ಕವಿರಾಜ ಮಾರ್ಗದ ಕರ್ತೃತ್ವವಿಚಾರ

ಪೂರ್ವೋಕ್ತ ಆವೃತ್ತಿಗಳ ಪೀಠಿಕೆಗಳು ಮತ್ತು ಪ್ರಕಟವಾಗಿರುವ ಸಾಹಿತ್ಯಚರಿತ್ರೆಗಳು ಹಾಗು ಸ್ವತಂತ್ರ ಗ್ರಂಥಗಳು ಮತ್ತೊಮ್ಮೆ ನೃಪತುಂಗಪಕ್ಷದವರ ವಾದಗಳನ್ನೂ ಶ್ರೀ ವಿಜಯಪಕ್ಷದವರ ವಾದಗಳನ್ನೂ ಮಥನಮಾಡಿ, ತೂಗಿನೋಡಿ, ಕವೀಶ್ವರ ವಾದಕ್ಕೆ ಆಧಾರ ಸಾಲದೆಂದೂ, ನೃಪತುಂಗಪಕ್ಷವೂ ಶ್ರೀ ವಿಜಯಪಕ್ಷದ ಮುಂದೆ ದುರ್ಬಲವೆನಿಸುವುದೆಂದೂ ಒಂದು ರೀತಿಯ ನಿರ್ಣಯಕ್ಕೆ ಬಂದಿರುವುದನ್ನು ಕಾಣಬಹುದು. ಈ ಚರ್ಚೆಗಳಲ್ಲಿ ಪ್ರಕೃತ ಸಂಪಾದಕನ ಹೆಸರು ನೃಪತುಂಗಪಕ್ಷದಲ್ಲಿ ಒಮ್ಮೊಮ್ಮೆ ನಿರಾಕರಣೆಗಾಗಿ ಬಂದಿರುವುದನ್ನು ಇಲ್ಲಿ ಗಮನಿಸದೆ ಇರುವಂತಿಲ್ಲ. ಇಷ್ಟೊಂದು ಕೂಲಂಕಷವಾಗಿ ಉದ್ದಾಮ ಸಂಶೋಧಕರು ಪಕ್ಷ-ಪ್ರತಿಪಕ್ಷಗಳನ್ನು ಮಂಡಿಸಿರುವಾಗ, ಅದರ ಪುನರುಕ್ತಿ ಚರ್ವಿತಚರ್ವಣವೆನಿಸುವುದೆಂಬ ಕಾರಣದಿಂದ ಸಮುಸ್ಯೆಯ ಉದ್ಗಮ, ವಿಕಾಸ, ವೈವಿಧ್ಯಗಳ ಪ್ರತಿಪಾದನೆಗೆ ಇಲ್ಲಿ ಕೈಹಾಕಿಲ್ಲ. ಈ ವಿಚಾರದಲ್ಲಿ ವಿದ್ವಾಂಸರ ಕಣ್ಣು ತಪ್ಪಿಸಿರುವ ಹಳೆಯ ಸಾಕ್ಷ್ಯಗಳೇನಾದರೂ ಇವೆಯೆ ? ಅಥವಾ ಹೊಸ ಸಾಕ್ಷ್ಯಸಾಮಗ್ರಿಗಳಿಗೇನಾದರೂ ಬೆಳಕಿಗೆ ಬಂದಿವೆಯೆ, ಬಂದಿದ್ದರೆ ಅವುಗಳಾವವು ? ಚರ್ಚೆಯನ್ನು ನಿರ್ಣಾಯಕವಾಗಿ ಮುಗಿಸುವಷ್ಟು ಅವು ಪ್ರಬಲ ಆಧಾರಗಳನ್ನೊಳಗೊಂಡಿವೆಯೆ ? ಎಂಬ ಈ ಪ್ರಮುಖ ಪ್ರಶ್ನೆಗಳನ್ನು ಮಾತ್ರ ನಿಷ್ಪಕ್ಷಪಾತ ವಸ್ತುನಿಷ್ಠ ದೃಷ್ಟಿಯಿಂದ ವಿಚಾರಿಸಿ ಸಂಶಯಾಸ್ಪದವಿಲ್ಲದಂತೆ ಈ ಸಂಪಾದಕನ ನಿಲುವನ್ನು ಪುನರುಚ್ಚರಿಸುವುದಕ್ಕಾಗಿ ಮಾತ್ರ ಇಲ್ಲಿ ಸಂಕ್ಷಿಪ್ತವಾಗಿ ಕೆಲವು ಮಾತುಗಳನ್ನು ಹೇಳಲಾಗಿದೆ.

ವಿವಾದಕ್ಕಾಗಿ ‘ನೃಪತುಂಗಪಕ್ಷ’, ‘ಶ್ರೀವಿಜಯಪಕ್ಷ’ ಎಂದು ವಿಂಗಡಿಸಿಕೊಳ್ಳುವುದೇ ಅಷ್ಟೇನೂ ಸಮಂಜಸವಲ್ಲ ಗ್ರಂಥದಲ್ಲಿರುವ ಅಂತರ ಪ್ರಮಾಣಗಳು ಕರ್ತೃತ್ವದ ಬಗೆಗೆ ಏನನ್ನು ತಿಳಿಸುತ್ತವೆ, ಬಾಹ್ಯಪ್ರಮಾಣಗಳು ಏನನ್ನು ನಿರ್ದೇಶಿಸುತ್ತವೆ, ಎಂಬುದನ್ನು ಕೂಲಂಕಷವಾಗಿ ಸಂಶೋಧಕನು ಪರಿಶೀಲಿಸಿ, ನಿರ್ಣಯವನ್ನು ಕಡೆಗೆ ತಡೆದಿರಿಸುವಷ್ಟು ಸಹನೆ ವಹಿಸಬೇಕು.

ಅಂತರ ಪ್ರಮಾಣಗಳು :

೧) ಮಂಗಳ ಶ್ಲೋಕಗಳು-ನೃಪತುಂಗಪ್ರಶಂಸೆಗೆ ಮೀಸಲು; ನೃಪತುಂಗನು ರಾಷ್ಟ್ರಕೂಟವಂಶದ ಪ್ರಸಿದ್ಧರಾಜ; ರಾಜಧಾನಿ ಮಾನ್ಯಖೇಟ; ಆಳ್ವಿಕೆಯ ಕಾಲ- ಕ್ರಿ.ಶ. ೮೧೪ ರಿಂದ ೮೭೯.

೨) ಎರಡನೆಯ ಮಂಗಳಶ್ಲೋಕದಲ್ಲಿ ವೀರನಾರಾಯಣನಾದ ಅತಿಶಯಧವಳ ನೃಪತುಂಗನೇ ‘ನಮಗೀಗೆ’ ‘ಪ್ರತಾಪೋದಯಮಂ’ ಎಂದಿದೆ. ‘ನಮಗೆ’ ಎಂದರೆ ವಾಚಕರಿಗೆ ಎಂದಮೇಲೂ ‘ಪ್ರಸಾದೋದಯ’ ಅಥವಾ ‘ಭಾಗ್ಯೋದಯ’ವನ್ನು ನೀಡಲೆನ್ನದೆ ‘ಪ್ರತಾಪೋದಯ’ವನ್ನು ನೀಡಲೆನ್ನುವುದರ ಔಚಿತ್ಯವೇನು ? ಕವಿ ಯಾರೇ ಇರಲಿ, ಅವನು ಪ್ರತಾಪ ಅಥವಾ ಕ್ಷಾತ್ರವನ್ನು ಬಯಸುವವನೆಂಬುದು ಇಲ್ಲಿ ಸೂಚ್ಯವಲ್ಲವೆ?

೩) ಮೂರನೆಯ ಮಂಗಳಶ್ಲೋಕದಲ್ಲಿ ಸರಸ್ವತಿ ‘ಕೂರ್ತು ಮನ್ಮಾನಸದೊಳ್ ನೆಲೆಗೊಳ್ಗೆ’ ಎಂದಿರುವಾಗ, ‘ಅಸ್ಮನ್ಮಾನಸ’ ಎನ್ನದೆ ‘ಮನ್ಮಾನಸ’ ಎಂದು ಏಕವಚನ ಪ್ರಯೋಗ ಸ್ಪಷ್ಟವಿರುವುದರಿಂದ ಇದರ ಕರ್ತನು ಒಬ್ಬನೇ ಹೊರತು ಇಬ್ಬರೋ ಮೂವರೋ ಅಲ್ಲ, ಎಂಬುದಂತೂ ನಿಸ್ಸಂಶಯ. ನಾಲ್ಕನೆಯ ಪದ್ಯದಲ್ಲಿ ‘ಎಮಗೀ ಕೃತಿಯೊಳ್’ ಎಂದು ಬಹುವಚನ ಕಂಡರೂ ಅದು ಆತ್ಮಾರ್ಥದ ಬಹುವಚನವೇ ಇರಬೇಕು.

೪) ಈ ಗ್ರಂಥಕಾರನು ಕಾವ್ಯಪ್ರಯೋಜನ ಹೇಳುವಾಗ (I -೧೮) ಪಾಪ-ಪುಣ್ಯಗಳ ಮಾತನ್ನೆತ್ತಿದ್ದಾನೆ, ಲೌಕಿಕದಂತೆ ‘ಸಾಮಯಿಕ’-ವಿವೇಕವನ್ನೂ ಪ್ರಸ್ತಾಪಿಸಿದ್ದಾನೆ. (I -೧೯) ಆದ್ದರಿಂದ ಇವನು ಒಪ್ಪಿರುವ ನಾಲ್ಕು ಪುರುಷಾರ್ಥಗಳಲ್ಲಿಯೂ ( -೨೦) ಹೆಚ್ಚಿನ ಸ್ಥಾನವನ್ನು ಧರ್ಮಕ್ಕೆ ನೀಡುತ್ತಿರುವುದು ಒಡೆದುಕಾಣುತ್ತದೆ.

೫) I -೨೯ ರಲ್ಲಿ ಹೇಳಿರುವ ಕವಿಗಳು I -೩೯ ರಲ್ಲಿ ಸ್ಪಷ್ಟವಾಗಿ ಹೆಸರಿಸುವ ಕೇವಲ ಸಂಸ್ಕೃತ ಕವಿಗಳಾದ ಕಾಳಿದಾಸ ಮಾಘಾದಿಗಳಂತೆ ಸಂಸ್ಕೃತ ಗದ್ಯರಚನಾಗುರುಗಳೂ ಆಗಿರಬಹುದು. ವಿಮಳೋದಯ ನಾಗಾರ್ಜುನಾದಿಗಳು ಕನ್ನಡದಲ್ಲಿಯೇ ಬರೆದರೆಂದು ಸ್ಪಷ್ಟವಾಗಿ ಉಕ್ತವಾಗಿಲ್ಲ. ಕನ್ನಡದ ವಿದ್ವಜ್ಜನ-ಪರಂಪರೆ ಇದನ್ನು ಗಮನಿಸಿದಂತಿಲ್ಲ. ಎಲ್ಲರೂ ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತಾದಿಗಳ ಕನ್ನಡ ಗದ್ಯರಚನೆಗಳ ಅನ್ವೇಷಣೆ ನಡೆಸಿದ್ದಾರೆ; ಇದು ಕಾಕದಂತ ಪರೀಕ್ಷಣದಂತೆ ಆಗಲೂಬಹುದು.

ಟಾರಂಟೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ. ಕೆ. ವಾರ್ಡರ್ ೧೯೭೪ ರಲ್ಲಿ ಪ್ರಕಟಿಸಿರುವ Indian Kavya Literture ದ್ವಿತೀಯ ಸಂಪುಟದಲ್ಲಿ (ಮೋತಿ ಲಾಲ್ ಬನಾರಸಿದಾಸ್, ದೆಹಲಿ, ಪುಟ ೧೮೩) ಬೌದ್ಧ ತತ್ತ್ವಜ್ಞಾನಿ ನಾಗಾರ್ಜುನನು ಸಾತವಾಹನ ರಾಜನೊಬ್ಬನಿಗೆ ಬರೆದು ಕಳಿಸಿದ ‘ಸುಹೃಲ್ಲೇಖ’ ಎಂಬ ಗದ್ಯರಚನೆ ಉಪಲಬ್ಧವಿರುವುದನ್ನು ಉಲ್ಲೇಖಿಸಿದ್ದಾರೆ. ಮಹಾರಾಷ್ಟ್ರ ಗದ್ಯಕಥೆಯಾದ ಕುತೂಹಲನ ‘ಲೀಲಾವಈ’ ಕಥೆಯಲ್ಲಿಯೂ ನಾಗಾರ್ಜುನನು ಸಾತವಾಹನರ ಆಸ್ಥಾನದಲ್ಲಿದ್ದ ವರ್ಣನೆ ಬಂದಿದೆ. ಬೌದ್ಧರ ಐತಿಹ್ಯಗಳಂತೆ ನಾಗಾರ್ಜುನನು ಅವರ ಆಸ್ಥಾನಪಂಡಿತನಾದ ಪಾದಲಿಪ್ತನ ಶಿಷ್ಯ ಮತ್ತು ರಾಜ ಹಾಗು ರಾಣಿಯಾದ ಚಂದ್ರಲೇಖೆಯ ಗುರು. ಈ ರಾಜನು ವಾಸಿಷ್ಠೀಪುತ್ರ ಪುಳುಮಾಯಿಯೇ ಎಂದೂ, ಈತನೇ ಗಾತಾಸಪ್ತಶತಿಯ ಸಂಪಾದಕನೆಂದೂ ಪ್ರೊ. ವಾರ್ಡರ್ ಊಹಿಸುತ್ತಾರೆ. ಕನ್ನಡ ಸಾಹಿತ್ಯದ ಆದ್ಯ ಲಕ್ಷಣಜ್ಞನು ಸಂಸ್ಕೃತ ಕವಿಗಳಂತೆ ಪ್ರಾಕೃತ-ಗದ್ಯಕಾರರನ್ನೂ ಸ್ಮರಿಸಿರಬಾರದೇಕೆ? ದುರ್ವಿನೀತನ ‘ದೇವಭಾರತೀನಿಬದ್ಧ’ ಬೃಹತ್ಕಥೆಯೆಂದರೆ ಜೈನರ ಪ್ರಕಾರ ಅರ್ಧಮಾ ಗಧೀ ನಿಬದ್ಧವಾದುದೇ ಎಂಬ ಒಂದು ಅಭಿಪ್ರಾಯವೂ ಇಲ್ಲಿ ಗಮನಾರ್ಹ.

೫) ಅದರಂತೆಯೇ I -೩೨ ರಲ್ಲಿಯೂ ‘ಪರಮಶ್ರೀವಿಜಯ ಕವೀಶ್ವರಾ’ದಿಗಳ ರಚನೆ ‘ತದಾದ್ಯ’ ಕಾವ್ಯಕ್ಕೆ ಲಕ್ಷ್ಯವೆನ್ನಲಾಗಿದೆಯೇಹೊರತು ಕನ್ನಡ ಕಾವ್ಯಕ್ಕೆ ಎಂದು ಸ್ಪಷ್ಟವಾಗಿ ಹೇಳಿಲ್ಲ ಎಂಬುದನ್ನು ಮರೆಯಲಾಗದು. ಕನ್ನಡದ ವಿದ್ವತ್ಪರಂಪರೆ ಏಕಭಿಪ್ರಾಯದಿಂದ ವ್ಯಾಖ್ಯಾನಿಸಿದರೂ, ಅದು ವ್ಯಾಖ್ಯಾನವೇ ಹೊರತು ಮೂಲ ಪಂಕ್ತಿಯೆನಿಸದು. ಎಂದಮೇಲೆ ಇವರು “ತದಾದ್ಯ” ಕಾವ್ಯವನ್ನು ಎಂದರೆ ಕನ್ನಡಕ್ಕೂ ಮುಂಚಿನ ಪ್ರಾಕೃತ ಭಾಷೆಯಲ್ಲಿಯ ಕಾವ್ಯವನ್ನು ಬರೆದ ಮೊದಲಿಗರಿರಬಹುದೆಂದಾಗುತ್ತದೆ. ಸಂಸ್ಕೃತಕವಿಗಳನಂತರ ಪ್ರಾಕೃತಕವಿಗಳ ನಾವೋಲ್ಲೇಖ ಕ್ರಮಪ್ರಾಪ್ತವೂ ಆಗುತ್ತದೆ-ಎಲ್ಲವೂ ಭಾರತೀಯ ಸಾಹಿತ್ಯವೇ ಎಂಬ ವಿಶಾಲದೃಷ್ಟಿ ಪ್ರಚಾರವಾಗಿದ್ದ ೯ನೆಯ ಶತಮಾನದಲ್ಲಿ. ಆಗ ರತ್ನತ್ರಯರಂತೆ ಸಕಲ ಜೈನಕವಿಗಳಿಂದಲೂ ಪ್ರಥಮ ಸಂಕೀರ್ತನೀಯರಾಗಿರುವ ಸಮಂತಭದ್ರ, ಕವಿಪರಮೇಷ್ಠಿ, ಪೂಜ್ಯಪಾದರೇ ಇಲ್ಲಿಯೂ ಮೊದಲು ಉದ್ದಿಷ್ಟರಾಗಿದ್ದಾರೆಂದರೆ ಅಸಂಭಾವ್ಯವೆನಿಸದು. ಈ ಊಹೆ ದ. ರಾ. ಬೇಂದ್ರೆ ಅವರದು. ಜಿನಸೇನನೇ ಪೂಜ್ಯಪಾದನನ್ನು ‘ಕವೀನಾಂ ತೀರ್ಥಕೃದ್ದೇವಃ’ ಎಂದು ನುತಿಸಿರುವುದು ಇಲ್ಲಿ ಗಮನಾರ್ಹ. ಇವರೆಲ್ಲರೂ ಜೈನ ಆಚಾರ್ಯಪುರುಷರಾದ್ದರಿಂದ ಕವಿರಾಜಮಾರ್ಗದ ಗ್ರಂಥಕರ್ತ ಜೈನನೇ ಇರಬೇಕು. ಈ ಮಾತು (I , ೧೨, ೨೮, ೯೧, ೧೦೪, ೧೦೯; II-೧೩೫, ೧೫೨ III-೧೮, ೯೪, ೨೨೭) ಇನ್ನೂ ಅನೇಕ ಕಡೆ ಸೂಚ್ಯವಾಗಿಯೂ ವಾಚ್ಯವಾಗಿಯೂ ನಿರ್ದಿಷ್ಟವಾಗಿದೆ. ಹೇಗೇ ಆಗಲಿ, ಕೀರ್ತಿತನಾಗಿರುವ ‘ಪರಮ ಶ್ರೀ ವಿಜಯ’ ಕವಿರಾಜಮಾರ್ಗಕಾರನಿಗಿಂತ ಭಿನ್ನನೇ ಆಗಿರಬೇಕೇ ಹೊರತು ಅಭಿನ್ನನಾಗುವುದು ಅಸಂಭವ. ‘ಪರಮ’ ಎಂಬ ವಿಶೇಷಣದ ಸಾರ್ಥಕ್ಯ ಸಿದ್ಧಿಸಲು ಅವನು ಕವಿರಾಜಮಾರ್ಗಕಾರನಿಗೆ ಪೂಜ್ಯನಾದವನೂ ಇರಬೇಕು.

