Wednesday , 22 May 2024

ಕವಿರಾಜ ಮಾರ್ಗದ ಪೀಠಿಕೆ

ಕವಿರಾಜಮಾರ್ಗ

೧. ಪೀಠಿಕೆ

೨. ಪ್ರಥಮ-ಪರಿಚ್ಛೇದಂ – ದೋಷ್ಯಾ – ದೋಷಾನುವರ್ಣನ – ನಿರ್ಣಯಂ

೩. ದ್ವಿತೀಯ ಪರಿಚ್ಛೇದಂ – ಶಬ್ದಾಲಂಕಾರ – ವರ್ಣನ – ನಿರ್ಣಯಂ

೪. ತೃತೀಯ ಪರಿಚ್ಛೇದಂ – ಅರ್ಥಾಲಂಕಾರ ಪ್ರಕರಣಂ

೫. ಪದ್ಯಗಳ ಸೂಚಿ

೧. ಕವಿರಾಜಮಾರ್ಗದ ಹಸ್ತಪ್ರತಿಗಳು, ಮುದ್ರಿತ ಆವೃತ್ತಿಗಳು ಮತ್ತು ಅಧ್ಯಯನ ಗ್ರಂಥಗಳು :

ಆಗಸ್ಟ್ ೧೮೯೭ ರಲ್ಲಿ ಕೆ. ಬಿ. ಪಾಠಕರು ಮೂರು ಹಸ್ತಪ್ರತಿಗಳ ಆಧಾರದಿಂದ ಕವಿರಾಜಮಾರ್ಗವನ್ನು ಮೊತ್ತಮೊದಲಿಗೆ ಸಂಪಾದಿಸಿ ಮುದ್ರಣಕ್ಕೆ ಕೊಟ್ಟರು. ಗ್ರಂಥವು ೧೮೯೮ ರಲ್ಲಿ ಬೆಂಗಳೂರು ಗೌರ‍್ನಮೆಂಟ್ ಸೆಂಟ್ರಲ್ ಪ್ರೆಸ್‌ನಲ್ಲಿ ಮುದ್ರಿತವಾಗಿ ‘ಬಿಬ್ಲಿ ಯೋಥಿಕಾ ಕರ್ಣಾಟಕ’ ಎಂಬ ಗ್ರಂಥಮಾಲೆಯಲ್ಲಿ ಐದನೆಯದಾಗಿ ಬಿ. ಲೂಯಿಸ್ ರೈಸ್ ಅವರ ಮೇಲ್ವಿಚಾರಣೆಯಲ್ಲಿ ಪ್ರಕಟವಾಯಿತು. ಈಗ ಈ ಮುದ್ರಿತ ಗ್ರಂಥವೂ ದುರ್ಮಿಳವಾಗಿದೆ. ಕನ್ನಡ ಲಿಪಿಜ್ಞಾನವಿಲ್ಲದವರಿಗೂ ಅನುಕೂಲಿಸಲೆಂದು ಇಲ್ಲಿ ಗ್ರಂಥದ ಮೂಲವನ್ನು ಕನ್ನಡ ಲಿಪಿಯಲ್ಲಷ್ಟೇ ಅಲ್ಲ; ರೋಮನ್ ಲಿಪಿಯಲ್ಲಿಯೂ ಯಥೋಚಿತ ಅಕ್ಷರ ಚಿಹ್ನೆಗಳ ಸಮೇತ ಮುದ್ರಿಸಲಾಗಿದೆ. ಸಂಪಾದಕರ ೨೧ ಪುಟಗಳ ಪೀಠಿಕೆ ಇಂಗ್ಲಿಷಿನಲ್ಲಿದೆ. ಹಸ್ತಪ್ರತಿಗಳನ್ನು ಕುರಿತು ವಿವರಣೆ ಕೇವಲ ಕಡೆಯ ಒಂದು ಪುಟದಲ್ಲಿದೆ; ಅದರ ಅನುವಾದವನ್ನು ಕೆಳಗೆ ಬರೆದಿದೆ-

“ಈ ಆವೃತ್ತಿಯನ್ನು ಕೆಳಗಿನ ಮೂರು ಹಸ್ತಪ್ರತಿಗಳ ಆಧಾರದ ಮೇಲಿಂದ ಸಿದ್ಧಪಡಿಸಲಾಗಿದೆ-

೧) “ಂ”-ಮೂಲದ ತಾಳೆಗರಿಯ ಪ್ರತಿಲಿಪಿ. ಇದು ಪ್ರಥಮ ಹಾಗು ದ್ವಿತೀಯ ಪರಿಚ್ಛೇದಗಳನ್ನು ಪೂರ್ಣವಾಗಿಯೂ ತೃತೀಯ ಪರಿಚ್ಛೇದದ ೨೨೪ ಪದ್ಯಗಳ ಭಾಗವನ್ನೂ ಒಳಗೊಂಡಿದೆ. ಅದು ಅಸಮಗ್ರವೂ ಅಶುದ್ಧವೂ ಆಗಿದೆ. ಮೂಲ ತಾಳೆ ಗ್ರಂಥದ ಅನೇಕ ಭಾಗಗಳನ್ನು ಹುಳು ತಿಂದಿರುವುದರಿಂದ ಹಲವೆಡೆಗಳಲ್ಲಿ ಗ್ರಂಥಪಾತವಾಗಿದೆ. ಅದು ಕ್ವಚಿತ್ತಾಗಿ ಱ ಕಾರವನ್ನು ಬಳಸುತ್ತದೆ; ಪದ್ಯಗಳಿಗೆ ಸಂಖ್ಯೆ ಹಾಕಿಲ್ಲ.

೨) “ಃ”-ಮೂಲದ ತಾಳೆಗರಿಯ ಪ್ರತಿಲಿಪಿ. ಇದು ಪೂರ್ಣವಿದೆ, ಆದರೆ ಅಶುದ್ಧ. ಇದು ಒಮ್ಮೆಯೂ ಱ ಕಾರವನ್ನು ಬಳಸಿಲ್ಲ; ಆದರೆ ಇಲ್ಲಿ ಂಗಿಂತ ಗ್ರಂಥಲೋಪ ಕಡಿಮೆ. ದುರ್ದೈವದಿಂದ ಂಯ ತಪ್ಪುಗಳೇ ಃಯ ತಪ್ಪುಗಳೂ ಆಗಿವೆ. ಈ ಂ ಮತ್ತು ಃಗಳ ಮೂಲಪ್ರತಿಗಳನ್ನು ‘ಕರ್ನಾಟಕ ಕಾವ್ಯಮಂಜರಿ’ ಸಂಪಾದಕರಿಂದ ಎರವು ಪಡೆದು ಪ್ರಕೃತ ಆವೃತ್ತಿಗಾಗಿ ಉಪಯೋಗಿಸಿಕೊಂಡಿದೆ.

೩) “ಅ”-ಮದ್ರಾಸ್ ಗೌರ್ನಮೆಂಟ್ ಓರಿಯಂಟಲ್ ಲೈಬ್ರರಿಯಲ್ಲಿರುವ ತಾಳೆಯೋಲೆ ಹಸ್ತಪ್ರತಿಯ ಒಂದು ಪ್ರತಿಲಿಪಿ. ಇದು ನಿಶ್ಚಿತವಾಗಿಯೂ ಂ ಮತ್ತು ಃ ಗಳಿಗಿಂತ ಉತ್ತಮವಾಗಿದೆ, ಆದರೆ ಅಪೂರ್ಣ. ಅದು ಮೊದಲ ಎರಡು ಪರಿಚ್ಛೇದಗಳನ್ನೂ ಮೂರನೆಯದರಲ್ಲಿ ಕೇವಲ ೧೯೩ ಪದ್ಯಗಳನ್ನೂ ಒಳಗೊಂಡಿದೆ. ಕಡೆಯ ೯೩ ಪದ್ಯಗಳು ತುಂಬಾ ಏರುಪೇರುಗಳಿಗೀಡಾಗಿವೆ. ಅಯಲ್ಲಿ ಎರಡು ಹೆಚ್ಚಿನ ಪದ್ಯಗಳಿಗೆ-ಒಂದು ಸಂಸ್ಕೃತ ಉಪಸರ್ಗಗಳನ್ನು ಕುರಿತುದು, ಇನ್ನೊಂದು ‘ಮೂ(ವೂ)ಲೋಪಮೆ’ಯ ಉದಾಹರಣೆಯಾಗಿರುವುದು. ಆದರೆ ಅವು ಅಶುದ್ಧವೂ ಂ ಮತ್ತು ಃ ಗಳಲ್ಲಿ ಅನುಪಲಬ್ಧವೂ ಅದಕಾರಣ ಅವನ್ನು ಈ ಆವೃತ್ತಿಯ ಮೂಲದಲ್ಲಿ ನಾನು ಕೈಬಿಟ್ಟಿದ್ದೇನೆ. ಗ್ರಂಥದಲ್ಲಿ ಎಲ್ಲಕ್ಕೂ ಹೆಚ್ಚು ಅಶುದ್ಧವಾದ ಭಾಗವೆಂದರೆ ದುಷ್ಕರ-ಕಾವ್ಯಗಳ ವಿಚಾರ- ಎಂದರೆ ಎರಡನೆಯ ಅಧ್ಯಾಯದ ೧೧೦-೧೫೦ ಶ್ಲೋಕಗಳು. ಇವನ್ನು ರೋಮನ್ ಮೂಲ ಪಾಠದಲ್ಲಿ ಸೇರಿಸಿಲ್ಲ. ಮಿಕ್ಕ ಗ್ರಂಥ ಭಾಗಗಳು ಸಾಧಾರಣವಾಗಿ ಸುರಕ್ಷಿತವಾಗಿವೆಯೆನ್ನಬಹುದು; ಆದರೆ ಅಲ್ಲಿಯೂ ಒಮ್ಮೊಮ್ಮೆ ಅಶುದ್ಧ ಮತ್ತು ಸಂಶಯಾತ್ಮಕ ಪದ್ಯಗಳು ಕಾಣಬರುತ್ತವೆ. ಇದಕ್ಕೂ ಹೆಚ್ಚು ತೃಪ್ತಿಕರವಾದ ಕವಿರಾಜಮಾರ್ಗದ ಆವೃತ್ತಿ ಬರಲು ನಾವು ಇನ್ನೂ ಉತ್ತಮ ಹಸ್ತಪ್ರತಿ ಸಾಮಗ್ರಿಗಳು ಉಪಲಬ್ದವಾಗುವ ಕಾಲವನ್ನೇ ಕಾಯಬೇಕಾಗಿದೆ.”

