ಗಮಕಿ ಎಂ. ರಾಘವೇಂದ್ರರಾವ್

ಎಂ. ರಾಘವೇಂದ್ರರಾವ್ ಅವರು ನಾಡು ಕಂಡ ಪ್ರಖ್ಯಾತ ಗಮಕಿಗಳಲ್ಲಿ ಒಬ್ಬರು.  ಗಮಕ ಕಲೆಯನ್ನು ಬೆಳೆಸಿ ನಾಡಿನಾದ್ಯಂತ ಪ್ರಚಾರಪಡಿಸಿದ ರಾಘವೇಂದ್ರರಾಯರು ಆಗಸ್ಟ್ 7, 1914ರಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಜನಿಸಿದರು.  ಅವರ  ತಂದೆ ಮೈಸೂರು ನೀಲಕಂಠ ಕೇಶವರಾಯರು ಮತ್ತು ತಾಯಿ ವೆಂಕಟಲಕ್ಷ್ಮಮ್ಮನವರು.   ರಾಘವೇಂದ್ರರಾಯರಿಗೆ ತಂದೆಯಿಂದಲೇ ಸಾಹಿತ್ಯದ ಪಾಠ ಮೊದಲ್ಗೊಂಡಿತು. ಹತ್ತನೇ ವಯಸ್ಸಿನಿಂದಲೇ  ಪ್ರಾರಂಭವಾದ ಅವರ ಗಮಕ, ಅವರ ಕಡೆಯ ಉಸಿರಿನವರೆಗೂ ಅವರೊಡನೆ ನಿರಂತರವಾಗಿತ್ತು.   ಸುಮರು 75 ವರ್ಷಗಳಷ್ಟು ದೀರ್ಘಕಾಲ ಅವರು ಗಮಕವನ್ನೇ ಉಸಿರಾಡಿದವರು

ಮೈಸೂರಿನ ಜವಳಿ ಅಂಗಡಿ ತಮ್ಮಯ್ಯನವರಲ್ಲಿ ಗಮಕ ಅಭ್ಯಾಸವನ್ನು ಗುರುಕುಲಪದ್ಧತಿಯಲ್ಲಿ ಮುಂದುವರೆಸಿದ ರಾಯರು ಗಮಕ ಕಾರ್ಯಕ್ರಮಗಳನ್ನು  ನೀಡುವುದರೊಂದಿಗೆ ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ತರಗತಿಗಳಲ್ಲಿ ‘ಗಮಕ’ವನ್ನು ಹೇಳಿಕೊಟ್ಟು ಒಂದು ಶ್ರೇಷ್ಠ ಗಮಕ ಪರಂಪರೆಯನ್ನು ನಿರ್ಮಿಸಿದರು. ರಾಯರು 1947-48ರಿಂದಲೇ ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುತ್ತಿದ್ದ ವಿವಿಧ ಗಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುತ್ತಾ ಬಂದರು. ಪರೀಕ್ಷೆಗಳಿಗೆ ಪಠ್ಯಕ್ರಮವನ್ನು ಸಿದ್ಧಗೊಳಿಸುವುದು, ಪಠ್ಯಪುಸ್ತಕಗಳನ್ನು ತಯಾರಿಸುವುದು, ಪರೀಕ್ಷಕರನ್ನು ನೇಮಿಸುವುದು ಮುಂತಾದ ಎಲ್ಲ ರೀತಿಯ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ‘ಗಮಕ ವಿಭಾಗ’ದ ಸಂಚಾಲಕರಾಗಿ ಇವರು ಸಲ್ಲಿಸಿದ ಸೇವೆ ಗಣನೀಯವಾದುದು.

