ಭಾರತವು ಅನೇಕ ಭಾಷೆಗಳನ್ನು ಹೊಂದಿರುವ ರಾಷ್ಟ್ರ. 1961ರ ಜನಗಣತಿಯ ಮಾಹಿತಿಯ ಮೇರೆಗೆ ಮಾತೃಭಾಷೆಗಳಾಗಿ ನಮೂದಿಸಿರುವ ಭಾಷೆಗಳ ಸಂಖ್ಯೆ 1652. ಕರ್ನಾಟಕವನ್ನು ತೆಗೆದುಕೊಂಡರೆ ಇಲ್ಲಿ 177 ಭಾಷೆಗಳನ್ನು ಮಾತೃಭಾಷೆಗಳನ್ನಾಗಿ ಹೊಂದಿರುವ ಜನರು ವಾಸಿಸುತ್ತಿದ್ದಾರೆ. ಕರ್ನಾಟಕದ ಪ್ರತಿಯೊಂದು ಊರೂ, ಪ್ರದೇಶವೂ ಅನೇಕ ಭಾಷೆಗಳನ್ನು ಆಡುವ ಜನರಿಂದಕೂಡಿದ್ದಾಗಿದೆ ಎಂದು ಹೇಳಬಹುದು.
ಕರ್ನಾಟಕದಲ್ಲಿ ಕನ್ನಡ, ಉರ್ದು, ತೆಲುಗು, ಮರಾಠಿ, ತಮಿಳು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಲಮಾಣಿ ಭಾಷೆಗಳನ್ನು ಮಾತೃಭಾಷೆಗಳನ್ನಾಗಿ ಹೊಂದಿರುವ ಜನರಿದ್ದಾರೆ. ಕನ್ನಡವನ್ನು ಮಾತೃಭಾಷೆ ಯನ್ನಾಗಿ ಬಳಸುವ ಜನರ ಸಂಖ್ಯೆ ಶೇ.65.94. ಉರ್ದು ತೆಲುಗು ನಂತರದ ಸ್ಥಾನಗಳನ್ನು ಪಡೆದಿವೆ. ಉರ್ದು ಶೇ.9.00, ತೆಲುಗು ಶೇ.8.7 (1971ರ ಜನಗಣತಿ ಆಧಾರ).
ಕನ್ನಡಿಗರು ಕರ್ನಾಟಕದಲ್ಲಿ ಮಾತ್ರವಲ್ಲದೇ ರಾಷ್ಟ್ರದ ಇನ್ನಿತರ ಭಾಗಗಳಲ್ಲೂ ಇದ್ದಾರೆ. ಅದರ ಶೇಕಡವಾರು ವಿವರ ಹೀಗಿದೆ. (1971) ಕರ್ನಾಟಕ ಶೇ. 89.02, ತಮಿಳುನಾಡು ಶೇ.4.86, ಮಹಾರಾಷ್ಟ್ರ ಶೇ. 3.57, ಆಂಧ್ರಪ್ರದೇಶ ಶೇ.1.96, ಕೇರಳ ಶೇ. 0.36 ಉಳಿದ ಶೇ. 33 ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿದ್ದಾರೆ.
1981ರ ಜನಗಣತಿಯ ಪ್ರಕಾರ ವಿವಿಧ ಜಿಲ್ಲೆಗಳಲ್ಲಿ ವಿವಿಧ ಮಾತೃ ಭಾಷೆಗಳನ್ನು ಹೊಂದಿರುವವರ ಸಂಖ್ಯೆಯನ್ನು ಇಲ್ಲಿ ನೀಡಿದೆ.
ಮೇಲಿನ ಪಟ್ಟಿಯನ್ನು ಗಮನಿಸಿದಾಗ ಸಾಮಾನ್ಯವಾಗಿ ಎಲ್ಲಾ ಜಿಲ್ಲೆ ಗಳಲ್ಲೂ ವಿವಿಧ ಭಾಷೆಗಳನ್ನು ಮಾತೃಭಾಷೆಗಳನ್ನಾಗಿ ಹೊಂದಿರುವ ಜನರನ್ನು ಕಾಣಬಹುದು.
