ಕವಿರಾಜ ಮಾರ್ಗದ ಉಪಸಂಹಾರ

ಉಪಸಂಹಾರ

ಪುಷ್ಪಿತಾಗ್ರಾ ವೃತ್ತಂ || ಅತಿಶಯಧ[1]ವಳೋಪ+ನೀತಮಾರ್ಗೋ-

ಚಿತ-ಗತಿ-ಭಾವಿತಮಾ[2]ರ್ಗಳಂಕ್ರಿಯಾರ್ಥಂ |

ಚತುರ-ಕವಿ-ಜನಾನುಯಾತ-ಸಾರ

ಸ್ವತ-ಗುಣದೊಳ್ ಬ[3]ಗೆದಂತೆ ಕೂಡಲಾರ್ಕುಂ ||೧೫೩||

೧೫೩. ಯಾರಿಗೆ (ಆರ್ಗೆ+ಅಳಂಕ್ರಿಯಾರ್ಥಂ ಎಂದು ಪದಚ್ಛೇದ) ನೃಪತುಂಗೋಕ್ತವಾದ ಕ್ರಮದಿಂದ ಅಲಂಕಾರವಿಚಾರ ಪ್ರತೀತವಾಗಿದೆಯೋ, ಅವರು ಮಹಾಕವಿಗಳಿಂದ ಅನುಸೃತವಾದ ಸಾರಸ್ವತಗುಣದಲ್ಲಿ ಬೇಕಾದಂತೆ ಕೂಡಿಕೊಳ್ಳಬಲ್ಲವರಾಗುತ್ತಾರೆ.

ಮಾಲಿನೀವೃತ್ತ || ಬುಧ-ಗುಣ-ಗಣನಾತೀತಾಂತರಂ ಶಬ್ದತತ್ತ್ವಾಂ-

ಬುಧಿ-ವಿವಿಧ-ವಿಧಾನಾಳಂಕ್ರಿಯಾ-ವೀ[4]ಚಿಮಾಳಂ |

ವಿಧುರ-ಗತಿ-ವಿಲೋಡ್ಯಂ ತಳ್ತು ನಿಲ್ತಪ್ಪುದಾ ವಾ |

ಗಧಿಪ-ವಚನ-ಮಾಲಾ-ಪಾವನೀಯಂ ಗಭೀರಂ ||೧೫೪||

ಉತ್ತಲಮಾಲಾವೃತ್ತಂ || ಭಾವಿಸಿ ಶಬ್ದ-ತತ್ತ್ವ-ಸಮಯ-ಸ್ಥಿತಿಯಂ ಕುಱ[5]ತೊಂದಶೇಷಭಾ-

ಷಾ-ವಿಷಯೋಕ್ತಿಯಂ ಬಗೆದುನೋಡಿ ಪುರಾಣ-ಕವಿ-ಪ್ರಭು-ಪ್ರಯೋ

ಗಾವಿಳ-ಸದ್ಗುಣೋದಯಮನಾ[6]ಯ್ದವಱಂ ಸಮೆದೊಂದು ಕಾವ್ಯದಿಂ

ಶ್ರೀವಿಜಯ-ಪ್ರಭೂತ-ಮುದಮಂ ತ[7]ನಗಾಗಿಸಿದೊಂ ಕವೀಶ್ವರಂ ||೧೫೫||

೧೫೪. *ಇದು ಈ ಶಬ್ದಾಲಂಕಾರ ಪ್ರಕರಣದ ಪ್ರಶಂಸಾಪರ ಸಮಾಪ್ತಿವಾಕ್ಯಗಳಲ್ಲಿ ಎರಡನೆಯದು.* ವಿದ್ವಾಂಸರ ಗುಣಗಣನೆಗೂ ಮೀರಿದ ಶಬ್ದತತ್ತ್ವಸಾಗರದ ಒಳಗೆ ನಾನಾರೀತಿಯ ಅಲಂಕಾರಗಳೆಂಬ ತರಂಗಮಾಲೆಗಳಿವೆ; ವಾಗೀಶ್ವರನ *=ನೃಪತುಂಗನ* ಉಕ್ತಿಮಾಲೆಗಳಿಂದ ಆ ಆಳವಾದ ಕಡಲಿನ ಅಂತರಾಳ ಕೂಡ ಬಂಧುರವಾಗಿ ಕಡೆಯಲ್ಪಟ್ಟಿದ್ದೆನಿಸಿ, ಪವಿತ್ರಿತವಾಗಿ, ಶಾಶ್ವತವಾಗಿ ನಿಲ್ಲುವಂತಾಗಿದೆ !

೧೫೫. ಶಬ್ದತತ್ತ್ವದ ಶಾಸ್ತ್ರಸ್ಥಿತಿಯನ್ನು ಪರಿಭಾವಿಸಿ, ಸಕಲ ಭಾಷಾವಿಶೇಷಗಳಲ್ಲಿಯ (ಎಂದರೆ ಸಂಸ್ಕೃತ, ಪ್ರಾಕೃತ, ಅಪಭ್ರಂಶ, ಕನ್ನಡ ಇತ್ಯಾದಿ ಭಾಷೆಗಳ, ಮತ್ತು ದಕ್ಷಿಣೋತ್ತರಾದಿ ಮಾರ್ಗಭಿನ್ನವಾದ ಕನ್ನಡ ಭಾಷಾ ಪ್ರಯೋಗಗಳ) ಉಕ್ತಿವಿನ್ಯಾಸಗಳನ್ನು ಅನುಲಕ್ಷಿಸಿ ವಿಚಾರಮಾಡಿ, ಪೂರ್ವದ ಮಹಾಕವಿಗಳ ಪ್ರಯೋಗಗಳಲ್ಲಿ ಕಂಡುಬುರವ ಗುಣಸಂಪದವನ್ನು ಆಯ್ದುಕೊಂಡು, ಅವುಗಳ ಮೂಲಕ ರಚಿಸಿದ ಒಂದು ಕಾವ್ಯದಿಂದ ಶ್ರೀವಿಜಯ ಸಂಭೂತ ಆನಂದವನ್ನು (=ಪರಮ) ಸಿದ್ಧಿಯ ಆನಂದನವನ್ನು ತನಗೆ ಆಗಿಸಿದವನೇ (=ತಾನು ಪಡೆದುಕೊಳ್ಳುವವನೇ) (ನಿಜವಾಗಿಯೂ) ಕವೀಶ್ವರನೆನಿಸುವನು. *ಇದು ಪದ್ಯದ ನೇರವಾದ ಅನುಗತಾರ್ಥ. ಇಲ್ಲಿ ಪದಗಳನ್ನು ಹಿಗ್ಗಾಮುಗ್ಗಾ ಎಳೆಯುತ್ತ, ವ್ಯಾಖ್ಯಾನ ಕಲ್ಪನೆಯ ಕುದುರೆಯನ್ನೋಡಿಸುತ್ತ, ಈ ಗ್ರಂಥಕಾರನ ಹೆಸರು ‘ಕವೀಶ್ವರ’ ಇಲ್ಲವೆ ‘ಶ್ರೀವಿಜಯ’ ಎಂದು ಸಾಧಿಸುವ ಅಗತ್ಯವೇನೂ ವಾದಕುತೂಹಲವಿಲ್ಲದವರಿಗೆ ಕಾಣಿಸದು. ಆತ್ಮಾರ್ಥಕವಾದ ‘ತನಗೆ’ ಶಬ್ದ ಗ್ರಂಥಕಾರನಿಗೆ ಅನ್ವಯಿಸುವುದಕ್ಕಿಂತಲೂ ಉಕ್ತಶಾಸ್ತ್ರಾನುಸಾರ ಕಾವ್ಯರಚನೆಗೆ ಹೊರಟಾತನಿಗೆ ಅನ್ವಯಿಸುವುದು ಯುಕ್ತತರವಾಗಿದೆ. ಈ ಗ್ರಂಥಕಾರನು ಮತ್ತೆಲ್ಲೂ ಈ ರೀತಿಯ ಸ್ವವಿಷಯಕವಾದ ಪ್ರಯೋಗವನ್ನು ಮಾಡಿರುವುದು ಕಂಡಿಲ್ಲ; ಇಲ್ಲಿಯೂ ಮೂಡಿರುವ ಸಂಭವವಿಲ್ಲ.*

ಗದ್ಯ || ಇದು ಪರಮ ಶ್ರೀ ನೃಪತುಂಗದೇವಾನುಮತಮಪ್ಪ

ಕವಿರಾಜಮಾರ್ಗದೊಳ್

ಶಬ್ದಾಲಂಕಾರ-ವರ್ಣನಾ-ನಿರ್ಣಯಂ

ದ್ವಿತೀಯ-ಪರಿಚ್ಛೇದಂ ||

ಇಲ್ಲಿಗೆ ಪರಮಶ್ರೀ ನೃಪತುಂಗದೇವನಿಂದ ಅನುಮತವಾದ “ಕವಿರಾಜಮಾರ್ಗದಲ್ಲಿ ‘ಶಬ್ದಾಲಂಕಾರಗಳ ಲಕ್ಷಣದ ನಿರ್ಣಯ’ವೆಂಬ ಎರಡನೆಯ ಪರಿಚ್ಛೇದ ಮುಗಿದುದು.

[1] ಧವಳೋರ್ವಿಪೋಕ್ತಮಾರ್ಗೋ ‘ಮ’. ಧವಲೋರ್ವಿಪನೀತಿಮಾರ್ಗೋ ‘ಸೀ’; ಎರಡನೆಯದರಲ್ಲಿ ಒಂದಕ್ಷರ ಛಂದಸ್ಸಿಗೆ ಹೆಚ್ಚಾಗಿದೆ.

[2] ಮಾರ್ಗಾ ‘ಸೀ’ ಇಲ್ಲಿಯೂ ಛಂದೋಭಂಗವಾಗುತ್ತದೆ.

[3] ಬಗೆವಂತೆ ‘ಕ’.

[4] ವೀಧಿಮಾಳಂ ‘ಪಾ’, ವೀಧಿಮಾಳಿ ‘ಮ’. ವೀಚಿಮಾಲಾ ‘ಸೀ’. ಇಲ್ಲಿ ಅರ್ಥವಿರಾಮವಾಗುವಂತೆ ಪರಿಷ್ಕೃತಪಾಠ ಕೊಟ್ಟಿದೆ.

[5] ಕೊಂಡ ‘ಪಾ’.

[6] ನಾಯ್ದುವರಿಂ ‘ಅ, ಬ’.

[7] ತನಗಾಗಿಸಿದಂ ‘ಬ. ಕ’.

Kanaja

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published. Required fields are marked *