ಆಕಾಶವಾಣಿ ಕೇಂದ್ರಗಳಿಂದ ರಾಘವೇಂದ್ರರಾಯರು  ನೀಡಿರುವ ಗಮಕ ಕಾರ್ಯಕ್ರಮಗಳು ಲೆಕ್ಕವಿಲ್ಲದಷ್ಟು.  ಪಂಪ, ರನ್ನ, ಕುಮಾರವ್ಯಾಸ, ಲಕ್ಷ್ಮೀಶ, ರಾಘವಾಂಕ ಮುಂತಾದ ಕವಿಗಳ ಕಾವ್ಯಗಳನ್ನು ಲೀಲಾಜಾಲವಾಗಿ ರಸಭರಿತವಾಗಿ ವಾಚನ ಮಾಡುತ್ತಿದ್ದ ಇವರು, ಈ ಕಾವ್ಯಗಳ ಪ್ರಭಾವದಿಂದ ಸ್ವತಃ ಕವಿಗಳೂ ಆಗಿದ್ದರು.  ರಾಘವೇಂದ್ರ ರಾವ್ ಅವರು ಗಮಕಿ, ಕಾವ್ಯಗಾಯನ ಕಲಾ ಸಂಗ್ರಹ, ಗಮಕ ಪ್ರಚಾರ ಬೋಧನ, ಗಮಕ ಪ್ರವೇಶದಾಯಿನಿ, ಗಮಕ ಗೀತೆಗಳು ಎಂಬ ಗಮಕ ಕಲೆಗೆ ಸಂಬಂಧಿಸಿದ ಗ್ರಂಥಗಳನ್ನು ರಚಿಸಿ, ಸಂಪಾದಿಸಿರುವುದೇ ಅಲ್ಲದೆ, ಸತ್ಯದೇವ ಚರಿತೆ, ವಾಸುದೇವ ವಿಜಯ, ವೆಂಕಟೇಶ ವಿಜಯ, ಶ್ರೀ ರಾಘವೇಂದ್ರ ಗುರುಕೀರ್ತನ ಮಾಲಿಕಾ ಮುಂತಾದ ಅನೇಕ ಗೇಯ ಕೃತಿಗಳನ್ನೂ  ರಚಿಸಿದ್ದಾರೆ.  ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ದ ಧಾಟಿಯಲ್ಲಿ ರಾಯರು ಪದ್ಯಗಳನ್ನು ರಾಘಣ್ಣನ ಕಲಿಪದಗಳು ಎಂಬ ಹೆಸರಿನಲ್ಲಿ ರಚಿಸಿ ಪ್ರಕಟಿಸಿದ್ದಾರೆ. ಇದು ‘ಯಾಲಪದ’ವೆಂಬ ಛಂದಸ್ಸಿನಲ್ಲಿದೆ. ವ್ಯಾಸರಾಯ ಮಹಾತ್ಮೆ, ಆನಂದಗೀತೆ ಮುಂತಾದ ಕೃತಿಗಳನ್ನು ಪ್ರಕಟಿಸಿರುವ ರಾಯರು ತಮ್ಮ ಮತ್ತೊಂದು ರಚನೆ ರಘುವರವಚನಾಮೃತ ಸಾಗರ ಎಂಬ ಕೃತಿ.  ಇದಲ್ಲದೆ  ರಾಯರು, ಹನುಮದ್ವಿಲಾಸವನ್ನು ವಿವಿಧ ಮಟ್ಟುಗಳಲ್ಲಿ ಹಾಡಿ, ಅನೇಕ ಶಿಷ್ಯರಿಗೆ ಅದೇ ರೀತಿ ಹಾಡುವುದನ್ನು ಕಲಿಸಿಕೊಟ್ಟು, “ಹನುಮದ್ವಿಲಾಸ”ವನ್ನು ಖ್ಯಾತಿಗೊಳಿಸಿದರು. ಕರ್ನಾಟಕ ಸರಕಾರದಕ ಕನ್ನಡ-ಸಂಸ್ಕೃತಿ ಇಲಾಖೆಯವರ “ಗುರುಶಿಷ್ಯ ಪರಂಪರೆ” ಎಂಬ ಯೋಜನೆಯಲ್ಲಿ, ಅನೇಕ ಗಮಕ ವಿದ್ಯಾರ್ಥಿಗಳಿಗೆ ಗಮಕ ಕಲೆಯ ಪಾಠ ಹೇಳಿದ ಕೀರ್ತಿ ಇವರದು.

