Thursday , 13 June 2024

ಕನ್ನಡ ಭಾಷೆ – ಅರ್ಥಗಾರಿಕೆ ವಿಚಾರಸಂಕಿರಣ

ಕನ್ನಡ ಭಾಷೆಗೆ ಸುಮಾರು ಒಂದು ಸಾವಿರ ವರ್ಷವನ್ನು ಮೀರಿದ ಇತಿಹಾಸವಿದೆ. ಪ್ರಾಚೀನ ಹಳಗನ್ನಡದಿಂದ ಹಿಡಿದು ಇಂದಿನ ಆಧುನಿಕ ಹೊಸಗನ್ನಡದವರೆಗೆ ಅದರ ವ್ಯಾಪ್ತಿ ಹರಡಿಕೊಂಡಿದೆ. ಇಷ್ಟಿದ್ದರೂ ಈ ಕನ್ನಡ ಏಕರೂಪಿಯಾಗಿಲ್ಲ. ಬಹುಮುಖೀಯಾದ ವೈವಿಧ್ಯಮಯ ಕನ್ನಡಗಳು ಹಿಂದೆ ಇದ್ದವು ಎನ್ನುವುದು ಕವಿರಾಜಮಾರ್ಗಕಾರನ “ಸಾವಿರದ ದೇಸಿಯಿಂದ ವಾಸುಕಿಗೆ ಬೇಸರ’ ಎಂಬ ಮಾತಿನಿಂದ ತಿಳಿಯುತ್ತದೆ. ಹೊಸಗನ್ನಡವು ದೇಸಿಕನ್ನಡ, ಪ್ರಾದೇಶಿಕ ಕನ್ನಡ, ಶಾಸ್ತ್ರೀಯ ಕನ್ನಡ, ಸಂಸ್ಕೃತ ಭೂಯಿಷ್ಠ ಕನ್ನಡ, ಗ್ರಾಂಥಿಕ ಕನ್ನಡ, ಆಡುನುಡಿಯ ಕನ್ನಡ, ಶಾಸನಭಾಷೆಯ ಕನ್ನಡ, ದಸ್ತಾವೇಜು, ಕಂದಾಯ ಇಲಾಖೆ ಕನ್ನಡ… ಹೀಗೆ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ. ಜಾತಿ, ಬುಡಕಟ್ಟು, ಮತ, ಧರ್ಮಗಳ ಹಿನ್ನೆಲೆಯಿಂದ ಕೂಡ ಕನ್ನಡ ಭಾಷಾರೂಪ ಭಿನ್ನತೆ ಪಡೆದಿದೆ. ಈ ವಿವಿಧತೆಗಳೇ ಕನ್ನಡದ ಶಕ್ತಿಯಾಗಿದೆ, ಕನ್ನಡ ಭಾಷಾ ಸಮೃದ್ಧಿಗೂ ಕಾರಣವಾಗಿದೆ.

Talamaddale ಕರಾವಳಿಯ ಕನ್ನಡಭಾಷೆಯ ಸ್ವರೂಪ ಕೂಡ ಅಷ್ಟೇ ವಿಭಿನ್ನ. ಕರಾವಳಿಯನ್ನು ಅತ್ಯಂತ ಆಳ ವಾಗಿ ಆವರಿಸಿಕೊಂಡ ಯಕ್ಷಗಾನ, ತಾಳಮದ್ದಲೆ ಕಲಾಪ್ರಕಾರಗಳು ಕನ್ನಡ ಭಾಷೆಯನ್ನು ಅತ್ಯಂತ ಸಶಕ್ತವಾಗಿ ಪರಿಣಾಮಕಾರಿಯಾಗಿ ಬಳಸಿವೆ, ಬೆಳೆಸಿವೆ. ಯಕ್ಷವಾಣಿಯ ಈ ಭಾಗದಲ್ಲಿ ಬಹುದೊಡ್ಡ ಮೌಖೀಕ ಪರಂಪರೆಯಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲಿಯೇ ಇತ್ತೀಚೆಗೆ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠ, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಯಕ್ಷಗಾನ ಕಲಾರಂಗ ಸಂಸ್ಥೆಗಳ ಆಶ್ರಯದಲ್ಲಿ ಕನ್ನಡ ಭಾಷೆ- ಯಕ್ಷಗಾನ ಅರ್ಥಗಾರಿಕೆ ವಿಚಾರ ಸಂಕಿರಣ ಉಡುಪಿ ರಾಜಾಂಗಣದಲ್ಲಿ ನಡೆಯಿತು.