ಆಡಳಿತದಲ್ಲಿ ಭಾಷೆ : ಕರ್ನಾಟಕದಲ್ಲಿ ಕನ್ನಡವೇ ಮುಖ್ಯ ಭಾಷೆ. ಕನ್ನಡವನ್ನು ಕರ್ನಾಟಕದ ಅಧಿಕೃತ ರಾಜ್ಯಭಾಷೆಯೆಂದು 1963ರಲ್ಲೇ ಘೋಷಿಸಲಾಯಿತು. ಸರ್ಕಾರದ ಎಲ್ಲಾ ಕಛೇರಿಗಳಲ್ಲೂ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಬಳಸಲು ಸೂಚಿಸಲಾಯಿತು. ಇದರ ಉಸ್ತುವಾರಿ ನೋಡಿಕೊಳ್ಳಲು ಕನ್ನಡ ಕಾವಲು ಸಮಿತಿಯನ್ನು 1983ೊರಲ್ಲಿ ರಚಿಸಲಾಯಿತು. ಸರ್ಕಾರದ ಎಲ್ಲಾ ಹಂತಗಳಲ್ಲಿಯೂ ಕನ್ನಡದ ಬಳಕೆಯನ್ನು ಕಡ್ಡಾಯವಾಗಿ ಮಾಡುವಂತೆ ನೋಡಿಕೊಳ್ಳುವುದು. ಈ ಸಮಿತಿಯ ಕೆಲಸ. 1992ರಲ್ಲಿ ರಚಿಸಲಾದ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಈ ಕೆಲಸವನ್ನು ನೋಡಿಕೊಳ್ಳುತ್ತಿದೆ. ರಾಜ್ಯದ ಕನ್ನಡ ಬಾರದ ಸರ್ಕಾರಿ ನೌಕರರಿಗೆ ಕನ್ನಡ ಕಲಿಸುವ ಏರ್ಪಾಡು ಮಾಡುವುದು, ಕನ್ನಡ ಬಳಕೆಗೆ ಅವಶ್ಯಕವಾದ ಸಾಮಗ್ರಿಗಳ ಪೂರೈಕೆ ಇತ್ಯಾದಿ ಕನ್ನಡ ಬಳಕೆಗೆ ಅವಶ್ಯಕವಾದ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಶಿಕ್ಷಣ ಕ್ಷೇತ್ರ
ಶಿಕ್ಷಣ ಕ್ಷೇತ್ರದಲ್ಲಿ ತ್ರಿಭಾಷಾ ಸೂತ್ರವನ್ನು ಅನುಸರಿಸುತ್ತಿರುವುದು ಗೋಚರವಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯ ಶಿಕ್ಷಣಕ್ಕೆ ಅನುಕೂಲವಿದೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ, ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತೃಭಾಷಾ ಶಿಕ್ಷಣಕ್ಕೆ ಅವಕಾಶವಿದೆ. ಕನ್ನಡೇತರರಿಗೆ ಮೂರನೆಯ ತರಗತಿಯಿಂದ ರಾಜ್ಯದ ಆಡಳಿತ ಭಾಷೆಯಾದ ಕನ್ನಡವನ್ನು ಕಲಿಸುವ ಏರ್ಪಾಡು ಮಾಡಲಾಗಿದೆ. ಐದರಿಂದ ಏಳನೆಯ ತರಗತಿಯವರೆಗೆ ಕನ್ನಡೇತರರಿಗೂ ಕನ್ನಡ ಕಡ್ಡಾಯ. ಕನ್ನಡ ವಿದ್ಯಾರ್ಥಿಗಳು ಮತ್ತೊಂದು ಭಾಷೆ ಕಲಿಯಬೇಕು. ಒಂದು ಮೂರನೆಯ ಭಾಷೆಯೂ ಇರುತ್ತದೆ (ಈಗಿನ ಪರಿಸ್ಥಿತಿಯಲ್ಲಿ ಕನ್ನಡ, ಇಂಗ್ಲಿಶ್, ಹಿಂದಿ) ಎಂಟರಿಂದ ಹತ್ತನೆಯ ತರಗತಿಯ ಎಲ್ಲಾ ವಿದ್ಯಾರ್ಥಿಗಳೂ ಕನ್ನಡ ಕಡ್ಡಾಯ ಓದಲೇಬೇಕು. ಆದರೆ ಇದು ಯಾವ ಸ್ಥಾನದಲ್ಲಾದರೂ, ಅಂದರೆ ಪ್ರಥಮ, ದ್ವಿತೀಯ ಅಥವಾ ತೃತೀಯ ಭಾಷೆಯಾಗಿರಬಹುದು. ಈ ಮೂರು ಪರೀಕ್ಷೆಗಳಲ್ಲೂ ಕಡ್ಡಾಯವಾಗಿ ಉತ್ತೀರ್ಣರಾಗಲೇಬೇಕು. ಇತರ ಭಾಷಿಕರಿಗೆ ಮರಾಠಿ, ಉರ್ದು, ಸಿಂಧಿ, ತೆಲುಗು, ಉರ್ದು ಪ್ರಾಥಮಿಕ ಶಾಲೆಗಳು ಇವೆ. ಉರ್ದು ಶಾಲೆಗಳು ರಾಜ್ಯದ ಎಲ್ಲಾ ಭಾಗಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ, ಇನ್ನಿತರ ಭಾಷೆಗಳ ಶಾಲೆಗಳು ಎಲ್ಲೆಲ್ಲಿ ಆಯಾ ಭಾಷಿಕರ ಸಂಖ್ಯೆ ಹೆಚ್ಚಾಗಿರುವುದೋ (ಉದಾ. ನೆರೆರಾಜ್ಯದ ಗಡಿ ಪ್ರದೇಶಗಳಲ್ಲಿ) ಅಲ್ಲಿ ಕಾಣಸಿಗುತ್ತವೆ. ಈ ಭಾಷೆಗಳ ಹಿತರಕ್ಷಣೆಗೆ ಅಲ್ಪಸಂಖ್ಯಾತ ಭಾಷೆಗಳ ಶಾಲೆಗಳ ನಿರ್ದೇಶನಾ ಲಯವೂ ಇದೆ.
