Kappe Pulakeshi

ಬಾದಾಮಿ ಚಾಲುಕ್ಯರು : ಕಪ್ಪೆ ಅರಭಟ್ಟ ಮತ್ತು ಪೊಲೆಕೇಶಿ

ಕರ್ನಾಟಕವನ್ನು ಆಳಿದ ರಾಜವಂಶಗಳ ಪೈಕಿ, ಬಾದಾಮಿ ಚಲುಕ್ಯರಿಗೆ ವಿಶೇಷವಾದ ಮತ್ತು ವಿಶಿಷ್ಟವಾದ ಸ್ಥಾನವಿದೆ. ಇಂದಿಗೂ ಅವರನ್ನು ಸಮರ್ಥವಾಗಿಯೇ ನೆನಪು ಮಾಡುವ ಮತ್ತು ಹೊಸ ಹೊಸ ವಿಚಾರಗಳನ್ನು ಅನಾವರಣ ಮಾಡುವ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳು ಇರುವವರೆಗೆ ಬಾದಾಮಿಯ ಚಾಲುಕ್ಯರು ಉಳಿಯುತ್ತಾರೆ. ಅವರ ನೆನಪನ್ನು ಸುಲಭವಾಗಿ ಅಳಿಸಿ ಹಾಕಲು ಸಾಧ್ಯವಿಲ್ಲ. ಬಾದಾಮಿಯಲ್ಲಿ ಕೊರೆದು ನಿರ್ಮಿಸಿದ ಗುಹಾ ದೇವಾಲಯಗಳಾಗಲೀ, ಕಟ್ಟಿ ನಿರ್ಮಿಸಿದ ದೇವಾಲಯಗಳಾಗಲೀ, ಇನ್ನೂ ಉಳಿದಿರುವ ಕೋಟೆಯ ಭಾಗಗಳಾಗಲೀ, ಒಂದನೆಯ ಪೊಲೆಕೇಶಿಯ ಬಂಡೆಗಲ್ಲು ಶಾಸನವಾಗಲೀ, ಕಪ್ಪೆ ಅರಭಟ್ಟನ ಶಾಸನವಾಗಲೀ, ನರಸಿಂಹವರ್ಮನ ಬಂಡೆ ಶಾಸನವಾಗಲೀ, ಅಗಸ್ತ್ಯ ತೀರ್ಥವಾಗಲೀ, ಐಹೊಳೆಯ ಗುಹಾದೇವಾಲಯಗಳು ಮತ್ತು ಸಮೂಹ ದೇವಾಲಯ ಗಳಾಗಲೀ, ಪಟ್ಟದಕಲ್ಲಿನ ದೇವಾಲಯಗಳ ಸಮುಚ್ಚಯವಾಗಲೀ, ಜೈನ ಬಸದಿಯಾಗಲೀ ಬಾದಾಮಿಯ ಚಲುಕ್ಯರನ್ನು ಮರೆಯಲು ಅವಕಾಶ ನೀಡುವುದಿಲ್ಲ. ಬಾದಾಮಿಯ ಚಲುಕ್ಯರನ್ನು ಕುರಿತಂತೆ ಇನ್ನು ಮುಂದೆ ತಿಳಿಯಬೇಕಾದ್ದೇನೂ ಇಲ್ಲ ಎಂದು ಯಾವ ಸಂಶೋಧಕನೂ ಧೈರ್ಯವಾಗಿ ಹೇಳುವಂತಿಲ್ಲ. ಇಲ್ಲಿ ಅಗೆದಷ್ಟೂ ಅಮೂಲ್ಯವಾದ ವಸ್ತು ವಿಶೇಷಗಳು ದೊರೆಯುತ್ತಲೇ ಇವೆ ಮತ್ತು ಮುಂದೆ ಮತ್ತಷ್ಟು ದೊರೆಯುವುದರಲ್ಲಿ ಯಾವ ಅನುಮಾನಗಳೂ ಇಲ್ಲ(ಈ ಮಾತಿಗೆ ಕಳೆದ ಮೂರು ವರ್ಷಗಳಿಂದ ಇಲ್ಲಿ ಆಗುತ್ತಿರುವ ಕೆಲಸ ಸಾಕ್ಷಿ ಆಗಿದೆ). ಇಷ್ಟು ಪ್ರಮಾಣದ ಮತ್ತು ಗುಣಮಟ್ಟದ ಕೆಲಸಗಳು ಸಾಧ್ಯವಾಗಲು ಇಲ್ಲಿಯ ಜನತೆಯೇ ಕಾರಣ ಎಂದರೆ, ಅದು ಖಂಡಿತವಾಗಿಯೂ ಉತ್ಪ್ರೇಕ್ಷೆಯ ಮಾತಲ್ಲ, ಜೊತೆಗೆ ಸಂಬಂಧಿಸಿದ ಅಧಿಕಾರ ವರ್ಗವೂ ಮುತುವರ್ಜಿ ಮಾತ್ರವಲ್ಲದೇ ಶ್ರಮ ವಹಿಸುತ್ತಿದ್ದಾರೆ. ಬಾದಾಮಿಯ ಉತ್ಥಾನಕ್ಕೆ ಕಾರಣರಾಗಿರುವ ಮತ್ತು ಕಾರಣರಾಗುತ್ತಿರುವ ಎಲ್ಲರನ್ನೂ ಅಭಿನಂದಿಸುವುದರಲ್ಲಿ ಸಂತೋಷವಿದೆ. ಡಾ. ಜೆ.ಎಫ್.ಫ್ಲೀಟ್ ಮತ್ತು ಶ್ರೀ ವೆಂಕಟರಂಗೋಕಟ್ಟಿಯವರಿಂದ ಆರಂಭಿಸಿ, ಶ್ರೀ ಆರ್.ಎಸ್. ಪಂಚಮುಖಿಯವರ ಮೂಲಕ ಈಗಿನ ಡಾ. ಶೀಲಾಕಾಂತ ಪತ್ತಾರರವರೆಗೆ ಅನೇಕ ವಿದ್ವಾಂಸರು ಬಾದಾಮಿಯ ಬಗ್ಗೆ ಅಧ್ಯಯನ ಮಾಡುತ್ತಾ, ಹೊಸ ವಿಷಯಗಳನ್ನು ಬೆಳಕಿಗೆ ತರುತ್ತಲೇ ಇದ್ದಾರೆ. ಬಾದಾಮಿಯ ಚಲುಕ್ಯರನ್ನು ಕುರಿತ ಇನ್ನೂ ಎಷ್ಟೋ ಅನುಮಾನಗಳು ಬಗೆಹರಿಯಬೇಕಾಗಿದೆ.

ಪ್ರಾಗಿತಿಹಾಸ ಕಾಲದಿಂದಲೂ ಜನವಸತಿಯ ನೆಲೆಯಾಗಿರುವ ಬಾದಾಮಿಯನ್ನು ಪುರಾಣ ಕಾಲದ ವಾತಾಪಿಯೊಂದಿಗೆ ಸಮೀಕರಿಸುವ ಪ್ರಯತ್ನವು ಕ್ರಿ.ಶ. ೧೧ನೆಯ ಶತಮಾನದ್ದು. ಅದಕ್ಕೆ ಮೊದಲು ಈ ಊರು ಬಾದಾಮಿಯೆಂದೇ ಪ್ರಸಿದ್ಧವಾಗಿತ್ತು. ಇದು ಕರ್ನಾಟಕವನ್ನು ಆಳಿದ ಚಲುಕ್ಯರ ರಾಜಧಾನಿಯಾಗಿದ್ದುದರಿಂದ ಆ ವಂಶವನ್ನು ಬಾದಾಮಿಯ ಚಲುಕ್ಯರು ಎಂದೇ ಗುರುತಿಸಲಾಗಿದೆ. ಚಲುಕ್ಯರ ವಂಶವು ರಾಷ್ಟ್ರಕೂಟರ ನಂತರ ಮತ್ತೆ ಮುಂದುವರಿದು ಕಲ್ಯಾಣವನ್ನು ತಮ್ಮ ರಾಜಧಾನಿ ಮಾಡಿಕೊಂಡದ್ದರಿಂದ ಅವರನ್ನು ಕಲ್ಯಾಣದ ಚಾಲುಕ್ಯರು ಎಂದು ಗುರುತಿಸಲಾಗಿದೆ. ಚಲುಕ್ಯ ಮತ್ತು ಚಾಲುಕ್ಯ ಹೆಸರಿನ ಬಗ್ಗೆ ಹಲವು ಚರ್ಚೆಗಳು ನಡೆದು, ಈಗ ಬಾದಾಮಿಯಿಂದ ಆಳಿದವರನ್ನು ಚಲುಕ್ಯರೆಂದೂ, ಕಲ್ಯಾಣದಿಂದ ಆಳಿದವರನ್ನೂ ಚಾಲುಕ್ಯರೆಂದೂ ಸಂಬೋಧಿಸಲಾಗುತ್ತದೆ. ಬಾದಾಮಿಯ ಮೂಲ ಹೆಸರಿನ ಬಗೆಗೂ ಅನೇಕ ಚರ್ಚೆಗಳು ನಡೆದು, ಈಗ ಬಾದಾಮಿಯೇ ಸ್ಥಳ ನಾಮದ ಮೂಲರೂಪವೆಂದು ಒಪ್ಪಿಕೊಳ್ಳಲಾಗಿದೆ. ವಿದೇಶಿ ಪ್ರವಾಸಿ ಅಥವಾ ವಿದ್ವಾಂಸರ ಸಂಬೋಧನೆಯನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಸ್ಥಳೀಯರ ಬಾಯಿಯಲ್ಲಿ ಉಳಿದಿರುವ ರೂಪವೇ ಮೂಲಕ್ಕೆ ಹತ್ತಿರವಾದುದು ಎಂದು ಒಪ್ಪಿತವಾಗಿದೆ.

ಚಲುಕ್ಯವು ಚಲ್ಕಿಯಿಂದ ರೂಪುಗೊಂಡಿರುವ ಸಾಧ್ಯತೆಗಳ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ. ಅದು ಕೃಷಿ ಉಪಕರಣವಾದ ಸಲಿಕೆ, ಸಲ್ಕಿ, ಸನಿಕೆಯನ್ನು ಧ್ವನಿಸುವುದರಿಂದ ಚಲುಕ್ಯರು ಕೃಷಿಕ ಮೂಲದವರು ಎಂದು ತಿಳಿಯಲಾಗಿದೆ. ಸಲ್ಲಕಿ ಎಂಬ ವೃಕ್ಷದ ಹೆಸರಿನ ಜೊತೆಗೂ ಸಲ್ಕಿಯನ್ನು ಗುರುತಿಸುವ ಪ್ರಯತ್ನ ನಡೆದಿದೆ. ಚಲುಕ್ಯರು ಮಾನವ್ಯ ಸಗೋತ್ರದವರು. ಹಾರೀತಿ ಪುತ್ರರು. ಇವರ ಲಾಂಛನ ವರಾಹ. ಇವರು ಭಗವನ್ನಾರಾಯಣನ ಕೃಪಾಪಾತ್ರರು ಮತ್ತು ಸಪ್ತಮಾತೃಕೆಯರು ಮತ್ತು ಕಾರ್ತಿಕೇಯನಿಂದ ಪರಿರಕ್ಷಿತರಾದವರು. ವಿಷ್ಣುವಿನ ಬಗ್ಗೆ ಇವರಿಗೆ ಆದರವಿದ್ದರೂ, ಶಿವನನ್ನು ದೂರ ಇಟ್ಟವರಲ್ಲ. ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಂಡು ಪ್ರೋಚಲುಕ್ಯರು ವೈಯಕ್ತಿಕವಾಗಿ ವಿಷ್ಣುವಿನ ಆರಾಧಕರೆಂದು ಪೊಲೆಕೇಶಿ ಎಂಬ ಹೆಸರಿನ ಹಿನ್ನೆಲೆಯಲ್ಲಿ ಗುರುತಿಸಬಹುದಾಗಿದೆ.

