ಎಚ್.ವಿ. ಸಾವಿತ್ರಮ್ಮ (೦೨-೦೫-೧೯೧೩ – ೨೭-೧೨-೧೯೯೫): ಹಳೆ ತಲೆಮಾರಿನ ಅಪರೂಪದ ಅನುವಾದಕಿ, ಲೇಖಕಿ ಸಾವಿತ್ರಮ್ಮನವರ ಪೂರ್ಣ ಹೆಸರು ಹೆಬ್ಬಳಲು ವೆಲಪನೂರು ಸಾವಿತ್ರಮ್ಮ. ತಂದೆ ಎಂ.ರಾಮರಾವ್, ತಾಯಿ ಮೀನಾಕ್ಷಮ್ಮ. ತಂದೆ ಮೈಸೂರು ಸಂಸ್ಥಾನದಲ್ಲಿ ಉನ್ನತಾಕಾರಿಯಾಗಿದ್ದುದರಿಂದ ವರ್ಗಾವಣೆ ಅನಿವಾರ‍್ಯ. ಇವರಿಗೆ ವಿದ್ಯಾಭ್ಯಾಸ ಹಲವೆಡೆ-ಮಂಡ್ಯ, ಹಾಸನ, ರಾಮನಗರ, ಕೋಲಾರ, ಮೈಸೂರುಗಳಲ್ಲಿ. ೧೯೩೧ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ. ಮೂರು ಬಂಗಾರದ ಪದಕದೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ. ಗುರುಗಳಾದ ಎ.ಎನ್. ಮೂರ್ತಿರಾವ್, ತೀ.ನಂ.ಶ್ರೀ ಇವರಿಂದ ಪಡೆದ ಸಾಹಿತ್ಯಾಭಿರುಚಿ. ಗಂಡ ಎಚ್.ಎ. ನಾರಾಯಣರಾಯರಿಂದ ದೊರೆತ ಪ್ರೋತ್ಸಾಹ. ಕಾರಂತರು, ಅನುಪಮ, ಮಾಸ್ತಿ, ತ್ರಿವೇಣಿ ಮುಂತಾದ ಸಾಹಿತಿಗಳನ್ನು ಕರೆಸಿ ಮನೆಯಲ್ಲೇ ಚಿಂತನ-ಮಂಥನ. ಪ್ರೌಢಶಾಲೆಯಲ್ಲಿದ್ದಾಗಲೇ ಮದುವೆ. ಗಂಡ ವಿದೇಶಕ್ಕೆ ವ್ಯಾಸಂಗಕ್ಕೆ ಹೋದದ್ದು ಇವರ ವಿದ್ಯಾಭ್ಯಾಸಕ್ಕೆ ದೊರೆತ ಅನುಕೂಲ.
[sociallocker]ರವೀಂದ್ರನಾಥ ಠಾಕೂರರ ನೌಕಾಘಾತ, ಮನೆಜಗತ್ತು, ಗೋರಾ, ಚಿನ್ನದ ದೋಣಿ ಮತ್ತು ಲೂಯಿ ಫಿಷರ್, ಮಹಾತ್ಮಗಾಂಯವರ ಜೀವನ ಚರಿತ್ರೆ, ಜೀವನ ಸಂದೇಶ, ಅಂಟನ್ ಚೆಕಾವ್‌ರವರ ಸಣ್ಣಕಥೆಗಳ ಅನುವಾದ-‘ಮದುವಣಗಿತ್ತಿ’ ಮುಂತಾದುವುಗಳನ್ನು ಅನುವಾದಿಸಿ ಉತ್ತಮ ಅನುವಾದಕಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.ಇವರ ಕೃತಿಗಳಲ್ಲಿ ಸ್ತ್ರೀ ಶೋಷಣೆಯ ಹಲವಾರು ಮುಖಗಳ ಚಿತ್ರಣ. ಪುರುಷದ್ವೇಷಿ ಎಂಬ ಪಟ್ಟ. ಪ್ರಚಾರ, ಪ್ರಶಸ್ತಿ ಸನ್ಮಾನಗಳಿಗೆ ಆಸೆ ಪಡದ ಲೇಖಕಿ. ಸ್ವಸಂತೋಷಕ್ಕಾಗಿ, ಭಾವನೆಗಳನ್ನು ಹೊರಹಾಕಲು ಬರವಣಿಗೆಯ ಮಾಧ್ಯಮವನ್ನು ಆಯ್ದುಕೊಂಡೆನೆನ್ನುವ ದಿಟ್ಟ ಬರಹಗಾರ್ತಿ.
ಆದರೂ ಹಲವಾರು ಪ್ರಶಸ್ತಿಗಳು ಅರಸಿ ಬಂದಿದ್ದಿದೆ. ‘ಮದುವಣಗಿತ್ತಿ’ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿಂದ ಅನುಪಮ ಪ್ರಶಸ್ತಿ, (೧೯೯೨). ಇದೇ ವರ್ಷ ಸಾವಿತ್ರಮ್ಮ ದೇಜಗೌ ಮಹಿಳಾ ಸಾಹಿತ್ಯ ಪ್ರಶಸ್ತಿ. ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೯೫ರಲ್ಲಿ ಚಂದ್ರಲೇಖ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.