ಕೋಲಾಟ ಒಂದು ಗಂಡು ಕಲೆ, (ಹೆಣ್ಣು ಮಕ್ಕಳು ಕೋಲಾಡುವುದು ಅಪರೂಪ). ಹಾಡು ಮತ್ತು ಕುಣಿತವು ಬೆರೆತಿರುವಂತಹ ಕಲೆಯಾಗಿರುವುದು. ಗೋಕುಲದಲ್ಲಿ ಶ್ರೀ ಕೃಷ್ಣನ ಜನನವಾದಾಗ ಯಾದವರು ಕೋಲಾಡುವ ಮೂಲಕ ತಮ್ಮ ಸಂತೋಷವನ್ನು ವ್ತಕ್ತಪಡಿಸಿದುದು ಮತ್ತು ಗೋಪಿಕಾ ಸ್ತ್ರೀಯರು ಶ್ರೀ ಕೃಷ್ಣನೊಂದಿಗೆ ಬಣ್ಣದ ಕೋಲುಗಳಿಗೆ ಆಟವಾಡಿದುದು ಕೋಲಾಟದ ಪ್ರಾಚೀನವಾದ ಕಲೆಯನ್ನು ತಿಳಿಸುತ್ತದೆ.
ಕೋಲು ತರುವ ಮತ್ತ್ತು ಬಿಡುವ ಆಚರಣೆ
ಗ್ರಾಮದ ಹಬ್ಬಗಳಲ್ಲಿ ಮೊದಲು ಕೋಲು ತರುವ ಮತ್ತು ಹಬ್ಬದ ನಂತರ ಕೋಲು ಬಿಡುವ ಆಚರಣೆಗಳಿವೆ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ಆಚರಣೆ ಹೀಗಿದೆ. ನವರಾತ್ರಿ ಆರಂಭವಾಗುವ ಮೊದಲು ಬರುವ ಮೂಲಾ ನಕ್ಷತ್ರದ ದಿವಸ ಕೊಡಸಿನ ಗಿಡವನ್ನು ಪೂಜೆ ಮಾಡಿ ಎರಡು ಕೋಲುಗಳನ್ನು ಕಡಿಯುತ್ತಾರೆ. ಹೀಗೆ ಮೊದಲು ಕಡಿದ ಕೋಲುಗಳಿಗೆ ‘ಗುರುಕೋಲು’ ಎಂದು ಹೇಳುತ್ತಾರೆ. ದಶಮಿಯ ದಿವಸ ಕೋಲುಗಳಿಗೆ ಬಣ್ಣ ಹಚ್ಚುತ್ತಾರೆ. ಆ ದಿನ ದೇವಸ್ಥಾನದ ಮುಂದೆ ಕೋಲು ಪೂಜೆ ಮಾಡಿ ಕೋಲಾಟ ಆರಂಭಿಸುತ್ತಾರೆ. ಮಾರನೆಯ ದಿನದಿಂದ ಗ್ರಾಮದೇವತೆಗಳಿಂದ ಸ್ಥಳ ಮತ್ತು ‘ದೇವರ ಬನ’ಗಳಿಗೆ ಹೋಗಿ ಕೋಲು ಹುಯ್ಯುತ್ತಾರೆ. ನಂತರ ಗ್ರಾಮದ ಮುಖ್ಯಸ್ಥನ ಮನೆ ಮುಂದೆ ಕೋಲಾಟದ ಪ್ರದರ್ಶನ ನಡೆಯುತ್ತದೆ. ಇವರಿಗೆ ದವಸಧಾನ್ಯಗಳನ್ನು ನೀಡಲಾಗುತ್ತದೆ. ಹೀಗೆ ಸಂಗ್ರಹಿಸಿದಂತಹ ಹಣ, ಅಕ್ಕಿ, ಉಪ್ಪು, ಹುಳಿ, ಮೆಣಸಿನಕಾಯಿಯನ್ನ್ನು ಒಂದೆಡೆ ಇಟ್ಟಿದ್ದು ಕಾರ್ತಿಕ ಮಾಸ ಕಳೆದ ಎಳನೇ ದಿವಸಕ್ಕೆ ಬರುವ ಸಂತೆ ಸೃಷ್ಟಿ ಮುಗಿದ ನಂತರ ಒಳ್ಳೆ ದಿವಸ ನೋಡಿ ಸಂಗ್ರಹಿಸಿದ ದವಸ ಧಾನ್ಯಗಳಿಂದ ಊರೊಟ್ಟಿನ ಅಡುಗೆಯ ಜೊತೆಗೆ ಒಣಮೀನಿನ ಆಹಾರವೂ ತಯಾರಾಗುತ್ತದೆ. ಇದನ್ನು ದೇವತೆಗಳಿಗೆ ಎಡೆ ಮಾಡಿದ ನಂತರ, ಮಾಡಿದ ಅಡುಗೆಯನ್ನು ಸಾಮೂಹಿಕವಾಗಿ ಭೋಜನವನ್ನು ಮಾಡುತ್ತಾರೆ. ಆ ದಿನ ಬೆಳಗಿನ ಜಾವದ ತನಕ ಮತ್ತೊಂದು ಬಾರಿ ಎಲ್ಲರ ಮನೆ ಮುಂದೆಯೂ ಕೋಲಾಟದ ಪ್ರದರ್ಶನವು ನಡೆಯುತ್ತದೆ. ನಂತರ ಶರಾವತಿ ಅಣೆಯ ಹಿನ್ನೀರಿಗೆ ಕೋಲು ಬಿಟ್ಟು ಬರಲಾಗುತ್ತದೆ. ಮಲೆನಾಡಿನ ಭಾಗದಲ್ಲಿ ಶ್ರೀಗಂಧ ಕೊಡಸು, ಕಾರಿ, ಬಗಿನೆ, ಅರ್ಚಟಿ, ಗೊರಬಳೆ, ಹೊನ್ನೆ ಮರಗಳನ್ನು ಕೋಲು ಕಡಿಯಲು ಬಳಸಿಕೊಂಡರೆ ಬಯಲು ಸೀಮೆಯಲ್ಲಿ ಕಾರಿ, ಚಂಬಳಿಕೆ, ಕಗ್ಗಲಿ, ಹಾಲೆ, ಜಾಲಿ, ಅಂಕೋಲೆ, ಬ್ಯಾಟೆ, ಕಾಕಿ, ಗಟ್ಟಿ ಬಿದಿರು ಮುಂತಾದ ಮರಗಳಿಂದ ಕೋಲು ಕಡಿಯುತ್ತಾರೆ.
ವೇಷಭೂಷಣ-ವಾದ್ಯಗಳು
ಬಯಲು ಸೀಮೆಯಲ್ಲಿ ಬಿಳಿಯ ಆಂಗಿ, ಬಣ್ಣದ ಚಡ್ಡಿ, ತಲೆಗೆ ಮತ್ತು ನಡುವಿಗೆ ಬಣ್ಣದ ವಸ್ತ್ರ, ಕಾಲಿಗೆ ಗೆಜ್ಜೆಯನ್ನು ಹಾಕಿರುತ್ತಾರೆ. ಉತ್ತರ ಕರ್ನಾಟಕದಲ್ಲಾದರೆ ಬಿಗಿದು ಕಟ್ಟಿದ ಕಚ್ಚೆ, ತಲೆಗೆ ಟೋಪಿ, ನಡುವಿಗೆ ವಸ್ತ್ರ, ಕಾಲಿಗೆ ಗೆಜ್ಜೆ ಹಾಕಿರುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಕೋಲುಗಳ ಸಪ್ಪಳವೇ ಹಾಡಿಗೆ ಪೂರಕವಾದ ತಾಳವಾಗಿರುತ್ತದೆ. ಆದರೆ ಉತ್ತರ ಕರ್ನಾಟಕದಲ್ಲಿ ಮದ್ದಲೆ, ಡಪ್ಪು, ತಬಲಾ, ಢಕ್ಕೆ, ಕಂಚಿನ ತಾಳಗಳನ್ನು ಬಳಸುವುದುಂಟು.
ಕೋಲಾಟದ ವೈವಿಧ್ಯ
ಸುಮಾರು ಹತ್ತರಿಂದ ಹದಿನಾರು ಜನ ಕಲಾವಿದರು ಈ ಕೋಲಾಟದಲ್ಲಿ ಭಾಗವಹಿಸುವರು. ಹೆಜ್ಜೆ ಹಾಕುವ ಮತ್ತು ಅದನ್ನು ಬದಲಿಸುವ ವಿಧಾನವನ್ನು ಅನುಸರಿಸಿ ಹಾಗೂ ಒಂದೆಡೆ ಸೇರುವ,ಬೇರ್ಪಡುವ, ತಿರುಗಿನ ವಿನ್ಯಾಸವನ್ನು ಅನುಸರಿಸಿ ಕೋಲಾಟದ ವಿಧಗಳನ್ನು ಗಮನಿಸಬಹುದಾಗಿದೆ. ಒಂದೊಂದು ಹೆಜ್ಜೆಯಿಂದ ಆರಂಭವಾಗುವ ಕೋಲಾಟವು ಹೆಚ್ಚಾದಂತೆ ಮೂರೆಜ್ಜೆಯ ಪ್ರಮಾಣಕ್ಕೆ ಬಂದಿರುತ್ತದೆ.
ಕೋಲಾಟದ ವಿಧಗಳು
೧. ಸುತ್ಕೋಲು ೨. ದಾಟ್ಕೋಲು ೩. ತೂಗುಕೋಲು ೪. ಬಿಚ್ಚು ಕೋಲು ೫. ಸಾಲು ಕೋಲು ೬. ಒಂದಾಳ್ ಸುತ್ತು ೭. ಎರಡಾಳ್ ಸುತ್ತು ೮. ಮೂರಾಳ್ ಸುತ್ತು ೯. ಆಳು ಕಂಡು ಆಳು ೧೦. ಮಲ್ಕಿನ ಕೋಲು ೧೧. ಮುರವಯ್ಯನ ಕೋಲು ೧೨. ಐದು ಚಿಟಗೆನ ಕೋಲು ೧೩. ಎರಡಾಳು ಜಗ್ಗು ೧೪. ಗೀಜಗನ ಕೋಲು ೧೫. ಹುಲಿದನವಿನ ಕೋಲು ೧೬. ಗೀರ್ ಕಡ್ಡಿ ಕೋಲು ೧೭. ಒಂಟಿಕೋಲು ೧೮. ತೆಕ್ಕೋಲು ೧೯. ವಸ್ತ್ರ ಕೋಲು ೨೦. ರಂಗೋಲಿ ಕೋಲು ೨೧. ಧಾಳಂಧುಳಿ ೨೨. ಒನಿಕೆ ಆಟ ೨೪. ಚಕ್ರದಾಟ ೨೫. ಎಡಚಂಟಿಗೆ ೨೬. ಏಳು ಚುಟಿಗಿ ೨೭. ಚೌದಾ ಚುಟುಗಿ ೨೮. ಪಂಚವದನ ೨೯. ಝಲಾ ೩೦. ತಾಳಕುಟ್ಟಿಗೆ ೩೧. ತಿಪ್ಪರಿ ೩೨. ಒಂಟಿ ಕಡ್ಡಿ ೩೩. ಆರ್ಕಡ್ಡಿ ೩೪. ಕಾಳ್ಗಡ್ಡಿ ೩೫. ತಟ್ಕಡ್ಡಿ ೩೬. ಓನಾಟು ೩೭. ಏಳು ಚುಟುಕಿ ೩೮. ಒಂಬತ್ತು ಚುಟಕಿ ೩೯. ಮೇರಿ ಕೋಲು ೪೦. ಗೋಪಿನ ಕೋಲು ೪೧. ಚಿತ್ತಾರ ಗೊಂಬೆ ಕೋಲು ೪೨. ಚಂಡಾಡುವ ಕೋಲು ೪೩. ಉಯ್ಯಾಲೆ ಕೋಲು ೪೪. ದಂಡೆ ಕೋಲು ೪೫. ಸೋಬಾನೆ ಕೋಲು ೪೬. ಹರುಗೋಲು ೪೭. ಚಕ್ಕೆ ಕೋಲು ೪೮. ಅಲವಣಿ ಕೋಲು ೪೯. ಉದ್ರಿ ಕೋಲು ೫೦. ಚಿನ್ನಾಡಿ ಕೋಲು ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಕೋಲಾಟವು ನಂತರ ಎಲ್ಲರೂ ಸುತ್ತಲೂ ನಿಂತು ಮಧ್ಯೆ ಕೋಲುಗಳನ್ನಿಟ್ಟು ಕೈಮುಗಿದು, ಕೋಲಾಟ ಕಲಿಸಿದ ಗುರುವಿಗೆ ನಮಸ್ಕಾರ ಮಾಡಿ ಕೋಲನ್ನು ಮುಟ್ಟುತ್ತಾರೆ. ಕೋಲುಗಳ ಸಪ್ಪಳವು ನಿಧಾನಗತಿಯಲ್ಲಿ ಆರಂಭವಾಗುವುದು.
ಕೋಲಾಟದ ವಿವಿಧ ಗತಿಗಳು
ಒಬ್ಬನ ಕೋಲಿಗೆ ಮತ್ತೊಬ್ಬನ ಕೋಲನ್ನು ತಾಕಿಸುವ ಮೂಲಕ ಆರಂಭವಾಗುವ ಕೋಲಾಟ ಒಬ್ಬನಿಗೆ ಮತ್ತೊಬ್ಬ ಸುತ್ತು ಹೊಡೆಯುತ್ತಾ ಆಡುವುದು, ಗುಂಪಿನಲ್ಲಿಯೇ ಚದುರಿದಂತೆ ನಿಂತು ಹೊರಗಿನವರು ಒಳಗೂ, ಒಳಗಿನವನು ಹೊರಗೂ ಕೋಲನ್ನು ಕೊಡುವುದು, ಹೀಗೆ ಆಡುತ್ತಾ ಕುಳಿತು ಕೋಲು ಕೊಡುವುದು, ಎರಡು ಗುಂಪು ಎದುರುಬದುರು ನಿಂತು ಕೋಲು ಕೊಡುವುದು, ಇತ್ಯಾದಿಯಾಗಿ ವಿವಿಧ ಗತಿಯಲ್ಲಿ ಕೋಲಾಟವು ನಡೆಯುತ್ತದೆ. ಇವುಗಳಲ್ಲಿ ಮುಖ್ಯವಾದ ಕೆಲವು ಬಗೆಗಳನ್ನು ಗಮನಿಸಬಹುದಾಗಿದೆ.
ಕೊರವಂಜಿ ಕೋಲಾಟ
ಮಂಡ್ಯ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುವಂತಹ ಕಲೆಯಾಗಿದೆ. ಮೈಸೂರು, ಬೆಂಗಳೂರು, ಹಾಸನ, ತುಮಕೂರು, ಚಿತ್ರದುರ್ಗದ ಕಡೆಗಳಲ್ಲಿ ಕಾಣಬಹುದಾಗಿದೆ. ಹಾಡು ಮತ್ತು ಕುಣಿತದೊಂದಿಗೆ ಸಂಭಾಷಣೆಯು ಈ ಕಲೆಯಲ್ಲಿ ಸೇರಿಕೊಂಡಿರುವುದು. ಕೃಷ್ಣ ಕಥೆಯಲ್ಲಿ ಸತ್ಯಭಾಮ ಸ್ವರ್ಗದಲ್ಲಿದ್ದ ಪಾರಿಜಾತ ಗಿಡವನ್ನು ಭೂಲೋಕಕ್ಕೆ ತರಿಸಿದ ಚಂಡಿ ಕಥೆ ಜನಜನಿತವಾಗಿದೆ. ಚಂಡಿ ಎನಿಸಿದ ಸತ್ಯಭಾಮಳನ್ನು ಮುಖ್ಯ ಪಾತ್ರವಾಗಿಟ್ಟುಕೊಂಡು ಅವಳಿಗಾಗಿ ಕೃಷ್ಣ ಬೇಸ್ತು ಬೀಳುವುದನ್ನು ತಮ್ಮದೇ ಆದ ರೀತಿಯಲ್ಲಿ ನಿರೂಪಿಸುವ ಕ್ರಮವು ಈ ಕಲೆಯಲ್ಲಿರುವುದು. ಹಳ್ಳಿಗಳಲ್ಲಿ ಕಣಿ ಹೇಳುವವರು ಗಂಡಸಾದರೆ ಕೊರಮ ಎಂತಲೂ, ಹೆಂಗಸಾದರೆ ಕೊರಮಿ ಎಂತಲೂ ಕರೆಯುತ್ತಾರೆ. ಕೊರವಂಜಿಗೆ ಕರಿಪಟ್ಟಿಯ ರವಿಕೆ, ಮೊಣಕಾಲಿನವರಿಗೆ ಕಂಬಿಸೀರೆ, ‘ಬಾಳೆಕಾಯಿ’ ಎನ್ನುವ ಸೊಂಟದ ಗಂಟಿಗೆ ಒಂದು ಪುಡಿಚೀಲ, ಹಣೆಗೆ ಅಗಲವಾದ ಕುಂಕುಮ, ದವಡೆಯಲ್ಲಿ ಎಲೆ ಅಡಿಕೆ ತಲೆಯ ಎಡಭಾಗಕ್ಕೆ ಏಡಿಗಂಟು, ಕಂಕುಳಲ್ಲಿ ಅಥವಾ ತಲೆಯ ಮೇಲೆ ಬೇವಿನ ಸೊಪ್ಪು ಹೆಡಿಗೆ, ಕಾಲಿಗೆ ಗೆಜ್ಜೆ , ಬಲಗೈಯಲ್ಲಿ ಕಣಿ ಕೋಲು ಹಿಡಿದು ಕಣಿ ಹೇಳುವ ಕೊರಮಿಯನ್ನು ಸೃಷ್ಟಿಸುತ್ತಾರೆ. ಕೊರಮ ಸಾಮಾನ್ಯವಾಗಿ ಒಂದು ನಿಲುವಂಗಿ, ಸೊಂಟಕ್ಕೆ ಕಟ್ಟಿದ ವಸ್ತ್ರ ಏರುಗಟ್ಟಿದ ಪಂಚೆ, ಹಣೆಯಲ್ಲಿ ಗೀರುನಾಮ, ತಲೆಗೆ ಸುತ್ತಿದ ಒಂದು ವಸ್ತ್ರ, ಕಾಲಿಗೆ ಗೆಜ್ಜೆ , ಕೈಯಲ್ಲಿ ಒಂದು ಬಿದಿರಿನ ದೊಣ್ಣೆ ಹಿಡಿದಿರುತ್ತಾನೆ. ಸಾಮಾನ್ಯವಾಗಿ ಕೋಲಾಟದ ವಿವಿಧ ಆಟಗಳು ಮುಗಿದ ಮೇಲೆಯೇ ಕೊರವಂಜಿ ಕೋಲು ಕಟ್ಟುವುದು. ಅದರ ಮುಖ್ಯ ಕಥೆ ಹೀಗೆ ಸಾಗುತ್ತದೆ. ಪ್ರಾರಂಭದಲ್ಲಿ ಎರಡು ಸಾಲಿನಲ್ಲಿ ಕುಳಿತ ಕೋಲಾಟಗಾರರು ‘ತಾಳಗಟುಕ’ ಹಾಕುತ್ತಾರೆ. ಆಟದ ಓಣಿಯಲ್ಲಿ ಕೊರವಂಜಿ ಕಣಿ ಹೇಳುವವಳಂತೆ ಬರುತ್ತಾಳೆ. ಇವಳ ಕಣಿ ಹಾಡಿನ ರೂಪಕ್ಕೆ ತಿರುಗುತ್ತದೆ. ಕಣಿಯನ್ನು ಕೇಳಿ ಎದುರಾದ ಕೊರಮ ಇವಳನ್ನು ಕುರಿತು ತನಗೆ ಮತ್ತು ಊರಿಗೆ ಕಣಿ ಹೇಳಲು ಕೇಳುತ್ತಾನೆ. ಹಾಗೇ ಇವಳ ಪರಿಚಯವು ಆಗುತ್ತದೆ. ಆವೂರು ಈವೂರು ತಿರುಗಿ ಮೈಸೂರಿನ ಮಹಿಷಾಸುರನನ್ನು ನೋಡಿ ಬಂದವಳ ಮಾತಿಗೆ, ವೈಯ್ಯಾರಕ್ಕೆ, ಬೆಡಗಿಗೆ ಮನಸೋತು ಕೊರಮ ಇವಳ ಕೈ ಹಿಡಿಯಲು ಬಯಸುತ್ತಾನೆ. ಇವರಿಬ್ಬರ ಸಂಭಾಷಣೆಯು ಹಾಡಿನ ರೂಪದಲ್ಲಿ ಸಾಗುತ್ತದೆ. ಕೊರವಂಜಿ ಕೊರಮನ ಮಾತಿಗೆ ಒಪ್ಪಿ ತನ್ನ ಅಪ್ಪನನ್ನು ನಂಬಿಸಲು ಮುಂದಾಗುತ್ತಾಳೆ. ಬುಡುಬುಡಿಕೆ ವೇಷಧಾರಿಯಾಗಿ ಅಪ್ಪನ ಮುಂದೆ ನಿಂತು….”ನಿನ್ನ ಮನೆ ಉದ್ಧಾರವಾಗಬೇಕಾದರೆ, ನಿನ್ನ ಮಗಳನ್ನು ಇದೇ ಊರಿನ ಕೊರಮನಿಗೆ ಕೊಟ್ಟು ಲಗ್ನ ಮಾಡು” ಎಂದು ಹೇಳುತ್ತಾನೆ. ನಂತರ ಇವರ ವಿವಾಹವು ನಡೆಯುವುದು. ಕೊರವಂಜಿ ಆಟದಲ್ಲಿ ಹಾಡು, ಕಥನಗೀತೆ, ಒಡಬು, ಹೊಗಳಿಕೆ ಬೈಗುಳ, ವ್ಯಂಗ್ಯ ಒಳಗೊಂಡಿರುವುದು.
ಜಡೆ ಕೋಲಾಟ
ನಿರ್ದಿಷ್ಟ ಅಂತರದಲ್ಲಿ ಎರಡು ಮರದ ಗಳುಗಳನ್ನು ನೆಟ್ಟು ಅವುಗಳ ತುದಿಗೆ ಅಡ್ಡಗಳುವೊಂದನ್ನು ಕಟ್ಟುತ್ತಾರೆ. ನೆಲದಿಂದ ಸುಮಾರು ಹನ್ನೆರಡು ಅಡಿ ಎತ್ತರವಿರುವ ಈ ಅಡ್ಡ ಗಳುವಿಗೆ ಕಲಾವಿದರ ಸಂಖ್ಯೆಯ ಆಧಾರದ ಮೇಲೆ ಹನ್ನೆರಡು ಅಥವಾ ಹದಿನಾರು ಹಗ್ಗಗಳನ್ನು ಕಟ್ಟಿ ಇಳಿಬಿಡಲಾಗುತ್ತದೆ. ಈ ಹಗ್ಗಗಳನ್ನು ಸೇರಿಸಿದ ಸೂತ್ರದ ರೀತಿಯ ಒಂಟಿ ಹಗ್ಗ ಅಡ್ಡಮರದ ನಡು ಭಾಗದಲ್ಲಿ ಇರುತ್ತದೆ. ಕೆಳಗೆ ಇಳಿಬಿದ್ದ ಹಗ್ಗಗಳನ್ನು ನಡುವಿಗೆ ಕಟ್ಟಿಕೊಂಡ ಕಲಾವಿದರು ಕೋಲು ಹಾಕುತ್ತಾ ಒಬ್ಬರನೊಬ್ಬರು ದಾಟುವ ಮೂಲಕ ಕಲಾತ್ಮಕವಾಗಿ ಗಂಟು ಹಾಕುತ್ತಾರೆ. ಜಡೆಯಂತೆ ಹೆಣೆದುಕೊಳ್ಳುವ ಹಗ್ಗವನ್ನು ಮತ್ತದೇ ರೀತಿಯಲ್ಲಿ ಬಿಡಿಸುತ್ತಾರೆ. ಜಡೆ ಹೆಣೆಯುವಾಗ ಚಾಮುಂಡಿ ಮೇಲೂ, ಜಡೆ ಬಿಚ್ಚುವಾಗ ಗೌರಿಯ ಮೇಲೂ ಹಾಡನ್ನು ಹಾಡುವರು.
ಉದಾಹರಣೆಗೆ: ಜಡೆ ಹಾಕುವ ಹಾಡು
ತಂದನ್ನು ತಾನು ತಂದೇ ನಾನು |ತಾ|
ತಂದನ್ನು ತಾನು ತಂದೇ ನಾನು ||
ಹುಟ್ಟಿದುತ್ತರದೇಶ | ಬೆಳದಿದ್ದು ಮಲೆನಾಡು|
ಬಂದು ಸೇರ್ಯಾಳೆ| ಮೈಸೂರ ||ತಂದ||
ಬಂದು ಸೇರ್ಯಾಳೆ ಮೈಸೂರು ||ಚಾಮುಂಡಿ||
ತೊಟ್ಟಾವ್ಳೆ ನೋಡು ಹುಲೀ ಚರ್ಮ ||ತಂದ||
ತೊಟ್ಟಾವ್ಳೆ ನೋಡು ಹುಲಿ ಚರ್ಮ ||ಚಾಮುಂಡಿ||
ಮಾಯಾದ ಬೂದಿ ಮಡುವಲ್ಲಿ ||ತಂದ||
ಮಾಯಾದ ಬೂದಿ ಮಡುಲಲ್ಲಿ ಇಟ್ಟುಕೊಂಡು ||
ಮೈಷಾಸುರನ ಕಣ್ಕಿತ್ತು ||ತಂದ||
ಮೈಷಾಸುರನ ಕಣ್ಕಿತ್ತು ||ಚಾಮುಂಡಿ||
ಕೋಲಾಟದ ಪದಗಳು
ಪುರಾಣ, ಇತಿಹಾಸ, ದೈವ, ಸಾಮಾಜಿಕ ವಿಡಂಬನೆ, ಹೆಣ್ಣು-ಗಂಡಿನ ಪ್ರೇಮ, ಆಧ್ಯಾತ್ಮ ತತ್ತ್ವ, ಕುಟುಂಬ ಕಲ್ಯಾಣ, ಸಾಕ್ಷರತೆಗೆ ಸಂಬಂಧಿಸಿದಂತೆ ಹಾಡನ್ನು ಹಾಡುವರು.
ಉದಾಹರಣೆಗೆ: ಕೋಲು ಕಡಿಯುವ ಹಬ್ಬ
ಕೋಲು ಕೋಲೆ ಕೋಲನ್ನ ಕೋಲೆ
ಕೋಲ್ಹಬ್ದ ಬಂತು ಕೋಲು ಕಡಿಯಬೇಕು
ಕೋಲು ಕಡಿಯೊ ಹಬ್ಬ
ಯಾವ ಕೋಲು ಮಗನೆ
ದಶಮಿಯ ದಿನಕೆ ||ಕೋಲನ್ನ ಕೋಲೆ||
ಉದಾಹರಣೆಗೆ: ಮೊದಲಿಗೆ ನೆನೆದೇವು
ಮೊದಲಿಗೆ ನೆನದೇವು ಗಜಮುಖ ಲಿಂಗನ
ಸಿದ್ಧ ಮುಖ ಶಿವಲಿಂಗ ಬೆನಕನ
ಕುಂತೋರು ಹಿರಿಯರೆ, ನಿಂತೋರು ಕಿರಿಯರೆ
ಕೋಲು ತಪ್ಪಿದರೆ ನಗಬೇಡಿರಣ್ಣ ||ಮೊದಲಿಗೆ||
ಇಲ್ಲಿ ಕೋಲಾಟದವರು ಎರಡು ಗುಂಪು ಮಾಡಿಕೊಂಡು ಒಂದು ಗುಂಪಿನವರು ಹೆಣ್ಣಿನ ಪರವಾಗಿಯೂ ಇನ್ನೊಂದು ಗುಂಪಿನವರು ಗಂಡಿನ ಪರವಾಗಿಯೂ ಹಾಡುತ್ತಾರೆ.
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.