ಈಗಾಗಲೇ ತಿಳಿಸಿರುವಂತೆ ಬಾದಾಮಿಯ ಚಲುಕ್ಯರ ರಾಜಧಾನಿ ಬಾದಾಮಿಯು ಪ್ರಾಗಿತಿಹಾಸ ಕಾಲದಿಂದ ಇಂದಿನವರೆಗೂ ಜನರನ್ನು ವಿವಿಧ ಕಾರಣಗಳಿಗಾಗಿ ಆಕರ್ಷಿಸಿರುವ ಸ್ಥಳವಾಗಿದೆ.

ಬಾದಾಮಿ ತಟ್ಟುಕೋಟೆಯ ಬಂಡೆಯೊಂದರ ಮೇಲೆ, ಕಪ್ಪೆ ಅರಭಟ್ಟನ ಉಲ್ಲೇಖ ಇರುವ ಕನ್ನಡ ಶಾಸನವು ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷ ಮಹತ್ವ ಪಡೆದಿದೆ. ಇದನು್ನ ಮೊದಲು ಬೆಳಕಿಗೆ ತಂದವರು. ಡಾ. ಜೆ.ಎಫ್.ಫ್ಲೀಟ್.[1] ಅಂದಿನಿಂದಲೂ ಸಂಶೋಧಕರಿಗೆ ಸವಾಲಾಗಿಯೇ ಇರುವ ಈ ಶಾಸನದ ಕಪ್ಪೆ ಅರಭಟ್ಟನನ್ನು ಗುರುತಿಸುವ ಪ್ರಯತ್ನಗಳು ನಿರಂತರವಾಗಿಯೇ ನಡೆದಿವೆ. ಡಾ.ಜೆ.ಎಫ್.ಫ್ಲೀಟ್ ಅವರ ಪ್ರಕಾರ ಈ ಸ್ಮಾರಕ ಶಾಸನವು ಆ ಭಾಗದಲ್ಲಿದ್ದ ಪ್ರಭಾವಶಾಲಿಯಾಗಿದ್ದ ಸಂತನೊಬ್ಬನನ್ನು ಕುರಿತುದಾಗಿರಬೇಕು. ಆದರೆ, ಅವರೇ ಪೂರ್ವೋಲ್ಲೇಖಿತ ಲೇಖನದಲ್ಲಿ ಪ್ರಸ್ತಾಪಿಸಿರುವಂತೆ, ಶ್ರೀವೆಂಕಟರಂಗೋ ಕಟ್ಟಿಯವರ ಅಭಿಪ್ರಾಯದಲ್ಲಿ ಅದು ಯಾರೋ ಒಬ್ಬ ಪ್ರಮುಖ ವ್ಯಕ್ತಿಯ ಬಿರುದಾವಳಿಗಳು ಅಥವಾ ಸಾಧನೆ ಮತ್ತು ವಿಶಿಷ್ಟ ಗುಣಗಳ ಸಂಗ್ರಾಹ್ಯ ಅಂಶಗಳಾಗಿರಬೇಕು. ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ೧೯೭೬ರಲ್ಲಿ ಬಾದಾಮಿ ಶಾಸನದ ಅರ್ಥವನ್ನು ಕುರಿತು ವಿವರವಾಗಿಯೇ ಪ್ರಸ್ತಾಪಿಸಿದ್ದಾರೆ.[2] ಅವರ ಪ್ರಕಾರ ‘ಕಪ್ಪೆ ಅರಭಟ್ಟ ಪ್ರಾಯಶಃ ಹುಟ್ಟಿನಿಂದ ಬ್ರಾಹ್ಮಣನಾಗಿದ್ದ ಒಬ್ಬ ಸಮರ್ಥ ಯೋಧ. ತನ್ನ ಒಳ್ಳೆಯ ನಡೆವಳಿಕೆಯಿಂದ ಆತ ‘ಕಲಿಯುಗದ ವಿಪರೀತನ್’ ಎಂದು ಹೆಸರಾಗಿದ್ದ. ಹೀಗಿದ್ದುದರಿಂದ ಸಹಜವಾಗಿ ಒಳ್ಳೆಯ ಜನ ಅವನನ್ನು ತಮ್ಮವನೆಂದು ಆದರಿಸುತ್ತಿದ್ದರು. ದುಷ್ಟರು ಆತನ ಹತ್ತಿರ ಸೇರುತ್ತಿರಲಿಲ್ಲ. ಮಾನವಂತನಾಗಿ ಬಾಳಬೇಕು, ಮಾನಭಂಗವನ್ನು ಸಹಿಸುವುದಕ್ಕಿಂತ ಸಾಯುವುದೇ ಲೇಸು ಎಂಬುದು ಆತನ ನಂಬುಗೆಯಾಗಿತ್ತು. ಒಳ್ಳೆಯವರ ವಿಷಯದಲ್ಲಿ ಆತ ಎಂದೂ ಒಳ್ಳೆಯವನೇ, ರಾಜನೈತಿಕವಿರಬಹುದು, ಸೈನ್ಯಕೀಯವಿರಬಹುದು ಯಾವುದೇ ದೊಡ್ಡ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಬಲ್ಲ ಧುರೀಣ ಆತ. ತನಗೆ ಎದುರುಬಿದ್ದ ಶೂರರನ್ನು ರಾಕ್ಷಸರನ್ನು ಅಡಗಿಸುವ ಮಹಾವಿಷ್ಣುವಿನಂತೆ ಆತ ನಿಗ್ರಹಿಸಬಲ್ಲವನಾಗಿದ್ದ. ಮನಸ್ಸು ಮಾಡಿದರೆ ಒಳ್ಳೆಯದನ್ನೂ ಮಾಡಬಲ್ಲ, ಕೆಟ್ಟದ್ದನ್ನೂ ಮಾಡಬಲ್ಲ ಎಂದರೆ ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನು. ಶಿಷ್ಟರ ರಕ್ಷಣೆ, ದುಷ್ಟರ ವಿನಾಶ ಎಂಬುದು ಆತನ ಸಂಕಲ್ಪ. ಅದರಲ್ಲಿ ಆತ ಸಮರ್ಥ, ಆತನನ್ನು ಎದುರುಹಾಕಿಕೊಂಡವರು ಹಾಳಾಗುವುದು ಖಂಡಿತ.’ ಡಾ.ಟಿ.ವಿ.ವಿ. ಅವರ ಅಭಿಪ್ರಾಯದಂತೆ, ‘ಸಜ್ಜನಿಕೆ,’ ಗಾಂಭೀರ್ಯ, ಶೌರ್ಯ ಇವು ಮುಪ್ಪುರಿಗೊಂಡಿದ್ದ ಕನ್ನಡಿಗ ವೀರನೊಬ್ಬನ ವ್ಯಕ್ತಿಚಿತ್ರವನ್ನು ಪ್ರಸ್ತುತ ಶಾಸನ ನಮ್ಮ ಕಣ್ಣೆದುರು ಕಟ್ಟಿ ನಿಲ್ಲಿಸಲು ಸಮರ್ಥವಾಗಿದೆ. ಕರ್ತೃ ಮಾತ್ರ ಅಜ್ಞಾತದಲ್ಲಿ ಸೇರಿದ್ದಾನೆ.

ಕಪ್ಪೆ ಅರಭಟ್ಟ ಎಂಬುದನ್ನು ಕಪ್ಪೆ ಅರ+ಭಟ್ಟ ಎಂದು ಪದ ಅನ್ವಯ ಮಾಡಿ ಕಪ್ಪೆ ಎಂಬ ವಿಶೇಷಣವುಳ್ಳ ಅರಸು ಭಟ್ಟ ಎಂದರೆ, ಅರಸನನ್ನು ಹೊಗಳುವ ಭಟ್ಟ ಎಂದು ವೆಂಕಟಾಚಲ ಶಾಸ್ತ್ರಿಗಳು ಅರ್ಥೈಸಿದ್ದಾರೆ. ಅವರು ಪೂರ್ವೋಕ್ತ ವಿಷಯದ ಬಗ್ಗೆ ಬರೆಯುತ್ತಾ ಶಾಸನದ ಅರ್ಥವನ್ನು ಸ್ಪಷ್ಟಪಡಿಸುವ ಪ್ರಯತ್ನದಲ್ಲಿ ಸತ್ಯಕ್ಕೆ ಹೆಚ್ಚು ಸಮೀಪ ಇದ್ದಾರೆ ಎಂದು ಸ್ಪಷ್ಟವಾಗುತ್ತದೆ. ಅವರು ನೀಡಿರುವ ಶಾಸನದ ಅರ್ಥ ಈ ಕೆಳಕಂಡಂತಿದೆ.

‘ಕಲಿಯುಗದ ವಿಪರೀತನು ಎಂದು ಖ್ಯಾತನಾದ ಕಪ್ಪೆ ಅರಭಟ್ಟನು ಒಳ್ಳೆಯ ಜನರಿಗೆ ಬೇಕಾದವನು, ಕೆಟ್ಟ ಜನರಿಗೆ ಬೇಡವಾದವನು.[3] ತೇಜಸ್ವಿಯಾದವನಿಗೆ (ತನಗೆ) ಸಾಯುವುದು ಲೇಸು, ಅದರೆ ಮಾನಭಂಗವಲ್ಲ. ಸಾವಿನ ದುಃಖ ಆ ಕ್ಷಣದ್ದು. ಮಾನಭಂಗದ ದುಃಖ ಪ್ರತಿದಿನದ್ದು(ಎಂದು ಆತ ತಿಳಿದಿದ್ದ).[4] ಸಾಧುವಾದವನ ವಿಷಯದಲ್ಲಿ ತಾನೂ ಸಾಧುವಾದವನು; ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನುಳ್ಳ ಅಧಿಕನ ವಿಷಯದಲ್ಲಿ ತಾನೂ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನುಳ್ಳ ಅಧಿಕನು ಅಥವಾ ಪ್ರಮುಖರ ನಡುವೆ ತಾನೂ ಪ್ರಮುಖ, ತೊಂದರೆ ಕೊಡಬಲ್ಲ ಶೂರನಿಗೆ, ಕಲಿಯುಗ ವಿಪರೀತನೆನಿಸಿದ ಕಪ್ಪೆ ಅರಭಟ್ಟ ಸಾಕ್ಷಾತ್ ವಿಷ್ಣು, ಬೇರೆಯಲ್ಲ.[5] ಈತನ ಹಾಗೆ ಒಳ್ಳೆಯದನ್ನು ಮಾಡುವವರು ಯಾರು? ಹಾಗೆಯೇ ಕೆಟ್ಟದ್ದು ಮಾಡುವುದರಲ್ಲಿ ಕೂಡ ಈತ ಗಟ್ಟಿಗ. ಈತ ಕಲಿಯುಗ ವಿಪರೀತ! ಅವರವರು ಹಿಂದೆ ಮಾಡಿದ ಒಳ್ಳೆಯದು ಕೆಟ್ಟದ್ದು ಏನುಂಟು, ಅದಕ್ಕೆ ತಕ್ಕ ಫಲ ಈತನ ಕೈಯಲ್ಲಿ ಅವರಿಗೆ ಸಿಕ್ಕುತ್ತದೆ.[6] ನಮಗೆ ಇದರಿಂದ ಕೆಡುಕೇನು? ಎಂದು ಕಟ್ಟಿಹಾಕಿದ ಸಿಂಹವನ್ನು ಕಟ್ಟು ಕಳಚಿ ಬಿಟ್ಟ ಹಾಗೆ, ಕಲಿಯುಗ ವಿಪರೀತನಿಗೆ ಎದುರುಬಿದ್ದು ಆತನ ಶತ್ರುಗಳು ತಮ್ಮ ಅವಿವೇಕದಿಂದ ಹಾಳಾದರು, ಸತ್ತರು.’[7]