ಮುಂದಿನ I -೩೩ ಪದ್ಯ ಒಂದು ಒಗಟೆಯಂತೆ ವಿದ್ವಾಂಸರನ್ನು ಕೆಣಕಿದೆ. ‘ನುಡಿಗೆಲ್ಲಂ ಸಲ್ಲದ’ ಎಂಬುದನ್ನು ‘ಕನ್ನಡ’ಕ್ಕೆ ಅನ್ವಯಿಸಲು ಒದ್ದಾಡಿದ್ದಾಗಿದೆ. ಅದನ್ನು ಬಿಟ್ಟು ಅದರ ಮುಂದಿನ ಪದವಾದ ‘ಚಿತ್ತಾಣಮುಂ ಬೆದಂಡೆಯುಂ’ ಎಂಬುದಕ್ಕೆ ಅನ್ವಯಿಸುವಷ್ಟು ಸಹನೆದೋರಿದರೆ ಒಗಟೆ ಬಿಡುತ್ತದೆ. ಈ ಮೊದಲು ಹೇಳಿದಂತೆ ಕನ್ನಡದಲ್ಲಿ ಮಹಾಕಾವ್ಯರಚನೆ ಮತ್ತು ಗದ್ಯಕಾವ್ಯರಚನೆ ಕವಿರಾಜಮಾರ್ಗಕಾಲಕ್ಕೆ ಆಗಿರಲಿಲ್ಲ; ಅಂದು ಪ್ರಸಿದ್ಧವಾಗಿದ್ದ ಮಿಕ್ಕ ‘ಮೂರುವಱೆ’ ಭಾಷೆಗಳು ಎಂದರೆ ಸಂಸ್ಕೃತ, ಪ್ರಾಕೃತ, ಅಪಭ್ರಂಶ, ಪೈಶಾಚಿಗಳಲ್ಲಷ್ಟೇ ಎಂಬುದನ್ನು ಮನದಂದರೆ ಆ ಎಲ್ಲ ನುಡಿಗಳಿಗೆ ಅಥವಾ ಭಾಷೆಗಳಿಗೆ ಸಲ್ಲದ ಅಥವಾ ಸಲುವಳಿಯಾಗದೆಹೋದರೂ, ಕನ್ನಡದಲ್ಲಿ ಪುರಾತನಕವಿಗಳು ಒಪ್ಪಿಕೊಂಡ ಲಘುಕಾವ್ಯರಚನಾಪ್ರಕಾರಗಳೇ ‘ಚತ್ತಾಣ’ ಮತ್ತು ‘ಬೆದಂಡೆ’ ಎಂಬುದು ಸ್ಪಷ್ಟವಾಗುತ್ತದೆ. ಈ ಪೂರ್ವಕಾವ್ಯಗಳು ಇಂದು ಹೊಲಬೂ ಇಲ್ಲದಂತೆ ಲುಪ್ತವಾಗಿರುವುದು ನಮ್ಮ ದುರ್ದೈವ.

ಆದರೆ ಅವುಗಳ ಸ್ವರೂಪಕಲ್ಪನೆಗೆ ತಕ್ಕಷ್ಟು ಸಾಮಗ್ರಿ ಅಲ್ಲಲ್ಲಿ ಹಳೆಗನ್ನಡ ಸಾಹಿತ್ಯದಲ್ಲಿ ಮಿಂಚಿ ಮಾಯವಾಗುತ್ತದೆ. ಇವು ಪಂಡಿತಮಂಡಲಿಗಳಿಗಾಗಲಿ ರಾಜ ಸಭೆಗಳಿಗಾಗಲಿ ರಚಿತವಾಗಿರದೆ, ಸಾಮಾನ್ಯ ಜನತೆಯ ವಿನೋದಕ್ಕೆ ಮೀಸಲಾದ ಹಾಡು ಗಬ್ಬಗಳಾಗಿದ್ದವೆನಿಸುತ್ತವೆ. ಇವುಗಳಲ್ಲಿ ಕಂದವೃತ್ತಗಳಂತೆ ‘ಕರ್ಣಾಟ ವಿಷಯಕ’ ಜಾತಿಗಳಾದ ಗೀತಿಕೆ ಮುಂತಾದ ಅಂಶಗಣಛಂದಸ್ಸುಗಳೂ ಇದ್ದಿರಬಹುದು (I-೩೪). ಈಗಾಗಲೇ ಪ್ರೊ. ರಂ. ಶ್ರೀ. ಮುಗಳಿಯರವರು ಕೊಟ್ಟಿರುವ ಸುಕುಮಾರ ಚರಿತೆಯ- ‘ಬೀಣೆಯ ಕೊಳಲ ಬೆದಂಡೆಯ ಗಾಣರ…’ (II-೨೪)ದ ಜೊತೆಗೆ ಕೆಳಗಿನ ಪ್ರಯೋಗಗಳನ್ನೂ ಗಮನಿಸಬಹುದು*

i) ಕೇಶಿರಾಜನು ಶಬ್ದಮಣಿದರ್ಪಣದಲ್ಲಿ ‘ಚಿತ್ತಾಣಮೆಂದೊಂದು ಕಾವ್ಯಂ; ಬೆದಂಡೆಯೆಂದು ವೈದಂಡಿಕಂ’ ಎಂದು ಅರ್ಥಯಿಸಿದ್ದಾನೆ.

ii) ನಾಗವರ್ಮನು ಈಚೆಗೆ ಪ್ರಕಟವಾದ ‘ವರ್ಧಮಾನಪುರಾಣ’ದಲ್ಲಿ

ದಂಡದ ಬೇಳಂಬಿಗರ ಬೆ

ದಂಡೆಯ ತಳಗೆಯ ಮಹೇಂದ್ರಜಾಲಿಗಳ ಮನಂ |

ಗೊಂಡೆಸೆವ ನೆಗೞ್ವಂಚೆಯ

ತಂಡಂಗಳಿವಾವ ದೆಸೆಯೊಳಂ ಕಡುರಯ್ಯಂ ||

ಎಂದು ಪುರವರ್ಣನಾಪ್ರಸಂಗದಲ್ಲಿ, ಸೂಳೆಗೇರಿಗಳನ್ನು ವರ್ಣಿಸಿದೊಡನೆ ಈ ಪದ್ಯವನ್ನು ಹೇಳಿದ್ದಾನೆ. ‘ದಂಡ’ವನ್ನು ಹಿಡಿದ ಬೇಳಂಬಿಗರು ಎಂದರೆ ವಿಡಂಬಕರು ಅಥವಾ ವಿದೂಷಕರು. ಪ್ರೊ.ಬಿ. ಎಸ್. ಸಣ್ಣಯ್ಯನವರು ಈ ಗ್ರಂಥದ ಅರ್ಥ ಕೋಶದಲ್ಲಿ ಹೇಳುವಂತೆ ‘ಯಾಗಮಾಡುವವರು’ ಖಂಡಿತ ಅಲ್ಲ. ಅವರು ಬೆದಂಡೆ ಹಾಡಲು ದಂಡ ಅಥವಾ ‘ದಂಡಿಗೆ’ಗಳನ್ನು ಹಿಡಿದಿರುತ್ತಿದ್ದರೆಂದು ತೋರುತ್ತದೆ. ಸುಕುಮಾರಚರಿತೆಯಲ್ಲಿ ‘ಕಥಕಶ್ರೇಣಿ’, ಅವರನ್ನು ಬಳಸುವ ‘ನಾಣಿಲಿ’ಗಳ ತಂಡ, ಬುಧಾಳಿಗೆ ದೂರವೆಂಬ ಭಾವವಿರುವಂತೆ, ಅಲ್ಲಿಯೂ ನಾಗರಿಕ ಜೀವನದಲ್ಲಿ ಗಾನ ವಿನೋದಗಳಿಗೆ ಆಸರೆಯಾಗಿದ್ದ ವಿಟವಿದೂಷಕ ಇಂದ್ರಜಾಲಿಕಾದಿಗಳ ವರ್ಣನೆಯಿದೆ. ಇದು ಜಾನಪದ ಲಲಿತಕಾವ್ಯದ ಹೊಲಬನ್ನೇ ಸೂಚಿಸುತ್ತದೆ; ಪ್ರಾಯಃ ಗ್ರಾವಿಣ ಚದುರ-ಚದುರೆಯರ ಶೃಂಗಾರಕ್ಕೂ ಅಲ್ಲಿ ಸಾಕಷ್ಟೂ ಎಡೆಯಿದ್ದಿರಬೇಕೆಂಬುದು ಪ್ರಾಕೃತ ಜಾನಪದ ಕಾವ್ಯವಾದ ‘ಗಾಥಾಸಪ್ತಶತಿ’ಯನ್ನೋದಿದವರಿಗೆ ಭಾಸವಾಗದೆ ಇರದು. “ಸೂಕ್ತಿಸುಧಾರ್ಣವ”ದಲ್ಲಿ ಬಂದಿರುವ ವಿಟವಿದೂಷಕವೇಶ್ಯಾಲಾಪಾದಿಗಳಲ್ಲಿ ಕೆಲವಾದರೂ ಇವನ್ನು ಪ್ರತಿನಿಧಿಸಬಹುದೋ ಏನೋ ! ಜಾನಪದ ಗೀತ, ವಾದ್ಯ, ನೃತ್ಯ, ಮೂರಕ್ಕೂ ‘ದೇಶೀ’ ಎಂಬ ಹೆಸರಿದ್ದುದನ್ನು ಕಲ್ಯಾಣದ ಕವಿಚಕ್ರವರ್ತಿ ಜಗದೇಕಮಲ್ಲನು ತನ್ನ ‘ಸಂಗೀತಚೂಡಾಮಣಿ’ಯಲ್ಲಿ ನಿರ್ದಿಷ್ಟವಾಗಿ ಹೇಳಿದ್ದಾನೆ-

ದೇಶೇಷು ದೇಶೇಷು ನರೇಶ್ವರಾಣಾಂ ಕುರ್ಯಾಜ್ಜನಾನಾಮಪಿ

ವರ್ತನಂ ಯಥಾ |

ಗೀತಂ ಚ ವಾದ್ಯಂ ಚ ತಥಾ ಚ ನೃತ್ಯಂ ದೇಶೀತಿ ನಾಮ್ನಾ  ಪರಿಕೀರ್ತಿತಂ ಸಾ||

ಅಲ್ಲದೆ ಗಾನಪ್ರಬಂಧಗಳನ್ನು ಹೇಳುತ್ತಾ

‘ಗದ್ಯ ವೃತ್ತಂ ದಂಡಕಃ ಸ್ಯಾತ್ ಆರ್ಯಾ ಕಂದಸ್ತತಃ ಪರಮ್ |’

ಎಂದು ಪ್ರಭೇದಗಳನ್ನು ತಿಳಿಸಿದ್ದಾನೆ. ಇವುಗಳಲ್ಲಿ ‘ವೃತ್ತ, ಕಂದ, ದಂಡಕ’ ಬಂದಿರುವುದು ಗಮನಾರ್ಹ.

೭) ಸಂಸ್ಕೃತ-ಪ್ರಾಕೃತದಲ್ಲಿ ಲಕ್ಷಣಶಾಸ್ತ್ರಗಳಿದ್ದಂತೆ ಕನ್ನಡಕ್ಕೆ ಇರಲಿಲ್ಲ (M-೪೧).

೮) ಕವಿರಾಜಮಾರ್ಗಕಾರನ ಕಾಲಕ್ಕೇ ಬೇರೊಂದು ‘ಪಱಗನ್ನಡ’ವಿತ್ತು. ಇದು ಅಂದಿನ ಶಿಷ್ಯವ್ಯವಹಾರದ ದೇಸಿಗೆ ವಿರುದ್ಧವಾಗಿ ಬಳಕೆಗೆ ಸಲ್ಲದಿದ್ದ ಪ್ರಸಂಗಗಳೂ ಇದ್ದವು (I -೪೮, ೪೯). ಹೀಗೆ ದೇಸಿಗೆ ವಿರುದ್ಧವಾದ ಪೞಗನ್ನಡ, ಸಂಸ್ಕೃತ ಬೆರಕೆ, ಅಸಭ್ಯಸ್ಮ*ತಿಯನ್ನು ತರುವಂತಾಗಿ (ಉದಾ : ‘ಹಡುವಸು’) ದೂಷ್ಯವೆನಿಸುತ್ತಿದ್ದವು (I -೫೦). ಇದರ ಮಾರ್ದನಿ ಕಾವ್ಯಾವಲೋಕನದ ಒಂದು ಉದಾಹೃತಪದ್ಯದಲ್ಲಿಯೂ ಕೇಳಬರುತ್ತದೆ-

ಪೞಗನ್ನಡಂ ಪುದುಂಗೊಳೆ

ಕೊೞೆಸಕ್ಕದಮಂ ತಗುಳ್ಚಿ ಜಾಣ್ ಕಿಡೆ ಮುತ್ತಂ |

ಮೆೞಸಂ ಕೋದಂತಿರೆ ಪೇ

ೞ್ವೞೆಗವಿಗಳ ಕವಿತೆ ಬುಧುರನೆರ್ದೆಗೊಳಿಸುಗುಮೇ || (ಐ -೫೫)

ಆದ್ದರಿಂದ ತ್ಯಾಜ್ಯವಾದ ಸಂಸ್ಕೃತ-ಕನ್ನಡ ಬೆರಕೆಯಾವುದು, ಯೋಗ್ಯವಾದ ‘ಮಣಿ-ಪ್ರವಾಳ’ ಬೆರಕೆಯಾವುದು ಎಂಬುದನ್ನು ನಿರ್ಧರಿಸುವುದು ಈ ಲಕ್ಷಣಕಾರನ ಪ್ರಥಮ ಕರ್ತವ್ಯವೆನಿಸಿತು.

ಹೀಗೆ ಕವಿತೆಯಲ್ಲಿ ದೋಷ-ಅದೋಷಗಳ ನಿರ್ಣಯವನ್ನು ಛಂದಸ್ಸು, ವ್ಯಾಕರಣ, ಅಲಂಕಾರಗಳ ದೃಷ್ಟಿಯಿಂದ ಮಾಡಿಕೊಡುವದೇ “ಮಾರ್ಗ”.

೯) “ಮಾರ್ಗ”ವೆಂಬುದು ಗ್ರಂಥದುದ್ದಕ್ಕೂ ಬಹಳಷ್ಟು ಸಲ ಬಂದಿದೆ. ಮೇಲೆ ಹೇಳಿದ ಅದರ ಸಾಮಾನ್ಯಾರ್ಥವನ್ನು M-೨೧, ೭೮,೧೦೯; II-೮, ೧೧, ೧೫, ೧೬, ೪೬, ೪೮, ೪೯, ೫೦; III-೧೦೭, ೧೦೮ ಇತ್ಯಾದಿಗಳಲ್ಲಿ ನೋಡಬಹುದು. ಒಮ್ಮೊಮ್ಮೆ ಅದಕ್ಕೆ ಪರ್ಯಾಯವಾಗಿ ‘ಗತಿ’, ‘ಕ್ರಮ’, ‘ಪದವಿ’, ‘ಪದ್ಧತಿ’, ‘ಮಾರ್ಗಕ್ರಮ’ ಮುಂತಾದ ಶಬ್ದಗಳೂ ಬರುವುದುಂಟು.

