ಕನ್ನಡ ಗಾದೆಗಳು

ಕನ್ನಡ ಗಾದೆಗಳು

೦. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

೧. ಹಿತ್ತಲ ಗಿಡ ಮದ್ದಲ್ಲ.

೨. ಮಾಡಿದ್ದುಣ್ಣೋ ಮಹರಾಯ.

೩. ಕೈ ಕೆಸರಾದರೆ ಬಾಯಿ ಮೊಸರು.

೪. ಹಾಸಿಗೆ ಇದ್ದಷ್ತು ಕಾಲು ಚಾಚು.

೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.

೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.

೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.

೮. ಮನೇಲಿ ಇಲಿ, ಬೀದೀಲಿ ಹುಲಿ.

೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.

೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.

೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.

೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.

೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.

೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.

೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.

೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.

೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.

೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.

೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.

೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.

೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.

೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.

೨೫. ದೇವರು ವರ ಕೊಟ್ರು ಪೂಜಾರಿ ಕೊಡ.

೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.

೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.

೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.

೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.

೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?

೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.

೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.

೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.

೩೫. ಕಾಸಿಗೆ ತಕ್ಕ ಕಜ್ಜಾಯ.

೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.

೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.

೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.

೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.

೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.

೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು

ಹಾಳು.

೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.

೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.

೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.

೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.

೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.

೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.

೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?

೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.

೫೧. ಮಾತು ಬೆಳ್ಳಿ, ಮೌನ ಬ೦ಗಾರ.

೫೨. ಎಲ್ಲಾರ ಮನೆ ದೋಸೆನೂ ತೂತೆ.

೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.

೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.

೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.

೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.

೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.

೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.

೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?

೬೦. ಮನೆಗೆ ಮಾರಿ, ಊರಿಗೆ ಉಪಕಾರಿ.

೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?

೬೨. ಅಲ್ಪರ ಸ೦ಘ ಅಭಿಮಾನ ಭ೦ಗ.

೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.

೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.

೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?

೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.

೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?

೬೭. ಗಾಳಿ ಬ೦ದಾಗ ತೂರಿಕೋ.

೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.

೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.

೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.

೭೧. ದುಡ್ಡೇ ದೊಡ್ಡಪ್ಪ.

೭೨. ಬರಗಾಲದಲ್ಲಿ ಅಧಿಕ ಮಾಸ.

೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?

೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ

೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.

೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.

೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

೭೯. ಕ೦ತೆಗೆ ತಕ್ಕ ಬೊ೦ತೆ.

೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.

೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.

೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.

೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.

೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.

೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.

೮೭. ಓದುವಾಗ ಓದು, ಆಡುವಾಗ ಆಡು.

೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.

೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.

೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.

೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.

೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.

೯೩. ಮುಖ ನೋಡಿ ಮಣೆ ಹಾಕು.

೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.

೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?

೯೬. ತು೦ಬಿದ ಕೊಡ ತುಳುಕುವುದಿಲ್ಲ.

೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.

೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?

೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.

೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.

೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.

೧೦೨. ದುಡಿಮೆಯೇ ದುಡ್ಡಿನ ತಾಯಿ.

೧೦೩. ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.

೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.

೧೦೫. ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?

೧೦೬. ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.

೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.

೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.

೧೦೯. ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.

೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.

೧೧೧. ಹೊರಗೆ ಥಳಕು ಒಳಗೆ ಹುಳಕು.

೧೧೨. ಸ೦ಕಟ ಬ೦ದಾಗ ವೆ೦ಕಟರಮಣ.

೧೧೩. ಯಥಾ ರಾಜ ತಥಾ ಪ್ರಜಾ.

೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.

೧೧೫. ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.

೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.

೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.

೧೧೮. ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.

೧೧೯. ಬಡವನ ಕೋಪ ದವಡೆಗೆ ಮೂಲ.

೧೨೦. ಒಪ್ಪೊತ್ತು೦ಡವ ಯೋಗಿ, ಎರಡೂತ್ತು೦ಡವ ಭೋಗಿ,

ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.

೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.

೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.

೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.

೧೨೪. ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.

೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.

೧೨೬. ಕೋತಿಗೆ ಹೆ೦ಡ ಕುಡಿಸಿದ ಹಾಗೆ.

೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.

೧೨೮. ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.

೧೨೯. ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.

೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.

೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು

ಸ೦ಬ೦ಧ ಅ೦ದ ಹಾಗೆ.

೧೩೨. ನಾರಿ ಮುನಿದರೆ ಮಾರಿ.

೧೩೩. ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.

೧೩೪. ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.

೧೩೫. ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.

೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.

೧೩೭. ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.

೧೩೮. ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.

೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.

೧೪೦. ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.

೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.

೧೪೨. ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.

೧೪೩. ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.

೧೪೪. ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.

೧೪೫. ಬಾಯಿ ಬಿಟ್ಟರೆ ಬಣ್ಣಗೇಡು.

೧೪೬. ಸ೦ಕಟ ಬ೦ದಾಗ ವೆ೦ಕಟರಮಣ.

೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.

೧೪೮. ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.

೧೪೯. ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.

೧೫೦. ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.

೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.

೧೫೨. ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರ೦ತೆ.

೧೫೩. ಮೀಸೆ ಬ೦ದವನು ದೇಶ ಕಾಣ.

೧೫೪. ಊರು ಸುಟ್ಟರೂ ಹನುಮ೦ತರಾಯ ಹೊರಗೆ.

೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.

೧೫೬. ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.

೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.

೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.

೧೫೯. ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.

೧೬೦. ನರಿ ಕೂಗು ಗಿರಿ ಮುಟ್ಟುತ್ಯೇ ?

೧೬೧. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.

೧೬೨. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.

೧೬೩. ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.

೧೬೪. ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?

೧೬೫. ಕಾಸಿದ್ದರೆ ಕೈಲಾಸ.

೧೬೬. ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.

೧೬೭. ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.

೧೬೮. ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.

೧೬೯. ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.

೧೭೦. ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.

೧೭೧. ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.

೧೭೨. ಹೂವಿನ ಜೊತೆ ದಾರ ಮುಡಿಯೇರಿತು.

೧೭೩. ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.

೧೭೪. ಐದು ಬೆರಳು ಒ೦ದೇ ಸಮ ಇದುವುದಿಲ್ಲ.

೧೭೫. ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.

೧೭೬. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.

೧೭೭. ದೀಪದ ಕೆಳಗೆ ಯಾವತ್ತೂ ಕತ್ತಲೆ.

೧೭೮. ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.

೧೭೯. ಅತ್ತ ದರಿ, ಇತ್ತ ಪುಲಿ.

೧೮೦. ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.

೧೮೧. ಆಪತ್ತಿಗಾದವನೇ ನೆ೦ಟ.

೧೮೨. ಶ೦ಖದಿ೦ದ ಬ೦ದರೇನೇ ತೀರ್ಥ.

೧೮೩. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.

೧೮೪. ಎಲ್ಲಾ ಜಾಣ, ತುಸು ಕೋಣ.

೧೮೫. ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.

೧೮೬. ಮೂಗಿಗಿ೦ತ ಮೂಗುತ್ತಿ ಭಾರ.

೧೮೭. ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.

೧೮೮. ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.

೧೮೯. ಕಣ್ಣರಿಯದಿದ್ದರೂ ಕರುಳರಿಯುತ್ತದೆ.

೧೯೦. ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.

೧೯೧. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.

೧೯೨. ಇರೋ ಮೂವರಲ್ಲಿ ಕದ್ದೋರು ಯಾರು ?

೧೯೩. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.

೧೯೪. ತೋಳ ಬಿದ್ದರೆ ಆಳಿಗೊ೦ದು ಕಲ್ಲು.

೧೯೫. ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.

೧೯೬. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.

೧೯೭. ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.

೧೯೮. ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.

೧೯೯. ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.

೨೦೦. ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.

೨೦೧. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?

೨೦೨. ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.