ಡಾ.ಎಂ.ಎಂ.ಕಲಬುರ್ಗಿ ಅವರು ಕಪ್ಪೆ ಅರಭಟ್ಟನ್ ಬಗ್ಗೆ ಬರೆಯುತ್ತಾ, ಕಪ್ಪೆ ಎನ್ನುವುದು ಒಂದು ಮನೆತನವನ್ನು ಸೂಚಿಸುತ್ತಿರಬೇಕು ಎಂದು ತಿಳಿಸಿದ್ದಾರೆ. ಡಾ.ಎಂ.ಚಿದಾನಂದ ಮೂರ್ತಿಯವರು ಸೂಚಿಸಿರುವ ಪ್ರೊ. ತೀ.ನಂ.ಶ್ರೀ. ಅವರ ಅಭಿಪ್ರಾಯದಂತೆ ಕಪ್ಪೆ ಅರಭಟ್ಟ ಎನ್ನುವ ಹೆಸರು ಕಪ್ಪೆ+ಅರಭಟ್ಟ ಅಲ್ಲ. ಕಪ್ಪೆಯರ+ಭಟ್ಟ ಈ ಅಭಿಪ್ರಾಯದ ಹಿನ್ನೆಲೆಯಲ್ಲಿ, ಡಾ.ಎಂ.ಎಂ.ಕಲಬುರ್ಗಿ ಅವರು ‘ಕಪ್ಪೆಯರ’ ಎಂಬ ಶಾಸನೋಕ್ತ ಉಲ್ಲೇಖಗಳನ್ನು ಗಮನಿಸಿ, ಕಪ್ಪೆ ಅರಭಟ್ಟನು ಕಪ್ಪೆ ಅಥವಾ ಕಪ್ಪಡಿಗಳ ವರ್ಗಕ್ಕೆ ಸಂಬಂಧಿಸಿದ ಅರಸುಭಟ್ಟನಾಗಿರಬಹುದು. ಆದರೆ, ಈ ಅರಸುಭಟ್ಟ (ಅರಭಟ್ಟ) ಎಂಬುದು ಅಂಕಿತ ನಾಮವೋ, ಅನ್ವರ್ಥಕನಾಮವೋ ಎಂಬುದು ಮಾತ್ರ ಚಿಂತನೀಯ ಎಂದಿದ್ದಾರೆ.[8]

ಶ್ರೀ ರಾಜಶೇಖರ ಬಡಿಗೇರ ಅವರು ‘ಸತ್ಯ ಸಂಚಯ’ ಎಂಬ ಗ್ರಂಥದಲ್ಲಿ ಪ್ರಕಟಿಸಿರುವ ಕಪ್ಪೆ ಅರಭಟ್ಟನ್ : ಒಂದು ಪುನರ್ಪರಿಶೀಲನೆ’ ಎಂಬ ಲೇಖನದಲ್ಲಿ ಕಪ್ಪೆಯು ಜಲಚರ ಪ್ರಾಣಿ. ಜಲಚರ ಪ್ರಾಣಿಗಳಿಗೆ ಕಶ್ಯಪ ಎಂಬ ಅರ್ಥವೂ ಇದೆ. ಕಶ್ಯಪ ಎಂಬುದು ಒಬ್ಬ ಶ್ರೇಷ್ಠ ಋಷಿಯ ಹೆಸರಾಗಿದೆ. ವಿಶ್ವ ಬ್ರಾಹ್ಮಣರಲ್ಲಿ ಕಶ್ಯಪ ಇಲ್ಲವೆ ಕಾಶ್ಯಪ ಎಂಬ ಹೆಸರಿಗೆ ಎಲ್ಲಿಲ್ಲದ ಮಹತ್ವವಿದೆ… ಇತ್ಯಾದಿ ವಿವರಣೆಗಳನ್ನು ನಿಡುತ್ತಾ, ಕಪ್ಪೆಯ್ಯ ಎಂದರೆ ಕಾಶ್ಯಪಯ್ಯ ಎಂಬ ವ್ಯಕ್ತಿನಾಮದ ಕಲ್ಪನೆಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಮುಂದುವರಿದು, ಕರ್ಪ ಎಂದರೆ ಕಪ್ಪ ಎಂದು ಅರ್ಥ, ಅದಕ್ಕೆ ಕನ್ನಡ ಶಬ್ದ ‘ಎರೆ’ಯೆಂದು ಬೇಕಾದರೆ ತೆಗೆದುಕೊಳ್ಳಬಹುದು. ಇತ್ಯಾದಿ ವಿವರಣೆಗಳನ್ನು ನೀಡುತ್ತಾ, ಕಪ್ಪು ಇಲ್ಲವೆ ಎರೆಯೆಂಬುದು ಕಮ್ಮರಿಕೆಗೆ ಸಂಬಂಧವಿರುವಂತೆ ತೋರುತ್ತದೆ ಎಂದು ಸ್ಪಷ್ಟನೆ ನೀಡಿ ಕೊನೆಗೆ ‘ಒಟ್ಟಿನಲ್ಲಿ ಕಪ್ಪೆ ಅರಭಟ್ಟನ್’ ಎಂಬುದರ ನಿಜವಾದ ರೂಪ ‘ಕಪ್ಪೆಯರ ಭಟ್ಟನ್’ ಎಂದಿರಬೇಕಾಗಿತ್ತು. ಕಪ್ಪೆಯರ ಭಟ್ಟನ್ ಎಂದರೆ ‘ಕಪ್ಪೆಯರ ಮಗನಾದ ಭಟ್ಟನ್’ ಎಂದು ಅರ್ಥ ಮಾಡಲು ಸಾಧ್ಯವಿದೆ. ಕಪ್ಪಯ್ಯನ ಮಗನಾದ ಭಟ್ಟನ್ ಎಂದು ಅರ್ಥೈಸಲೂ ಬರುತ್ತದೆ. ಈ ಹೆಸರುಗಳು ವಿಶ್ವಬ್ರಾಹ್ಮಣರಲ್ಲಿಯೇ ವಿಶೇಷವಾಗಿರುವುದು ಕಂಡುಬಂದಿದೆ. ‘ಕಪ್ಪೆಯರ ಭಟ್ಟನ್’ ಒಬ್ಬ ವಿಶ್ವಬ್ರಾಹ್ಮಣನಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.[9]