ವಿಚಾರ ಸಂಕಿರಣ ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಅಧ್ಯಕ್ಷ ಎಂ. ಎಲ್‌. ಸಾಮಗ ಇಡೀ ವಿಚಾರಸಂಕಿರಣದ ವಿಷಯವ್ಯಾಪ್ತಿ ಮತ್ತು ಈ ಬಗ್ಗೆ ಹುಟ್ಟಿಕೊಳ್ಳುವ ಪ್ರಶ್ನೆ, ಅಸ್ಪಷ್ಟತೆ, ತಕರಾರು, ಗೊಂದಲಗಳನ್ನು ಮುಖ್ಯವಾಗಿ ಪ್ರಸ್ತಾವಿಸಿ ಮುಂದಿನ ಗೋಷ್ಠಿಗೆ ಉತ್ತಮ ಪೀಠಿಕೆ ಹಾಕಿದರು. ಕರಾವಳಿಯ ಜನರ ವಿಶಿಷ್ಟ ಕನ್ನಡ ಭಾಷಾಶೈಲಿಗೆ ಯಕ್ಷಗಾನ ಮತ್ತು ತಾಳಮದ್ದಲೆ‌ಗಳ ಕೊಡುಗೆಯನ್ನು ಒತ್ತಿ ಹೇಳಿದ ಅವರು ಕರಾವಳಿ ಜನರನ್ನು ಅವರ ಯಕ್ಷಗಾನ ಭಾಷಾಪ್ರೇರಿತ ಶೈಲಿಗಳಿಂದಲೇ ಹೊರಜಿಲ್ಲೆ ಗಳಲ್ಲಿ ಗುರುತಿಸುತ್ತಾರೆ. ಕರಾವಳಿ ಭಾಗದ ಜನರು ಅತ್ಯುತ್ತಮ ಕನ್ನಡ, ಶುದ್ಧ ಕನ್ನಡ ಮಾತನಾಡುತ್ತಾರೆ ಎಂಬ ಭಾವನೆ ಕೂಡ ಇದೆ ಎಂದರು.

ಕನ್ನಡದ ಭಾಷಾ ಇತಿಹಾಸದಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಸಿಗಬೇಕಾದಷ್ಟು ಮಹತ್ವ ದೊರೆತಿಲ್ಲ ಎಂಬ ವಿಷಾದ ಧ್ವನಿಯನ್ನು ಹೊರಹಾಕಿದ ಸಾಮಗರು ಕನ್ನಡಸಾಹಿತ್ಯಕ್ಕೆ ಯಕ್ಷಗಾನ ಕ್ಷೇತ್ರದ ಕೊಡುಗೆಯ ಮೌಲ್ಯನಿರ್ಣಯವಾಗಬೇಕು. ಇತರ ಭಾಷಾಪದ ಮಿಶ್ರವಿಲ್ಲದ ಕನ್ನಡಭಾಷೆ ಯಕ್ಷಗಾನದ ವಿಶೇಷತೆ. ಕನ್ನಡಭಾಷಾ ಸಂದರ್ಭದಲ್ಲಿ ಯಕ್ಷಗಾನ ಕನ್ನಡವನ್ನು ಯಾವ ದೃಷ್ಟಿಯಿಂದ ನೋಡಬೇಕು ಪ್ರಶ್ನೆ ಕೇಳಿಕೊಳ್ಳಬೇಕು. ಕನ್ನಡ ಭಾಷಾ ಸಂಪತ್ತು ಹೆಚ್ಚಿಸುವಲ್ಲಿ ಅದರ ಕೊಡುಗೆ ಬಗ್ಗೆ ವಿಮರ್ಶೆ ಆಗಬೇಕು. ಕನ್ನಡ ಭಾಷಾಭಿವೃದ್ಧಿಗೆ ಯಕ್ಷಗಾನ ಕನ್ನಡ ಬಳಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಪರ್ಯಾಯ ಆಲೋಚನೆ ನಡೆಯಬೇಕು. ಕೆ. ವಿ. ನಾರಾಯಣರಂಥಹ ಭಾಷಾ ತಜ್ಞರು ಈ ಭಾಷೆಯ ವಿಶಿಷ್ಟತೆಯನ್ನು ಗುರುತಿಸಿದ್ದಾರೆ. ಈಗಾಗಲೇ ಕನ್ನಡಕ್ಕೆ ಯಕ್ಷಗಾನ ಛಂದಸ್ಸಿನ ಕೊಡುಗೆ ವಿಶೇಷವಾಗಿ ವಿದ್ವಾಂಸರ ಗಮನ ಸೆಳೆದಿದೆ ಎಂಬ ಮುಖ್ಯವಾದ ಒಳನೋಟದ ಮಾತುಗಳನ್ನು ಹೇಳಿದರು.