೨೦೩. ಯುದ್ಧ ಕಾಲೇ ಶಸ್ತ್ರಾಭ್ಯಾಸ.

೨೦೪. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.

೨೦೫. ನಾಯಿ ಬಾಲ ಎ೦ದಿಗೂ ಡೊ೦ಕು.

೨೦೬. ಮಹಾಜನಗಳು ಹೋದದ್ದೇ ದಾರಿ.

೨೦೭. ಅರವತ್ತಕ್ಕೆ ಅರಳು ಮರಳು.

೨೦೮. ಜನ ಮರುಳೋ ಜಾತ್ರೆ ಮರುಳೋ.

೨೦೯. ಕು೦ಟನಿಗೆ ಎ೦ಟು ಚೇಶ್ಟೆ.

೨೧೦. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.

೨೧೧. ಬೊಗಳುವ ನಾಯಿ ಕಚ್ಚುವುದಿಲ್ಲ.

೨೧೨. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.

೨೧೩. ಕೈಗೆಟುಕದ ದ್ರಾಕ್ಷಿ ಹುಳಿ.

೨೧೪. ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.

೨೧೫. ದುಷ್ಟರ ಕ೦ಡರೆ ದೂರ ಇರು.

೨೧೬. ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.

೨೧೭. ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.

೨೧೮. ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

೨೧೯. ಹ೦ಗಿನರಮನೆಗಿ೦ತ ಗುಡಿಸಲೇ ಮೇಲು.

೨೨೦. ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.

೨೨೧. ಕದ್ದು ತಿ೦ದ ಹಣ್ಣು, ಪಕ್ಕದ ಮನೆ ಊಟ, ಎ೦ದೂ ಹೆಚ್ಚು ರುಚಿ.

೨೨೨. ಕುದಿಯುವ ಎಣ್ಣೆಯಿ೦ದ ಕಾದ ತವಾದ ಮೇಲೆ ಬಿದ್ದ ಹಾಗೆ.

೨೨೩. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.

೨೨೪. ಹಳೆ ಚಪ್ಪಲಿ, ಹೊಸ ಹೆ೦ಡತಿ ಕಚ್ಚೂಲ್ಲ.

೨೨೫. ರವಿ ಕಾಣದ್ದನ್ನು ಕವಿ ಕ೦ಡ.

೨೨೬. ಕೆಟ್ಟು ಪಟ್ಟಣ ಸೇರು.

೨೨೭. ಕಾಲಿನದು ಕಾಲಿಗೆ, ತಲೆಯದು ತಲೆಗೆ.

೨೨೮. ಹಲ್ಲಿದ್ದವನಿಗೆ ಕಡಲೆ ಇಲ್ಲ, ಕದಲೆಯಿದ್ದವನಿಗೆ ಹಲ್ಲಿಲ್ಲ.

೨೨೯. ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?

೨೩೦. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.

೨೩೧. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.

೨೩೨. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.

೨೩೩. ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತ೦ತೆ.

೨೩೪. ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.

೨೩೫. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?

೨೩೬. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.

೨೩೭. ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.

೨೩೮. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ.

೨೩೯. ತಾನೂ ತಿನ್ನ, ಪರರಿಗೂ ಕೊಡ.

೨೪೦. ಗ೦ಡಸಿಗೇಕೆ ಗೌರಿ ದುಃಖ ?

೨೪೧. ನಗುವ ಹೆ೦ಗಸು, ಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು.

೨೪೨. ಲೇ ! ಅನ್ನೋಕ್ಕೆ ಅವಳೇ ಇಲ್ಲ, ಮಗಳ ಹೆಸರು ಅನ೦ತಯ್ಯ.

೨೪೩. ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.

೨೪೪. ಗಾಯದ ಮೇಲೆ ಬರೆ ಎಳೆದ ಹಾಗೆ.

೨೪೫. ಗುಡ್ಡ ಕಡಿದು, ಹಳ್ಳ ತು೦ಬಿಸಿ, ನೆಲ ಸಮ ಮಾಡಿದ ಹಾಗೆ.

೨೪೬. ಅತಿ ಆಸೆ ಗತಿ ಕೇಡು.

೨೪೭. ವಿನಾಶ ಕಾಲೇ ವಿಪರೀತ ಬುದ್ಧಿ.

೨೪೮. ಅತಿಯಾದರೆ ಆಮೃತವೂ ವಿಷವೇ.

೨೪೯. ಬಡವ, ನೀ ಮಡಗ್ದ್ಹಾ೦ಗ್ ಇರು.

೨೫೦. ಆತುರಗಾರನಿಗೆ ಬುದ್ಧಿ ಮಟ್ಟ.

೨೫೧. ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.

೨೫೨. ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.

೨೫೩. ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.

೨೫೪. ಉ೦ಡೂ ಹೋದ, ಕೊ೦ಡೂ ಹೋದ.

೨೫೫. ಎಲೆ ಎತ್ತೋ ಜಾಣ ಅ೦ದರೆ ಉ೦ಡೋರೆಶ್ಟು ಅ೦ದನ೦ತೆ.

೨೫೬. ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.

೨೫೭. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.

೨೫೮. ಹಸಿ ಗೋಡೆ ಮೇಲೆ ಹರಳು ಎಸೆದ೦ತೆ.

೨೫೯. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.

೨೬೦. ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.

೨೬೧. ಲ೦ಘನ೦ ಪರಮೌಶಧ೦.

೨೬೨. ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ

೨೬೩. ಗಾಳಿಗೆ ಗುದ್ದಿ ಮೈ ನೋವಿಸಿಕೊ೦ದ ಹಾಗೆ.

ರಾಮರಾಜ್ಯ ಬಂದರೂ ರಾಗಿ ಬೀಸೋದು ತಪ್ಪಿತೆ?

ಜಗಳದಿಂದ ಕೌರವರು ಕೆಟ್ಟರು, ಹೆಣ್ಣಿನಿಂದ ರಾವಣ ಕೆಟ್ಟ.

ತಿರುಪತಿ ಕ್ಷೌರಿಕರು ತಲೆ ಬೋಳಿಸಿದಂತೆ!

ಕಾಲವಲ್ಲದ ಕಾಲದಲ್ಲಿ ಕಾಗೆ ರಾಗಿ ತಿಂದಿತು.

ಮಣ್ಣೇ ನೋಡದ ತಾಯಿ ನೀನು ಮಾಗಡಿ ನೋಡೋದು ದಿಟವ?

ತಲೆಮಾರಿನಿಂದ ತಲೆಮಾರಿಗೆ ಪರಂಪರಾಗತವಾಗಿ ಹರಿದು ಬಂದಿರುವ ಸಾಂದ್ರವೂ ಬೋಧಪರವೂ ಆದ ಸೂಕ್ತಿಯೇ ಗಾದೆ (ಪ್ರಾವರ್ಬ್). ಕನ್ನಡದಲ್ಲಿ ಗಾದೆ ಪದಕ್ಕೆ ಸಂವಾದಿಯಾಗಿ ನಾಣ್ಣುಡಿ ಎಂಬ ಪದವೂ ಪ್ರಚಲಿತವಿದೆ. ಗಾದೆ ಸಂಸ್ಕೃತದ ಗಾಥಾ ಪದದಿಂದ ಬಂದಿದ್ದೆಂದು ಹೇಳುತ್ತಾರೆ. ಇದು ಗಾಥಾ ಪದದ ನೇರ ತದ್ಭವವೊ ಅಥವಾ ಪ್ರಾಕೃತದ ಗಾಹೆಯ ಮೂಲಕ ಬಂದುದೊ ಹೇಳಲು ಇಷ್ಟ. ಆದರೆ ಗಾಥಾ ಎಂಬುದು ಮೂಲದಲ್ಲಿ ಒಂದು ಛಂದಸ್ಸಿನ ಜಾತಿಯನ್ನು ಸೂಚಿಸುತ್ತದೆಯೆಂದು ಮಾತ್ರ ಹೇಳಬಹುದು. ಅಂತು “ನಾಣ್ಣುಡಿ”ಯನ್ನು ಮರೆಸುವಷ್ಟರಮಟ್ಟಿಗೆ “ಗಾದೆ” ಪ್ರಚಾರದಲ್ಲಿದೆ. ಗಾದೆಗೆ ಸಂವಾದಿಯಾಗಿ ಸಾಮತಿ, ಸೂಕ್ತಿ, ಸೂತ್ರ, ಉದ್ಧರಣೆ, ಲೋಕೋಕ್ತಿ, ಪ್ರಾಚೀನೋಕ್ತಿ ಇತ್ಯಾದಿಗಳು ಬಳಕೆಯಾಗಿದ್ದರೂ ಮೂಲಾರ್ಥದಲ್ಲಿ ಇವೆಲ್ಲವೂ ಒಂದೇ ಎನ್ನಲಾಗುವುದಿಲ್ಲ.

