ಎ.ಎಸ್. ಶಿವರುದ್ರಪ್ಪ (೩೦-೩-೧೮೯೨): ಪಿಟೀಲು ವಿದ್ವಾಂಸರಾಗಿದ್ದ ಶಿವರುದ್ರಪ್ಪನವರು ಹುಟ್ಟಿದ್ದು ಆನೇಕಲ್‌ನಲ್ಲಿ. ಹುಟ್ಟು ಕುರುಡರಾಗಿದ್ದ ಇವರಿಗೆ ಬಡತನದ ಬದುಕಿನಿಂದ ಭಿಕ್ಷಾಟನೆ ಮಾಡಿ ಬದುಕಬೇಕಾದ ಪರಿಸ್ಥಿತಿ. ಸಂಗೀತದಲ್ಲಿ ಆಸಕ್ತಿಯಿದ್ದು ಪಿಟೀಲು ವಿದ್ವಾನ್ ಮುನಿಶಂಕರಪ್ಪನವರಲ್ಲಿ ಅಭ್ಯಾಸ ಪ್ರಾರಂಭ. ನಂತರ ಸೇರಿದ್ದು ಮೈಸೂರಿನ ಕುರುಡ-ಮೂಗರ ಶಾಲೆ.
ಅಲ್ಲೂ ತೃಪ್ತಿ ಸಿಗದೆ ಹೆಚ್ಚು ಕಲಿಯುವ ದಾಹ, ನಾಲ್ವಡಿ ಕೃಷ್ಣರಾಜ ಒಡೆಯರು ಚಾಮುಂಡೇಶ್ವರಿ ದರ್ಶನಕ್ಕೆ ಹೊರಟ ಸಂದರ್ಭದಲ್ಲಿ ದೇವಸ್ಥಾನದ ಬಳಿ ಹಾಡುತ್ತಾ ಕುಳಿತು ಸೆಳೆದ ಮಹಾರಾಜರ ಗಮನ. ಅರಮನೆಯ ಬಿಡದಿಯಲ್ಲಿ ಊಟ, ವಸತಿ ಕಲಿಕೆಗೆ ವ್ಯವಸ್ಥೆ. ವಿದ್ವಾಂಸರಾಗಿದ್ದ ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತಾಭ್ಯಾಸ. ನಾಲ್ವಡಿ ಕೃಷ್ಣರಾಜ ಒಡೆಯರಿಂದ ಆಸ್ಥಾನದಲ್ಲಿ Fiddle Boy ಎಂದು ನೇಮಕ ಮಾಡಿ ಗೊತ್ತುಪಡಿಸಿದ ಸಂಬಳ. ಇವರ ಮೊದಲ ಕಚೇರಿ ನಡೆದುದೇ ನಾಲ್ವಡಿ ಕೃಷ್ಣರಾಜ ಒಡೆಯರ ಸಮ್ಮುಖದಲ್ಲಿ.
ನಂತರ ಪಟ್ಟಕ್ಕೆ ಬಂದ ಜಯಚಾಮರಾಜ ಒಡೆಯರಿಂದ ದೊರೆತ ಮತ್ತಷ್ಟು ಪ್ರೋತ್ಸಾಹ, ಹೆಚ್ಚಿನ ಸಂಬಳ. ವಿದ್ವಾನ್ ರಾ. ಚಂದ್ರಶೇಖರಯ್ಯ, ವಿದ್ವಾನ್ ರಾ. ಸೀತಾರಾಮ್ ಸಹೋದರರ ಕಚೇರಿಯಲ್ಲಿ ಪಿಟೀಲು ವಾದನ. ಪಾಶ್ಚಾತ್ಯ ಸಂಗೀತದಲ್ಲಿ ಆಸಕ್ತರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಶಿವರುದ್ರಪ್ಪನವರಿಗೆ ತರಿಸಿಕೊಟ್ಟಿದ್ದ (Horn Violin) ಅದರಲ್ಲೂ ಪಡೆದ ಪ್ರಾವೀಣ್ಯತೆ.
ಹಾಡುಗಾರಿಕೆಯನ್ನು ಬಲ್ಲ ಶಿವರುದ್ರಪ್ಪನವರು ಯಾರೇ ಹಾಡಲಿ ಅಂಥವರಿಗೆ ಕೊಟ್ಟ ಪ್ರೋತ್ಸಾಹ. ಇವರು ಮೆಚ್ಚಿದ ಪಿಟೀಲು ವಿದ್ವಾಂಸರೆಂದರೆ ಟಿ. ಚೌಡಯ್ಯ ಮತ್ತು ದ್ವಾರಂ ವೆಂಕಟಸ್ವಾಮಿ ನಾಯ್ಡು.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಲು ಹೊರಟ ನಾಲ್ವಡಿ ಕೃಷ್ಣರಾಜ ಒಡೆಯರ ಜೊತೆಯಲ್ಲಿ ಶಿವರುದ್ರಪ್ಪನವರ ಪ್ರಯಾಣ. ಪಂಡಿತ ಮದನ ಮೋಹನ ಮಾಳವೀಯರ ಸಮ್ಮುಖದಲ್ಲಿ ಪಿಟೀಲು ವಾದನ ಕಚೇರಿ. ಚಿತ್ರದುರ್ಗ, ಕೊಲ್ಹಾಪುರ, ಮದರಾಸು, ಹುಬ್ಬಳ್ಳಿ, ಬೊಂಬಾಯಿಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮ.
ಬನಾರಸ್ ಹಿಂದೂ ವಿ.ವಿ. ದಿಂದ ಸ್ವರ್ಣ ಪದಕ-ಪಿಟೀಲು ವಿಶಾರದ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಗಾನಕಲಾ ಪರಿಷತ್‌ನಿಂದ ಸನ್ಮಾನ. ಅಕಾಡಮಿ ಆಫ್ ಮ್ಯೂಸಿಕ್, ಚೌಡಯ್ಯ ಸ್ಮಾರಕ ಪ್ರಶಸ್ತಿ, ಹೊನಪ್ಪ ಭಾಗವತರ್ ಟ್ರಸ್ಟ್‌ನ ಸಂಗೀತ ಕಲಾ ಶಿರೋಮಣಿ ಪ್ರಶಸ್ತಿ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.