Wednesday , 22 May 2024

ಗಾಮ್ಯೋಕ್ತಿ

ಗೋಪಾಳ-ಬಾಳ-ಲಲನಾ-ಚಾಪಳ-ವಾಚಳ-ಕಿತವ-ಬಾಹ್ಲೀಕಾದಿ- |

ವ್ಯಾಪಾರಮಗಳ್ ಗ್ರಾಮ್ಯಳಾಪಂಗಳ್ ಮಾರ್ಗ-ಯುಗಳ-ಪರಿಹಾರ್ಯಂಗಳ್ ||೮೨||

೮೧. ಇದು ದಾಕ್ಷಿಣಾತ್ಯರ ಕವಿಮಾರ್ಗದಲ್ಲಿಯ ‘ಉದಾರ’ ಗುಣ. ಉದೀಚ್ಯ ಅಥವಾ ಉತ್ತರಮಾರ್ಗದವರು (ನಾನಾ) ವಿಶೇಷಣಸಹಿತವಾದ ಹೇಮಾಂಗದ, ಲೀಲಾಂಬುಜ, ವಿಚಿತ್ರಚಿತ್ರ ಇತ್ಯಾದಿಗಳನ್ನೇ (‘ಉದಾರ’)ವೆಂದು ಮೆಚ್ಚುವರು. *ಒಂದು ಶಬ್ದ ಸಾಕಾಗುವಂತಿರುವ ಸ್ಥಳದಲ್ಲಿಯೂ ಅದಕ್ಕೆ ಪರಿಪೋಷಾತಿಶಯವುಂಟಾಗುವುದೆಂಬ ಭಾವನೆಯಿಂದ ವಿಶೇಷಣವೊಂದನ್ನು ಸೇರಿಸಿಕೊಂಡೇ ಹೇಳುವುದು ಉತ್ತರಮಾರ್ಗದ ಲಕ್ಷಣ. ಉದಾಹರಣೆಗೆ, ‘ಅಂಗದ’ ಎಂದರೇ ಚಿನ್ನದ ತೋಳಬಂದಿ. ಆದರೂ ಔತ್ತರೇಯರು ‘ಹೇಮಾಂಗದ’ ಎಂದು ಸವಿಶೇಷಣವಾಗಿಯೇ ಅದನ್ನು ಹೇಳಿವರು. ‘ಅಂಬುಜ’ ಎಂದು ಸುಮ್ಮನೆ ಹೇಳುವ ಬದಲು ‘ಲೀಲಾಂಬುಜ’ ಎಂದೇ ವಿಶೇಷಣವನ್ನು ಕೂಡಿಸಿ ಹೇಳುವರು. ‘ಚಿತ್ರ’ ಎಂದು ಹೇಳಬೇಕಾದ ಸಂದರ್ಭದಲ್ಲಿ ‘ವಿಚಿತ್ರ ಚಿತ್ರ’ ಎನ್ನುವರು. ಇದು ಉದಾಹರಣೆಯ ನೇರವಾದ ಅರ್ಥ. ಇಲ್ಲಿ ಮುಳಿಯ ತಿಮ್ಮಪ್ಪಯ್ಯನವರೂ ಪ್ರೊ.ಎಂ.ವಿ. ಸೀತಾರಾಮಯ್ಯನವರೂ ‘ಆಧಿಕಂ’ ಎಂಬ ಅಪಪಾಠವನ್ನು ಸಮರ್ಥಿಸಲು ತುಂಬಾ ಊಹಾಪೋಹ ಮಾಡಿದ್ದಾರೆ. ದಂಡಿಯು ಹೇಳುವ ‘ಕ್ರೀಡಾಸರ’ವೂ ಇದೇ ಜಾತಿಯದು. ‘ಸರ’ (=ಸರೋವರ)ವೆಂದರೆ ತೃಪ್ತಿಯಿಲ್ಲದೆ ‘ಕ್ರೀಡಾಸರ’ವೆನ್ನುವುದು ಅವರ ಸರಣಿ. (ಹೋಲಿಸಿ-ದಂಡಿ, M-೭೯). ‘ಗಾಳಿ’ ಎಂಬಲ್ಲೆಲ್ಲ ‘ತಂಗಾಳಿ’, ‘ನೆಳಲು’ ಎಂಬಲ್ಲೆಲ್ಲ. ‘ತಣ್ಣೆಳಲು’, ‘ಮೋಡ’ ಎನ್ನುವಲ್ಲಿ ‘ಕಾರ್ವೋಡ ಮುಂತಾದ ಪ್ರಯೋಗಗಳನ್ನು ನಾವು ಇಂದು ಇದೇ ರೀತಿ ಊಹಿಸಿಕೊಳ್ಳಬಹುದು. ವಿಶೇಷಣಕ್ಕೆ ಸಾರ್ಥಕ್ಯವಿಲ್ಲದಾಗಲೂ ಕವಿಸಮಯವೆಂದು ಉಪಯೋಗಿಸಿದಾಗ ಮಾತ್ರ ಇವು ಉದಾಹರಣೆಗಳಾಗುತ್ತವೆ; ಸಾರ್ಥಕ್ಯ ನಿಜವಾಗಿದ್ದಾಗ ಅಲ್ಲ.*

