AP Malathi

ಎ.ಪಿ. ಮಾಲತಿ

ಎ.ಪಿ. ಮಾಲತಿ (೬.೫.೧೯೪೪): ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ.ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ ೧೯೪೪ ರ ಮೇ ೬ ರಂದು. ತಂದೆ ಗಣೇಶಭಟ್ಟರು, ತಾಯಿ ಕಾವೇರಿ.

ಪ್ರಾರಂಭಿಕ ಶಿಕ್ಷಣ ಕರ್ಕಿ ಹಾಗೂ ಹೊನ್ನಾವರದಲ್ಲಿ. ಧಾರವಾಡದ ಎ.ಕೆ. ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ. ಪಿ.ಯು.ಗೆ ಸೇರಿದ್ದು ಕರ್ನಾಟಕ ಕಾಲೇಜು.

ಪ್ರತಿದಿನ ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದ ಬೇಂದ್ರೆಯವರನ್ನು ಕಂಡಾಗ ಕುತೂಹಲ, ಬೆರಗು. ಆಕಾಶವಾಣಿ ‘ಗಿಳಿವಿಂಡು’ ಮಕ್ಕಳ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೇಂದ್ರೆಯವರ ಕವನ ಹಾಡಿ, ನೃತ್ಯದಲ್ಲಿ ಭಾಗವಹಿಸಿದಾಗ ಮನಸ್ಸಿಗಾಗುತ್ತಿದ್ದ ಅದೆಂತಾದ್ದೋ ಆನಂದ. ಮನೆಯಲ್ಲಿದ್ದ ತಾಯಿ ನಾಲ್ಕನೆಯ ತರಗತಿಯವರೆಗೆ ಓದಿದ್ದರೂ ಸಾಹಿತ್ಯಪ್ರಿಯೆ, ಭಕ್ತಿಗೀತೆಗಳ ಸುಶ್ರಾವ್ಯಗಾಯಕಿ. ಜೊತೆಗೆ ತಮ್ಮನಿಗೆ ನಾಟಕದಲ್ಲಿ ಒಲವು. ಅಜ್ಜನಮನೆಯಲ್ಲಿ ಸ್ನೇಹಿತರನ್ನೆಲ್ಲಾ ಸೇರಿಸಿಕೊಂಡು ನಾಟಕ ಬರೆದು ಆಡಿಸಿ ಸಂಭ್ರಮಿಸಿದ ದಿನಗಳು. ಹೈಸ್ಕೂಲಿನಲ್ಲಿದ್ದಾಗ ಕೈಬರಹದ ಪತ್ರಿಕೆ ತಯಾರಿಸಿ ಒಪ್ಪಿಸಬೇಕಿದ್ದರಿಂದ ಹತ್ತನೆಯ ತರಗತಿಯ ಪತ್ರಿಕೆಗೆ ಬಹುತೇಕ ಇವರೇ ಲೇಖನಗಳನ್ನೆಲ್ಲಾ ಬರೆದು ತುಂಬಿ ತಯಾರಿಸುತ್ತಿದ್ದ ಕೈಬರಹದ ಪತ್ರಿಕೆ. ಹೀಗೆ ಸಾಹಿತ್ಯದ ಮೊಗ್ಗು ಅಂತಾರಳದಿಂದ ಹೊರಹೊಮ್ಮುತ್ತಾ ಬಂದಾಗ ತಮ್ಮನೊಡನೆ ಸೇರಿ ಬರೆದದ್ದು ಎರಡು ಪತ್ತೇದಾರಿ ಕಾದಂಬರಿಗಳು. ಆಗ ಕೇವಲ ಹದಿನೈದರ ವಯಸ್ಸು. ಓದಲು ತೆಗೆದುಕೊಂಡು ಹೋದವರೊಡನೆಯೊ ಹಸ್ತಪ್ರತಿಯೂ ಮಾಯವಾದಾಗ ಆದ ನಿರಾಸೆ ಅಷ್ಟಿಷ್ಟಲ್ಲ.