ಜನಪದ ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಿಗಿಂತ ಗಾದೆ ವ್ಯಾಪಕವೂ ಜನ ಸಂಮುಖವೂ ಆಗಿದೆಯಲ್ಲದೆ, ಜನಸಾಮಾನ್ಯರ ಬದುಕು ಭಾಷೆಗಳಲ್ಲಿ ಹಾಸು ಹೊಕ್ಕಾಗಿದೆ. ಗ್ರಾಮೀಣ ಜನ ಮಾತನಾಡುವಾಗಲೆಲ್ಲ ಗಾದೆಗಳು ಪುಂಖಾನು ಪುಂಖವಾಗಿ ಬರುವುದನ್ನು ಕಾಣುತ್ತೇವೆ. ಅವಿಲ್ಲದೆ ಹೋದರೆ ಮಾತು ಸಪ್ಪೆಯಾಗುತ್ತದೆ. ಲಾದ್ದರಿಂದಲೆ ಸಮಯಕ್ಕೆ ಸರಿಯಾಗಿ ಗಾದೆ ಬಾರದೆ ಹೋದರೆ, ಹಿಂದಕ್ಕೆ ಏನೋ ಗಾದೆ ಹೇಳಿದ ಹಾಗಾಯ್ತು ಎಂದು ಹೇಳುವುದರ ಮೂಲಕ ಅದರ ಅವಶ್ಯಕತೆಯನ್ನು ಒತ್ತಿ ಹೇಳುತ್ತಾರೆ. ಗಾದೆ ಆಡುಮಾತಿನ ಜೀವಸತ್ತ್ವ ಎಂಬುದನ್ನು ಇದು ತೋರಿಸಿಕೊಡುತ್ತದೆ. ಊಟಕ್ಕೆ ಉಪ್ಪಿನಕಾಯಿಯಂತೆ ಗಾದೆ ಮಾತಿಗೆ ವ್ಯಂಜನಶಕ್ತಿಯನ್ನು ಒದಗಿಸುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯೇ ಗಾದೆಯ ಸ್ವರೂಪವನ್ನು ತಿಳಿಸುತ್ತದೆ. ಇದು ಆಕಾರದಲ್ಲಿ ವಾಮನವಾಗಿ ಅರ್ಥದಲ್ಲಿ ತ್ರಿವಿಕ್ರಮವೆನಿಸಿದೆ.

ಗಾದೆ ಜನಜೀವನದ ವ್ಯಾಪಕ ಸತ್ತ್ವ,. ತತ್ತ್ವ; ನೂರು ಭಾವದ ನೂರು ವಿಷಯದ ನೂರು ಅಭಿವ್ಯಕ್ತಿ. ಇಲ್ಲಿ ವ್ಯಕ್ತಗೊಂಡಿರುವ ಅನುಭವಜಗತ್ತು ಅನ್ಯಾದ್ಯಶವಾದುದು. ಹಾಗೆ ನೋಡಿದಾಗ ಇವುಗಳ ಕರ್ತಾರರನ್ನು ಅಸಂಸ್ಕೃತರೆನ್ನುವುದು ದೂರದ ಮಾತಾಗಿಯೇ ಉಳಿಯುತ್ತದೆ. ಗ್ರಾಮಜೀವನಕ್ಕೆ ಕಾಲಿರಿಸಿದ ಕೂಡಲೆ ಇಂಥ ಗಾದೆಗಳ ಬಿಸಿ ತಾಗುತ್ತದೆ. ಕೆಲವು ಬೆಳದಿಂಗಳಿನಂತೆ ತಂಪಾದರೆ, ಮತ್ತೆ ಕೆಲವು ಬಿಸಿಲಿನಂತೆ ಮೈ ಸುಡುತ್ತವೆ; ಬೆಂಕಿಯ ಕಿಡಿಗಳಂತೆ ಕೆಲವಾದರೆ, ಇಬ್ಬನಿಯಂಥವು ಮತ್ತೆ ಕೆಲವು; ಕೆಲವು ಮುತ್ತಿಕ್ಕಿದರೆ, ಮತ್ತೆ ಕೆಲವು ಮುತ್ತಿಗೆ ಹಾಕುತ್ತವೆ. ಇನ್ನು ಕೆಲವಂತೂ ಸಿಡಿಲಪೊಟ್ಟಣಗಳೇ ಸರಿ. ಇವಕ್ಕೆ ಅಪಮೌಲ್ಯದ ಭಯವಿಲ್ಲ, ಕೊಳೆಕಟ್ಟಿ ಮಾಸಿಹೋಗುತ್ತವೆ ಎಂಬ ಶಂಕೆಯಿಲ್ಲ. ಇವು ನೀರಸ ಕವಿಸಮಯಗಳಲ್ಲ, ವಿಚಾರದ ವಿಸ್ಫುಲಿಂಗಗಳು; ಸೂಕ್ತ ಸಂದರ್ಭಗಳಲ್ಲಿ ತಾಳಿದ ಯೋಗ್ಯ ನಿರ್ಣಯಗಳು.

ಗಾದೆ ಹಲವಾರು ಮಾತುಗಳ ಘಟಕ. ಆದ್ದರಿಂದಲೇ ಅದು ಸಾವಿರ ಮಾತಿನ ಸರದಾರ. ಅದು ಹಲವರ ಜ್ಞಾನ. ಒಬ್ಬನ ವಿವೇಕ ವ್ಯಾಖ್ಯಾನವನ್ನು ಅಪೇಕ್ಷಿಸುವ ಹೇಳಿಕೆ. ರಾಷ್ಟ್ರೀಯ ಮಣ್ಣಿನಲ್ಲಿ ಬೆಳೆದ ಬೆಳೆ. ಜರ್ಮನ್ ಗಾದೆಗಳ ಸಂಗ್ರಹಕಾರ ಇಸೆಲಿಯನ್ನನ ಪ್ರಕಾರ, ಗಾದೆಗಳೆಂದರೆ ಜನಸಾಮಾನ್ಯರಲ್ಲಿ ಚಲಾವಣೆಯಲ್ಲಿರುವ, ಸಾರ್ವಜನಿಕ ಮುದ್ರೆ ಬಿದ್ದಿರುವ, ಪ್ರಚಲಿತವೂ ಸ್ವೀಕೃತ ಮೌಲ್ಯಭರಿತವೂ ಆಗಿರುವ ನಾಣ್ಯ. ಎಸ್. ಜಿ. ಚಾಂಪಿಯನ್ ಎಂಬ ವಿದ್ವಾಂಸ ತನ್ನ ಜಾನಾಂಗಿಕ ಗಾದೆಗಳು ಎಂಬ ಬೃಹತ್ ಸಂಕಲನಕ್ಕೆ ಪ್ರಸ್ತಾವನೆ ಬರೆಯುತ್ತ ಹೀಗೆ ಹೇಳಿದ್ದಾನೆ: ನನ್ನ ಅಭಿಪ್ರಾಯದಲ್ಲಿ ಗಾದೆಯೆಂದರೆ, ಜನರ ಬಳಕೆಯಲ್ಲಿದ್ದು, ಈಗಲೂ ಇರುವ, ಉಪದೇಶಾತ್ಮಕ ಅಥವಾ ಸಲಹೆಯನ್ನು ನೀಡುವ, ನಿಜವಾದ ಅರ್ಥವನ್ನು ಮರೆಸಿ ಅಲಂಕಾರಿಕವಾಗಿ ವ್ಯಕ್ತವಾಗಿರುವ, ರೂಪಕ ಅಥವಾ ಗೂಢಾರ್ಥದ್ಯೋತಕವಾಗಿ ಕಾಣಿಸಿಕೊಳ್ಳುವ ಜನಾಂಗವೊಂದರ ಸೂಕ್ತಿ. ಇನ್ನೊಬ್ಬ ವಿದ್ವಾಂಸ ಜೆ. ಎ. ಕೆಲ್ಸೊ ಗಾದೆಗಳಲ್ಲಿ ನಾಲ್ಕು ಗುಣಗಳನ್ನು ಹೆಸರಿಸುತ್ತಾನೆ: ಸಂಕ್ಷಿಪ್ತತೆ, ವಿವೇಕ ಪೂರ್ಣತೆ, ತೀಕ್ಷ್ಣತೆ ಮತ್ತು ಜನಪ್ರಿಯತೆ. ಇವುಗಳ ಒಂದೊಂದರ ವಿವರಣೆ ಅಗತ್ಯವೆನಿಸುತ್ತದೆ.