ಇದು ಎಂಬತ್ತು ವರ್ಷಗಳ ಹಿಂದಿನ ಹಾರೈಕೆ; ಇಂದಿಗೂ ಅದು ಹಾರೈಕೆಯಾಗಿಯೇ ಉಳಿದಿರುವುದು ನಾಡುನುಡಿಗಳ ದುರದೃಷ್ಟವೇ ಸರಿ.

ಮುಂದೆ ಮದ್ರಾಸ್ ಯೂನಿವರ್ಸಿಟಿ ಓರಿಯಂಟಲ್ ರಿಸರ್ಚ್ ಇನ್‌ಸ್ವಿಟ್ಯೂಟಿನಿಂದಲೇ ೧೯೩೦ರಲ್ಲಿ ಕವಿರಾಜಮಾರ್ಗದ ಎರಡನೆಯ ಆವೃತ್ತಿ ಪ್ರಕಟಿತವಾಯಿತು. ಇದರ ಸಂಪಾದಕರು ಎ. ವೆಂಕಟರಾವ್ ಮತ್ತು ಪಂಡಿತ ಎಚ್. ಶೇಷ ಅಯ್ಯಂಗಾರ್ ಅವರು. ಇವರು ಎಪ್ರಿಲ್ ೧೯೨೯ ರಲ್ಲಿ ಸಿದ್ಧಪಡಿಸಿದ ಪೀಠಿಕೆಯಲ್ಲಿ ಹಸ್ತಪ್ರತಿಗಳ ವಿಚಾರವಾಗಿ ಯಾವ ಹೆಚ್ಚಿನ ವಿವರಣೆಯನ್ನೂ ಒದಗಿಸಿಲ್ಲ. ಅವರು ಹೇಳುವದೆಲ್ಲ ಇಷ್ಟೆ-

“ಈ ಗ್ರಂಥವನ್ನು ಶೋಧಿಸಿ ಪರಿಸ್ಕರಿಸುವುದರಲ್ಲಿ, ಈ ಮೊದಲೇ ಮುದ್ರಿತವಾಗಿದ್ದ ಕವಿರಾಜಮಾರ್ಗದ ಪ್ರತಿಯೂ, ಮದರಾಸು ಪ್ರಾಚ್ಯ ಕೋಶಾಲಯದಲ್ಲಿರುವ ತಾಳಪತ್ರ ಪ್ರತಿಯೂ, ಮೈಸೂರು ಲೈಬ್ರರಿಯಲ್ಲಿಯ ಮತ್ತು ಬೊಮ್ಮರಸ ಪಂಡಿತರು ಕಳುಹಿಸಿದ ಪ್ರತಿಗಳೂ ನಮಗೆ ಸಹಾಯಕಗಳಾಗಿರುತ್ತವೆ.”

ಆದರೆ ಈ ಸಂಪಾದಕರು ‘ಪರಿಶಿಷ್ಟ’ ರೂಪವಾಗಿ ಮೈಸೂರು ಓರಿಯಂಟಲ್ ಲೈಬ್ರರಿಯ ಅ (ನಂಬರು ೧೨೫) ಮತ್ತು ಆ (ನಂಬರು ೧೧೦) ಎರಡೂ ಹಸ್ತಪ್ರತಿ ಗಳಲ್ಲಿರುವ ಭಿನ್ನಪಾಠಗಳನ್ನು ಒದಗಿಸಿ ಉಪಕಾರಮಾಡಿದ್ದಾರೆ. ಪಾಠಕರು ಬಿಟ್ಟಿದ್ದ ಎರಡು ಪದ್ಯಗಳು ಇಲ್ಲಿಯ ಮೂಲದಲ್ಲಿ ಸೇರ್ಪಡೆಯಾಗಿವೆ.

ಬಳಿಕ ೧೯೬೮ ರಲ್ಲಿ ಸುದೀರ್ಘ ಪೀಠಿಕೆ, ಟಿಪ್ಪಣಿಗಳೊಂದಿಗೆ ಮೂರನೆಯ ಕವಿರಾಜಮಾರ್ಗ-ಸಂಸ್ಕರಣವನ್ನು ಹೊರತಂದ ಪ್ರೊ. ಎಂ. ವಿ. ಸೀತಾರಾಮಯ್ಯ ಅವರದು. ಅವರು ಕೂಡ ಪೀಠಿಕೆಯಲ್ಲಿ ಹೇಳುವ ಅಂಶ ಕಡಿಮೆಯೇ-

“ಪಾಠ ಪರಿಷ್ಕರಣ ವಿಚಾರದಲ್ಲಿ ಹೇಳಬೇಕಾದದ್ದು ಹೆಚ್ಚಿನದೇನೂ ಇಲ್ಲ. ಈ ಸಂಬಂಧದಲ್ಲಿ, ಪಾಠಾಂತರಗಳ ಅನುಬಂಧದಲ್ಲಿ ನಾಲ್ಕು ಮಾತು ಬರೆದಿದ್ದೇನೆ. ಪರಿಷ್ಕರಣ ಕಾರ್ಯ ಎಷ್ಟು ಶಾಸ್ತ್ರೀಯವಾಗಿ ಸಾಗಬೇಕೋ ಅಷ್ಟರಮಟ್ಟಿಗೆ ಸಾಗಿಲ್ಲ ಎಂಬುದರ ಪೂರ್ಣವಾದ ಅರಿವು ನನಗಿದೆ. ಅದಕ್ಕೆ ಕಾರಣ, ಹೊಸ ಹಸ್ತಪ್ರತಿಗಳು ದೊರಕದಿದ್ದುದು; ಅವುಗಳನ್ನು ದೊರಕಿಸಿಕೊಳ್ಳಲು ಅಗತ್ಯವಾದಷ್ಟು ಪ್ರಯತ್ನವನ್ನು ಮಾಡಲಿಲ್ಲ, ಗ್ರಂಥವನ್ನು ಸಾಧ್ಯವಾದಷ್ಟು ಬೇಗ ಹೊರಕ್ಕೆ ತರಬೇಕು ಎಂಬ ಆತುರದಿಂದಾಗಿ. ಪ್ರತಿಗಳನ್ನುಳ್ಳ ಮಹನೀಯರೂ ಸಂಸ್ಥೆಗಳೂ ಔದಾರ್ಯದಿಂದ ತಾವಾಗಿ ಮುಂದೆ ಬಂದು ಅವುಗಳ ಪ್ರಯೋಜನವನ್ನು ಸಂಪಾದಕನಿಗೆ ದೊರಕಿಸಿಕೊಡುವ ಕೃಪೆ ಮಾಡಬೇಕೆಂದು ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ.”

ಗ್ರಂಥದ ಶೀರ್ಷಿಕೆಯಲ್ಲಿ “ಶ್ರೀವಿಜಯ ಕೃತ” ಎಂದು ಹಸ್ತಪ್ರತಿಗಳ ಆಧಾರವಿಲ್ಲದಿದ್ದರೂ ಸೇರಿಸಿರುವುದು ಇಲ್ಲಿಯ ವಿಶೇಷ. ನಾವೆಲ್ಲ ಬಯಸಿದರೂ ಹಾರೈಸಿದರೂ ಹೊಸ ಶುದ್ಧ ಹಸ್ತಪ್ರತಿಗಳು ಲಭ್ಯವಾಗುವದು ದೈವಯತ್ನಕ್ಕೆ ಬಿಟ್ಟ ವಿಷಯ.

ವಿದ್ವಾಂಸರಿಗೆ ಶೋಭಿಸುವ ವಿನಯದಿಂದ ಅವರು ಪಾಠ-ಪರಿಷ್ಕರಣವನ್ನು ಶಾಸ್ತ್ರೀಯವಾಗಿ ಸಾಗಿಸಲಾಗಲಿಲ್ಲವೆಂದಿದ್ದರೂ, ಅವರು ಅಪಾರ ಪರಿಶ್ರಮವಹಿಸಿ ಒದಗಿರುವ ೬ನೆಯ ಅನುಬಂಧ-“ಮುಖ್ಯ ಪಾಠಂತರಗಳು” ಎಂಬುದು-ತಾವು ಸ್ವೀಕರಿಸಿದ ಪಾಠ, ಅದಕ್ಕಿರುವ ಆಧಾರ ಮತ್ತು ಅದಲ್ಲದ ಬೇರೆ ಪಾಠಾಂತರಗಳನ್ನು ಸಾಕಷ್ಟು ವ್ಯವಸ್ಥಿತವಾಗಿಯೇ ಪಟ್ಟಿಮಾಡಿ ಕೊಡುತ್ತದೆ. ಅದಕ್ಕಿಂತ ಹೆಚ್ಚಾಗಿ ಬಿ. ಎಂ. ಶ್ರೀ ಅವರು ಸೂಚಿಸಿದ ಪಾಠಾಂತರಗಳನ್ನು ಅದು ಒಳಗೊಂಡಿದೆ. ಮೇಲಾಗಿ ಪ್ರೊ. ಎಂ. ವಿ. ಸೀತಾರಾಮಯ್ಯನವರೇ ಊಹಿಸಿರುವ ಸೂಚಿತ ಪಾಠಗಳನ್ನೂ ನಿರ್ದೇಶಿಸಿದೆ.

ಎಲ್ಲಕ್ಕೂ ಕಡೆಗೆ ಅವರು ಬರೆದಿರುವ ವಿಶೇಷ ಟಿಪ್ಪಣಿಯಲ್ಲಿ ಇನ್ನೂ ಕೆಲವು ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಅವುಗಳ ಸಾರಾಂಶವಿಷ್ಟು-

೧. ಮದ್ರಾಸು ಮುದ್ರಣದ ಸಂಪಾದಕರು ಕೆಲವೆಡೆಗಳಲ್ಲಿ ಸೂಚಿಸಿರುವ ತಿದ್ದುಪಾಟುಗಳು ಸಮಂಜಸವಾಗಿವೆ; ಇನ್ನು ಹಲವೆಡೆಗಳಲ್ಲಿ ಅವರು ಪಾಠಕರ ಮುದ್ರಣದ ಇ ಪಾಠವನ್ನು ಅನುಸರಿಸದೆ ಅನ್ಯ ಪಾಠಗಳನ್ನು ಸ್ವೀಕರಿಸಿರುವುದು ಅಷ್ಟು ಸಮಂಜಸವಾಗಿ ಕಾಣುವುದಿಲ್ಲ.

೨. ಇದರಲ್ಲಿ ಇ ಪ್ರತಿಯ ಪಾಠಗಳನ್ನೂ ಬೊಮ್ಮರಸ ಪಂಡಿತರು ಕೊಟ್ಟ ಪ್ರತಿಗಳ ಪಾಠಗಳನ್ನೂ ಸೂಚಿಸಿಲ್ಲ. ಹೀಗೆ ಮಾಡಲು ಕಾರಣವೇನೆಂಬುದನ್ನು ತಿಳಿಸಿಲ್ಲ.

೩. ಅ ಪ್ರತಿಯು “ಶ್ರೀಮತೇ ರಾಮಾನುಜಾಯನಮಃ” ಎಂದೂ ಆ ಪ್ರತಿಯು “ಶ್ರೀಮದ್ವೇದವ್ಯಾಸಾಯನಮಃ” ಎಂದೂ ಆರಂಭವಾಗುತ್ತವೆ. ಆ ಪ್ರತಿಯ ಮಧ್ಯೆ ಎರಡನೆಯ ಪರಿಚ್ಛೇದದ ಕಡೆಯಲ್ಲಿ ‘ಶ್ರೀಮಧ್ವೇಶಾಯನಮಃ’ ಎಂದೂ ಇದೆ. ಶ್ರೀ ರಾಮಾನುಜರ ಕಾಲ ಕ್ರಿ. ಶ. ೧೦೧೭; ಶ್ರೀ ಮಧ್ವಾಚಾರ‍್ಯರ ಕಾಲ ಕ್ರಿ. ಶ. ೧೧೧೯. ಅ ಪ್ರತಿಯಲ್ಲಿ ಱ ಕಾರ ಪ್ರಯೋಗ ಕ್ವಚಿತ್ತಾಗಿದ್ದರೆ ಆ ಪ್ರತಿಯಲ್ಲಿ ಱ ಕಾರದ ಬದಲು ರೇಫ ಪ್ರಯೋಗವೇ ಇದೆ. ಆದ್ದರಿಂದ ಈ ಎರಡು ಪ್ರತಿಗಳೂ ಇ ಪ್ರತಿಗಿಂತ ಬಹು ಈಚಿನವು. ಬಹುಶಃ ೧೬ನೆಯ ಶತಮಾನದ ತರುವಾಯ ಹುಟ್ಟಿದವು ಎಂದು ಊಹಿಸಬಹುದು. ಇವೆರಡರಲ್ಲಿ ಆ ಗಿಂತ ಅ ಹೆಚ್ಚು ಪ್ರಾಚೀನ ತೋರುತ್ತದೆ.

೪. ಇ ಪ್ರತಿಯ ಪಾಠ ಮೂಲಪಾಠದ ಒಂದು ಶಾಖೆಗೂ, ಅ – ಆ ಗಳ ಪಾಠ ಪರಸ್ಪರ ಸ್ವತಂತ್ರಗಳಾಗಿದ್ದು ಇನ್ನೊಂದು ಶಾಖೆಗೂ ಸೇರಿದುವಾಗಿ ಕಂಡುಬರುತ್ತವೆ. ಇ ಪ್ರತಿಯ ಪಾಠವನ್ನೇ ಹೆಚ್ಚಾಗಿ ಅವಲಂಬಿಸಿರುವ ಪಾಠಕರ ಮುದ್ರಣವನ್ನೇ ನಾವು ಮುಖ್ಯ ಆಧಾರವಾಗಿ ಇಟ್ಟುಕೊಂಡಿರುತ್ತೇವೆ.

೫. ಪ್ರಕೃತ ಮುದ್ರಣದ ಪಾಠ ಮೇಲ್ಕಂಡ ಪಾಠಗಳ ಉತ್ತಮಾಂಶಗಳ ಆಧಾರದ ಮೇಲೆ ರೂಪಗೊಂಡಒಂದು ಮಿಶ್ರಪಾಠ; ಮಾಡಿರುವ ತಿದ್ದುಪಾಟುಗಳು ಅನೇಕ ಸಂದರ್ಭಗಲ್ಲಿ ಊಹಾತ್ಮಕ.

ಈ ಆವೃತ್ತಿಯಲ್ಲಿ ಸಂಪಾದಕರ ವಿಶೇಷಾಧ್ಯಯನವನ್ನು ಹೆಜ್ಜೆ ಹೆಜ್ಜೆಗೂ ತೋರಿಸುವ, ತೌಲನಿಕ ಹಾಗು ವಿವರಣಾತ್ಮಕ ಹಾಗು ವಿಮರ್ಶಾತ್ಮಕ ಟಿಪ್ಪಣೆಗಳು ವಿದ್ಯಾರ್ಥಿಗಳಿಗೆ ತುಂಬಾ ಉಪಕಾರಕವಾಗಿವೆ. ಮೇಲೆ ೨ನೆಯ ಅಂಶದ ಸಂಬಂಧದಲ್ಲಿ ನಮ್ಮ ಅಭಿಪ್ರಾಯವನ್ನಿಲ್ಲಿ ಸೂಚಿಸಬೇಕೆಂದರೆ-ಬೊಮ್ಮರಸ ಪಂಡಿತರು ಮೈಸೂರಿಂದ ಮದರಾಸಿನವರಿಗೆ ಕಳಿಸಿದ್ದು ಆ ಪ್ರತಿಯ ಕಾಗದ ಪ್ರತಿಲಿಪಿ ಇರಬೇಕೇ ಹೊರತು, ನಾಲ್ಕನೆಯ ಹಸ್ತಪ್ರತಿಯಿರಲಾರದು. ಏಕೆಂದರೆ ಆ ನಾಲ್ಕನೆಯದರ ಕುರುಹು ಎಲ್ಲಿಯೂ ಇದುವರೆಗೆ ಯಾರಿಗೂ ಸಿಕ್ಕಿಲ್ಲ.

ಇದೇ ಸಂಪಾದಕರೇ ೧೯೭೫ ರಲ್ಲಿ ಹೊರತಂದಿರುವ ಮತ್ತೊಂದು ಆವೃತ್ತಿ ಪೂರ್ವೋಕ್ತ ಆವೃತ್ತಿಯ ಸಂಕುಚಿತ ಪೀಠಿಕೆಯನ್ನೊಳಗೊಂಡು, ಟಿಪ್ಪಣಿಗಳಿಲ್ಲದ ‘ವಿದ್ಯಾರ್ಥಿಗಳ ಆವೃತ್ತಿ’ ಮಾತ್ರವಾಗಿದೆ. ಇದರಲ್ಲಿ ಕವಿರಾಜಮಾರ್ಗದ ‘ಅರ್ಥಕೋಶ’ ಹೊಸದಾಗಿ ಸೇರಿದ್ದು ಅಭ್ಯಾಸಿಗಳಿಗೆ ಉಪಯುಕ್ತವಾಗಿದೆ. ೧೯೬೮ರ ಮುದ್ರಣದ ಅಶುದ್ಧಿಗಳನ್ನೂ ಇಲ್ಲಿ ಸರಿಪಡಿಸಲಾಗಿದೆ. ಇಲ್ಲಿ ಪಾಠಾಂತರ ಚರ್ಚೆಯಿಲ್ಲ.

೧೯೭೩ ರಲ್ಲಿ ಪ್ರಕಟವಾದ ಎರಡು ಗ್ರಂಥಗಳು ಕವಿರಾಜಮಾರ್ಗದ ವಿಶೇಷಾಧ್ಯಯನವನ್ನೇ ಕುರಿತಿರುವುದರಿಂದ ಇಲ್ಲಿ ಉಲ್ಲೇಖನಾರ್ಹವಾಗಿವೆ. ಮೊದಲನೆಯದು ಐ.ಬಿ.ಎಚ್. ಪ್ರಕಾಶನದವರ ಕವಿಕಾವ್ಯಪರಂಪರೆಯಲ್ಲಿ ಒಂದನೆಯದಾಗಿ ಪ್ರಕಟವಾಗಿರುವ ‘ಕವಿರಾಜಮಾರ್ಗ’. ಇದರಲ್ಲಿ ಡಾ|| ಎಂ. ಚಿದಾನಂದಮೂರ್ತಿ, ಪ್ರೊ. ಎಂ. ವಿ. ಸೀತಾರಾಮಯ್ಯ ಮತ್ತು ಪ್ರಕೃತ ಲೇಖಕನ ಅಧ್ಯಯನಗಳಲ್ಲದೆ ಮಾಲೆಯ ಸಂಪಾದಕರಾದ ವಿ. ಸೀತಾರಾಮಯ್ಯನವರ ಸಮೀಕ್ಷೆಯೂ ಮುನ್ನುಡಿಯೂ ಅಂತರ್ಗತವಾಗಿವೆ. ಆದರೆ ಪಾಠ ಶೋಧನೆಗೆ ಇಲ್ಲಿ ಹೆಚ್ಚಿನ ಸಾಮಗ್ರಿಯಿಲ್ಲ. ಎರಡನೆಯದು ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ.ಹೆಚ್.ಡಿ. ಸಂಶೋಧನ ಪ್ರಬಂಧವಾಗಿ ಪ್ರಕಟಿತವಾಗಿರುವ ಡಾ|| ಎಂ. ಎಂ. ಕಲಬುರ್ಗಿ ಅವರ “ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ”. ಇದರ ಶೀರ್ಷಿಕೆಯ ವ್ಯಾಪ್ತಿ ವಿಶಾಲವಾಗಿದ್ದರೂ ಕವಿರಾಜಮಾರ್ಗದ ಅನೇಕ ಪದ್ಯಪಾಠಗಳ ಪ್ರಸಕ್ತಿ ಅಲ್ಲಿ ಅನುಷಂಗಿಕವಾಗಿ ಬಂದಿದೆ. ಅಷ್ಟೇ ಅಲ್ಲದೆ, ಅ , ಆ ಮೂಲ ತಾಳೆ ಗರಿಗಳ ಮಾದರಿಯ ಪೋಟೋ ಪ್ರತಿರೂಪಗಳೂ ಅಲ್ಲಿ ಕಾಣಸಿಗುತ್ತವೆ. (ಪು. ೪೦ ರ ಬದಿಗೆ). ಪಾಠ ವ್ಯತ್ಯಾಸಗಳನ್ನು ಕುರಿತ ಒಂದು ವಿಭಾಗವೂ ಬರುತ್ತದೆ (ಪು. ೩೭-೩೮). ಈಗಾಗಲೇ ಹೇಳಿದ ಅ ಆ ತಾಳೆ ಪ್ರತಿಗಳಿಗೇ ಅನುಕ್ರಮವಾಗಿ ಈಗ ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ No. ೨೮೮ ಮತ್ತು No . ೧೭೫ ಎಂಬ ಕಾಗದದ ಪ್ರತಿ ಲಿಪಿಗಳಿರುವುದೂ ಅಲ್ಲಿ ವೇದ್ಯವಾಗುತ್ತದೆ. ಅವರು ಕವಿರಾಜಮಾರ್ಗದ ಪ್ರತಿಗಳ ಬಗೆಗೆ ಸ್ಥೂಲವಾಗಿ ಬರೆದಿರುವುದಲ್ಲದೆ ನಿಷ್ಕೃಷ್ಟವಾಗಿ ಸುಮಾರು ಇಪ್ಪತ್ತು ಗಮನಾರ್ಹ ಪಾಠ ಭೇದಗಳನ್ನೂ ಕುರಿತು ನಮ್ಮ ದೃಷ್ಟಿಯನ್ನು ಸೆಳೆದಿದ್ದಾರೆ.