ರಾಯರು, ಶಿಕ್ಷಣ ಇಲಾಖೆಯಿಂದ ನಿವೃತ್ತರಾದ ಮೇಲೆ ಪೂರ್ಣಕಾಲಿಕ ಗಮಕ ಪ್ರಚಾರ ಕಾರ್ಯಕರ್ತರಾಗಿ ಗಮಕಿಗಳನ್ನು, ಶಿಷ್ಯರನ್ನು ಕಾರ್ಯಕ್ರಮ ನಿರ್ವಾಹಕರನ್ನು ಪ್ರೋತ್ಸಾಹಿಸುತ್ತಾ ನಾಡಿನ ಮೂಲೆ ಮೂಲೆಗಳನ್ನು ತಿರುಗಿದರು. ಗಮಕ ಪ್ರಚಾರದಲ್ಲಿ ಆಯಾಸವೆಂಬುದೆ ಇಲ್ಲವೆಂಬಂತೆ ಕೆಲಸ ಮಾಡಿದರು.  ಡಿ.ವಿ.ಜಿ.ಯವರಂತಹ ಶ್ರೇಷ್ಠ ವಿದ್ವಾಂಸರ ಆಸಕ್ತಿಯಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಪ್ರಮುಖ ಶಾಖೆಯಾಗಿ ಬೆಳೆದು ಬಂದ ಗಮಕ ವಿಭಾಗವು ಜಿ.ನಾರಾಯಣ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತನ್ನ ಉತ್ತುಂಗ ಶಿಖರವನ್ನು ತಲುಪಿತ್ತು.  ಅನಂತರ ಕೆಲವುಕಾಲ  ರಾಘವೇಂದ್ರರಾಯರು ತಮ್ಮ ಮಗ ಎಂ.ಆರ್. ಸತ್ಯನಾರಾಯಣ ಅವರ ವರ್ಗಾವಣೆಯ ಕಾರಣದಿಂದ  ಮೈಸೂರಿನಲ್ಲಿರಬೇಕಾಯಿತು. ತಮ್ಮ ಮತ್ತು ಮೈಸೂರಿನ ಹಳೆಯ ಸಂಬಂಧವನ್ನು ಪುನಃ ರೂಢಿಸಿಕೊಂಡ ರಾಘವೇಂದ್ರರಾಯರು ತಮ್ಮ ಹಳೆಯ, ಹಿರಿಯ ಸಾಹಿತ್ಯದ ಗೆಳೆಯರನ್ನು ಸೇರಿಕೊಂಡು ಗಮಕ ಕಲೆಯ ಅಭಿವೃದ್ಧಿಗೆ ಚಿಂತನೆ ನಡೆಸಿದರು. ಅಂತಹ ಹಿರಿಯರಲ್ಲಿ ವೆಂಕಟಾಚಲಶಾಸ್ತ್ರಿಗಳಲು, ವೆಂಕಟರಾಮಪ್ಪನವರು, ಪು.ತಿ.ನ., ಸುಜನ ಮುಂತಾದವರು ಪ್ರಮುಖರಾಗಿದ್ದರು. ಇವರೆಲ್ಲರ ಸಹಕಾರದಿಂದ ಮೈಸೂರಿನಲ್ಲಿ 1978ರಲ್ಲಿ ರಾಯರು ‘ಕಾವ್ಯರಂಜಿನಿ ಸಭಾ’ ಎಂಬ ಸಂಸ್ಥೆಯನ್ನು  ಸ್ಥಾಪಿಸಿದರು.

ಅನಂತರ ಬೆಂಗಳೂರಿಗೆ ಹಿಂದಿರುಗಿದ ರಾಯರು ನಾಡಿನ ಗಣ್ಯ ವ್ಯಕ್ತಿಗಳೂ ಬೆಂಗಳೂರಿನ ಮಾಜಿ ಮಹಾಪೌರರು, ಸಾಹಿತಿಗಳೂ ಆದ ದೇಶಿಹಳ್ಳಿ ಜಿ. ನಾರಾಯಣ ಅವರ ಒತ್ತಾಸೆಯಿಂಧ ‘ಗಮಕ’ ವಿಭಾಗವನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬೇರ್ಪಡಿಸಿ, “ಕರ್ನಾಟಕ ಗಮಕ ಕಲಾ ಪರಿಷತ್ತು” ಎಂಬ ಹೊಸ ಸಂಸ್ಥೆಯನ್ನು ಹುಟ್ಟು ಹಾಕಲು ಶ್ರಮಿಸಿದರು. ಈ ದಿಸೆಯಲ್ಲಿ ದುಡಿದ ಮತ್ತೊಬ್ಬ ಹಿರಿಯ ಸಾಹಿತಿಗಳು ಎಂ.ವಿ. ಸೀತಾರಾಮಯ್ಯನವರು. ಇಂತಹ ಅನೇಕ ಹಿರಿಯರ ಶ್ರಮದಿಂಧ 1982ರ ಗಾಂಧಿಜಯಂತಿಯಂದು, ‘ಕರ್ನಾಟಕ ಗಮಕ ಕಲಾ ಪರಿಷತ್ತು’ ಜನ್ಮ ತಾಳಿತು.