[sociallocker]ಮನೆಯ ಕಾಂಪೌಂಡಿನಲ್ಲಿದ್ದ ಲಕ್ಷ್ಮಣ ಎಂಬುವವರೊಬ್ಬರ ಭಾವ ತೆಲುಗು ಸಿನಿಮಾ ನಿರ್ದೇಶಕರೆಂದು ತಿಳಿದು ಅವರ ಕೈಗೊಂದು ಕತೆ ಬರೆದು ಕೊಟ್ಟಾಗ, ಇವರ ಮನನೋಯಿಸಿದ ಆತ ತೆಲುಗಿಗೆ ಅನುವಾದಿಸಿ ಮದರಾಸಿಗೆ ಕಳುಹಿಸಿದರು, ಸಿನಿಮಾ ಆಗುತ್ತದೆಂದು ಕಾಯುತ್ತಾ ಕುಳಿತ ಮುಗ್ಧ ಮನಸ್ಸು ಇವರದು.

ಎಷ್ಟೋ ವರುಷಗಳ ನಂತರ ಬರೆದ ಕತೆಯೊಂದು ಕರ್ಮವೀರ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಹೇಳತೀರದ ಆನಂದ. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿ.ಯು. ಓದುತ್ತಿದ್ದಾಗಲೇ ಹಸೆಮಣೆಏರಿ ಪುತ್ತೂರಿನ ಸಮೀಪದ ಹಳ್ಳಿಯಲ್ಲಿ ನೆಲೆ ಕಂಡ ಬದುಕು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ.

ಆದರೆ ಅವಿಭಕ್ತ ಕುಟುಂಬದಲ್ಲಿ ಹೊತ್ತ ಜವಾಬ್ದಾರಿಯಿಂದ ಸಾಹಿತ್ಯ ರಚನೆಗೆ ಅವಕಾಶವಿಲ್ಲದೆ ಹೋದರೂ ಮುಂದೆ ಕುಟುಂಬದ ಸದಸ್ಯರು ತಮ್ಮತಮ್ಮ ಜವಾಬ್ದಾರಿಯನ್ನು ತಾವೇ ಹೊತ್ತು ಕೊಂಡಾಗ ನೆಲೆಕಂಡ ಪ್ರತ್ಯೇಕ ಸಂಸಾರ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್‌, ಜೊತೆಗೆ ಹಾಲಿನ ವ್ಯಾಪಾರ.

ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ಪರಿಸರ, ಹತ್ತಿರದಿದ್ದವರ ನೋವು-ನಲಿವು, ಮೂಢನಂಬಿಕೆಗಳು, ಕಿತ್ತು ತಿನ್ನುವ ಬಡತನ….. ಸೃಜನಶೀಲ ಮನಸ್ಸಿಗೆ ಕೃತಿರಚಿಸಲು ಇದಕ್ಕಿಂತ ವಸ್ತುಬೇಕೇ? ಇಂಥ ಸಂದರ್ಭದಲ್ಲಿ ಉದ್ಭವಿಸಿದ ಕಾದಂಬರಿಗಳೇ ಕಾಡು ಕರೆಯಿತು, ದೇವ, ಬದಲಾಗದವರು ಮುಂತಾದವುಗಳು. ಕಾದಂಬರಿಯೊಂದು ಮಂಗಳೂರಿನಿಂದ ಹೊರಡುತ್ತಿದ್ದ ನವಭಾರತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ನಂತರ ಅನೆಕ ಕಾದಂಬರಿಗಳು ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು.