ಭೀಮರಾವ್ ಚಿಟಗುಪ್ಪಿ ಅವರ ಕವಿರಾಜಮಾರ್ಗ ಪ್ರಶಸ್ತಿ (ಮನ್ವಂತರ ಪ್ರಕಾಶನ, ಧಾರವಾಡ, ೧೯೭೨) ಮತ್ತು ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ‘ಕವಿರಾಜ ಮಾರ್ಗವಿವೇಕ’ (ಸಂಪಾದಕ-ಎಂ. ಕೇಶವಭಟ್ಟ, ಗೀತಾ ಬುಕ್ ಹೌಸ್, ಮೈಸೂರು, ೧೯೭೩)- ಇವೆರಡು ಗ್ರಂಥಗಳೂ ಮುಖ್ಯವಾಗಿ ಪಾಠಾಂತರಗಳ ಚರ್ಚೆಗೆ ಮೀಸಲಾದುವಲ್ಲದಿದ್ದರೂ ಪ್ರಾಸಂಗಿಕವಾಗಿ ಅನೇಕ ಪದ್ಯಪಾಠಗಳ ಶುದ್ಧಿ ವಿಚಾರವನ್ನೊಳಗೊಂಡಿವೆ; ಆದರೆ ಇಲ್ಲಿ ಬರುವ ಪಾಠ ಚರ್ಚೆಯೆಲ್ಲ ಊಹಾತ್ಮಕವಾದುದೇ ಹೊರತು ಹೊಸ ಹಸ್ತ ಪ್ರತಿ ವಿಮರ್ಶೆಯಿಂದ ನೇರವಾಗಿ ಬಂದಂತಹವಲ್ಲ.

ಒಟ್ಟಿನಮೇಲೆ ಇಂದೂ ವಿದ್ವಾಂಸರಿಗೆ ಲಭ್ಯವಿರುವ ಕವಿರಾಜಮಾರ್ಗದ ಹಸ್ತ ಪ್ರತಿಗಳಲ್ಲಿ ಮೂಲ ಓಲೆಗರಿಯವು ಮೂರೇ ಆಗಿವೆ- ಅ, ಆ ಮತ್ತು ಇ. ಇವುಗಳಲ್ಲಿ ಮೊದಲೆರಡು ಒಂದು ಶಾಖೆಗೂ ಇ ಇನ್ನೊಂದು ಶಾಖೆಗೂ ಸೇರುತ್ತವೆ. ಈ ವಂಶವೃಕ್ಷವನ್ನು ಕೆಳಗಿನಂತೆ ಆಕೃತಿರೂಪದಲ್ಲಿ ಚಿತ್ರಿಸಬಹುದು.

ಮೂಲಪ್ರತಿ X ಆನುಪಲಬ್ಧ
C ಉಪಲಬ್ಧ
A (ಉಪಲಬ್ಧ)
B (ಉಪಲಬ್ಧ)

ಈ ಮೂರರಲ್ಲಿ C A ಎಂಬುದೇ ಹೆಚ್ಚು ಪ್ರಾಚೀನವಾದರೂ, A B ಗಳು ಒದಗಿಸುವ ಅನುಪಲಬ್ಧ x ಗ್ರಂಥಪಾಠ ಪ್ರಾಚೀನತರವಲ್ಲವೆಂದು ಒಮ್ಮೆಲೇ ತೀರ್ಮಾನಿಸುವಂತಿಲ್ಲ. ವಸ್ತುತಃ ಇಡಿಯ ಗ್ರಂಥಕ್ಕೆ ಎರಡೇ ಹಸ್ತಪ್ರತಿಗಳಿದ್ದಂತಾಗುತ್ತದೆ. ಸಂಪಾದಕನಿಗೆ; ಆದರಲ್ಲಿಯೂ C ದೊರೆಯದ ಭಾಗಕ್ಕೆ ಒಂದೇ ಹಸ್ತಪ್ರತಿಯಿದ್ದಂತಾಗುತ್ತದೆ. ಹೀಗಿರುವಾಗ ಸಂಪಾದಕನಿಗೆ ಪಾಠಗಳನ್ನು ಪರಿಷ್ಕರಿಸಿ ನಿರ್ಣಯಿಸಲು ಹಸ್ತಪ್ರತಿ ಸಾಮಗ್ರಿ ಸಹಾಯಮಾಡದು; ಅವನು ತನ್ನ ಪ್ರತಿಭೆ-ಪಾಂಡಿತ್ಯಗಳಿಗೇ ಶರಣಾಗುವುದು ಅನಿವಾರ‍್ಯವಾಗುತ್ತದೆ. ಆದರೆ ಇಲ್ಲಿ ಊಹೆಯ ಕುದುರೆಯನ್ನು ಓಡಿಸುವಾಗ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ ಎನ್ನಬೇಕು.

Kanaja

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published. Required fields are marked *