ರಾಘವೇಂದ್ರರಾಯರ ಆಸಕ್ತಿಯಿಂದಾಗಿ ಗಮಕ ಪ್ರಚಾರ ಗೋಷ್ಠಿ ಎಂಬ ಸಂಸ್ಥೆಯೂ ಜನ್ಮತಾಳಿತು. ಇದರೊಂದಿಗೆ ಬೆಂಗಳೂರಿನಲ್ಲಿ ತಮ್ಮ ಮನೆಯಲ್ಲೇ ಕಾವ್ಯಗಾಯನ ಕಲಾಮಂದಿರವನ್ನು ಪ್ರಾರಂಭಿಸಿ ನೂರಾರು ಶಿಷ್ಯರನ್ನು ಗಮಕಿಗಳನ್ನಾಗಿಸಿದ ಹಿರಿಮೆ ರಾಯರದು. ರಾಯರ ಕುಟುಂಬವೇ ಗಮಕಿಗಳ ಕುಟುಂಬವೆಂಬ ಹೆಸರು ಪಡೆಯುವಂತೆ ಅವರ ಮಕ್ಕಳನ್ನು ಸಹ ಈ ಕಲೆಯಲ್ಲಿ ತೊಡಗಿಸಿದರು. ರಾಘವೇಂದ್ರರಾಯರ ಮಕ್ಕಳಾದ ಎಂ.ಆರ್. ಸತ್ಯನಾರಾಯಣ ಅವರುಗಳಲ್ಲದೇ ರಾಯರ ಹಿರಿಯ ಸೊಸೆ ಕಮಲಾ ರಾಮಕೃಷ್ಣ ಹಾಗೂ ರಾಯರ ಅಳಿಯ ಪಿ.ಎ. ಗಿರಿಧರ ಅವರು ಸಹ ನಾಡಿನ ಉತ್ತಮ ಗಮಕಿಗಳಾಗಿ ಹೆಸರು ಮಾಡಿದ್ದಾರೆ.

ರಾಘವೇಂದ್ರ ರಾವ್ ಅವರು ಗಮಕ ಕ್ಷೇತ್ರಕ್ಕೆ  ನೀಡಿರುವ ಕೊಡುಗೆಯನ್ನು ಗಮನಿಸಿ, ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದವು. ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (1974),  ಗಮಕ ಕಲಾ ಪರಿಷತ್ತಿನ ತೃತೀಯ ಸಮ್ಮೇಳನದ ಅಧ್ಯಕ್ಷರಾಗಿ ಗಮಕ ರತ್ನಾಕರ ಬಿರುದು (1992),  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1994) ಹಾಗೂ ರಾಜ್ಯ ಸರ್ಕಾರದ ಪ್ರತಿಷ್ಠಿತ ಕನಕಪುರಂದರ ಪ್ರಶ್ತಿ (1996) ಪ್ರಮುಖವಾಗಿವೆ.

ಮುಂದಿನ  ಗಮಕಿಗಳಲ್ಲಿ ಅನೇಕರು, ರಾಯರ ನೇರ ಅಥವಾ ಪರೋಕ್ಷ ಶಿಷ್ಯ ಪರಂಪರೆಗೆ ಸೇರಿ, ಅವರ ಗಮಕ ಪರಂಪರೆಯನ್ನು ಬೆಳೆಸಿದ್ದಾರೆ.

ತುಂಬು ಜೀವನ ನಡೆಸಿ, ತಮ್ಮ 85ನೆಯ ವಯಸ್ಸಿನಲ್ಲಿ 1999ನೆಯ ನವೆಂಬರ್ 30ರಂದು ರಾಘವೇಂದ್ರರಾಯರು ಸ್ವರ್ಗಸ್ಥರಾದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಮಾಹಿತಿ ಕೃಪೆ: ಕಣಜ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸಂಪಾದಿತ ಕೃತಿಯಾದ  ‘ಕಲಾ ಚೇತನ’ ಕೃತಿಯಲ್ಲಿ  ಶ್ರೀ. ಎ.ವಿ. ಪ್ರಸನ್ನ ಅವರ ಬರಹ.

ಇವುಗಳೂ ನಿಮಗಿಷ್ಟವಾಗಬಹುದು

Karnataka State Awards

ಪ್ರಶಸ್ತಿ ಪುರಸ್ಕೃತರು

ಕರ್ನಾಟಕದ ವಿವಿಧ ಪ್ರಶಸ್ತಿಗಳ ಬಗೆಗಿನ ಲೇಖನಗಳು: ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | …

Leave a Reply

Your email address will not be published. Required fields are marked *