Wednesday , 12 June 2024
ಕೆಳದಿಯ ಚೆನ್ನಮ್ಮ

ಕೆಳದಿಯ ಚೆನ್ನಮ್ಮ

ಕೆಳದಿಯ ಚನ್ನಮ್ಮ ಕ್ರಿ.ಶ.೧೬೭೨ ರಿಂದ ಕ್ರಿ.ಶ.೧೬೯೭ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ ವೀರ ಮಹಿಳೆ. ರಾಣಿ ಚೆನ್ನಮ್ಮ ಛತ್ರಪತಿ ಶಿವಾಜಿಯ ಎರಡನೆಯ ಮಗನಾದ ರಾಜರಾಮನಿಗೆ ನೀಡಿದ ಆಶ್ರಯ ಮತ್ತು ಅದರ ಪರಿಣಾಮವಾಗಿ ಯುದ್ಧಕ್ಕೆ ಬಂದ ಔರಂಗಜೇಬನ ಸೈನ್ಯವನ್ನು ಸೋಲಿಸಿದ್ದು ಅವಳ ಆಳ್ವಿಕೆಯ ಅತ್ಯಂತ ಮಹತ್ತ್ವದ ಸಂಗತಿಗಳು. ತನ್ನ ಸ್ಥಿರ ಸಂಕಲ್ಪ, ದೂರದೃಷ್ಟಿ ಹಾಗೂ ಕಲಿತನಗಳಿಂದ ಇಕ್ಕೇರಿ ಸಂಸ್ಥಾನವನ್ನು ವಿಪತ್ತಿನಿಂದ ಪಾರು ಮಾಡಿದಳೆಂದು ಚೆನ್ನಮ್ಮ ಪ್ರಸಿದ್ಧಳಾಗಿದ್ದಾಳೆ.