ಭಾಷಾ ತಜ್ಞ ಕೆ. ವಿ. ನಾರಾಯಣ.

ಯಕ್ಷಗಾನದ ರಸಾಭಿವ್ಯಂಜಕಗುಣದ ಬಗ್ಗೆ ಮನೋಜ್ಞ ಆಶಯ ಭಾಷಣ ಮಾಡಿದ ಹಿರಿಯ ಅರ್ಥಧಾರಿ ಅಂಬಾತನಯ ಮುದ್ರಾಡಿ ಇದೊಂದು ಯಕ್ಷಗಾನದ ಕಲಾಚಿಂತನೆ ಕನ್ನಡದ ಕಾಲ ಚಿಂತನೆಗೊಂದು ಸುಸಂದರ್ಭ. ಯಕ್ಷಗಾನ ಕರಾವಳಿ ಕರ್ನಾಟಕದ ಬಯಲು ವಿಶ್ವ ವಿದ್ಯಾಲಯ ಎಂದರು.

ಯಕ್ಷಗಾನ ಅರ್ಥಗಾರಿಕೆ-ಕನ್ನಡ ಭಾಷಾಭಿವೃದ್ಧಿ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ ಹಿರಿಯ ಕನ್ನಡ ಭಾಷಾ ವಿದ್ವಾಂಸ ಪಾದೆಕಲ್ಲು ವಿಷ್ಣುಭಟ್ಟ ಕನ್ನಡ ಭಾಷೆಯ ಬಹುಮುಖೀ ಸ್ವರೂಪವನ್ನು ವಿವರಿಸಿದರು. ಭಾಷಾಬಳಕೆಯ ಸ್ವರೂಪವು ಭಾಷೆಯ ಕೇಳುಗರನ್ನು ಮುಂದಿಟ್ಟುಕೊಂಡು ನಿರ್ಧಾರವಾಗುತ್ತದೆ. ವಕõವಿನ ಶಬ್ದಗಳ ಆಯ್ಕೆಯಲ್ಲಿಯ ಭಿನ್ನತೆ, ಸಾಹಿತ್ಯಸ್ವರೂಪ, ಶಾಸ್ತ್ರರೂಪಗಳು ಭಾಷೆಯ ನಿರೂಪಣೆಯ ಮೂಲಕವೇ ಪ್ರತ್ಯೇಕಗೊಳ್ಳುತ್ತದೆ. ಹೊರತು ಭಾಷಾ ರಚನೆಯ ವ್ಯತ್ಯಾಸದಿಂದಲ್ಲ ಎನ್ನುವ ಮೂಲಭೂತ ತತ್ವದಿಂದಲೇ ಮಾತು ಆರಂಭಿಸಿದ ಅವರು, ದಿನಬಳಕೆ ಕನ್ನಡದಲ್ಲಿ ಅನ್ಯದೇಶೀಯ ಪದ ಸ್ವೀಕರಣವಿದ್ದರೂ ಯಕ್ಷಗಾನವಲಯ ಇದನ್ನು ಒಪ್ಪಿಕೊಂಡಿಲ್ಲ. ಆದರೆ ಸಂಸ್ಕೃತ ಶಬ್ದಗಳನ್ನು ಅದರ ಸಾಮರಸ್ಯವನ್ನು ಸ್ವೀಕರಿಸಿ ಒಪ್ಪಿಕೊಂಡಿದೆ. ತದ್ಭವಗಳ ಮೂಲಕ ಈ ಸಂಬಂಧ ವಿಸ್ತಾರವಾಗಿ ಬೆಳೆದಿದೆ. ಕನ್ನಡಪುಷ್ಟೀಕರಣ ಆಗಿದೆ ಎಂದು ಕನ್ನಡ ಭಾಷಾ ಪ್ರಭೇದಗಳ ಬಹುಮುಖೀ ರಚನೆಗಳ ಕಡೆ ಗಮನ ಸೆಳೆದರು.