೮೨. ದನ ಕಾಯುವವರು, ಹುಡುಗರು, ಹೆಂಗಸರು, ಚಂಚಲರು, ಹರಟೆ ಮಲ್ಲರು, ಜೂಜುಗಾರರು. (ಬಾಹ್ಲೀಕ ಮುಂತಾದ) ವಿದೇಶೀಯರು, ಇವರೇ ಮುಂತಾದವರ ಮಾತುಕಥೆಗಳು ‘ಗ್ರಾಮ್ಯ’ವಾಗುವವು. ಎರಡು ಮಾರ್ಗಗಳಲ್ಲಿಯೂ ಅವನ್ನು ಬಿಡಬೇಕು.

ನೆನೆದಿರುಳುಂ ಪಗಲುಂ ನಿನ್ನನೆ ಪೀನಮೊಱಲ್ದು ಮಱುಗಿ ಕಾತರಿಸುತ್ತುಂ |

ಮನದೊಳ್ ಸೈರಿಸಲಾಱೆಂ ನಿ[1]ನಗಿನಿಸುಂ ಕರುಣಮಿಲ್ಲ ಮರವಾನಿಸನಯ್ ||೮೩||

ಅಗ್ರಾಮ್ಯತೆಯೆಂಬಗುಣ

ಎಂದಿಂತೀ ಗ್ರಾಮ್ಯೋಕ್ತಿಯೊಳೊಂದಾಗಿಸದದನೆ ಪೇೞ್ವುದಿಂತೀ ಸ್ಥಿತಿಯೊಳ್ |

ಕಂದರ್ಪಂ ಚಲದೆನ್ನೊಳ್ ನಿಂದಂ ಮುನಿಸಿಲ್ಲ ನಿನ್ನೊಳಾತಂಗಿನಿಸುಂ ||೮೪||

ಓಜೋಗುಣ

ಸಮಱ ಸಮಾಸ-ಪದಂಗಳನಮರ್ದಿರೆ ಸಯ್ತಾಗಿ ಬಗೆದು ಪೇೞ್ದೊಡದಕ್ಕುಂ |

ಕ್ರಮದೋಚೋಲಕ್ಷಣಮುತ್ತಮಮಿದು ಗದ್ಯ[2]ಕ್ಕಲಂಡ್ರಿಯಾನುಸಮೇತಂ ||೮೫||

ಮಿಗೆ ಪದ್ಯದೊಳಂ ಗುಣಮಂ ತಗುಳ್ಚುಗುಂ ಸ[3]ಮ-ಹಿತ-ಪ್ರಯೋಗಾನುಗತಂ |

ಸೊಗಯಿಸುವಂತಿರೆ ಬಗೆದಿದಮಗಾಧ-ಮನರಿಡುಗೆ ಕೃತಿಯೊಳೋಜೋ ಗುಣಮಂ ||೮೯||

೮೩. *‘ಗ್ರಾಮ್ಯ’ಕ್ಕೆ ಉದಾಹರಣೆ-* ‘ಇರುಳೂ ಹಗಲೂ ನಿನ್ನನ್ನೇ ತುಂಬಾ ಕೂಗಿಕೊಳ್ಳುತ್ತ, ಗೋಳಾಡಿ ಕಾತರಿಸುತ್ತ, ಮನದಲ್ಲಿ ಸಹಿಸಲಾರದೆ ಇದ್ದೇನೆ. ನಿನಗಿಷ್ಟಾದರೂ ದಯೆಯಿಲ್ಲ. ನೀನು ಮರದ ಮನುಷ್ಯನಯ್ಯ!’

೮೪. ಹೀಗೆ ಗ್ರಾಮ್ಯವಾಗಿರುವ ಉಕ್ತಿಗಳನ್ನು ಕಾವ್ಯರಚನೆಯಲ್ಲಿ ಸೇರಿಸದೆ ಅದನ್ನೇ ಶಬ್ದಾಂತರಗಳಿಂದ ಕೆಳಗಿನಂತೆ ಸಂಸ್ಕರಿಸಿ ಹೇಳಬೇಕು- ಮನ್ಮಥನು ತೀವ್ರವಾಗಿ ನನ್ನಲ್ಲಿ ನೆಲೆಗೊಂಡಿರುವನು; ನಿನ್ನಲ್ಲಿ ಅವನಿಗೆ ಸ್ವಲ್ಪವೂ ಮುನಿಸೇ ಇಲ್ಲವಲ್ಲ !’

೮೫. ಪ್ರಯೋಗಿಸಿದ ಸಮಾಸಪದಗಳು ಚೆನ್ನಾಗಿ ಹೊಂದಿಕೊಳ್ಳುವಂತೆ ವಿಚಾರಮಾಡಿ ಹೇಳುವುದೇ ಓಜೋಗುಣದ ಲಕ್ಷಣ. ಇದು ಗದ್ಯಕ್ಕೆ ಶ್ರೇಷ್ಠವಾದ ಅಲಂಕಾರವನ್ನು ತೊಡಿಸಿದಂತಿರುವುದು. *ಹೋಲಿಸಿ-ದಂಡಿ, I-೮೦*.

೮೬. ಇದು ಸಮವೂ ಹಿತವೂ (‘ಅ’ ಪಾಠಾಂತರದಂತೆ ಮಿತವೂ) ಆಗಿ ಪ್ರಯೋಗಗಳಲ್ಲಿ ಕೂಡಿಬಂದಾಗ ಪದ್ಯದಲ್ಲಿ ಕೂಡ ಗುಣಾತಿಶಯವನ್ನೇ ಒದಗಿಸುವುದು. *ಸ+ಮಹಿತ ಎಂದರೆ ಮಹಿಮೆಯುಳ್ಳ ಕವಿಗಳ ಎಂಬುದು ದೂರಾನ್ವಯವಷ್ಟೇ ಅಲ್ಲ; ‘ಸ’ ಕಾರವು ನಿರರ್ಥಕ ಪಾದಪೂರಕವೂ ಆಗುವುದು. ಅರ್ಥಪುಷ್ಟಿ ಕೂಡ ಹೆಚ್ಚೇನೂ ಕಾಣದು*. ಇದನ್ನರಿತು ವಿಶಾಲಮತಿಗಳು (=ಕವಿಗಳು) ಅಂದವಾಗಿ ಶೋಭಿಸುವಂತೆ ಕೃತಿಯಲ್ಲಿ ಓಜೋಗುಣವನ್ನು ಬಳಸಬೇಕು.