ಆಳ್ವಿಕೆ

ಚೆನ್ನಮ್ಮನು ಕೋಟಿಪುರದ ಸಿದ್ದಪ್ಪಶೆಟ್ಟರ ಮಗಳು ಹಾಗು ಒಂದನೆಯ ಸೋಮಶೇಖರನಾಯಕನ (1664-1679) ಮಡದಿ. ಲಿಂಗಣ್ಣಕವಿಯ ಕೆಳದಿನೃಪವಿಜಯ ಎಂಬ ಗ್ರಂಥ ಹಾಗೂ ಇತರ ಆಧಾರಗಳಿಂದ ಚೆನ್ನಮ್ಮನ ಆಳ್ವಿಕೆಯ ಮುಖ್ಯ ಘಟನೆಗಳು ತಿಳಿದು ಬರುತ್ತವೆ. ಕೆಳದಿ (ಈಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಇದೆ)ಯ ರಾಜ ಸೋಮಶೇಖರನಾಯಕ ಪ್ರಾರಂಭದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೂ ದುರ್ಜನರ ಸಹವಾಸದಿಂದ ದುಶ್ಚಟಗಳಿಗೆ ಬಲಿಯಾಗಿ ಮತಿವಿಕಲನಾಗಿ ಕೊನೆಗೆ 1671ರಲ್ಲಿ ಕೊಲೆಯಾದ. ಅವನಿಗೆ ಮಕ್ಕಳಿರಲಿಲ್ಲ. ಕೆಳದಿ ಸಂಸ್ಥಾನದಲ್ಲಿ ಅರಾಜಕತೆಯುಂಟಾಯಿತು. ನಾಯಕ ಮನೆತನದ ವಿರೋಧಿಗಳು ತಮಗೆ ಬೇಕಾದವನೊಬ್ಬನನ್ನು ನಾಯಕಪಟ್ಟಕ್ಕೆ ತರಲು ಹವಣಿಸಿದರು. ಅಂಥ ದುರ್ಭರ ಸನ್ನಿವೇಶದಲ್ಲಿ ಚೆನ್ನಮ್ಮ ಆಡಳಿತವನ್ನು ವಹಿಸಿಕೊಂಡು ಅಸಾಧಾರಣ ಜಾಣ್ಮೆಯಿಂದ ಸಂಸ್ಥಾನದಲ್ಲಿ ಶಾಂತಿ ಸ್ಥಾಪಿಸಿದಳು. ಕೆಳದಿಯಲ್ಲುಂಟಾಗಿದ್ದ ದುಃಸ್ಥಿತಿಯನ್ನು ಉಪಯೋಗಿಸಿಕೊಂಡು ಬಿಜಾಪುರದ ಸುಲ್ತಾನ ಮತ್ತು ಇತರ ಪಾಳೆಯಗಾರರು ಕೆಳದಿಯನ್ನು ಕಬಳಿಸಲು ಹೊಂಚು ಹಾಕಿದ್ದರು. ವೈರಿಗಳ ಸಂಚಿನಿಂದಾಗಿ ಚೆನ್ನಮ್ಮ ಒಮ್ಮೆ ರಾಜಧಾನಿಯಿಂದ ತಲೆತಪ್ಪಿಸಿಕೊಳ್ಳಬೇಕಾಯಿತು. ಅವಳು ತನ್ನ ನೆಚ್ಚಿನ ಸಚಿವನಾದ ಗುರು ಬಸಪ್ಪದೇವ ಮತ್ತು ದಂಡನಾಯಕರಾದ ಕೃಷ್ಣಪ್ಪಯ್ಯ ಹಾಗೂ ತಿಮ್ಮರಸಯ್ಯ ಇವರ ಸಹಾಯದಿಂದ ವೈರಿಗಳನ್ನು ಸದೆಬಡಿದು ಸಂಸ್ಥಾನವನ್ನು ವಿಪತ್ತಿನಿಂದ ರಕ್ಷಿಸಿದಳು. ಮೈಸೂರು ಮತ್ತು ಕೆಳದಿಯ ಮಧ್ಯೆ ರಾಜ್ಯ ವಿಸ್ತರಣೆಗಾಗಿ ನಡೆಯುತ್ತಿದ್ದ ಯುದ್ಧಗಳು ರಾಣಿ ಚೆನ್ನಮ್ಮಾಜಿಯ ಕಾಲದಲ್ಲೂ ಮುಂದುವರಿದುವು. ಚೆನ್ನಮ್ಮ ಮೈಸೂರಿನ ಒಡೆಯರ ರಾಜ್ಯವಿಸ್ತರಣ ಕಾರ್ಯವನ್ನು ಎದುರಿಸಿದಳು. ಆದರೂ ಪರಾಕ್ರಮಿಯಾದ ಚಿಕ್ಕದೇವರಾಜ ಒಡೆಯರ್ 1695ರ ವೇಳೆಗೆ ಕೆಳದಿಯ ಬಲವನ್ನು ಸೋಲಿಸಿ ಅರಕಲಗೂಡು, ಹಾಸನ ಪ್ರದೇಶಗಳನ್ನು ವಶಪಡಿಸಿಕೊಂಡು ಚಿಕ್ಕಮಗಳೂರು ಜಿಲ್ಲೆಯ ಸಕ್ಕರೆಪಟ್ಟಣದವರೆಗೂ ರಾಜ್ಯವನ್ನು ವಿಸ್ತರಿಸಿದ.