ಹಲವಾರು ಕತೆಗಳಿಗೆ ನಿಯತಕಾಲಿಕೆಗಳು ಏರ್ಪಡಿಸುವ ಕಥಾ ಸ್ಪರ್ಧೆಯಲ್ಲಿ ಬಹುಮಾನ ದೊರೆತಿರುವುದರ ಜೊತೆಗೆ ‘ದೇವ’ ಕಾದಂಬರಿಯು ಮಂಗಳೂರು ವಿ.ವಿ.ದ ಪದವಿ ತರಗತಿಗಳಿಗೆ, ಮತ್ತು ಕೊಟ್ಟಾಯಂನ ಪಿ.ಯು. ತರಗತಿಗಳಿಗೆ ಪಠ್ಯಪುಸ್ತಕವಾಗಿದೆ. ಮಂದಾರ ಕಾದಂಬರಿಯು ಟೆಲಿ ಚಿತ್ರವಾಗಿ ಈಟಿವಿಯಿಂದ ಪ್ರಸಾರ. ಹಲವಾರು ಸಣ್ಣ ಕತೆಗಳು ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಸಾರಗೊಂಡಿವೆ.

ಅರ್ಧಾಂಗಿ, ಅನಿಶ್ಚಯ, ತಿರುಗಿದ ಚಕ್ರ, ಮಿನುಗದ ಚುಕ್ಕೆ ಮುಂತಾದ ೨೦ ಕಾದಂಬರಿಗಳಲ್ಲದೆ ಮನುಷ್ಯನ ಸುಖದ ಮೂಲ ಯಾವುದು? ಅತೃಪ್ತ ಮನಸ್ಸಿಗೆ ಕಾರಣವೇನು? ಒಂಟಿತನ, ಖಿನ್ನತೆ ಹೋಗಲಾಡಿಸಿ ಪ್ರೀತಿ, ಶಾಂತಿಯಿಂದ ಬದುಕುವ ಕಲೆ ವಿವರಿಸುವ ‘ಸುಖದ ಹಾದಿ’ ಚಿಂತನ ಕೃತಿಯಲ್ಲದೆ ಗ್ರಾಮೀಣ ಮಹಿಳೆಯರು, ದಿವ್ಯಪಥ (ಸ್ತ್ರೀಯರಿಗಾಗಿ), ಮಕ್ಕಳ ಪಾಲನೆ, ಮಹಿಳೆ ಮತ್ತು ಸಮಾಜ ಕಲ್ಯಾಣ, ಸಮಯದ ಸದುಪಯೋಗ, ಹಳ್ಳಿಗೆ ಬಂದ ಎಳೆಯರು (ಮಕ್ಕಳ ಕಥೆ) ಮತ್ತು ಕಥಾ ಸಂಕಲನಗಳು ‘ವಸಂತದ ಹೂಗಳು’, ಸಂಜೆ ಬಿಸಿಲು’ ಪ್ರಕಟಗೊಂಡಿವೆ.

ಗ್ರಾಮೀಣ ಮಹಿಳೆಯರು ಕೃತಿ ಮತ್ತು ಅನಿಶ್ಚಯ ಕಾದಂಬರಿಗೆ ೧೯೭೮, ೧೯೭೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಮತ್ತು ತಮ್ಮಣ್ಣರಾವ ಅಮ್ಮಿನ ಭಾವಿ ಸ್ಮಾರಕ ಗ್ರಂಥ ಬಹುಮಾನ, ಸುಖದ ಹಾದಿ ಕೃತಿಗೆ ಕನ್ನಡ ಸಾಹಿತ್ಯ ಅಕಾಡಮಿ ಬಹುಮಾನ ಮತ್ತು ಜೀವಮಾನದ ಸಾಹಿತ್ಯ ಸಾಧನೆಗಾಗಿ ಗೌರವ ಪ್ರಶಸ್ತಿ, ಕಾಡು ಕರೆಯಿತು ಮತ್ತು ಖಾಲಿ ಮನೆ ಕಾದಂಬರಿಗಳಿಗೆ ಮಾತೋಶ್ರೀ ರತ್ನಮ್ಮಾ ಹೆಗ್ಗಡೆ ಬಹುಮಾನ, ಹಲವಾರು ಸಣ್ಣಕಥೆಗಳಿಗೆ ನಿಯತಕಾಲಿಕೆಗಳಿಂದ ಕಥಾ ಸ್ಪರ್ಧೆಯಲ್ಲಿ ಬಹುಮಾನ, ಸಂಜಿ ಬಿಸಿಲು ಕಥಾ ಸಂಕಲನಕ್ಕೆ ಬೆಂಗಳೂರಿನ ಪ್ರತಿಷ್ಠಿತ ಕಥಾರಂಗಂ ಪ್ರಶಸ್ತಿ, ಮಂದಾರ, ತಿರುಗಿದ ಚಕ್ರ, ವಕ್ರರೇಖೆ ಕಾದಂಬರಿಗಳಿಗೆ ವನಿತಾ ಮಾಸಪತ್ರಕೆಯ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳಲ್ಲದೆ ಭಾರ್ಗವ ಪ್ರಶಸ್ತಿ ಹಿರೇಮಗಳೂರು ಕೋದಂಡರಾಮ ದೇವಸ್ಥಾನದಿಂದ ಕೋದಂಡರಾಮ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು.

ಕರಾವಳಿ ಲೇಖಕಿ ವಾಚಕಿಯರ ಸಂಘದ ಪ್ರಥಮ ಮಹಿಳಾ ಸಮ್ಮೇಳನದ ಅಧ್ಯಕ್ಷತೆ, ೧೧ನೆಯ ಪುತ್ತೂರು ತಾಲ್ಲೂಕು ಸಾಹಿತ್ಯ ಸಮ್ಮೇಳಾನಾಧ್ಯಕ್ಷತೆ ಡಾನ್‌ ಬಾಸ್ಕೊ ಕ್ಲಬ್‌ ಪುತ್ತೂರು ಇವರಿಂದ ಗೌರವಾರ್ಪಣೆ ಮೊದಲಾದ ಗೌರವಗಳು ಸಂದಿವೆ.

ಕಣ್ಣೂರು ವಿಶ್ವವಿದ್ಯಾಲಯದ ಸತ್ಯಭಾಮರವರಿಗೆ “ಎ.ಪಿ. ಮಾಲತಿಯವರ ಕಾದಂಬರಿಗಳು: ಒಂದು ಅಧ್ಯಯನ” ಪ್ರಬಂಧಕ್ಕೆ ಮತ್ತು ಸುಬ್ರಹ್ಮಣ್ಯ ಕಾಲೇಜಿನ ಮೂಕಾಂಬಿಕರವರಿಗೆ “ಎ.ಪಿ. ಮಾಲತಿಯವ ಕಾದಂಬರಿಗಳಲ್ಲಿ ಸ್ತ್ರೀಜಗತ್ತು” ಪ್ರಬಂಧಕ್ಕೆ ಎಂ.ಫಿಲ್‌., ಪದವಿಗಳು ದೊರೆತಿವೆ.

ಹೀಗೆ ಮಾಲತಿಯವರು ರಚಿಸಿರುವ ಒಟ್ಟು ಕೃತಿಗಳು ಮೂವತ್ತೇ ಆದರೂ ತಮ್ಮ ಸೃಜನ ಶೀಲತೆಯಿಂದ ರಚಿಸಿರುವ ಕಥೆ, ಕಾದಂಬರಿಗಳ ಬಗ್ಗೆ ಅಧ್ಯಯನ ನಡೆಸಲು ಪ್ರೇರೇಪಿಸುವಂತಹ ಕೃತಿ ರಚಿಸಿದ್ದಾರೆ. ಹೊಗಳಿಕೆ, ತೆಗಳಿಉಕೆ ಎರಡನ್ನೂ ಸಮಭಾವದಿಂದ ಸ್ವೀಕರಿಸುವ ವಿಶಾಲಮನೋಭಾವದ ಮಾಲತಿಯವರು ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ[/sociallocker]

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 3.9 ( 5 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

One comment

  1. ಪ್ರಸಿದ್ಧ ಕತೆ

Leave a Reply

Your email address will not be published. Required fields are marked *