ಕಾರಕಮಂ ಕ್ರಿ[4]ಯೆಯಯುಮನಱದೋರಂತಿರೆ ಮುಂ ತಗುಳ್ಚಿ ಮುಕ್ತಕ-ಪದದೊಳ್ |

ಸಾರಂ ಸಮಾಸ-ಪದದುಚ್ಚಾರಣೆಯಂ ನೀಳ್ದು ನಿಲೆ ತಗುಳ್ಚುಗೆ ಕೃತಿಯೊಳ್ ||೮೭||

ಮೊದಲೊಳ್ ಸಮಾಸಪದಮುಮನೊದವಿಸಿ ಪೇೞ್ದದರ ತುದಿಯೊಳಸಮಾಸ-ಪದಾ|

ಸ್ಪದಮಾಗಿ ನಿ[5]ಱಸೆ ಕರ್ವಿನ ತುದಿಯಂತಿರೆ ವಿರಸಮಕ್ಕುಮದುತೊದಳುಂಟೇ ||೮೮||

ಪರಮಾನುಭಾವ-ಭಾಸುರ-ಸುರ-ರಾಜೋಪಮಿತ-ವಿವಿಧ-ವಿಭವೋದಯನಂ |

ನರ-ಪತಿಯಂ ಕಪಿ-ಪೃತನಾ-ಪರಿವೃತನಂ ಜಲಧಿ-ತಟದೊಳಣುವಂ ಕಂಡಂ ||೮೯||

ಎಂದಿಂತು ಪೇೞ್ದ ಮಾೞ್ಕೆಯೊಳೊಂದುವುದೋಜಸ್ವಿತಾ-ಗುಣಂ ಕೈಕೊಳೆಯುಂ |

ಸುಂದರಮಾಗದು ಕವಿ-ಪದಮೆಂದುಂ ವ್ಯತ್ಯಯದಿನಿಡುವೊಡದು ಸು[6]ಕರತರಂ ||೯೦||

ನರ-ಪತಿಯಂ ಕಪಿ-ಪೃತನಾ-ಪರಿವೃತನಂ- ಜಲಧಿ-ತಟದೊಳಣುವಂ ಕಂಡಂ |

ಷರಮಾನುಭಾವ-ಭಾಸುರ-ಸುರ-ರಾಜೋಪಮಿತ-ವಿವಿಧ-ವಿಭವೋದಯನಂ ||೯೧||

೮೭. ಬಿಡಿಬಿಡಿಯಾದ ಪದಗಳಲ್ಲಿ ಮೊದಲು ‘ಕಾರಕ’ವನ್ನೂ ‘ಕ್ರಿಯೆ’ಯನ್ನೂ ಚೆನ್ನಾಗಿ ಅಳವಡಿಸಿಕೊಂಡು, ಬಳಿಕ ದೀರ್ಘವಾದ ಸಮಾಸಪದದ ಉಚ್ಚಾರಣೆ ಬರುವಂತೆ ಕೃತಿಯಲ್ಲಿ ನೆಲೆಗೊಳಿಸಬೇಕು.

೮೮. (ಅದಕ್ಕೆ ಬದಲಾಗಿ) ಮೊದಲೇ ಸಮಾಸಪದವನ್ನು ಪ್ರಯೋಗಿಸಿ, ಅದರ ತುದಿಯಲ್ಲಿ ಅಸಮಸ್ತವಾದ ಬಿಡಿಪದತಳನ್ನಿಟ್ಟರೆ ಕಬ್ಬಿನ ತುದಿಯಂತೆ ವಿರಸವೆನಿಸುವುದರಲ್ಲಿ ಸಂಶಯವಿಲ್ಲ.

