Wednesday , 22 May 2024
kannada vyakarana

ಕನ್ನಡ ವ್ಯಾಕರಣ ಪರಂಪರೆ

ಕನ್ನಡ ವ್ಯಾಕರಣ ಪರಂಪರೆ: ಕನ್ನಡ ಭಾಷೆಯ ಲಭ್ಯ ಪ್ರಾಚೀನ ದಾಖಲೆಯೆಂದರೆ ಕ್ರಿ.ಶ. ಸುಮಾರು 450ರ ಹಲ್ಮಿಡಿ ಶಾಸನ. ಅದರ ನಂತರದಲ್ಲಿ ಹಲವಾರು ಶಾಸನಗಳು ಲಭ್ಯವಿದ್ದು ಕನ್ನಡ ಗದ್ಯಪದ್ಯಗಳ ಶ್ರೇಷ್ಠ ಮಾದರಿಗಳನ್ನು ನಮಗೆ ಪರಿಚಯಿಸು ತ್ತವೆ. ವ್ಯಾಕರಣದ ಕಟ್ಟುಪಾಡುಗಳನ್ನು ನಿಯತವಾಗಿ ಪಾಲಿಸುವ ಒಂದು ವ್ಯವಸ್ಥಿತ ಹಾಗೂ ಸಮೃದ್ಧ ಭಾಷೆಯಾಗಿ ಕನ್ನಡವು ಬೆಳೆದಿರುವುದನ್ನು ಇವುಗಳಲ್ಲಿ ಕಾಣುತ್ತೇವೆ. ಹೀಗಾಗಿ ಈ ಅವಧಿಯಲ್ಲಿ ಕನ್ನಡ ವ್ಯಾಕರಣಗಳು ಯಾವು ದಾದರೂ ರಚಿತವಾಗಿ ಬಳಕೆಯಲ್ಲಿದ್ದಿರಬಹುದೇ ಎಂಬ ಸಂಶಯ ಮೂಡಲು ಅವಕಾಶವಿದೆ. ಆದರೆ ಲಭ್ಯ ಕನ್ನಡ ಕೃತಿಗಳಲ್ಲಿ ಮೊದಲನೆಯದಾದ ‘ಕವಿರಾಜ ಮಾರ್ಗ’ದ (ಕ್ರಿ.ಶ. 850) ಕಾಲದಿಂದೀಚೆಗಷ್ಟೇ ಕನ್ನಡ ವ್ಯಾಕರಣ ಕೃತಿಗಳ ರಚನೆ ಕಂಡುಬರುವುದು. ಕವಿರಾಜಮಾರ್ಗಕ್ಕೂ ಮುಂಚೆ ಕನ್ನಡ ವ್ಯಾಕರಣ ಗ್ರಂಥವೊಂದು ರಚಿತವಾಗಿದ್ದಿರಬಹುದಾದರೂ ಹಾಗೆ ಖಂಡಿತವಾಗಿ ಹೇಳಲು ಸಾಕ್ಷ್ಯಾಧಾರಗಳು ಇಲ್ಲ. ಹೀಗಾಗಿ ಕನ್ನಡ ವ್ಯಾಕರಣಗಳ ಪರಂಪರೆಯು ಪ್ರಾರಂಭ ವಾಗುವುದು ಎರಡನೆಯ ನಾಗವರ್ಮನ (ಕ್ರಿ.ಶ. ಸುಮಾರು 1050) ‘ಶಬ್ದಸ್ಮೃತಿ’ ಹಾಗೂ ‘ಕರ್ಣಾಟಕ ಭಾಷಾ ಭೂಷಣ’ಗಳಿಂದಲೇ ಎಂದು ಹೇಳಬೇಕಾಗುತ್ತದೆ.

ಈ ಪರಂಪರೆಯನ್ನು ಮತ್ತಷ್ಟು ಹಿಂದಕ್ಕೆ ಕೊಂಡೊಯ್ಯಲು ಅವಕಾಶವಿದೆ. ಪಂಡಿತರು ಹಾಗೆ ಮಾಡಿ ಕವಿರಾಜಮಾರ್ಗದಿಂದ ಅದನ್ನು ಪ್ರಾರಂಭಿಸುತ್ತಾರೆ. ಕವಿರಾಜಮಾರ್ಗವು ವ್ಯಾಕರಣ ಗ್ರಂಥವೇನೂ ಅಲ್ಲ; ಒಂದು ಅಲಂಕಾರ ಗ್ರಂಥ. ಕಾವ್ಯಕ್ಕೆ ಭಾಷೆಯೇ ಮಾಧ್ಯಮ. ಕಾವ್ಯದ ಗುಣದೋಷಗಳಲ್ಲಿ ಭಾಷೆಯ ಪಾತ್ರವೂ ಪ್ರಧಾನವಾಗಿರುತ್ತದೆ. ಆದ್ದರಿಂದ ಕಾವ್ಯದ ಗುಣದೋಷಗಳನ್ನು ವಿವರಿಸುವಲ್ಲಿ ವ್ಯಾಕರಣಕ್ಕೆ ಸಂಬಂಧಿಸಿದ ದೋಷಗಳ ಬಗ್ಗೆಯೂ ಹೇಳಬೇಕಾ ದುದು ಅನಿವಾರ್ಯ. ಸಂಸ್ಕೃತ ಆಲಂಕಾರಿಕರಲ್ಲೂ ಈ ಲಕ್ಷಣವನ್ನು ಕಾಣುತ್ತೇವೆ. ದಂಡಿ ಮೊದಲಾದ ಸಂಸ್ಕೃತ ಆಲಂಕಾರಿಕರನ್ನು ಅನುಸರಿಸುವ ಕವಿರಾಜಮಾರ್ಗ ಕಾರನು ಸಹಜವಾಗಿಯೇ ತಾನೂ ಇಂತಹ ವಿಚಾರಗಳನ್ನು ಹೇಳಿದ್ದಾರೆ, ಇವನು ಕನ್ನಡಕ್ಕೆ ಸಂಬಂಧಿಸಿದ ವಿಚಾರಗಳನ್ನು ಹೇಳಿದ್ದಾನೆ.

ಜನ್ನನು ತನ್ನ ‘ಅನಂತನಾಥ ಪುರಾಣ’ದಲ್ಲಿ “ರನ್ನಂ ವೈಯಾಕರಣಂ ಜನ್ನಂ ಮೇಣ್ ಕವಿಗಳೊಳಗೆ ಮೈಯಾಕರಣಂ” (14-77) ಎಂದು ಹೇಳಿಕೊಂಡಿದ್ದಾನೆ. ಅದರ ಆಧಾರದ ಮೇಲೆ ಹತ್ತನೆಯ ಶತಮಾನದ ರನ್ನನು ಒಂದು ವ್ಯಾಕರಣವನ್ನು ಬರೆದಿರಬಹುದೆಂದು ಊಹಿಸಲಾಗುತ್ತದೆ. ಆದರೆ, ಈ ರನ್ನನು ‘ಸಾಹಸಭೀಮ ವಿಜಯ’ವನ್ನು ಬರೆದ ರನ್ನನೋ ಅಥವಾ ಬೇರೆಯವನೋ. ಇಲ್ಲಿ ಬರುವ ‘ವೈಯಾಕರಣಂ’ ಎಂಬುದನ್ನು ವ್ಯಾಕರಣ ಪಂಡಿತನೆಂದು ಅರ್ಥೈಸಬೇಕೋ ಅಥವಾ ವ್ಯಾಕರಣ ಕರ್ತೃವೆಂದು ಅರ್ಥೆಸಬೇಕೋ ಎಂಬುದು ಸ್ಪಷ್ಟವಿಲ್ಲ. ಆದ್ದರಿಂದ ಈ ಬಗ್ಗೆ ಖಚಿತ ಅಭಿಪ್ರಾಯ ನೀಡುವುದು ಸಾಧ್ಯವಿಲ್ಲವಾಗಿದೆ.

ಇದೇ ರೀತಿ, ಇಮ್ಮಡಿ ನಾಗವರ್ಮನು ತನ್ನ ‘ಕರ್ಣಾಟಕ ಭಾಷಾಭೂಷಣ’ ದಲ್ಲಿ “ದೀರ್ಘೋಕ್ತಿರ್ನಯಸೇನಸ್ಯ” ಎಂದು ಒಂದು ಕಡೆ ಹೇಳಿದ್ದಾನೆ. ಇದನ್ನು ಗಮನಿಸಿದಾಗ, ನಯಸೇನನೆಂಬುವನು ಕನ್ನಡ ವ್ಯಾಕರಣವೊಂದನ್ನು ಬರೆದಿರುವ ನೆಂದು ಊಹಿಸಲು ಅವಕಾಶವಿದೆ. ಕ್ರಿ.ಶ. 1053ರ ಮುಳಗುಂದ ಶಾಸನದಲ್ಲಿ ಕೂಡ ಈ ನಯಸೇನನ ಉಲ್ಲೇಖವಿದೆ. ಆದರೆ ಇವನ ಕೃತಿಯ ಹೆಸರಾಗಲಿ, ಅದು ಯಾವ ಭಾಷೆಯಲ್ಲಿದೆ ಎಂಬುದಾಗಲಿ ತಿಳಿಯಲು ಸ್ಪಷ್ಟವಾದ ಆಧಾರಗಳಿಲ್ಲ. ಸಂಭಾವ್ಯತೆಯ ಆಧಾರದ ಮೇಲೆ ಎಂ.ವಿ. ಸೀತಾರಾಮಯ್ಯ ನವರು, ‘ನಯಸೇನಪಂಡಿತನು ಒಂದು ಕನ್ನಡ ವ್ಯಾಕರಣವನ್ನು ಬರೆದಿದ್ದನು; ಶಾಸನದ ಕಾಲ (1053) ಹಾಗೂ ನಾಗವರ್ಮನ ಕಾಲ (1050) ಇವಕ್ಕೆ ಹಿಂದಿನ ಕಾಲದವನು ಎಂದು ಹೇಳಬಹುದು. ಇವನು ಪಂಪನಿಂದ ಈಚೆಗೆ, ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಇದ್ದಿರಬಹುದು. ತೀರಾ ಪ್ರಾಚೀನ ಶಾಸನವೊಂದರಲ್ಲಿ ಹೋಗುವ ಸಂಭವ ಕಡಿಮೆ. ‘ಧರ್ಮಾಮೃತ’ದ ನಯಸೇನ ನಂತೆ ಇವನೂ ಮುಳುಗುಂದದವನೇ ಆಗಿರಬಹುದು. ಈ ನಮ್ಮ ಊಹೆ ಸಂಭಾವ್ಯವಾಗಿರುವುದರಿಂದ, ನಯಸೇನ ಪಂಡಿತ ಪ್ರಥಮ ಕನ್ನಡ ವ್ಯಾಕರಣ ಕರ್ತೃ ಎನ್ನಬಹುದು. ಇದು ಕನ್ನಡ ವ್ಯಾಕರಣವಾದರೂ ‘ಭಾಷಾ ಭೂಷಣ’ದಂತೆ ಸಂಸ್ಕೃತ ಭಾಷೆಯಲ್ಲಿ ರಚಿತವಾಗಿದ್ದಿರುವಂತೆ ಕಾಣುತ್ತದೆ. ಇದು ನಷ್ಟವಾಗಿ ಹೋಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. (1979: 56) ಹೀಗಾಗಿ, ಕನ್ನಡ ವ್ಯಾಕರಣಗ್ರಂಥಗಳ ಪೈಕಿ, ಸದ್ಯದ ಮಟ್ಟಿಗೆ ಲಭ್ಯವಿರುವ ಮೊದಲ ಗ್ರಂಥವೆಂದರೆ ಇಮ್ಮಡಿ ನಾಗವರ್ಮನ (ಕ್ರಿ.ಶ. ಸುಮಾರು 1050) ‘ಶಬ್ದಸ್ಮೃತಿ’ಯೇ. ಆದರೆ ಇದು ಪೂರ್ಣಗ್ರಂಥವಲ್ಲ, ಅವನ ‘ಕಾವ್ಯಾವ ಲೋಕನ’ವೆಂಬ ಗ್ರಂಥದ ಮೊದಲ ಅಧಿಕರಣ (ಅಧ್ಯಾಯ) ಮಾತ್ರ. ‘ಕವಿರಾಜಮಾರ್ಗ’ದಂತೆಯೇ ‘ಕಾವ್ಯಾವಲೋಕನ’ವೂ ಒಂದು ಅಲಂಕಾರ ಗ್ರಂಥ. ಆದರೆ ಅಲ್ಲಿಯಂತೆ, ದೋಷನಿರೂಪಣೆಯ ಸಂದರ್ಭದಲ್ಲಿ, ಪ್ರಾಸಂಗಿಕವಾಗಿ ಮಾತ್ರ ಕೆಲವು ವ್ಯಾಕರಣ ವಿಚಾರಗಳನ್ನು ನಿರೂಪಿಸುವಷ್ಟಕ್ಕೆ ಅದು ಸೀಮಿತವಾಗಿಲ್ಲ. ಸಂಗ್ರಹವಾಗಿ ಯಾದರೂ ಇಡಿಯಾಗಿ ಕನ್ನಡ ವ್ಯಾಕರಣವನ್ನು ನಿರೂಪಿಸುತ್ತದೆ. ಈ ದೃಷ್ಟಿ ಯಿಂದ, ಗ್ರಂಥವೊಂದರ ಭಾಗವೇ ಆದರೂ ‘ಶಬ್ದಸ್ಮೃತಿ’ಯು ಒಂದು ಸ್ವತಂತ್ರ ಗ್ರಂಥವೆಂದು ಕರೆಯಿಸಿಕೊಳ್ಳಬಹುದಾದ ಯೋಗ್ಯತೆಯನ್ನು ಪಡೆದಿದೆ. ಇದು ಕನ್ನಡದಲ್ಲೆ ರಚಿತವಾಗಿರುವುದರಿಂದ, ಕನ್ನಡದಲ್ಲೇ ರಚಿತವಾದ ಕನ್ನಡದ ಮೊಟ್ಟಮೊದಲ ವ್ಯಾಕರಣವೆಂಬ ಹೆಗ್ಗಳಿಕೆ ಕೂಡ ಇದಕ್ಕೆ ದಕ್ಕಿದೆ.

