ಕರ್ನಾಟಕದ ವಿಶ್ವವಿದ್ಯಾಲಯಗಳು

ಕರ್ನಾಟಕದ ವಿಶ್ವವಿದ್ಯಾಲಯಗಳು

ರಾಜ್ಯದ ವಿಶ್ವವಿದ್ಯಾಲಯಗಳು

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

ಬೆಂಗಳೂರು ವಿಶ್ವವಿದ್ಯಾಲಯವು ೧೯೬೪ರಲ್ಲಿ ಪ್ರಾರಂಭವಾಯಿತು. ಹೆಚ್ ನರಸಿಂಹಯ್ಯ ನೂತನ ಆವರಣವನ್ನು ಜ್ಣಾನಭಾರತಿಯಲ್ಲಿ ಸ್ಥಾಪಿಸಿದರು ಮತ್ತು ಸ್ಥಾಪಕ ಉಪಕುಲಪತಿಗಳಾಗಿದ್ದರು.

ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು

ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯವು ೧೯೯೬ರಲ್ಲಿ ಬೆಂಗಳೂರಿನ ಜಯನಗರದಲ್ಲಿ ಪ್ರಾರಂಭವಾಗಿದೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಬೆಂಗಳೂರು ನಗರದಲ್ಲಿದೆ. ಇದು ೨೦೧೦ರಲ್ಲಿ ಸ್ಥಾಪಿತವಾಗಿದೆ.

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ನಾರಾಯಣ ಗೌಡ .

ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಮೈಸೂರು ವಿಶ್ವವಿದ್ಯಾಲಯವು ಭಾರತದ ಒಂದು ಪ್ರಮುಖ ವಿಶ್ವವಿದ್ಯಾಲಯ. ಮೈಸೂರು ವಿಶ್ವವಿದ್ಯಾಲಯ ೩೯ ಇಲಾಖೆಗಳನ್ನು ಹೊಂದಿದೆ. ಒಟ್ಟು ೬೫ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್ ಡಿ ಪದವಿಗಳನ್ನು ಇಲ್ಲಿ ಪಡೆಯಬಹುದಾಗಿದೆ.