ಇಡಿಯ ಗ್ರಂಥದಲ್ಲಿ ಗ್ರಂಥನಾಮವಾದ ‘ಕವಿರಾಜಮಾರ್ಗ’ ಒಮ್ಮೆಯೂ ಬಂದಿಲ್ಲ. ಹಸ್ತಪ್ರತಿಗಳ ಶೀರ್ಷಿಕೆ ಹಾಗು ಗ್ರಂಥಾಂತ್ಯದ ಪುಷ್ಪಿಕೆಗಳಲ್ಲಿ ಮಾತ್ರ ಇದು ಕಾಣಬರುತ್ತದೆ. ಇದರ ಅರ್ಥವೇನು ? ಹೆಸರಿನಲ್ಲಿ ‘ರಾಜ’ ಪದ ಪ್ರವಿಷ್ಟವಾದದ್ದೇಕೆ? ಕಾವ್ಯಮಾರ್ಗ, ಕವಿಮಾರ್ಗ ಎಂದರೂ ಸಾಕಾಗುವಾಗ ‘ಕವಿರಾಜ’ ಎನ್ನುವುದರಲ್ಲಿ ವಿಶೇಷ ಸೂಚನೆಯಿರಬೇಕಲ್ಲವೆ ? ಕವಿರಾಜ=ಕವೀಶ್ವರ=ಕವಿಶ್ರೇಷ್ಠ=ಮಹಾಕವಿ ಎಂದು ಸಾಮಾನ್ಯಾರ್ಥ ಗ್ರಹಿಸಿದರೆ ಆ ಪರ್ಯಾಯಗಳಲ್ಲಿ ಯಾವದೊಂದೂ ಗ್ರಂಥನಾಮವಾಗಬಹುದಿತ್ತೆಂಬ ಮಾತು ಉಳಿಯುತ್ತದೆ. ಇಲ್ಲಿ ರಾಜ=ನೃಪನೊಬ್ಬನ ಸೂಚನೆ ಉಂಟೆಂದು ಅಲ್ಲಗಳೆಯುವಂತಿಲ್ಲ.

೧೦) ಐ-೧೪೭ ರಲ್ಲಿ ‘ಸಮುಪಚಿತ-ನೃಪತುಂಗದೇವ-ಮಾರ್ಗ-ಕ್ರಮ-ಗಮನಾ ಭಿಮುಖರ್ಕಳಪ್ಪರ್ ಯಾರೋ ಅವರು ಕಾವ್ಯಾಶ್ರಮಪದವನ್ನು ನಿರಪಾಯವಾಗಿ ಎಯ್ದುವರೆನ್ನಲಾಗಿದೆ. ಈ ಗ್ರಂಥದಲ್ಲಿ ಉಕ್ತ ‘ಮಾರ್ಗP’ ‘ನೃಪತುಂಗ ದೇವಮಾರ್ಗ’ ಎಂದು ನಿರ್ದೇಶಿಸಲಾಗಿದೆ. ಇದು ಗಟ್ಟಿ ಮಾತು. ವಾದವಿಷಯವಲ್ಲ. ಇದೇ ಮಾತು II -೧೫೩ ಮತ್ತು II -೨೩೧ ರಲ್ಲೂ ಹೀಗೆಯೇ ಬಂದಿದೆ.

೧೧) I -೧೪೮ ರಲ್ಲಿ ‘ಅತಿಶಯಧವಳೋರ್ವಿಪೋದಿತಾಳಂಕೃತಿ…’ ಎಂದಿದೆ. ಇಲ್ಲಿ ‘ಉದಿತ’ ಎಂದರೆ ಸ್ವರಸವಾಗಿ ಸಂಸ್ಕೃತ ‘ವದ್’ ಧಾತುವಿನಿಂದ ನಿಷ್ಪನ್ನ ರೂಪವಾದ ಉದಿತ (=ಉಕ್ತ)ವೇ ಹೊರತು ‘ಉದ್+ ‘ಇ’ ಧಾತುವಿನಿಂದ ನಿಷ್ಪನ್ನ ರೂಪವಾದ ‘ಉದಿತ’ವಾಗದು. ಅದಕ್ಕೆ ‘ಉರ್ವಿಪೋಕ್ತ’ ಎಂದರ್ಥವೇ ಹೊರತು ‘ಉರ್ವಿಪನಿಂದ ಉದಯಿಸಿದ’ ಎಂದಲ್ಲ; ಒಂದುವೇಳೆ ಎರಡನೆಯದೇ ಸರಿಯೆಂದರೂ ಅದು ರಾಜನ ಕರ್ತೃತ್ವಕ್ಕೆ ಬಾಧಕವಲ್ಲ.

೧೨) I -೧೪೯ ರಲ್ಲಿ ‘ನೀತಿನಿರಂತರ-ಕ್ರಮಂ’ ಎಂದರೂ ನೀತಿನಿರಂತರನೆಂಬ ಬಿರುದುಳ್ಳ ರಾಜನ ಮಾರ್ಗ ಎಂದೇ ನೇರವಾದ ಅರ್ಥ.

೧೩) ‘ಶ್ರೀವಿಜಯ-ಪ್ರಭೂತ’-( I -೧೫೦) ಇದು ಗ್ರಂಥದ ನಡುವೆಯೆಲ್ಲೂ ಬಂದಿಲ್ಲ, ಪರಿಚ್ಛೇದದ ಕಡೆಯ ಪದ್ಯದಲ್ಲಿ ಮಾತ್ರ ಮುದ್ರಿಕೆಯ ಸ್ಥಾನದಲ್ಲಿ ಬಂದಿದೆ. ‘ಪ್ರಭೂತ’ ಎಂದರೆ ‘ಪ್ರಣೀತ’ವೆಂಬರ್ಥ ಯಾವ ಸಂಸ್ಕೃತ ಕೋಶದಲ್ಲೂ ಇಲ್ಲ. ‘ಘನೀಭೂತ’ ಎಂದರೆ ಘನಸ್ವರೂಪವನ್ನು ತಳೆದ ಎಂಬರ್ಥದಂತೆ ‘ಪ್ರಭೂತ’ ಎಂದರೆ ‘ಸ್ವರೂಪವಾದ’ ಎಂದು ಸಾಮಾನ್ಯಾರ್ಥ; ‘ಪ್ರಭೂತಂ ಪ್ರಚುರಂ ಪ್ರಾಜ್ಯಂ’ ಎಂಬ ಅಮರಕೋಶವಚನದಂತೆ ‘ಪ್ರಚುರ’ ಎಂಬುದು ಮತ್ತೊಂದರ್ಥ. ‘ಹಿಮವತೋ ಗಂಗಾ ಪ್ರಭವತಿ’ ಎಂಬಂತಾದರೆ ಹಿಮವತ್ಪ್ರಭೂತಗಂಗಾ ಎಂದರೆ ಹಿಮಾಚಲದಲ್ಲಿ ಹುಟ್ಟಿದ, ಜನ್ಮವೆತ್ತ ಎಂಬಂತೆ ಶ್ರೀವಿಜಯನಿಂದ ಸಂಭೂತ ಎಂದಷ್ಟೇ ಅರ್ಥ. ಇವುಗಳಲ್ಲಿ ಯಾವ ಅರ್ಥವನ್ನಿಟ್ಟುಕೊಂಡರೂ ಬೇಕೆಂದೇ ಕವಿ ಉದ್ದೇಶಪೂರ್ವಕವಾಗಿ ‘ಪ್ರಣೀತ’ ಎಂದು ವಾಚ್ಯವಾಗಿ ಹೇಳಿಲ್ಲವೆಂಬುದನ್ನು ಒಪ್ಪಬೇಕಾಗುತ್ತದೆ. ಇದೇ ಮಾತು ಎರಡನೆಯ ಪರಿಚ್ಛೇದಾಂತ್ಯಪದ್ಯದ ಕಡೆಯ ಸಾಲಲ್ಲಿ ಮಾತ್ರ ಬರುವ ‘ಶ್ರೀ ವಿಜಯಪ್ರಭೂತಮುದಮಂ’ ಎಂಬುದಕ್ಕೂ ತದ್ವತ್ತಾಗಿ ಅನ್ವಯಿಸುತ್ತದೆ. ಗ್ರಂಥಾಂತ್ಯದ ‘ಪರಮಶ್ರೀವಿಜಯಪ್ರಭೂತಿಜಯಶಂ’ ಎಂಬುದಕ್ಕೂ ಹಾಗೆಯೇ. ಈ ಮೂರೂ ಸಂದರ್ಭಗಳಲ್ಲಿ ‘ಹೆಚ್ಚಿನ ವಿಜಯ ಲಭಿಸಲಿ’ ಎಂಬುದರ ಪರ್ಯಾಯವಾಗಿ ಶ್ರೀ ಮತ್ತು ವಿಜಯ ಶಬ್ದಗಳನ್ನು ಅಂಕಿತವಾಗಿ ಬಳಸಿರಬಹುದಾದ ಶಕ್ಯತೆ ಯಾರೇನು ವಾದಿಸಿದರೂ ತಪ್ಪುವಂತಿಲ್ಲ. ಅದನ್ನು ರೂಢನಾಮವನ್ನಾಗಿ ಅರ್ಥಯಿಸಲು ಯಾವ ತೊಂದರೆಯೂ ಇಲ್ಲ. ಶ್ರೀವಿಜಯನೆಂಬೊಬ್ಬ ಕವಿಯ ಹೆಸರು ನಮಗೆ ಬೇರೆ ಕಾರಣಗಳಿಂದ ಗೊತ್ತಾಗದೆ ಹೋಗಿದ್ದರೆ ಇಲ್ಲಿ ವ್ಯಕ್ತಿಪರವಾದ ಅರ್ಥಪ್ರಸಕ್ತಿಯೇ ಬೀಳುತ್ತಿರಲಿಲ್ಲವೇನೋ. ಇರಲಿ, ಮೂರೂ ಪರಿಚ್ಛೇದಗಳ ಆದಿಶ್ಲೋಕದಲ್ಲೂ ‘ಶ್ರೀ’ಕಾರ ಸಂಯೋಜಿತವಾಗಿ ಬಂದಿರುವುದು ಗಮನಾರ್ಹ. ಅದು ಮಂಗಳಾರ್ಥವಾಗಿ ಬೇಕೆಂದೇ ಪ್ರಯುಕ್ತವಾಗಿದೆಯೆನ್ನಬೇಕೇ ಹೊರತು ಕಾಕತಾಲೀಯವೆನ್ನುವಂತಿಲ್ಲ. ಅದೇ ಮಾತೇ ಪರಿಚ್ಛೇದಾಂತ್ಯಪದ್ಯಕ್ಕೂ ಅನ್ವಯಿಸುವುದು ಸಹಜವಾಗಿಯೇ ಇದೆ.

೧೪) ಗ್ರಂಥಾಂತ್ಯ ಪುಷ್ಪಿಕೆಗಳಲ್ಲಿ ‘ನೃಪತುಂಗದೇವಾನುಮತ’ ಎಂದಿಷ್ಟೇ ಇದೆ; ‘ನೃಪತುಂಗದೇವ-ಪ್ರಣೀತ’ ಎಂದಿಲ್ಲ. ಅಷ್ಟೇ ಅಲ್ಲ, ‘ಶ್ರೀವಿಜಯಪ್ರಣೀತ’ ಎಂದೂ ಎಲ್ಲೂ ಇಡಿಯ ಗ್ರಂಥದಲ್ಲಿಯೇ ಹೇಳಿಲ್ಲ. ರಾಜನು ತನ್ನ ಮರ್ಯಾದೆ ಕಾಯ್ದುಕೊಳ್ಳಲು ಅನುಮತ=ಅನುಗೃಹೀತ=ಅಂಗೀಕರಿಸಿ ಪ್ರಕಟಪಡಿಸಿದ ಅಥವಾ ಉಪಕಾರಮಾಡಿದ ಎಂಬಂತಹ ಪುಷ್ಪಿಕೆಯನ್ನು ಬರೆಸಿರಬಹುದೆ ? ಇದೇ ಒಂದು ದೊಡ್ಡ ಯಕ್ಷಪ್ರಶ್ನೆ. ಇಂತಹ ಸಮಸ್ಯೆ ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿ ಮತ್ತೆಲ್ಲಿಯೂ ಬಂದ ಉದಾಹರಣೆಯಿದ್ದಂತಿಲ್ಲ. ‘ಮಹಾಸ್ವಾಮಿಯವರು ಅಪ್ಪಣೆಕೊಡಿಸಿದ’ ಎಂಬ ಪರ್ಯಾಯೋಕ್ತದ ತಾತ್ಪರ್ಯ ಈ ‘ಅನುಮತ’ಕ್ಕೆ ಇರಲಾರದೆ? ಎಂಬುದನ್ನು ಅರಮನೆಯ ನಡೆವಳಿಕೆ ಬಲ್ಲವರು ತೀರ್ಮಾನಿಸಬೇಕು.

೧೫) ರಾಜರು ಎಲ್ಲ ಮತಗಳಲ್ಲೂ ಸಮಾನ ಸಹಾನುಭೂತಿಯಿಟ್ಟಿರುವುದು ಇತಿಹಾಸ ಪ್ರಸಿದ್ಧ. ಇದರಿಂದ ಏನನ್ನೂ ಸಾಧಿಸಲು ಬರುವುದಿಲ್ಲ.

೧೬) ಮೂರನೆಯ ಪರಿಚ್ಛೇದದಲ್ಲಿ ‘ನೃಪತುಂಗ-ಸುಭಾಸದ’ನೊಬ್ಬನ ವರ್ಣನೆ ಮೇಲಿಂದ ಮೇಲೆ ಬಂದಿದೆ (III -೨೦೪, ೨೦೬, ೨೧೮, ೨೩೧). ಇದಕ್ಕೆ ಔಚಿತ್ಯವೇನು? ಇದು ನಿಜವಾಗಿಯೂ ವಿಚಾರಣೀಯ. ರಾಜನೇ ಲೇಖಕನಾದರೆ ಆಸ್ಥಾನಿಕನನ್ನು ಹೊಗಳುವನೆ ? ಆಸ್ಥಾನಿಕನೇನೋ ರಾಜನನ್ನು ಹೊಗಳಬಹುದು. ಆದರೆ ಅದರ ವಿಪರ್ಯಯ ಅದೃಷ್ಟಪೂರ್ವ.

ಬಾಹ್ಯ ಪ್ರಮಾಣಗಳು:

ಊಹಾರಾಜ್ಯವನ್ನು ಅದಷ್ಟು ದೂರವಿರಿಸಿಕೊಂಡು ಅಂತರ ಪ್ರಮಾಣವನ್ನು ವಿವೇಚಿಸಿದೊಡನೆ, ಬಾಹ್ಯಪ್ರಮಾಣಗಳನ್ನೂ ಅದೇ ರೀತಿ ಈಗ ಪರಿಶೀಲಿಸುವುದು ಕ್ರಮಪ್ರಾಪ್ತವಾಗಿದೆ-

೧. ಕವಿರಾಜಮಾರ್ಗಗ್ರಂಥವನ್ನು ಹೆಸರೆತ್ತಿ ಯಾರೊಬ್ಬರೂ ಮುಂದಿನವರು ಉಲ್ಲೇಖಿಸಿಲ್ಲ. ಏಕೆಂದರೆ ‘ಕಾವ್ಯಾವಲೋಕನ’ದಲ್ಲಿ ಬರುವ ‘ಕವಿರಾಜಮಾರ್ಗ’ ಶಬ್ದ ಕಾಕತಾಲೀಯವೆನ್ನಲು ಆಸ್ಪದವಿದೆ.

೨. ‘ನೃಪತುಂಗಗ್ರಂಥ’ವೆಂದು ಇದನ್ನು ಭಟ್ಟಾಕಳಂಕನು ತನ್ನ ಶಬ್ದಾನು ಶಾಸನವ್ಯಾಖ್ಯಾನದಲ್ಲಿ (ಸೂ. ೨೮೮) ಹೆಸರಿಸಿದ್ದಾನೆ.

೩. ಪ್ರೊ. ಡಿ. ಕೆ. ಭೀಮಸೇನರಾಯರಿಗೆ ದೊರೆತ ‘ಶಬ್ದಮಣಿದರ್ಪಣ’ದ ಪ್ರಾಚೀನ ಪ್ರತಿಯೊಂದರಲ್ಲಿ ಅದರ ವ್ಯಾಖ್ಯಾಕಾರನು ಒಮ್ಮೆ “ನೃಪತುಂಗದೇವನ ಮತದಿಂ ಪೇಱ್ವೆಂ” ಎಂದೂ ಇನ್ನೊಮ್ಮೆ “ಶ್ರೀವಿಜಯನ ಪ್ರಯೋಗ” ಎಂದು ಉಲ್ಲೇಖಿಸಿ ಕವಿರಾಜಮಾರ್ಗದ ಪದ್ಯಗಳನ್ನು (II -೨೮ ಮತ್ತು II -೫) ಉದಾಹರಿಸಿದ್ದಾನೆ. ಇದರ ಮರ್ಮವೇನು? ನಮಗೆ ಇಂದಿರುವ ಗೊಂದಲವೊಂದೂ ಇಲ್ಲದ ಆತನ ಮನಸ್ಸಿನಲ್ಲಿ ಶ್ರೀವಿಜಯನೇ ನೃಪತುಂಗನೆಂಬ ಭಾವನೆಯಿದ್ದಿರಬಹುದೇನೋ !

೪. ಆದರೆ ನೃಪತುಂಗನಿಗೆ ಶ್ರೀವಿಜಯನೆಂಬ ಬಿರುದಾಗಲಿ ಕಾವ್ಯನಾಮವಾಗಲಿ ಇದ್ದುದಕ್ಕೆ ಒಂದಾದರೂ ಪ್ರಮಾಣವಿಲ್ಲ. ಶಾಸನಗಳಾಗಲಿ, ಅವನು ಬರೆದನೆನ್ನುವ ‘ಪ್ರಶ್ನೋತ್ತರ-ರತ್ನ ಮಾಲಿಕೆ’ಯಾಗಲೀ ಈ ಅಂಶವನ್ನು ಸಮಥಿಸುವುದಿಲ್ಲ.