[sociallocker]

ಇದರ ಆನಂತರದ್ದು ಇಮ್ಮಡಿ ನಾಗವರ್ಮನೇ ರಚಿಸಿದ ‘ಕರ್ಣಾಟಕ ಭಾಷಾಭೂಷಣ’ [ಇದು ಮೊದಲು ರಚಿತವಾಯಿತೆಂದೂ, ಅನಂತರ, ‘ಶಬ್ದಸ್ಮೃತಿ’ ರಚಿತವಾಯಿತೆಂದೂ ಈಚೆಗೆ ಎಂ.ವಿ.ಸೀತಾರಾಮಯ್ಯನವರು ಹೇಳಿದ್ದಾರೆ. (1979), ಆದರೆ ಹೆಚ್ಚಿನವರು ಹಾಗೆ ಭಾವಿಸದೆ ಇರುವುದರಿಂದ, ಮತ್ತು ಎಂ.ವಿ.ಸೀಯವರ ಅಭಿಪ್ರಾಯಕ್ಕೆ ಇನ್ನೂ ಗಟ್ಟಿಯಾದ ಆಧಾರಗಳ ಅಗತ್ಯವಿರುವುದರಿಂದ ಇಲ್ಲಿ ಸಾಂಪ್ರದಾಯಿಕ ಅಭಿಪ್ರಾಯವನ್ನೇ ಒಪ್ಪಿದೆ]. ಲಭ್ಯವಿರುವ ಕನ್ನಡ ವ್ಯಾಕರಣಗಳ ಪೈಕಿ ಇದು ಮೊಟ್ಟ ಮೊದಲನೆಯ ಸಮಗ್ರ ಹಾಗೂ ಸ್ವತಂತ್ರ ಕೃತಿಯಾಗಿದೆ. ಇದು ಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವ ಕನ್ನಡ ವ್ಯಾಕರಣ. ಸಂಸ್ಕೃತ ವ್ಯಾಕರಣಗಳ ಮಾದರಿಯಲ್ಲೆ ಇಲ್ಲಿಯ ಸೂತ್ರ ವೃತ್ತಿಗಳು ರಚಿತವಾಗಿವೆ. ಒಂದು ಟೀಕೆ ಕೂಡ ಇದೆ. ಉದಾಹರಣೆಗಳು ನಾಗವರ್ಮನು ಕೊಟ್ಟಿರುವಂತಹವೇ ಆದರೂ ಟೀಕು ಮಾತ್ರ ಬೇರೆಯವರಿಂದ ರಚಿತವಾಗಿರುವಂತಿದೆ.

ಇದಾದ ಅನಂತರದಲ್ಲಿ ಕಂಡು ಬರುವ ಪ್ರಮುಖ ಹಾಗೂ ಪ್ರಸಿದ್ಧವಾದ ಗ್ರಂಥವೆಂದರೆ ಕೇಶಿರಾಜನ ‘ಶಬ್ದಮಣಿದರ್ಪಣ’ (ಕ್ರಿ.ಶ. ಸುಮಾರು 1260). ಇತರ ಯಾವ ಕನ್ನಡ ವ್ಯಾಕರಣವೂ ಇದರಷ್ಟು ಪ್ರಸಿದ್ದಿಯನ್ನು ಪಡೆದಿಲ್ಲ. ಇದಕ್ಕೆ ಕಾರಣ, ಇದರ ವ್ಯಾಪಕತೆ, ಸಮಗ್ರತೆ. ಅಲ್ಲದೆ ಇದು ಕನ್ನಡದಲ್ಲಿ ರಚನೆಯಾಗಿದೆ. ‘ಶಬ್ದಸ್ಮೃತಿ’ಯು ಬಹಳ ಸಂಗ್ರಹವಾಗಿ ಹೋಯಿತು, ‘ಭಾಷಾಭೂಷಣ’ ಹಾಗೂ ‘ಶಬ್ದಾನುಶಾಸನ’ಗಳು ಸಂಸ್ಕೃತದಲ್ಲಿ ರಚಿತವಾದವು, ಹೀಗಾಗಿ ಕನ್ನಡದಲ್ಲಿ ರಚಿತವಾದ ವಿಸ್ತಾರವಾದ ಕನ್ನಡ ವ್ಯಾಕರಣ ಇದೊಂದೇ ಆಗಿ ಉಳಿಯಿತು, ಮೆರೆಯಿತು. ಈ ಕಾರಣದಿಂದಾಗಿಯೇ ಇದಕ್ಕೆ ಹಲವು ವೃತ್ತಿಗಳೂ ವ್ಯಾಖ್ಯಾನಗಳೂ ಹುಟ್ಟಿಕೊಂಡಿವೆ.

ಅನಂತರದ್ದು ಭಟ್ಟಾಕಳಂಕನ (ಕ್ರಿ.ಶ. 1604) ‘ಶಬ್ದಾನುಶಾಸನ’. ನಾಗವರ್ಮನ ‘ಭಾಷಾಭೂಷಣ’ದಂತೆಯೇ ಇದು ಕೂಡ ಸಂಸ್ಕೃತದಲ್ಲಿಯೇ ರಚಿತವಾಗಿದೆ. ಇದೊಂದು ಪ್ರೌಢವ್ಯಾಕರಣ. ಶಾಸ್ತ್ರಶುದ್ಧತೆ, ಖಚಿತತೆ ಮುಂತಾದ ಗುಣಗಳಿಂದ ಕೂಡಿದೆ. ಇದರಿಂದ ಪಂಡಿತಮಾನ್ಯವಾಗಿದೆ. ಆದರೆ ಜನಸಾಮಾನ್ಯರಿಗೆ ಮಾತ್ರ ಕೈವಶವಾಗಲಿಲ್ಲ.

ಇದರ ನಂತರದಲ್ಲಿ, 19ನೆಯ ಶತಮಾನದಲ್ಲಿ, ಕನ್ನಡ ವ್ಯಾಕರಣಗಳು ಹೆಚ್ಚಿನ ಪ್ರಮಾಣದಲ್ಲಿ ರಚಿತವಾದುದನ್ನು ಕಾಣುತ್ತೇವೆ. ಇದರಲ್ಲಿ ಪಾಶ್ಚಾತ್ಯರದ್ದು ಸಿಂಹಪಾಲು. ವಿಲಿಯಂ ಕೇರಿ ಎಂಬವನು ‘ಎ ಗ್ರ್ಯಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೆಜ್’ (ಸೆರಾಂಪುರ್, 1817) ಎಂಬ ವ್ಯಾಕರಣವನ್ನು ಇಂಗ್ಲಿಶ್ ಭಾಷೆಯಲ್ಲಿ ರಚಿಸಿ ಪ್ರಕಟಿಸಿದನು. ಜಾನ್ ಮೆಕೆರಲ್ ಎಂಬವನು ‘ಎ ಗ್ರ್ಯಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೆಜ್’ (ಮದರಾಸು, 1820) ಎಂಬ ಕೃತಿಯನ್ನು ರಚಿಸಿದನು. ಇದೇ ರೀತಿ ಅನಂತರದಲ್ಲಿ ಥಾಮಸ್ ಹಡ್ಸನ್, ಜೀಗ್ಲರ್, ಕ್ರೇಟರ್ ಮುಂತಾದವರು ಕನ್ನಡ ವ್ಯಾಕರಣಗಳನ್ನು ರಚಿಸಿದರು. ಆದರೆ ಪ್ರಧಾನ ವಾಗಿ, ಇವೆಲ್ಲ ರಚಿತವಾದದ್ದು ಇಂಗ್ಲಿಶಿನಲ್ಲಿ ಮತ್ತು ಕನ್ನಡ ಕಲಿಯುವ ಇಂಗ್ಲಿಶರಿಗೆ ಅದನ್ನು ಸುಲಭವಾಗಿ ಕಲಿಸುವ ಸಲುವಾಗಿ ಮಾತ್ರ. ಕ್ರಿ.ಶ. 1830ರಲ್ಲಿ ಶ್ರೀರಂಗ ಪಟ್ಟಣದ ಕೃಷ್ಣಮಾಚಾರ್ಯರ ‘ಹೊಸಗನ್ನಡ ನುಡಿಗನ್ನಡಿ ಯೆಂಬ ಹೊಸಗನ್ನಡ ವ್ಯಾಕರಣವು’ ಎಂಬ ಕೃತಿ ಪ್ರಕಟವಾಯಿತು. ಇದು ಕನ್ನಡದಲ್ಲಿ ರಚಿತವಾದ ಹೊಸಗನ್ನಡ ವ್ಯಾಕರಣ.

ಇದರ ನಂತರ 19ನೆಯ ಶತಮಾನದಲ್ಲಿ, ‘ಶಬ್ದಮಣಿ ದರ್ಪಣ’ವನ್ನು ಸಂಪಾದಿಸಿ ಪ್ರಕಟಿಸಿದ ಕಿಟೆಲ್ಲರು, ‘ಕನ್ನಡ ವ್ಯಾಕರಣ ಸೂತ್ರಗಳು’, ‘ಸಂಕ್ಷೇಪ ವ್ಯಾಕರಣ ಸೂತ್ರಗಳು’ ಎಂಬೆರಡು ಕೃತಿಗಳನ್ನು ಶಬ್ದಮಣಿದರ್ಪಣದ ಮಾದರಿಯಲ್ಲಿ ಕನ್ನಡದಲ್ಲಿ ರಚಿಸಿದರು. 1903ರಲ್ಲಿ ಅವರದೇ ‘ಎ ಗ್ರ್ಯಾಮರ್ ಆಫ್ ದಿ ಕನ್ನಡ ಲಾಂಗ್ವೇಜ್’ ಎಂಬ ಇಂಗ್ಲಿಷ್ ಕೃತಿ ರಚಿತವಾಯಿತು. 1914ರಲ್ಲಿ ಹೆರಾಲ್ಡ್ ಸ್ಪೆನ್ಸರನ ‘ಎ ಕ್ಯಾನರೀಸ್ ಗ್ರ್ಯಾಮರ್’ ಎಂಬ ಕೃತಿ ಪ್ರಕಟವಾಯಿತು. ಇಂಗ್ಲಿಷರು ಕನ್ನಡ ಕಲಿಯಲು ಬಳಸುವ ಉತ್ತಮ ವ್ಯಾಕರಣವಿದು. ಇದು ಹಡ್ಸನ್ನನ ಕೃತಿಯ ವಿಸ್ತೃತ ಹಾಗೂ ಪರಿಷ್ಕೃತ ರೂಪ ವಾಗಿದೆ. ಭಾಷೆಯನ್ನು ಕಲಿಯುವವರನ್ನು ಉದ್ದೇಶಿಸಿ ರಚಿತವಾಗಿದ್ದರೂ ಇದು ಒಂದು ಮೇಲ್ಮಟ್ಟದ ವ್ಯಾಕರಣ ಕೃತಿಯಾಗಿದೆ.