ಶಿಕ್ಷಣ ಮಾಧ್ಯಮ : ಒಂದರಿಂದ ನಾಲ್ಕನೆ ತರಗತಿಯವರೆಗೆ ಮಾತೃಭಾಷಾ ಅಥವಾ ರಾಜ್ಯದ ಅಧಿಕೃತ ಭಾಷಾ ಮಾಧ್ಯಮ. ಅನಂತರದಲ್ಲಿ ಕನ್ನಡ ಹಾಗೂ ಇಂಗ್ಲಿಶ್ ಮಾಧ್ಯಮದಲ್ಲಿ ಕಲಿಯುವ ಅವಕಾಶವಿದೆ. ತಾಂತ್ರಿಕ ಶಿಕ್ಷಣ ಮಾಧ್ಯಮ ಇಂಗ್ಲಿಶ್.
ನ್ಯಾಯಾಲಯಗಳಲ್ಲಿ ಭಾಷೆಯ ಬಳಕೆ : ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ, ಮುಖ್ಯವಾಗಿ, ಸಿವಿಲ್ ನ್ಯಾಯಾಲಯಗಳಲ್ಲಿ ರಾಜ್ಯದ ಆಡಳಿತ ಭಾಷೆಯಾದ ಕನ್ನಡ ಬಳಸಲಾಗುತ್ತಿದೆ. ವ್ಯಕ್ತಿಯು ತನ್ನ ಹೇಳಿಕೆ ಗಳನ್ನು ತಾನು ಇಚ್ಛಿಸಿದ ಭಾಷೆಗಳಲ್ಲಿ ನೀಡಲು ಸಮ್ಮತಿಯಿದೆ. ಉಚ್ಚ ನ್ಯಾಯಾಲಯದಲ್ಲಿ ಇಂಗ್ಲಿಶ್ ಮಾತ್ರ ಬಳಕೆಯಲ್ಲಿದೆ.
ಸಮೂಹ ಮಾಧ್ಯಮ : ಕೇಂದ್ರ ಸರ್ಕಾರದ ಆಡಳಿತದಲ್ಲಿರುವ ಆಕಾಶವಾಣಿ, ದೂರದರ್ಶನಗಳನ್ನು ಗಮನಿಸಿದಾಗ, ಬೆಂಗಳೂರು ದೂರದರ್ಶನವೊಂದೇ ಕಾರ್ಯಕ್ರಮ ರೂಪಿಸುವ ಕೇಂದ್ರ. ಇಲ್ಲಿನ ಪ್ರಸಾರದ ಅವಧಿಯಲ್ಲಿ ಕನ್ನಡಕ್ಕೆ ಅಗ್ರಸ್ಥಾನ. ಇದಲ್ಲದೆ ಉರ್ದು, ಕೊಂಕಣಿ, ತುಳು ಮತ್ತು ಕೊಡಗು ಭಾಷಾ ಕಾರ್ಯಕ್ರಮಗಳೂ ಇರುತ್ತವೆ. ಸಾಮಾನ್ಯವಾಗಿ ವಾರಕ್ಕೊಮ್ಮೆ ಇವುಗಳ ಕಾರ್ಯಕ್ರಮವಿರುತ್ತದೆ. ಆಕಾಶವಾಣಿಯಲ್ಲಿ ಸಾಮಾನ್ಯವಾಗಿ ಕನ್ನಡ ಭಾಷೆಯ ಕಾರ್ಯಕ್ರಮವಿದ್ದರೂ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಹಿಂದಿ, ತುಳು, ಕೊಂಕಣಿ, ಉರ್ದು ಕಾರ್ಯಕ್ರಮಗಳೂ ಪ್ರಸಾರವಾಗುತ್ತವೆ.