ಭಾಷಾ ಭಿನ್ನತೆಯ ಒಗಟು ಬಿಡಿಸುತ್ತಾ ಸಾಗಿದ ಪಾದೇಕಲ್ಲು ಆಡುಮಾತು ಮತ್ತು ಬರಹ ಬೇರೆ ಬೇರೆ. ಭಾಷೆ -ಉಪಭಾಷೆ-ವ್ಯಕ್ತಿಭಾಷೆ ಹೀಗೆ ವೈವಿಧ್ಯಕೋಟಿಗಳು ಇವೆ. ಹೊಸಗನ್ನಡದಲ್ಲಿ ಆಡುಮಾತಿಗೂ ಬರಹದ ಭಾಷೆಗೂ ಅಂತರ ಭಾರಿ ಕಮ್ಮಿ. ಅರ್ಥದಾರಿಗಳ ವಿದ್ವತ್ತು, ಸೂಕ್ಷ್ಮತೆ, ಸಂವೇದನಾಶೀಲತೆ, ಮತ್ತು ವ್ಯಕ್ತಿವಿಶಿಷ್ಟತೆ ಯಕ್ಷಗಾನ ಕನ್ನಡದ ಭಾಷಾ ವಲಯವನ್ನು ಶ್ರೀಮಂತಗೊಳಿಸಿದೆ. ಬರವಣಿಗೆ ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ದಿಗ್ಗಜಗಳು ಬಂದರೂ ಅಲ್ಲಿಯ ಬರವಣಿಗೆಗೂ ಅರ್ಥದಾರಿಕೆಗೂ ಪುನಃ ವ್ಯತ್ಯಾಸವಿದೆ. ದೇರಾಜೆ, ವೆಂಕಪ್ಪಯ್ಯ ಶೆಟ್ಟರು, ಪೊಳಲಿ ಶಾಸ್ತ್ರಿಗಳು, ಸಾಮಗರು, ಶೇಣಿ ಎಲ್ಲರದೂ ವಿಶಿಷ್ಟ ಶೈಲಿ. ದೇರಾಜೆ ಪ್ರಸಂಗಗಳಿಗೆ ಅರ್ಥ ಬರೆದಿದ್ದಾರೆ. ದೇರಾಜೆ ರಾಮಾಯಣ ಅರ್ಥದಾರಿಗಳಿಗೊಂದು ಆಕರ ಗ್ರಂಥ. ರಾಮಾಯಣವನ್ನು ಕನ್ನಡದಲ್ಲಿ ಅನುವಾದಿಸಿದ ಸಿ. ಎನ್‌. ಶ್ರೀನಿವಾಸ ಅಯ್ಯಂಗಾರ್‌, ಅಳಸಿಂಗಾಚಾರ್ಯರಿಗಿಂತ ಭಿನ್ನವಾದ ದೇರಾಜೆ ಶೈಲಿಯಲ್ಲಿ ಯಕ್ಷಗಾನದ ಹಿನ್ನೆಲೆ ಎದ್ದುಕಾಣುತ್ತದೆ. ಅರ್ಥಧಾರಿಗಳ ಪ್ರತ್ಯುತ್ಪನ್ನಮತಿತ್ವ, ವಿನೂತನ ಅರ್ಥಸ್ಪುರಣೆ, ವಿಭಿನ್ನಶೈಲಿಗಳು ಯಕ್ಷಗಾನದ ವಿಶಿಷ್ಟ ಹಿನ್ನೆಲೆಯನ್ನು ಸಾರುತ್ತವೆ.