ಶ್ರೀ ಎಂ.ಜೆ. ಶರ್ಮ ಅವರು ತಮ್ಮ ಒಂದು ಲೇಖನದಲ್ಲಿ ಕಪ್ಪೆ ಅರಭಟ್ಟನನ್ನು ಪ್ರಸಿದ್ಧ ಖಗೋಳಶಾಸ್ತ್ರಜ್ಞನಾದ ಆರ್ಯಭಟನಿಗೆ ಸಮೀಕರಿಸುವ ಪ್ರಯತ್ನ ಮಾಡಿದ್ದಾರೆ.[10] ಸಂಸ್ಕೃತದ ಕಪ್ಪವು ಪ್ರಾಕೃತದಲ್ಲಿ ಕಪ್ಪ ಆಗುತ್ತದೆ. ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಆರ್ಯಭಟನು ಕಲಿಯುಗಕ್ಕೆ ವಿಪರೀತನಾದವನು ಎಂದು ಸ್ಪಷ್ಟನೆ ನೀಡುತ್ತಾ, ಅವನ ಅಭಿಪ್ರಾಯಗಳನ್ನು ಆಗಲೂ ಕೆಲವರು ಒಪ್ಪದೆ, ವಿರೋಧಿಸಿದ ಕಾರಣದಿಂದ ಅವನಿಗೆ ಅವಮಾನ ಆಗಿರಬೇಕು; ಆದ್ದರಿಂದ ಅವನು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳು ಹೆಚ್ಚು ಎಂಬ ಅಭಿಪ್ರಾಯ ವನ್ನು ವ್ಯಕ್ತಪಡಿಸಿ, ಈ ಆರ್ಯಭಟನು ಐಹೊಳೆ, ಬಾದಾಮಿಯ ಪ್ರದೇಶದವನಾಗಿರಬೇಕು ಎಂದು ಭಾವಿಸಿ, ಐದನೆಯ ಶತಮಾನದ ಅವನ ನೆನಪಿಗೆ ೮ನೆಯ ಸತಮಾನದಲ್ಲಿ ಈ ಸ್ಮಾರಕ ಶಾಸನವನ್ನು ಹಾಕಿಸಿರುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರೊ.ಪಾಂಡುರಂಗ ದೇಸಾಯಿ ಅವರು ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಪ್ರಕಟಿಸಿರುವ ಜನಪ್ರಿಯ ಲೇಖನವೊಂದರಲ್ಲಿ[11] ತಮ್ಮ ವಿದ್ವತ್ ಜೊತೆಗೆ ಕಲ್ಪನೆಯನ್ನು ಹೆಣೆದು, ಬಾದಾಮಿಯ ಕೋಷ್ಟರಾಯ ಮತ್ತು ಕಪ್ಪೆ ಅರಭಟ್ಟರನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಒಂದು ಸ್ತರದಲ್ಲಿ ಅದನ್ನು ಒಪ್ಪಬಹುದು ಎನಿಸುತ್ತದೆ. ಅದೇ ಅಭಿಪ್ರಾಯವನ್ನು ಡಾ.ಪಿ.ಬಿ. ದೇಸಾಯಿ ಅವರು ವಿದ್ವತ್ ಲೇಖನವೊಂದರ ಮೂಲಕ ಮಂಡನೆ ಮಾಡಿದ್ದಿದ್ದರೆ ಆ ಬಗ್ಗೆ ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿತ್ತು. ಲೇಖನವು ಜನಪ್ರಿಯ ಲೇಖನದ ಸ್ವರೂಪದಲ್ಲಿದ್ದರೂ, ಬರೆದಿರುವವರು ಪ್ರಖ್ಯಾತ ಶಾಸನ ಮತ್ತು ಇತಿಹಾಸ ತಜ್ಞರಾದ್ದರಿಂದ, ಅವರ ಅಭಿಪ್ರಾಯಗಳನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಡಾ.ದೇಸಾಯಿ ಅವರ ಪ್ರಕಾರ ಬಾದಾಮಿಯ ಕೋಷ್ಠರಾಯನು ಪುಲಿಕೇಶಿಯ ಅಳ್ವಿಕೆಯ ಕಾಲದಲ್ಲಿ ವಾತಾಪಿ ನಗರದ ದುರ್ಗಾಧಿಪತಿ ಆಗಿದ್ದವನು. ಕೋಷ್ಠ ಎಂದರೆ ಕೋಟೆ, ಕುಷ್ಠವೆಂಬುದು ರೋಗ. ಕೋಷ್ಠಪತಿ ಎಂದರೆ ಕೋಟೆಯ ಸಂರಕ್ಷಣಾಧಿಕಾರಿ. ಕೋಷ್ಠಪತಿಯನ್ನು ಕೋಷ್ಠರಾಜ, ಕೋಷ್ಠರಾಯ ಎಂದೂ ಕರೆಯಬಹುದು. ಆದ್ದರಿಂದ ದುರ್ಗಾಧಿಪತಿಯಾಗಿದ್ದವನು ಜನರ ಬಾಯಿಯಲ್ಲಿ ಕೋಷ್ಠರಾಯ ಆಗಿ ಉಳಿದಿರುವ ಸಾಧ್ಯತೆಗಳು ಹೆಚ್ಚು ಎಂಬುದು ಡಾ.ಪಿ.ಬಿ.ದೇಸಾಯಿ ಅವರ ಅಭಿಪ್ರಾಯ. ಮುಂದುವರಿದು, ಅದೇ ಲೇಖನದಲ್ಲಿ ಡಾ.ಪಿ.ಬಿ.ದೇಸಾಯಿ ಅವರು ಕಪ್ಪೆ ಅರಭಟ್ಟನ ಬಗೆಗೂ ಪ್ರಸ್ತಾಪಿಸಿದ್ದಾರೆ. ಶಾಸನದಲ್ಲಿನ ‘ವರಂತೇಜಸ್ವಿನೋ ಮೃತ್ಯಃ ನತು ಮಾನಾವಖಂಡನಮ್’ ಮತ್ತು ‘ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀನ್ ಪೆಱನಲ್ಲ’ ಎಂಬ ಭಾಗಗಳನ್ನು ವಿಶ್ಲೇಷಿಸುತ್ತಾ, ಮಂಡೂಕ ಋಷಿಯ ಸಂತತಿಯ ಧರ್ಮರಾಜ ಎಂಬುವವನೇ ಕಪ್ಪೆ ಅರಭಟ್ಟ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ. ಜನತೆಯ ಬಾಯಿಯಲ್ಲಿ ಕಪ್ಪೆ ಅರಭಟ್ಟ ಎಂಬ ಹೆಸರಿನಿಂದಲೆ ಉಳಿದ ಧರ್ಮರಾಜನು, ಇಮ್ಮಡಿ ಪೊಲೆಕೇಶಿಯ ಗಣ್ಯ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ. ಪಲ್ಲವರ ಒಳಸಂಚಿನಿಂದ ವಾತಾಪಿಯ ಕೋಟೆಯು ಶತ್ರುಗಳ ವಶವಾಯಿತು. ಧರ್ಮರಾಜನ ಮೇಲೆ ವಿಶ್ವಾಸಘಾತದ ಆರೋಪವನ್ನು ಹೊರಿಸಲಾಯಿತು. ಡಾ.ದೇಸಾಯಿ ಅವರು ತಮ್ಮ ಕಾಲ್ಪನಿಕ ಪಾತ್ರವಾದ ಧರ್ಮರಾಜನ ಮೂಲಕ ತಿಳಿಯುವಂತೆ ‘ಪಲ್ಲವರ ವಾತಾಪಿ ಪ್ರವೇಶದ ವಾರ್ತೆಯವನ್ನು ಕೇಳಲು ಪುಲಿಕೇಶಿ ಮಹಾರಾಜರು ಅಲ್ಲಿ ಇರಲಿಲ್ಲ. ಅವರು ಎಲ್ಲೋ ಕಣ್‌ಮರೆಯಾಗಿ ಹೋಗಿದ್ದರಂತೆ.’ ಅವರು ಕೊನೆಗೆ ಕೋಷ್ಟರಾಯ ಮತ್ತು ಕಪ್ಪೆ ಅರಭಟ್ಟನನ್ನು ಎಂದು ಹೇಳಿ ಸಮೀಕರಿಸಲು ಪ್ರಯತ್ನಿಸಿದ್ದಾರೆ. ಬಹುಶಃ ಇದು ಡಾ. ದೇಸಾಯಿ ಅವರ ಪ್ರಕಾರ ಒಂದು ಐತಿಹಾಸಿಕ ಹಗಲುಗನಸಾದರೂ, ಸತ್ಯಕ್ಕೆ ಹತ್ತಿರ ಆಗಬಹುದಾದ ಕನಸು. ಡಾ. ದೇಸಾಯಿ ಅವರ ಪ್ರಕಾರ ಕೋಷ್ಠರಾಯ/ಕಪ್ಪೆ ಅರಭಟ್ಟ ಇಮ್ಮಡಿ ಪೊಲೆಕೇಶಿಯ ಕಾಲದ ದುರ್ಗಾಧಿಪತಿ.

ಡಾ.ಬಾ.ರಾ.ಗೋಪಾಲ್ ಅವರು ಕಪ್ಪೆ ಅರಭಟ್ಟನ್ನು ಕೀರ್ತಿವರ್ಮನಿಗೆ ಸಮೀಕರಿಸಿದ್ದಾರೆ.[12] ಡಾ.ಬಾ.ರಾ.ಗೋಪಾಲ್ ಅವರ ಪ್ರಕಾರ ‘ಇದೊಂದು ರಾಜಕೀಯ ಹಿನ್ನೆಲೆ ಇರುವ ಶಾಸನ.’ ಬಾದಾಮಿಯ ಮೂರನೆಯ ಗುಹೆಯಲ್ಲಿರುವ ಮಂಗಲೀಶನ ಶಾಸನದ ಪ್ರಕಾರ ಮಂಗಳೀಶನು ವಿಷ್ಣುಗೃಹವನ್ನು ಕಟ್ಟಿಸಿದ ನಂತರ, ನಾರಾಯಣ ಬಲಿಯನ್ನು ನೀಡಿ, ಸತ್ರದಲ್ಲಿ ೧೬ ಬ್ರಾಹ್ಮಣರ ಊಟಕ್ಕೆಂದು ಲಂಜೀಶ್ವರ ಗ್ರಾಮವನ್ನು ದತ್ತಿಯಾಗಿ ಬಿಟ್ಟ ವಿಷಯ ದಾಖಲಾಗಿದೆ. ನಾರಾಯಣ ಬಲಿಯನ್ನು ಕುರಿತಂತೆಯೇ ಡಾ.ಬಾ.ರಾ.ಗೋಪಾಲ್ ಅವರು ಲೇಖನವೊಂದನ್ನು ಪ್ರಕಟಿಸಿದ್ದಾರೆ. ಡಾ.ಬಾ.ರಾ.ಗೋಪಾಲ್ ಅವರ ಪ್ರಕಾರ ನಾರಾಯಣ ಬಲಿಯು ಪರಿವ್ರಾಜಕ ವ್ಯಕ್ತಿಯ ಸಾವಿಗೆ ಸಂಬಂಧಿಸಿದ ಅಪರ ಕ್ರಿಯೆ. ವ್ಯಕ್ತಿಯ ಸಾವಿನ ಸುದ್ದಿ ಮಾತ್ರ ತಿಳಿದು, ಶವ ದೊರೆಯದ ಸಂದರ್ಭದಲ್ಲಿ, ಮಡಿದನೆಂದು ತಿಳಿಯಲಾದ ವ್ಯಕ್ತಿಗೆ ಮಾಡಲಾಗುವ ಅಪರ ಕ್ರಿಯೆ. ಯಾವುದೇ ರೀತಿಯ ಅಸಹಜ ಸಾವಿನ ಸಂದರ್ಭದಲ್ಲೂ ಸತ್ತವನಿಗೆ ನಾರಾಯಣ ಬಲಿಯ ಕರ್ಮಾಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೀರ್ತಿವರ್ಮನ ಸಾವು ಅಸಹಜವಾಗಿದ್ದ ಕಾರಣದಿಂದ, ಮಂಗಲೀಶನು ಕೀರ್ತಿವರ್ಮನ ಹೆಸರಿನಲ್ಲಿ ನಾರಾಯಣ ಬಲಿಯನ್ನು ಮಾಡಿದ್ದ ಎಂದು ತಿಳಿಯಲಾಗಿದೆ. ಬಾದಾಮಿಯ ಕೋಷ್ಠರಾಯನ ವಿಗ್ರಹವು ಕೀರ್ತಿವರ್ಮನದಿರಬಹುದು ಎಂಬ ಅಭಿಪ್ರಾಯ ಡಾ.ಬಾ.ರಾ.ಗೋಪಾಲ್ ಅವರದು. ಕೀರ್ತಿವರ್ಮನಿಗೆ ಕುಷ್ಠ ರೋಗ ಇತ್ತು. ಅವನು ಎಷ್ಟೇ ಪರಾಕ್ರಮಿಯಾದರೂ, ಆ ರೋಗವು ಅವನಿಗೆ ನೋವು ತಂದಿತ್ತು. ಆ ನೋವಿನಿಂದಾದ ದುಃಖದ ಕಾರಣದಿಂದ ಕೀರ್ತಿವರ್ಮ ಆತ್ಮಹತ್ಯೆ ಮಾಡಿಕೊಂಡಬೇಕೆಂಬ ಅನುಮಾನಗಳಿವೆ. ಈ ಎಲ್ಲ ಗುಮಾನಿಗಳ ಹಿನ್ನೆಲೆಯಲ್ಲಿ ಡಾ.ಬಾ.ರಾ.ಗೋಪಾಲ್ ಅವರು ಕಪ್ಪೆ ಅರಭಟ್ಟ ಎಂದು ಸೂಚ್ಯವಾಗಿ ಸಂಬೋಧಿಸಲಾಗಿರುವ ವ್ಯಕ್ತಿಯು ಬೇರಾರೂ ಅಲ್ಲದೆ ಕೀರ್ತಿವರ್ಮನೇ ಆಗಿರಬೇಕು ಎಂಬ ತೀರ್ಮಾನ ಡಾ.ಬಾ.ರಾ.ಗೋಪಾಲ್ ಅವರದು. ಬಾದಾಮಿಯಲ್ಲಿನ ಸ್ನೇಹಿತರಾದ ಡಾ.ಶೀಲಾಕಾಂತ ಪತ್ತಾರ ಅವರು ತಿಳಿಸಿದಂತೆ, ಬಾದಾಮಿಯ ಪ್ರದೇಶದಲ್ಲಿ ಕುಷ್ಠ ರೋಗಕ್ಕೆ ಕಪ್ಪೆ ರೋಗ ಎಂಬ ಹೆಸರೂ ಇದೆ. ಆದ್ದರಿಂದ ಡಾ.ಬಾ.ರಾ.ಗೋಪಾಲ್ ಅವರ ಅಭಿಪ್ರಾಯವು ಸಮರ್ಥನೀಯವಾಗುತ್ತದೆ. ಆದರೆ, ಕೀರ್ತಿವರ್ಮನು ಕಲಿಯುಗಕ್ಕೆ ವಿಪರೀತ ಅಂದರೆ, ವಿಶೇಷ ಎನಿಸುವ ಯಾವುದೇ ಕಾರ್ಯವನ್ನು ಸಾಧಿಸಿದವನಲ್ಲ. ಅಲ್ಲದೆ, ಕಪ್ಪೆ ಅರಭಟ್ಟನ ಶಾಸನದ ಕಾಲವನ್ನು ಕ್ರಿ.ಶ.ಸು.೭೫೦ ಎಂದು ಭಾವಿಸಲಾಗಿದೆ. ಕೀರ್ತಿವರ್ಮನ ಮರಣದ ಸುಮಾರು ಒಂದು ನೂರು ವರ್ಷಗಳ ನಂತರ ಈ ಶಾಸನವನ್ನು ಹಾಕಿಸಲಾಗಿದೆ ಎಂದು ತಿಳಿಯಬೇಕಾಗುತ್ತದೆ. ಇದು ಅಸಂಭವ, ಹಾಗಾದರೆ, ಕಪ್ಪೆ ಅರಭಟ್ಟ ಎಂದು ಸಂಬೋಧಿಸಲ್ಪಟ್ಟ ವ್ಯಕ್ತಿಯು ಕೀರ್ತಿವರ್ಮನಲ್ಲದೆ ಬೇರೆ ಯಾರೋ ಆಗಿರಬೇಕು. ಅವನನ್ನು ಪತ್ತೆ ಮಾಡುವ ಪ್ರಯತ್ನ ನನ್ನದು.

ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರು ಕಪ್ಪೆ ಅರಭಟ್ಟನ ಶಾಸನದ ಅರ್ಥವನ್ನು ಸ್ಪಷ್ಟಪಡಿಸಲಷ್ಟೇ ತಮ್ಮ ಪರಿಶೀಲನೆಯನ್ನು ಸೀಮಿತಗೊಳಿಸಿದ್ದಾರೆ. ಡಾ.ಎಂ.ಎಂ.ಕಲಬುರ್ಗಿ ಅವರು ಕಪ್ಪೆ ಅರಭಟ್ಟನನ್ನು ಕಪ್ಪಡಿಗಳ ವರ್ಗದ ಅರಸು ಭಟ್ಟ ಇರಬೇಕು ಎಂದು ಅಭಿಪ್ರಾಯಪಡುತ್ತಾರೆ. ಶ್ರೀ ರಾಜಶೇಖರ ಬಡಿಗೇರ ಅವರ ಪ್ರಕಾರ ಕಪ್ಪೆ ಅರಭಟ್ಟನು ವಿಶ್ವಕರ್ಮ ಬ್ರಾಹ್ಮಣ ಜನಾಂಗಕ್ಕೆ ಸೇರಿದವನು. ಶ್ರೀ ಎಂ.ಜೆ. ಶರ್ಮರ ಪ್ರಕಾರ ಕಪ್ಪೆ ಅರಭಟ್ಟನು ಪ್ರಸಿದ್ಧ ಖಗೋಳ ಶಾಸ್ತ್ರಜ್ಞ ಅರ್ಯಭಟ. ಡಾ.ದೇಸಾಯಿ ಅವರ ಪ್ರಕಾರ ಕಪ್ಪೆ ಅರಭಟ್ಟನೇ ಕೋಷ್ಠರಾಯ ಮತ್ತು ಅವನೇ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ವಾತಾಪಿ/ಬಾದಾಮಿಯ ದುರ್ಗಾಧಿಪತಿ ಆಗಿದ್ದವನು. ಡಾ.ಬಾ.ರಾ.ಗೋಪಾಲ್ ಅವರ ಪ್ರಕಾರ ಕಪ್ಪೆ ಅರಭಟ್ಟನೇ ಕೀರ್ತಿವರ್ಮ ಮತ್ತು ಅವನೇ ಕೋಷ್ಠರಾಯ.

ಐತಿಹಾಸಿಕ ಅಂಶಗಳನ್ನು ಗಮನಿಸಿದರೆ, ಡಾ.ದೇಸಾಯಿ ಮತ್ತು ಅವರ ಅಭಿಪ್ರಾಯಗಳನ್ನು ಪರಿಶೀಲಿಸುವುದು ಅಗತ್ಯ ಎನಿಸುತ್ತದೆ. ಡಾ.ದೇಸಾಯಿ ಅವರ ಪ್ರಕಾರ ‘ಕೋಷ್ಟ ಎಂದರೆ ಕೋಟೆ, ಕುಷ್ಠವೆಂಬುದು ರೋಗ.’ ‘ಕೋಷ್ಠ’ ಶಬ್ದಕ್ಕೆ ಮೋನಿಯರ್ ವಿಲಿಯಂಸ್‌ನ ಸಂಸ್ಕೃತ ನಿಘಂಟುವಿನಲ್ಲಿ ಕೊಟ್ಟಿರುವ ಅರ್ಥಗಳಲ್ಲಿ ‘ಕೋಟೆ’ ಎಂಬ ಅರ್ಥ ಇಲ್ಲ. ಅಲ್ಲಿ ನೀಡಲಾಗಿರುವ ಹಲವು ಅರ್ಥಗಳ ಪೈಕಿ, ಕಪ್ಪೆ ಅರಭಟ್ಟನ ಶಾಸನಕ್ಕೆ ಸಂವಾದಿ ಆಗಬಹುದು ಎನಿಸುವ ಅರ್ಥಗಳಲ್ಲಿ, ಧಾನ್ಯ ಸಂಗ್ರಹಣಾ ಕೊಠಡಿ, ಕೋಶ, ಭಂಡಾರ, ಬೊಕ್ಕಸ, ಖಜಾನೆ ಇತ್ಯಾದಿಗಳು ಗಮನ ಸೆಳೆಯುತ್ತವೆ.[13] ಕೋಷ್ಠ ಎಂದರೆ ಕೋಟೆ ಅಥವಾ ದುರ್ಗ ಎಂಬ ಅರ್ಥ ಸಂಸ್ಕೃತದ ನಿಘಂಟಿನಲ್ಲಿ ಎಲ್ಲಿಯೂ ಕಾಣುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟುವಿನ ಎರಡನೆಯ ಸಂಪುಟದಲ್ಲಿ ಕಪ್ಪ, ಕಪ್ಪೆ ಎರಡೂ ಪದಗಳನ್ನು ಸಮಾನಾರ್ಥಕವಾಗಿ ಪರಿಗಣಿಸಿ, ಚೀಲ ಹಾಗೂ ಅಲಮಾರು ಮೊದಲಾದವುಗಳ ಗೂಡು ಎಂದು ಅರ್ಥೈಸಲಾಗಿದೆ.[14] ಅದೇ ಸಂಪಟದಲ್ಲಿ ಕಪ್ಪಡಿ, ಕಪ್ಪಟಿ ಶಬ್ದಗಳಿಗೆ ಚಿಂದಿ ಬಟ್ಟೆಯನ್ನು ತೊಟ್ಟವನು ತಿರುಕ, ಎಂಬ ಅರ್ಥವನ್ನೂ,[15] ಕಪ್ಪೆ ಶಬ್ದಕ್ಕೆ ಬೀಗ; ಕೀಲಿ ಎಂಬ ಅರ್ಥವನ್ನೂ ನೀಡಲಾಗಿದೆ. ಈ ಯಾವ ಅರ್ಥಗಳೂ ನಮ್ಮ ಕಪ್ಪೆ ಅರಭಟ್ಟನಿಗೆ ಅನ್ವಯಿಸುವಂತಿಲ್ಲ. ಡಾ.ದೇಸಾಯಿ ಅವರು ತಮ್ಮ ಐತಿಹಾಸಿಕ ಹಗಲುಗನಸಿನಲ್ಲಿ ಸೂಚಿಸಿರುವ ಒಂದು ಮಾತನ್ನು ಎಳೆಯಾಗಿ ಇಟ್ಟುಕೊಂಡು, ಮುಂದಿನ ಚರ್ಚೆಗೆ ತೊಡಗುವುದು ಸೂಕ್ತ. ಕನಸು ಕಾಣುತ್ತಿರುವ ವ್ಯಕ್ತಿಯು(ಡಾ.ದೇಸಾಯಿ), ಕನಸಿನಲ್ಲಿ ಕಂಡ ಕೋಷ್ಠರಾಯ/ಕಪ್ಪೆ ಅರಭಟ್ಟನನ್ನು ಕೇಳುತ್ತಾರೆ. ‘ಅತ್ತ ವಾತಾಪಿಯ ವರ್ತಮಾನವೇನು?’ ಆ ಪ್ರಶ್ನೆಗೆ ಆ ಕಾಲ್ಪನಿಕ ವ್ಯಕ್ತಿಯು ಕೊಟ್ಟ ಎಂದು ಡಾ.ದೇಸಾಯಿ ಅವರು ದಾಖಲಿಸಿರುವ ಉತ್ತರದಿಂದಲೇ, ನಮ್ಮ ಕಪ್ಪೆ ಅರಭಟ್ಟನನ್ನು ಗುರುತಿಸುವ ಪ್ರಯತ್ನ ಮಾಡಬಹುದು. ಡಾ.ದೇಸಾಯಿ ಅವರು ತಮ್ಮ ಕಲ್ಪನೆಯ ವ್ಯಕ್ತಿಯ ಮೂಲಕ ಪಡೆದ ಉತ್ತರ ಹೀಗಿದೆ: ‘ಎಲ್ಲವೂ ಹಾಳಾಯಿತು. ದುರ್ಭೇದ್ಯವಾಗಿದ್ದ ಆ ಮಹಾರಾಜಧಾನಿ ಶತ್ರುಗಳ ವಶವಾಯಿತು. ತನ್ನ ಅಜೇಯವಾದ ಪ್ರಭು-ಮಂತ್ರ-ಉತ್ಸಾಹ ಶಕ್ತಿಗಳಿಂದ ಸಮಸ್ತ ಭಾರತವನ್ನು ಪಾದಾಕ್ರಾಂತ ಮಾಡಿ, ಅಪೂರ್ವ ಸಾಮ್ರಾಜ್ಯವನ್ನು ನಿರ್ಮಿಸಿದ ಆ ಮಹಾನುಭಾವ ಚಲುಕ್ಯ ಚಕ್ರೇಶ್ವರನಿಗೆ ವಿಪನ್ನಾವಸ್ಥೆ ಒದಗಿತು’ ದೇಸಾಯಿ ಅವರು ಪಲ್ಲವರು ವಾತಾಪಿಯನ್ನು ವಶಪಡಿಸಿಕೊಂಡ ಬಳಿಕ ಮಹಾರಾಜ ಪುಲಕೇಶಿಯ ಮುಂದಿನ ವೃತ್ತಾಂತವನ್ನು ತಿಳಿದುಕೊಳ್ಳಲು ನಾನು ಅತ್ಯಾತುರನಾಗಿದ್ದೇನೆ ಎಂದು ಕೇಳಿದ್ದಕ್ಕೆ, ಆ ವ್ಯಕ್ತಿಯು ನೀಡಿದ ಉತ್ತರವು ನಮ್ಮ ಅನುಮಾನಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯಕವಾಗಿದೆ ಎಂದು ಭಾವಿಸಲಾಗಿದೆ. ಆ ಮಾತುಗಳು ಹೀಗಿವೆ: ‘ಈ ನಿನ್ನ ಆಸೆಯನ್ನು ಪೂರೈಸುವುದು ಯಾರಿಗೂ ಸಾಧ್ಯವಿಲ್ಲ, ನಾನಾದರೂ ಹೇಗೆ ಹೇಳಬಲ್ಲೆ? ಅನೇಕ ವರ್ಷಗಳು ಗತಿಸಿದ ಬಳಿಕ ಒಬ್ಬ ಪ್ರವಾಸಿ ನನ್ನ ಆಶ್ರಮಕ್ಕೆ ಬಂದಿದ್ದನು. ಆತನು ವಾತಾಪಿಯ ಕಥೆಯನ್ನು ಸ್ವಲ್ಪ ಸ್ವಲ್ಪವಾಗಿ ವಿವರಿಸಿದನು. ಪಲ್ಲವರ ವಾತಾಪಿ ಪ್ರವೇಶದ ವಾರ್ತೆಯನ್ನು ಕೇಳಲು ಪುಲಕೇಶಿ ಮಹಾರಾಜರು ಅಲ್ಲಿ ಇರಲಿಲ್ಲವಂತೆ. ಅವರು ಎಲ್ಲಿಯೋ ಕಣ್‌ಮರೆಯಾಗಿ ಹೋಗಿದ್ದರಂತೆ. ವಾತಾಪಿಯಲ್ಲಿ ಮಾತ್ರ ಕೆಲಕಾಲ ಪಲ್ಲವರು ಧ್ವಜ ಊರಿದರು. ಅವರನ್ನು ಹೊರದೂಡಲು ಚಲುಕ್ಯ ಪಕ್ಷದವರು ಶಕ್ತರಾಗಲಿಲ್ಲ. ಚಲುಕ್ಯ ರಾಜ್ಯದಲ್ಲಿ ಅನಾಯಕತೆ ಉಂಟಾಯಿತು. ರಾಜಕುಮಾರರು, ಸಾಮಂತರು, ಮಂಡಲೇಶ್ವರರು, ಇವರಲ್ಲಿ ಅನೈಕ್ಯತೆ ಹಬ್ಬಿತು; ಸ್ವಾರ್ಥಪರತೆ ಹೆಚ್ಚಿತು. ಹೀಗೆ ಸುಮಾರು ಹದಿಮೂರು ವರ್ಷ ಉರುಳಿದವು. ಅನಂತರ ಪುಲಕೇಶಿ ಮಹಾರಾಜರ ಸಮರ್ಥ ಕುಮಾರನಾದ ವಿಕ್ರಮಾದಿತ್ಯನು ಅನಾಯಕತ್ವವನ್ನು ಹೊಡೆದೋಡಿಸಿ ಚಲುಕ್ಯ ರಾಜ್ಯದಲ್ಲಿ ಎಂದಿನಂತೆ ಶಾಂತತೆ ಮತ್ತು ಸುವ್ಯವಸ್ಥೆಯನ್ನು ನೆಲೆಗೊಳಿಸಿದನು.’

