ಎಸ್.ಡಿ. ಇಂಚಲ (೦೧.೦೪.೧೯೧೩ – ೦೭.೦೪.೧೯೭೪): ನಿಸರ್ಗವನ್ನು ಪ್ರೀತಿಸುವ, ಗುರು ಹಿರಿಯರನ್ನು ಗೌರವಿಸುವ ಗುಣಗಳಿಂದ ಕೂಡಿದ್ದ ಗಂಡುಕವಿ, ವೀರಕವಿ, ನಿಸರ್ಗಕವಿ ಎಂದೇ ಪ್ರಖ್ಯಾತರಾಗಿದ್ದ ಶಿವಪುತ್ರಪ್ಪ ದೇವಪ್ಪ ಇಂಚಲರವರು ಹುಟ್ಟಿದ್ದು ಹಿರೇಬಾಗೇವಾಡಿಯಲ್ಲಿ ೧೯೧೩ರ ಏಪ್ರಿಲ್ ೧ರಂದು. ತಂದೆ ದೇವಪ್ಪ ಚಿನ್ನಪ್ಪ ಇಂಚಲ, ತಾಯಿ ಬಸವಂತವ್ವ.
ಸವದತ್ತಿ ತಾಲ್ಲೂಕಿನ ಇಂಚಲ ಗ್ರಾಮದಿಂದ ನಾಲ್ಕು ತಲೆಮಾರುಗಳ ಹಿಂದೆಯೇ ಇವರ ವಂಶಸ್ಥರು ಹಿರೇಬಾಗೇವಾಡಿಗೆ ಬಂದು ನೆಲೆಸಿದವರು. ತಂದೆ ದೇವಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರು. ಎಸ್.ಡಿ. ಇಂಚಲರವರ ಪ್ರಥಮಿಕ ಶಾಲಾ ವಿದ್ಯಾಭ್ಯಾಸ ನಡೆದುದು ಹಿರೇಬಾಗೇವಾಡಿಯಲ್ಲಿ. ೧೩ರ ವಯಸ್ಸಿನಲ್ಲಿಯೇ ಮುಲ್ಕಿ ಪರೀಕ್ಷೆಯನ್ನು ಇಡೀ ಜಿಲ್ಲೆಗೆ ಆರನೆಯ ರ್ಯಾಂಕ್ ಪಡೆದು ಉತ್ತೀರ್ಣರಾದರು. ಮುಗುಟಗಾನ ಹುಬ್ಬಳ್ಳಿಯಲ್ಲಿ ಇಂಗ್ಲಿಷ್ ಶಾಲೆಯಲ್ಲಿ ಪ್ರವೇಶಪಡೆದು ಒಂದೇ ವರ್ಷದಲ್ಲಿ ಮೂರು ವರ್ಗಗಳಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದರು.
೧೯೨೯ರಲ್ಲಿ ಹೈಸ್ಕೂಲಿಗೆ ಸೇರಿದ್ದು ಬೆಳಗಾವಿಯ ಗಿಲಗಂಜಿ ಅರಟಾಳ ಹೈಸ್ಕೂಲು. ನಾಟಕಕಾರ ಕೃಷ್ಣಕುಮಾರ ಕಲ್ಲೂರರ ಪ್ರೋತ್ಸಾಹದಿಂದ ಉತ್ತಮಗ್ರಂಥಗಳನ್ನು ಓದತೊಡಗಿದರು. ಬೇಂದ್ರೆ, ಮಧುರ ಚೆನ್ನರ ಕಾವ್ಯಗಳ ಅಭ್ಯಾಸದಲ್ಲಿ ತೊಡಗಿದಂತೆ ೧೯೩೦ರ ಸುಮಾರಿಗೆ ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಮೆಟ್ರಿಕ್ ಪಾಸಾದ ನಂತರ ಸೇರಿದ್ದು ಕೊಲ್ಲಾಪುರದ ರಾಜಾರಾಮ ಕಾಲೇಜು. ಪ್ರೊ. ಕೆ.ಜಿ. ಕುಂದಣಗಾರ, ಟಿ.ಸಿ. ಇಟಗಿ ಮುಂತಾದವರ ಶಿಷ್ಯತ್ವ. ಕಾಲೇಜಿನ ಕರ್ನಾಟಕ ಸಂಘದ ಮೂಲಕ ಹಲವಾರು ಪ್ರಖ್ಯಾತ ಸಾಹಿತಿಗಳ ಪರಿಚಯ. ಕಾವ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುದಲ್ಲದೆ ಕಾಲೇಜಿನ ಮಾಸಿಕ ಪತ್ರಿಕೆ ‘ರಾಜಾರಾಮಿಯನ್’ನಲ್ಲೂ ಹಲವಾರು ಕವನಗಳು ಪ್ರಕಟಗೊಂಡವು.