ಇಲ್ಲಿಂದ ಮುಂದಕ್ಕೆ ಆಧುನಿಕ ಯುಗದಲ್ಲಿ ಶಾಲಾಕಾಲೇಜುಗಳ ಉಪಯೋಗ ಕ್ಕಾಗಿ ಹಲವು ವ್ಯಾಕರಣಗಳು ಹುಟ್ಟಿವೆ. ಬಿ. ಮಲ್ಲಪ್ಪನವರ ‘ಶಬ್ದಾದರ್ಶ’ (ಮೈಸೂರು, 1930), ಎ.ಎನ್. ನರಸಿಂಹಯ್ಯನವರ ‘ಕನ್ನಡ ಪ್ರಥಮ ವ್ಯಾಕರಣ’ (ಮೈಸೂರು, 1949), ತೀನಂಶ್ರೀಯವರ ‘ಕನ್ನಡ ಮಧ್ಯಮ ವ್ಯಾಕರಣ’ (ಮೈಸೂರು, 1956) ಮುಂತಾದವನ್ನು ಇಲ್ಲಿ ಹೆಸರಿಸಬಹುದು. ಆಧುನಿಕ ಭಾಷಾ ವಿಜ್ಞಾನದ ಅಧ್ಯಯನವು ಪ್ರಾರಂಭವಾದ ಮೇಲೆ, ಎ.ಎನ್. ನರಸಿಂಹಯ್ಯ, ಜಿ.ಎಸ್. ಗಾಯಿ, ಬಿ. ರಾಮಚಂದ್ರರಾವ್, ಕುಶಾಲಪ್ಪಗೌಡ, ಜೆ.ಎಸ್. ಕುಳ್ಳಿ ಮೊದಲಾದ ವಿದ್ವಾಂಸರು ಆನ್ವಯಿಕ ವ್ಯಾಕರಣದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಶುದ್ಧವ್ಯಾಕರಣದ ದೃಷ್ಟಿಯಿಂದ ಹೆಸರಿಸಬಹುದಾದ ಇತ್ತೀಚಿನ ಕೃತಿಗಳೆಂದರೆ ಎನ್. ರಂಗನಾಥಶರ್ಮರ ‘ಹೊಸಗನ್ನಡ ವ್ಯಾಕರಣ’ ಮತ್ತು ಟಿ.ವಿ. ವೆಂಕಟಾಚಲ ಶಾಸ್ತ್ರಿಯವರ ‘ಹೊಸಗನ್ನಡ ವ್ಯಾಕರಣ’ ಇವು. ಒಟ್ಟಾರೆ, ಹಳಗನ್ನಡ ವ್ಯಾಕರಣಗಳ ಸಮಗ್ರ ಹಾಗೂ ವ್ಯಾಪಕವಾದ ಒಂದು ಅಧ್ಯಯನ ವನ್ನು ಎಂ.ವಿ. ಸೀತಾರಾಮಯ್ಯನವರ ‘ಪ್ರಾಚೀನ ಕನ್ನಡ ವ್ಯಾಕರಣಗಳು’ (ಮೈಸೂರು, 1979) ಎಂಬ ಕೃತಿಯು ನೀಡುತ್ತದೆ. ಇವಲ್ಲದೆ ವ್ಯಾಕರಣ ಸಂಬಂಧವಾಗಿ ಹಲವಾರು ಬಿಡಿ ಲೇಖನಗಳೂ, ಸಣ್ಣ ಪುಟ್ಟ ಪುಸ್ತಕಗಳೂ ಹಲವು ಬಂದಿದೆ. ಅವುಗಳಲ್ಲಿ ಕೂಡ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಎಷ್ಟೋ ಮೌಲಿಕ ವಿಚಾರಗಳು ಅಡಕವಾಗಿವೆ.

ಇದು, ಕನ್ನಡ ವ್ಯಾಕರಣ ಪರಂಪರೆಯ ಬಹುಸಂಕ್ಷಿಪ್ತ ನೋಟ. ಒಟ್ಟಾರೆ, ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ ರಚಿತವಾಗಿರುವ ಕೃತಿಗಳನ್ನು 1. ಪ್ರಾಸಂಗಿಕವಾಗಿ ವ್ಯಾಕರಣ ವಿಚಾರಗಳನ್ನು ತಿಳಿಸುವವು, 2. ಸಮಗ್ರವಾಗಿ ವ್ಯಾಕರಣವೇ ಆಗಿರುವಂತಹವು 3. ಅವಕ್ಕೆ ಬರೆದ ಟೀಕೆಗಳು ಮುಂತಾದವು, 4. ವ್ಯಾಕರಣದ ಕೆಲವಂಶಗಳನ್ನಷ್ಟೇ ಕುರಿತು ಮಾಡಿದ ಅಧ್ಯಯನಗಳು, ಮತ್ತು 5. ಭಾಷಾವಿಜ್ಞಾನದಿಂದ ಕಸಿಗೊಂಡ ಆನ್ವಯಿಕ ಅಧ್ಯಯನಗಳು ಎಂದು ಐದು ಪ್ರಕಾರಗಳಾಗಿ ವಿಂಗಡಿಸಬಹುದು. ಇವುಗಳ ಪೈಕಿ, ಸಮಗ್ರವಾಗಿ ವ್ಯಾಕರಣ ಗ್ರಂಥಗಳೇ ಆಗಿರುವ ಪ್ರಮುಖ ಕೃತಿಗಳ ಬಗ್ಗೆ ಸ್ವಲ್ಪ ವಿಸ್ತಾರವಾಗಿ ನೋಡ ಬೇಕಾಗುತ್ತದೆ. ಈ ದಿಶೆಯಲ್ಲಿ, ನೇರವಾಗಿ ವ್ಯಾಕರಣಕ್ಕೆ ಸಂಬಂಧಿಸದಿದ್ದರೂ ಪ್ರಾಸಂಗಿಕವಾಗಿಯಷ್ಟೆ ವ್ಯಾಕರಣ ವಿಚಾರಗಳನ್ನು ತಿಳಿಸುವ ‘ಕವಿರಾಜಮಾರ್ಗ’ದ ಬಗ್ಗೆ ಮಾತ್ರ ತಪ್ಪದೆ ವಿಚಾರ ಮಾಡಬೇಕಾಗುತ್ತದೆ. ಏಕೆಂದರೆ ಕನ್ನಡ ವ್ಯಾಕರಣಸಂಬಂಧದ ಲಭ್ಯ ಮಾಹಿತಿಯಲ್ಲಿ ಅದೇ ಅತಿ ಪ್ರಾಚೀನ ಆಕರ.

ಕವಿರಾಜ ಮಾರ್ಗ

ಇದರ ಮೊದಲನೆಯ ಮತ್ತು ಎರಡನೆಯ ಪರಿಚ್ಛೇದಗಳಲ್ಲಿ ಸಾಂದರ್ಭಿಕ ವಾಗಿ ಕೆಲವು ವ್ಯಾಕರಣದೋಷಗಳನ್ನೂ ನಿರೂಪಿಸಲಾಗಿದೆ. ಅವನ್ನು ಹೀಗೆ ಸಂಗ್ರಹಿಸಬಹುದು.

‘ಅರಿಸಮಾಸ’ವೆಂಬ ಪರಿಭಾಷೆಯು ಇದರಲ್ಲಿ ಬಳಕೆಯಾಗಿಲ್ಲ. ಆದರೆ ಅದರ ಸೋದಾಹರಣ ವಿವರಣೆ ಮಾತ್ರ ಬಂದಿದೆ. ಕನ್ನಡ ಪದಗಳ ಜೊತೆಯಲ್ಲಿ ಸಂಸ್ಕೃತ ಪದಗಳನ್ನು ಹೇಗೆ ಪ್ರಯೋಗಿಸಬಹುದು, ಹೇಗೆ ಪ್ರಯೋಗಿಸಬಾರದು ಎಂಬುದನ್ನು ಕುರಿತು ವಿವರಿಸಲಾಗಿದೆ. ಸಮಾಸದಲ್ಲಿ, ಸಂಸ್ಕೃತ ಕನ್ನಡಗಳನ್ನು ತಿಳಿಯದೆ ಬೆರೆಸಿದರೆ, ಕುದಿಯುವ ಹಾಲಿಗೆ ಮಜ್ಜಿಗೆಯ ಹನಿಗಳನ್ನು ಬೆರೆಸಿದಂತಾಗುತ್ತದೆ ಎಂದು ಹೇಳಿದೆ. ಇದೇ ಸಂದರ್ಭದಲ್ಲಿ ‘ಸಮಸಂಸ್ಕೃತ’ವೆಂಬ ಮಾತು ಬರುತ್ತದೆ. ಅದನ್ನು ವಿವರಿಸಲು ಹೋಗಿಲ್ಲ ವಾದರೂ ಈ ಪರಿಭಾಷೆಯನ್ನು ಬಳಸಿದವರಲ್ಲಿ ಸದ್ಯದ ಮಟ್ಟಿಗೆ ಕವಿರಾಜ ಮಾರ್ಗಕಾರನೇ ಮೊದಲಿಗ. ಅನಂತರದ ವೈಯಾಕರಣರೆಲ್ಲ ಇದನ್ನು ಸ್ವೀಕರಿಸಿ ವಿವರಿಸಿದ್ದಾರೆ. ಭಟ್ಟಾಕಳಂಕನಂತೂ ಅದಕ್ಕೆ ಒಂದು ಪ್ರಕರಣವನ್ನೇ ಮೀಸಲಾಗಿಟ್ಟಿದ್ದಾನೆ.

ಉಚ್ಚೈಃ ನೀಚೈಃ ಮುಂತಾದ ಸಂಸ್ಕೃತದ ಅವ್ಯಯಗಳನ್ನು ಹೇಗೆ ಪ್ರಯೋಗಿಸಬೇಕು ಎಂಬುದರ ಬಗ್ಗೆ ವಿವರಣೆ ಕೊಟ್ಟಿರುವುದು ಇನ್ನೊಂದು ಪ್ರಮುಖಾಂಶ. ಅನಂತರದಲ್ಲಿ ಕೇಶಿರಾಜ ಮತ್ತು ಭಟ್ಟಾಕಳಂಕ ಇಬ್ಬರೂ ಈ ವಿಷಯವನ್ನೆತ್ತಿಕೊಂಡು ತಾವೂ ವಿವರಣೆ ನೀಡಿದ್ದಾರೆ.

ಮೇಲಿನ ಈ ಎರಡು ಅಂಶಗಳೂ ಸಂಸ್ಕೃತಕ್ಕೆ ಸಂಬಂಧಿಸಿದವು. ಕನ್ನಡದ ಮೇಲೆ ಸಂಸ್ಕೃತದ ದಟ್ಟಪ್ರಭಾವವಿದ್ದು, ಪ್ರತಿಯೊಂದಕ್ಕೂ ಸಂಸ್ಕೃತದ ಕಡೆಗೇ ಕೈಚಾಚುತ್ತಿದ್ದ ಆ ಸಂದರ್ಭದಲ್ಲಿ, ಸ್ವೀಕರಣದ ಸ್ವರೂಪವನ್ನು ಸ್ಪಷ್ಟಪಡಿಸಿ ನಿಯಂತ್ರಿಸುವ ವಿಧಿ ವಿಧಾನದ ವಿವರಣೆಯು ಸಹಜ ಹಾಗೂ ಪ್ರಶಂಸನೀಯ.

ಸಂಧಿಕಾರ್ಯಕ್ಕೆ ಸಂಬಂಧಿಸಿದಂತೆ, ಶ್ರುತಿದುಷ್ಟ, ಶ್ರುತಿಕಷ್ಟ, ವಿಸಂಧಿ, ವಿರೂಪ ಸಂಧಿಗಳಂತಹ ದೋಷಗಳನ್ನು ವಿವರಿಸಲಾಗಿದೆ. ಕೇಶಿರಾಜನು ಇವನನ್ನು ಅನುಸರಿಸಿ ತನ್ನ ಕೃತಿಯ ಸಂಧಿ ಪ್ರಕರಣದಲ್ಲಿ ತಾನೂ ಇದನ್ನು ವಿವರಿಸಿದ್ದಾನೆ. ಇದೇ ರೀತಿ ನೇಯಾರ್ಥ ಮತ್ತು ನೇಯದ ದೋಷಗಳನ್ನೂ ಸೋದಾಹರಣವಾಗಿ ವಿವರಿಸಲಾಗಿದೆ. ಕೇಶಿರಾಜನು ಆ ಸಂಬಂಧದಲ್ಲಿಯೂ ಇವನನ್ನು ಅನುಸರಿಸಿ, ಅವನ್ನು ಮತ್ತಷ್ಟು ಸ್ಪಷ್ಟವಾಗಿ ವಿವರಿಸಿದ್ದಾನೆ.

ಕಾರಕಾದಿ ದೋಷಗಳನ್ನು ಹೇಳುವಾಗ, ಕವಿರಾಜಮಾರ್ಗಕಾರನು, ಕನ್ನಡಕ್ಕೆ ಸಂಬಂಧಿಸಿದಂತೆ ವಿಭಕ್ತಿ ಹಾಗೂ ಕಾರಕಗಳ ಬಗ್ಗೆ ಸ್ವಲ್ಪ ವಿವರವಾಗಿಯೇ ಹೇಳಿದ್ದಾನೆ. ವಿಭಕ್ತಿಗಳು ಪ್ರಥಮಾದಿಯಾಗಿ ಏಳು ಎಂದು ಹೇಳಿ ಉದಾ ಹರಣೆಯ ಮೂಲಕ ಅವನ್ನು ನಿರೂಪಿಸಿದ್ದಾನೆ. ಅದೇ ರೀತಿ, ಕಾರಕಗಳಲ್ಲಿ ಕರ್ಮ, ಕರಣ ಮುಂತಾದ ಆರು ಪ್ರಕಾರಗಳಿವೆ ಎಂದಿದ್ದಾನೆ. ಅನಂತರದ ವೈಯಾಕರಣರು ಇದನ್ನು ತಾವೂ ಅನುಸರಿಸಿದ್ದಾರೆ.

