ಕುರುಬನ ಜಾಣ್ಮೆ

ಚಂದ್ರನಗರದ ಅರಸ ಚಂದ್ರಸೇನನ ಏಕೈಕ ಪುತ್ರಿ ಸುಮತಿ ಎಂಬ ಹುಡುಗಿ ಇದ್ದಳು. ಇವಳು ತುಂಬ ಸುಂದರಳು, ಬುದ್ಧಿವಂತಳು ಆಗಿದ್ದಳು. ತನ್ನ ರೂಪ ಹಾಗೂ ಬುದ್ಧಿವಂತಿಕೆಯ ಬಗ್ಗೆ ಅವಳಿಗೆ ತುಂಬ ಹೆಮ್ಮೆಯಿತ್ತು. ಪ್ರೌಢಾವಸ್ಥೆಗೆ ಬಂದ ಮೇಲೆ ಅರಸ ಅವಳ ವಿವಾಹ ಮಾಡಲು ಬಯಸಿದ. ಆದರೆ ರಾಜಕುಮಾರಿ, ‘ಅಪ್ಪಾ ನನಗಿಂತ ಬುದ್ಧಿವಂತನಾಗಿರುವ ಯುವಕನ ಜೊತೆ ಮಾತ್ರ ನಾನು ಮದುವೆಯಾಗುವೆ’ ಎಂದು ಹೇಳಿದಳು.

ಆದರೆ, ಅಂತಹ ಯುವಕನನ್ನು ಹುಡುಕುವುದು ಹೇಗೆ ಎಂದು ಅರಸನಿಗೆ ಚಿಂತೆಯಾಯಿತು. ‘ಅದನ್ನು ನನಗೆ ಬಿಡಿ’ ಎಂದು ಹೇಳಿದ ಸುಮತಿ ಆಳುಗಳ ಅವರ ಸಹಾಯದಿಂದ ಅರಮನೆಯ ಒಂದು ದೊಡ್ಡ ಮರಕ್ಕೆ ತೂಗುವ ಮಂಚವನ್ನು ಕಟ್ಟಿಸಿದಳು.

[sociallocker]ಮರುದಿನ ಮುಂಜಾನೆ ಅರಸ ಮಗಳ ಆದೇಶದಂತೆ ತನ್ನ ರಾಜ್ಯದಲ್ಲಿ ಡಂಗುರ ಸಾರಿಸಿದ, ‘ಯಾರು ರಾಜಕುಮಾರಿ ಹಾಕುವ ಷರತ್ತನ್ನು ಗೆಲ್ಲುವರೋ ಅವರು ರಾಜಕುಮಾರಿಯನ್ನು ವಿವಾಹವಾಗಬಹುದು’ ಎಂದು. ರಾಜಕುಮಾರಿಯ ರೂಪ ಹಾಗೂ ಬುದ್ಧಿವಂತಿಕೆಯ ಖ್ಯಾತಿ ದೂರದವರೆಗೆ ಹರಡಿತ್ತು. ಹೀಗಾಗಿ ರಾಜಕುಮಾರಿಯನ್ನು ವರಿಸುವುದಕ್ಕಾಗಿ ದೂರದ ಊರುಗಳಿಂದ ರಾಜಕುಮಾರರು ಚಂದ್ರನಗರಕ್ಕೆ ಬಂದರು.

ರಾಜಕುಮಾರಿ ಮರಕ್ಕೆ ಕಟ್ಟಿದ ತೂಗುಮಂಚದಿಂದ ನನ್ನನ್ನು ಯಾರೂ ಕೆಳಗೆ ಇಳಿಸುವರೋ ಆ ಯುವಕನನ್ನು ತಾನು ಮದುವೆಯಾಗುವುದಾಗಿ ಅವಳು ಷರತ್ತು ವಿಧಿಸಿದಳು. ಬಂದ ರಾಜಕುಮಾರರೆಲ್ಲ ನಾನಾ ರೀತಿಯಿಂದ ಪ್ರಯತ್ನಿಸಿದರು. ಆದರೆ, ಯಾರಿಗೂ ಅವಳನ್ನು ತೂಗುಮಂಚದಿಂದ ಕೆಳಗಿಳಿಸಲು ಸಾಧ್ಯವಾಗಲಿಲ್ಲ.
ಅವರೆಲ್ಲ ನಿರಾಶರಾಗಿ ಹೊರಟುಹೋದರು. ಹೀಗೆ ಒಂದೆರಡು ದಿನಗಳು ಕಳೆದುಹೋದವು. ಅರಸನಿಗೆ ತುಂಬ ಚಿಂತೆಯಾಗತೊಡಗಿತು.

ಮಾರನೆಯ ದಿನ ಸಂಜೆ ಕುರಿ ಕಾಯುವವನೊಬ್ಬ ಚಂದ್ರನಗರಕ್ಕೆ ಬಂದ. ರಾಜಕುಮಾರಿಯ ಮದುವೆಯ ಸುದ್ದಿ ತಿಳಿದು ಅವನೂ ಅರಮನೆಯತ್ತ ಹೆಜ್ಜೆ ಹಾಕಿದ. ಅವನ ಜೊತೆಯಲ್ಲಿ ಒಂದು ಕುರಿ ಹಾಗೂ ಒಂದು ನಾಯಿ ಇದ್ದವು. ಅವನು ಕುರಿ ಹಾಗೂ ನಾಯಿಯನ್ನು ರಾಜಕುಮಾರಿ ಕುಳಿತ ಮರದ ಬಳಿಯಲ್ಲಿಯೇ ಇದ್ದ ಇನ್ನೊಂದು ಚಿಕ್ಕ ಮರಕ್ಕೆ ಸ್ವಲ್ಪ ಅಂತರದಲ್ಲಿ ಕಟ್ಟಿದ, ಆಮೇಲೆ ತನ್ನ ಜೋಳಿಗೆಯಿಂದ ಸ್ವಲ್ಪ ಮಾಂಸವನ್ನು ತೆಗೆದು ಕುರಿಯ ಮುಂದೆ ಹಾಕಿದನು. ಆಮೇಲೆ ಸ್ವಲ್ಪ ಹುಲ್ಲನ್ನು ತೆಗೆದು ನಾಯಿಯ ಮುಂದೆ ಹಾಕಿದನು. ರಾಜಕುಮಾರಿ ತುಂಬ ಕುತೂಹಲದಿಂದ ಅದನ್ನು ನೋಡುತ್ತಿದ್ದಳು. ರಾಜಕುಮಾರಿಗೆ ಅವನ ಮೂರ್ಖತನವನ್ನು ಕಂಡು ನಗೆ ಬಂತು.

ಅವಳು, ‘ಎಲೋ ಮೂರ್ಖ, ಕುರಿ ಮಾಂಸವನ್ನು, ನಾಯಿ ಹುಲ್ಲನ್ನು ತಿನ್ನುತ್ತವೆಯೇ ಎಂದು ಕೇಳಿದಳು. ಆದರೆ, ಈ ಕುರಿ ಕಾಯುವವನು ಅವಳು ಹೇಳಿದ್ದನ್ನು ಕೇಳಿಸಿಕೊಂಡಿಲ್ಲ ಎಂಬಂತೆ ವರ್ತಿಸಿದನು. ಆಗ ರಾಜಕುಮಾರಿ ಇನಷ್ಟು ಜೋರಾಗಿ ‘ಹುಲ್ಲನ್ನು ಕುರಿಯ ಎದುರಿಗೂ, ಮಾಂಸವನ್ನು ನಾಯಿಯ ಎದುರಿಗೂ ಹಾಕು’ ಎಂದಳು.

ಆಗಲೂ ಆ ಕುರುಬನು ಅದು ತನಗೆ ಏನು ಕೇಳಿಸಿಯೇ ಇಲ್ಲ ಎಂಬಂತೆ ವರ್ತಿಸಿದನು. ಆಗ ರಾಜಕುಮಾರಿಗೆ ತುಂಬ ಕೋಪ ಬಂತು. ‘ನಿನಗೇನು ಕಿವುಡೇ? ನಾನು ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೇ? ಎಂದಳು. ಆಗಲೂ ಅವನು ಮೌನವಾಗಿಯೇ ಇದ್ದನು. ಆಗ ರಾಜಕುಮಾರಿಗೆ ತಡೆದುಕೊಳ್ಳಲಾಗಲಿಲ್ಲ. ಅವಳು ತೂಗುಮಂಚದಿಂದ ಕೆಳಗಿಳಿದು ಅವನ ಬಳಿಗೆ ಬಂದು ಅವನ ಕಿವಿಯ ಬಳಿ ‘ನಾನು ಅಷ್ಟೊತ್ತಿನಿಂದ ಕಿರುಚುತ್ತಿದ್ದೇನೆ.’ ನಿನಗೆ ಕೇಳಿಸುತ್ತಿಲ್ಲವೇ?’ ಎಂದು ಜೋರಾಗಿ ಹೇಳಿದಳು. ಆಗ ಅವನು ಮುಗುಳ್ನಗುತ್ತ ‘ಕೇಳಿಸುತ್ತಿದೆ’ ಎಂದ.

ರಾಜಕುಮಾರಿ ದಿಗ್ಭ್ರಾಂತಳಾಗಿ ಅವನತ್ತ ನೋಡುತ್ತಾ ನಿಂತುಕೊಂಡಳು. ತಟ್ಟನೆ ಅವಳಿಗೆ ತನ್ನ ತಪ್ಪಿನ ಅರಿವಾಯ್ತು. ಮುಟ್ಟದೆ ಕುರಿ ಕಾಯುವವನು ಅವಳನ್ನು ತೂಗುಮಂಚದಿಂದ ಕೆಳಗೆ ಇಳಿಸಿದ್ದನು. ತನ್ನ ಷರತ್ತಿನಂತೆ ರಾಜಕುಮಾರಿ ಅವನ ಕೊರಳಿಗೆ ಮಾಲೆ ಹಾಕಬೇಕಾಯಿತು.[/sociallocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 3.23 ( 29 votes)

ಇವುಗಳೂ ನಿಮಗಿಷ್ಟವಾಗಬಹುದು

king

ಆತ್ಮ ಚೌರ್ಯ

ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ ಅವನಿಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ …

Leave a Reply

Your email address will not be published. Required fields are marked *