೧೯೩೪ರಲ್ಲಿ ಬೆಳಗಾವಿಯಲ್ಲಿ ಶಿ.ಶಿ. ಬಸವನಾಳರ ಮಾರ್ಗದರ್ಶನದಲ್ಲಿ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಕನ್ನಡ ಜಾಗೃತಿಯನ್ನುಂಟು ಮಾಡುವಲ್ಲಿ ಸಫಲರಾದರು. ಈಶ್ವರ ಸಣಕಲ್ಲ, ಡಿ.ಎಸ್. ಕರ್ಕಿ, ವಿ.ಕೆ. ಕರಡಿ, ಬ.ಗಂ. ತುರಮರಿ ಮುಂತಾದ ಗೆಳೆಯರೆಲ್ಲರೂ ಸೇರಿ ಕಿರಿಯರ ಬಳಗವನ್ನು ಪ್ರಾರಂಭಿಸಿ ಸಾಹಿತ್ಯದ ವಾತಾವರಣವನ್ನು ಮೂಡಿಸಿದರು.
೧೯೩೮ರಲ್ಲಿ ಬಿ.ಎ. ಪದವಿ ಪಡೆದ ನಂತರ ಶಿಕ್ಷಕರಾಗಿ ವೃತ್ತಿಯನ್ನಾರಂಭಿಸಿದರು. ಮುಖ್ಯೋಪಾಧ್ಯಾಯರಾಗಿ, ಸಹಾಯಕ ಶಿಕ್ಷಣ ಅಧಿಕಾರಿಯಾಗಿ, ಬೆಳಗಾವಿ ಮತ್ತು ಹುಬ್ಬಳ್ಳಿಯ ಗುರುಸಿದ್ದೇಶ್ವರ ಕೆಪಿಟಿ ಕಾಲೇಜಿನ ಪ್ರಿನ್ಸಿಪಾಲರಾಗಿ, ಬೆಳಗಾವಿಯ ಜಿ.ಎ. ಜ್ಯೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತಿ.
ಇವರು ಮೊದಲು ಕವನ ಸಂಕಲನ ‘ತರಂಗಿಣಿ’ (೧೯೪೯-ಮಧುರ ಚೆನ್ನರ ಮುನ್ನುಡಿ)ಯಲ್ಲಿ ಸಂಗ್ರಹಗೊಂಡಿರುವ ಬಹುಪಾಲು ಕವನಗಳು ನಾಡುನುಡಿಗೆ ಸಂಬಂಧಿಸಿದ್ದು ನವೋದಯ ಮಾರ್ಗದಲ್ಲಿ ರಚಿತವಾಗಿವೆ. ಎರಡನೆಯ ಕವನ ಸಂಕಲನ ‘ಸ್ನೇಹಸೌರಭ’ (೧೯೫೬-ಡಿ.ಎಸ್. ಕರ್ಕಿಯವರ ಮುನ್ನುಡಿ)ದಲ್ಲಿ ಪ್ರಾಸ, ಅನುಪ್ರಾಸಗಳ ಬಳಕೆಯನ್ನು ಕಡಿಮೆಮಾಡಿ ನಾದಮಯವಾಗುವಂತೆ ರಚಿಸಲ್ಪಟ್ಟ ಕವನಗಳು. ಮೂರನೆಯ ಕವನ ಸಂಕಲನ ‘ಡಿಂಡಿಮ’ (೧೯೬೫)ದಲ್ಲಿ ನಾಡಿನ ಬಗ್ಗೆ ಕೆಚ್ಚುಮೂಡಿಸುವ ಕವನಗಳು ಎಂದು ಗೋಕಾಕರು ಬರೆದಿದ್ದಾರೆ.