ಮೈಸೂರು ವಿಶ್ವವಿದ್ಯಾಲಯವು ೧೯೧೬ರ ಜುಲೈ ೧೭ರಂದು ಮೈಸೂರಿನ ಆಗಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಪ್ರಾರಂಭವಾದದ್ದು. ಥಾಮಸ್ ಡೆನ್ಹಾಮ್ ಮತ್ತು ಸಿ.ಆರ್.ರೆಡ್ಡಿ ಅವರು, ಅಮೇರಿಕ ಪ್ರವಾಸ ನಂತರ ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ವಿಶ್ವವಿದ್ಯಾಲಯವನ್ನು ಮಹಾರಾಜರು ಸ್ಥಾಪಿಸಿದರು. ಮುಖ್ಯವಾಗಿ ಶಿಕಾಗೊ ವಿಶ್ವವಿದ್ಯಾಲಯ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯ, ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ರಚನೆ ಮತ್ತು ಆಡಳಿತಗಳ ಆಳವಾದ ವಿಶ್ಲೇಷಣೆಯ ಮೇಲೆ ಮೈಸೂರು ವಿಶ್ವವಿದ್ಯಾಲಯವನ್ನು ಆಧರಿಸಲಾಯಿತು. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರೋತ್ಸಾಹದಿಂದ ವಿಶ್ವವಿದ್ಯಾಲಯವು ಭಾರತದಲ್ಲಿಯೇ ಅಪ್ರತಿಮ ವಿದ್ಯಾಕೇಂದ್ರಗಳಲ್ಲಿ ಒಂದೆನಿಸಿತು. ಪ್ರಸ್ತುತ ಪ್ರೊ. ರಂಗಪ್ಪ ಅವರು ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಹೆಮ್ಮೆಯ ಅಂಗ ಸಂಸ್ಥೆ ಯಾದ ವಿಶ್ವ ವಿದ್ಯಾನಿಲಯ ಸಂಜೆ ಕಾಲೇಜು ೧೯೬೫ ರಲ್ಲಿ ಸ್ಥಾಪಿಸಲ್ಪಟ್ಟಿತು. ಪ್ರಸ್ತುತ ತನ್ನ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ (೨೦೧೫) ಈ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡಿದ, ಮಾಡುತ್ತಿರುವ ಮೈಸೂರಿನ ಹೆಮ್ಮೆಯ ವಿದ್ಯಾಸಂಸ್ಥೆ. ಇಲ್ಲಿ ತರಗತಿಗಳು ಸಂಜೆ ವೇಳೆ ನಡೆಯುವುದರಿಂದ ಬಹುತೇಕ ಉದ್ಯೋಗಸ್ಥರ ಅಕ್ಷರ ದಾಹವನ್ನು ನೀಗುತ್ತಿರುವ ಸಂಜೆ ಮಲ್ಲಿಗೆ ಇದು. ಪ್ರಸ್ತುತ ಬಿ.ಎ. ಬಿ.ಕಾಂ ಮತ್ತು ಬಿ.ಬಿ.ಎಂ ಪದವಿಗಳಿಗೆ ಇಲ್ಲಿ ಪ್ರವೇಶಾತಿ ಉಂಟು. ೨೦೧೩-೧೪ನೇ ಸಾಲಿನಿಂದ ಮೈಸೂರು ವಿ.ವಿ.ಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಂಜೆಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ಆರಂಭವಾಗುತ್ತಿದೆ. ಈ ಸಾಲಿನಿಂದ ಎಂ.ಎ. ಇತಿಹಾಸ ದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪ್ಸಿಸಲಾಗಿದೆ. ಪ್ರಸ್ತುತ ೧೮ ಅಧ್ಯಾಪಕರು ಮತ್ತು ಸುಮಾರು ೩೦ ಮಂದಿ ಅತಿಥಿ ಉಪನ್ಯಾಸಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು ೮೦೦ ವಿದ್ಯಾರ್ಥಿಗಳಿದ್ದಾರೆ. ಕಾಲೇಜಿನಲ್ಲಿ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ ಘಟಕಗಳು ಸಕ್ರಿಯವಾಗಿವೆ. ಕಾಲೇಜಿನಿಂದ ಸಂಜೆ ಮಲ್ಲಿಗೆ ಎಂಬ ವಾರ್ಷಿಕ ಸಂಚಿಕೆ ಹೊರ ಬರುತ್ತಿದೆ. ಈ ಬಾರಿ ಎಂ ಎ. ಇತಿಹಾಸ ಸ್ನಾತಕೋತ್ತರ ಪದವಿ ಯನ್ನು ಆರಂಭಿಸಲಾಗಿದ್ದು ‘ಎ’ ಸ್ಕೀಮ್ ಅಡಿಯಲ್ಲಿ ೧೪ ಸೀಟುಗಳು ಮತ್ತು ‘ಬಿ. ಸ್ಕೀಮ್ ಅಡಿಯಲ್ಲಿ ೭ ಸೀಟುಗಳು ಲಭ್ಯವಿವೆ. 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಮೈಸೂರು ನಗರದ ಮನಸ ಗಂಗೋತ್ರಿಯಲ್ಲಿದೆ. ಇದು ೧೯೯೬ರಲ್ಲಿ ಸ್ಥಾಪಿತವಾಗಿದೆ.

ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು

ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ೨೦೦೯ರಲ್ಲಿ ಪ್ರಾರಂಭವಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಕರ್ನಾಟಕ ವಿಶ್ವವಿದ್ಯಾಲಯ – ಕರ್ನಾಟಕ ಹಾಗು ಭಾರತದಲ್ಲಿನ ಪ್ರಮುಖ ವಿಶ್ವವಿದ್ಯಾಲಯಗಳಲ್ಲೊಂದು. ಏಕೀಕೃತ ಕರ್ನಾಟಕದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಮೈಸೂರು ವಿಶ್ವವಿದ್ಯಾನಿಲಯದ ನಂತರದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ “ಶ್ರೇಷ್ಠತೆಯ ಸಾಮರ್ಥ್ಯವುಳ್ಳ ವಿಶ್ವವಿದ್ಯಾಲಯ”ವೆಂಬ ಮಾನ್ಯತೆ ಪಡೆದಿದೆ.

ಕರ್ನಾಟಕ ಏಕೀಕರಣ ೧೯೫೬ನೆಯ ಇಸವಿಯಲ್ಲಿ ಆಯಿತು. ಆವರೆಗೂ ಆಗಿನ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳನ್ನು ಮುಂಬಯಿ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶದಲ್ಲಿದ್ದ ಕಾಲೇಜುಗಳ ಅವಶ್ಯಕತೆಯನ್ನು ಗುರುತಿಸಿ ೧೯೪೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಸ್ಥಾಪನೆಯಾದಾಗ ಈ ವಿಶ್ವವಿದ್ಯಾಲಯ ಇದ್ದದ್ದು ಮುಂಬಯಿಯಲ್ಲಿ! ೧೯೫೦ರಲ್ಲಿ ವಿಶ್ವವಿದ್ಯಾಲಯವನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಯಿತು ಹಾಗು ೧೯೫೦ ಮಾರ್ಚ್ ತಿಂಗಳಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು.

ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಕೃಷಿ ವಿಶ್ವವಿದ್ಯಾಲಯವು ಧಾರವಾಡ ನಗರದ ಹೊರವಲಯದಲ್ಲಿ ೧೯೮೬ರಲ್ಲಿ ಸ್ಥಾಪನೆಯಾಗಿದೆ.

ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ

ಕುವೆಂಪು ವಿಶ್ವವಿದ್ಯಾನಿಲಯ – ಕರ್ನಾಟಕ ರಾಜ್ಯದಲ್ಲಿರುವ ವಿಶ್ಯವವಿದ್ಯಾನಿಲಯಗಳಲ್ಲಿ ಒಂದು.

ಈ ವಿಶ್ವವಿದ್ಯಾನಿಲಯವನ್ನು ಕನ್ನಡ ಸಾಹಿತ್ಯಲೋಕದ ಅಗ್ರಗಣ್ಯರಲ್ಲೊಬ್ಬರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ೧೯೮೭ನೇ ಇಸ್ವಿ ಜೂನ್ ೨೯ರಂದು ಪ್ರಾರಂಭಿಸಲಾಯಿತು.ಇದರ್ ಮೊದಲ ಕುಲಪತಿಗಳು ಲೇಖಕರಾದ ಶಾಂತಿನಾಥ ದೇಸಾಯಿ ಅವರು.

ಮಲೆನಾಡಿನ ಪ್ರಕೃತಿ ಮಡಿಲಲ್ಲಿರುವ ಜ್ಞಾನ ಸಹ್ಯಾದ್ರಿ ಪ್ರಾಂಗಣದಲ್ಲಿ ಈ ವಿಶ್ಯವಿದ್ಯಾನಿಲಯ ಸ್ಥಾಪಿತವಾಗಿದೆ. ಈ ಪ್ರಾಂಗಣವು ಭದ್ರಾ ನದಿಯ ಹತ್ತಿರವಿದ್ದು, ಶಿವಮೊಗ್ಗದಿಂದ ೨೮ಕಿ.ಮೀ. ದೂರದಲ್ಲಿಯೂ, ಭದ್ರಾವತಿಯ ಕೈಗಾರಿಕಾ ಪಟ್ಟಣದಿಂದ ೧೮ ಕಿ.ಮೀ ದೂರದಲ್ಲಿಯೂ ಇದೆ.ತರೀಕೆರೆಯಿಂದ ೧೮ ಕಿ.ಮೀ ದೂರದಲ್ಲಿದೆ.

ಈ ವಿಶ್ವವಿದ್ಯಾಲಯದ ಕುರಿತಾದ ಗೀತೆಯನ್ನು ಕನ್ನಡದ ಪ್ರೇಮ ಕವಿ ಎಂದೇ ಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ರಚಿಸಿದ್ದಾರೆ.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ೨೦೦೮ರಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭವಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ೧೯೯೮ ರಲ್ಲಿ ಸ್ಥಾಪನೆಯಾಯಿತು. ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲದ ವ್ಯಾಪ್ತಿಯಲ್ಲಿ ಕರ್ನಾಟಕರಾಜ್ಯದ ಸುಮಾರು ೧೪೧ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬರುತ್ತವೆ. ಮೊದಲ ಅವಧಿಗೆ ಉಪಕುಲಪತಿಗಳಾಗಿ ನೇಮಕಗೊಂಡು, ವಿಶ್ವವಿದ್ಯಾಲದಲ್ಲಿ ಗಟ್ಟಿ ಅಡಿಪಾಯ ಹಾಕಿದವರು ಡಾ. ಎಸ್. ರಾಜಸೇಖರಯ್ಯ ಅವರು. ಮುಂದಿನ ಎರಡು ಅವಧಿಗೆ ಡಾ. ಕೆ. ಬಲವೀರ ರೆಡ್ಡಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಪ್ರಸಕ್ತ ಡಾ ಹೆಚ್.ಮಹೇಶಪ್ಪ ರವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಂತ್ರಿಕ ಶಿಕ್ಷಣದ ಸುಮಾರು ೨೬ ಕ್ಕೂ (ಅಧಿಕ)ವಿವಿಧ ಪದವಿ ಹಾಗೂ ೫೪ ಸ್ನಾತಕೋತ್ತರ ಪದವಿ ವಿಭಾಗಳಲ್ಲಿ ಪದವಿಗಳನ್ನು ಈ ವಿಶ್ವವಿದ್ಯಾಲಯ ಪ್ರದಾನ ಮಾಡುತ್ತದೆ. ಇದಲ್ಲದೇ, ಎಂ.ಬಿ.ಎ . ಹಾಗು ಎಂ.ಸಿ.ಎ. ಸ್ನಾತಕೋತ್ತರ ಪದವಿಗಳನ್ನೂ ವಿಶ್ವವಿದ್ಯಾಲಯ ನೀಡುತ್ತದೆ. ಸಂಶೋಧನಾ ಎಂ.ಎಸ್ ಮತ್ತು ಪಿಎಚ್ಡಿ ಪದವಿಗಳನ್ನೂ ಸಹ ವಿಶ್ವವಿದ್ಯಾಲಯ ನೀಡುತ್ತದೆ.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಬಳ್ಳಾರಿ ಬೆಳಗಾವಿ ಭೂತರಾಮನಹಟ್ಟಿಯಲ್ಲಿ ೨೦೧೦ರಲ್ಲಿ ಪ್ರಾರಂಭವಾಗಿದೆ.

ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ

ಗುಲ್ಬರ್ಗಾ ವಿಶ್ವವಿದ್ಯಾಲಯವು ಗುಲ್ಬರ್ಗಾ ನಗರದಲ್ಲಿ ೧೯೮೦ರಲ್ಲಿ ಪ್ರಾರಂಭವಾಯಿತು.

ಮಂಗಳೂರು ವಿಶ್ವವಿದ್ಯಾಲಯ

ಮಂಗಳೂರು ವಿಶ್ವವಿದ್ಯಾಲಯವು ಮಂಗಳೂರಿನಲ್ಲಿದೆ.ಇದರ ಧ್ಯೇಯ ವಾಕ್ಯ ಜ್ಞಾನವೇ ಬೆಳಕು. ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶವನ್ನು ಹೊಂದಿದೆ. ದಕ್ಷಿಣ ಕನ್ನಡ,ಕೊಡಗು ಹಾಗು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ.

ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಸ್ಥಾಪಿತವಾಗಿರುವ ವಿಶ್ವವಿದ್ಯಾನಿಲಯ. ಚಂದ್ರಶೇಖರ ಕಂಬಾರರು ಇದರ ಮೊದಲ ಕುಲಪತಿಗಳಾಗಿದ್ದರು. ಪ್ರಸ್ತುತ ಹಿ.ಚಿ. ಬೋರಲಿಂಗಯ್ಯನವರು ಕುಲಪತಿಯಾಗಿದ್ದಾರೆ. ಕರ್ನಾಟಕ ಹಾಗು ಕನ್ನಡದ ಬಗೆಗೆ ಸಂಶೋಧನೆ ನಡೆಸಲು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಎಲ್ಲ ರೀತಿಯ ಅರಿವು ಕನ್ನಡದಲ್ಲಿ ಸಿಗುವಂತಾಗಬೇಕು. ಹಾಗೆಯೇ ಕನ್ನಡ ಮತ್ತು ಕರ್ನಾಟಕದ ಬಗೆಗೆ ಬೇರೆ ಭಾಷೆಗಳಲ್ಲಿ ಅರಿವು ದೊರಕುವಂತೆ ಮಾಡುವುದು ಈ ವಿಶ್ವವಿದ್ಯಾಲಯದ ಉದ್ದೇಶ. ವಿಶ್ವವಿದ್ಯಾಲಯದ ಮೂಲ ಕೇಂದ್ರವು ಹಂಪಿಗೆ ೫ ಕಿ.ಮೀ. ದೂರದಲ್ಲಿ ಹೊಸಪೇಟೆಯಿಂದ ೧೬ ಕಿ.ಮೀ. ದೂರದಲ್ಲಿ ವಿದ್ಯಾರಣ್ಯ ಎಂಬ ೮೦೦ ಎಕರೆಗಳ ಆವರಣದಲ್ಲಿದೆ. ಇದಲ್ಲದೆ ಬಾದಾಮಿ, ಕುಪ್ಪಳಿ, ಕೂಡಲಸಂಗಮ ಗಳಲ್ಲಿ ಉಪಗ್ರಹ ಕೇಂದ್ರಗಳನ್ನು ಹೊಂದಿದೆ.

ಈ ವಿಶ್ವವಿದ್ಯಾಲಯದಲ್ಲಿ ವಿದ್ಯೆಯನ್ನು ಕಲಿಸುವುದಕ್ಕಿಂತ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಶೋಧನೆಯ ಫಲಿತಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತದೆ. ಇದುವರೆವಿಗೂ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಪುಸ್ತಕಗಳ ಸಂಖ್ಯೆ ಸಾವಿರವನ್ನು ದಾಟಿದೆ. ಈ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರವು ಕನ್ನಡದ ಶ್ರೇಷ್ಟ ಸಾಹಿತ್ಯ ಪಠ್ಯಗಳನ್ನು ಇಂಗ್ಲಿಶ್ ಭಾಷೆಗೆ ಅನುವಾದಿಸಿ ಪ್ರಕಟಿಸುತ್ತಿದೆ. ಇದುವರೆವಿಗೂ ಮೂರು ಸಂಪುಟಗಳು ಡಾ. ತಾರಕೇಶ್ವರ್ ರವರ ಸಂಚಾಲಕತ್ವದಲ್ಲಿ ಹೊರಬಂದಿವೆ. ಇದಲ್ಲದೆ ಹಲವಾರು ವಿದ್ವತ್ ಪತ್ರಿಕೆಗಳನ್ನೂ ಪ್ರಕಟಿಸುತ್ತಿದೆ. ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್ ಎಂಬ ಇಂಗ್ಲಿಶ್ ಜರ್ನಲ್ ಕೂಡ ಪ್ರಕಟಿಸುತ್ತಿದೆ.

ಈ ವಿಶ್ವವಿದ್ಯಾಲಯದ ಸ್ವರೂಪ ಈ ವಿಶ್ವವಿದ್ಯಾಲಯದಲ್ಲಿ ಮೂರು ಅಂಗಗಳಿವೆ: ೧. ಅಧ್ಯಯನಾಂಗ ೨. ಆಡಳಿತಾಂಗ ೩. ಪ್ರಸಾರಾಂಗ

ವಿಶ್ವವಿದ್ಯಾಲಯದಲ್ಲಿ ಮೂರು ನಿಕಾಯಗಳಿವೆ: ೧. ಭಾಷಾ ನಿಕಾಯ, ೨. ಸಮಾಜ ವಿಜ್ಞಾನ ನಿಕಾಯ, ೩. ಲಲಿತಕಲಾ ನಿಕಾಯ

ಭಾಷಾ ನಿಕಾಯದಲ್ಲಿರುವ ವಿಭಾಗಗಳು: ೧. ಭಾಷಾಂತರ ಅಧ್ಯಯನ ವಿಭಾಗ ೨. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ೩. ಕನ್ನಡ ಭಾಷಾಧ್ಯಯನ ವಿಭಾಗ ೪. ದ್ರಾವಿಡ ಸಂಸ್ಕೃತಿ ವಿಭಾಗ ೫. ಹಸ್ತಪ್ರತಿ ವಿಭಾಗ ೬. ಮಹಿಳಾ ಅಧ್ಯಯನ ವಿಭಾಗ
ಸಮಾಜ ವಿಜ್ಞಾನ ನಿಕಾಯದಲ್ಲಿರುವ ವಿಭಾಗಗಳು: ೧. ಪುರಾತತ್ವ ಮತ್ತು ಪ್ರಾಚೀನ ಇತಿಹಾಸ ವಿಭಾಗ ೨. ಚರಿತ್ರೆ ವಿಭಾಗ ೩. ಜಾನಪದ ಅಧ್ಯಯನ ವಿಭಾಗ ೪. ಬುಡಕಟ್ಟು ಅಧ್ಯಯನ ವಿಭಾಗ ೫. ಅಭಿವೃದ್ಧಿ ಅಧ್ಯಯನ್ ವಿಭಾಗ

ಲಲಿತಕಲಾ ನಿಕಾಯದಲ್ಲಿರುವ ವಿಭಾಗಗಳು: ೧. ಸಂಗೀತ ವಿಭಾಗ ೨. ದೃಶ್ಯಕಲಾವಿಭಾಗ ೩. ಶಿಲ್ಪಕಲಾ ವಿಭಾಗ
ಇದಲ್ಲದೆ ಈ ಕೆಳಗಿನ ಅಧ್ಯಯನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ: ೧. ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ ೨. ಮಹಿಳಾ ಅಧ್ಯಯನ ಕೇಂದ್ರ, ಹಂಪಿ ೩. ಭಾಷಾಂತರ ಕೇಂದ್ರ, ಹಂಪಿ ೪. ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲ ಸಂಗಮ {ಚುಟುಕು}}

ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಕೃಷಿ ವಿಶ್ವವಿದ್ಯಾಲಯ ೨೦೦೮ರಲ್ಲಿ ರಾಯಚೂರಿನಲ್ಲಿ ಪ್ರಾರಂಭವಾಗಿದೆ.

ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ

ದಾವಣಗೆರೆ ವಿಶ್ವ ವಿದ್ಯಾಲಯವು ಸಮೀಪದ ತೋಳಹುಣಸೆ ಗ್ರಾಮದ ಬಳಿ ಎಪ್ಪತ್ತಮೂರು ಎಕರೆ ಪ್ರದೇಶದಲ್ಲಿ ತಲೆ ಎತ್ತಿದ್ದ ಸ್ನಾತಕೋತ್ತರ ಕೇಂದ್ರವೇ ವಿಶ್ವ ವಿದ್ಯಾಲಯವಾಗಿದೆ.

ತುಮಕೂರು ವಿಶ್ವವಿದ್ಯಾಲಯ, ತುಮಕೂರು

ತುಮಕೂರು ವಿಶ್ವವಿದ್ಯಾಲಯವು ೨೦೦೪ರಲ್ಲಿ ಹೊಸದಾಗಿ ತುಮಕೂರಿನಲ್ಲಿ ಅಸ್ತಿತ್ವಕ್ಕೆ ಬಂದಿತು.

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರ

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವು ೨೦೦೩ರಲ್ಲಿ ಬಿಜಾಪುರದಲ್ಲಿ ಸ್ಥಾಪಿತವಾಗಿದೆ. ಇದು ಮಹಿಳೆಯರಿಗೆ ಮಾತ್ರ ಶಿಕ್ಷಣ ನೀಡುತ್ತಿದೆ. ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿದೆ. ಉತ್ತರ ಕರ್ನಾಟಕ ಭಾಗದ ಮಹಿಳೆಯರಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತದೆ. ಉತ್ತರ ಕರ್ನಾಟಕದ ಎಲ್ಲ ಮಹಿಳಾ ವಿದ್ಯಾಲಯಗಳನ್ನು ಒಳಗೊಂಡಿದೆ. ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಿವೆ. ಅಥಣಿ ರಸ್ತೆಯಲ್ಲಿ ೧೦೦ ಎಕರೆ ಕ್ಯಾಂಪಸ್ ಹೊಂದಿದೆ. ತೊರವಿ ಗ್ರಾಮದ ಸಮೀಪದಲ್ಲಿಯೇ, ರಾಜ್ಯದ ಏಕೈಕ ವಿಶ್ವವಿದ್ಯಾನಿಲಯವಾಗಿ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯವು ತಲೆ ಎತ್ತಿ ನಿಂತಿದೆ. ಮಹಿಳೆಯರನ್ನು ಶಿಕ್ಷಣದಿಂದ ಸಶಕ್ತರನ್ನಾಗಿಸುವ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ತರುವ ಧ್ಯೇಯದೊಂದಿಗೆ ೨೦೦೩ ರಲ್ಲಿ ಸ್ಥಾಪಿತವಾದ ಇದರಲ್ಲಿ ಪ್ರಸ್ತುತ ೧೫ ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ವಿವಿಧ ಭಾಗಗಳ ಮಹಿಳಾ ವಿದ್ಯಾರ್ಥಿನಿಯರು ಇಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಳ್ಳಾರಿ ನಗರದ ವಿನಾಯಕ ನಗರದಲ್ಲಿ ೨೦೧೦ರಲ್ಲಿ ಪ್ರಾರಂಭವಾಗಿದೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಾವೆರಿ ಜಿಲ್ಲೆಯ ಗೊಟಗೋಡಿಯಲ್ಲಿ ೨೦೧೦ರಲ್ಲಿ ಪ್ರಾರಂಭವಾಯಿತು.

ಭಾರತದ ಪ್ರಪ್ರಥಮ ಜಾನಪದ ವಿಶ್ವವಿದ್ಯಾಲಯ ಹೆಗ್ಗಳಿಕೆಯೊಂದಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ೨೦೧೦ರ ಸೆಪ್ಟೆಂಬರ ೨೮ ರಂದು ಜಾರಿಗೆ ಬರುವಂತೆ ವಿಶೇಷಾಧಿಕಾರಿಗಳ ನೇಮಕದೊಂದಿಗೆ ಬೆಂಗಳೂರಿನಲ್ಲಿ ಸ್ಥಾಪಿತವಾಯಿತು.

ವಿಶೇಷಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರೊ. ಅಂಬಳಿಕೆ ಹಿರಿಯಣ್ಣ ಮಧ್ಯ ಕರ್ನಾಟಕದಲ್ಲಿ ಹಲವಾರು ಸ್ಥಳ ಪರಿವೀಕ್ಷಣೆ ಕಾರ್ಯ ಕೈಗೊಂಡು, ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲೂಕು ರಾಷ್ಟ್ರೀಯ ಹೆದ್ದಾರಿ – ೪ (ಬೆಂಗಳೂರು-ಪೂಣಾ ರಾ.ಹೆ.) ಕ್ಕೆ ಹೊಂದಿಕೊಂಡಂತಿರುವ ಗೊಟಗೋಡಿ ಎಂಬ ಸ್ಥಳವನ್ನು ಗುರುತಿಸಲಾಯಿತು. ವಿಶೇಷಾಧಿಕಾರಿಗಳಾಗಿದ್ದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರನ್ನೇ “ಉಪ ಕುಲಪತಿ”ಗಳಾಗಿ ನೇಮಿಸಲಾಯಿತು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ೨೦೧೨ರ ಜೂನ್ ೧೬ರಂದು ಗೊಟಗೋಡಿನಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ೨೦೧೨-೧೩ನೇ ಸಾಲಿನಿಂದ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಾನಪದ ವಿಶ್ವವಿದ್ಯಾಲಯದಲ್ಲಿ ೬ ನಿಕಾಯಗಳಿದ್ದು, ಒಟ್ಟು ೧೭ ಅಧ್ಯಯನ ವಿಭಾಗಗಳಿವೆ. ಎಂಟು ಅಲ್ಪಾವಧಿ ಶೈಕ್ಷಣಿಕ ಕಾರ್ಯಕ್ರಮದಡಿ ೭೮ ಸರ್ಟಿಫಿಕೆಟ್ ಮತ್ತು ಸ್ನತಕೋತ್ತರ ಡಿಪ್ಲೊಮಾ ಕೋರ್ಸಗಳನ್ನು ಪ್ರಾರಂಭಿಸಲಾಗಿದೆ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಹುಬ್ಬಳ್ಳಿಯಲ್ಲಿ ೨೦೦೯ರಲ್ಲಿ ಪ್ರಾರಂಭವಾಗಿದೆ.

ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ

ತೋಟಗಾರಿಕೆ ವಿಶ್ವವಿದ್ಯಾಲಯವು ೨೦೦೮ರಲ್ಲಿ ಬಾಗಲಕೋಟ ನಗರದ ನವನಗರದಲ್ಲಿ ಪ್ರಾರಂಭವಾಗಿದೆ.

ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ

ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯವು ೨೦೦೪ರಲ್ಲಿ ಬೀದರ ನಗರದ ನಂದಿನಗರದಲ್ಲಿ ಪ್ರಾರಂಭವಾಗಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳು

ಕೇಂದ್ರೀಯ ವಿಶ್ವವಿದ್ಯಾಲಯ, ಗುಲ್ಬರ್ಗಾ

ಡೀಮ್ಡ್ ವಿಶ್ವವಿದ್ಯಾಲಯಗಳು

 1. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಬೆಂಗಳೂರು
 2. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
 3. ಭಾರತೀಯ ವ್ಯಸಸ್ಥಾಪ್ರಭಂದ ಸಂಸ್ಥೆ, ಬೆಂಗಳೂರು
 4. ಅಂತರಾಷ್ತ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಬೆಂಗಳೂರು
 5. ಜವಾಹರಲಾಲ್ ನೆಹರು ಆಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರ, ಬೆಂಗಳೂರು
 6. ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ರಾಷ್ಟ್ರೀಯ ಸಂಸ್ಥೆ, ಬೆಂಗಳೂರು
 7. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆ, ಬೆಂಗಳೂರು
 8. ಕ್ರೇಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು
 9. ಜೈನ್ ವಿಶ್ವವಿದ್ಯಾಲಯ, ಬೆಂಗಳೂರು
 10. ಬಿ.ಎಲ್.ಡಿ.ಈ.ಎ. ವಿಶ್ವವಿದ್ಯಾಲಯ, ಬಿಜಾಪುರ
 11. ಜಗದ್ಗುರು ಶ್ರೀ ಶಿವರಾತ್ರೇಶ್ವರ ವಿಶ್ವವಿದ್ಯಾಲಯ, ಮೈಸೂರ
 12. ಕೆ.ಎಲ್.ಇ. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಬೆಳಗಾವಿ
 13. ನಿಟ್ಟೆ ವಿಶ್ವವಿದ್ಯಾಲಯ, ಮಂಗಳೂರ
 14. ಯೊನಪೆಯ ವಿಶ್ವವಿದ್ಯಾಲಯ, ಮಂಗಳೂರ
 15. ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಕೋಲಾರ
 16. ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ತುಮಕೂರ
 17. ಮಣಿಪಾಲ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಮಣಿಪಾಲ

ಖಾಸಗಿ ವಿಶ್ವವಿದ್ಯಾಲಯಗಳು

 • ಅಜೀಂ ಪ್ರೇಮಜಿ ವಿಶ್ವವಿದ್ಯಾಲಯ, ಬೆಂಗಳೂರು
 • ಅಲಾಯನ್ಸ್ ವಿಶ್ವವಿದ್ಯಾಲಯ, ಬೆಂಗಳೂರು

wikipedia

One comment

 1. ಉತ್ತಮ ಮಾಹಿತಿಗೆ ಧನ್ಯವಾದಗಳು

Leave a Reply

Your email address will not be published. Required fields are marked *