ನಿಯತಕಾಲಿಕೆಗಳಲ್ಲಿ ದಿನಪತ್ರಿಕೆ, ವಾರ, ಮಾಸಪತ್ರಿಕೆಗಳು ಕನ್ನಡ, ಇಂಗ್ಲಿಶ್ ಮತ್ತು ಉರ್ದು ಭಾಷೆಗಳಲ್ಲಿ ಕರ್ನಾಟಕದಿಂದ ಪ್ರಕಟಣೆ ಯಾಗುತ್ತದೆ. ‘ಪತ್ರಿಕಾ’ ಎಂಬ ಹಿಂದಿ ಪತ್ರಿಕೆಯ ಆವೃತ್ತಿಯೊಂದು ಬೆಂಗಳೂರಿನಿಂದ ಪ್ರಕಟವಾಗುತ್ತದೆ. ಕನ್ನಡ ಭಾಷೆಯ ಪತ್ರಿಕೆಗಳಲ್ಲಿ ರಾಜ್ಯದ ಹಾಗೂ ಸ್ಥಳೀಯ ಪತ್ರಿಕೆಗಳು ಸೇರುತ್ತವೆ. ಇನ್ನಿತರ ಭಾಷಾ ಪತ್ರಿಕೆಗಳ ಪ್ರಸಾರವೂ ಇವೆ. ಆದರೆ ಇವುಗಳು ಕರ್ನಾಟಕದಲ್ಲಿ ಪ್ರಕಟವಾಗುವುದಿಲ್ಲ. ಇನ್ನಿತರ ಭಾಷಾ ಪತ್ರಿಕೆಗಳಲ್ಲಿ ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ ಪತ್ರಿಕೆಗಳು ಸೇರಿವೆ.
ಚಲನಚಿತ್ರ : ಹೆಚ್ಚಾಗಿ ಕನ್ನಡ ಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಆದರೆ ಪ್ರದರ್ಶನದಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ, ಅಲ್ಲದೆ ಇತ್ತೀಚೆಗೆ ತುಳು, ಕೊಂಕಣಿ ಭಾಷಾ ಚಿತ್ರಗಳನ್ನು ಕಾಣಬಹುದು.
ಸಂಸ್ಕೃತಿ : ಈ ಹಿಂದೆಯೇ ಹೇಳಿರುವಂತೆ ಕರ್ನಾಟಕದ ಪ್ರತಿಯೊಂದು ಊರು ಒಂದಕ್ಕಿಂತ ಹೆಚ್ಚು ಭಾಷೆಗಳನ್ನುಳ್ಳ ಪ್ರದೇಶವಾಗಿರುವುದರಿಂದ ಅಲ್ಲಿನ ವಿವಿಧ ಭಾಷೆಗಳನ್ನಾಡುವ ಜನರು ತಮ್ಮದೇ ಆದ ಸಂಘಗಳನ್ನು ರಚಿಸಿಕೊಂಡು ತಮ್ಮ ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಗೋಚರವಾಗುತ್ತದೆ. ತೆಲುಗು ಸಂಘ, ತಮಿಳು ಸಂಘ, ದಕ್ಷಿಣ ಕನ್ನಡ ಸಂಘ, (ತುಳು), ಕೊಡವ ಸಮಾಜ, ಮರಾಠ ಪರಿಷದ್, ಕೇರಳ ಸಮಾಜಗಳ ತಮ್ಮ ತಮ್ಮ ಭಾಷೆ ಸಂಸ್ಕೃತಿಗಳನ್ನು ಕುರಿತ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತವೆ. ಇಷ್ಟೆ ಅಲ್ಲದೆ ವಿವಿಧ ಭಾಷೆ, ಸಂಸ್ಕೃತಿಗಳಿಗೆ ಪ್ರೋನೀಡಲು ಕರ್ನಾಟಕ ಸಾಹಿತ್ಯ ಅಕಾಡೆಮಿ, ತುಳು ಅಕಾಡೆಮಿ, ಕೊಂಕಣಿ ಅಕಾಡೆಮಿ ಕೊಡವ ಅಕಾಡೆಮಿಗಳಿವೆ.
ಹೀಗೆ ಹಲವಾರು ಭಾಷೆಗಳು ಕರ್ನಾಟಕದಲ್ಲಿ ಉಳಿದು ಬೆಳೆದು ಬರುತ್ತಿವೆ. ಈ ಭಾಷೆಗಳ ನಡುವೆ ಕೊಡು-ಕೊಳ್ಳುವಿಕೆಯೂ ನಡೆಯುತ್ತಿದೆ. ಹಾಗಾಗಿ ತಾವೂ ಬೆಳೆಯುತ್ತಾ, ಬೇರೆಯದನ್ನೂ ಅವಕಾಶ ನೀಡುತ್ತಾ ಶ್ರೀಮಂತವಾಗುತ್ತವೆ.
ಪುಸ್ತಕ: ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ ೧: ಭಾಷೆ
ಲೇಖಕರು: ಡಾ. ಸಾಂಬಮೂರ್ತಿ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಕೆ.ವಿ. ನಾರಾಯಣ