೫.        “ಶ್ರೀವಿಜಯರ ಕವಿಮಾರ್ಗಂ

ಬಾವಿಪ ಕವಿಜನದ ಮನಕೆ ಕನ್ನಡಿಯಂ ಕೈ-

ದೀವಿಗೆಯುಮಾದುವದಱ*ಂ

ಶ್ರೀವಿಜಯರ್ ದೇವರವರನೇವಣ್ಣಿಪುದೋ”

ಎಂದು ದುರ್ಗಸಿಂಹನು ‘ಕರ್ಣಾಟಕ-ಪಂಚತಂತ್ರ’ದಲ್ಲಿ (I-೨೧) ಹೇಳಿರುವುದು ಈ ಗ್ರಂಥವನ್ನೇ ಕುರಿತಂತಿದೆ, ನಿಜ. ಆದರೆ ಇದೇ ಗ್ರಂಥವೆಂದು ಶಪಥಮಾಡುವುದು ಹೇಗೆ? ಅದು ಈಗಾಗಲೇ ನಾವು ನೋಡಿದ ಸಮಂತಭದ್ರ, ಕವಿಪರಮೇಷ್ಠಿ, ಪೂಜ್ಯ ಪಾದಾದಿಗಳ ರಚನೆಯೂ ಆಗಿರಬಹುದು. ಈ ಪದ್ಯದಲ್ಲಿ ಅವನು ‘ಕನ್ನಡ ಕವಿಜನಕೆ’ ಎಂದು ಹೇಳಿಯೇ ಇಲ್ಲ. ಇದರ ಹಿಂದಿನದಾದ ೨೦ನೆಯ ಪದ್ಯ ಸಂಸ್ಕೃತ ದಂಡಿಕವಿಯ ಪಾಂಡುರ-ಯಶೋವರ್ಣನೆಗೇ ಮೀಸಲಾಗಿದೆ. ಅದಕ್ಕೂ ಹಿಂದಿನ ಪದ್ಯಗಳೂ ಎಲ್ಲ ಸಂಸ್ಕೃತ ಕವಿಗಳನ್ನೇ ಕುರಿತವು. ಆದರೆ ಮುಂದಿನದು ಮಾಳವೀಮಾಧವವನ್ನು ಕನ್ನಡದಲ್ಲಿ ಬರೆದಿರಬಹುದಾದ ಕನ್ನಮಯ್ಯನನ್ನು ಕುರಿತಿದೆ. ಹೀಗೆ ಸಂದರ್ಭವೊ ಇದಮಿತ್ಥಮೆಂದು ಹೇಳುವಷ್ಟು ನಿರ್ಣಾಯಕವಾಗಿಲ್ಲ. ಇದೇ ದುರ್ಗಸಿಂಹನೇ ಸ್ವಲ್ಪ ಮುಂದಿನ ೨೫ನೆಯ ಪದ್ಯದಲ್ಲಿ ‘ಮಾರ್ಗದ್ವಯಪರಿಣತ-ಕವಿಮಾರ್ಗ ಮನೋಹಾರಿ’ಯೆಂದು ಪಂಪನ ಪೆಂಪನ್ನು ಹೊಗಳಿದ್ದಾನೆ. ಇಲ್ಲಿ ಮಾರ್ಗಶಬ್ದಕ್ಕೆ ಸಾಮಾನ್ಯಾರ್ಥವೇ ಇದೆಯೆಂಬುದು ನಿಸ್ಸಂಶಯ. ರನ್ನನು ‘ಅಜಿತಪುರಾಣ’ದಲ್ಲಿ ‘ಕವಿಮಾರ್ಗದೊಳೊಖ್ಖಾಣಿಪ, ಠವಣಿಪ, ಕಮ್ಮೈಸುವ…’ (I-೮೩) ಎನ್ನುವಾಗಲೂ ‘ಕವಿಮಾರ್ಗದೊಳೊಳ ಪೊಕ್ಕುಂ ನವರಸಮಂ ತೆಱೆಯೆ ನುಡಿಸಿದನೆನಿಪ ಕವಿ’ (I-೮೩) ಎನ್ನುವಾಗಲೂ ಇದೇ ಸಾಮಾನ್ಯಾರ್ಥವೇ ಇದೆ. ಆದ್ದರಿಂದ ದುರ್ಗಸಿಂಹನ ಮಾತು ತನ್ನಷ್ಟಕ್ಕೇ ನಿರ್ಣಾಯಕವೆನ್ನುವಂತಿಲ್ಲ, ವಿಶಿಷ್ಟಾರ್ಥ ಸಾಧನೆಗೆ ಹೊರಟರು.

ಇದರಲ್ಲಿ ವಿದ್ವಾಂಸರು ಅಷ್ಟಾಗಿ ಗಮನಿಸದೆ ಇರುವ ಒಂದು ತುಂಬಾ ಮುಖ್ಯವಾದ ಅಂಶವಿದೆ. ಅದು “ಶ್ರೀವಿಜಯರ್ ದೇವರ್” ಎಂದು ದುರ್ಗಸಿಂಹನು ಮತ್ತೆ ನಾಲ್ಕನೆಯ ಪಾದದಲ್ಲಿ ಮಾಡಿಕೊಟ್ಟಿರುವ ವಿವರಣೆ. ಶ್ರೀವಿಜಯ ಎಂಬಾತ ಹಿಂದಿನ ಪದ್ಯಗಳ ದಂಡಿ, ಧನಂಜಯ ಮುಂತಾದವರಂತಾಗಲಿ ಇಲ್ಲವೆ ಮುಂದಿನ ಪದ್ಯಗಳ ಕನ್ನಮಯ್ಯ, ಅಸಗ, ಮನಸಿಜ ಮುಂತಾದವರಂತಾಗಲಿ ಏಕವಚನ ಪ್ರಯೋಗಾರ್ಹನಲ್ಲ; ಅವನು ಬಹುವಚನಕ್ಕೆ ಮಾತ್ರ ಅರ್ಹನಾದ ಪೂಜ್ಯ. ಅವನ ಪೂಜ್ಯತೆ ಬರಿಯ ಗ್ರಂಥರಚನೆಯಿಂದಾದುದಲ್ಲ. ಜೈನ ಶಾಸನಗಳನ್ನು ಓದಿದವರಿಗೆಲ್ಲ ಮುನಿಗಳನ್ನು ಮಾತ್ರ “ದೇವರ್” ಎಂದು ಬಹುವಚನದಿಂದ ಸಂಬೋಧಿಸುವ ಪರಂಪರೆ ಸುವಿದಿತ. ಆದ್ದರಿಂದ ದುರ್ಗಸಿಂಹನಿಂದ ಸುತ್ತನಾದ ಶ್ರೀವಿಜಯ ಕೇವಲ ಗ್ರಂಥಕಾರನಷ್ಟೇ ಆಗಿರದೆ ಜೈನರ ಗುರುಪರಂಪರೆಯಲ್ಲಿ ಒಬ್ಬ ವಿಖ್ಯಾತನಾದ ಮುನಿವರ್ಯನೆನಿಸಿರಬೇಕೆಂದು ಸಕಾರಣವಾಗಿ ಊಹಿಸಬಹುದು. – III -೨೨೪ ರಲ್ಲಿ ಇಲ್ಲಿಯೇ ಇವನಿಗೆ ಉಕ್ತವಾಗಿರುವ ‘ಮಹಾ-ಪುರುಷವ್ರತ-ನಿಶ್ಚಿತಂ’ ಎಂಬ ವಿಶೇಷಣಕ್ಕೆ ಪ್ರೊ. ಎಂ. ವಿ. ಸೀತಾರಾಮಯ್ಯನವರು ಹೇಳುವ ‘ನೈಷ್ಠಿಕ-ಬ್ರಹ್ಮಚರ್ಯವ್ರತ’ ಎಂಬ ಅರ್ಥವೂ ಶ್ರೀವಿಜಯನು ಮುನಿಯೆಂದು ಭಾವಿಸಿದಾಗಲೇ ಹೆಚ್ಚು ಅರ್ಥಪೂರ್ಣವಾಗುತ್ತದೆ. ಇದಕ್ಕೆ ಪೋಷಕವಾಗಿ ಜಿನಸೇನನು ತನ್ನನ್ನು ‘ಅಖಂಡಿತ ಬ್ರಹ್ಮವ್ರತ’ನೆಂದು ವಿಶೇಷಿಸಿಕೊಂಡು ಹೇಳಿರುವ ಒಂದು ಮಾತನ್ನು ಇಲ್ಲಿ ಹೇಳಬಹುದಾಗಿದೆ. ಆದರೆ ಇಲ್ಲೇ ಶ್ರೀರಾಮನನ್ನು ಕುರಿತು M-೧೮೯ ರಲ್ಲಿ ‘ಪುರುಷವ್ರತೋಚಿತಂ ವೀರರಸಂ’ ಎಂಬಾಗಲೂ ಈ ಅರ್ಥ ಅನುಗತವಾಗುವುದೇ ? ಇದನ್ನು ಸರಿಯಾಗಿ ಮನದಂದರೆ ಶಾಸನಸಾಹಿತ್ಯದಲ್ಲಿ ಬರುವ ಮುನಿಗಳಲ್ಲದ ಶ್ರೀವಿಜಯರಿಗೂ ಕವಿಮಾರ್ಗಕಾರನಿಗೂ ದುರ್ಗಸಿಂಹನು ಸಂಬಂಧ ಕಲ್ಪಿಸಿಲ್ಲವೆಂಬುದು ತಾನೇ ಸ್ಪಷ್ಟವಾಗುವುದು. ಹೀಗೆ ಕವಿ ರಾಜಮಾರ್ಗದ ಸಂಬಂಧವಿಲ್ಲದ ಅನೇಕ ಶ್ರೀವಿಜಯರು ಸಾಹಿತ್ಯಚರಿತ್ರೆಯಲ್ಲಿ ದೊರೆಯುತ್ತಾರೆ. ಸಂಬಂಧವುಳ್ಳವರು ಯಾರಿರಬಹುದು ಯಾರಲ್ಲವೆಂಬ ಸೂಕ್ಷ್ಮ ವಿವೇಚನೆ ಅವಶ್ಯ-

I. ಸಂಸ್ಕೃತ ಯಶೋಧರಚರಿತೆಯನ್ನು ಬರೆದ ವಾದಿರಾಜ ದುರ್ಗಸಿಂಹನ ಸಮಕಾಲೀನ; ಅವನಿಗೆ ಷಟ್ತರ್ಕಷಣ್ಮುಖ, ಕವಿ-ಗಮಕಿ-ವಾದಿ-ವಾಗ್ಮಿ-ಪ್ರವರ ಮುಂತಾದ ಬಿರುದುಗಳಿದ್ದುವು. ಅವನೇ ನಾಗವರ್ಮನ ‘ವರ್ಧಮಾನಪುರಾಣ’ವನ್ನು ತಿದ್ದಿಕೊಟ್ಟವನು – “ಶೋಧಿಸಿದರ್ ಸಲೆ ವಾದಿರಾಜ-ಪಂಡಿತರೆನೆ” (ಐ-೨೧), ಎಂದು ಹೇಳಿರುವಂತೆ, ಅವನೇ ದುರ್ಗಸಿಂಹನ ಪಂಚತಂತ್ರವನ್ನೂ ತಿದ್ದಿಕೊಟ್ಟಿರುವ ಸಾಧ್ಯತೆಯಿದೆ. ಲಿಪಿಕಾರರ ತಪ್ಪಿನಿಂದ ಈಗಿನ ಪಾಠ ‘ವಾದಿ’ ಬದಲು “ಮಾಡಿ” ಆಗಿ ಹೋಗಿದೆ. ಏಕೆಂದರೆ ಜಗದೇಕಮಲ್ಲ ಜಯಸಿಂಹನ ಆಸ್ಥಾನದಲ್ಲಿ ಮನ್ನಣೆಪಡೆದ ಪ್ರಸಿದ್ಧಿ ಪೂರ್ವೋಕ್ತ ವಾದಿರಾಜನಿಗಿರುವಂತೆ ಮಾದಿರಾಜನಾವನಿಗೂ ಇಲ್ಲ. ದುರ್ಗ ಸಿಂಹನ ಪದ್ಯವಿದು-

ಕವಿ ಗಮಕಿ ವಾದಿ ವಾಗ್ಮಿ

ಪ್ರವರರ್ ಶ್ರೀ ವಾದಿರಾಜ (ಮುದ್ರಿತ ಅಪಪಾಠ-ಮಾದಿರಾಜ)

ಮುನಿಪುಂಗವರು-೧

ತ್ಸವದಿಂ ತಿರ್ದಿದರೆನೆ ಭೂ

ಭುವನದೊಳಿದನೆೞ್ದು ಕೊಂಡುಕೊನೆಯದರೊಳರೇ ||

(ಪಂಚತಂತ್ರ ಐ-೨೮)

ಈ ವಾದಿರಾಜರ ಗುರುಪರಂಪರೆಯಲ್ಲಿ ಇವರಿಗೆ ಮುಂಚೆ ಶ್ರೀವಿಜಯ ಶಾಂತಿ ದೇವರೆಂಬೊಬ್ಬರು ಕನಕಸೇನ ವಾದಿರಾಜರೆಂಬೊಬ್ಬರು ಗುರುಗಳು ಶಾಸನೋಲ್ಲೇಖಗಳಲ್ಲಿ ಕಾಣಬರುತ್ತಾರೆ. ಇವರೆಲ್ಲ ಹೆಚ್ಚಾಗಿ ಹತ್ತನೆಯ ಶತಮಾನಕ್ಕಿಂತ ಹಿಂದಿನವರಾಗಿಲಾರರು.

II. ಆಶಾಧರನು ತನ್ನ ‘ಆರಾಧನಾ-ದರ್ಪಣ’ದಲ್ಲಿ ಅಪರಾಜಿತ ಅಥವಾ ಶ್ರೀವಿಜಯನೆಂಬಾತನನ್ನು ಮತ್ತೆ ಮತ್ತೆ ಉಲ್ಲೇಖಿಸಿದ್ದಾನೆ; ಮತ್ತು ಸಂಸ್ಕೃತದ ‘ಧರ್ಮಾಮೃತ’ದ ಟೀಕೆಯಲ್ಲಿ-

“ಏತಚ್ಛ ಶ್ರೀವಿಜಯಾಚಾರ್ಯ-ವಿರಚಿತ-ಸಂಸ್ಕೃತಮೂಲಾರಾಧನ ಟೀಕಾಯಾಂ

ಸುಸ್ಥಿತಸೂತ್ರೇ ವಿಸ್ತರತಃ ಸಮರ್ಥಿತಂ ದ್ರಷ್ಟವ್ಯಮ್”

ಎಂದಿದ್ದಾನೆ. ಶ್ರೀವಿಜಯನೇ ಇದರ ಒಂದು ಗಾಥೆಯ ತನ್ನ ಟೀಕೆಯಲ್ಲಿ-

“ದಶವೈಕಾಲಿಕ ಟೀಕಾಯಾಂ ವಿಜಯೋದಯಾಯಾಂ ಪ್ರಪಂಚಿತಾ ಉದ್ಗಮಾದಿ

ದೊಷಾ ಇತಿ ನೇಹ ಪ್ರತನ್ಯತೇ”

ಯದ್ವಿದ್ಯಾತಪಸೋಃ ಪ್ರಶಸ್ತಮುಭಯಂ ಶ್ರೀ ಹೇಮಸೇನೇ ಮುನೌ

ಪ್ರಾಗಾಸೀತ್ ಸುಚಿರಾಭಿಯೋಗಬಲತೋ ನೀತಂ ಪರಾಮುನ್ನತಿಂ |

ಪ್ರಾಯಃ ಶ್ರೀವಿಜಯೇ ತದೇತದಖಿಲಂ ತತ್ಪೀಠಿಕಾಯಾಂ ಸ್ಥಿತೇ

ಸಂಕ್ರಾಂತಂ ಕಥಮನ್ಯಥಾನತಿಚಿರಾದ್ವಿದ್ಯೇಯ ಮೀದೃಕ್ ತಪಃ ||

ಅಲ್ಲೇ, ಪು.೧೦೯

ಎಂದಿದ್ದಾನೆ. ಈ ‘ದಶವೈಕಾಲಿಕ’ ಒಂದು ಪ್ರಸಿದ್ಧ ಶ್ವೇತಾಂಬರ ಸೂತ್ರಗ್ರಂಥ. ಈ ಶ್ರೀವಿಜಯಾಚಾರ್ಯನು ಕನ್ನಡದಲ್ಲಿ ಕವಿಯೆಂದು ಹೇಳುವ ಯಾವ ಆಧಾರವೂ ಇಲ್ಲ.

iii. ಹೊಂಬುಚದ ಪಂಚಬಸದಿಯ ಶಾಸನಗಳಲ್ಲಿ ಶ್ರೀವಿಜಯ ಪಂಡಿತನೆಂಬಾತನು (ಒಡೆಯದೇವನೆಂದು ಇವನ ನಾಮಾಂತರ) ಉಕ್ತನಾಗಿದ್ದಾನೆ. ನನ್ನಿಶಾಂತರ ಮತ್ತು ಚಟ್ಮಲದೇವಿಯರು ಇವನ ಶಿಷ್ಯರೆಂದಿರುವ ಕಾರಣ ಇವನೂ ಕವಿರಾಜಮಾರ್ಗಕ್ಕಿಂತ ತುಂಬಾ ಅರ್ವಾಚೀನನಾಗುತ್ತಾನೆ.

iv. ಕ್ರಿ.ಶ. ೭೯೩ ಎನ್ನಲಾಗಿರುವ ಮಣ್ಣೆ ತಾಮ್ರಶಾಸನವೊಂದರಲ್ಲಿ ಸಾಮನ್ತ ಸೇನಾಧಿಪತಿಯಾದ ಒಬ್ಬ ಶ್ರೀವಿಜಯನ ಕಾವ್ಯಮಯವಾದ ವರ್ನನೆಯಿದೆ; ಅವನು ಜಿನಾಲಯವನ್ನು ಕಟ್ಟಿಸಿದ ಮಹಾನುಭಾವನೆಂದು ಹೊಗಳಲಾಗಿದೆ. ಇವನನ್ನು ವಿಶೇಷತಃ “ಅಗ್ರಣೀ ರಸಿಕಾನಾಂ, ಸ್ರಷ್ಟಾ ಕಾವ್ಯರಚನಾನಾಂ” ಎಂದು ಬಣ್ಣಿಸಲಾಗಿದೆ. ಮೇಲ್ನೋಟಕ್ಕೆ ಈತನೇ ಇರಬಹುದೆನಿಸಿದರೂ ಇವನು ಮುನಿಯಲ್ಲದ ಪ್ರಯುಕ್ತ ಕವಿ ಮಾರ್ಗಕಾರನಾಗಿರಲಾರನೆಂದು ತೀರ್ಮಾನಿಸಬಹುದು.

v. ‘ವರ್ಧಮಾನಪುರಾಣ’ದ ಆರಂಭದಲ್ಲಿಯೇ ೨ನೆಯ ಪದ್ಯದಲ್ಲಿ ನಾಗವರ್ಮನು ಸ್ತುತಿಸುವ ಶ್ರೀವಿಜಯ-

ಅಘ-ವಿಘಟನ-ಕಾರಣಮಂ

ಅಘಟಿತ-ಪದಬಂಧ-ಬಂಧುರಾಳಂಕೃತಿಯಂ |

ಲಘುವಾಗೆ ಪೊಗಱೆ ಪೇೞ್ದಂ

ರಘುವಂಶ ಮಹಾಪುರಾಣಮಂ ಶ್ರೀವಿಜಯಂ ||

‘ರಘುವಮಶ’ವೆಂಬ ಜೈನ ಮಹಾಪುರಾಣವನ್ನು ರಚಿಸಿದಾತನು ಮಹಾಕವಿಯಾಗಿದ್ದಿರಬೇಕು. ಕವಿರಾಜಮಾರ್ಗದೊಡನೆ ಸಂಬಂಧಪಟ್ಟೂ ಇರಬೇಕೆ ? ಈ ಹೊಸ ವಿಚಾರ ಈಚೆಗೆ ಮಾತ್ರ ಬೆಳಕಿಗೆ ಬಂದಂತಾಗಿದೆ. ಕವಿರಾಜಮಾರ್ಗದೊಡನೆ ಇವನನ್ನು ಸಂಬಂಧಿಸಿ ಹೇಳುವುದಕ್ಕೆ ಯಾವ ಸ್ಪಷ್ಟ ಆಧಾರವೂ ಆ ನಾಗವರ್ಮನಿಂದ ಉದಾಹೃತವಾದ ಪದ್ಯದಲ್ಲಿ ಇಲ್ಲ. ರಾಜವರ್ಣನೆ, ಸ್ರೀ ವರ್ಣನೆ, ದಂಡಿಯ ಲಕ್ಷ್ಯಗಳ ಅನುವಾದಗಳನ್ನು ಹೊರತುಪಡಿಸಿದರೆ ‘ಕವಿರಾಜಮಾರ್ಗ’ದಲ್ಲಿ ರಾಮಕಥೆಗೆ ಸಂಬಂಧಿಸಿದ ಕೆಲವು ಉದಾಹರಣೆಗಳು ಬಂದಿವೆ. ಇವು ಇಲ್ಲಿ ಬಂದುದಕ್ಕೆ ಪೂರ್ವರಚಿತ ಜೈನ ರಾಮಾಯಾಣವೊಂದರಿಂದ ಗ್ರಂಥಕಾರನು ಅವನ್ನಾಯ್ದಿರಬೇಕೆಂಬ ಒಂದು ಅಭಿಪ್ರಾಯ ಕೆಲವು ಸಂಶೋಧಕರಲ್ಲಿ ಮೊದಲಿಂದಲೂ ಇತ್ತು. ಈಗ ಅದನ್ನು ಕೈಬಿಟ್ಟು ಸ್ವರಚಿತ ಕಾವ್ಯಾಂತರದಿಂದಲೇ ಶ್ರೀವಿಜಯನು ಅವನ್ನು ಆಯ್ದ ಉಪಯೋಗಿಸಿರಬೇಕೆಂದು ಇನ್ನೊಂದು ಊಹೆ ಮಾಡಬೇಕಾಗುತ್ತದೆ. ‘ಕಾವ್ಯಾವಲೋಕನ’ದಲ್ಲೂ ಇಂತಹ ಅಪ್ರಸಿದ್ಧ ಪ್ರಾಚೀನ ಜೈನ ರಾಮಾಯಣ ಕಥಾತ್ಮಕ ಪದ್ಯಗಳು ಕೆಲವಿವೆ (I-೧೦೬, ೯೪೬ ಇತ್ಯಾದಿ). ಇವೂ ಶ್ರೀವಿಜಯನ ಗ್ರಂಥದಿಂದ ತೆಗೆದುವೇ ಆಗಿರಬಹುದು.

vi. ಆದರೆ ಸಾಹಿತ್ಯಚರಿತ್ರೆಯಲ್ಲಿ ಕಡೆಕಡೆಗೆ ಬಂದ ದೊಡ್ಡಯ್ಯ, ಮಂಗರಸ ಮುಂತಾದವರು ಚಂದ್ರಪ್ರಭಪುರಾಣವನ್ನು ಬರೆದನೆಂದು ಹೇಳುವ ಶ್ರೀವಿಜಯ ಇವನೇ ಎನ್ನಲು ಅಂತಸ್ಸಾಕ್ಷ್ಯವೇನೇನೂ ಇಲ್ಲ. ಅಲ್ಲದೆ ಪ್ರಸಿದ್ಧ ಸಂಸ್ಕೃತಕವಿ ವೀರ ನಂದಿ ‘ಚಂದ್ರಪ್ರಭ-ಚರಿತ’ವನ್ನು ಬರೆದುದೇ. ಕ್ರಿ.ಶ. ೧೦ನೆಯ ಶತಮಾನದಲ್ಲಿಯಾದ ಕಾರಣ ಅದಕ್ಕೂ ಮುಂಚೆ ಕನ್ನಡದಲ್ಲಿ ಈ ಪುರಾಣರಚನೆಯಾಗಿರುವ ಸಂಭಾವ್ಯತೆ ಕಡಿಮೆ. ರಾಮಕಥಾ ಪದ್ಯಗಳು ಕವಿರಾಜಮಾರ್ಗದಲ್ಲಿರುವಂತೆ ಚಂದ್ರಪ್ರಭಪುರಾಣದ ಕಥಾಭಾಗವನ್ನೊಳಗೊಂಡ ಒಂದೇ ಪದ್ಯವೂ ಇಲ್ಲ; ಮಿಕ್ಕ ವ್ಯಾಕರಣ, ಲಕ್ಷಣ, ಕೋಶ ಗ್ರಂಥಗಳಲ್ಲಿಯೂ ಸ್ಪಷ್ಟವಿಲ್ಲ.

vii. ಅನುಪಮಕವಿಯೆಂದು ಬಿರುದಿದ್ದ ಶ್ರೀವಿಜಯದಂಡನಾಥನೆಂಬೊಬ್ಬನನ್ನು ಬಣ್ಣಿಸುವ ಒಂದು ಕ್ರಿ.ಶ. ೯೧೫ರ ಶಾಸನ ಸಿಕ್ಕಿದೆ. ಇವನು ಪರಾಕ್ರಮಿಯೂ ‘ಅರಿವಿಂಗೋಜ’ನೂ ಆಗಿದ್ದರೂ ಜೈನಮುನಿಯಲ್ಲದಕಾರಣ ಕವಿರಾಜಮಾರ್ಗಕ್ಕೆ ಸಂಬಂಧಿಸಿದ ಶ್ರೀವಿಜಯನಾಗಿರಲಾರ.

viii. ಕೇಶಿರಾಜನೂ ಒಬ್ಬ ಶ್ರೀವಿಜಯನ ‘ಸುಮಾರ್ಗ’ವನ್ನು ತನ್ನ ವ್ಯಾಕರಣ ಸೂತ್ರಗಳಿಗೆ ಲಕ್ಷವೆಂದಿದ್ದಾನೆ. ಆದ್ದರಿಂದ ಅವನು ಪ್ರಕೃತ ಶ್ರೀವಿಜಯನಿರುವ ಸಂಭವವುಂಟು. ಅದರಂತೆ ‘ಧರ್ಮನಾಥಪುರಾಣ’ದಲ್ಲಿ ಮಧುರಕವಿ ಶ್ಲೇಷೆಯಿಂದ ‘ಸಭಾಮಧ್ಯಲಬ್ಧವರಂ ಶ್ರೀವಿಜಯಂ’ ಎನ್ನುವಾಗಲೂ ಇವನನ್ನೇ ಕುರಿತಿರ ಬಹುದು.

ವಿವೇಚನೆಯ ಸಾರಾಂಶ :

ಮೇಲಿನ ಅಂತರ ಹಾಗು ಆಹ್ಯ ಪ್ರಮಾಣಗಳ ನಿರ್ಲಿಪ್ತ ವಿವೇಚನೆಯಿಂದ ಮೂಡಿಬರುವ ಮಥಿತಾರ್ಥವಿಷ್ಟು-

೧. ‘ಕವಿಮಾರ್ಗ’, ‘ಕವಿರಾಜಮಾರ್ಗ’ ಎಂಬೆರಡು ಗ್ರಂಥಗಳಿದ್ದವೆಂಬ ಕಲ್ಪನೆಯೇ ಅಸಂಗತ. ಗ್ರಂಥವನ್ನೋದುವ ಯಾರಿಗೂ ಇಬ್ಬರ ಕೈವಾಡದ ಗುರುತ ಹತ್ತುವುದಿಲ್ಲ. ಶ್ರೀವಿಜಯನು ಬರೆದ ಕವಿಮಾರ್ಗವನ್ನು ನೃಪತುಂಗನು ಪರಿಷ್ಕರಿಸಿದನೆನ್ನುವುದು ಸಮಸ್ಯೆಗೆ ಪರಿಹಾರವೆಂದು ಒಂದು ತೇಪೆಹಾಕುವ ಆಧುನಿಕ ಯತ್ನವೆಂದೇ ಭಾಸವಾಗುತ್ತದೆ. ಮುಖ್ಯವಾಗಿ ಅಲಂಕಾರಗಳನ್ನು ಕುರಿತ ಗ್ರಂಥಕ್ಕೆ ಕವಿಮಾರ್ಗವೆಂಬುದು ಸಮುಚಿತ ಹೆಸರಾಗದು. ಪುಷ್ಪಿಕೆಯಲ್ಲಿ ‘ಕವಿರಾಜಮಾರ್ಗಾಲಂಕಾರಂ’ ಎಂದೇ ಪೂರ್ಣ ನಾಮಧೇಯವಿದೆ.

೨. ನೃಪತುಂಗನು ನೇರವಾಗಿ ‘ವಿರಚಿತ’, ‘ಪ್ರಣೀತ’ ಎಂದು ಪುಷ್ಪಿಕೆಯಲ್ಲೂ ಬರೆದುಬಿಟ್ಟಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಆ ಆರ್ಥ ಬರುವಂತೆ ಗ್ರಂಥದಲ್ಲಿ ಸಾಕಷ್ಟು ಪದ್ಯಗಳೇನೋ ಇವೆ. ಏಕೆ ಹೀಗೆ ಬರೆಯಲಿಲ್ಲ? ಈ ಪ್ರಶ್ನೆಗೆ ಅವನು ಗ್ರಂಥಕಾರನಾಗಿಲಾರನೆಂದೇ ತಾತ್ಪರ್ಯ ಹೇಳದೆ ಗತ್ಯಂತರವಿಲ್ಲ. ಅವನ ಆಸ್ಥಾನದ ಸಭಾಸದನೊಬ್ಬನು ರಾಜನ ಹೆಸರಿನಲ್ಲಿ ಗ್ರಂಥವನ್ನು ಬರೆದು ಪ್ರಕಟಿಸಿದ್ದಾನೆಂದು ಊಹಿಸುವುದು ಅನಿವಾರ್ಯವೆಂಬುದು ಬಹುಜನ ವಿದ್ವಾಂಸರ ಅಭಿಪ್ರಾಯವಾಗಿದೆ. ಅದನ್ನೊಪ್ಪುವಾಗ ಎರಡು ಅಂಶಗಳನ್ನು ಮರೆಯುವಂತಿಲ್ಲ. ಆ ಸಭಾಸದನು ರಾಜನೇ ಬರೆದಂತೆ ಭಾಸವಾಗಬೇಕೆಂಬ ಏಕೈಕ ಉದ್ದೇಶದಿಂದಲೇ ಗ್ರಂಥರಚನೆ ಮಾಡಿದ್ದಾನೆ; ನೇರವಾಗಿ ತನ್ನ ಹೆಸರನ್ನು ತಿಳಿಸಲು ಮನದಂದಿಲ್ಲ. ರಾಜನು ಸಭಾಸದನನ್ನು ನಾಲ್ಕಾರು ಪದ್ಯಗಳನ್ನು ಹೊಗಳುವುದು ಅಸಂಗತವಾದ್ದರಿಂದ ಇದು ಸಭಾಸದನ ಸ್ವರಚಿತ ಆತ್ಮಪ್ರಶಂಸೆಯೆಂದು ಭಾವಿಸುವುದೇ ಹೆಚ್ಚು ಸಮಂಜಸ.

೩. ‘ರಘುವಂಶಪುರಾಣ’ವನ್ನು ಬರೆದ ಮಹಾಕವಿ ಶ್ರೀವಿಜಯನೆನ್ನಲು ಪ್ರಬಲ ಪ್ರಮಾಣ ನಾಗವರ್ಮನಿಂದ ದೊರೆತಮೇಲೆ ಕವಿರಾಜಮಾರ್ಗದ ಪರಿಚ್ಛೇದಾಂತ್ಯಪದ್ಯಗಳ ‘ಶ್ರೀವಿಜಯ’ ಶಬ್ಧಕ್ಕೆ ಕವಿನಾಮಪರವಾದ ವಿಶಿಷ್ಟಾರ್ಥವನ್ನು ಶ್ಲೇಷೆಯಿಂದ ಕಲ್ಪಿಸುವುದು ಅಷ್ಟೇನೂ ಅಭಾಸವೆನಿಸದು. ಹಾಗೆ ಕಲ್ಪಿಸಿದೊಡನೆ ಧ್ವನಿಶಕ್ತಿಯಿಂದ ಅವನೇ ಗ್ರಂಥದ ಕರ್ತೃವೆಂಬುದೂ ಸೂಚ್ಯವಾಗುತ್ತದೆ. ವಾಚ್ಯವಲ್ಲದಿದ್ದರೂ. ಈ ಕಲ್ಪನೆಯಿಂದ ಗ್ರಂಥದಲ್ಲಿ ಬರುವ ರಾಮಾಯಣಕಥಾಗರ್ಭ ಲಕ್ಷ್ಯಗಳಿಗೂ ಹೆಚ್ಚಿನ ಉಪಪತ್ತಿ ದೊರೆಯುತ್ತದೆ. ಅವನು ಒಬ್ಬ ಮಹಾಕವಿಯಿದ್ದಂತೆ ಜೈನ ಮುನಿಪುಂಗವನೂ ಆಗಿದ್ದಿರಬೇಕು.

೪. ಹೀಗೆ ಶ್ರೀವಿಜಯನಿಂದ ರಚಿತವಾಗಿ ನೃಪತುಂಗನಿಗೆ ಆರೋಪಿತವಾದುದೆಂದು ಕವಿರಾಜಮಾರ್ಗದ ಕರ್ತೃತ್ವ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿ ವಿದ್ವಾಂಸರ ಬಹುಮತಕ್ಕೆ ತಲೆಬಾಗಿದರೂ, ಮುಂದೆ ಶ್ರೀವಿಜಯನೆಂಬ ಬಿರುದೋ ಅಂಕಿತವೋ ನೃಪತುಂಗನಿಗಿತ್ತೆಂದು ಸ್ಪಷ್ಟಪಡಿಸುವ ಹೊಸ ಆಧಾರಗಳು ದೊರೆತರೆ, ಈ ನಿರ್ಣಯ ಮತ್ತೆ ಬದಲಾಗುವ ಸನ್ನಿವೇಶವಿಲ್ಲದೆ ಇಲ್ಲ. ಏಕೆಂದರೆ ಅಮೋಘವರ್ಷ ನೃಪತುಂಗನ ರಾಜ್ಯದಲ್ಲೇ ಪ್ರಸಿದ್ಧ ಜೈನಾಗಮ ವ್ಯಾಖ್ಯೆಯಾದ ‘ಜಯಧವಲಾ’ ಗ್ರಂಥವನ್ನು ಬರೆದ ಜಿನಸೇನನು ಪುಷ್ಪಿಕೆಯಲ್ಲಿ-

“ಟೀಕಾ ಶ್ರೀಜಯಚಿಹ್ನಿತೋರುಧವಲಾ ಸೂತ್ರಾರ್ಥ ಸಂದ್ಯೋತನೀ |”

ಸ್ಥೇಯಾದಾರವಿಚಂದ್ರಮುಜ್ಜ್ವಲತಪಃಶ್ರೀಪಾಲಸಂಪಾಲಿತಾ ||

ಎಂದು ಮುಗಿಸಿರುವುದನ್ನು ನೋಡಿದಾಗ ಗ್ರಂಥಕ್ಕೆ ಕೊಟ್ಟ ‘ಚಿಹ್ನೆ’ ಅಥವಾ ಮುದ್ರಿಕೆಯೇ “ಶ್ರೀಜಯ” ಎಂಬುದು ಸ್ಪಷ್ಟವಾಗುತ್ತದೆ. ಈ ಪದ್ಧತಿಯನ್ನೇ ಅಲ್ಲಗಳೆಯಲು ಬಾರದು. “ಶ್ರೀಜಯ”ಕ್ಕೂ “ಶ್ರೀವಿಜಯ”ಕ್ಕೂ ಹೆಚ್ಚು ದೂರವಿಲ್ಲ. ಹೀಗಿರುವ ಕಾರಣ ಇದಮಿತ್ಥವೆಂಬ ಕಟ್ಟಕಡೆಯ ನಿಸ್ಸಂದಿಗ್ಧ ನಿರ್ಣಯಕ್ಕಾಗಿ ಇನ್ನೂ ನಾವು ಕಾಯಬೇಕಾಗಿಯೇ ಇದೆ. ಎಲ್ಲ ಪ್ರಮಾಣಗಳನ್ನೂ ಎರಡು ಮೂರು ರೀತಿಗಳಿಂದ ಅರ್ಥಯಿಸುವ ಶಕ್ಯತೆಯಂತೂ ಇನ್ನೂ ಇದ್ದೇ ಇದೆ. ‘ಕವಿರಾಜಮಾರ್ಗ’ವನ್ನು ನೃಪತುಂಗಗ್ರಂಥವೆನ್ನುವ ಪ್ರತೀತಿ ಇಂದಿನ ವಾದಿಗಳು ಯಾರೊಬ್ಬರೂ ಕಲ್ಪಿಸಿದ್ದಲ್ಲ; ಕನಿಷ್ಠಪಕ್ಷ ನಾಲ್ಕು ಶತಮಾನಗಳಷ್ಟಾದರೂ ಹಳೆಯದಾದ ಸಾಂಪ್ರದಾಯಿಕ ಪರಂಪರೆಯಿಂದ ಬಂದುದು. ಅಂತಿಮತೀರ್ಮಾನ ನಿಸ್ಸಂಶಯವಾಗಿ ದೊರೆಯುವವರೆಗೆ ಅದನ್ನು ನೃಪತುಂಗಗ್ರಂಥವೆಂದೇ ವ್ಯವಹರಿಸುತ್ತಹೋಗುವುದು ಕ್ಷೇಮಮಾರ್ಗವೆಂದು ಕೆಲವರು ಇಂದೂ ಭಾವಿಸಿದರೆ ಅದರಲ್ಲಿ ಪ್ರಮಾದವನ್ನಾರೋಪಿಸುವ ಪ್ರಮೇಯವೂ ಇಲ್ಲ. ಈಗ ಉಪಲಬ್ಧವಿರುವ ಪ್ರಮಾಣಗಳೊಂದೊಂದೇ ಏನನ್ನೂ ಸಾಧಿಸಲಾಗದಿದ್ದರೂ, ಒಟ್ಟಾಗಿ ಅವುಗಳನ್ನು ತೆಗೆದುಕೊಂಡಾಗ ಶ್ರೀವಿಜಯಪಕ್ಷದ ಸಾಧ್ಯತೆ ನೃಪತುಂಗಪಕ್ಷಕ್ಕಿಂತ ಸಬಲವೆನಿಸುವುದು ಮಾತ್ರ ನಿಜ. ಶ್ರೀವಿಜಯನು ಕವಿರಾಜಮಾರ್ಗಕಾರನೆಂಬುದು ನಮ್ಮ ಇಂದಿನ ಕಲ್ಪನೆಯೆಂಬುದು ಕೂಡ ಅಷ್ಟೇ ಸತ್ಯ; ಅದಕ್ಕೆ ಪೂರ್ವಿಕರ ಸಮರ್ಥನೆಯನ್ನು ತೋರಿಸುವುದು ಕೇವಲ ನಮ್ಮ ವ್ಯಾಖ್ಯಾಚಮತ್ಕಾರವಷ್ಟೇ. ಇದಕ್ಕಿಂತ ಹೆಚ್ಚಾಗಿ ಏನನ್ನೂ ಈಗ ಹೇಳಲು ಬರುವುದಿಲ್ಲ.

ಕವಿರಾಜಮಾರ್ಗದ ಮಹತ್ವ:

ಕನ್ನಡದ ಕಾವ್ಯಲಕ್ಷಣಚಿಂತನೆಗೆ ಮಾತ್ರವೇ ಅಲ್ಲದೆ, ಕನ್ನಡ ಭಾಷೆಯ ವ್ಯಾಕರಣ, ಛಂಧಸ್ಸುಗಳ ಶಾಸ್ತ್ರೀಯವಿವೇಚನೆಗೂ ಮೀಸಲಾಗಿರುವ ಈ ಆದ್ಯಗ್ರಂಥ ತಾನೇ ಕಾವ್ಯನಿರ್ಮಿತಿಯ ಒಂದು ಉತ್ತಮ ನಿದರ್ಶನವೂ ಆಗಿರುವುದು ಇದನ್ನು ಶಾಸ್ತ್ರದೃಷ್ಟಿ, ಕಾವ್ಯದೃಷ್ಟಿಗಳೆರಡರಿಂದಲೂ ಆದ್ವೀತಿಯವಾದ ಆದ್ಯಗ್ರಂಥವನ್ನಾಗಿಸಿದೆ. ಕನ್ನಡ ನಾಡಿನ ಪ್ರಾಚೀನ ಇತಿಹಾಸ, ಭೂಗೋಲ, ಸಾಮಾಜಿಕ-ಸಾಂಸ್ಕೃತಿಕ ಪರಿಸ್ಥಿತಿಗಳ ಸಂಶೋಧಕರಿಗೂ ಇದು ಪ್ರಮಾಣಭೂತವಾದ ಪ್ರಥಮ ಸಾಹಿತ್ಯಾಧಾರವೆನಿಸಿ ಖ್ಯಾತಿ ಪಡಿದಿದೆ. ಇದರ ವಿವರಗಳೆಲ್ಲ ಅತ್ಯಂತ ವಿಸ್ತ*ತವಾಗಿ ಈಗಾಗಲೇ ಪ್ರೊ. ರಂ. ಶ್ರೀ. ಮುಗಳಿ, ಪ್ರೊ. ಎಂ. ಎ. ಸೀತಾರಾಮಯ್ಯ ಮುಂತಾದ ವಿದ್ವಾಂಸರ ಗ್ರಂಥಗಳಲ್ಲಿಯೂ, ಈಚೆಗೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ‘ಕನ್ನಡ ಸಾಹಿತ್ಯ ಚರಿತ್ರೆ’ಯಲ್ಲಿಯೂ (ಪುಟಗಳು ೬೦೯-೮೩೨) ಸ್ಪಷ್ಟವಾಗಿ ಉಲ್ಲೇಖಗೊಳಡಿರುವುದರಿಂದ, ಇಲ್ಲಿ ಮತ್ತೆ ಅವುಗಳ ಪುನರುಕ್ತಿ ಅನಗತ್ಯವೆಂದು ಭಾವಿಸಿ ಕೈಬಿಡಲಾಗಿದೆ.

ಗ್ರಂಥದ ಮುಖ್ಯ ಪ್ರತಿಪಾದ್ಯ ವಿಷಯ ಮತ್ತು ಅನುವಾದದ ಕ್ಲೇಶಗಳು :

ಕವಿರಾಜಮಾರ್ಗ-ಗ್ರಂಥದ ಮುಖ್ಯ ಪ್ರತಿಪಾದ್ಯವಿಷಯ ಅಲಂಕಾರಶಾಸ್ತ್ರವೆಂಬುದೇ ಎಷ್ಟೋ ವೇಳೆ ಮರೆತುಹೋಗುವಂತೆ ಇತರ ದೃಷ್ಟಿಗಳಿಂದ ಈ ಗ್ರಂಥವನ್ನು ಕುರಿತು ವಿದ್ವಲ್ಲೇಖನಗಳು ಸಾಗಿರುವುದನ್ನು ನೋಡಬಹುದು. ದಿ. ಮುಳೀಯ ತಿಮ್ಮಪ್ಪಯ್ಯನವರ “ಕವಿರಾಜಮಾರ್ಗವಿವೇಕ” ಮಾತ್ರ ಬಹುಮಟ್ಟಿಗೆ ಇದಕ್ಕೆ ಅಪವಾದವೆಂದರೂ, ಅವರು ಕೂಡ ತಮ್ಮ ವಿವೇಚನೆಯಲ್ಲಿ ಕಲ್ಪನಾತರಂಗಗಳಿಗೆ ಬೇಕಾದಷ್ಟು ಎಡೆಯಿತ್ತಿರುವರು. ಕೇವಲ ಲಕ್ಷಣಗ್ರಂಥವೆಂಬ ಏಕೈಕ ದೃಷ್ಟಿಯಿಂದ ನ್ಯೂನಾತಿರೇಕಗಳಿಗೆ ಸ್ವಲ್ಪವೂ ಎಡೆಗೊಡದೆ ಇಲ್ಲಿ ಹೇಳಿರುವ ವಿಚಾರಗಳನ್ನು ತಿಳೀಯಬೇಕೆನ್ನುವವರಿಗಾಗಿಯೇ ಇಲ್ಲಿಯ ಶಾಸ್ತ್ರೀಯ ಅನುವಾದ ರಚಿತವಾಗಿದೆ. ಯಾರು ಎಷ್ಟೇ ಜಾಣರಿರಲಿ, ಎರಡನೆಯವರ ವ್ಯಾಖ್ಯಾನಕ್ಕಿಂತ ಮೂಲ ಅಂಗೀಕೃತವಾದ ಮೂಲಸೂತ್ರ. ಅದಕ್ಕೆ ಈಗಾಗಲೇಬಂದಿರುವ ಕೆಲವೊಂದು ಅನುವಾದ-ವ್ಯಾಖ್ಯಾನ ಯತ್ನಗಳಲ್ಲಿ ಹೇಗೆ ಅಪಚಾರವೊದಗಿದೆಯೆಂದು ಒಂದೆರಡು ಉದಾಹರಣೆಗಳನ್ನು ತೋರಿಸಲಾಗುತ್ತದೆ.

ನನಗೆ ಕಂಡಂತೆ ಈ ಗ್ರಂಥದ ಕೆಲವೇ ಪದ್ಯಗಳಿಗಾದರೂ ಮೂಲಪದ್ಯವನ್ನು ಮೇಲೆ ಕೊಟ್ಟು ಅದರ ಕೆಳಗೆ ಹೊಸಗನ್ನಡದ ಶಾಸ್ತ್ರೀಯ ಅನುವಾದವನ್ನೊದಗಿಸಿರುವ ಮೊದಲ ಪ್ರಯತ್ನ ಬೆಂಗಳೂರು ವಿಶ್ವವಿದ್ಯಾಲಯದ ‘ಶಾಸ್ತ್ರ ಸಾಹಿತ್ಯ’ದಲ್ಲಿ ಪ್ರೊ. ಎಂ. ವಿ. ಸೀತಾರಾಮಯ್ಯ ಅವರದು (೧೯೭೫). ಒಟ್ಟು ಇಲ್ಲಿ ೧೩ ಪದ್ಯಗಳಿಗೆ ಮಾತ್ರ ಉದಾಹರಣೆಗಳೆಂದು ಪ್ರವೇಶ ದೊರೆತಿದೆ. ಅವನ್ನಾಶ್ರಯಿಸಿ ವಿವರಣೆಯೂ ಬಂದಿದೆ. ಕೆಲವನ್ನು ನೋಡೋಣ.

೧) I-೧೬ ರ ‘ಮಹಾಧ್ವಕೃತಿಗಳಂ’ ಎಂಬುದನ್ನು ‘ಮಹಾಮಾರ್ಗ ಕಾಮಗಳನ್ನು’ ಎಂದು ಅಕ್ಷರಶಃ ಅನುವಾದಿಸಲಾಗಿದೆ. ‘ಮಹಾಮಾರ್ಗ’ ಕವಿಯೆಂದರೇನು? ಈ ಪದ ಇಲ್ಲಾಗಲಿ ಇಡಿಯ ಕನ್ನಡಸಾಹಿತ್ಯದಲ್ಲಿ ಎಲ್ಲಿಯಾಗಲಿ ಪ್ರಯುಕ್ತವಿದೆಯೆ ? ವಿವರಣೆಯಲ್ಲಿ ಇವರೇ- “ಎಲ್ಲರಿಗಿಂತಲೂ ಮಹಾಕವಿ ಶ್ರೇಷ್ಟ”ನೆನ್ನುವಾಗಲೂ ಸಾಮಾನ್ಯಾರ್ಥದಲ್ಲಿ ದೊಡ್ಡ ಕವಿಯೆಂದು ಸಾಮಾನ್ಯರು ಭಾವಿಸಬಹುದಾಗಿದೆ. “ಸಂಸ್ಕೃತ ಲಾಕ್ಷಣಿಕರು ಹೇಳುವ ಸರ್ವ ಲಕ್ಷಣಗಳನ್ನೂ ಒಳಗೊಂಡ, ‘ಮಹಾಕಾವ್ಯ’ ಎಂಬ ಹೆಸರಿನ ಸಾಂಪ್ರದಾಯಿಕ ಕಾವ್ಯಮಾರ್ಗ” ಎಂಬ ಇಲ್ಲಿಯ ವಿವಕ್ಷಿತಾಂಶ ಸ್ಫುಟವಾಗುತ್ತದೆಯೆ?

೨) I -೨೨ ರ ಅನುವಾದ-

“ಕಾವ್ಯವು ಕವಿಭಾವದಿಂದ ನಿರ್ಮಿತವಾದದ್ದು; ಬೇರೆ ಬೇರೆ ವಿಧಾನಗಳಲ್ಲಿ ಚೆನ್ನಾಗಿ ಹೇಳಿದ ವಚೋಮಾರ್ಗ (ಮಾತಿನ ರೀತಿ); ಅದು ಒಂದು ವಿಶೇಷ ರೀತಿಯ ಶಬ್ದರಚನೆ; ನಾನಾಬಗೆಯ ಅರ್ಥಗಳಿಂದ ರೂಪಗೊಂಡ ಅಲಂಕಾರ,” ಅದಕ್ಕೆ ಅವರ ವಿವರಣೆ ಹೀಗಿದೆ-

ಇದು ಸೂತ್ರರೂಪದಲ್ಲಿ ಸಂಕ್ಷೇಪವಾಗಿಲ್ಲದಿದ್ದರೂ ಬಹುಮಟ್ಟಿಗೆ ಪರಿಪೂರ್ಣವಾಗಿದೆ. ಕಾವ್ಯದ ಎಲ್ಲ ಅಂಗಗಳಿಗೂ ಕವಿಯ ಭಾವವೇ ಮೂಲವೆಂಬುದನ್ನು ಗಮನಿಸತಕ್ಕುದಾಗಿದೆ. ಹಾಗೆಯೇ ಇಡಿಯ ಕಾವ್ಯವನ್ನೇ ಒಂದು ಅಲಂಕಾರ ಎಂದಿರುವುದರಿಂದ ಕಾವ್ಯದ ಸೌಂದರ್ಯ ಅದರ ಹೊರಭಾಗ (ಶಬ್ದ, ಅರ್ಥ, ಅಲಂಕಾರ, ಗುಣ, ರೀತಿ) ಮತ್ತು ಒಳಭಾಗ(ರಸ)ಗಳೆರಡನ್ನೂ ವ್ಯಾಪಿಸಿರತಕ್ಕದ್ದು ಎಂಬ ಆಶಯವನ್ನು ನಾವು ಗ್ರಹಿಸಬಹುದು.