ವಚನಾದಿಗಳಿಗೆ ಸಂಬಂಧಿಸಿದಂತೆ, ವಚನದೋಷ, ಜಾತ್ಯೇಕವಚನ, ಸಮುಚ್ಚಯ ದೋಷ, ಅವಧಾರಣೆ, ವಿಶಂಕೆ ಮುಂತಾದವುಗಳ ಬಗ್ಗೆ ಹೇಳಲಾಗಿದೆ. ಇವುಗಳ ಪೈಕಿ ವಚನಗಳನ್ನು ಕುರಿತಂತೆ ಇವನು ಹೇಳಿರುವ ಮಾತುಗಳು ಪ್ರಮುಖವಾಗಿವೆ. ಇವನ ಪ್ರಕಾರ ಕನ್ನಡದಲ್ಲಿ ಏಕವಚನ ಮತ್ತು ಬಹುವಚನ ಎಂದು ಎರಡೇ ವರ್ಗಗಳು. ಕೇಶಿರಾಜನು ಪರಿಗಣಿಸುವ ದ್ವಿವಚನವನ್ನು ಇವನು ಪರಿಗಣಿಸಲಿಲ್ಲ. ಜಾತ್ಯೇಕವಚನವಂತೂ ಕನ್ನಡಕ್ಕೇ ವಿಶಿಷ್ಟವಾದ ಒಂದು ವ್ಯಾಕರಣಾಂಶ. ಇದನ್ನು ಮೊತ್ತ ಮೊದಲಿಗೆ ಗುರುತಿಸಿದ ಕೀರ್ತಿ ಕವಿರಾಜಮಾರ್ಗಕಾರನಿಗೆ ಸಲ್ಲತಕ್ಕದ್ದು ಎನ್ನುತ್ತಾರೆ ಎಂ.ವಿ. ಸೀತಾ ರಾಮಯ್ಯನವರು (1979). ಉಳಿದ ವೈಯಾಕರಣರು ಇವನನ್ನು ಅನುಸರಿಸಿ ಮುಂದುವರಿದಿದ್ದಾರೆ.

ವಿಭಕ್ತಿಗಳಿಗೆ ಉದಾಹರಣೆ ಕೊಡುವಲ್ಲಿ, ಪೂರ್ವದ ಹಳಗನ್ನಡದಲ್ಲಿ ಪ್ರಚಲಿತವಿದ್ದ ದ್ವಿತೀಯ ಹಾಗೂ ಷಷ್ಠೀವಿಭಕ್ತಿಗಳ ದೀರ್ಘೀಕರಣಗಳನ್ನು ಗುರುತಿಸಿರುವುದು ಒಂದು ಅಮೂಲ್ಯ ಅಂಶ. ಎರಡನೆಯ ಪರಿಚ್ಛೇದದಲ್ಲಿ ಇವುಗಳ ಬಗ್ಗೆ ಮತ್ತಷ್ಟು ವಿವರಣೆ ಬಂದಿದೆ. ಅವುಗಳಲ್ಲಿ ಆ ದೀರ್ಘವು ವಿಕಲ್ಪವಾಗಿರುವುದು, ಸಂಬೋದನೆಯ ದೀರ್ಘ-ಇವುಗಳ ಬಗ್ಗೆಯೂ ಹೇಳಲಾಗಿದೆ.

ಎರಡನೆಯ ಪರಿಚ್ಛೇದದಲ್ಲಿ ಇನ್ನೂ ಕೆಲವು ವಿಚಾರಗಳು ಬಂದಿವೆ. ಕ್ರಿಯಾ ವಿಶೇಷ, ನಿಪಾತ, ಅವ್ಯಯಗಳ ಪ್ರಯೋಗಕ್ಕೆ ಸಂಬಂಧಿಸಿದ ದೋಷಗಳು, ಪುನರುಕ್ತಿ ಹಾಗೂ ಬಹುವಿಶೇಷಣಗಳು, ವಿಶೇಷಣ ವಿಶೇಷ್ಯ ಸಮಾಸ ವಿಚಾರ-ಇವಕ್ಕೆ ಸಂಬಂಧಿಸಿದ ವಿವರಣೆಗಳು ಇವನ್ನು ಅಲ್ಲಿ ಕಾಣುತ್ತೇವೆ.

ಅಂತೂ, ಹೀಗೆ ಇಲ್ಲಿ ಕನ್ನಡ ವ್ಯಾಕರಣದ ಕೆಲವಷ್ಟೇ ವಿಚಾರಗಳ ವಿವರಣೆಯು ಸಿಕ್ಕುತ್ತದೆ. ಆದರೆ ಆ ವಿವರಣೆಗಳು ಬಹು ಬೆಲೆಯುಳ್ಳವಾಗಿವೆ, ಅಂದಿನ ಭಾಷೆಯ ಸ್ವರೂಪವನ್ನು ಸಾಕಷ್ಟು ಚೆನ್ನಾಗಿಯೇ ನಿರೂಪಿತವಾಗಿವೆ. ಮುಂದಿನ ವೈಯಾಕರಣರು ಇವನ್ನು ಸ್ವೀಕರಸಿ ತಾವೂ ಬಳಸಿಕೊಂಡಿದ್ದಾರೆ. ಕೇಶಿರಾಜನಂತೂ ಇಲ್ಲಿಯ ಉದಾಹರಣೆಗಳನ್ನು ಕೂಡ ಸ್ವೀಕರಿಸಿ ಬಳಸಿ ಕೊಂಡಿದ್ದಾನೆ. ಹೀಗೆ ಸ್ವತಃ ವ್ಯಾಕರಣ ಗ್ರಂಥವಲ್ಲದಿದ್ದರೂ, ಮುಂದಿನ ವ್ಯಾಕರಣ ಗ್ರಂಥಗಳ ಮೇಲೆ ತನ್ನ ಪ್ರಭಾವವನ್ನು ಬೀರಿರುವುದು ಕವಿರಾಜಮಾರ್ಗದ ವೈಶಿಷ್ಟ್ಯ. ಆದ್ದರಿಂದ ಕನ್ನಡ ವ್ಯಾಕರಣ ಪರಂಪರೆಯಲ್ಲಿ ಅದಕ್ಕೆ ಒಂದು ಮಹತ್ತ್ವದ ಸ್ಥಾನ ದೊರೆತಿದೆ. ಕಾವ್ಯರಚನೆಗೆ ಸಂಬಂಧಪಟ್ಟಂತೆ ವ್ಯಾಕರಣ ವಿಚಾರದಲ್ಲಿ ಅನೇಕ ಉಪಯುಕ್ತ ಸಲಹೆ ಸೂಚನೆಗಳನ್ನು ಪ್ರಾಯೋಗಿಕವಾಗಿ ಮುಂದಿಟ್ಟಿರುವ ಕವಿರಾಜಮಾರ್ಗದ ಈ ವಿಭಾಗವನ್ನು ‘ಕನ್ನಡ ಪ್ರಥಮ ಪ್ರಾಯೋಗಿಕ ವ್ಯಾಕರಣ’ ಎಂದು ಕರೆದರೆ ತಪ್ಪಾಗದು.

ಶಬ್ದಸ್ಮೃತಿ

ಪೂರ್ವಕವಿಗಳ ರಚನೆಗಳನ್ನು ಆಧರಿಸಿ ಶಾಸ್ತ್ರಗಳನ್ನು ಅದರಲ್ಲೂ ವ್ಯಾಕರಣ ಶಾಸ್ತ್ರವನ್ನು- ರಚಿಸುವುದು ನಮ್ಮ ಶಾಸ್ತ್ರಕಾರರ ಪದ್ಧತಿ. ನಾಗವರ್ಮ ಕೂಡ ಇದಕ್ಕೆ ಹೊರತಲ್ಲ. ಉದಾಹರಣೆಗೆ ಪದ್ಯಗಳನ್ನು ಅವನು ಪೂರ್ವಕವಿಗಳಿಂದಲೇ ಆಯ್ದು ಕೊಟ್ಟಿರುವುದರಲ್ಲಿ ಈ ಅಂಶವು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಇದರ ಜೊತೆಗೆ ಅವನಲ್ಲಿ ಕಂಡುಬರುವ ಇನ್ನೊಂದು ವಿಶೇಷವೆಂದರೆ ಇದರ ರಚನೆಯಲ್ಲಿ ಅವನು ಜನರ ಆಡುನುಡಿಯನ್ನು ಕೂಡ ಗಮನಿಸಿದ್ದಾನೆಂಬುದು. “ಜನೋಕ್ತಿಕ್ರಮದಿಂ” (ಸೂ. 18) ಎಂದು ಅವನೇ ಹೇಳಿರುವಲ್ಲಿ ಇದನ್ನು ಕಾಣಬಹುದು. ಇದೇ ರೀತಿ, ಈ ಕೃತಿಯನ್ನು ರಚಿಸಿರುವುದು ಕೇವಲ ಕವಿ ಪಂಡಿತರಿಗೆ ಮಾತ್ರವೇ ಅಲ್ಲ, ಇತರ ಜನರಿಗೆ ಕೂಡ ಎಂಬುದು ಅವನ ಮತ್ತೊಂದು ವಿಶೇಷ. “ಜನಮಂ ತಿಳಿವಂತು ಮಾಡಿ” (ಪ. 439) ಎಂದು ಹೇಳಿರುವಲ್ಲಿ ಈ ಉದ್ದೇಶವನ್ನು ಕಾಣಬಹುದು.

ಈ ಕೃತಿಯಲ್ಲಿ ಸಂಜ್ಞಾಪ್ರಕರಣ, ಸಂಧಿಪ್ರಕರಣ, ನಾಮಪ್ರಕರಣ, ಸಮಾಸ ಪ್ರಕರಣ, ತದ್ದಿತ ಪ್ರಕರಣ ಮತ್ತು ಆಖ್ಯಾತ ಪ್ರಕರಣ ಹೀಗೆ ಆರು ಪ್ರಕರಣಗಳಲ್ಲಿ ವಿಷಯವನ್ನು ಹೊಂದಿಸಿಡಲಾಗಿದೆ. ಮೊದಲ ಪ್ರಕರಣದಲ್ಲಿ ಕನ್ನಡ ವರ್ಣ ಮಾಲೆಗೆ ಸಂಬಂಧಿಸಿದ ವಿವರಗಳಿವೆ. ಎರಡನೆಯದರಲ್ಲಿ ಲೋಪ, ಆಗಮ ಮತ್ತು ಆದೇಶ ಸಂಧಿಗಳು, ಸಂಧಿಕಾರ್ಯ ನಡೆಯುವಾಗ ಆಗುವ ಬದಲಾವಣೆಗಳು, ಸಂಧಿಕಾರ್ಯ ನಡೆಯದ ಸಂದರ್ಭಗಳು ಇವನ್ನು ಸೋದಾಹರಣವಾಗಿ ವಿವರಿಸಿದೆ. ಮೂರನೆಯದರಲ್ಲಿ ವಿಭಕ್ತಿ, ಸರ್ವನಾಮ, ಲಿಂಗ, ವಚನಾದಿ ವಿವರಗಳನ್ನು ಒಳಗೊಂಡಂತೆ, ನಾಮಪದದ ವಿಚಾರಗಳು ಸೋದಾಹರಣವಾಗಿ ವಿಸ್ತಾರವಾಗಿ ಬಂದಿವೆ. ನಾಲ್ಕನೆಯದರಲ್ಲಿ ಸಮಾಸ, ಅದರ ಪ್ರಕಾರಗಳು ಮತ್ತು ಸಮಾಸಕಾರ್ಯ ನಡೆಯುವಾಗ ಆಗುವ ಬದಲಾವಣೆಗಳು ಇವನ್ನು ಸೋದಾಹರಣವಾಗಿ ವಿವರಿಸಿದೆ. ಐದನೆಯದರಲ್ಲಿ ತದ್ದಿತದ ವಿಚಾರಗಳೂ, ಆರನೆಯದರಲ್ಲಿ ಆಖ್ಯಾತ ಪ್ರತ್ಯಯಕ್ಕೆ ಸಂಬಂಧಿಸಿದ ವಿಚಾರಗಳೂ ವಿಸ್ತಾರವಾಗಿ ಉದಾಹರಣೆಗಳೊಂದಿಗೆ ನಿರೂಪಿತವಾಗಿವೆ.

ಹೀಗೆ ಇಲ್ಲಿ ಒಟ್ಟಾರೆ 96 ಸೂತ್ರಗಳಲ್ಲಿ ಕನ್ನಡ ವ್ಯಾಕರಣವನ್ನು ಅಡಕ ಮಾಡಲಾಗಿದೆ. ಉದಾಹರಣೆಗಳನ್ನು ಕೊಡುವಾಗ ಸಂದರ್ಭೋಚಿತ ಭಾಗಗಳ ನ್ನಷ್ಟೇ ಕೊಡಲು ಹೋಗದೆ, ಇಡೀ ನುಡಿಯನ್ನೆ ಕೊಟ್ಟಿರುವುದು ಇಲ್ಲಿಯ ವೈಶಿಷ್ಟ್ಯ. ಇಂತಹ ನುಡಿಗಳು ಇಲ್ಲಿ ಒಟ್ಟು 327 ಇವೆ.

ನಾಗವರ್ಮನು ತನ್ನನ್ನು ‘ಅಭಿನವಶರ್ವವರ್ಮ’ನೆಂದು ಕರೆದುಕೊಂಡಿದ್ದಾನೆ. ಆದ್ದರಿಂದ, ಶರ್ವವರ್ಮನ ‘ಕಾತಂತ್ರವ್ಯಾಕರಣ’ದಿಂದ ಅವನು ಉಪಕೃತನಾಗಿ ರುವುದು ಸ್ಪಷ್ಟವಾಗುತ್ತದೆ. ಇದರ ಜೊತೆಗೆ ಸಾರಸ್ವತ ವ್ಯಾಕರಣದಿಂದ ಕೂಡ ಉಪಕೃತನಾಗಿದ್ದಾನೆ. ಸೂತ್ರಗಳನ್ನು ನಿರೂಪಿಸುವಲ್ಲಿ ಪಾಣಿನಿಯ ಪದ್ಧತಿಯನ್ನು ಹಿಡಿಯದೆ ಕಂದ ಪದ್ಯಗಳನ್ನು ಬಳಸಿರುವುದು, ಸಮಾನಾಕ್ಷರ, ಸಂಧ್ಯಕ್ಷರ, ನಾಮಿಗಳಂತಹ ಸಂಜ್ಞೆಗಳನ್ನು ಬಳಸಿರುವುದು ಇವುಗಳಿಂದ ಇದು ದೃಢಪಡುತ್ತದೆ. ಅಂತೂ ಸಂಸ್ಕೃತದ ಪ್ರಭಾವ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕನ್ನಡದಲ್ಲಿ ಮಹಾಪ್ರಾಣಗಳಿಲ್ಲವೆಂದು ಹೇಳಲು ಅವನ ಮನಸ್ಸು ಒಪ್ಪುವುದಿಲ್ಲ. ಅದಕ್ಕಾಗಿಯೇ ಸಂಖ್ಯೆಗಳನ್ನು ಹೇಳುವಾಗ ಮತ್ತು ಅನುಕರಣ ಶಬ್ದಗಳಲ್ಲಿ ಅವು ಬರುತ್ತವೆಯೆಂದು ಹೇಳುತ್ತಾನೆ. ಹೀಗಿದ್ದೂ ಕನ್ನಡದ ವೈಶಿಷ್ಟ್ಯಗಳನ್ನು ಅವನು ಕಡೆಗಣಿಸಿಲ್ಲ. ಜಾತ್ಯೇಕವಚನ, ವಿಭಕ್ತಿಪಲ್ಲಟಗಳಂತಹವು ಕನ್ನಡಕ್ಕೇ ವಿಶಿಷ್ಟವಾದವು. ಅವುಗಳ ಬಗ್ಗೆ ಅವನು ಹೇಳಿದ್ದು, ಅನಂತರದ ಕೇಶಿರಾಜನೂ ಅವನನ್ನು ಅನುಸರಿಸಿ ಅವುಗಳ ಬಗ್ಗೆ ಹೇಳಿದ್ದಾನೆ.

ನಾಗವರ್ಮನು ಕವಿರಾಜಮಾರ್ಗಕಾರನನ್ನು ಅನುಸರಿಸಿರುವುದಕ್ಕೆ ಗಟ್ಟಿ ಯಾದ ಆಧಾರಗಳು ದೊರಕುತ್ತಿಲ್ಲ. ಆದರೆ ಕೇಶಿರಾಜನು ಇವನನ್ನು ಅನುಸರಿಸಿರುವುದು ಮಾತ್ರವೇ ಅಲ್ಲದೆ, ಇವನ ಸೂತ್ರಭಾಗಗಳು, ಉದಾಹರಣೆ ಭಾಗಗಳು ಇವನ್ನೂ ಕೂಡ, ಇವನಿಂದ ಸ್ವೀಕರಿಸಿ ಬಳಸಿಕೊಂಡಿರುವುದಂತೂ ಸ್ಪಷ್ಟವಾಗಿದೆ. ಆದ್ದರಿಂದ, ಕೃತಿಯು ಸಣ್ಣದಾಗಿದ್ದರೂ, ಬೇರೊಂದು ಕೃತಿಯ ಅಂಗವಾಗಿದ್ದರೂ, ಪೂರ್ಣ ಪ್ರಮಾಣದ ಒಂದು ವ್ಯಾಕರಣ ಗ್ರಂಥವಾಗಿದೆ. ಮುಂದಿನವರ ಮೇಲೆ ದಟ್ಟಪ್ರಭಾವವನ್ನು ಬೀರಿದೆ.

ಕರ್ನಾಟ ಭಾಷಾ ಭೂಷಣ

ಇದರಲ್ಲಿ ಒಟ್ಟು 269 ಸೂತ್ರಗಳಿದ್ದು ಅವನ್ನು ಸಂಜ್ಞಾ, ಸಂಧಿ, ವಿಭಕ್ತಿ, ಕಾರಕ, ಯುಷ್ಮದಾದಿ, ಸಮಾಸ, ತದ್ದಿತ, ಆಖ್ಯಾತ, ಅವ್ಯಯ, ನಿಪಾತ ಎಂಬುದಾಗಿ ಹತ್ತು ಪರಿಚ್ಛೇದಗಳಲ್ಲಿ ಅಡಕ ಮಾಡಲಾಗಿದೆ. ಈ ಸೂತ್ರಗಳೂ, ಇವಕ್ಕೆ ಸೂತ್ರಕಾರನೇ ಬರೆದ ವೃತ್ತಿಯೂ ಸಂಸ್ಕೃತದಲ್ಲಿದೆ. ಆದರೆ ಪ್ರಯೋಗ ಗಳು ಮಾತ್ರ ಕನ್ನಡದವೇ ಆಗಿವೆ. ಈ ಪ್ರಯೋಗಗಳಲ್ಲಿ ಹಲವು, ‘ಶಬ್ದಸ್ಮೃತಿ’ ಯಿಂದ ತೆಗೆದುಕೊಂಡವು. ಆದರೆ ಇಲ್ಲಿಯಂತೆ ಇಲ್ಲಿ ಅವನ್ನು ಪೂರ್ಣರೂಪ ದಲ್ಲಿ ಕೊಡಲು ಹೋಗಿಲ್ಲ ಅಗತ್ಯವಾದ ಭಾಗಗಳನ್ನಷ್ಟೇ ಕೊಡಲಾಗಿದೆ. ಸೂತ್ರಗಳು, ಪಾಣಿನಿಯ ಅಷ್ಟಾಧ್ಯಾಯೀ ಸೂತ್ರಗಳ ಮಾದರಿಯಲ್ಲಿ ರಚಿತ ವಾಗಿವೆ. ಕೆಲವು ವೇಳೆ ಅಷ್ಟ್ಯಾಧ್ಯಾಯಿಯ ಸೂತ್ರಗಳನ್ನೇ ಇಡಿ ಇಡಿಯಾಗಿ ತೆಗೆದುಕೊಂಡು ಬಳಸಿಕೊಂಡಿರುವುದು ಉಂಟು. ಕೆಲವೆಡೆ ಸ್ವಲ್ಪ ಮಾರ್ಪಾಡು ಗಳನ್ನು ಮಾಡಿ ಬಳಸಿಕೊಳ್ಳಲಾಗಿದೆ.

ವಿಷಯದ ದೃಷ್ಟಿಯಿಂದ ನೋಡಿದರೆ, ‘ಶಬ್ದಸ್ಮೃತಿ’ಯಲ್ಲಿ ಸಂಗ್ರಹವಾಗಿ ನಿರೂಪಿತವಾದ ವಿಷಯಗಳೇ ಇಲ್ಲಿ ವಿಸ್ತಾರವಾಗಿ ಮೂಡಿರುವುದನ್ನು ಕಾಣ ಬಹುದು. ಮೊದಲನೆಯ ಪರಿಚ್ಛೇದದಲ್ಲಿ ಕನ್ನಡ ವರ್ಣಮಾಲೆಗೆ ಸಂಬಂಧಿಸಿದ ವಿಚಾರಗಳಿವೆ. ಎರಡನೆಯದರಲ್ಲಿ ಕನ್ನಡ ಸಂಧಿಗಳನ್ನು ಮಾತ್ರ ವಿವರಿಸಿದ್ದಾನೆ. ಮೂರನೆಯದರಲ್ಲಿ ವಿಭಕ್ತಿ ವಿಚಾರ ವಿಸ್ತಾರವಾಗಿ ಬಂದಿದೆ. ನಾಲ್ಕನೆಯದರಲ್ಲಿ ಕಾರಕಗಳಿಗೆ ಸಂಬಂಧಿಸಿದ ವಿವರಣೆಗಳಿವೆ. ಐದನೆಯದರಲ್ಲಿ ಸರ್ವನಾಮ, ಲಿಂಗ, ಕನ್ನಡಕ್ಕೆ ಬರುವಾಗ ಸಂಸ್ಕೃತ ಶಬ್ದಗಳಲ್ಲಾಗುವ ಬದಲಾವಣೆಗಳನ್ನೂ ವಿವರಿಸಿದೆ. ಏಳನೆಯದರಲ್ಲಿ ತದ್ದಿತಗಳ ವಿಚಾರವೂ ಎಂಟನೆಯದರಲ್ಲಿ ಆಖ್ಯಾತಗಳ ವಿಚಾರವೂ ವಿಸ್ತಾರವಾಗಿ ಬಂದಿದೆ. ಒಂಬತ್ತನೆಯದರಲ್ಲಿ ಅವ್ಯಯಗಳಿಗೆ ಸಂಬಂಧಿಸಿದ ವಿಚಾರಗಳೂ ಹತ್ತನೆಯದರಲ್ಲಿ ನಿಪಾತಗಳಿಗೆ ಸಂಬಂಧಿಸಿದ ವಿಚಾರಗಳೂ ಬಂದಿವೆ.

ನಾಗವರ್ಮನು ಸಂಸ್ಕೃತದ ಬಗ್ಗೆ ಹೆಚ್ಚಿನ ಒಲವನ್ನು ತೋರಿದ್ದಾನೆ. ಈ ಕೃತಿಯನ್ನು ಸಂಸ್ಕೃತದಲ್ಲೇ ರಚಿಸಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕನ್ನಡ ಸಂಸ್ಕೃತಗಳ ನಡುವಿನ ಬಾಂಧವ್ಯವನ್ನು ಅವನು ದೂರಮಾಡಲು ಬಯಸುವುದಿಲ್ಲ. ‘ಕವಿರಾಜಮಾರ್ಗ’ದಲ್ಲಿ ಅವೆರಡನ್ನೂ ಪ್ರತ್ಯೇಕಿಸಿ ನೋಡುವ ದೃಷ್ಟಿಕೋನ ಕಂಡುಬರುತ್ತದೆ. ಅದರಿಂದಾಗಿಯೇ ಅರಿಸಮಾಸದ ಬಗ್ಗೆ ಇವನು ತಾಟಸ್ಥ್ಯವನ್ನು ತೋರಿಸಿರುವುದು. ಹೀಗಿದ್ದೂ ಇವನು ಕನ್ನಡಕ್ಕೆ ಹೊಂದದ ಸಂಸ್ಕೃತದ ಲಕ್ಷಣಗಳನ್ನು ಕನ್ನಡದ ಮೇಲೆ ಬಲವಂತವಾಗಿ ಹೇರಲು ಹೋಗುವು ದಿಲ್ಲ; ಕನ್ನಡದ ವೈಶಿಷ್ಟ್ಯಗಳನ್ನು ಗುರುತಿಸಲು ಮರೆತಿಲ್ಲ. ಇದರಿಂದಾಗಿಯೇ, ಕನ್ನಡದಲ್ಲಿ ಮಹಾಪ್ರಾಣಗಳು ಪ್ರಾಯಶಃ ಇಲ್ಲ, ಆದರೆ ಸಂಖ್ಯೆಗಳಲ್ಲಿ, ಅನುಕರಣೆಗಳಲ್ಲಿ, ಮುಂತಾದೆಡೆಗಳಲ್ಲಿ ಮಾತ್ರ ಅವನು ಗುರುತಿಸಬಹುದು ಎಂದಿದ್ದಾನೆ. ಕನ್ನಡಕ್ಕೇ ವಿಶಿಷ್ಟವಾಗಿರುವ ಜಾತ್ಯೇಕ ವಚನದಂತಹದರ ಬಗ್ಗೆ ಹೇಳಿರುವಲ್ಲಿಯೂ ಈ ಅಂಶವನ್ನು ಸ್ಪಷ್ಟವಾಗಿ ಕಾಣಬಹುದು. (ಜಾತಿವಾಚಕ, ಸಂಖ್ಯಾವಾಚಕ ಹಾಗೂ ಭಾವವಾಚಕ ಶಬ್ದಗಳಲ್ಲಿ ವಿಕಲ್ಪದಿಂದ ಬಹುವಚನಕ್ಕೆ ಏಕವಚನ ಬರುವುದನ್ನು ಈತ ಗುರುತಿಸಿದ್ದಾನೆ). ಇದೇ ರೀತಿ ಸಂಸ್ಕೃತ ಸಂಧಿಗಳನ್ನು ವಿವರಿಸದೆ ಇರುವುದರಲ್ಲಿ ಕೂಡ ಇದನ್ನು ಕಾಣುತ್ತೇವೆ. ಸಂಬೋಧನೆ, ದ್ವಿತೀಯಾ ಹಾಗೂ ಷಷ್ಠಿಗಳಲ್ಲಿ ದೀರ್ಘಾದೇಶವನ್ನು ಗುರುತಿಸಿರುವುದು, ಪಕಾರವು ಹಕಾರವಾಗುವುದನ್ನು ಹೇಳಿರುವುದು ಇವೆಲ್ಲ ಕನ್ನಡ ಭಾಷೆಯ ಬೆಳವಣಿಗೆಯನ್ನು ಗುರುತಿಸುವ ದೃಷ್ಟಿಯಿಂದ ಮಹತ್ವದ ಅಂಶಗಳಾಗಿವೆ.

ಅಂತೂ, ಕನ್ನಡ ವ್ಯಾಕರಣದ ವ್ಯವಸ್ಥಿತವಾದ ಅಧ್ಯಯನಕ್ಕೆ ತಳಹದಿ ಯನ್ನು ಹಾಕಿದವನು ಸದ್ಯದ ಮಟ್ಟಿಗೆ ಇವನೇ ಎಂದು ಭಾವಿಸಲಾಗುತ್ತದೆ. ಕರ್ಣಾಟಕ ಭಾಷಾಭೂಷಣವು ಅನ್ಯ ಭಾಷೆಗಳ ವ್ಯಾಕರಣ ಕೃತಿಗಳ ಮೇಲೆ ಕೂಡ ಪ್ರಭಾವವನ್ನು ಬೀರಿದೆ. ತೆಲುಗಿನ ಕೇತನನ ‘ಆಂಧ್ರಭಾಷಾ ಭಾಷಣ’ (ಇಲ್ಲಿ ಹೆಸರಿನಲ್ಲಿ ಕೂಡ ಸಾಮ್ಯವನ್ನು ಗುರುತಿಸಬಹುದು), ಮತ್ತು ಮಲಯಾಳಂನ ‘ಲೀಲಾತಿಲಕ’ ಇವು ಇದಕ್ಕೆ ಪ್ರತ್ಯಕ್ಷ ಸಾಕ್ಷಿಗಳಿವೆ. ಇವುಗಳ ಮೇಲೆ ನಾಗವರ್ಮನ ಕೃತಿಯ ಪ್ರಭಾವ ಬಹುಮಟ್ಟಿಗೆ ಆಗಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಕನ್ನಡದ ಕೇಶಿರಾಜನಂತೂ ಇವನಿಂದ ಬಹಳ ಉಪಕೃತನಾಗಿದ್ದಾನೆ. ವಿಷಯ ಗಳನ್ನು ಮಾತ್ರವೇ ಅಲ್ಲದೆ ಉದಾಹರಣೆಗಳನ್ನು ಕೂಡ ಹಲವೆಡೆ ಇವನಿಂದ ಸ್ವೀಕರಿಸಿದ್ದಾನೆ.

ಶಬ್ದಮಣಿ ದರ್ಪಣ

ಕನ್ನಡ ವ್ಯಾಕರಣಗಳಲ್ಲೆಲ್ಲ ಪ್ರಸಿದ್ಧವಾದುದು ಶಬ್ದಮಣಿ ದರ್ಪಣ, ಗಜಗ, ಗುಣನಂದಿ, ಮನಸಿಜ, ಅಸಗ, ಚಂದ್ರಭಟ್ಟ, ಗುಣವರ್ಮ, ಶ್ರೀವಿಜಯ, ಪೊನ್ನ, ಪಂಪ, ಸುಜನೋತ್ತಂಸ ಮೊದಲಾದ ಪ್ರಸಿದ್ಧ ಕವಿಗಳ ಕಾವ್ಯಗಳಲ್ಲಿ ಬಳಕೆಯಾಗಿರುವ ಭಾಷೆಯನ್ನು ಆಧಾರವಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ, ಇವುಗಳ ಜೊತೆಗೆ ಇತರ ಕವಿಗಳಿಂದಲೂ ಉದಾಹರಣೆಗಳನ್ನು ಆಯ್ದುಕೊಳ್ಳಲಾಗಿದೆ. ನಾಗವರ್ಮನಿಂದ ಬಹಳ ಉಪಕೃತ ನಾಗಿದ್ದರೂ ಅವನನ್ನು ಹೆಸರಿಸದಿರುವುದು ಆಶ್ಚರ್ಯಕರವಾಗಿದೆ. ಸುಮಾರು ಶೇ. 50 ಕ್ಕಿಂತಲೂ ಹೆಚ್ಚು ಅಂಶಗಳಲ್ಲಿ ನಾಮವರ್ಮನ ಕೃತಿಗಳನ್ನು ಬಳಸಿ ಕೊಳ್ಳಲಾಗಿದೆ. ‘ಶಬ್ದಸ್ಮೃತಿ’ಯಂತೆಯೇ, ಇಲ್ಲಿ ಕೂಡ ಸೂತ್ರಗಳು ಕಂದಪದ್ಯ ಗಳಲ್ಲಿವೆ.

ಇದರಲ್ಲಿ ಎಂಟು ಪ್ರಕರಣಗಳಿರುವುದಾಗಿ ಕೇಶಿರಾಜನೇ ಹೇಳಿಕೊಂಡಿ ದ್ದಾನೆ. ಅವನು ಹೇಳದ ಸಂಜ್ಞಾಪ್ರಕರಣವು ಆದಿಯಲ್ಲೂ, ಪ್ರಯೋಗಸಾರವು ಅಂತ್ಯದಲ್ಲೂ ಬಂದಿದೆ. ಅವನ್ನೂ ಸೇರಿಸಿದರೆ ಒಟ್ಟು ಹತ್ತು ಪ್ರಕರಣಗಳಾಗು ತ್ತವೆ. ಮೊದಲನೆಯದಾದ ಸಂಜ್ಞಾಪ್ರಕರಣದ ಆರಂಭದಲ್ಲಿ ಕನ್ನಡ ವರ್ಣ ಮಾಲೆಯ ನಿರೂಪಣೆ ಬಂದಿದೆ. ಮೊದಲಿಗೆ, ಸಂಸ್ಕೃತ ವರ್ಣಮಾಲೆಯನ್ನು ನಿರೂಪಿಸಿ, ಅನಂತರ ಕನ್ನಡದಲ್ಲಿ ಇಲ್ಲದ ಅಕ್ಷರಗಳನ್ನು ಅದರಿಂದ ತೆಗೆದು ಹಾಕಿ, ಕನ್ನಡದಲ್ಲಿ ಮಾತ್ರ ಇರುವ ವಿಶೇಷಾಕ್ಷರಗಳನ್ನು ಅದಕ್ಕೆ ಸೇರಿಸಿ, ಶುದ್ಧಗೆಗಳನ್ನು ಎಂದರೆ, ಶುದ್ಧ ಕನ್ನಡದ ವರ್ಣಮಾಲೆಯನ್ನು ನಿರೂಪಿಸಲಾಗಿದೆ. ಜೊತೆಗೆ, ಅದಕ್ಕೆ ಸಂಬಂಧಿಸಿದ ಇತರ ವಿವರಗಳನ್ನೂ ನೀಡಲಾಗಿದೆ. ಇದೇ ಪ್ರಕರಣದಲ್ಲಿ, ಕೊನೆಗೆ ವಿವರಿಸಿರುವ ಶಿಥಿಲದ್ವಿತ್ವದ ವಿಚಾರವು ಇವನ ಮತ್ತೊಂದು ವಿಶಿಷ್ಟ ಕೊಡುಗೆ.

ಎರಡನೆಯದಾದ ಸಂಧಿಪ್ರಕರಣದಲ್ಲಿ ಸಂಧಿಯ ಸ್ವರೂಪ, ಸಂಧಿಯಾಗದ ಸಂದರ್ಭಗಳು, ಸಂಧಿವಿಕಲ್ಪ, ಸಂಧಿಮಾಡಬಾರದ ಪ್ರಸಂಗಗಳು, ಸ್ವರಸಂಧಿ, ವ್ಯಂಜನಸಂಧಿ, ದ್ವಿತ್ವಸಂಧಿ ಈ ಎಲ್ಲಕ್ಕೂ ಸಂಬಂಧಿಸಿದ ವಿಚಾರಗಳನ್ನು ಇದರಲ್ಲಿ ವಿವರಿಸಲಾಗಿದೆ. ಕನ್ನಡದಲ್ಲಿ ಬಳಕೆಯಾಗಿರುವ ಸಂಸ್ಕೃತ ಸಂಧಿಗಳ ಬಗ್ಗೆ ಮಾತ್ರ ಹೇಳಲು ಹೋಗಿಲ್ಲ.

ಮೂರನೆಯದಾದ ನಾಮಪ್ರಕರಣದಲ್ಲಿ ಲಿಂಗದ ಸ್ವರೂಪ ಮತ್ತು ಪ್ರಕಾರಗಳು, ಸಮಸಂಸ್ಕೃತ, ಸಂಸ್ಕೃತ ಶಬ್ದಗಳು ಕನ್ನಡಕ್ಕೆ ಬರುವಾಗ ಆಗುವ ಬದಲಾವಣೆಗಳು ಇವನ್ನೆಲ್ಲ ಮೊದಲಿಗೆ ವಿವರಿಸಲಾಗಿದೆ. ಅನಂತರ, ಲಿಂಗದಲ್ಲಿ ಒಂಬತ್ತು ಪ್ರಕಾರಗಳು ಇವೆಯೆಂದು ಹೇಳಿ ಅವನ್ನು ವಿವರಿಸಲಾಗಿದೆ. ಕೊನೆಗೆ ಅವುಗಳ ಪೈಕಿ, ಕನ್ನಡದಲ್ಲಿ, ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಈ ಮೂರು ಮಾತ್ರ ಬಳಕೆಯಲ್ಲಿವೆಯೆಂದು ಹೇಳಲಾಗಿದೆ. ಇದರ ನಂತರ ವಿಭಕ್ತಿಗಳು ಹಾಗೂ ವಿಭಕ್ತಿ ಪಲ್ಲಟ ಇವಕ್ಕೆ ಸಂಬಂಧಿಸಿದ ವಿವರಣೆಗಳಿವೆ. ವಚನಗಳ ಸಂಬಂಧದಲ್ಲಿ ಏಕವಚನ ಬಹುವಚನಗಳ ಜೊತೆಗೆ ದ್ವಿವಚನವನ್ನೂ ಸೇರಿಸಲಾಗಿದೆ, ಮಾತ್ರವಲ್ಲದೆ ಅದು ಉಚಿತವಾಗಿ ಬರುತ್ತದೆಯೆಂದೂ ಹೇಳಲಾಗಿದೆ. ಕನ್ನಡದಲ್ಲಿಲ್ಲದ ಈ ದ್ವಿವಚನವನ್ನು ಬಲವಂತದಿಂದ ಸೇರಿಸಿರುವುದು ಕೇಶಿರಾಜನ ಸಂಸ್ಕೃತ ನಿಷ್ಠೆಗೆ ಸಾಕ್ಷಿಯಾಗಿದೆ. ಇದರ ನಂತರ, ಏಕತ್ವಕ್ಕೆ ಬಹುತ್ವ ಬರುವ ಸಂದರ್ಭಗಳು, ಜಾತ್ಯೆಕವಚನ, ಜಾತಿಯಿಲ್ಲದಲ್ಲೂ ಬಹುತ್ವಕ್ಕೆ ಏಕತ್ವ ಬರುವುದು ಮುಂತಾದ ವಿಚಾರಗಳು ಬಂದಿವೆ.

ನಾಲ್ಕನೆಯದಾದ ಸಮಾಸ ಪ್ರಕರಣದಲ್ಲಿ ಸಮಾಸದ ಸ್ವರೂಪ, ಪ್ರಮುಖ ಪ್ರಕಾರಗಳು, ಗಮಕಸಮಾಸ, ಅರಿಸಮಾಸ ಇವನ್ನು ಕುರಿತು ವಿಸ್ತಾರವಾಗಿ ವಿವೇಚಿಸಲಾಗಿದೆ. ಗಮಕ ಹಾಗೂ ಅರಿಸಮಾಸಗಳಂತೂ ಸಂಸ್ಕೃತದಲ್ಲಿಲ್ಲದ ಆದರೆ ಕನ್ನಡದಲ್ಲಿ ಮಾತ್ರವೇ ಇರುವ ವಿಶಿಷ್ಟ ರಚನೆಗಳು.

ಮುಂದಿನ ತದ್ದಿತ ಪ್ರಕರಣದಲ್ಲಿ ತದ್ಭವದ ವಿಚಾರ ವಿಸ್ತಾರವಾಗಿ ಬಂದಿದೆ. ಅದರ ಮುಂದಿನ ಆಖ್ಯಾತ ಪ್ರಕರಣದಲ್ಲಿ ಕ್ರಿಯಾವಿಭಕ್ತಿಗಳು ಮತ್ತು ಅವುಗಳ ಪ್ರಯೋಗಕ್ಕೆ ಸಂಬಂಧಿಸಿದ ವಿಚಾರಗಳ ವಿಸ್ತೃತ ವಿವೇಚನೆಯಿದೆ. ಅದರ ಮುಂದಿನ ಧಾತು ಪ್ರಕರಣದಲ್ಲಿ ಧಾತುಗಳ ಸುದೀರ್ಘಪಟ್ಟಿಯಿದೆ. ಮುಂದಿನ ಅಪಭ್ರಂಶ ಪ್ರಕರಣದಲ್ಲಿ ತದ್ಭವಗಳ ಲಕ್ಷಣಗಳನ್ನು ವಿವರಿಸಲಾಗಿದೆ, ಕೊನೆಗೆ ತತ್ಸಮಗಳನ್ನು ಕುರಿತು ಹೇಳಲಾಗಿದೆ. ಅದರ ಮುಂದಿನ ಅವ್ಯಯ ಪ್ರಕರಣ ದಲ್ಲಿ ಅವ್ಯಯಗಳು ಮತ್ತು ಅವುಗಳ ಬಳಕೆಯ ವಿವರಗಳು ಬಂದಿವೆ. ಇದೇ ಪ್ರಕರಣದ ಕೊನೆಗೆ ಬಂದಿರುವ

ಗಮಕ ಸಮಾಸದಿಂ ಱೞಕುಳಕ್ಷಳದಿಂ ಶ್ರುತಿಸಹ್ಯಸಂಧಿಯಿಂ

ಸಮುಚಿತಮಾಗಿಬರ್ಪಸತಿಸಪ್ತಮಿಯಿಂ ಸಮಸಂಸ್ಕೃತೋಕ್ತಿಯಿಂ

ವಮಹಪ ಭೇದದಿಂ ವಿರಹಿತಾವ್ಯಯ ಸಂಸ್ಕೃತಲಿಂಗದಿಂ ಪದೋ

ತ್ತಮ ಶಿಥಿಲದ್ವಿತ್ವದಿಂ ಯತಿವಿಲಂಘನದಿಂದರಿದಲ್ತೇ ಕನ್ನಡಂ (ಪ. 342)

ಎಂಬ ಪದ್ಯವು ಅವನು ಗುರುತಿಸಿರುವ ಕನ್ನಡದ ಅಸಾಧಾರಣ ಲಕ್ಷಣಗಳನ್ನು ನಿರೂಪಿಸುತ್ತದೆ.

ಇಲ್ಲಿಗೆ ವ್ಯಾಕರಣ ಭಾಗ ಮುಗಿದಂತೆ. ಮುಂದಿನದು ಪ್ರಯೋಗ ಸಾರವೆಂಬ ಶಬ್ದಾರ್ಥ ನಿರ್ಣಯ ಪ್ರಕರಣ. ಅದರಲ್ಲಿ 233 ಶಬ್ದಗಳಿಗೆ ಅರ್ಥವನ್ನು ಸೂಚಿಸಲಾಗಿದೆ. ಇದು ಕೋಶಕ್ಕೆ ಸೇರುವ ಭಾಗವಾಗಿದೆಯೇ ಹೊರತು ವ್ಯಾಕರಣಕ್ಕಲ್ಲ.

ದೇಶೀಯ ಅಕ್ಷರಗಳನ್ನು ವಿಶೇಷವಾಗಿ ನಿರೂಪಿಸಿರುವುದು, ೞಕಾರಯುಕ್ತ ವಾದ ಪದಗಳ ಪಟ್ಟಿಯನ್ನು ಕೊಟ್ಟಿರುವುದು, ಧಾತುಪಾಠ ಹಾಗೂ ಪ್ರಯೋಗ ಸಾರಗಳನ್ನು ನಿರೂಪಿಸಿರುವುದು ಇವು, ಇತರ ವ್ಯಾಕರಣಗಳಲ್ಲಿಲ್ಲದೆ, ಶಬ್ದಮಣಿದರ್ಪಣದಲ್ಲಿ ಮಾತ್ರ ಕಂಡುಬರುವ ವಿಶೇಷಾಂಶಗಳು. ವಿಚಾರಗಳ ಸಮಗ್ರ ನಿರೂಪಣೆ, ವಿಫುಲವಾಗಿ ಪ್ರಯೋಗಗಳನ್ನು ಕೊಡುವುದು, ಸೂಕ್ಷ್ಮ ವಾದ ಭಾಷಾಪ್ರಜ್ಞೆ ಮುಂತಾದ ವಿಶಿಷ್ಟಾಂಶಗಳನ್ನು ಇದರಲ್ಲಿ ಕಾಣುತ್ತೇವೆ. ಅಚ್ಚಗನ್ನಡಕ್ಕೆ ಮಾನ್ಯತೆ ನೀಡಿರುವುದು ಈ ಕೃತಿಯ ಮತ್ತೊಂದು ವೈಶಿಷ್ಟ್ಯ. ಕನ್ನಡದ ಅಸಾಧಾರಣ ಲಕ್ಷಣಗಳನ್ನು ನಿರೂಪಿಸಿರುವುದು ಇದಕ್ಕೆ ಸಾಕ್ಷಿ. ಗಮಕ ಸಮಾಸದ ಬಗ್ಗೆಯಂತೂ ನಾಗವರ್ಮ ಕೂಡ ಹೇಳಿಲ್ಲ. ಇವನೇ ಅದನ್ನು ಗುರುತಿಸಿ ಮೊದಲಬಾರಿಗೆ ತಾನೇ ವಿವರಿಸಿದ್ದಾನೆ. ಇದೇ ರೀತಿ ನಾಗವರ್ಮನು ಹೇಳದ ಇನ್ನೂ ಅನೇಕ ವಿಚಾರಗಳನ್ನು ಕೇಶಿರಾಜ ತಾನು ನಿರೂಪಿಸಿದ್ದಾನೆ.

ಹೀಗೆ ವಿಸ್ತಾರವಾಗಿ, ವ್ಯವಸ್ಥಿತವಾಗಿ ನಿರೂಪಿತವಾಗಿರುವ ಈ ಕೃತಿಯು ಅದು ರಚಿತವಾದಂದಿನಿಂದ ಇಂದಿನವರೆಗೂ ತನ್ನ ಜನಪ್ರಿಯತೆಯನ್ನು ಮಹತ್ತ್ವ ವನ್ನು ಉಳಿಸಿಕೊಂಡು ಬಂದಿದೆ.

ಕರ್ಣಾಟಕ ಶಬ್ದಾನುಶಾಸನ

ಇದರಲ್ಲಿ 592 ಸೂತ್ರಗಳಿದ್ದು ಅವನ್ನು ನಾಲ್ಕು ಪಾದಗಳಾಗಿ ಅಳವಡಿಸ ಲಾಗಿದೆ. ಮೊದಲ ಪಾದದಲ್ಲಿ ವರ್ಣಮಾಲೆ, ಲಿಂಗ, ಧಾತು, ಸುಪ್-ಘಿಏ‰ ಪ್ರತ್ಯಯಗಳು, ಪದ, ಅವ್ಯಯ, ನಿಪಾತ, ಮತ್ತಿತರ ಸಂಜ್ಞೆಗಳು, ಸಂಧಿ ಮುಂತಾದವಕ್ಕೆ ಸಂಬಂಧಿಸಿದ ವಿಚಾರಗಳಿವೆ. ಎರಡನೆಯ ಪಾದದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕವೆಂಬ ಮೂರು ಲಿಂಗಗಳು, ಸಂಸ್ಕೃತ ಶಬ್ದಗಳು ಕನ್ನಡಕ್ಕೆ ಬರುವಾಗ ಆಗುವ ಪರಿವರ್ತನೆಗಳು, ವಿಭಕ್ತಿಗಳು, ವಚನಗಳು- ಇತ್ಯಾದಿಗಳಿಗೆ ಸಂಬಂಧಿಸಿದ ವಿಚಾರಗಳಿವೆ. ಮೂರನೆಯದರಲ್ಲಿ ಸಮಾಸ, ಸರ್ವನಾಮ, ಜಾತ್ಯೇಕವಚನ, ಸಂಖ್ಯಾವಾಚಿ, ತದ್ದಿತ ಇತ್ಯಾದಿಗಳಿಗೆ ಸಂಬಂಧಿಸಿದ ವಿಚಾರಗಳಿವೆ. ನಾಲ್ಕನೆಯದರಲ್ಲಿ ಧಾತು ಮತ್ತು ಆಖ್ಯಾತ ಪ್ರತ್ಯಯಗಳಿಗೆ ಸಂಬಂಧಿಸಿದ ವಿಚಾರಗಳಿವೆ. ಪಾಣಿನಿ, ಪೂಜ್ಯಪಾದ, ಶಾಕಟಾಯನ ಮುಂತಾದವರು ಅನುಸರಿಸಿರುವ ಸೂತ್ರಪದ್ಧತಿಯನ್ನೇ ಇಲ್ಲಿಯೂ ಬಳಸಲಾಗಿದೆ. ಈ ಸೂತ್ರಗಳಿಗೆ ‘ಭಾಷಾಮಂಜರಿ’ಯೆಂಬ ವೃತ್ತಿಯೂ, ‘ಮಂಜರೀ ಮಕರಂದ’ವೆಂಬ ವ್ಯಾಖ್ಯೆಯೂ ರಚಿತವಾಗಿವೆ. ಈ ಕೃತಿಗೆ ‘ಶಬ್ದಾನು ಶಾಸನ’ ವೆಂದು ಹೆಸರಿಡುವಲ್ಲಿ ಹೇಮಚಂದ್ರ, ಶಾಕಟಾಯನರ ಅನುಕರಣೆಯಿದೆ. ವಿಷಯ ನಿರೂಪಣೆಯ ಸಂದರ್ಭದಲ್ಲಿ ಪಾಣಿನೀಯ, ಕಾತಂತ್ರ, ಜೈನೇಂದ್ರ, ಶಾಕಟಾಯನ, ಸಾರಸ್ವತ ಮುಂತಾದ ಸಂಸ್ಕೃತ ವ್ಯಾಕರಣಗಳಿಂದ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಶಾಕಟಾಯನನ ‘ಶಬ್ದಾನುಶಾಸನ’ದಿಂದ 50ಕ್ಕಿಂತ ಹೆಚ್ಚು, ಪಾಣಿನಿಯ ‘ಅಷ್ಟಾಧ್ಯಾಯಿ’ಯಿಂದ ಸುಮಾರು 36, ಶರ್ವವರ್ಮನ ‘ಕಾತಂತ್ರ ವ್ಯಾಕರಣ’ದಿಂದ ಸುಮಾರು 6, ನರೇಂದ್ರಾಚಾರ್ಯ ಅಥವಾ ಅನುಭೂತಿ ಸ್ವರೂಪಾಚಾರ್ಯನ ‘ಸಾರಸ್ವತ ವ್ಯಾಕರಣ’ ದಿಂದ 2-3 ಸೂತ್ರಗಳನ್ನು ಉಲ್ಲೇಖಿಸ ಲಾಗಿದೆ. ಇದೇ ರೀತಿ ಭಾಷ್ಯಕಾರಾದಿಗಳನ್ನು ಕೂಡ ಉಲ್ಲೇಖಿಸಲಾಗಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಕವಿರಾಜ ಮಾರ್ಗಕಾರ, ನಾಗವರ್ಮ, ಕೇಶಿರಾಜ ಈ ಮೂವರನ್ನು ಉಲ್ಲೇಖಿಸಿದೆ.

ಒಟ್ಟಾರೆ ಗಮನಿಸಿದಾಗ, ಇವನೇನು ಕನ್ನಡ ವ್ಯಾಕರಣವನ್ನು ನಿರೂಪಿಸುತ್ತಿ ದ್ದಾನೋ ಇಲ್ಲ ಸಂಸ್ಕೃತ ವ್ಯಾಕರಣವನ್ನೋ ಎಂಬ ಸಂಶಯವು ಬರುವಷ್ಟರ ಮಟ್ಟಿಗೆ, ಇದು ಪ್ರೌಢ ರೀತಿಯಲ್ಲಿ ಸಂಸ್ಕೃತದಲ್ಲಿ ರಚಿತವಾಗಿದೆ. ‘ಶಬ್ದಮಣಿ ದರ್ಪಣ’ವು ಕನ್ನಡದಲ್ಲಿ ಒಂದು ಉತ್ತಮ ವ್ಯಾಕರಣ ಕೃತಿಯಾಗಿ ರಚಿತವಾದ ಅನಂತರದಲ್ಲೂ ಇಂತಹ ಒಂದು ಪ್ರೌಢ ಸಂಸ್ಕೃತರಚನೆ ಏಕೆ ಬೇಕಾಗಿತ್ತು ಎಂಬ ಪ್ರಶ್ನೆಯೇಳುವುದು ಸಹಜ. ಅವನ ಕಾಲದ ಪರಿಸರದಲ್ಲಿ ಇದಕ್ಕೆ ಉತ್ತರ ಸಿಕ್ಕುತ್ತದೆ. ಸಂಸ್ಕೃತವು ದೇವಭಾಷೆ; ಅದು ಮಾತ್ರ ಶಾಸ್ತ್ರಕಾವ್ಯಾದಿಗಳೆಲ್ಲಕ್ಕೂ ಮಾಧ್ಯಮವಾಗಬಲ್ಲದು; ಕನ್ನಡವು ಪಾಮರರ ಭಾಷೆ; ಅದು ಅಷ್ಟು ಸಮರ್ಥವಾದುದಲ್ಲ; ಅದಕ್ಕೊಂದು ವ್ಯಾಕರಣ ಬೇರೆ ಬೇಕೆ ಎಂಬ ರೀತಿಯ ಮನೋಭಾವಗಳು ಅವನ ಕಾಲದಲ್ಲಿ ಮತ್ತೆ ಪ್ರಬಲಿಸಿದ್ದುದು ಕಂಡುಬರುತ್ತದೆ. ಇದಕ್ಕೆ ಉತ್ತರವಾಗಿ ಅವನು ಈ ಕೃತಿಯನ್ನು ಬರೆದಿದ್ದಾನೆ. ಸರ್ವಭಾಷಾತ್ಮಕವಾದ ಭಗವದ್ವಾಣಿಯ ಭಾಷಾ ವಿಶೇಷಗಳಲ್ಲಿ ಕನ್ನಡವೂ ಒಂದು. ಆದ್ದರಿಂದ ಅದು ಸಂಸ್ಕೃತದಷ್ಟೇ ಶ್ರೇಷ್ಠ; ಸಂಸ್ಕೃತದಂತೆಯೇ ಅದು ಕೂಡ ವ್ಯಾಕರಣ ನಿರೂಪಣೆಗೆ ಯೋಗ್ಯವಾದುದು, ಸಂಸ್ಕೃತದಲ್ಲಿ ಹೇಗೋ ಹಾಗೆಯೇ ಕನ್ನಡದಲ್ಲಿ ಕೂಡ ಹಲವಾರು ಉತ್ತಮ ಶಾಸ್ತ್ರಕೃತಿಗಳೂ ಕಾವ್ಯಾದಿ ಗಳೂ ರಚಿತವಾಗಿವೆ ಎಂಬ ವಿಚಾರಗಳನ್ನು ನಿರೂಪಿಸಿ, ಅಂದಿನ ಸಂಸ್ಕೃತದವರು ಕನ್ನಡವನ್ನು ಕೀಳಾಗಿ ಕಾಣುತ್ತಿದ್ದಿರಬಹುದಾದನ್ನು ಖಂಡಿಸಿ, ಕನ್ನಡದ ಹಿರಿಮೆಯನ್ನು ಎತ್ತಿಹಿಡಿಯುವುದು ಇವನ ಉದ್ದೇಶ. ಇದರಿಂದಾಗಿಯೇ ಸಂಸ್ಕೃತದಲ್ಲಿ ಹೀಗೆ ಇದನ್ನು ರಚಿಸಿರುವುದು. ಎಂ.ವಿ. ಸೀತಾರಾಮಯ್ಯನವರು, ಕೇಶಿರಾಜನು ‘ಕನ್ನಡ ಪಾಣಿನಿ’, ಭಟ್ಟಾಕಳಂಕ ‘ಅಭಿನವ ಪಾಣಿನಿ’ (1979; 201) ಎಂಬುದಾಗಿ ಹೇಳಿ ಇವನ ಸಂಸ್ಕೃತತನ ವನ್ನು ಎತ್ತಿಹಿಡಿದಿದ್ದಾರೆ.

ಹಿಂದಿನ ಎಲ್ಲ ಪ್ರಮುಖ ವೈಯಾಕರಣರನ್ನು ಗಮನಿಸಿ ಹೀಗೆ ಕೃತಿರಚನೆ ಮಾಡಿದ್ದರೂ ಭಟ್ಟಾಕಳಂಕನು ಅವರನ್ನು ಕಣ್ಣುಮುಚ್ಚಿಕೊಂಡು ಅನುಸರಿಸುವು ದಿಲ್ಲ. ಪ್ರಮುಖವಾದ ಹಲವು ಕಡೆಗಳಲ್ಲಿ ಸ್ವತಂತ್ರವಾದ ಅಭಿಪ್ರಾಯವನ್ನು ಎತ್ತಿಹಿಡಿಯುತ್ತಾನೆ. ಇವನ ಕೃತಿಯೂ ಹಿಂದಿನ ಕೃತಿಗಳಿಗಿಂತ ಹೆಚ್ಚು ವಿಸ್ತಾರವೂ ಹೆಚ್ಚು ವ್ಯಾಪಕವೂ ಆಗಿದೆ. ಅಷ್ಟು ಮಾತ್ರವಲ್ಲದೆ ವಿಷಯ ನಿರೂಪಣೆಯಲ್ಲಿ ಅವಕ್ಕಿಂತ ಹೆಚ್ಚು ವ್ಯವಸ್ಥಿತವಾಗಿ ಹಾಗೂ ಸೈದ್ಧಾಂತಿಕವಾಗಿ ಕೂಡ ಇದೆ.

ಅಂತೂ ಒಟ್ಟಾರೆ, ಈ ವರೆಗೆ ನೋಡಿದ ಐದೂ ಕೃತಿಗಳಲ್ಲಿ ಕಂಡುಬರುವ ಪ್ರಮುಖ ಸಮಾನಾಂಶವೆಂದರೆ, 1. ಎಲ್ಲವೂ ಸಂಸ್ಕೃತ ವ್ಯಾಕರಣದಿಂದ ಪ್ರಭಾವಿತವಾಗಿವೆಯೆಂಬುದು, 2. ಸಂಸ್ಕೃತ ಕೃತಿಗಳ ಮಾದರಿಯಲ್ಲಿ ರಚಿತ ವಾಗಿವೆಯೆಂಬುದು, 3. ಆದರೆ ಕನ್ನಡದ ವಿಶಿಷ್ಟಾಂಶಗಳನ್ನೂ ಗುರುತಿಸಿವೆ ಯೆಂಬುದು, 4. ರಚನೆಗೆ ಆಧಾರವಾಗಿ, ಪ್ರಧಾನವಾಗಿ ಪೂರ್ವಕವಿಕೃತಿಗಳ ಭಾಷೆಯನ್ನು ಸ್ವೀಕರಿಸಿದ್ದರೂ ಪ್ರಚಲಿತ ಆಡುನುಡಿಯನ್ನೂ ಅಲ್ಲಲ್ಲಿ ಗಮನಿಸಿರುವುದು. ಇವು, ಹೀಗೆ, ಸಂಸ್ಕೃತದ ನೆರಳಿನಲ್ಲಿದ್ದೂ ತನ್ನತನವನ್ನು ಬಿಟ್ಟುಕೊಡದೆ ಬೆಳೆದುಬಂದಿರುವುದು ಈ ಕೃತಿಗಳ ವೈಶಿಷ್ಟ್ಯ. ಇವೆಲ್ಲವೂ ಹಳಗನ್ನಡವನ್ನೇ ಕುರಿತು ರಚಿತವಾಗಿವೆಯೆಂಬುದು ಮತ್ತೊಂದು ಗಮನಾರ್ಹ ಅಂಶ.

ಶ್ರೀರಂಗ ಪಟ್ಟಣದ ಕೃಷ್ಣಮಾಚಾರ್ಯರ ಕೃತಿಯಾದರೊ, ಇವೆಲ್ಲಕ್ಕಿಂತ ಭಿನ್ನವಾಗಿದೆ. ಇದರಲ್ಲಿ ಸಂಜ್ಞಾಪ್ರಕರಣ, ಸಂಧಿಪ್ರಕರಣ, ಶಬ್ದಪ್ರಕರಣ, ಆಖ್ಯಾತ ಪ್ರಕರಣ, ಕೃತ್‌ಪ್ರಕರಣ, ತದ್ದಿತ ಪ್ರಕರಣ, ತತ್ಸಮ ಪ್ರಕರಣ, ತದ್ಭವ ಪ್ರಕರಣ, ಸಮಾಸಪ್ರಕರಣ ಮತ್ತು ಪ್ರಯೋಗಪ್ರಕರಣ ಎಂಬ ಹತ್ತು ಪ್ರಕರಣಗಳಿವೆ. ಇದರಲ್ಲಿ ಸೂತ್ರಪದ್ಧತಿ ಬಳಕೆಯಾಗಿಲ್ಲ ಸಂಪೂರ್ಣವಾಗಿ ಗದ್ಯದಲ್ಲಿದ್ದು ಪ್ರಶ್ನೋತ್ತರ ರೂಪದಲ್ಲಿದೆ. ವಿಷಯ ವಿನ್ಯಾಸದಲ್ಲಿ ವ್ಯವಸ್ಥಿತ ವಾದ ಜೋಡಣೆ, ಸರಳ ನಿರೂಪಣೆ, ವ್ಯಾಪಕವಾದ ವಿವರಣೆ ಇವೆಲ್ಲ ಇದರಲ್ಲಿ ಕಂಡುಬರುವ ವೈಶಿಷ್ಟ್ಯಗಳು. ಸಂಸ್ಕೃತದ ದಟ್ಟಪ್ರಭಾವದ ನೆರಳಿನಲ್ಲಿ ಇದು ಬೆಳೆದಿದೆ. ಅದರಿಂದಾಗಿಯೇ ಶುದ್ಧಗೆಗಳನ್ನಷ್ಟೇ ಸ್ವೀಕರಿಸಿ ಉಳಿದ ಅಕ್ಷರಗಳನ್ನು ಕೈಬಿಡುವ ಹಿಂದಿನ ಪದ್ಧತಿ ಇಲ್ಲಿ ಕಾಣುವುದಿಲ್ಲ. ದೇಶ್ಯವಲ್ಲದ ಅಕ್ಷರಗಳು ತತ್ಸಮಗಳಲ್ಲಿ ಮಾತ್ರ ಬರುವವೆಂದೂ, ದೇಶ್ಯಾಕ್ಷರಗಳು ತತ್ಸಮಗಳಲ್ಲಿ ಬರುವುದಿಲ್ಲವೆಂದೂ ಹೇಳಿರುವುದು ಗಮನಾರ್ಹ. ಹೀಗೆಯೇ, ಹಿಂದಿನವರು ಹೇಳದೆ ಇರುವ ಸವರ್ಣದೀರ್ಘಾದಿ ಸಂಸ್ಕೃತ ಸಂಧಿಗಳನ್ನು ವಿವರಿಸಿರುವುದು ಕೂಡ. ಇವನ್ನೆಲ್ಲ, ಸಂಸ್ಕೃತ ಪಕ್ಷಪಾತದಿಂದ ಮಾಡಿಲ್ಲ. ಕನ್ನಡ ಸಾಹಿತ್ಯದಲ್ಲಿ, ಅದರಲ್ಲೂ ಸಮಕಾಲೀನ ಸಾಹಿತ್ಯದಲ್ಲಿ, ಸಂಸ್ಕೃತದಿಂದ ಕಸಿಕೊಂಡು ಬಳಕೆ ಯಲ್ಲಿರುವ ಕನ್ನಡವನ್ನು ಒಟ್ಟಾರೆಯಾಗಿ ಕನ್ನಡವೆಂದು ಸ್ವೀಕರಿಸುವುದರಿಂ ಹೀಗೆ ಮಾಡಲಾಗಿದೆ. ಈ ದೃಷ್ಟಿಯಿಂದ ಇದು ಉಚಿತವಾಗಿಯೇ ಇದೆ. ಈ ಕೃತಿಯಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖಾಂಶವೆಂದರೆ, ಗ್ರಾಂಥಿಕ ಕನ್ನಡಕ್ಕೆ ಪ್ರಾಧಾನ್ಯವಿತ್ತಿರುವಂತೆಯೇ ಆಡುನುಡಿಗೂ ಪ್ರಾಧಾನ್ಯವಿತ್ತಿರುವುದು. ಹಿಂದಿನ, ಅಷ್ಟೇ ಏಕೆ, ಮುಂದಿನ, ಯಾವ ವೈಯಾಕರಣರೂ ಆಡುನುಡಿಗೆ ಇಷ್ಟು ಪ್ರಾಧಾನ್ಯವಿತ್ತು, ಅದರ ವ್ಯಾಕರಣವನ್ನು ವಿವರಿಸಲು ಹೋಗಿಲ್ಲ. ಆಧುನಿಕ ಕಾಲದಲ್ಲಿ ರಚಿತವಾದ ಹೊಸಗನ್ನಡ ವ್ಯಾಕರಣಗಳು ಕೂಡ ಗ್ರಾಂಥಿಕ ಭಾಷೆ ಯನ್ನೇ ಆಧರಿಸಿವೆ. ಪಾಶ್ಚಾತ್ಯರು ರಚಿಸಿದ ವ್ಯಾಕರಣಗಳಲ್ಲಿ ಆಡುನುಡಿಗೂ ಸಾಕಷ್ಟು ಪ್ರಾಶಸ್ತ್ಯವನ್ನು ಕೊಟ್ಟಿರುವುದಾರೂ ಅವೆಲ್ಲ ರಚಿತವಾಗಿರುವುದು ಇಂಗ್ಲಿಷ್ ವ್ಯಾಕರಣದ ಮರ್ಯಾದೆಗನುಗುಣವಾಗಿ.

ಒಟ್ಟಾರೆ, ನಮ್ಮ ವ್ಯಾಕರಣಗಳು ಗ್ರಾಂಥಿಕ ಕನ್ನಡದಿಂದ ಆಡುನುಡಿಯ ಕಡೆಗೆ, ಸಂಸ್ಕೃತದ ಪ್ರಭಾವಲಯದಿಂದ ಇಂಗ್ಲಿಷ್ ಪ್ರಭಾವದ ಕಡೆಗೆ ಸಾಗಿರುವುದನ್ನು ಕಾಣುತ್ತೇವೆ.

ಪುಸ್ತಕ: ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ ೧: ಭಾಷೆ
ಲೇಖಕರು: ಕೆ.ಜಿ. ನಾರಾಯಣ ಪ್ರಸಾದ್
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಕೆ.ವಿ. ನಾರಾಯಣ
http://kanaja.in/archives/9262[/sociallocker]

ಶ್ರೇಯಾಂಕ

ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 3.85 ( 22 votes)

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published. Required fields are marked *