
ಭರತನಾಟ್ಯ ಎನ್ನುವುದು ಕೇವಲ ತನ್ನ ಹಳೆಯ ಸಂಪ್ರದಾಯದಲ್ಲಿ ಸಿಲುಕಿಕೊಂಡು ಹೊಸ ಯುಗದ ಪ್ರೇಕ್ಷಕರಿಂದ ದೂರವಾಗಬಾರದು. ಇದೇ ಗರುಡ ನಾಟ್ಯ ಸಂಘದ ಕಲಾವಿದರ ಆಶಯ. ಇದೇ ಕಾರಣಕ್ಕಾಗಿ ಭರತನಾಟ್ಯಕ್ಕೆ ವಿಭಿನ್ನವಾದ ಕಾಂಟೆಂಪರರಿ ಕ್ಲಾಸಿಕಲ್ ಶೈಲಿಯ ಸ್ಪರ್ಶ ನೀಡಿದ್ದಾರೆ. ಕಳೆ ನಾಲ್ಕು ವರ್ಷಗಳಲ್ಲಿ ಹತ್ತಾರು ಪ್ರದರ್ಶನಗಳನ್ನು ನೀಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಗರುಡ ನಾಟ್ಯ ಸಂಘದ ಕಲಾವಿದರು ತಮ್ಮ ನೃತ್ಯ ಪ್ರದರ್ಶನದ ಮೂಲಕ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಕೂಡ ಜನರಿಗೆ ಮುಟ್ಟಿಸಲು ಪ್ರಯತ್ನ ಮಾಡಿದ್ದಾರೆ.
ವನ್ಯಜೀವಿ ಸಂರಕ್ಷಣೆ, ಏಕತೆಯ ಸಂದೇಶ, ಕೌಟುಂಬಿಕ ದೌರ್ಜನ್ಯ ತಡೆ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಇನ್ನೂ ಅನೇಕ ಸಾಮಾಜಿಕ ಜಾಗೃತಿಯ ವಿಷಯಗಳನ್ನು ಎತ್ತಿಕೊಂಡು ಕೂಡ ನೃತ್ಯ ಪ್ರದರ್ಶನ ನೀಡುವ ಮೂಲಕ ಗರುಡ ನಾಟ್ಯ ಸಂಘದ ಕಲಾಪ್ರತಿಭೆಗಳು ಯಶಸ್ವಿಯಾಗಿದ್ದಾರೆ. ನೃತ್ಯ ಪ್ರದರ್ಶನ ಎನ್ನುವುದು ಕೇವಲ ಸಂಪ್ರದಾಯದ ಅನುಕರಣೆಯಾಗಿ ಉಳಿಯದಂತೆ ಮಾಡಿರುವ ಗರುಡ ನಾಟ್ಯ ಸಂಘದ ನೃತ್ಯ ಸಂಯೋಜಕರು ಸಮಾಜದ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಗಮನ ಸೆಳೆಯುವ ಅಂಶವಾಗಿದೆ.
ಮಕ್ಕಳು, ಯುವಕ-ಯುವತಿಯರು ಮಾತ್ರವಲ್ಲ ಹಿರಿಯರು ಕೂಡ ತಮ್ಮ ಮಧ್ಯಮ ಹಾಗೂ ಇಳಿವಯಸ್ಸಿನಲ್ಲಿ ನೃತ್ಯ ಕಲಿಯಲು ಸಾಧ್ಯ ಹಾಗೂ ಪ್ರದರ್ಶನ ನೀಡಲು ಸಾಧ್ಯ ಎನ್ನುವುದನ್ನು ಅನೇಕ ನೃತ್ಯ ಪ್ರದರ್ಶನಗಳ ಮೂಲಕವೇ ಗರುಡ ನಾಟ್ಯ ಸಂಘವು ಸಾಬೀತುಪಡಿಸಿದೆ. ವಯಸ್ಸಾದವರಿಗೆ ಲಘುವಾದ ಚಲನೆಗಳ ಮೂಲಕ ನೃತ್ಯವನ್ನು ಹೇಳಿಕೊಡುವುದು ಕೂಡ ಇನ್ನೊಂದು ವಿಶೇಷವಾಗಿದೆ. ಆದ್ದರಿಂದ ನೃತ್ಯವನ್ನು ಬಾಲ್ಯದಿಂದಲೇ ಕಲಿಯಬೇಕು ಎನ್ನುವ ವಾದದ ಚೌಕಟ್ಟನ್ನು ಕೂಡ ಮುರಿಯುವಲ್ಲಿ ಗರುಡ ನಾಟ್ಯ ಸಂಘವು ಯಶಸ್ವಿಯಾಗಿದೆ.
“ಕಾಂಟೆಂಪರರಿ ಕ್ಲಾಸಿಕಲ್ ನೃತ್ಯ”ದಲ್ಲಿ ಮೂರು ಹಂತಗಳ ತರಬೇತಿ ನೀಡುವ ಮೂಲಕ ಸ್ವತಂತ್ರವಾಗಿ “ಸರ್ಟಿಫಿಕೇಟ್ ಕೋರ್ಸ್” ಕೂಡ ನಡೆಸುತ್ತಿರುವ ಗರುಡ ನಾಟ್ಯ ಸಂಘವು ಪ್ರತಿಯೊಂದು ವರ್ಷವೂ ಪ್ರತಿಭಾವಂತ ಯುವ ನೃತ್ಯ ಕಲಾವಿದರಿಗೆ ಆರ್ಥಿಕ ನೆರವು ನೀಡುವ ಮೂಲಕ ಪ್ರೋತ್ಸಾಹಿಸುತ್ತಾ ಬಂದಿದೆ. ಬಡ ಮಕ್ಕಳಿಗೆ ಕಡಿಮೆ ಶುಲ್ಕದೊಂದಿಗೆ ನೃತ್ಯ ಶಿಕ್ಷಣ ನೀಡುತ್ತಿರುವ ಗರುಡ ನಾಟ್ಯ ಸಂಘವು ನೃತ್ಯಕಲೆಯನ್ನು ಎಲ್ಲ ವರ್ಗದವರಿಗೆ ತಲುಪಿಸಲು ಶ್ರಮಿಸುತ್ತಿದೆ.
ವರ್ಷದುದ್ದಕ್ಕೂ ಹತ್ತಾರು ನೃತ್ಯ ಪ್ರದರ್ಶನಗಳನ್ನು ಆಯೋಜಿಸುತ್ತಿರುವ ಗರುಡ ನಾಟ್ಯ ಸಂಘವು ತನ್ನಲ್ಲಿ ನೃತ್ಯ ಶಿಕ್ಷಣ ಪಡೆಯುವವರಿಗೆ ರಂಗದ ಮೇಲೆ ಧೈರ್ಯದಿಂದ ಪ್ರದರ್ಶನ ನೀಡುವ ವಿಶ್ವಾಸ ತುಂಬುತ್ತಿದೆ. ಪ್ರದರ್ಶನಗಳ ಮೂಲಕವೇ ನೃತ್ಯದಲ್ಲಿ ಪರಿಪಕ್ವವಾಗಬೇಕು ಎನ್ನುವ ತತ್ವವನ್ನು ಗರುಡ ನಾಟ್ಯ ಸಂಘ ನಂಬಿದೆ. ತಮ್ಮ ಪ್ರತಿಯೊಬ್ಬ ಕಲಾವಿದರೂ ವರ್ಷದಲ್ಲಿ ಕನಿಷ್ಠ ಮೂರು ನೃತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನೃತ್ಯ ಪ್ರದರ್ಶನದಲ್ಲಿ ಪರಿಣತಿ ಸಾಧಿಸಬೇಕೆಂದು ಗರುಡ ನಾಟ್ಯ ಸಂಘ ಬಯಸುತ್ತದೆ. ಅದಕ್ಕಾಗಿ ಸ್ವತಃ ಕಾರ್ಯಕ್ರಮಗಳನ್ನು ಸಂಘಟಿಸುವ ಸಾಹಸವನ್ನೂ ಮಾಡುತ್ತಾ ಬಂದಿದೆ.
gnsdance.blogspot.in