ದೇರಾಜೆ ಸೀತಾರಮಯ್ಯ ಆಧುನಿಕವಾಗಿ ನಮಗೆ ಲಭ್ಯ ವಿರುವ ಹಲವು ಸಾಧನಗಳಿಂದ ಇಂದಿನ ಭಾಷಾವಲಯ ಅನಂತ ಭಾಷಾಧ್ಯಯನದ ಸಾಧ್ಯತೆ ತೆರೆದಿದೆ. ಆಡುಮಾತು ಮತ್ತು ಬರಹ, ತಾಳಮದ್ದಲೆಗಳ ವಾಕ್ಯ, ಶೈಲಿಗಳ ಅಧ್ಯಯನ ಮಾಡಲು ಅವಕಾಶ ಜಾಸ್ತಿ ಇದೆ ಎಂದು ಅಧ್ಯಯನ ಮುನ್ನೋಟವನ್ನು ವಿವರಿಸಿದರು.

ಭಾಷಾಶಾಸ್ತ್ರಜ್ಞ ಡಿ. ಎನ್‌. ಶಂಕರ ಭಟ್‌ ಹೇಳುವ ಶುದ್ಧಾಶುದ್ಧ ಎಲ್ಲಾ ಭಾಷಾರೂಪಗಳನ್ನು ಒಪ್ಪಿಕೊಳ್ಳುವುದು ಯಕ್ಷಗಾನ ವಿದ್ವಾಂಸರಿಗೆ ಕಷ್ಟಕರ ಎಂಬುದು ಪಾದೇಕಲ್ಲು ನಿಲುವು. ಭಾಷೆಯು ಅನವಸ್ಥಾ ದೋಷದಿಂದ ಪಾರಾಗಲು ಭಾಷಾಶುದ್ಧಿಯನ್ನು ಉಳಿಸಿಕೊಳ್ಳಲೇಬೇಕು. ನಿರ್ದಿಷ್ಟ ಸೌಂದರ್ಯ, ಚೌಕಟ್ಟು, ಶೈಲಿಗಳ ಪರಂಪರೆಯುಳ್ಳ ಯಕ್ಷಗಾನ ಭಾಷಾಶೈಲಿ ಕನ್ನಡದ್ದೇ ಆದ ಹೊಸ ಶೈಲಿ. ಸಾಮಾನ್ಯ ಕನ್ನಡ ಭಾಷೆಯ ಲಕ್ಷಣದೊಂದಿಗೆ ವಿಶಿಷ್ಟ ಲಕ್ಷಣವನ್ನು ಇದು ಹೊಂದಿದೆ ಎಂದು ವಿದ್ವತ್‌ಪೂರ್ಣ ಒಳನೋಟ ನೀಡಿದರು.

ಪ್ರಬಂಧಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಮಾತನಾಡಿದ ಯಕ್ಷಗಾನ ವಿದ್ವಾಂಸ ಡಿ. ಎಸ್‌. ಶ್ರೀಧರ ಪುರಾಣಲೋಕವೇ ಯಕ್ಷಗಾನದ ನಿಜವಾದ ಪ್ರಪಂಚ. ಪಾತ್ರಗಳ ಗುಣ ಸ್ವಭಾವಗಳ ಆಧಾರದಲ್ಲಿ ಅರ್ಥಧಾರಿ ಅವುಗಳನ್ನು ಅನಾವರಣಗೊಳಿಸು ತ್ತಾನೆ. ಒಬ್ಬನೇ ಪಾತ್ರಧಾರಿ ಹಲವು ಪಾತ್ರಗಳ ಪರಕಾಯ ಪ್ರವೇಶ ಮಾಡುತ್ತಾನೆ. ಆಶುಸಂಭಾಷಣೆಯಲ್ಲಿ ಹುಟ್ಟಿಕೊಳ್ಳುವ ಇಲ್ಲಿಯ ಸಾಹಿತ್ಯ ಸೃಷ್ಟಿಶೀಲ. ಕನ್ನಡದಲ್ಲಿ ವಚನಗಳು ಇರುವ ಹಾಗೆ ಇದೊಂದು ಪ್ರವಚನ ಶೈಲಿಯೂ ಉಪದೇಶಶೈಲಿಯೂ ಹೌದು ಎಂದರು.

ಪ್ರತಿಕ್ರಿಯೆ ನೀಡಿದ ಇನ್ನೊಬ್ಬ ಶಿಕ್ಷಕ ಡಾ| ಕಿಶೋರ ಕುಮಾರ್‌ ಶೆಟ್ಟಿ ಯಕ್ಷಗಾನದ ಕವಿಗಳು ಮತ್ತು ಅರ್ಥದಾರಿಗಳಿಂದ ಕನ್ನಡ ಭಾಷಾಸಂಪನ್ನತೆ ಸಾಧ್ಯವಾಗಿದೆ. ವಾಚಿಕಾಭಿನಯದ ಮೂಲಕ ತಾಳ ಮದ್ದಲೆ, ಗಾನ-ನೃತ್ಯ-ಮಾತು-ಅಭಿನಯಗಳ ಮೂಲಕ ಯಕ್ಷಗಾನ ಒಂದು ಅಖಂಡತೆಯನ್ನು ಕಟ್ಟಿಕೊಡುತ್ತದೆ. ಹಳೇ ಯಕ್ಷಗಾನ ಕಲಾವಿದರು ತಾಳಮದ್ದಲೆ ಅರ್ಥದಾರಿಗಳ ವಾಚಿಕ ಸಾಮರ್ಥ್ಯ ತಾವು ಗಳಿಸಲು ಪ್ರಯತ್ನಿಸಿದ್ದನ್ನು ವಿವರಿಸಿದರು. ವಿದ್ವತ್‌ಪೂರ್ಣ ಅರ್ಥದಾರಿಕೆಯಿಂದ ಕನ್ನಡದ ಪರಿಭಾಷಾತ್ಮಕ ನೆಲೆ ವಿಸ್ತಾರಗೊಂಡಿದ್ದನ್ನು ಗುರುತಿಸಿದ ಕಿಶೋರ ಶೆಟ್ಟಿ ನ್ಯಾಯಶಾಸ್ತ್ರ , ಧರ್ಮಶಾಸ್ತ್ರ ಸೇರಿದಂತೆ ಹಲವು ಜ್ಞಾನಶಾಖೆಗಳ ತಿಳಿವಳಿಕೆ ಕನ್ನಡ ನುಡಿಬೊಕ್ಕಸಕ್ಕೆ ಸೇರ್ಪಡೆಗೊಳ್ಳುವಂತಾಯಿತು ಎಂದರು.

ಡಾ| ಮಹಾಬಲೇಶ್ವರ ರಾವ್‌ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣತಜ್ಞ ಡಾ| ಮಹಾಬಲೇಶ್ವರ ರಾವ್‌ ಯಕ್ಷಗಾನದಿಂದಲೇ ಕನ್ನಡ ಬೆಳೆದಿದೆ ಎಂಬ ಭ್ರಮೆ ಬೇಡ. ಯಕ್ಷಗಾನ ಕಾರಣದಿಂದಲೇ ಒಬ್ಬ ನಿಗೆ ಒಳ್ಳೆಯ ಕನ್ನಡ ಸಾಧ್ಯವಾಗಿದೆ ಎಂಬುದನ್ನು ತನಗೆ ಒಪ್ಪಿ ಕೊಳ್ಳುವುದು ಕಷ್ಟ ಎಂದು ಹೇಳುತ್ತಾ ಯಕ್ಷಗಾನ ಮತ್ತು ತಾಳಮದ್ದಲೆ ಕುರಿತ ಹಲವು ವಿಷಯಗಳನ್ನು, ಗ್ರಹಿಕೆಗಳನ್ನು ಸಮಸ್ಯಾತ್ಮಕಗೊಳಿಸಿಯೇ ಮಾತನಾಡಿದರು. ಸಮಕಾಲೀನ ಮತ್ತು ಭವಿಷ್ಯದ ಸವಾಲಿಗೆ ಯಕ್ಷಗಾನದ ಪರಿಹಾರವೇನು? ಗ್ರಾಂಥಿಕ ಕನ್ನಡ ನಿಸ್ಸಾರ. ಈ ಕನ್ನಡದಲ್ಲಿ ರಸೋತ್ಪತ್ತಿ (ಭಾವುಕತೆ) ಇಲ್ಲ. ಯಕ್ಷಗಾನ ಸಮಕಾಲೀನತೆಗೆ ಸ್ಪಂದಿಸುವುದಿಲ್ಲ, ಏಕೆಂದರೆ ಅದು ದಲಿತಸಂವೇದನೆ, ನ್ಯಾನೋ ತಂತ್ರಜ್ಞಾನ ಇತ್ಯಾದಿ ವಿಷಯಗಳನ್ನು ಒಳಗೊಳ್ಳುವ ಬಗೆ ಹೇಗೆ… ಹೀಗೆ ಕೆಲವು ಅವರ ಹೇಳಿಕೆಗಳಿಗೆ ವಿವರಣೆ ಸಾಕಾಗಲಿಲ್ಲ ಎಂಬ ಭಾವನೆ ಬಂದಿದ್ದು ಸುಳ್ಳಲ್ಲ. ಕಲಾಪ್ರಕಾರವಾಗಿ ಯಕ್ಷಗಾನದ ಮಿತಿಗಳ ಬಗ್ಗೆ ಹೇಳಲು ಮರೆಯದ ಅವರು ಕನ್ನಡವನ್ನು ಇನ್ನಷ್ಟು ಸಂಪುಷ್ಟಗೊಳಿಸಲು ಯಕ್ಷಗಾನದ‌ ಕನ್ನಡ ಬಳಕೆ ಪ್ರಯೋಜನವಾಗಬಹುದು, ಶಿಕ್ಷಕರ ತರಬೇತಿ ವಿದ್ಯಾರ್ಥಿಗಳಿಗೆ (ಬಿಎಡ್‌, ಡಿಎಡ್‌) ಸಹಾಯಕ ಎಂದರು. ಔಪಚಾರಿಕ ಶಿಕ್ಷಣದಲ್ಲಿ ಕನ್ನಡದ ನೆಲೆ ಇರುವಂತೆ ಯಕ್ಷಗಾನ ಸಾಹಿತ್ಯದಲ್ಲೂ ಕನ್ನಡನೆಲೆ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.