ಗಾದೆ ಅವಶ್ಯ ಪದಗಳ ಮಿತವ್ಯಯವೇ ಸರಿ. ಅಲ್ಲದೆ ಗಾದೆಯಲ್ಲಿ ೨೦ ಪದಗಳಿಗಿಂತ ಹೆಚ್ಚು ಇರಬಾರದೆಂದು ವಿದ್ವಾಂಸರು ಹೇಳುತ್ತಾರೆ. ಯಾವ ಭಾಷೆ ಅವ್ಯಯ ಮತ್ತು ಪ್ರತ್ಯಯಗಳಲ್ಲಿ ಸಂಪದ್ಯುಕ್ತವಾಗಿರುತ್ತದೊ ಅದು ಗಾದೆ ನಿರ್ಮಾಣಗೊಳ್ಳುವಾಗಲೆ ಹೆಚ್ಚು ವಿಷಯಗಳನ್ನು ತನ್ನಲ್ಲಿ ಅಡಕಮಾಡಿಕೊಳ್ಳುತ್ತದೆ ಎಂದೂ ಒಂದು ಅಭಿಪ್ರಾಯವಿದೆ. ಗಾದೆ ಸಂಕ್ಷಿಪ್ತವಾಗಿರಬೇಕೆಂಬುದನ್ನು ಈ ಎಲ್ಲ ಮಾತುಗಳು ಸಮರ್ಥಿಸುತ್ತವೆ. ಆದರೆ ಕೆಲವು ಗಾದೆಗಳು ಸಹಜವಾಗಿ, ನೀಡಿದಾಗಿರುವುದರಿಂದ, ಸಂಕ್ಷಿಪ್ತತೆಗೆ ಇವನ್ನು ಅಪವಾದಗಳಾಗಿ ಪರಿಗಣಿಸಬೇಕಾಗುತ್ತದೆ. ಈ ದೀರ್ಘ ಗಾದೆಗಳು ಶಕ್ತ ನಿರೂಪಣೆ, ಸೂಚ್ಯ ಭಾವುಕತೆ, ಪ್ರಾದೇಶಿಕತೆಗಳಿಗೆ ಹೆಸರಾಗಿದ್ದರೂ ಅನುಭವ ಸಾಂದ್ರತೆಯಲ್ಲಿ ಚಿಕ್ಕ ಗಾದೆಗಳ ಹಾಗೆ ವರ್ಚಸ್ವಿಯಾಗಲಾರವೆಂದು ತೋರುತ್ತದೆ.

ಗಾದೆಯ ಮತ್ತೊಂದು ಅಂಶ ವಿವೇಕಪೂರ್ಣತೆ. ಗಾದೆ ಜನಪ್ರಿಯವಾಗಬೇಕಾದರೆ ಬಹಳ ಕಾಲ ಬಾಳಿಕೆ ಬರಬೇಕಾದರೆ ಕಡೆಯ ಪಕ್ಷ ಅದು ವಿವೇಕಯುತವಾಗಿ ಇರಬೇಕಾಗುತ್ತದೆ. ಆದರೂ ಒಂದು ವಿಷಯ ಉಳಿಯುತ್ತದೆ. ವಿವೇಕಯುತವಾದ ಇಂಥ ಕೆಲವು ಸೂಕ್ತಿಗಳು ಮಾತ್ರ ಗಾದೆಗಳಾಗಿ ಉಳಿದವು ಆಗಲಾರವು. ಮುಂದೆ ಅವು ಕಳೆದುಹೋಗಬಹುದು ಅಥವಾ ಸಾಂದರ್ಭಿಕ ಉದ್ಧರಣೆಗಳಾಗಿ ಉಳಿಯಬಹುದು. ಇದಕ್ಕೆ ಕಾರಣ ಭಾಗಶಃ ಸಾಂದ್ರತೆ; ಇದರಿಂದಾಗಿಯೇ ಗಾದೆ ಸಾರ್ವಜನಿಕರ ಸ್ವೀಕಾರಾರ್ಹತೆಯನ್ನು ಪಡೆದುಕೊಂಡಿರುವುದು.

ಗಾದೆ ತೀವ್ರಾನುಭವದ ಪರಿಣಾಮಕಾರಿ ಅಭಿವ್ಯಕ್ತಿಯಾಗಿರುವುದೇ ಅದರ ತೀಕ್ಷಣತೆ. ಸೂಕ್ಷ್ಮಸಂವೇದನಾಶೀಲತೆಯೇ ಇದಕ್ಕೆ ಕಾರಣ. ಒಮ್ಮೆಗೇ ನಮ್ಮ ಹೃದಯವನ್ನು ಆಕ್ರಮಿಸುವ ಸಾಮರ್ಥ್ಯ ಅದರದು. ಯಾವುದೇ ವಿಷಯವನ್ನು ಮನಮುಟ್ಟವಂತೆ ಹೇಳುವ ಸ್ವಭಾವ ಅದರದು. ಗಾದೆಯ ಮತ್ತೊಂದು ಮಹತ್ತ್ವದ ಲಕ್ಷಣ ಜನಪ್ರಿಯತೆ. ನಿಜವಾದ ಅರ್ಥದಲ್ಲಿ ಅದು ಜನತೆಯದಾಗಿರಬೇಕೆಂಬುದೇ ಇದರ ತಾತ್ಪರ‍್ಯ. ಒಟ್ಟಿನಲ್ಲಿ ಗಾದೆಗಳು ಚಿಕ್ಕವು. ಪ್ರಸಕ್ತ ವಿಷಯಕ್ಕೆ ಮಾತ್ರ ಸಂಬಂಧಿಸಿದವು. ರಚನೆಯಲ್ಲಿ ಒಪ್ಪವಾದವು, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುವಂಥವು.

ಗಾದೆಗಳಿಗೆ ಕೆಲವು ನಿರ್ದಿಷ್ಟ ಶೈಲಿಯ ತಂತ್ರಗಳಿವೆ: ಛಂದೋಬದ್ಧತೆ, ಪ್ರಾಸಾನುಪ್ರಾಸ, ಯಮಕ, ಪುನರಾವೃತ್ತಿ, ನಾಟಕೀಯತೆ, ಅಲಂಕಾರ ಮುಮತಾದವು ಅವುಗಳಲ್ಲಿ ಕೆಲವು. ಇವುಗಳ ಯೋಜಿತ ಅಭಿವ್ಯಕ್ತಿಯೇ ಗಾದೆ. ಸುಲಭವಾಗಿ ನೆನಪರಿಸಿಕೊಳ್ಳುವುದಕ್ಕೆ ಇವು ನೆರವಾಗುತ್ತವೆ. ಇದಕ್ಕೆ ಯಾವುದೇ ಗಾದೆ ನಿದರ್ಶನವಾಗಬಲ್ಲುದು. ಇಂಥ ಗಾದೆಗಳಲ್ಲಿ ಅತ್ಯುಕ್ತಿ ಮತ್ತು ವಿರೋಧಾಭಾಸಗಳೆರಡೂ ದೊಡ್ಡ ಲಕ್ಷಣಗಳು. ಇಲ್ಲಿ ಅತ್ಯುಕ್ತಿಯೆಂದರೆ ಅತಿಶಯವಾದ ಮಾತೆಂದು ಅರ್ಥ ಮಾಡಿಕೊಳ್ಳಬೇಕು. ಧ್ವನಿ ಮಾರ್ಗವನ್ನು ಇದು ಸೂಚಿಸುತ್ತದೆ.