ಸಾಮಾನ್ಯವಾಗಿ ಇತಿಹಾಸದಲ್ಲಿ ಕಲ್ಪನೆಗೆ ಅವಕಾಶ ಇಲ್ಲವಾದರೂ, ಡಾ.ದೇಸಾಯಿ ಅವರು ಇತಿಹಾಸಕಾರರೇ ಆದ್ದರಿಂದ ಪಲ್ಲವರು ವಾತಾಪಿಯನ್ನು ವಶಪಡಿಸಿಕೊಂಡಾಗ, ಪೊಲಕೇಶಿಯು ಕಣ್‌ಮರೆಯಾಗಿದ್ದ ಎಂಬ ಅವರ ಮಾತುಗಳನ್ನು ಗೌಣ ಎಂದು ಪರಿಗಣಿಸುವಂತಿಲ್ಲ. ಅವರು ಭಾವಿಸಿರುವಂತೆ, ಕೋಷ್ಠರಾಯ ಮತ್ತು ಕಪ್ಪೆ ಅರಭಟ್ಟರು ಅಭಿನ್ನರು ಮತ್ತು ಕೋಷ್ಠರಾಯ/ಕಪ್ಪೆ ಅರಭಟ್ಟ ಪೊಲೆಕೇಶಿಯ ಕಾಲದಲ್ಲೇ ವಾತಾಪಿಯ ದುರ್ಗಾಧಿಪತಿಯಾಗಿದ್ದವನು. ದುರ್ಗಾಧಿಪತಿ ಅಲ್ಲವಾದರೂ ಕೋಶಾಧಿಪತಿಯಂತೂ ಆಗಿದ್ದವನು.

ಕಪ್ಪೆ ಅರಭಟ್ಟನು ಶಾಸನದಲ್ಲಿ ಪರಿಚಿತನಾಗಿರುವಂತೆಯೇ, ಶಿಷ್ಟರಿಗೆ ಪ್ರಿಯನಾದವನು, ಕೆಟ್ಟವರಿಗೆ ಬೇಡವಾದವನು ಮತ್ತು ಕಲಿಯುಗಕ್ಕೆ ವಿಪರೀತನಾದವನು. ಅವನು ಸಾಧು ಸ್ವಭಾವದವರಿಗೆ ಸಾಧು, ಪರಾಕ್ರಮಿಗಳಿಗೆ ಪರಾಕ್ರಮಿ ಮತ್ತು ತೊಂದರೆ ಕೊಡುವ ವೀರನಿಗೆ ಕಲಿಯುಗಕ್ಕೆ ಪರೀತನಾದ ಮಾಧನವನಲ್ಲದೆ, ಬೇರೆಯಲ್ಲ. ಒಳ್ಳೆಯದನ್ನು ಮಾಡಬಲ್ಲವರು ಕೆಟ್ಟದ್ದನ್ನೂ ಮಾಡಬಲ್ಲರು. ವೀರನಾದವನಿಗೆ ಪುರಾಕೃತವು ವಿಪರೀತವಾಗಿ ಬಂದು ಸಂದಿದೆ. ನಮಗೆ ಏನು ಕೆಟ್ಟದ್ದಾದೀತು ಎಂಬ ಧೋರಣೆಯಿಂದ ಕಟ್ಟಿದ ಸಿಂಹವನ್ನು ಬಿಟ್ಟ ಹಾಗೆ, ತೊಂದರೆಯಲ್ಲಿರುವ ವೀರನಿಗೆ ಅಹಿತರು ಮತ್ತು ಸತ್ತವರ ವಿಚಾರ, ತೇಜಸ್ವಿಯಾದವನಿಗೆ ಮಾನಹಾನಿಗಿಂತ ಮೃತ್ಯುವೇ ಹೆಚ್ಚು ವರಪ್ರದ. ಮೃತ್ಯವಿನಿಂದ ಬರುವ ದುಃಖಕ್ಕಿಂತ ಮಾನಭಂಗದಿಂದ ಹೆಚ್ಚು ದುಃಖ ಆಗುತ್ತದೆ. ಶಾಸನದ ಬಹುತೇಕ ಅರ್ಥವು ಇಷ್ಟಕ್ಕೆ ಸೀಮಿತ. ಈ ಹಿನ್ನೆಲೆಯಲ್ಲಿ, ಕ್ರಿ.ಶ.ಸು. ೭ನೆಯ ಶತಮಾನದ ಅಂತ್ಯ ಮತ್ತು ೮ನೆಯ ಶತಮಾನದ ಆದಿ ಭಾಗದಲ್ಲಿದ್ದ ಕಪ್ಪೆ ಅರಭಟ್ಟನಂತಹ ಒಬ್ಬ ವ್ಯಕ್ತಿಯನ್ನು ಹುಡುಕುವ ಪ್ರಯತ್ನ ನನ್ನದು.

ನಾನು ಈಗ ಪ್ರಸ್ತಾಪಿಸಿದ ಕಾಲದಲ್ಲಿ ಸಾಧುಗೆ ಸಾಧುವಾಗಿದ್ದವನು ಮತ್ತು ಪರಾಕ್ರಮಶಾಲಿಗಳಿಗೆ ಪರಾಕ್ರಮಶಾಲಿಯಾಗಿದ್ದವನು ಪೊಲೆಕೇಶಿ. ತನ್ನ ತಮ್ಮನಿಗೆ ಅಧಿಕಾರವನ್ನೂ ನೀಡಿ ಉತ್ತಮವಾಗಿ ನಡೆದುಕೊಂಡವನು ಪೊಲೆಕೇಶಿ. ಮಹಾ ಪರಾಕ್ರಮಶಾಲಿ ಎಂದು ಹೆಸರು ಪಡೆದಿದ್ದ ಉತ್ತರಾಪಥೇಶ್ವರ ಶ್ರೀಹರ್ಷನನ್ನು ಸೋಲಿಸಿ, ಅವನ ಮುಖದ ಹರ್ಷವನ್ನು ಕಳೆದಿದ್ದ ಪೊಲೆಕೇಶಿಯು, ಹಲವು ಯುದ್ಧಗಳನ್ನು ಮಾಡಿ, ಬಹುತೇಕ ಎಲ್ಲ ಯುದ್ಧಗಳಲ್ಲಿ ಗೆದ್ದರೂ, ಒಮ್ಮೆ ಮಾತ್ರವಲ್ಲದೆ, ಎರಡು ಬಾರಿ ಪಲ್ಲವರೊಡನೆ ಯುದ್ಧದಲ್ಲಿ ಗೆಲುವು ಪಡೆದಿದ್ದರೂ, ಪಲ್ಲವರೊಡನೆ ಪರಿಯಾಲ ಮತ್ತು ಮಣಿಮಂಗಲಗಳಲ್ಲಿ ನಡೆದ ಯುದ್ಧಗಳಲ್ಲಿ ಸೋಲಬೇಕಾಯಿತು; ಮಾತ್ರವಲ್ಲದೆ, ಪಲ್ಲವರ ಶಾಸನಗಳಿಂದ ತಿಳಿದಿರುವಂತೆ ಪಲ್ಲವ ನರಸಿಂಹವರ್ಮನು ಪೊಲೆಕೇಶಿಯ ಬೆನ್ನ ಮೇಲೆ ‘ವಿಜಯ’ ಎಂದು ಬರೆಸಿ ಅವಮಾನಗೊಳಿಸಿದ. ಈ ಅವಮಾನವನ್ನು ಸಹಿಸಿಕೊಳ್ಳುವ ಶಕ್ತಿ ಪೊಲೆಕೇಶಿಗಿರಲಿಲ್ಲ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಕ್ರಿ.ಶ.೬೪೨ರಲ್ಲಿ ಪಲ್ಲವ ನರಸಿಂಹವರ್ಮನು ಬಾದಾಮಿಯನ್ನು ಗೆದ್ದಾಗ, ಬಾದಾಮಿಯ ಕೋಟೆಯ ನಿರ್ಮಾಣದ ಉಲ್ಲೇಖವಿದ್ದ ಬಂಡೆಗಲ್ಲು ಶಾಸನವನ್ನು ಅಳಿಸಿಹಾಕಿ, ಅದರ ಮೇಲೆ ತನ್ನ ವಿಜಯದ ಶಾಸನವನ್ನು ಹಾಕಿಸಿಕೊಂಡಿದ್ದಾನೆ. ಈ ಯುದ್ಧದ ನಂತರ ಪೊಲೆಕೇಶಿಯ ಉಲ್ಲೇಖ ದೊರೆಯುವುದಿಲ್ಲ. ಆದ್ದರಿಂದ ಬಹುತೇಕ ವಿದ್ವಾಂಸರು, ಅವನು ಯುದ್ಧದಲ್ಲಿ ಮಡಿದನೆಂದು ನಿರ್ಧರಿಸಿರುವಂತಿದೆ. ಅಕಸ್ಮಾತ್ ಅವನು ಮಡಿದಿದ್ದರೆ, ಅದನ್ನು ಪಲ್ಲವರು ಸಂಭ್ರದಿಂದ ದಾಖಲಿಸಬೇಕಾಗಿತ್ತು. ಸಾಯಿಸದೆ, ಸೆರೆ ಹಿಡಿದಿದ್ದರೂ, ಪಲ್ಲವರೂ ಪೊಲೆಕೇಶಿಯ ಸೆರೆಯನ್ನು ವೈಭವೀಕರಿಸಿಯೆ ದಾಖಲಿಸಬೇಕಾಗಿತ್ತು. ಈ ಎರಡೂ ಆಗಿಲ್ಲ. ಆದ್ದರಿಂದ ಪೊಲೆಕೇಶಿಯನ್ನು ಪಲ್ಲವ ನರಸಿಂಹವರ್ಮನು ಸೋಲಿಸಿದರೂ, ಸೆರೆ ಹಿಡಿಯಲಾಗಿಲ್ಲ. ಎಂದಾದಮೇಲೆ ಕೊಲ್ಲುವ ಮಾತಂತೂ ದೂರವೇ ಉಳಿಯಿತು. ಹಾಗಾದರೆ, ಸೋತ ಪೊಲೆಕೇಶಿ ಏನಾದ ಎಂಬ ಪ್ರಶ್ನೆ ಉಳಿಯುತ್ತದೆ. ಬಹುತೇಕ ಹಾಗೆ ಉಳಿದ ವ್ಯಕ್ತಿಯೇ ಅರಭಟ್ಟ; ಅರಸು ಭಟ್ಟ