೮೯. *ಹೀಗೆ ಸಮಾಸ ವಿರಸವೆನಿಸುವುದಕ್ಕೆ ಉದಾಹರಣೆ-* ಪರಮ ಪ್ರಭಾವದಿಂದ ಬೆಳಗುವ ದೇವೇಂದ್ರಸದೃಶ ವಿಭವಸಮೇತನಾದ, ಕಪಿಸೇನಾ ಪರಿವೃತನಾದ, ನರಪತಿಯನ್ನು ಸಮುದ್ರತೀರದಲ್ಲಿ ಹನುಮಂತನು ಕಂಡನು. *ಇಲ್ಲಿ ಪದ್ಯದ ಪೂರ್ವಾರ್ಧದಲ್ಲಿ ದೀರ್ಘಸಮಾಸ ಬಂದಿದೆ, ಉತ್ತರಾರ್ಧದಲ್ಲಿ ಮಾತ್ರ ಕಡೆಕಡೆಗೇ ಬಿಡಿಶಬ್ದಗಳೂ ಬಂದಿವೆ.*

೯೦. ಮೇಲೆ ಹೇಳಿದ ಓಜೋಗುಣದ ಲಕ್ಷಣ ಇಲ್ಲಿಗೆ ಅನ್ವಯಿಸಿದರೂ, ಈ ಕವಿಪ್ರಯೋಗವೆಂದೂ ಸುಂದರವಾಗದು. ಇದನ್ನೇ ಹಿಂದೆಮುಂದೆ ಮಾಡಿದಾಗ ಅದು ಇನ್ನೂ ಚೆನ್ನಾಗುವುದು-

೯೧. *೮೯ನೆಯ ಪದ್ಯದ ಪೂವಾರ್ಧ ಉತ್ತರಾರ್ಧಗಳನ್ನೇ ಇಲ್ಲಿ ಹಿಂದೆ ಮುಂದೆ ಮಾಡಿ ಬರೆಯಲಾಗಿದೆ. ಬೇರೆ ಅರ್ಥಾನುವಾದದ ಅಗತ್ಯವಿಲ್ಲ.*

ಬೆರಸಿರೆ ಸಮಾಸದೊಳ್ ಬಂಧುರಮಾಗದು ಕಾವ್ಯ-ಬಂಧಮೆಂದುಂ ಕೃತಿಯೊಳ್ |

ದೊರೆಕೊಳ್ವ ಪದ-ವಿಶೇಷ್ಯಾಂತರಮದಱಂ ವ್ಯಸ್ತಮಾಗಿ ಪೇೞ್ಗೆದನೆಂದುಂ ||೯೨||

ಪರಿದೆಯ್ದಿ ತಾಗಿದಂ ಭಾಸುರ-ತರ-ರಘು-ಕುಲ-ಲಲಾಮ-ಲಕ್ಷ್ಮೀ-ಧರನೊಳ್ |

ಪರಿಕೋಪ-ವಿಧೃತ-ವಿಸ್ಫರದುರು-ರಕ್ತ-ಕಠೋರ-ನ[7]ಯನ-ಯುತ-ದಶ-ವದನಂ ||೯೩||

ಇಂತು ವಿ[8]ಶೇಷ್ಯಂ ಕ್ರಿಯೆಯಂ ಸಮತಂ ನೋೞ್ಪುದಱನಕ್ಕುಮದು ಸಾಪೇಕ್ಷಂ |

ಚಿಂತಿಸೆ ಸಮಾಸಮಂ ಪೇೞ್ವಂತಪ್ಪ ಪದಂ ಸಮರ್ಥಮಲ್ತಪ್ಪುದಱಂ ||೯೪||

೯೨. (ವಿಶೇಷಣದೊಡನೆ) ಅನ್ವಯಿಸಬೇಕಾಗಿರುವ ಒಂದು ವಿಶೇಷ್ಯ ಪದವು ವಿಶೇಷ್ಯವಾದ ಮತ್ತೊಂದು ಪದದೊಡನೆ ಸಮಾಸವಾಗಿ ಬೆರಸಿಹೋದರೆ ಕಾವ್ಯಬಂಧವೆಂದೂ ಸುಂದರವಾಗದು. ಆದುದರಿಂದ ವಿಶೇಷ್ಯಪದವನ್ನು ವ್ಯಸ್ತವಾಗಿ ಎಂದರೆ ಬಿಡಿಯಾಗಿಯೇ ಕಾವ್ಯದಲ್ಲಿ ಹೇಳಬೇಕು.