ಗಾದೆಯ ಒಂದು ವಿಶೇಷ ಲಕ್ಷಣ ಸಮತೋಲನ. ಇದು ಗಾದಯ ಸಹಜ ಗುಣವೆಂದು ತೋರುತ್ತದೆ. ಉದಾಹರಣೆಗೆ: ನಾಳೆ ನೋಡು ನಮ್ಮ ರಂಗನ ಮೋಟ, ತೆಗೆದು ನೋಡು ನಮ್ಮ ಅಮ್ಮಿಯ ಮುಸುಕ, ಆದಷ್ಟೇ ಆರಂಭ, ಹೂದಷ್ಟೇ ಮಳೆಗಾಲ-ಇತ್ಯಾದಿ. ಇಲ್ಲಿ ಎರಡು ಸಮಭಾಗಗಳು ಕಾಣಿಸಿಕೊಳ್ಳುತ್ತವೆ. ಪೂರ್ವೋತ್ತರ ಭಾಗಗಳೆರಡೂ ಛಂದಸ್ಸಿನಲ್ಲಿ, ಕಡೆಗೆ ಅಕ್ಷರಗಳ ಸಂಖ್ಯೆಯಲ್ಲಿ ಸಮನಾಗಿ ಬಂದಿವೆ. ಸಮತೋಲನ ಚಿಕ್ಕ ಗಾದೆಗಳಲ್ಲಿ ಕಾಣಬರುವಂತೆ, ತೀರ ದೀರ್ಘ ಗಾದೆಗಳಲ್ಲಿ ಕಾಣಬರದು. ಇಷ್ಟಕ್ಕೂ ಚಿಕ್ಕ ಗಾದೆಗಳೇ ಅತ್ಯುತ್ತಮ ಗಾದೆಗಳೆಂದು ಹೆಸರಾಗಿವೆ.

ಗಾದೆಗಳಲ್ಲಿ ಹಾಸ್ಯ ಮತ್ತು ವಿಡಂಬನೆಗಳೂ ಬರುತ್ತವೆ. ಇವೆರಡೂ ಕೆಲವೊಮ್ಮೆ ಒಂದಾಗಿಯೂ ಕೆಲವೊಮ್ಮೆ ಬೇರೆ ಬೇರೆಯಾಗಿಯೂ ಬರುತ್ತವೆ. ಉದಾಹರಣೆಗೆ: ಮೋಜು ಬಂದಾದೆ ಮೊಗ ಕ್ವಾರೆ ಅಂದ, ನನ್ಗೂ ಮೋಜು ಬಂದಾದೆ ಕದಿನ ಮೂಲ್ಗೆ ಬಿಸ್ಹಾಕಿ ಅಂದ್ಲು. ಯಾವುದೇ ಮರ್ಮವಿಲ್ಲದೆ ನಗಿಸಬಲ್ಲ ಗಾದೆ ಇದು. ಇಂಥ ಹಾಸ್ಯ ಚಿತ್ರಗಳಲ್ಲಿ ಸಂಭಾಷಣೆಯೊಂದು ವಿಶೇಷ. ಮತ್ತೊಂದು ಗಾದೆ; ದುಡುವಂತೆ ಧೂಪ ಹಾಕಿದ್ರೆ, ಗುಡಿಕಲ್ಲೆಲ್ಲ ದಡಾರ್ ಅಂದೊ-ಇಲ್ಲಿಯ ವಿಡಂಬನೆ ಅತ್ಯಂತ ಮೊನಚಾದುದು. ಕೆಲವೊಮ್ಮೆ ತಿಳಿಹಾಸ್ಯದಲ್ಲಿಯೇ ವಿಡಂಬನೆ ಮೈ ತಾಳಬಲ್ಲುದು. ಸಾಯ್ತಿನಿ ಸಾಯ್ತಿನಿ ಅಂತ, ಸಾವಿರ ಕೋಳಿ ತಿಂದನಂತೆ. ಸಮಾಜವನ್ನು ಪ್ರತಿಬಿಂಬಿಸುವುದರಲ್ಲಿ ಗಾದೆಗಳ ಪ್ರಾಮುಖ್ಯ ಇದೆ. ಜನಪದ ತನ್ನ ಸುತ್ತಮುತ್ತಲ ಸಾಮಗ್ರಿಯನ್ನು ದೃಷ್ಟಾಂತ ರೂಪಕಗಳನ್ನಾಗಿ ಮಾಡಿಕೊಳ್ಳುತ್ತದೆ. ಅನುಭವದ ಪ್ರಾಮಾಣಿಕತೆಗೆ ಕಾವ್ಯತೆಯ ಸೂಕ್ಷ್ಮದೃಷ್ಟಿಯನ್ನು ತೊಡಿಸುತ್ತದೆ.

ಸಾಮಾನ್ಯವಾಗಿ ಬಳಕೆಯಲ್ಲಿರುವ ಬಹುತೇಕ ಗಾದೆಗಳು ದೈನಂದಿನ ಜೀವನದಿಂದ ತೆಗೆದುಕೊಂಡ ಅಥವಾ ಪ್ರಕೃತಿ ಪರಿಶೀಲನದಿಂದ ಎತ್ತಿಕೊಂಡ ರೂಪಕಗಳು ಅಥವಾ ಅನುಭವದ ಘನೀಕರಣಗಳು. ಕೆಲವು ಗಾದೆಗಳು ಕೌಟುಂಬಿಕ ಕಸುಬುಗಳಿಗೆ ಸಂಬಂಧಿಸಿದ ಆಧಾರಗಳನ್ನು ಒದಗಿಸುತ್ತವೆ. ಸ್ವೀಕೃತ ನಂಬಿಕೆಯೊಂದು ಗಾದೆಯಾಗಿ ವ್ಯಕ್ತವಾಗಿರಬಹುದು. ಉದಾ: ಸೀಟಗಾಲಿ ಇದ್ದ ಮನೆ ಹಾಳು, ದಾಟಗಾಲ ಇದ್ದ ತೋಟ ಹಾಳು, ಗಾದೆಯೊಂದು ಒಗಟಾಗುವ ಸಾಧ್ಯತೆಯೂ ಉಂಟು. ಉದಾ: ಚಿಕ್ಕಕ್ಕನಿಗೆ ಪುಕ್ಕುದ್ದ. ಕೆಲವು ಗಾದೆಗಳು ಕಥೆಗಳ ಬಾಲಗಳಾಗಿರುತ್ತವೆ. ಉದಾ: ದಪ್ಪ ತರ ದಾ, ಆದಂಗಾಯ್ತು ಚೂ, ಅನ್ಯೋಕ್ತಿಯನ್ನು ಹೋಲುವಂಥ ಗಾದೆಗಳು ವಿರಳ.

ಕೆಲವು ಗಾದೆಗಳು ಪೌರಾಣಿಕ ವಿಷಯವನ್ನು ಆಧರಿಸಿ ರಚನೆಯಾಗಿರುತ್ತವೆ. ಉದಾಹರಣೆಗೆ, ಪಕ್ಷ ಪಾಂಡವರಲ್ಲಿ, ಊಟ ಕೌರವರಲ್ಲಿ; ಅಂತು ಇಂತು ಕುಂತಿಯ ಮಕ್ಕಳಿಗೆ ರಾಜ್ಯವಿಲ್ಲ-ಇತ್ಯಾದಿ. ಚಾರಿತ್ರಿಕ ಸಂದರ್ಭಗಳನ್ನು ಕುರಿತ ಗಾದೆಗಳೂ ಪ್ರಚಲಿತವಾಗಿವೆ. ಉದಾ: ಕೃಷ್ಣರಾಯ ಭೂಪ, ಮನೆಮನೆಗೆ ದೀಪ. ಕಾನೂನಿನ ಗಾದೆಗಳು ಕಾನೂನು ತತ್ತ್ವದ ಸಂಕ್ಷಿಪ್ತ ಹೇಳಿಕೆಗಳು. ವೈದ್ಯಕೀಯ ಗಾದೆಗಳು ಇನ್ನೊಂದು ಬಗೆಯವು. ಆರೋಗ್ಯವನ್ನು ಕುರಿತಾದ ಹಳೆಯ ನಿಯಮಗಳನ್ನು ಇವು ಹೇಳುತ್ತವೆ. ಹವಾಮಾನದ ಗಾದೆಗಳೂ ಸಾಂಪ್ರದಾಯಿಕವಾಗಿ ಬಂದಿವೆ. ಇವು ಋತುಮಾನಗಳ ವಿಷಯವನ್ನು ವ್ಯವಸಾಲಯ ವಿಷಯವನ್ನೂ ಕುರಿತು ಹೇಳುತ್ತವೆ. ಉದಾಹರಣೆಗೆ: ಅಶ್ವೀಜದಲ್ಲಿ ಹೊನ್ನು ಕರಗುವ ಬಿಸಿಲು, ಮಣ್ಣು ಕರಗುವ ಮಳೆ; ಅತ್ತದ ಮಳೆ ಎತ್ತಲಿಂದಾದರೂ ಬರುತ್ತದೆ; ರೋಹಿಣಿ ಮಳೆಯಲ್ಲಿ ಓಣಿಯೆಲ್ಲ ಜೋಳ, ಗೌರಿ ಹೊತ್ತಿಗೆ ಗಡಿಗೆ ಮುಳುಗಬೇಕು, ಇತ್ಯಾದಿ.

ಕೆಲವು ಸಾರಿ ಹೋಲಿಕೆಗಳೂ ಗಾದೆಗಳಾಗಬಹುದು. ಆದರೆ ಈ ಬಗೆಯ ಗಾದೆಗಳು ಕ್ರಮೇಣ ಜನಪ್ರಿಯತೆಯನ್ನು ಕಳೆದುಕೊಂಡು ಬಳಕೆಯಿಂದ ತಪ್ಪಿ ಹೋಗುವ ಸಾಧ್ಯತೆ ಇದೆ. ಸಂಪ್ರದಾಯದಲ್ಲಿ ಮತ್ತು ಸಾಹಿತ್ಯದಲ್ಲಿ ಕಂಡು ಬರುವ ಅನೇಕ ಮಾತುಗಾರಿಕೆಗಳು ಗಾದೆಗಳಿಗೆ ಸಂಬಂಧಿಸಿವೆ. ಕೆಲವೊಮ್ಮೆ ಗಾದೆಗಳು ಮೊದಲೇ ಇದ್ದ ಮಾದರಿಗಳ ಮೇಲೆ ರಚಿತವಾಗಿರುತ್ತವೆ. ಗಾದೆಯ ಇನ್ನೊಂದು ವರ್ಗ ಕ್ಷೀಷೆಗಳು ಅಥವಾ ಚರ್ವಿತಚರ್ವಣಗಳು. ಇವು ಪೂರ್ಣ ವಾಕ್ಯವಾಗಿರುವುದಕ್ಕಿಂತ ಹೆಚ್ಚಾಗಿ ವಾಕ್ಯಾಂಗಗಳಾಗಿರುತ್ತವೆ. ವಂಶಲಾಂಛನಗಳನ್ನು ಕುರಿತ ಗಾದೆಗಳು ಮತ್ತೊಂದು ಬಗೆಯವು. ಇವು ಜನರ ಮತ್ತು ಸ್ಥಳಗಳ ಗುಣವಿವರಣೆ ಮಾಡುವ ಹೆಸರುಗಳು, ನುಡಿಗಟ್ಟುಗಳು.

ಗಾದೆಗಳ ಒಂದು ವಿಶೇಷತೆಯೆಂದರೆ, ಅವು ಆಧ್ಯಾತ್ಮಿಕ ಭೂಮಿಕೆಗೆ ಪ್ರವೇಶಿಸದೆ ಇರುವುದು. ಧರ್ಮಬೋಧಕರ ಪ್ರವಚನಗಳಾಗಲಿ, ಉಪದೇಶಗಳಾಗಲಿ ಗಾದೆಗಳಾಗಿ ಪರಿವರ್ತಿತವಾಗುವುದಿಲ್ಲ. ಇವು ನೀತಿಯನ್ನೇನೊ ಹೇಳುತ್ತವೆ ನಿಜ; ಆದರೆ, ಧಾರ್ಮಿಕ ಸಿದ್ಧಾಂತಗಳನ್ನಾಗಲಿ, ವೇದಾಂತಪರ ವಿಚಾರಗಳನ್ನಾಗಲಿ ಒಳಗೊಂಡಿರುವುದಿಲ್ಲ. ಲಾದರೆ ಜನತೆ ಯಾವುದನ್ನು ಸತ್ಯವೆಂದು ಗೌರವಿಸಿದೆಯೊ ಅದಕ್ಕೆ ಸೂಚಿಯಾಗಿವೆ; ಲೋಕದಿಂದ ಪಡೆದುಕೊಂಡ ಅನುಭವದ ಒಟ್ಟು ಮೊತ್ತವಾಗಿವೆ.

ಈಗ ಗಾದೆಗಳ ಸಾಮ್ಯ ಮತ್ತು ಸಾರ್ವತ್ರಿಕತೆ. ಸಮಾನ ಗಾದೆಗಳು ಜಗತ್ತಿನ ಎಲ್ಲ ಭಾಷೆಗಳಲ್ಲಿಯೂ ಕಾಣಸಿಗುತ್ತವೆ. ಭಾಷೆ ಬೇರೆಯಾದರೂ ಭಾಷಿತ ಒಂದೇ. ಇದಕ್ಕೆ ಕಾರಣವನ್ನು ಹುಡುಕುತ್ತ ಕೆಲವರು, ಅವನ್ನು ಅಂತರರಾಷ್ಟ್ರೀಯ ಅಲೆಮಾರಿ ಎಂದು ಕರೆದರು. ಗಾದೆಗಳು ಪ್ರಯಾಣ ಮಾಡುತ್ತವೆ ಎಂಬುದು ಇದರ ಅರ್ಥ. ಗಾದೆಗಳ ದೇಶಾತೀತ ಆಷಾತೀತ ಲಕ್ಷಣಕ್ಕೆ ಈ ವಿವರಣೆ ಸಮಂಜಸವೆಂದು ತೋರಲಾರದು. ಮೂಲಭೂತವಾಗಿ ಮಾನವರೆಲ್ಲ ಒಂದೇ ರೀತಿ ಆಲೋಚಿಸುತ್ತಾರೆಂಬುದು ಇದಕ್ಕೆ ಕಾರಣವಿರಬೇಕೆಂದು ತೋರುತ್ತದೆ. ಮೂಲಪ್ರವೃತ್ತಿಗಳಾದ ಪ್ರೀತಿ, ಹಸಿವು, ಭಯಗಳು ಅಸಂಸ್ಕೃತ ಸುಸಂಸ್ಕೃತರೆನ್ನದೆ ಸಮಾನವಾಗಿರುವ ವಿಷಯಗಳು-ಈ ಪ್ರವೃತ್ತಿಗಳನ್ನು ನಾಗರಿಕತೆಗಳಾಗಲಿ, ವಾತಾವರಣಗಳಾಗಲಿ ನಿವಾರಿಸಲಾರವು. ಮಾರ್ಪಡಿಸಲಾರವು. ಆದ್ದರಿಂದ ಗಾದೆಯ ಜ್ಞಾನ ಜಗತ್ತಿನಲ್ಲೆಲ್ಲ ಒಂದೆಯೇ. ಭಿನ್ನತೆಯೇನಿದ್ದರೂ ಅದರ ಪ್ರಕಟಣೆಯಲ್ಲಿ. ಹೀಗೆ ಗಾದಯ ಸಾಮ್ಯತೆ ಮತ್ತು ಸಾರ್ವತ್ರಿಕತೆಗೆ ಸ್ವತಂತ್ರ ಮೂಲ ಸಿದ್ಧಾಂತವನ್ನು ಕಾರಣವಾಗಿಕೊಡಬಹುದು. ಇಷ್ಟಾದರೂ ಗಾದೆಗಳನ್ನು ಸ್ವೀಕರಣ ಮಾಡಿಕೊಂಡಿರುವ ಉದಾಹರಣೆಗಳನ್ನು ತೆಗೆದು ಹಾಕುವಂತಿಲ್ಲ. ದೇಶಗಳ ಆಕ್ರಮಣ, ಅಂತರ್ಜಾತಿ ವಿವಾಹ, ರಾಜಕೀಯ ಸಾಂಸ್ಕೃತಿಕ ಸಂಬಂಧ ಮೊದಲಾದವುಗಳಿಂದ ಗಾದೆ ದೇಶದಿಂದ ದೇಶಕ್ಕೆ ಹೋಗಿರಲು ಸಾಧ್ಯವಿದೆ.

ಗಾದೆಯ ಉಗಮವನ್ನು ಕುರಿತು ನಿರ್ದಿಷ್ಟವಾಗಿ ಹೇಳಲಾಗದು. ಇದು ಜನಪದ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದುದು. ಸಮಾಜದಷ್ಟು ಹಳೆಯದು. ಒಂದು ಕಡೆ ಗಾದೆ ಯಾರೊಬ್ಬ ಜನ್ಮದಾತನೂ ಇಲ್ಲದೆ ಕ್ರಮೇಣ ಜನತೆಯ ನಡುವೆ. ಜನತೆಯದಾಗಿ ವಿಕಾಸವಾದುದಾಗಿರಬೇಕು. ಇನ್ನೊಂದು ಕಡೆ, ಸುತ್ತ ಮುತ್ತಲ ಜಗತ್ತಿನೊಡನೆ ಸಂಪರ್ಕ ಕಲ್ಪಸಿಕೊಳ್ಳುವಾಗ ಸಂದರ್ಭ ಸೂತ್ರವಾಗಿ ಬುದ್ಧಿವಂತನೊಬ್ಬನಿಂದ ಜಿಗಿದಿರಬೇಕು. ಹಲವರ ಅನ್ನಿಸಿಕೆ ಜ್ಞಾನಾನುಭವಗಳು ಒಬ್ಬನ ಸೃಷ್ಟಿವಿವೇಕದಲ್ಲಿ ಮೂಡಿ ಗಾದೆಯಾಯಿತು. ಆದರೆ ಸಂಪ್ರದಾಯ ಇದನ್ನು ಕೈಗೆತ್ತಿಕೊಳ್ಳುವ ತನಕ ಇದು ಕೇವಲ ವಸ್ತುಸ್ಥಿತಿಯೊಂದರ ಸೂತ್ರಮಯ ಹೇಳಿಕೆಯಾಗಿತ್ತು ಅಥವಾ ಬೋಧಪ್ರದ ದೃಷ್ಟಾಂತವಾಗಿತ್ತು ಸಂಪ್ರದಾಯ ಸ್ವೀಕರಿಸಿದಾಗ, ಅನುಕರಿಸಲಾಗದ ರೀತಿಯಲ್ಲಿ ಅದನ್ನು ಹೊಂದಿಸಿಕೊಂಡಿತು. ಮಾರ್ಪಡಿಸಿಕೊಂಡಿತು. ಆದ್ದರಿಂದ ಸೃಷ್ಟಿ ಮತ್ತು ಸ್ವೀಕಾರಗಳೆರಡೂ ಗಾದೆಯೊಂದು ರೂಪ ತಾಳುವುದಕ್ಕೆ ಅವಶ್ಯಾಂಶಗಳಾಗುತ್ತವೆ. ಈ ಕ್ರಿಯೆಯಲ್ಲಿ ಮೂಲ ಮರೆತುಹೋಗುತ್ತದೆ. ಒಂದೇ ವಸ್ತು ಹಾಗೂ ಒಂದೇ ಸೂತ್ರರೂಪ ಒಬ್ಬನಿಗಿಂತ ಹೆಚ್ಚಿನವರಲ್ಲಿ ದೊರೆಯುವುದರಿಂದ, ಗಾದೆಗಳ ಮೂಲ ತೊಡಕಾಗಿದೆ. ಆದ್ದರಿಂದ ವೈಯಕ್ತಿಕತೆಯನ್ನು ಒಟ್ಟುಗೂಡಿಸಿಕೊಂಡ ಸಾಮೂಹಿಕ ಸೃಷ್ಟಿ ಇದೆಂದು ಹೇಳಬಹುದಾಗಿದೆ. ಹೀಗೆ ಗಾದೆ ಸಮಷ್ಟಿಯ ಸ್ವತ್ತಾದ ಮೇಲೆ, ಅದು ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಬೆಳೆಯಿತು. ಉಳಿಯಿತು. ಈ ರೀತಿ ಪ್ರಯಾಣ ಮಾಡುವಾಗ ಗಾದೆ ಹರಿತವಾಯಿತು, ರೂಪಾಂತರಗಳನ್ನು ಪಡೆಯಿತು. ಸಾರ್ವತ್ರಿಕ ಜನಪ್ರಿಯತೆಯ ಮುದ್ರೆಯೊಂದು ಅದರ ಮೇಲೆ ಬಿತ್ತು.

ಗಾದೆಗಳು ವ್ಯಕ್ರಿಯೊಬ್ಬನಿಂದ ರಚಿತವಾಗಿದ್ದು, ಅವನ ಆಲೋಚನೆಗಳು ಬರೆವಣಿಗೆಯಲ್ಲಿ ದೊರೆತರೆ, ಆಗ ಕೆಲವೇಳೆ ಮೂಲವನ್ನು ಹುಡುಕಲು ಸಾಧ್ಯವಾಗುತ್ತದೆ. ಬೈಬಲ್, ವೇದ, ಉಪನಿಷತ್ತು, ಧಮ್ಮಪದ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ, ಮಹಾ ಕವಿಗಳ ಕಾವ್ಯಗಳಲ್ಲಿ ಇವು ಕಾಣಬರುವುದಾದರೂ ಸಾಹಿತ್ಯಿಕ ದಾಖಲೆಗೆ ಇಳಿಯುವ ಮುನ್ನ ಇವು ವಾಕ್ ಸಂಪ್ರದಾಯದಲ್ಲಿರಲಿಲ್ಲವೆಂದು ಹೇಳಲು ಹೇಗೆ ಸಾಧ್ಯ. ಆ ಕಾಲದಲ್ಲಿ ಪ್ರಚಲಿತವಿದ್ದ ಗಾದೆಗಳು ಹಲಕೆಲವು ಮಾರ್ಪಾಡುಗಳೊಡನೆ ಸಾಹಿತ್ಯದಲ್ಲಿ ಸೇರಿಕೊಂಡಿರಬಹುದು. ಯಾವುದೇ ಸಂದರ್ಭದಲ್ಲಿ ಜನಪ್ರಿಯ ಹಾಗೂ ಸಾಹಿತ್ಯಿಕ ಮೂಲಗಳೆರಡೂ ಬೆಳವಣಿಗೆಯ ಹಂತಗಳಲ್ಲಿ ಬೆರೆಯುತ್ತವೆ. ಇದರಿಂದಾಗಿ ಗಾದೆಯೊಂದರ ನಿರ್ದಿಷ್ಟಕರ್ತೃತ್ವ ಗೊತ್ತಾಗುವುದಿಲ್ಲ.

ಗಾದೆಗಳ ಅಸ್ತಿತ್ವ ಮತ್ತು ಉಪಯೋಗ ಪ್ರಾಚೀನ ಕಾಲದಿಂದಲೂ ಕಾಣಬರುತ್ತದೆ. ಪ್ರಾಚೀನ ಸಾಹಿತ್ಯ ಗ್ರಂಥಗಳಲ್ಲಿ, ಧರ್ಮಗ್ರಂಥಗಳಲ್ಲಿ, ಚರಿತ್ರ ಲೇಖನಗಳಲ್ಲಿ ಇವು ದೊರೆಯುತ್ತವೆ. ಬರೆದಿರಿಸಿದ ನ್ಯಾಯಶಾಸ್ತ್ರಗಳಿಲ್ಲದ ಜನತೆಗಳಲ್ಲಿಕ ಅದರ ವ್ಯಾಜ್ಯಗಳ ಮೇಲೆ ಪರಿಣಾಮವನ್ನುಂಟುಮಾಡುವಂತೆ ಗಾದೆಗಳನ್ನು ಉದಾಹರಿಸಲಾಗುತ್ತದೆ. ಸಂದರ್ಭೋಚಿತವಾಗಿ ಉಪಯೋಗಿಸಿದ ಗಾದೆಲಯೊಂದು ನ್ಯಾಯವೊಂದರ ತೀರ್ಮಾನಕ್ಕೆ ಕಾರಣವಾಗಬಹುದು ಅಥವಾ ಪ್ರಮುಖ ನಿರ್ಣಯವೊಂದಕ್ಕೆ ನೆರವಾವಾಗಬಹುದು. ಕೆಲವು ಆಫ್ರಿಕನ್ ಸಮಾಜಗಳಲ್ಲಿ ನಿರ್ಣಯ ಕೈಗೊಳ್ಳುವಾಗ ಜನ ಸಾಂಪ್ರದಾಯಿಕವಾಗಿ ಗಾದೆಗಳನ್ನು ಪಠಿಸುತ್ತಾರಂತೆ.

ಭಾರತೀಯ ವೈದಿಕ ಬರಹಗಳು ತತ್ತಶಾಸ್ತ್ರೀಯ ಭಾವನೆಗಳನ್ನು ಪ್ರತಿಪಾದಿಸಲು ಗಾದೆಗಳನ್ನು ಬಳಸುತ್ತಿದ್ದವು. ಪ್ರಾಚೀನ ಚೀನದಲ್ಲಿ ನೈತಿಕ ಶಿಕ್ಷಣಕ್ಕಾಗಿ ಗಾದೆಗಳನ್ನು ಉಪಯೋಗಿಸುತ್ತಿದ್ದರು. ಇಂಗ್ಲೆಂಡಿನಲ್ಲಿ ಲ್ಯಾಟಿನ್ ಬೋಧಿಸಲು ಗಾದೆಗಳನ್ನು ಬಳಸುತ್ತಿದ್ದರು. ಭಾಷಣಕಲೆಯಲ್ಲಿ ಮಾತಿಗೆ ಅಲಂಕಾರ ಕಟ್ಟಲು ಗಾದೆಗಳನ್ನೂ ಬಳಸುವುದುಂಟು. ಮಧ್ಯಕಾಲೀನ ಪಠ್ಯಗಳು ಮತ್ತು ಅರಿಸ್ಟಾಟಲ್ ಇದಕ್ಕೆ ನಿದರ್ಶನ. ಗಾದೆಗಳಲ್ಲಿ ಸಂವಾದವನ್ನು ಬರೆದವರಿದ್ದಾರೆ. ಸಾನೆಟ್ಟನ್ನು ರಚಿಸದವರಿದ್ದಾರೆ. ಹದಿನಾರನೆಯ ಶತಮಾನದಲ್ಲಿ ಇಂಗ್ಲೆಂಡಿನ ಪ್ರಜಾಪ್ರತಿನಿಧಿ ಸಭಯಲ್ಲಿ ಗಾದೆಯ ಭಾಷಣವೊಂದು ನಡೆದಿತ್ತಂತೆ. ಗಾದೆಗಳನ್ನು ಶಿರೋನಾಮೆಗಳಾಗಿ, ಆಡುಭಾಷೆಯ ವಾತಾವರಣವನ್ನು ಕೊಡುವುದಕ್ಕಾಗಿ ಬಳಸಲಾಗಿದೆ. ಹೀಗೆ ಹಲವು ರೀತಿಯಲ್ಲಿ ಗಾದೆಗಳ ಉಪಯೋಗ ಆಗಿದೆ.

ಗಾದೆ ಜ್ಞಾನದ ಅನಂತ ಆಕಾಶವನ್ನು ನಿಂತಲ್ಲಿಯೇ ನೋಡಬಲ್ಲ ನೀತಿ ನಿರ್ಣಯಗಳ ದೂರದರ್ಶಕ. ಇದರಲ್ಲಿ ಎದ್ದುಕಾಣುವುದು ಜನಸಾಮಾನ್ಯರ ಸಾಮಾನ್ಯ ಜ್ಞಾನ. ಜೀವನದ ನಾನಾ ಭಾಗಗಳಲ್ಲಿ ಅವರಿಗಿರುವ ಜ್ಞಾನಾನುಭವಗಳನ್ನು ಇಲ್ಲಿ ವಿವೇಕದ ಒರೆಗಲ್ಲಿಗೆ ಹಚ್ಚಿ ನೋಡಿದೆ. ಗಾದೆ ಸಾಮಾನ್ಯ ಜನತೆಯ ವೇದ, ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ. ವೇದ ಕೆಲವರ ಮಾತು, ಗಾದೆ ಹಲವರ ನುಡಿ. ಇಂಗ್ಲಿಷ್ ಗಾದೆಯೊಂದು ಹೇಳುವ ಹಾಗೆ ಕೆಲವರು ಹೇಳುವುದು ನಿಜವಾಗಬಹುದು, ಆದರೆ ಎಲ್ಲರೂ ಹೇಳುವುದು ನಿಜವಾಗೇ ಆಗುತ್ತದೆ.

ಗಾದೆಗಳು ಜನಪ್ರಿಯ ಅಭಿಪ್ರಾಯದ ಮೇಲೆ ಸೂಕ್ಷ್ಮವೂ ವ್ಯಾಪಕವೂ ಆದ ಪ್ರಭಾವವನ್ನು ಹೊಂದಿರುತ್ತವೆ. ಇವುಗಳ ಸೃಷ್ಟಿಗೆ ಹಾಗೂ ಪ್ರಸಾರಕ್ಕೆ ಕಾರಣರಾದ ಜನರ ಸಾಮಾಜಿಕ, ರಾಜಕೀಯ, ನೈತಿಕ ಹಾಗೂ ಧಾರ್ಮಿಕ ಆದರ್ಶಗಳಿಗೆ ನಂಬಲರ್ಹವಾದ ಸಾಕ್ಷ್ಮಗಳಾಗಿವೆ. ಗಾದೆಗಳ ಮೌಲ್ಯ ಮತ್ತು ಮಹತ್ತ್ವವನ್ನು ಈ ಮಾತುಗಳು ತಿಳಿಸುತ್ತವೆ.

ಆಧಾರ: kanaja

ಶ್ರೇಯಾಂಕ

ಕನ್ನಡ ಗಾದೆಗಳು | Kannada Popular Proverbs | Janapriya Gaadegalu

User Rating: 3.01 ( 7 votes)

ಇವುಗಳೂ ನಿಮಗಿಷ್ಟವಾಗಬಹುದು

ಅಲೆಮಾರಿಗಳ ‘ಬುಡ್ಗನಾದ’

ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ …

Leave a Reply

Your email address will not be published. Required fields are marked *