ಈಗಾಗಲೇ ಪ್ರಸ್ತಾಪಿಸಿರುವ ಡಾ.ದೇಸಾಯಿ ಅವರ ಅಭಿಪ್ರಾಯಂದತೆ, ಪಲ್ಲವರು ವಾತಾಪಿಯನ್ನು ಪ್ರವೇಶಿಸಿದಾಗ ಪೊಲೆಕೇಶಿಯು ಕಣ್‌ಮರೆಯಾಗಿದ್ದ. ಅವನು ಸೆರೆ ಸಿಕ್ಕಿಲ್ಲ ಅಥವಾ ಸತ್ತಿಲ್ಲ. ವಿಜಯಾಭಿಲಾಷಿಯಾದ ಅವನು ಹೋರಾಟಕ್ಕೆ ಸೂಕ್ತವಾದ ಸಮಯಕ್ಕಾಗಿ ನಿರೀಕ್ಷಿಸುತ್ತಾ, ಅಜ್ಞಾತವಾಗಿ ಉಳಿದಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹಾಗೆ ಅಜ್ಞಾತನಾಗಿ ಉಳಿದ ಪೊಲೆಕೇಶಿಗೆ ವಾತಾಪಿಯಲ್ಲಿದ್ದ ನಿಷ್ಠರಾದ ಜನತೆ ನೆರವು ನೀಡಿರುವ ಸಾಧ್ಯತೆಗಳಿವೆ.

೧೯೯೦ರಲ್ಲಿ ಪ್ರಕಟಗೊಂಡಿರುವ ಬಾದಾಮಿಯ ಒಂದು ಶಾಸನವು ಈ ಬಗ್ಗೆ ಮಹತ್ವದ ಸುಳಿವು ನೀಡುತ್ತದೆ. ಬಾದಾಮಿಯಲ್ಲಿ ಮಾಲೆಗಿತ್ತಿ ಶಿವಾಲಯದ ಪೂರ್ವಕ್ಕೆ ಪೂರ್ವ ಪಶ್ಚಿಮವಾಗಿ ಹಬ್ಬಿರುವ ಮರಳುಗಲ್ಲಿನ ಬಂಡೆಗಲ್ಲುಗಳ ನಡುವೆ ಒಂದು ಗುಹೆ ಇದೆ. ಇದು ಕಪ್ಪೆ ಅರಭಟ್ಟನ ಶಾಸನ ಇರುವ ಬಂಡೆಯ ಹಿಂಭಾಗದ ಕಣಿವೆಗೆ ಹೊಂದಿಕೊಂಡಿರುವ ಬಂಡೆ ಸಾಲೂ ಹೌದು. ಇಲ್ಲಿರುವ ಎರಡು ಸಣ್ಣ ಸಣ್ಣ ಗುಹೆಗಳಲ್ಲಿ ಒಂದು ಮತ್ತೊಂದಕ್ಕಿಂತ ಸ್ವಲ್ಪ ಹೆಚ್ಚು ವಿಶಾಲವಾಗಿದೆ. ಈ ಗುಹೆಯು ಈಗಿರುವ ಸ್ಥಿತಿಯಲ್ಲಿ ಯಾರಾದರೂ ತೆವಳಿಕೊಂಡು ಪ್ರವೇಶಿಸಬಹುದು ಮತ್ತು ಒಳಗೆ ಬಗ್ಗಿ ಕುಳಿತುಕೊಳ್ಳಬಹುದು. ಮಲಗಿ ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದಂತಹ ಜಾಗ. ಇಂತಹ ಗುಹೆಯ ಪ್ರವೇಶದ ಬಂಡೆಯ ಮೇಲೆ ಎರಡು ಸಾಲಿನ ಶಾಸನ ಇದ್ದು, ಇದು ಅತ್ಯಂತ ಕುತೂಹಲಕಾರಿಯಾದ ವಿಷಯವನ್ನು ಬಹಿರಂಗಗೊಳಿಸಿದೆ. ಶಾಸನದ ಪಾಠವು ಕನ್ನಡವೇ ಆಗಿದೆ. ಲಿಪಿಯೂ ಕನ್ನಡವೇ. ಲಿಪಿ ಸ್ವರೂಪವು ಕ್ರಿ.ಶ. ೭ನೆಯ ಶತಮಾನದ ಮಧ್ಯ ಭಾಗಕ್ಕೆ ಅನ್ವಯವಾಗುತ್ತದೆ. ಶಾಸನದ ಪಾಠವು ಈ ಕೆಳಕಂಡಂತಿದೆ.

೧. ಸ್ವಸ್ತಿ ಸತ್ಯಾಶ್ರಯ ಮಹಾರಾಜ[ರಾಪ್ರಾ] ಸಾದಂ[i*] ಕೆಯ್ಪರ್

೨. ಮಹಾಜನಮುಂಮೀ ಬಿಲಮಾನ್ ರಣಕೇಸ[ಱೀ]ಯರ್ಕೆ[ii*]

ಸತ್ಯಾಶ್ರಯ ಎಂಬ ಹೆಸರನ್ನು ಮೊಟ್ಟಮೊದಲು ಬಳಸಿದ ಬಾದಾಮಿ ಚಲುಕ್ಯ ದೊರೆಯೇ ಪೊಲಕೇಶಿ ಸತ್ಯಾಶ್ರಯ ಎಂದರೆ, ಧರ್ಮರಾಯ ಎಂದೂ ಅರ್ಥೈಸಲು ಸಾಧ್ಯವಿದೆ. ಧರ್ಮರಾಯನೇ ಅಱಭಟ್ಟನಾಗಿರಬಹುದು ಎಂದು ಭಾವಿಸಲೂ ಅವಕಾಶಗಳಿವೆ. ಇವನಿಗೆ ಎಱೀಯತಿಯಡಿಗಳ್, ರಣಕೇಱೀ, ಣವಿಕ್ರಮ ಇತ್ಯಾದಿ ಬಿರುದುಗಳಿದ್ದ ವಿಷಯ ಇತಿಹಾಸ ಬಲ್ಲ ಎಲ್ಲರಿಗೂ ತಿಳಿದಿದೆ. ಪೊಲೆಕೇಶಿಯ ಹುಟ್ಟು ಹೆಸರೇ ಎಱೀಯ. ಎಱೀ ಎಂಬ ಶಬ್ದಕ್ಕೆ ಕಪ್ಪು ಬಣ್ಣ, ಕಪ್ಪು ಬಣ್ಣದ ಎರೆ ಮಣ್ಮು ಎಂಬ ಅರ್ಥಗಳೂ ಇರುವುದರಿಂದ, ಪೊಲೆಕೇಶಿಗೆ ಮಾಧವ, ಎಂದರೆ ಕೃಷ್ಣನ ಹೆಸರು ಅನ್ವರ್ಥಕವಾಗಿತ್ತು ಎಂದು ತಿಳಿಯಬಹುದಾಗಿದೆ.

ಡಾ. ದೇಸಾಯಿ ಅವರು ಊಹಿಸಿರುವಂತೆ, ಪಲ್ಲವರು ವಾತಾಪಿಯನ್ನು ಪ್ರವೇಶಿಸಿದಾಗ ಕಣ್‌ಮರೆಯಾಗಿದ್ದ ಪೊಲೆಕೇಶಿಯು ಬಹುತೇಕ ಉಲ್ಲೇಖಿತ ಗುಹೆಯಲ್ಲಿ ಅಜ್ಞಾತವಾಗಿ ಕಾಲ ಕಳೆದಿರುವ ಸಾಧ್ಯತೆಗಳಿವೆ. ಅವನು ಅಲ್ಲಿ ಇದ್ದುದನ್ನು ತಿಳಿದಿದ್ದ ವಾತಾಪಿಯ ಜನ ಅವನು ಇದ್ದ ಗುಹೆಯನ್ನು ಅವನ ಸ್ಮಾರಕವಾಗಿ ಉಳಿಸಿಕೊಂಡಿದ್ದಾರೆ ಎಂದು ಭಾವಿಸಿದರೆ ತಪ್ಪಾಗಲಾರದು. ಮಹಾಜನರು ಪೊಲೆಕೇಶಿಗೆ ಪ್ರಸಾದವನ್ನು ಮಾಡಿದರೂ ಸಹ, ಅದನ್ನು ರಣಕೇಸಱೀಯ ಬಿಲ ಎಂದು ಸಂಬೋಧಿಸಿರುವುದು ಕುತೂಹಲಕಾರಿಯಾದ ಅಂಶ. ಸತ್ಯಾಶ್ರಯನ ಪ್ರಾಸಾದವು ರಣಕೇಸಱೀಯ ಬಿಲವಾಗಿ ಹೆಸರು ಪಡೆದಿದೆ. ಡಾ.ದೇಸಾಯಿ ಅವರು ಊಹಿಸಿರುವಂತೆ, ಪಲ್ಲವರು ವಾತಾಪಿಯನ್ನು ಆಕ್ರಮಿಸಿದಾಗ ಕಣ್‌ಮರೆಯಾದ ಪೊಲೆಕೇಶಿಯು, ವೇಷ ಮರೆಸಿಕೊಂಡು, ವಾತಾಪಿಯ ಜನರ ನೆರಳಿನಲ್ಲಿ ಅಜ್ಞಾತನಾಗಿ, ಜೆ.ಎಫ್.ಫ್ಲೀಟ್ ಅವರು ಮೊದಲು ಅನುಮಾನಪಟ್ಟಿರುವಂತೆ, ಆ ಭಾಗದ ಸಂತನ ಹಾಗೆ ಬದುಕಿರುವ ಸಾಧ್ಯತೆಗಳಿವೆ. ಆಶ್ರಯ ನೀಡಿದ್ದ ಜನರಿಗೆ ಸತ್ಯಾಶ್ರಯ ಮಹಾರಾಜ ತಿಳಿದಿದ್ದ. ಅವನ ಅಜ್ಞಾತವಾಸದ ಕಾರಣದಿಂದ, ಗುಹೆಯೇ ಅವನ ಪ್ರಾಸಾದವಾಗಿತ್ತು. ಮಾತ್ರವಲ್ಲದೆ, ಹುದುಗಿಕೊಳ್ಳುವ ಬಿಲವೂ ಆಗಿತ್ತು. ಬಿಲದಲ್ಲಿ ಅಡಗುವ ಹಲವು ಪ್ರಾಣಿಗಳ ಪೈಕಿ, ದ್ವಿಚರ ಪ್ರಾಣಿಯಾದ ಕಪ್ಪೆಯು ಪೊಲೆಕೇಶಿಯ ಹೆಸರಿನ ಜೊತೆಗೆ ಅನ್ವರ್ಥಕವಾಗಿ ಸೇರ್ಪಡೆ ಆಗಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಗುಹೆಯಲ್ಲಿ ಅಜ್ಞಾತನಾಗಿ ವಾಸಿಸುತ್ತಿದ್ದ ಧರ್ಮಾತ್ಮನಾದ ವ್ಯಕ್ತಿಯನ್ನು ಜನರು ಕಪ್ಪೆ ಅರಭಟ್ಟ ಎಂದು ಸಂಬೋಧಿಸಿ, ಗೌರವ ಸಲ್ಲಿಸಿದ್ದಾರೆ ಎಂದು ಭಾವಿಸಬಹುದು.