ಇವಲ್ಲದೆ ‘ಕಿತ್ತೂರ ಕ್ರಾಂತಿ’ (ಕಿತ್ತೂರ ರಾಣಿ ಚೆನ್ನಮ್ಮ ಸ್ಮಾರಕೋತ್ಸವ ಸಮಿತಿಗಾಗಿ ಬರೆದ ಲಾವಣಿ), ಮಹಾಂತೇಶ ಮಹಿಮೆ (ಜಾನಪದ ಗೀತೆಗಳ ಸಂಕಲನ)ಯನ್ನು ಹೊರತಂದರು. ಡಾ.ಡಿ.ಎಸ್. ಕರ್ಕಿಯವರೊಡನೆ ಮಕ್ಕಳಿಗಾಗಿ ರಚಿಸಿದ ಕವನಗಳ ಸಂಕಲನ ‘ಬಣ್ಣದ ಚೆಂಡು’. ಇಂಚಲರವರ ಅಪ್ರಕಟಿತ ಕವನಗಳನ್ನು ಸಂಗ್ರಹಿಸಿ ೧೯೯೩ರಲ್ಲಿ ಪ್ರಕಟಿಸಿದ ಕವನ ಸಂಕಲನ ‘ಭಾವಶ್ರೀ’. ಇಂಚಲರು ಸಂಪಾದಿಸಿ ಪ್ರಕಟಿಸಿದ ಕವನ ಸಂಕಲನ ‘ಕರ್ನಾಟಕ ದರ್ಶನ’ ಮತ್ತು ಸಮಗ್ರಕಾವ್ಯ ‘ಇಂಚರ’ವು ೨೦೦೭ರಲ್ಲಿ ಪ್ರಕಟಗೊಂಡಿದೆ.
ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಧಾರವಾಡದ ಆಕಾಶವಾಣಿ ಕೇಂದ್ರದ ಸಲಹಾ ಸಮಿತಿ ಸದಸ್ಯರಾಗಿ, ಎಸ್.ಎಸ್.ಎಲ್.ಸಿ. ಪರೀಕ್ಷಾಮಂಡಲಿಯ ಸದಸ್ಯರಾಗಿ, ಬೆಳಗಾವಿ ಜಿಲ್ಲಾ ಮುಖ್ಯ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿಯೂ ಸಲ್ಲಿಸಿದ ಸೇವೆ. ಅಂದಿನ ಶಿಕ್ಷಣದ ಬಗ್ಗೆ ನಿರಾಶರಾಗಿದ್ದರೂ ಕಾಯಕ ತತ್ತ್ವದ ಬಗ್ಗೆ ಬಹುನಿಷ್ಠರಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ದುಡಿಯುತ್ತಿದ್ದ ಇಂಚಲರವರಿಗೆ ೧೯೬೪ರಲ್ಲಿ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ಹಾಗೂ ೧೯೬೬ರಲ್ಲಿ ಆದರ್ಶ ಶಿಕ್ಷಕ ರಾಷ್ಟ್ರಪ್ರಶಸ್ತಿಗಳು ಸಂದದ್ದು ಉಚಿತವೆ.
ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದು, ‘ಕನ್ನಡದ ಉಸಿರು ಬೆಳಗಾವಿ, ಬೆಳಗಾವಿಯ ಒಂದಂಗುಲವೂ ಮಹಾರಾಷ್ಟ್ರಕ್ಕೆ ಸೇರಕೂಡದು’ ಎಂದು ಪ್ರತಿಜ್ಞೆ ಮಾಡಿದಂತೆ ರಾಷ್ಟ್ರದ ಭಾವೈಕ್ಯತೆಯ ಬಗ್ಗೆಯೂ ಹಲವಾರು ಕವನಗಳನ್ನು ಬರೆದ ಕವಿ ಇಂಚಲರವರು ಕಾವ್ಯಲೋಕದಿಂದ ಮರೆಯಾದದ್ದು ೧೯೭೪ರ ಏಪ್ರಿಲ್ ೭ರಂದು.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.