಾನ’ ಎಂಬ ವೈಜ್ಞಾನಿಕ ಕತೆಯನ್ನು ರಚಿಸಿದ್ದಲ್ಲದೆ ‘ಹಂಬಲ’ ಸಾಮಾಜಿಕ ಕಾದಂಬರಿಯು ಇಟಾಲಿಯನ್ ಭಾಷೆಗೆ ಅನುವಾದವಾಗಿದ್ದು ಇಟಲಿಯ ಟ್ಯೂರಿನ್ ನಲ್ಲಿರುವ ಪ್ರತಿಷ್ಠಿತ ಸಾಹಿತ್ಯ ಸಂಘ ‘ದಿ ಪ್ರಿಮಿಯೋ ಗ್ರೀನ್ ಜಾನೆ’ ಎಂಬ ಸಂಸ್ಥೆಯು ನಡೆಸಿದ ‘ದಿ ಫೀಲ್ ಆಫ್ ಇಂಡಿಯಾ’ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಶಶಿ ತರೂರ್ (ಕೇಂದ್ರ ಮಾನವ ಸಂಪನ್ಮೂಲ ಸಹಾಯಕ ಸಚಿವರು), ಎಂ.ಜೆ.ಅಕ್ಬರ್, ತರುಣ್ ತೇಜ್ ಪಾಲ್ ಮುಂತಾದವರುಗಳೊಡನೆ ವೇದಿಕೆ ಹಂಚಿಕೊಂಡ ಹೆಗ್ಗಳಿಕೆ.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ[/sociallocker]

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.8 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *