ಏರ್ಯ ಲಕ್ಷ್ಮೀನಾರಾಯಣ ಆಳ್ವ (೧೯-೩-೧೯೨೬): ಸಾಹಿತಿ, ಸಂಘಟಕ, ಸಾಮಾಜಿಕ ಕಾರ್ಯಕರ್ತರಾದ ಏರ‍್ಯ ಲಕ್ಷ್ಮೀನಾರಾಯಣ ಆಳ್ವರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮೊಡಂ ಕಾಪು ಬಳಿಯ ಏರ್ಯ ಬೀಡು ಮನೆಯಲ್ಲಿ. ತಂದೆ ಮಾವಂತೂರ ಸುಬ್ಬಯ್ಯ ಆಳ್ವ, ತಾಯಿ ಸೋಮಕ್ಕೆ ಆಳ್ವ. ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಬಂಟ್ವಾಳದಲ್ಲಿ. ಹೈಸ್ಕೂಲು ಓದಿದ್ದು ಕೆನರಾ ಹೈಸ್ಕೂಲು ಮಂಗಳೂರು.
ಇವರು ಬರೆದ ರಾಮಾಶ್ವಮೇದ ತರಂಗಗಳು ೧೯೫೯ರಲ್ಲಿ ಪ್ರಕಟವಾಯಿತು. ಈ ಕೃತಿಯ ಅಂದಿನ ಮೈಸೂರು ಮತ್ತು ಮದರಾಸು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿ ಪರಿಗಣಿತವಾಗಿತ್ತು. ಇದಲ್ಲದೆ ಇವರು ರಚಿಸಿದ್ದು ಹಲವಾರು ಕೃತಿಗಳು. ಸ್ನೇಹಸೇತು-ಪತ್ರರೂಪದ ಕಾದಂಬರಿ ; ಜೀವನ ಚಿತ್ರ-ಮುಳಿಯ ತಿಮ್ಮಪ್ಪಯ್ಯನವರ ಕುರಿತದ್ದು ; ಕೃತಿವಿಮರ್ಶೆ-ನಾಗೇಗೌಡರ ಸ್ವಾಗತ ಗೀತೆ. ಇತರ-ಮೊದಲ ಮಳೆ, ಸಂಚಯ, ಓರಗೆಗೆ ಒಲವಿನ ಒಸಗೆ ಮುಂತಾದುವು. ತುಳುನಾಡಿನ ಭೂತಾರಾಧನೆಯ ಕುರಿತಾದ ಸಮಗ್ರ ಅಧ್ಯಯನ ಗ್ರಂಥ ‘ಮಂಗಳ ತಿಮರು’. ಕೌಟುಂಬಿಕ ಪರಿಚಯದ ‘ನೂರರ ನೆನಪು.’ ಸಂಪಾದಿತ ಗ್ರಂಥ-‘ಗಾನ ಕೋಗಿಲೆ’ ಯಕ್ಷಗಾನ ಭಾಗವತ ದಾಮೋದರ ಮಂಡಚ್ಛರ ಸಂಸ್ಮರಣ ಗ್ರಂಥ.
ತಮಗೆ ದೊರೆತ ಸನ್ಮಾನದಿಂದ ಶಾಶ್ವತ ನಿ ಸ್ಥಾಪಿಸಿ, ವಿದ್ವಾಂಸರನ್ನು ಗೌರವಿಸಿ ಸನ್ಮಾನಿಸಿದ್ದಾರೆ. ಸಾಹಿತ್ಯ ಚಟುವಟಿಕೆಗಳಿಂದ ತೊಡಗಿದ ಇವರು ಬಂಟ್ವಾಳ ತಾಲ್ಲೂಕಿನ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಕಾಸರಗೋಡು ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದಾರೆ. ಪ್ರವಾಸಿಯಾಗಿ ಇಂಡೋನೇಷ್ಯಾ, ಮಲೇಷಿಯಾ, ಸಿಂಗಪೂರ, ನೇಪಾಳ, ಇಂಗ್ಲೆಂಡ್, ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ಸ್ವಿಟ್ಸರ್‌ಲೆಂಡ್, ಇಟಲಿ ಸುತ್ತಿ ಬಂದಿದ್ದಾರೆ.
ಸಂದ ಗೌರವ ಪ್ರಶಸ್ತಿಗಳು ಹಲವಾರು-ಸಾಹಿತ್ಯ ಸಮ್ಮೇಳನ, ಕೆನರಾ ಜ್ಯೂನಿಯರ್ ಕಾಲೇಜ್ ಬೆಳ್ಳಿಹಬ್ಬ, ಬಂಟರ ಸಂಘದ ಅಮೃತ ಮಹೋತ್ಸವ, ತುಳು ಸಾಹಿತ್ಯ ಅಕಾಡಮಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ, ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಸಮಿತಿ, ಪರಮೇಶ್ವರಭಟ್ಟ ಪ್ರಶಸ್ತಿ ಸಮಿತಿ, ಪೊಳಲಿ ಶೀನಪ್ಪ ಹೆಗಡೆ ಪ್ರಶಸ್ತಿ ಸಮಿತಿಗಳ ಅಧ್ಯಕ್ಷರಾಗಿಯೂ ದುಡಿದಿದ್ದಾರೆ.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.