ಔರಂಗಜೇಬನ ಸೈನ್ಯವನ್ನು ಸೋಲಿಸಿದ್ದು

ಛತ್ರಪತಿ ಶಿವಾಜಿ‍ಯ ನಿಧನದ ನಂತರ ಮರಾಠಾ ರಾಜ್ಯವನ್ನು ಕೈವಶ ಮಾಡಿಕೊಳ್ಳುವ ಉದ್ದೇಶದಿಂದ ಔರಂಗಜೇಬ‍ನು ಸಂಭಾಜಿ‍ಯನ್ನು ೧೬೮೯ ಮಾರ್ಚ ೧೧ರಂದು ಕೊಲ್ಲಿಸಿದನು.ಶಿವಾಜಿಯ ಎರಡನೆಯ ಮಗ ರಾಜಾರಾಮ‍ನು ಸಕಲಬಲ ಸಂಪನ್ನನೂ ಪ್ರಬಲ ಪರಾಕ್ರಮಿಯೂ ಆದ ಮೊಗಲ್ ಬಾದಶಹ ಔರಂಗ್‍ಜೇಬನ ಸೇನೆಯ ಎದುರು ಹಿಮ್ಮಟ್ಟಿ ಉತ್ತರ ಭಾರತದಲ್ಲಿಯೂ ಆಶ್ರಯ ದೊರೆಯದೆ ಬಂಧನವನ್ನು ತಪ್ಪಿಸಿಕೊಳ್ಳಲು ದಕ್ಷಿಣಕ್ಕೆ ಓಡಿದನು. ಮೊಗಲ್ ಸೈನ್ಯಗಳು ಅವನ್ನನ್ನು ಬೆನ್ನಟ್ಟಿದುವು. ಬೆನ್ನೆಟ್ಟಿದ ಮೊಗಲ ಸೈನ್ಯವನ್ನು ತಪ್ಪಿಸುತ್ತ ರಾಜಾರಾಮನು ಕೆಳದಿಗೆ ಬಂದು ಚೆನ್ನಮ್ಮನ ಆಶ್ರಯ ಕೋರಿದನು. ಮೊಗಲರ ಅಜೇಯ ಬಲದ ಅರಿವಿದ್ದರೂ ಆಶ್ರಿತ ರಕ್ಷಣೆಯ ಕರ್ತವ್ಯದಿಂದ ರಾಣಿ ವಿಮುಖಳಾಗಲಿಲ್ಲ. ಅವಳು ರಾಜಾರಾಮನನ್ನು ಗೌರವಾದರಗಳಿಂದಲೂ ರಾಜೋಚಿತ ಮರ್ಯಾದೆಯಿಂದಲೂ ಬರಮಾಡಿಕೊಂಡು ಅವನಿಗೆ ಅಭಯಹಸ್ತ ನೀಡಿದಳು. ಇದರಿಂದ ಕುಪಿತನಾದ ಔರಂಗ್‍ಜೇಬ್ ಕೆಳದಿಯ ವಿರುದ್ಧ ಪಡೆಯೊಂದನ್ನು ಕಳುಹಿಸಿದ. ಚೆನ್ನಮ್ಮನು ರಾಜಾರಾಮನನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿಕೊಟ್ಟಳು. ಔರಂಗಜೇಬನ ಎರಡನೆಯ ಮಗ ಆಝಮ್ ಶಹಾನ ನೇತೃತ್ವದ ವಿಶಾಲ ಸೈನ್ಯ ಕೆಳದಿಯನ್ನು ಕೈವಶ ಮಾಡಿಕೊಳ್ಳಲು ಬಂದಿತು.

1690ರಲ್ಲಿ ಕೆಳದಿ ಮತ್ತು ಮೊಗಲ್ ಸೈನ್ಯಗಳ ನಡುವೆ ಯುದ್ಧ ನಡೆಯಿತು. ಕದನದಲ್ಲಿ ಮೊಗಲ್ ಸೇನೆ ಪರಾಭವಗೊಂಡು ಪಲಾಯನ ಮಾಡಿತು. ಮೊಗಲರ ಸೋಲಿನಿಂದ ರಾಣಿ ಚೆನ್ನಮ್ಮಾಜಿಯ ಕೀರ್ತಿ ಇಡೀ ಭಾರತದಲ್ಲಿ ಹಬ್ಬಿತು. ಈ ಸಂಗತಿಯನ್ನು ಕುರಿತ ಜನಪದ ಗೀತೆಗಳು ಇಂದಿಗೂ ಕನ್ನಡನಾಡಿನಲ್ಲಿ ಪ್ರಚಾರದಲ್ಲಿವೆ. ಚನ್ನಮ್ಮ ಮೊಗಲರ ಈ ಪ್ರಚಂಡ ಸೈನ್ಯವನ್ನು ಸೋಲಿಸಿ ಅವರು ರಣರಂಗದಿಂದ ಕಾಲ್ತೆಗೆಯುವಂತೆ ಮಾಡಿದಳು. ಕಣಿವೆಗಳಲ್ಲಿ ವೈರಿಸೈನ್ಯವನ್ನು ಸಿಲುಕಿಸಿ ಔರಂಗಜೇಬನು ಒಪ್ಪಂದಕ್ಕೆ ಬರುವಂತೆ ಮಾಡಿದಳು.

ದತ್ತು, ಮರಣ

ಚೆನ್ನಮ್ಮನಿಗೆ ಸಂತತಿ ಇರಲಿಲ್ಲವಾದ್ದರಿಂದ ಬಸಪ್ಪ ಎಂಬ ಕುಮಾರನನ್ನು ದತ್ತುವಾಗಿ ಸ್ವೀಕರಿಸಿದಳು. ಅವನಿಗೆ ಯುದ್ಧ ಮತ್ತು ಆಡಳಿತದಲ್ಲಿ ಶಿಕ್ಷಣ ಕೊಟ್ಟು 1696ರಲ್ಲಿ ಕೆಳದಿ ಬಸವಭೂಪಾಲನೆಂದು ಹೆಸರಿಟ್ಟು ಆಡಳಿತ ವಹಿಸಿಕೊಟ್ಟಳು. ಎರಡು ವರ್ಷಗಳ ಅನಂತರ 1698ರಲ್ಲಿ ಈಕೆ ಮರಣಹೊಂದಿದಳೆಂದು ತಿಳಿದುಬರುತ್ತದೆ.

ದಾನ ಧರ್ಮಗಳು

ದಕ್ಷ ಆಡಳಿತಗಾರಳಾದ ಚೆನ್ನಮ್ಮ ಮತವಿಚಾರಗಳಲ್ಲಿ ಉದಾರ ನೀತಿ ಹೊಂದಿದ್ದಳು. ಜಂಗಮರಿಗೆ ಮಠಗಳನ್ನು ಕಟ್ಟಿಸಿಕೊಟ್ಟಳು. ತನ್ನ ಪತಿಯ ಹೆಸರಿನಲ್ಲಿ ಅನೇಕ ಅಗ್ರಹಾರಗಳನ್ನು ನಿರ್ಮಿಸಿದಳು. ಒಂದು ಅಗ್ರಹಾರವನ್ನು ತನ್ನ ಸ್ವಂತ ಹೆಸರಿನಿಂದ ಚೆನ್ನಮ್ಮಾಂಬಪುರ ಎಂಬುದಾಗಿ ಕರೆದಳು. ಕೆಳದಿಯ ವೀರಭದ್ರ ದೇವಾಲಯದ ಮುಂದಿನ ಧ್ವಜಸ್ತಂಭವನ್ನು ನೆಡಿಸಿದವಳು ಈಕೆಯೇ. ಮೂಕಾಂಬ ದೇವಾಲಯಕ್ಕೆ ಈಕೆ ವಿಶೇಷ ದಾನ ನೀಡಿದಳು. ತನ್ನ ರಾಜ್ಯದಲ್ಲಿ ಚರ್ಚುಗಳನ್ನು ನಿರ್ಮಿಸಲು ಪೋರ್ಚುಗೀಸರಿಗೆ ಅನುಮತಿ ನೀಡಿದಳು.

ಚನ್ನಮ್ಮ ಅನೇಕ ದಾನ ಧರ್ಮಗಳನ್ನು ಮಾಡಿದ್ದಾಳೆ. ಮಠಗಳನ್ನು, ದೇವಾಲಯಗಳನ್ನು ಸ್ಥಾಪಿಸಿದ್ದಾಳೆ. ಅವುಗಳಲ್ಲಿ ದತ್ತಪೀಠದಲ್ಲಿರುವ ಚಂದ್ರದ್ರೋಣ ಪರ್ವತದ ದೇವಾಲಯವೂ ಒಂದಾಗಿದೆ.

https://kn.wikipedia.org/wiki/ಕೆಳದಿಯ_ಚೆನ್ನಮ್ಮ

ಇವುಗಳೂ ನಿಮಗಿಷ್ಟವಾಗಬಹುದು

Shivakumara Swamiji

ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮಿಗಳು

ಕರ್ನಾಟಕ ರತ್ನ ಡಾ|| ಶ್ರೀ. ಶಿವಕುಮಾರ ಸ್ವಾಮಿಗಳು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು. ಇವರು ತ್ರಿವಿಧ (ಅನ್ನ, ಅಕ್ಷರ, …

Leave a Reply

Your email address will not be published. Required fields are marked *