ಹೀಗೆ ಯಕ್ಷಗಾನ ಅರ್ಥಗಾರಿಕೆ ಮತ್ತು ಕನ್ನಡ ಭಾಷೆಯ ನಡುವೆ ಒಂದು ಸಂಬಂಧ ಕಲ್ಪಿಸಿ ಹೊಸ ದೃಷ್ಟಿಕೋನದಿಂದ ವಿದ್ವಾಂಸರು ಅಭಿಪ್ರಾಯ ಮಂಡಿಸಿದ್ದರಿಂದ ಯಕ್ಷಗಾನ ವಾಣಿಯ ಕುರಿತ ಗಂಭೀರ ಮಂಥನ ನಡೆಯಲು ಸಾಧ್ಯ ವಾಯಿತು. ಈ ಗೋಷ್ಠಿಗೆ ಶೈಕ್ಷಣಿಕ ಆಯಾಮ ನೀಡಲು ಉಡುಪಿ ಜಿಲ್ಲೆಯ ಪ್ರೌಢಶಾಲಾ ಭಾಷಾ ಶಿಕ್ಷಕರನ್ನು ಶಿಕ್ಷಣ ಇಲಾಖೆ ನಿಯೋಜಿಸಿತ್ತು. ಕಲಾವಿದ ಅಂಬಾತನಯ ಮುದ್ರಾಡಿ, ಯಕ್ಷಗಾನಪ್ರೇಮಿ, ಕ್ಷೇತ್ರಶಿಕ್ಷಣಾಧಿಕಾರಿ ವಸಂತ ಶೆಟ್ಟಿ ಸ್ವತಃ ಪಾಲ್ಗೊಂಡಿದ್ದರು. ಅಪರಾಹ್ನ ನಡೆದ ಪ್ರಾಯೋಗಿಕ ನೆಲೆಯ ಭೀಷ್ಮಸೇನಾಧಿಪತ್ಯ ಕಾವ್ಯ-ಪ್ರಸಂಗ-ಅರ್ಥ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು. ಒಟ್ಟಾರೆ ಯಕ್ಷ ವಾಣಿಯದ ಶೈಕ್ಷಣಿಕ ಮಹತ್ವವನ್ನು ಮನದಟ್ಟುಮಾಡಿದ ಈ ಸಂಕಿರಣ ಕನ್ನಡ ಭಾಷಾಬೋಧಕರಿಗೆ ಅತ್ಯಂತ ಉಪಯುಕ್ತ ಎನಿಸಿತು. ಸಂಘಟಿಸಿದ ಎಲ್ಲರೂ ಅಭಿನಂದನಾರ್ಹರು.

ಕೃಪೆ : http://www.udayavani.com

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published. Required fields are marked *