ಮೂಲವಿರುವುದು ಹೀಗೆ-

ಕವಿಭಾವಕೃತಾನೇಕ

ಪ್ರವಿಭಾಗ ವಿವಿಕ್ತ ಮಾರ್ಗಂ ಕಾವ್ಯಂ |

ಸವಿಶೇಷ ಶಬ್ದ ರಚನಂ

ವಿವಿಧಾರ್ಥ ವ್ಯಕ್ತಿ ವರ್ತಿತಾಲಂಕಾರಂ ||

ಮೇಲಿನ ಅನುವಾದದಲ್ಲಿ ಕಾವ್ಯಕ್ಕೆ ನಾಲ್ಕು ಸ್ವತಂತ್ರ ಲಕ್ಷಣಗಳನ್ನು ಹೇಳಿದೆಯೋ ಎನಿಸುವಂತೆ ನಾಲ್ಕು ವಾಕ್ಯಖಂಡಗಳಿವೆ. ಆದರೆ ಮೂಲದಲ್ಲಿರುವ ಲಕ್ಷಣ ವಾಕ್ಯವೊಂದೇ, ‘ಆಯಾ ಕವಿಯ ಅಭಿಪ್ರಾಯ ಭೇದದಿಂದ ಸ್ಪಷ್ಟವಾಗಿ ಬೇರೆಬೇರೆ ಗುರುತಿಸಬಹುದಾದಂತಹ (ಉತ್ತರ-ದಕ್ಷಿಣ ಇತ್ಯಾದಿ) ಮಾರ್ಗಗಳನ್ನೊಳಗೊಳ್ಳುವದೂ, (ಸೌಂದರ್ಯ) ವಿಶೇಷಭೂಷಿತವಾದ ಶಬ್ದರಚನೆಯುಳ್ಳಂತಹದೂ, ಬಗೆಬಗೆಯ ಅರ್ಥ ವೈಚಿತ್ರಕಾರಿಗಳಾದ ಅಲಂಕಾರಗಳಿಂದ ಎಂದರೆ ಅರ್ಥಾಲಂಕಾರಗಳಿಂದ ಕೂಡಿದುದೂ ಅದುದೇ ‘ಕಾವ್ಯ’ ಎಂದು ಈ ಪದ್ಯದ ಅನುಗತಾರ್ಥ. ಆದರೆ ಅನುವಾದದಲ್ಲಿ ಕವಿಯಿಂದ ನಿರ್ಮಿತವಾದುದು ಕಾವ್ಯವೆಂಬ (‘ಕವೇಃ ಕರ್ಮ ಕಾವ್ಯಂ’;) ಮೂಲ ಸಿದ್ಧಾಂತಕ್ಕೇ ಬಾಧೆ ಬರುವಂತೆ ಕವಿಭಾವದಿಂದ ನಿರ್ಮಿತವಾದುದೆಂಬ ಅಂಶವೂ, ಕಾವ್ಯವೇ ವಚೋಮಾರ್ಗ ಅಥವಾ ರೀತಿ, ಭಿನ್ನವಾದ) ವಿಶೇಷ ರೀತಿಯ ಶಬ್ದರಚನೆ, ಮತ್ತೆ ಆ ಕಾವ್ಯವೇ ಅರ್ಥಗಳಿಂದ ರೂಪಗೊಂಡ ಅಲಂಕಾರ ಎಂಬ ಅಪಸಿದ್ಧಾಂತಗಳು ಒಂದಾದಮೇಲೊಂದು ನುಗ್ಗಿ ಬಂದಿವೆ. ಕಾವ್ಯವೇ ಮಾರ್ಗವೆಂದಾಗಲಿ ಕಾವ್ಯವೇ ರಚನೆ ಅಥವಾ ರೀತಿಯೆಂದಾಗಲಿ, ರಚನೆ ರೀತಿಗಳು ಭಿನ್ನವೆಂದಾಗಲಿ, ಕಾವ್ಯವೇ ಅಲಂಕಾರವೆಂದಾಗಲಿ ಯಾವದೇ ಲಾಕ್ಷಣಿಕನೂ ಎಂದೂ ಸಂಸ್ಕೃತದಲ್ಲಾಗಲಿ, ಕನ್ನಡದಲ್ಲಾಗಲಿ ಹೇಳಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಭಾವವೆಂದರೆ ಕವಿಯ ಅಭಿಪ್ರಾಯವೇ ಹೊರತು ಬೇರೆಯಲ್ಲ (ಭಾವಃ ಕವೇರಭಿಪ್ರಾಯಃ-ದಂಡಿ). ವಿವರಣೆಯಲ್ಲಯೂ ‘ಇಡಿಯ ಕಾವ್ಯವನ್ನೇ ಒಂದು ಅಲಂಕಾರ ಎಂದಿರುವದರಿಂದ’ ಎಂಬ ಮಾತಿರುವ ಕಾರಣ ನಾವು ಅಪಾರ್ಥ ಮಾಡುತ್ತಿದ್ದೇವೆನ್ನಲವಕಾಶವಿಲ್ಲ. ಇಡಿಯ ಕಾವ್ಯವನ್ನು ಒಂದು ಅಲಂಕಾರ ಎಂದು ಯಾವ ಲಾಕ್ಷಣಿಕನೂ ಹೇಳಲು ಸಾಧ್ಯವಿಲ್ಲ. ಇಂತಹ ಮಾತನ್ನು ಕವಿರಾಜಮಾರ್ಗಕಾರ ಹೇಳಿದ್ದಾನೆಂದರೆ ಸರಿಯೆ ? ನನ್ನಂತಹ ಅನೇಕರಿಗೆ ಗುರುಸ್ಥಾನೀಯರಾಗಿ ಗೌರವ ಪಾತ್ರರಾಗಿರುವ ಒಬ್ಬರು ವಿದ್ವಾಂಸರು ಹೀಗೆ ಬರೆಯಲು ಮುಂದಾದುದೆಂತೆಂಬುದು ಸೋಜಿಗವಾಗಿದೆ. ಸಂಸ್ಕೃತಭೂಯಿಷ್ಠವಾದ ಈ ಕಂದದಲ್ಲಿ ‘ಕಾವ್ಯ’ ಎಂಬುದೊಂದೇ ವಿಶೇಷ್ಯ; ಮಿಕ್ಕ ಮೂರು ಸಮಾಸಗಳೂ ಬಹುವ್ರೀಹಿಗಳು; ಕಾವ್ಯಕ್ಕೆ ವಿಶೇಷಣಗಳು; ಎಂಬುದನ್ನು ಬೇಕೆಂದೇ ಸರಿಯಾಗಿ ಗ್ರಹಿಸದೆ, ಅವನ್ನು ಸ್ವತಂತ್ರ ವಿಶೇಷ್ಯಗಳನ್ನಾಗಿ ಮಾಡಿ, ವಿನೂತನ ಕಾವ್ಯತತ್ತ್ವದ ಪ್ರತಿಷ್ಠಾಪಕನೆಂದು ಗ್ರಂಥಕಾರನಿಗೆ ಪ್ರಶಸ್ತಿಯೀಯುವ ಉತ್ಸಾಹವನ್ನಿಲ್ಲಿ ಕಾರಣವೆನ್ನಬೇಕೆ? ‘ಪಂಪನಪಗತಪಾಪಂ’ ಎಂದರೆ ಪಂಪನೇ ಒಂದು ‘ಅಪಗತ’ವಾದ ಪಾಪ ಎಂದು ಯಾರಾದರೂ ಅರ್ಥ ಮಾಡುವರೇ? ಅಭಿಮಾನಧನಂ ಸುಯೋಧನಂ’ ಎಂದರೆ ಅಭಿಮಾನವೆಂಬ ಧನವೇ ಸುಯೋಧನ ಎಂದರ್ಥವಾಗುತ್ತದೆಯೆ ? ‘ಪಾಪವಿಲ್ಲದವನಾದ ಪಂಪ’, ‘ಅಭಿಮಾನವನ್ನೇ ಧನವಾಗಿ ಉಳ್ಳ ಸುಯೋಧನ’ ಎಂಬ ಸ್ವರಸಾರ್ಥವನ್ನು ಕೈಬಿಡಲು ಬರುತ್ತದೆಯೆ ? ಕಾವ್ಯವನ್ನೇ ಅಲಂಕಾರವೆನ್ನುವುದಾದರೂ ಅಷ್ಟೇ ವಿಸಂಗತವಾದ ಒಂದು ಹೇಳಿಕೆ. ಅಲಂಕಾರವನ್ನುಳ್ಳದ್ದು ಕಾವ್ಯವೇ ಹೊರತು ಕಾವ್ಯವೆಂದೂ ಅಲಂಕಾರವಲ್ಲ. ಇದನ್ನು ಕವಿರಾಜ ಮಾರ್ಗಕಾರ ಹೇಳಿಲ್ಲ. ಇವರು ಕಲ್ಪಿಸಿರುವ ಆಶಯ ವ್ಯಾಕರಣನಿಯಮಕ್ಕೇ ವಿರುದ್ಧವಿದೆ. ಹೀಗೆ ಯುಕ್ತಿಶೂನ್ಯವಾದ, ಶಾಸ್ತ್ರವಿರುದ್ಧವಾದ, ಅಪಸಿದ್ದಾಂತವನ್ನು ಕವಿರಾಜಮಾರ್ಗದ ಆಶಯವೆನ್ನಬಹುದೆ ?

ಈ ವಿವರಣೆಯಲ್ಲಿಯ ಅಪಸಿದ್ಧಾಂತ ಇಷ್ಟಕ್ಕೆ ಮುಗಿಯುವುದಿಲ್ಲ. ಇನ್ನೂ ಗರಿಗೆದರಿ ಮುಂದೆ ಸಾಗುತ್ತದೆ. ಕಾವ್ಯದ ಹೊರಭಾಗವೆಂದು ‘ಶಬ್ದ’, ‘ಅರ್ಥ’, ‘ಅಲಂಕಾರ’, ‘ಗುಣ’, ‘ರೀತಿ’ಗಳನ್ನು ಹೆಸರಿಸಲಾಗಿದೆ. ಶಬ್ದ ಅರ್ಥಗಳನ್ನು ಬಿಟ್ಟು ಬೇರೆ ಕಾವ್ಯಶರೀರವೂ ಇಲ್ಲ, ಕಾವ್ಯಾತ್ಮವೂ ಇಲ್ಲವೆಂಬ ಪ್ರಾಥಾಮಿಕ ಪ್ರಮೇಯಕ್ಕೇ ಇಲ್ಲಿ ಧಕ್ಕೆ ಬಂದಿದೆ. ಅಲಂಕಾರ, ಗುಣ, ರೀತಿಗಳೆಲ್ಲ ಶಬ್ದಾರ್ಥಗಳನ್ನು ಆಶ್ರಯವಾಗಿ ಉಳ್ಳ ಧರ್ಮಗಳು ಮಾತ್ರವೇ ಹೊರತು, ಇಲ್ಲಿ ಹೇಳಿರುವಂತೆ ಅವಕ್ಕೆ ಶಬ್ದಾರ್ಥವಿರಹಿತವಾದ ಸ್ವತಂತ್ರ ಅಸ್ತಿತ್ವವೆಂಬುದೇ ಒಂದು ಮೊಲದ ಕೋಡು. (‘ಶಬ್ದ’ವೆಂದರೆ ಕೋಶದಲ್ಲಿನ ಒಂದು ಪದವಿಲ್ಲ; ‘ಅರ್ಥ’ವೆಂದರೆ ಅಲ್ಲಿ ಉಲ್ಲೇಖಿಸಿದ ಅರ್ಥಮಾತ್ರವಲ್ಲ; ಕಾವ್ಯವಾದ ರಾಮಾಯಣದ ‘ಶಬ್ದ’ವೆಂದರೆ ಇಡಿಯ ಶ್ರೋತ್ರಗ್ರಾಹ್ಯ ವಾಕ್ಯವೃಂದ; ಅರ್ಥವೆಂದರೆ ಪೂರ್ಣ ಕಥಾಭಾಗ) ಇನ್ನು ಕಾವ್ಯದ ಆತ್ಮವೆನ್ನುವವರೂ ಸಹ ರಸವನ್ನು ಕಾವ್ಯಾರ್ಥವೆಂದು, ಕಾವ್ಯದಲ್ಲಿ ಕೇವಲ ವ್ಯಂಗ್ಯವಾದ ಸುಂದರ ಕಾವ್ಯಾರ್ತವನ್ನೇ ರಸವೆನ್ನುವಾಗ, ಆದ್ದರಿಂದಲೇ ಅದು ಸಹೃದಾಯಾಹ್ಲಾದಕಾರಿಯೆಂಬುದು ಯಾರಿಗಾದರೂ ತಿಳಿಯುತ್ತದೆ. ಕಾವ್ಯದ ತಿರುಳೆಂಬರ್ಥದಲ್ಲಿ ಅಲಂಕಾರಿಕವಾಗಿ ರಸವನ್ನೇ ಒಳಭಾಗವೆನ್ನುವುದಾದರೆ ಇಲ್ಲಿ ಉದ್ದಿಷ್ಟವಾದ ಆ ರಸ ಯಾವದು ? ಸಹೃದಯನ ಆನಂದಾನುಭವವಂತೂ ಅದಾಗಲು ಶಕ್ಯವಿಲ್ಲ, ಅದು ಕಾವ್ಯಾಂತರ್ಗತವಲ್ಲದ್ದರಿಂದ. ಕಾವ್ಯಗತವಾದ ಅದು ಅರ್ಥಭಿನ್ನವಾಗಿರಲು ಶಕ್ಯವೆ ? ರಸವೆಂದರೆ ಕಾವ್ಯವರ್ಣಿತ ಚಿತ್ತವೃತ್ತಿ ವಿಶೇಷವೋ ಅಥವಾ ರಸಿಕನ ಅನುಭವವೊ ? ಇತ್ಯಾದಿ ಪರಿಪರಿಯ ಸಂದೇಹ ಸಂದೋಹಗಳಿಗೆ ಎಡೆಯಿತ್ತಂತಾಗುತ್ತದೆ.

ಕವಿರಾಜಮಾರ್ಗಕಾರನೇ I -೨೩ ರಲ್ಲಿ ಕಾವ್ಯದಲ್ಲಿ ಅಲಂಕಾರ ಬೇರೆ, ಶರೀರ ಬೇರೆ ಎಂಬುದನ್ನು

ನರಲೋಕ ಚಂದ್ರಮತದಿಂ

ಪರಮಾಲಂಕಾರಮುಂ ಶರೀರಮುಮೆಂದಿಂ

ತೆರಡಕ್ಕುಂ ಭೇದಂ ಬಹು

ಪರಿಕರಮಾ ಕಾವ್ಯವಸ್ತುಪುರುಷಂಗೆಂದುಂ ||

ಎಂದು ಸ್ಪಷ್ಟವಾಗಿ ನುಡಿದಿರುವಾಗ ಕಾವ್ಯಶರೀರವನ್ನೇ ಈ ಲೇಖಕರು ಅಲಂಕಾರವೆನ್ನುತ್ತಿರುವುದು ಹೇಗೆ? ಕಾವ್ಯವಸ್ತುವನ್ನಷ್ಟೇ ಇಲ್ಲಿ ಪುರುಷನೆಂದು ರೂಪಿಸಲಾಗಿದೆ, ಕಾವ್ಯವನ್ನಲ್ಲ. ಗ್ರಂಥಕಾರನೇ ಐ -೨೪ ರಲ್ಲಿ ಹೇಳುವಂತೆ ಈ ಕಾವ್ಯವಸ್ತುಪುರುಷನಿಗೆ ಗದ್ಯ ಪದ್ಯಗಳೇ ‘ಶರೀರ’. ಈ ಲೇಖಕರು ಹೇಳುವ ವಿಕಲ್ಪಗಳು ಬೇರೆಯೇ ಆಗಿರುವುದು ಸ್ಪಷ್ಟ !

ಹೀಗೆ ಮೂಲ ಗ್ರಂಥಕಾರನಿಗೆ ವಿವಕ್ಷಿತವಲ್ಲದ ಅಂಶಗಳನ್ನು ನಮ್ಮ ಇಂದಿನ ‘ವಿನೂತನ’ ದೃಷ್ಟಿಕೋನದಿಂದ ಅವನ ತಲೆಗೆ ಕಟ್ಟುವುದಾದರೆ ಅದಕ್ಕೆ ಇತಿಮಿತಿಯೆಲ್ಲಿ ? ಒಬ್ಬ ಪ್ರಾಚೀನ ಲಾಕ್ಷಣಿಕನ ಬೆಲೆ ಕಟ್ಟುವ ಕಾರ್ಯವನ್ನು ಕೈಗೊಳ್ಳುವ ಮೊದಲು ಅವನ ಪ್ರಮೇಯವನ್ನು ಕೂದಲೆಳೆಯಷ್ಟೂ ವ್ಯತ್ಯಾಸಬಾರದಂತೆ ಅನುಸಂಧಾನ ಮಾಡುವ ಅಗತ್ಯ ಎಷ್ಟು ಮುಖ್ಯವೆಂಬುದನ್ನು ಬಿಂಬಿಸಲು ಮಾತ್ರ ಈ ಒಂದೆರಡು ಉದಾಹರಣೆಗಳನ್ನು ಎತ್ತಿಕೊಳ್ಳಬೇಕಾಯಿತು. ಮೂಲಾರ್ಥದ ಗಮನವೇ ಇಲ್ಲದೆ ಅವರಿವರ ವಿಮರ್ಶನ ವಾಕ್ಯಗಳನ್ನು ಉಗ್ಗಡಿಸಿ ಒಬ್ಬ ಗ್ರಂಥಕಾರನ ಬೆಲೆಯನ್ನು ನಿಷ್ಕರ್ಷಿಸಿ ಮುಗಿಸುವ ಸಾಹಿತ್ಯ ವಿದ್ಯಾರ್ಥಿಗಳ ಸುಲಭ-ಪ್ರವೃತ್ತಿ ವಿದ್ವದ್ವಿಕಾಸಕ್ಕೆ ಸಲ್ಲದೆಂಬುದನ್ನು ಒತ್ತಿಹೇಳುವುದಷ್ಟೇ ನಮ್ಮ ಉದ್ದೇಶ. ‘ಸೂಕ್ತಿ-ಸಹಸ್ರ-ದ್ಯೋತಿತಾತ್ಮರಾದ ಮಹಾತ್ಮರಲ್ಲಿ ದೋಷಾನ್ವೇಷಣೆಮಾಡುವ ದುಸ್ಸಾಹಸ ನಮಗೆ ಪ್ರಿಯವೂ ಅಲ್ಲ, ಪ್ರಸ್ತುತವೂ ಅಲ್ಲ, ಇಲ್ಲಿ ಪ್ರಸ್ತುತವಿರುವುದು ವಿಷಯವಿವೇಚನೆಯೇ ಹೊರತು ಸರ್ವಥಾ ವ್ಯಕ್ತಿದೂಷಣೆಯಲ್ಲ.

ಕವಿರಾಜಮಾರ್ಗಕಾರನು ಶಾಸ್ತ್ರವನ್ನು ಛಂದೋಬದ್ಧವಾಗಿ ಬರೆದಿದ್ದಾನೆ. ಆ ಛಂದೋನಿಯಮಗಳ ಸಲುವಾಗಿ, ಪ್ರಾಸಾದಿಗಳ ನಿರ್ಬಧಕ್ಕಾಗಿ, ಎಷ್ಟೋ ಪಾದಪೂರಣ ಪದಗಳನ್ನೂ ಬಳಸಬೇಕಾಗುತ್ತದೆ. ಅವಕ್ಕೆ ವಿಶೇಷಾರ್ಥದ ವಿವಕ್ಷೆಯಿರುವುದಿಲ್ಲ. ಅವನ್ನು ಅರ್ಥಮಾಡುವಾಗ ವಿಶಿಷ್ಟ ತಾತ್ಪರ್ಯಕ್ಕೆ ನಮ್ಮ ಮುಖ್ಯ ಗಮನವಿರಬೇಕೇ ಹೊರತು, ಒಂದೊಂದು ಶಬ್ದಕ್ಕೂ ಪ್ರತಿಶಬ್ದ ಕಲ್ಪಿಸಿಕೊಳ್ಳುವ ಹಟವೂ ಸಲ್ಲದು, ಉದಾಹರಣೆಗೆ,

ಕಾವೇರಿಯಿಂದಮಾಗೋ

ದಾವರಿವರಂ ಇರ್ಪ ನಾಡದು ಆ ಕನ್ನಡದೊಳ್ |

ಭಾವಿಸಿದ ಜನಪದಂ ವಸು

ಧಾವಲಯ ವಿಲೀನವಿಶದ ವಿಷಯವಿಶೇಷಂ ||

ಇದು ಶಾಲಾ ಬಾಲಕರಿಗೂ ಪರಿಚಿತವಾದ ಪದ್ಯವಾಯಿತು. ಈಗ ಇದರ ಅನುವಾದವನ್ನು ನೋಡಿ-

“ಕಾವೇರಿಯಿಂದ ಗೋದಾವರಿಯ ವರೆಗೆ ಇರುವ ನಾಡು ಕನ್ನಡದ್ದೆಂದು ಮಾನ್ಯವಾದ ದೇಶ; ಭೂಮಂಡಲದಲ್ಲಿ ಸೇರಿಕೊಂಡು, ತನ್ನ ವಿಶೇಷತೆಯಿಂದ ಪ್ರಸಿದ್ಧವಾಗಿರುವ ದೇಶ (ಉಕ್ತಗ್ರಂಥ, ಪು.೩೭).

ಇಲ್ಲಿಯೂ ಕಾವ್ಯಲಕ್ಷಣ ಪದ್ಯದಂತೆಯೇ ವಿಶೇಷಣಗಳನ್ನೆಲ್ಲ ವಿಶೇಷ್ಯಗಳನ್ನಾಗಿ ಮಾರ್ಪಡಿಸಿ ಅನುವಾದಿಸಲಾಗಿದೆ. ಭೂಮಂಡಲದಲ್ಲಿ ಸೇರಿಕೊಳ್ಳುವುದೆಂದರೇನು ? ಸೇರದಿರುವ ನಾಡೇನಾದರೂ ಇರಲು ಸಾಧ್ಯವೆ ? ಇಲ್ಲಿ ‘ವಿಶೇಷತೆಯಿಂದ ಪ್ರಸಿದ್ಧವಾಗಿರುವ’ ಎಂಬುದಕ್ಕೆ ಮೂಲವೆಲ್ಲಿದೆ ? ಇಲ್ಲಿ ‘ವೃಕ್ಷವಿಶೇಷ’ ಎಂದರೆ ಮರಗಳಲ್ಲೊಂದು, ‘ಪಕ್ಷಿ-ವಿಶೇಷ’ ಎಂದರೆ ಹಕ್ಕಿಗಳ್ಲೊಂದು, ಎನ್ನುವಂತೆ, ವಿಷಯ ವಿಶೇಷ’ ಎಂದರೆ ‘ದೇಶಗಳಲ್ಲೊಂದು’ ಇಷ್ಟೇ ಅರ್ಥ. ಅದಕ್ಕೆ ವಿಶೇಷತೆಯ ಪ್ರಸಿದ್ಧಿಯನ್ನು ನೀಡುವುದು ನಮ್ಮ ವಿಶೇಷತೆಯೆನಿಸುವುದಿಲ್ಲವೆ? ‘ಕನ್ನಡದಲ್ಲಿ ಖ್ಯಾತ ಹೆಸರನ್ನು ತಳೆದ ನಾಡು(=ಕನ್ನಡನಾಡು) ಭೂಮಂಡಲದ ಮೇಲಿನ ಪ್ರಸಿದ್ಧ ದೇಶಗಳಲ್ಲಿ ಒಂದೆನಿಸಿ, ಕಾವೇರಿಯಿಂದ ಗೆ ಗೋದಾವರಿಯವರೆಗೂ ಇರುವ ನಾಡು’ ಎಂಬುದು ಗ್ರಂಥಕಾರನ ವಿವಕ್ಷೆಗೆ ಹೆಚ್ಚು ಸಮೀಪವೆಂದು ನಮ್ಮ ಗ್ರಹಿಕೆ.

ಹಾಗೆಯೇ, I -೩೮ ರಲ್ಲಿ ‘ಕುರಿತು ಓದದೆಯುಂ ಕಾವ್ಯಪ್ರಯೋಗ-ಪರಿಣತಮತಿಗಳ್’ ಎಂಬುದಕ್ಕೆ ಇವರ ಅನುವಾದ-

ಅವರು ಕಾವ್ಯಗಳನ್ನು ಉದ್ದೇಶಪೂರ್ವಕವಾಗಿ ಓದಿ ಅಭ್ಯಾಸಮಾಡದಿದ್ದರೂ ಕವಿಗಳು ಉಪಯೋಗಿಸಿದ್ದ (ಸ್ವಾರಸ್ಯವಾಗಿದ್ದ) ವಾಕ್ಯಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು (ಉಕ್ತಗ್ರಂಥ, ಪು.೩೮).

ಎಂದು ನವನವೀನವಾಗಿ ಬಂದಿದೆ. ಜತೆಗೆ ಇದಕ್ಕೆ- “ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಎಂಬ ವಾಕ್ಯಕ್ಕೆ ‘ವಿದ್ಯಾವಂತರಲ್ಲದಿದ್ದರೂ ಕಾವ್ಯರಚನೆ ಮಾಡಬಲ್ಲವರಾಗಿದ್ದರು’ ಎಂದೂ ವಿದ್ವಾಂಸರು ಅರ್ಥಹೇಳುತ್ತಾ ಬಂದಿದ್ದಾರೆ ಎಂಬ ಟಿಪ್ಪಣಿಯೂ ಇದೆ. ಇತರ ವಿದ್ವಾಂಸರ ಅರ್ಥ ಹಳಸಲಾಯಿತೆಂದು ತಾತ್ಪರ್ಯವೆ ? ಅಥವಾ ಲೇಖಕರು ಹೇಳುವ ಅರ್ಥ ಗ್ರಾಹ್ಯತರವೆನಿಸಲು ಹೆಚ್ಚಿನ ಔಚಿತ್ಯವೇನಾದರೂ ಇದೆಯೆ ? ನೋಡೋಣ. ಈ ಗ್ರಂಥಕಾರನ ಕಾಲದಲ್ಲಿ ನಾಡವರು ಮನೆಮನೆಯಲ್ಲಿಯೂ ಕುಳಿತು ಓದುವಂತಹ, ಓದದಿದ್ದರೂ ಕೇಳಿಯೇ ನೆನೆಯುವಂತಹ, ಕಾವ್ಯ ಸಮೃದ್ಧಿ ಕನ್ನಡದಲ್ಲಿ ಇತ್ತೆಂದು ತಾನೆ ಇದರ ತಾತ್ಪರ್ಯ ? ಅದು ಆ ಪರಿಗಣನೀಯ ಪ್ರಮಾಣದಲ್ಲಂತೂ ಇನ್ನೂ ಇರಲಿಲ್ಲವೆಂದೇ ಸಾಹಿತ್ಯಚರಿತ್ರೆ ಹೇಳುತ್ತದೆ. ಎಂದ ಮೇಲೆ ಇದಕ್ಕೆ ಹೆಚ್ಚಿನ ಔಚಿತ್ಯ ಹೇಗೆ ಬರಬೇಕು ?

ಇದರಂತೆ ‘ಪೂಣಿಗ’ ಎಂಬ ಒಂದೇ ಶಬ್ದಕ್ಕೆ -೪೦ ರ ಕೆಳಗೆ ‘ಗಟ್ಟಿಗ’ ಎಂದೂ, M-೪೫ ರ ಕೆಳಗೆ ‘ಉತ್ತಮವಾಗಿರಬೇಕು ಎಂದು ಬಯಸುವ ಕವಿ’ ಎಂದೂ ಉಭಯಾರ್ಥವನ್ನು ಕಲ್ಪಿಸಿಯೇತೀರಬೇಕಾದ ಪ್ರಸಂಗವೇನು ? ಒಂದೇ ಅರ್ಥ ಎರಡು ಕಡೆಗೂ ಇರಬಾರದೇಕೆ? ‘ಕಾವ್ಯಾಭ್ಯಾಸಿ’ ಎಂಬ ಒಂದೇ ಅರ್ಥ ಎರಡು ಕಡೆಗೂ ಕ್ಲೇಶವಿಲ್ಲದೆ ಅನ್ವಯಿಸುತ್ತದೆ; ಈ ಲಕ್ಷಣಗ್ರಂಥದ ಸಂದರ್ಭದಲ್ಲಿ ‘ಪ್ರತಿಜ್ಞೆ ಗೈಯುವ’, ‘ಹುರುಡಿಸುವ’, ‘ಪರಾಕ್ರಮ ಮೆರೆಯುವ’ ಮೂಲ ಶಬ್ದಾರ್ಥಗಳಿಗೆ ಪ್ರಸಕ್ತಿಯೆಲ್ಲಿದೆ?

ಮುಳಿಯ ತಿಮ್ಮಪ್ಪಯ್ಯನವರ ಭಾವಾನುವಾದಗಳಲ್ಲೂ ಒಮ್ಮೊಮ್ಮೆ ಹೀಗೆಯೇ ಆಗಿರುವುದನ್ನಿಲ್ಲಿ ಸುಚಿಸಬೇಕಾಗಿದೆ. ಐಐ -೮೬ ರ ಮೂಲ ಪದ್ಯಾರ್ಧವಿದು-

ಮಿಗೆ ಪದ್ಯದೊಳಂ ಗುಣಮಂ

ತಗುಳ್ಚುಗುಂ ಸಮಹಿತ ಪ್ರಯೋಗಾನುಗತಂ |

ಗ ಅವರ ಅನುವಾದದ ಆದಿಭಾಗ :-

ಸಮಹಿತರ, ಎಂದರೆ ಮಹಿಮಾನ್ವಿತರಾದ ಮಹಾಕವಿಗಳ, ಪ್ರಯೋಕ್ರಮಾನ್ವಿತವಾದ ಓಜೋಗುಣ…

ಪ್ರೊ. ಎಂ. ವಿ. ಸೀತಾರಾಮಯ್ಯನವರೂ ತಮ್ಮ ಟಿಪ್ಪಣಿಯಲ್ಲಿ- “ಸಮಹಿತ (ಸ+ಮಹಿತ) ಪ್ರಯೋಗಾನುತವಾದ (ಎಂದರೆ ಮಹಿಮೆಯುಳ್ಳ ಕವಿಗಳ ಪ್ರಯೋಗಗಳಲ್ಲಿ ಕಂಡುಬರುವ) ಈ ಓಜೋಗುಣವು” ಎಂದೇ ತಿಮ್ಮಪ್ಪಯ್ಯನವರನ್ನು ಅನುಸರಿಸಿದ್ದಾರೆ.

ಆದರೆ ಈ ಪದ್ಯ ಬಂದಿರುವ ‘ಗುಣ’ ವಿವೇಚನೆಯ ಸಂದರ್ಭವನ್ನು ನೆನೆದರೆ-“ ‘ಸಮ’-‘ಹಿತ’ ಎಂಬೆರಡು ಗುಣಗಳು ತಪ್ಪದಂತೆ ಪ್ರಯೋಗದಲ್ಲಿ ಕೂಡಿಬಂದರೆ ಮಾತ್ರ ಪದ್ಯದಲ್ಲಿಯೂ ಓಜೋಗುಣವು ಸೊಗಯಿಸುವುದೆಂಬ’ ಅರ್ಥ ಹೆಚ್ಚು ಸಂದರ್ಭೋಚಿತವಾದಿತು. ಮಹಿತ ಎಂದರೆ ‘ಪ್ರಖ್ಯಾತ’, ‘ಮಾನ್ಯ’ ಎಂದರ್ಥವಾದರೂ ಸ+ಮಾನ್ಯ ಎಂದರೆ ಅಷ್ಟೊಂದು ಸಮರ್ಪಕ ಪ್ರಯೋಗವೆನಿಸದು.

ಪ್ರಸ್ತುತ ಪೀಠಿಕೆಯಲ್ಲಿ ಈ ವಿವೇಚನೆಗೆ ಪ್ರಸಕ್ತಿಯೇನೆಂಬುದನ್ನು ಕುರಿತು ಎರಡು ಮಾತನ್ನು ವಾಚಕರು ನಿರೀಕ್ಷಿಸಬಹುದು. ಇಡಿಯ ಗ್ರಂಥಕ್ಕೆಲ್ಲ ಹೊಸಗನ್ನಡ ಅನುವಾದ ಬರೆಯುವ ಕಾರ್ಯದಲ್ಲಿ, ವಿಶೇಷಜ್ಞರಿಗೂ ತಪ್ಪುವ ಅವಕಾಶ ಎಷ್ಟು ವಿಪುಲವಾಗಿದೆಯೆಂಬುದನ್ನು ಎತ್ತಿತೋರಿಸಬೇಕೆಂಬುದಷ್ಟೇ ಉದ್ದೇಶ. ಪ್ರಕೃತ ಲೇಖಕನ ಆಳವಿಗೂ ಇತಿಮಿತಿಗಳಿವೆಯೆಂಬುದರ ಪರಿಜ್ಞಾನವಿರುವುದರಿಂದಲೇ, ಇಲ್ಲಿಯ ಅನುವಾದದಲ್ಲಿ ಅನುಸರಿಸಿರುವ ಮಾರ್ಗವನ್ನು ಕುರಿತು ಹೇಳುವ ಮುನ್ನ, ಹಿನ್ನೆಲೆಯಾಗಿ, ಇತರ ಅನುವಾದಗಳ ವಿಷಯವನ್ನೆತ್ತಬೇಕಾಗಿಬಂದಿತು. ಕಾವ್ಯದ ಅನುವಾದದ್ದೇ ಒಂದು ರೀತಿ; ಅಲ್ಲಿ ಸಾಕಷ್ಟು ವೈವಿಧ್ಯಕ್ಕೆಡೆಯಿರುತ್ತದೆ. ಆದರೆ ಶಾಸ್ತ್ರ ಗ್ರಂಥದ ಅನುವಾದದಲ್ಲಿ ವೈವಿಧ್ಯಕ್ಕೆ ಸ್ಥಾನವಿಲ್ಲ. ಬೇಕಾದುದು ಒಂದೇ ನಿಷ್ಕೃಷ್ಟತೆ.

ಭರತನಿಂದ ಹಿಡಿದು ಬಾಮಹ-ದಂಡಿಗಳವರೆಗೆ ಸಾಗಿಬಂದ ಸಂಸ್ಕೃತ ಕಾವ್ಯ ಶಾಸ್ತ್ರದ ಸರಣಿಗೆಲ್ಲೂ ಬಾಧೆಯುಂಟಾಗಬಾರದು; ಕನ್ನಡ ಕಾವ್ಯಸಂಪ್ರದಾಯಕ್ಕೆ ಸಲ್ಲದ ಅನುಗತಾರ್ಥವನ್ನಷ್ಟೇ ಹಿಡಿಯಬೇಕೇ ಹೊರತು, ಸ್ವಕಲ್ಪನಾಸಿದ್ಧವಾದ ಅಂಶಗಳನ್ನು ಬೆರೆಸಬಾರದು, ಕಾಳಿದಾಸ, ಭಾರವಿ ಬಾಣಮಾಗಾದಿಗಳ ಸಂಸ್ಕಾರವೂ ಈ ಗ್ರಂಥ ಕಾರನ ಮೇಲಾಗಿರುವುದನ್ನು ಗಮನಿಸಬೇಕು, ಇಲ್ಲಿ ಒಟ್ಟಾರೆ ಪೂರ್ವಾಪರ ಸಂಬಂಧ ಕಲಸಿಕೊಳ್ಳದಂತೆ ವಿಷಯನಿರೂಪಣೆಯನ್ನು ಗ್ರಂಥಕಾರನ ವಾಚ್ಯಾರ್ಥಾನುಸಾರವಾಗಿಯೇ ಮಾಡಬೇಕು ಎಂಬ ಉದ್ದೇಶಗಳನ್ನಿರಿಸಿಕೊಂಡಿದೆ. ಈ ಎಲ್ಲ ಉದ್ದೇಶಗಳಿಗೆ ಮೂಲಭೂತವಾದ ವಿಚಾರಗಳನ್ನು ಈ ಲೇಖಕನು ಆಗಲೇ ಗ್ರಂಥಾಂತರಗಲ್ಲಿ ವಿಸ್ತಾರವಾಗಿ ಪ್ರತಿಪಾದಿಸಿರುವುದರಿಂದ ಇಲ್ಲಿ ಮತ್ತೆ ಅದನ್ನು ಬರೆಯಲಿಲ್ಲ.

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published. Required fields are marked *