೯೩. ಉಜ್ವಲತಮ-ರಘುವಂಶಲಲಾಮ-ಲಕ್ಷ್ಮೀಧರನಲ್ಲಿಗೆ ವೇಗದಿಂದೋಡಿ ಅತಿಕೋಪಾರುಣ ಕ್ರೂರನೇತ್ರಸಮೇತನಾದ ರಾವಣನು ತಾಗಿದನು. *ಇಲ್ಲಿ ‘ರಘುವಂಶಲಲಾಮ’ ಎನ್ನುವಾಗ ‘ಲಲಾಮ’ ಎಂಬುದು ಒಂದು ವಿಶೇಷ್ಯವಾದ ನಾಮಪದ; ಅದೇ ಸಮಾಸದಲ್ಲಿ ಸೇರಿಕೊಂಡ ‘ಲಕ್ಷ್ಮೀಧರ’ ಇನ್ನೊಂದು ವಿಶೇಷ್ಯ ನಾಮಪದ. ಇವೆರಡೂ ಒಂದೇ ಸಮಾಸದಲ್ಲಿ ಸೇರಿಹೋದುದು ಸರಿಯಲ್ಲ; ಸೇರಿದ್ದರಿಂದ ‘ಸಾಪೇಕ್ಷತ್ವ’ವೆಂಬ ಕ್ಲೇಶವುಂಟಾಗಿದೆ. ಈ ಕ್ಲೇಶವಿಲ್ಲದಾಗ ಸಮಾಸ ‘ಸಮರ್ಥ’ವೆನಿಸುತ್ತದೆ. ಹಾಗೆಯೇ ಉತ್ತರಾರ್ಧದಲ್ಲಿ ‘ನಯನ’ ಒಂದು ಸ್ವತಂತ್ರ ವಿಶೇಷ್ಯವಾಗಬಹುದಾದ ನಾಮಪದ; ‘ದಶಮಾನ’ ಇನ್ನೊಂದು ವಿಶೇಷ್ಯಪದ. ಇದನ್ನೂ ಕೂಡಿಸಿ ಸಮಾಸ ಮಾಡಿರುವುದರಲ್ಲಿಯೂ ಸಾಪೇಕ್ಷತ್ವವಿದ್ದೇ ಇದೆ. ಹೀಗೆ ಸಾಪೇಕ್ಷತ್ವದೋಷವಿದ್ದರೂ ಅರ್ಥಸೂಚಕವಾದ ಗಮಕಗಳಿರುವುದಾದರೆ ಅದು ವ್ಯಾಕರಣದೋಷವಾಗದು. ಪೂರ್ವಾರ್ಧದಲ್ಲಿ ‘ಲಲಾಮ’=‘ಲಲಾಮ-ಭೂತ’ ಎಂದು ಗಮಕವನ್ನು ಅಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ; ಉತ್ತರಾರ್ಧದಲ್ಲಿ ‘ನಯನ-ಯುತ’ ಎಂದು ಗಮಕವಿದ್ದೇ ಇದೆ. ಆದರೂ ಕವಿಗಳು ಸಾಪೇಕ್ಷಸಮಾಸಗಳನ್ನು ದೂರೀಕರಿಸಬೇರಕೆಂಬುದು ಗ್ರಂಥಕಾರನ ಅಭಿಪ್ರಾಯ.*

೯೪. ಹೀಗೆ ವಿಶೇಷ್ಯವು ನೇರವಾಗಿ ಕ್ರಿಯೆಯನ್ನೇ ನೋಡುವುದರಿಂದ (=ಕ್ರಿಯೆಯೊಡನೆ ಅನ್ವಯಿಸುವುದರಿಂದ; ವಿಶೇಷಣದಂತೆ ಬಂದಿರುವ ಇನ್ನೊಂದು ವಿಶೇಷ್ಯದೊಡನೆ ನೇರವಾಗಿ ಅನ್ವಯಿಸದಿರುವುದರಿಂದ) ಅದು ‘ಸಾಪೇಕ್ಷ’ಸಮಾಸವೆನಿಸುವುದು; ಸಮಾಸಾರ್ಥವನ್ನು ಬೋಧಿಸಲು ಪದವಲ್ಲಿ ಪೂರ್ಣವಾಗಿ ಶಕ್ತವಾಗಿರುವುದಿಲ್ಲವಾದ್ದರಿಂದ.

ಸ[9]ಮನಿಸೆ ಸಾಪೇಕ್ಷಮುಮಾ ಸಮಾಸಮುಂ ಪೆಱಗುಮೆಲ್ಲಿಯಾನುಂ ಗಮಕಂ |

ಕ್ರಮಮದಱೊಳೆಲ್ಲಮೆನಲಿನಿತು ಮಾರ್ಗದೊಳ್ ಸಮಱಗಿಂತು ಕವಿ-ವೃಷಭರ್ಕಳ್ ||೯೫||

ಪರಿದೆಯ್ದಿ ತಾಗಿದಂ ಭಾಸುರ-ತರ-ರಘು-ಕುಲ-ಲಲಾಮನೊಳ್ ಲಕ್ಷ್ಮಣನೊಳ್ |

ಪರಿಕೋಪ-ಭ್ರಮಣೋದ್ಧುರ-ರಕ್ತ-ಕಠೋರಲೋಚನಂ ದಶವದನಂ ||೯೬||

ಇಂತಿರೆ ಮಾರ್ಗ-ದ್ವಿತಯ-ಗತಾಂತರಮಂ ಪೇ[10]ೞ್ದೆನೆಲ್ಲಿಯುಂ ಕ್ಷೀರ-ಗುಡಾ- |

ದ್ಯಂತರ-ರಸಾಂತರಂ ಜಾತ್ಯಂತರಮಪ್ಪಂತ[11]ನಂತಮಂತರ್ಭೇದಂ ||೯೭||

೯೫. ಬೇರೊಂದು ‘ಗಮಕ’ವು (ಪದ್ಯದಲ್ಲಿ) ಎಲ್ಲಿಯಾದರೂ ಸ್ಪಷ್ಟವಾಗಿ ಕಾಣಬರುತ್ತಿದ್ದುದಾದರೆ ಅಂತಹ ‘ಸಾಪೇಕ್ಷ’ ಸಮಾಸಗಳು ಕೂಡ ಎಲ್ಲವೂ ‘ಕ್ರಮ’ ಎಂದರೆ ಯುಕ್ತವೇ ಸರಿ. ಕವಿಶ್ರೇಷ್ಠರು ‘ಮಾರ್ಗ’ದಲ್ಲಿ ಈ ನಿರ್ದೇಶನದಂತೆ ಸ್ವಲ್ಪ ಮಟ್ಟಿಗೆ ಅಂದಗೊಳಿಸಬೇಕು. *“ಸಾಪೇಕ್ಷತ್ವೇ-ಪಿ ಗಮಕತ್ವಾತ್ ಸಾಧುಃ” ಎಂಬುದು ಸಂಸ್ಕೃತ ಮಹಾಕವಿಪ್ರಯೋಗಗಳಲ್ಲಿ ಬರುವ ಸಾಪೇಕ್ಷಸಮಾಸಗಳನ್ನು ಸಮರ್ಥಿಸುವ ಮಲ್ಲಿನಾಥಾದಿ ವ್ಯಾಖ್ಯಾಕಾರರ ಸೂತ್ರ. ಅದನ್ನೇ ಇಲ್ಲಿ ಅನುಸರಿಸಲಾಗಿದೆ.*

೯೬. *“ಸಾಪೇಕ್ಷತ್ವ”ವಿಲ್ಲದಂತೆ ಒಂದು ವಿಶೇಷ್ಯಪದವನ್ನು ಸಮಾಸದಿಂದ ಹೊರಗೆ ತಂದು ಎರಡು ವಿಶೇಷ್ಯಗಳಿಗೂ ಸ್ವತಂತ್ರವಿಭಕ್ತಿ ಬರುವಂತೆ ಪರಿಷ್ಕರಿಸಿರುವ ಉದಾಹರಣೆಯಿದು. ಮೊದಲು “ಲಲಾಮಲಕ್ಷ್ಮೀಧರನೊಳ್’ ಎಂದಿದ್ದ ಒಂದೇ ಸಮಸ್ತಪದವನ್ನು ‘ಲಲಾಮನೊಳ್’, ‘ಲಕ್ಷ್ಮೀಧರನೊಳ್’ ಎಂದು ಎರಡಾಗಿ ಒಡೆಯಲಾಗಿದೆ. ಹಾಗೆಯೇ ‘ನಯನಯುತದಶವದನಂ’ ಎಂಬ ಸಮಸ್ತಪದವನ್ನು ‘ಲೋಚನಂ’ ‘ದಶವದನಂ’ ಎಂದು ಎರಡಾಗಿ ಒಡೆಯಲಾಗಿದೆ. ಪ್ರತ್ಯೇಕ ಅನುವಾದ ಅನಗತ್ಯ.*

೯೭. ಹೀಗೆ ಎರಡು ಮಾರ್ಗಗಳಲ್ಲಿಯೂ ಇರುವ ( ಗುಣಗಳ ಮುಖ್ಯ) ಅಚಿತರವನ್ನು ಹೇಳಿದ್ದೆನೆ. ಒಂದೊಂದರಲ್ಲಿಯೂ ಅಡಗಿರುವ ಸೂಕ್ಷ್ಮ ಒಳಭೇದಗಳು ಅನಚಿತ-ಹಾಲು, ಬೆಲ್ಲ ಮುಂತಾದುವು (ಎಲ್ಲ ಸವಿಯೆಂದರೂ) ಅವುಗಳ ರುಚಿಗಳು ಸೂಕ್ಷ್ಮವಾಗಿ ಭಿನ್ನ ಭಿನ್ನ ಜಾತಿಯವು ಹೇಗೋ ಹಾಗೆಯೇ!


[1] ನಿನಗೆನಸುಂ ‘ಪಾ’.

[2] ಕ್ಕಲಂ ಕ್ರಿಯಾತ್ಮಸಮೇತಂ ‘ಕ, ಮ’, ಗದ್ಯಕ್ರಿಯಾನು ‘ಬ, ಅ’.

[3] ಸಮ-ಮಿತ-ಪ್ರ.‘ಅ’.

[4] ಕ್ರಿಯೆಯ ನಱದೆ ‘ಅ’.

[5] ನಿಲಿಸೆ ‘ಕ’.

[6] ಸುಕರಕರಂ ‘ಅ’. ವಿಶೇಷಣ-ವಿಶೇಷ್ಯಪದಗಳ ಸಮಾಸವಿಚಾರ

[7] ನಯನಯುಗ ‘ಮ’.

[8] ವಿಶೇಷ್ಯಕ್ರಿಯೆಯುಂ ‘ಪಾ’.

[9] ಸಮನಿಸಿ ‘ಕ’.

[10] ಪೇೞ್ವೆ ‘ಕ’.

[11] ದನಚಿತದಂತರ್ಭೇದಂ ‘ಅ’.

ಆಧಾರ: ಕಣಜ

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published. Required fields are marked *