ಕೆ.ಎಲ್.ನಾಗರಾಜಶಾಸ್ತ್ರಿ (೧೮.೦೪.೧೯೨೬): ಐವತ್ತು ವರ್ಷಗಳಿಂದಲೂ ರಂಗಭೂಮಿಯ ಕಲಾಸೇವೆಯಲ್ಲಿ ನಿರತರಾಗಿದ್ದು ಹಲವಾರು ವೃತ್ತಿ ರಂಗಭೂಮಿಯ ಸಂಸ್ಥೆಗಳಿಗೆ ನಾಟಕ ರಚನೆ, ವಾದ್ಯ ಸಂಗೀತದ ನೆರವು ನೀಡುತ್ತಾ ಬಂದಿರುವ ನಾಗರಾಜ ಶಾಸ್ತ್ರಿಗಳು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಲ್ಲಿ. ತಂದೆ ಲಕ್ಷ್ಮಿ ನರಸಿಂಹ ಶಾಸ್ತ್ರಿಗಳು, ತಾಯಿ ಗೌರಮ್ಮ. ತಾಯಿಯಿಂದಲೇ ಸಂಗೀತದ ಪ್ರಥಮ ಪಾಠ. ಬೆಂಗಳೂರಿನ ಚಾಮರಾಜೇಂದ್ರ ಮಹಾಪಾಠ ಶಾಲೆಯಲ್ಲಿ ಆರು ವರ್ಷ ಕಾಲ ಸಂಸ್ಕೃತಾಧ್ಯಯನ ಮತ್ತು ವೇದಾಧ್ಯಯನ ಶಿಕ್ಷಣ. ಜೊತೆಗೆ ಪಿಟೀಲು ಮತ್ತು ಕೊಳಲು ವಾದನದ ಕಲಿಕೆ. ತಾವರೆಕೆರೆಯ ಮೃದಂಗ ವಿದ್ವಾನ್ ಸುಬ್ಬಯ್ಯ ಭಾಗವತರಿಂದ ಸಂಗೀತ ಪಾಠ. ಬೆಂಗಳೂರಿನ ಚಾಮರಾಜಪೇಟೆಯಲ್ಲಿದ್ದ ಸರಸವಾಣಿ ಆರ್‌ಕೆಸ್ಟ್ರಾದ ಮೂಲಕ ಸಾರ್ವಜನಿಕ ಕಚೇರಿಗೆ ಪಾದಾರ್ಪಣೆ.
ಹಾಡುಗಳು ಮತ್ತು ಸಂಭಾಷಣೆಗಳಿಂದ ಕೂಡಿದ ಹಲವಾರು ನಾಟಕಗಳ ರಚನೆ ಮತ್ತು ಪ್ರದರ್ಶನ. ಮಂಡ್ಯದ ಬಳಿಯ ಗುತ್ತಲಿನಲ್ಲಿ ’ವಶಿಷ್ಠ ವಿಜಯ – ವಿಶ್ವಾಮಿತ್ರ ಪರಾಜಯ’ ಎಂಬ ನಾಟಕ ಪ್ರದರ್ಶನದಿಂದ ಬಂದ ಖ್ಯಾತಿ. ಹಲವಾರು ನಾಟಕ ಸಂಸ್ಥೆಗಳ ಕೋರಿಕೆಯಂತೆ ಹಾಡುಗಳು ಮತ್ತು ಸಂಭಾಷಣೆಗಳನ್ನೊಳಗೊಂಡ ನಾಟಕಗಳ ರಚನೆ. ಶ್ರೀನಿವಾಸ ಕಲ್ಯಾಣ, ಅಹಿರಾವಣ – ಮಹಿರಾವಣ, ರಾಜಾ ಸತ್ಯವ್ರತ, ಐರಾವತ ಅಥವಾ ಗಜ ಗೌರಿವ್ರತ, ದಿವ್ಯಭಾರತ, ಜೀವರತ್ನಾಪಹರಣ ನಾಟಕಗಳನ್ನು ಮಂಡ್ಯ ಜಿಲ್ಲಾದ್ಯಂತ ಪ್ರದರ್ಶಿಸಿ ಗಳಿಸಿದ ಜನ ಮೆಚ್ಚುಗೆ.
ಪೌರಾಣಿಕ, ಸಾಮಾಜಿಕ ನಾಟಕಗಳ ಶಿಕ್ಷಕರಾಗಿ, ರಂಗ ವೇದಿಕೆಯಲ್ಲಿ ಪ್ರಾತ್ಯಕ್ಷಿಕೆ, ಪ್ರದರ್ಶನ. ಪಕ್ಕವಾದ್ಯಗಾರರಾಗಿ ಕೊಳಲು, ಪಿಟೀಲು ವಾದನದಿಂದ ಬಹುಬೇಡಿಕೆಯ ವ್ಯಕ್ತಿ. ಮಂಡ್ಯ ಜಿಲ್ಲೆಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಂಗೀತ ಗೋಷ್ಠಿಯ ಅಧ್ಯಕ್ಷತೆ. ಕರ್ನಾಟಕ ಮುಸ್ಲಿಂ ಕನ್ನಡ ಕಲಾಕೇಂದ್ರದಿಂದ ಸಂಗೀತ ವಿದ್ವಾನ್ ಪ್ರಶಸ್ತಿ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನ. ಮಂಡ್ಯ ಜಿಲ್ಲಾ ರಾಜ್ಯೋತ್ಸವ ಸನ್ಮಾನ, ಕನಕ-ಪುರಂದರ- ತ್ಯಾಗರಾಜರ ಆರಾಧನಾ ಆರ್ಟ್ಸ್ ಸಂಸ್ಥೆಯಿಂದ ಸನ್ಮಾನ, ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ವಸುಂಧರ ಪರ್‌ಫಾರ‍್ಮಿಂಗ್ ಆರ್ಟ್ಸ್ ಸಂಸ್ಥೆಯಿಂದ ಸನ್ಮಾನ. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದುವು ಸಂದಿದ್ದರೂ ಸರಕಾರದ ಸಹಾಯಕ್ಕೆ ಕಾದಿರುವ ವೃದ್ಧ ಕಲಾವಿದರು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.