ಪೊಲೆಕೇಶಿ ಎಂದರೆ ಕೃಷ್ಣ ಎಂದು ಎನ್.ಲಕ್ಷ್ಮೀನಾರಾಯಣ ರಾವ್ ಸ್ಪಷ್ಟಪಡಿಸಿದ್ದಾರೆ. ಮಾಧವನೀತನ್ ಪೆಱನಲ್ಲ ಎಂದರೆ ಅವನು ಪೊಲೆಕೇಶಿ ಎಂದು ಒಪ್ಪಿಕೊಳ್ಳಬಹುದು. ಶ್ರೀಹರ್ಷನಂತಹ ಪರಾಕ್ರಮಿಯನ್ನು ಸೋಲಿಸಿದ್ದ ಪೊಲೆಕೇಶಿಗೆ ನರಸಿಂಹವರ್ಮನಿಂದ ಆಗಿದ್ದ ಮಾನಭಂಗ ಅಸಹನೀಯವಾಗಿತ್ತು ಎಂದು ಖಚಿತವಾಗಿಯೇ ತಿಳಿಯಬಹುದು. ಕಟ್ಟಿದ ಸಿಂಘಮನ್ ಕೆಟ್ಟೊಡೇನ್ ಎಂಬ ಭಾಗದಲ್ಲಿ, ಎರಡು ಬಾರಿ ಸೋಲಿಸಿದ್ದ ನರಸಿಂಹ(ಸಿಂಘ) ನನ್ನು ಕಟ್ಟಿಯೇ ಹಾಕಬೇಕಾಗಿತ್ತು. ಬಿಟ್ಟರೆ ನಮಗೇನು ಎಂದು ಉಪೇಕ್ಷೆ ಮಾಡಿದ್ದರ ಫಲವೇ ಅವಮಾನ ಎಂದು ಶಾಸನ ಕವಿ ಭಾವಿಸಿದಂತಿದೆ. ಈ ಎಲ್ಲ ಧ್ವನಿಗಳ ಹಿನ್ನೆಲೆಯಲ್ಲಿ, ಹೊಲೆಮನೆಯಿಂದಲೂ ಮಾಧವ/ಕೃಷ್ಣನಂತೆ ಪರಾಕ್ರಮಿಯಾಗಿದ್ದ ಪೊಲೆಕೇಶಿ, ಯುದ್ಧಾನಂತರ ಎಱೀಯ/ಸತ್ಯಾಶ್ರಯನ ಬದಲು ಅರಭಟ್ಟನೆಂಬ ಹೆಸರಿನಲ್ಲಿ ಅಜ್ಞಾತನಾಗಿ ಬದುಕಿದ್ದು, ಗೆಲುವಿಗೆ ಪ್ರಯತ್ನಗಳನ್ನು ಮುಂದುವರಿಸಿದ್ದ ಎಂದು ಭಾವಿಸಿದರೆ ತಪ್ಪಾಗಲಾರದು.

ಕಪ್ಪೆ ಅರಭಟ್ಟನ ಶಾಸನದಲ್ಲಿ ಹೇಳಲಾಗಿರುವ ಎಲ್ಲಗುಣಗಳನ್ನೂ ಒಬ್ಬನೇ ವ್ಯಕ್ತಿಯಲ್ಲಿ ಕಾಣಬಹುದು ಎಂದರೆ, ಆ ವ್ಯಕ್ತಿಯು ಮತ್ತಾರೂ ಆಗಿರದೆ ಪೊಲೆಕೇಶಿಯೇ ಆಗುತ್ತಾನೆ. ಪೊಲೆಕೇಶಿ ತೀರಿಕೊಂಡ ಅಸುಪಾಸಿನಲ್ಲಿ ಅಂದರೆ, ಕ್ರಿ.ಶ.ಸು. ೬೫೦ರಿಂದ ಕ್ರಿ.ಶ. ೭೦೦ ಸುಮಾರಿನಲ್ಲಿ ಈ ಶಾಸನವನ್ನು ಪೊಲೆಕೇಶಿಯ ಸ್ಮರಣೆಗೆಂದೇ, ಕಾವ್ಯ ಲಕ್ಷಣಗಳ ಸಹಿತ ಹಾಕಿಸಲಾಗಿದೆ ಎಂದು ತಿಳಿಯಬಹುದು.

ಕಪ್ಪೆ ಅರಭಟ್ಟನ ಶಾಸನವನ್ನು ಬಂಡೆಯ ಮೇಲ್ಮೈಯನ್ನು ನಯಗೊಳಿಸಿ, ಪದ್ಮ ಸಹಿತ ಚಕ್ರದ ಪೀಠದ ಮೇಲೆ ಕೆತ್ತಲಾಗಿದೆ. ಅಕ್ಷರಗಳು ಸ್ಫುಟವಾಗಿವೆ. ಅಂದವಾಗಿವೆ. ಕಪ್ಪೆ ಅರಭಟ್ಟನ ಶಾಸನವೂ ಒಂದು ಸ್ಮಾರಕ ಶಾಸನ. ಪೊಲೆಕೇಶಿಯ ಸ್ಮಾರಕ ಗುಹೆಯ ಮೇಲಿನ ಶಾಸನವು ಅದೆ ಕಾಲದ್ದಾದರೂ, ಲಿಪಿ ಸ್ವರೂಪ ಒಂದೇ ಆಗಿದ್ದರೂ, ಬಂಡೆಯ ಒರಟು ಮೇಲ್ಮೈನ ಮೇಲೆ ಕೆತ್ತಲಾಗಿರುವುದರಿಂದ ಅಂದವಾಗಿಲ್ಲ. ಬಹುತೇಕ ಎರಡೂ ಶಾಸನಗಳ ಕೆತ್ತನೆಯ ನಡುವೆ ಕಾಲದ ಅಂತರ ಹೆಚ್ಚಾಗಿಲ್ಲ. ವಿಕ್ರಮಾದಿತ್ಯನು ಅಧಿಕಾರಕ್ಕೆ ಬರುವ ಮೊದಲೇ, ಅಂದರೆ, ಪಲ್ಲವರ ಅಧಿಕಾರಿಗಳು ಮತ್ತು ಸೈನ್ಯ ಇನ್ನೂ ವಾತಾಪಿಯಲ್ಲಿರುವಾಗಲೇ, ಅಜ್ಞಾತವಾಸಿಯಾಗಿದ್ದ ಪೊಲೆಕೇಶಿಯು ಮೃತನಾಗಿರುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಕಪ್ಪೆ ಅರಭಟ್ಟನ ಹೆಸರಿನಲ್ಲಿ, ಪೊಲೆಕೇಶಿಯ ಸ್ಮಾರಕ ಶಾಸನವೂ, ನಂತರ ಪೊಲೆಕೇಶಿ ಅಜ್ಞಾತನಾಗಿ ವಾಸಿಸಿದ್ದ ಗುಹೆಯನ್ನು ಸ್ಮಾರಕವೆಂದು ಪರಿಗಣಿಸಿ, ಶಾಸನವನ್ನು ಹಾಕಿಸಿರುವ ಸಾಧ್ಯತೆಗಳಿವೆ.

ಕಪ್ಪೆ ಅರಭಟ್ಟನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ಅವನನ್ನು ಪೊಲೆಕೇಶಿಗೆ ಸಮೀಕರಿಸಿದರೆ ಆಗುವ ಅನ್ಯಾಯವನ್ನು ಪರಿಗಣಿಸಿ, ಕಪ್ಪೆ ಅರಭಟ್ಟನನ್ನು ಸ್ಪಷ್ಟವಾಗಿ ಗುರುತಿಸುವ ಪ್ರಯತ್ನಕ್ಕೆ ಇನ್ನೂ ಅವಕಾಶಗಳಿವೆ ಎಂದು ಒಪ್ಪಿಕೊಳ್ಳುತ್ತಾ, ಅರಭಟ್ಟನ ಹೆಸರಿನ ಜೊತೆಗೆ ಅಂಟಿಕೊಂಡಿರುವ ಕಪ್ಪೆಗೆ ಇನ್ನೂ ಹೆಚ್ಚಿನ ಅರ್ಥವನ್ನು ಯಾರಾದರೂ ಒದಗಿಸಿದರೆ ಅದನ್ನು ಸ್ವಾಗತಿಸುತ್ತಾ, ನಂತರ ಸೂಕ್ತವಾಗಿ ನನ್ನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಲು ಅವಕಾಶ ಇಟ್ಟುಕೊಂಡು, ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳು ಮತ್ತು ಆಗಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಕಪ್ಪೆ ಅರಭಟ್ಟನೇ ಇಮ್ಮಡಿ ಪೊಲೆಕೇಶಿ ಎಂಬ ಪ್ರಮೇಯ ವೊಂದನ್ನು ಚರ್ಚೆಗೆ ಮುಂದಿಡಲಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಇಂಡಿಯನ್ ಅಂಟಿಕ್ವೆರಿ, ಸಂ.xಪು. ೬೧

[2] ಟಿ.ವಿ. ವೆಂಕಟಾಚಲ ಶಾಸ್ತ್ರೀ, ೧೯೯೧, ಹಳೆಯ ಹೊನ್ನು, ಬೆಂಗಳೂರು, ಪು. ೧-೧೪

[3] ಪೂರ್ವೋಕ್

ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಎಚ್.ಎಸ್. ಗೋಪಾಲರಾವ್
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *